ಅಮೆರಿಕನ್ನಡ
Amerikannada
ಜಯಪ್ಪ ಹೊನ್ನಾಳಿ
ಕನ್ನಡ ಎಂ.ಎ., ಬಿ.ಪಿ.ಇಡಿ ಯಲ್ಲಿ ದ್ವಿತೀಯ ರ‍್ಯಾಂಕ್, ಯೋಗ ಪ್ರಥಮ ರ‍್ಯಾಂಕ್ ಪಡೆದ ಜಯಪ್ಪ ಹೊನ್ನಾಳಿಯವರು ವೃತ್ತಿಯಿಂದ ದೈಹಿಕ ಶಿಕ್ಷಕರು; ಪ್ರವೃತ್ತಿಯಿಂದ ಕವಿನಿ, ಸಾಹಿತಿ, ಆಧುನಿಕ ವಚನಕಾರ, ಅಂಕಣಕಾರ, ಕಥೆಗಾರರು. ಇವರು ‘ರುದ್ರತನಯ ಕಾವ್ಯನಾಮದಡಿಯಲ್ಲಿ ಅನೇಕ ಕೃತಿಗಳನ್ನು ಪ್ರಕಟಿಸಿರುತ್ತಾರೆ ಹಾಗೂ ಅನೇಕ ಪ್ರಶಸ್ತಿಗಳಿಗೆ ಪಾತ್ರರಾಗಿರುತ್ತಾರೆ. ಅನೇಕ ಕವಿಗೋಷ್ಠಿಗಳಲ್ಲಿ ಭಾಗವಹಿಸಿ, ನಡೆಸಿಕೊಟ್ಟ ಕೀರ್ತಿ ಇವರದು. ಹರಿಯ ಮೊದಲ ಹೆಜ್ಜೆಗಳು ಪುಸ್ತಕಕ್ಕೆ ಮುನ್ನುಡಿ ಬರೆದಿದ್ದಾರೆ. ಅದು ೨೦೦೧ನೇ ಸಾಲು. ಆಗತಾನೆ ನನ್ನ ‘ಬಾ ಬೆಳಕೆ!’ ಕವನ ಸಂಕಲನ ಪ್ರಕಟವಾಗಿತ್ತು. ಆಗ ಜಾತ್ಯತೀತವಾದ ಒಂದು ಸಾಂಸ್ಕೃತಿಕ ಸಂಘಟನೆ ಹಾಗು ಪ್ರಕಾಶನ ಸಂಸ್ಥೆಯೊಂದನ್ನು ಕಟ್ಟಬೇಕೆಂಬ ಬಯಕೆಯ ಬೀಜ ಅದೆಲ್ಲಿಂದಲೋ ನನ್ನ ತಲೆಯಂಗಳದಲ್ಲಿ ಕಾಣಿಸಿಕೊಂಡಿತು. ಇದನ್ನು ನೇರವಾಗಿ ನನ್ನ ಅಂತರಂಗದ ಗುರುವೆಂದೇ ನಾನು ಭಾವಿಸಿರುವ ಹಿರಿಯ ಸಾಹಿತಿ ಪ್ರೊ| ಕೆ. ಭೈರವಮೂರ್ತಿಯವರ ಗಮನಕ್ಕೆ ತಂದೆ. ಅದಕ್ಕವರು ತಕ್ಷಣ ನೀರೆರೆದರು. ಅದರ ಫಲವೇ ‘ಸರ್ವಜ್ಞ ಕನ್ನಡ ಸಂಘ ಹಾಗು ಸರ್ವಜ್ಞ ಪ್ರಕಾಶನ ಸಂಸ್ಥೆ’ ಉಗಮಗೊಂಡಿತೆಂದು ಸ್ಥಾಪಕರಾದ ಜಯಪ್ಪ ಹೊನ್ನಾಳಿ ಹೇಳುತ್ತಾರೆ. ಈ ಸಂಸ್ಥೆಯ ವತಿಯಿಂದ ಸುಮಾರು ೨೫ ಕೃತಿಗಳನ್ನು ಪ್ರಕಟಿಸಿದೆ.