ಅಮೆರಿಕನ್ನಡ
Amerikannada
ಪ್ರೊ. ಎಚ್.ಜಿ. ಸುಬ್ಬರಾವ್
ಶ್ರೀ ಎಚ್. ಗೋಪಾಲಯ್ಯ ಮತ್ತು ಶ್ರೀಮತಿ ನಂಜಮ್ಮ ಅವರ ಮಗನಾಗಿ ಸೆಪ್ಟ೦ಬರ್ ೧೫, ೧೯೨೧ ರಂದು ಜನಿಸಿದ ಶ್ರೀ ಎಚ್.ಜಿ. ಸುಬ್ಬರಾವ್‌ರ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಶಿವಮೊಗ್ಗ (೧೯೨೪), ಮೊಳಕಾಲ್ಮೂರು (೧೯೨೪-೨೮), ಭದ್ರಾ ನದಿ ದಂಡೆಯ ಹೆಬ್ಬೆ ಗ್ರಾಮ (೧೯೨೮-೩೦), ಹಾಸನ (೧೯೩೦-೩೪), ಆನವಟ್ಟಿ, ಸೊರಬ (೧೯೩೫-೩೭) ಗಳಲ್ಲಿ ನಡೆಯಿತು. ಬೆಂಗಳೂರು (೧೯೩೭-೩೮) ರಲ್ಲಿ ಪ್ರಾರಂಭವಾದ ಕಾಲೇಜು ವಿದ್ಯಾಭ್ಯಾಸವನ್ನು ಮೈಸೂರು ವಿಶ್ವವಿದ್ಯಾನಿಲಯ (೧೯೩೮-೪೦) ದಲ್ಲಿ ಮುಂದುವರಿಸಿ, ರಸಾಯನಶಾಸ್ತ್ರದಲ್ಲಿ ಬಿಎಸ್‌ಸಿ(ಅನರ್ಸ್) (೧೯೪೦-೪೩) ಮತ್ತು ಎಮ್‌ಎಸ್‌ಸಿ (ರಸಾಯನಶಾಸ್ತ್ರ) (೧೯೪೬) ರಲ್ಲಿ ಮುಗಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕ(೧೯೪೩-೪೫) ವೃತ್ತಿಯನ್ನು ಪ್ರಾರಂಭಿಸಿದ ಇವರು ಶಿವಮೊಗ್ಗ ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ ಅಧ್ಯಾಪಕರು(೧೯೪೫-೫೫), ಮೈಸೂರು ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರು(೧೯೫೫-೮೧) ನಿವೃತ್ತಿ(೧೯೮೧) ಹೊಂದಿದರು. ಬಹುಮುಖ ಪ್ರತಿಭೆಯ ಇವರು ರಂಗಕರ್ಮಿಗಳೂ ಹೌದು. ಹ್ಯಾಮ್ಲೆಟ್, ಮ್ಯಾಕ್‌ಬೆತ್, ಮರ್ಚೆಂಟ್ ಆಫ್ ವೆನಿಸ್, ಪರೀಕ್ಷೆ ಗುಳಿಗೆಗಳು (ನಾ ಕಸ್ತೂರಿಯವರೊಡನೆ), ಕೈಲಾಸಂ ಕಡ (ಆಶು ನಾಟಕ) ಮುಂತಾದ ನಾಟಕಗಳಲ್ಲಿ ಭಾಗವಹಿಸಿದ್ದರು. ಪ್ರೊ| ದೇವರಾಜ್ ಸರ್ಕಾರ್ ಮತ್ತು ಪ್ರೊ| ಪ್ರಭು ಪ್ರಸಾದ್ ಅವರೊಂದಿಗೆ ಪ್ರದರ್ಶಿಸಿದ ‘ರಿಫಂಡ್’ ಇವರ ಒಂದು ವಿನೂತನ ಇಂಗ್ಲಿಷ್ ರಂಗಪ್ರಯೋಗ. ಇವರ ಪ್ರಕಟಿತ ಬರೆಹಗಳು ಮತ್ತು ಪುಸ್ತಕಗಳು: ವಿಜ್ಞಾನ ಕರ್ನಾಟಕದಲ್ಲಿ (ಪ್ರಬುದ್ಧ ಕರ್ನಾಟಕದ ಸೋದರ ಪ್ರಕಟಣೆ); ರಸಾಯನ ವಿಜ್ಞಾನಿಗಳನ್ನು ಕುರಿತು ಲೇಖನಗಳು; ಕನ್ನಡ ವಿಶ್ವಕೋಶದಲ್ಲಿ ಸುಮಾರು ೨೦೦ ಲೇಖನಗಳು; ವಿಜ್ಞಾನ ಪದ ವಿವರಣ ಕೋಶ’(ನವಕರ್ನಾಟಕ ಪ್ರಕಟಣೆ, ಜಿ.ಟಿ. ನಾರಾಯಣ ರಾವ್‌ರೊಂದಿಗೆ), ಪ್ರಿ-ಯುನಿವರ್ಸಿಟಿ ಮತ್ತು ಪದವಿ ತರಗತಿಗಳಿಗೆ ಕನ್ನಡದಲ್ಲಿ ಸರಳ ರಸಾಯನ ಶಾಸ್ತ್ರದ ಪಠ್ಯ ಪುಸ್ತಕಗಳು (ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಕಟಣೆಗಳು); ದಿನ, ವಾರ, ಮಾಸಿಕ- ಪತ್ರಿಕೆಗಳಲ್ಲಿ ಜೀವನ ಚರಿತ್ರೆ, ವಿಜ್ಞಾನದ ಸಂಶೋಧನೆಗಳ ಲೇಖನಗಳು.