ಅಮೆರಿಕನ್ನಡ
Amerikannada
ಜಿ.ಆರ್. ವಿದ್ಯಾರಣ್ಯ
ಶ್ರೀ ಜಿ. ಆರ್. ವಿದ್ಯಾರಣ್ಯ(೬೦), ಮೂಲತಃ ಗರ್ಗೇಶ್ವರಿ (ತಿ. ನರಸೀಪುರ) ಯವರು. ಬಾಲ್ಯ ಮತ್ತು ಪ್ರಾಥಮಿಕ ವಿದ್ಯಾಭ್ಯಾಸವೆಲ್ಲವೂ ಮುಂಬಯಿಯಲ್ಲಿ ನಡೆಯಿತು. ಅವರ ತಂದೆ, ದಿ|| ಜಿ.ವಿ.ರಂಗಸ್ವಾಮಿಯವರ ಅಪಾರ ಕನ್ನಡ ಪ್ರೇಮದಿಂದಾಗಿ ಪ್ರೌಢಶಾಲೆಯವರೆಗಿನ ವಿದ್ಯಾಭ್ಯಾಸ ಕಡ್ಡಾಯವಾಗಿ ಕನ್ನಡ ಶಾಲೆಯಲ್ಲಾಯಿತು. ಉನ್ನತ ವಿದ್ಯಾಭ್ಯಾಸ, ಮರೀನ್ ರಾಡಾರ್ ಟೆಕ್ನಾಲಜಿ, ಇಂಗ್ಲೆಂಡಿನ ಲಿವರ್‌ಪೂಲ್ ನಗರದಲ್ಲಿ ಪಡೆದರು. ವಾಣಿಜ್ಯ ನೌಕಾಪಡೆಯಲ್ಲಿ ಶ್ರೀಯುತರು ಸುಮಾರು ಮೂವತ್ತು ವರ್ಷ ಸೇವೆ ಸಲ್ಲಿಸಿ, ತಮ್ಮ ಸೇವಾ ಅವಧಿಯಲ್ಲಿ ನೂರಕ್ಕೂ ಹೆಚ್ಚು ದೇಶಗಳನ್ನು ಸುತ್ತಿ, ಹಲವಾರು ದೇಶಗಳಲ್ಲಿ ಕೆಲಸ ಮಾಡಿ, ನಮ್ಮ ದೇಶಕ್ಕಿಂತ ಉತ್ತಮ ದೇಶವಿಲ್ಲವೆಂದು, ಸ್ವಯಂ ನಿವೃತ್ತಿ ಪಡೆದು ಮೈಸೂರಿನಲ್ಲಿ ಬಂದು ನೆಲೆಸಿರುತ್ತಾರೆ. ಮೈಸೂರಿನ ಹೊಯ್ಸಳ ಕರ್ನಾಟಕ ಸಂಘದ ಖಜಾಂಚಿಯಾಗಿ ಹಲವಾರು ವರ್ಷ ಕೆಲಸಮಾಡಿ, ಸಂಘದ ಶತಮಾನೋತ್ಸವ ಸಮಾರಂಭದ ಪ್ರಧಾನ ಸಂಚಾಲಕರಾಗಿ, ಸಂಘದ ಮತ್ತು ಸಮುದಾಯದ ಸಾಧಕರ ಪರಿಚಯ ಲೇಖನಗಳನ್ನೊಳಗೊಂಡ ಸ್ಮರಣ ಸಂಚಿಕೆಯ ಪ್ರಕಟಣೆಗೆ ಕಾರಣಕರ್ತರಾಗಿರುತ್ತಾರೆ. ಸಂಘದ ಮುಖವಾಣಿಯಾದ ’ಹೊಯ್ಸಳವಾಣಿ’ ಎಂಬ ಪತ್ರಿಕೆಯ ಸ್ಥಾಪನಾ ಸಂಪಾದಕರಾಗಿ ಇತ್ತೀಚಿನವರೆಗೆ ಕೆಲಸಮಾಡಿರುತ್ತಾರೆ. ರೋಟರಿ ಮೈಸೂರು ಪಶ್ಚಿಮ ಸಂಸ್ಥೆಯ ‘ಬೃಂದಾವನ’ ಪತ್ರಿಕೆಯ ಹಾಲಿ ಸಂಪಾದಕರು. ‘ಪೌರಪ್ರಜ್ಞೆಗಾಗಿ ಮಕ್ಕಳ ಚಳುವಳಿ’ ಎಂಬ ಸಂಸ್ಥೆಯಲ್ಲಿ ವಲಯ ಸಮನ್ವಯಾಧಿಕಾರಿಯಾಗಿ ಕಳೆದ ನಾಲ್ಕು ವರ್ಷಗಳಿಂದ ಮೈಸೂರಿನ 70 ಶಾಲೆಗಳಲ್ಲಿ ಪ್ರೌಢಶಾಲೆಯ ಮಕ್ಕಳಿಗೆ ಪೌರಪ್ರಜ್ಞೆಯ ಅರಿವು ಮೂಡಿಸುವುದರ ಜೊತೆಗೆ ಉತ್ತಮ ಕ್ರಿಯಾಶೀಲ ನಾಗರಿಕರಾಗಲು ಅವರಿಗೆ ಬೇಕಾದ ನಾಗರಿಕ ಹಕ್ಕು ಮತ್ತು ಕರ್ತವ್ಯಗಳ ಮಾಹಿತಿಯನ್ನು ಪ್ರಾತ್ಯಕ್ಷಿಕೆಯೊಂದಿಗೆ ಬೋಧಿಸುತ್ತಿದ್ದಾರೆ. ಭ್ರಷ್ಟಾಚಾರ ವಿರುದ್ಧ ಮೈಸೂರು, ಇಂಡೋ-ಟಿಬೆಟ್ ಫ್ರೆಂಡ್‌ಶಿಪ್ ಸೊಸೈಟಿ, ರೋಟರಿ ಮೈಸೂರು ಪಶ್ಚಿಮ, ಮೈಸೂರಿನ ಜಿಲ್ಲಾ ಘನತ್ಯಾಜ್ಯ ವಸ್ತು ನಿರ್ವಹಣೆ ಸಲಹಾ ಸಮಿತಿ ಮುಂತಾದ ಹಲವಾರು ವೇದಿಕೆಗಳ ಸದಸ್ಯರಾಗಿ, ಮಾಹಿತಿ ಹಕ್ಕು ಕಾಯಿದೆ ೨೦೦೫ರ ಅಧಿಕೃತ ತರಪೇತುಗಾರರಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳ ಮಾಹಿತಿ ಕಾರ್ಯಾಗಾರ ನಡೆಸುತ್ತಿದ್ದಾರೆ. ಸಣ್ಣ ಪುಟ್ಟ ಲೇಖನದ ಜೊತೆ ಕನ್ನಡದ ಗಣಕೀಕರಣದಲ್ಲೂ ಅಪಾರ ಆಸಕ್ತಿಯಿದೆ. ಇವರ ಶೀಮತಿ, ಸೌ. ಸ್ವರ್ಣಗೌರಿಯವರೂ ಸಹ ಶಾಲಾ ಶಿಕ್ಷಕಿ. ಇಬ್ಬರು ಸುಪುತ್ರಿಯರು, ಕು. ಅನುರಾಧ (ಸಿವಿಲ್ ಅಭಿಯಂತೆ) ಮತ್ತು ಕು. ಅದಿತಿ, ಜೆ.ಎಸ್.ಎಸ್. ವಾಕ್-ಶ್ರವಣ ತಂತ್ರಜ್ಞಾನ ಸಂಸ್ಥೆಯ ವಿದ್ಯಾರ್ಥಿ.