ಅಮೆರಿಕನ್ನಡ
Amerikannada
ಕೆಲವು ಕವಿಗಳ ದೃಷ್ಟಿಯಲ್ಲಿ ವಸಂತ! ಶಿಕಾರಿಪುರ ಹರಿಹರೇಶ್ವರ
      ಒಂದು ವರ್ಷದ ಕಾಲಾವಧಿಯನ್ನು ಆರು ಭಾಗಗಳನ್ನಾಗಿ ಮಾಡಿ, ವಸಂತ, ಗ್ರೀಷ್ಮ, ವರ್ಷ, ಶರತ್, ಹೇಮಂತ ಮತ್ತು ಶಿಶಿರ- ಹೀಗೆ ಆರು ಋತುಗಳನ್ನಾಗಿ ವಿಂಗಡಿಸುವುದು ನಮ್ಮ ವಾಡಿಕೆ. ಚೈತ್ರ ಮತ್ತು ವೈಶಾಖ ಮಾಸಗಳು ಸೇರಿ ವಸಂತ ಋತು. ಸುಮಾರಾಗಿ ಮಾರ್ಚ್-ಏಪ್ರಿಲ್ ನಲ್ಲಿ ಪ್ರಾರಂಭವಾಗಿ ಮೇ-ಜೂನ್ ವರೆಗೆ ಈ ಋತು ವಿಜೃಂಭಿಸುವುದು ಸಾಮಾನ್ಯ.       ಕನ್ನಡ ನಾಡಿನಲ್ಲಿ, ಭಾರತದ ಹಲವಾರು ಕಡೆ ವಸಂತ ಉತ್ಸವ ನಡೆಸುವುದು ಸಂಪ್ರದಾಯ. ಸ್ನೇಹಿತರು, ಬಂಧುಗಳು, ನೆಂಟರು ಇಷ್ಟರು ಎಲ್ಲ ಒಂದೆಡೆ ಸೇರಿ, ಸಂತೋಷವಾಗಿ, ಹಾಡು, ಹಸೆ, ನೃತ್ಯ, ನಾಟಕ, ಆಟ- ಹೀಗೆ ಬೇರೆ ಬೇರೆ ರೀತಿಗಳಲ್ಲಿ ದಿನ ಕಳೆಯುವುದೇ ಈ ಸುಗ್ಗಿ ಹಬ್ಬದ ವೈಶಿಷ್ಟ್ಯ.       ಋತುಗಳಲೆಲ್ಲಾ ಕವಿಜನಗಳಿಗೆ ತುಂಬಾ ಹೃದಯ ಆಕರ್ಷಕ ಆಗಿರೋದು ವಸಂತ ಋತು. ನಮ್ಮ ನಾಡಿನ ತತ್ರಾಪಿ ಕನ್ನಡದ ಎಲ್ಲ ಕವಿಗಳೂ ವಸಂತವನ್ನ ಒಂದಲ್ಲ ಒಂದು ರೀತಿ ಬಣ್ಣಿಸದೇ ಇಲ್ಲ.       ಪ್ರಕೃತಿಯಲ್ಲಿ ಆಗುವ, ಹಟಾತ್ತನೆ ಆಗುವ ಬದಲಾವಣೆ; ಅದರಿಂದ ಜನಗಳ ಮೇಲೆ, ಹಕ್ಕಿ-ಪ್ರಾಣಿಗಳ ಮೇಲೆ ಆಗುವ ಪರಿಣಾಮ, ರಮ್ಯ ಜೀವನದ ಸೂಕ್ಷ್ಮ ಅಂಶಗಳನ್ನ ಗುರುತಿಸೋದು- ಇವನ್ನೆಲ್ಲ ನಮ್ಮ ಕವಿಗಳು ಈ ಮಧುಮಾಸದ ವರ್ಣನೆಯಲ್ಲಿ ತುಂಬಿದ್ದಾರೆ.       “ಸರ್ವಂ, ಪ್ರಿಯೇ, ಚಾರುತರಂ ವಸನ್ರೇ”- ಎನ್ನುತ್ತಾನೆ ಕಾಳಿದಾಸ. ಅವನೇ ಎಲ್ಲ ಋತುಗಳ ವರ್ಣನೆಯನ್ನ ಒಂದೆಡೆ ಕಲೆಹಾಕುವ ಪ್ರಯತ್ನದ ತನ್ನ ಮೊದಲ ಕೃತಿಯಲ್ಲಿ,
      ದ್ರುಮಾಃ ಸಪುಷ್ಪಾಃ ಸಲಿಲಂ ಸಪದ್ಮಂ,
      ಸ್ತ್ರಿಯಃ ಸಕಾಮಃ, ಪವನಃ ಸುಗನ್ಧಿಃ,
      ಸುಖಾಃ ಪ್ರದೋಷಾ, ದಿವಸಾಶ್ಚ ರಮ್ಯಾಃ,
      ಸರ್ವಂ, ಪ್ರಿಯೇ ಚಾರುತರಂ ವಸನ್ತೇ

      “ಮರಗಳೆಲ್ಲ ಹೂಗಳಿಂದ ತುಂಬಿವೆ; ಜಲಾಶಯಗಳೆಲ್ಲ ಪದ್ಮಗಳಿಂದ ತುಂಬಿವೆ. ಸ್ತ್ರೀಯರು ಸಕಾಮಿಗಳಾಗಿದ್ದಾರೆ. ಗಾಳಿಯು ಸುಗಂಧಪೂರಿತವಾಗಿದೆ. ಮುಂಜಾನೆ ಸುಖಕರವಾಗಿದೆ, ದಿವಸಗಳು ರಮ್ಯವಾಗಿವೆ.”- ಪ್ರಿಯೇ ವಸಂತಋತುವಿನಲ್ಲಿ ಎಲ್ಲವೂ ಮನೋಹರ!       “ವಸನ್ತೇ ಪುಷ್ಪಸಮಯಃ ಸುರಭಿಃ”- ಎನ್ನುತ್ತದೆ, ಅಮರಕೋಶ.೨ ಈ ಸುಗ್ಗಿಯ ಕಾಲಕ್ಕೆ. ಮರಗಿಡಗಳು ಚಿಗುರುವ, ಹೂಬಿಡುವ, ಹಸಿರುಡುವ ಕಾಲಾವಧಿಗೆ.       ತಮ್ಮ ಕಾವ್ಯದಲ್ಲಿ ವಸಂತ ಬಂದಿತೆಂದರೆ, ಕವಿಗಳಿಗೆ ಸುಗ್ಗಿಯೋ ಸುಗ್ಗಿ! ಮಾವು, ಮಲ್ಲಿಗೆ, ಬೆಳದಿಂಗಳು, ಕೋಗಿಲೆ, ಬಗೆ ಬಗೆಯ ಹೂವುಗಳು, ದುಂಬಿ, ಹಂಸ- ಎಲ್ಲವನ್ನೂ ಯಥೇಷ್ಟ ಕರೆತರುತ್ತಾರೆ! ಚಮತ್ಕಾರವಾಗಿ ಚಿತ್ರಿಸುತ್ತಾರೆ, ಕನ್ನಡದ ಕವಿಗಳು.       ಕುಮಾರವ್ಯಾಸ ಏನು ಹೇಳುತ್ತಾನೆ ಕೇಳಿ:

      ಪಸರಿಸಿತು ಮಧುಮಾಸ |
      ತಾವರೆ ಎಸಳ ದೋಣಿಯ ಮೇಲೆ ಹಾಯ್ದವು,
      ಕುಸುಮ ರಸದ ಉಬ್ಬುರದ,
      ತೆರೆಯನು ಕೂಡ - ದುಂಬಿಗಳು|
      ಒಸರುವ ಮಕರಂದದ, ತುಷಾರದ ಕೆಸರೊಳು,
      ಅದ್ದುವು ಕೊಂಬೆಗಳು|
      ಹಗಲೆಸೆವ ದಂಪತಿವಕ್ಕಿ, ಸಾರಸ ರಾಜಹಂಸಗಳು.

      ಈಗ ಹೂವಿನ ಕಂಪು ಒಂದು ನದಿಯಾಗಿದೆ, ಈ ಕುಸುಮರಸದ ಉಬ್ಬುರದ ತೊರೆಯನ್ನ, ಹೊನಲನ್ನ, ದುಂಬಿಗಳು ಹೇಗೆ ದಾಟುತ್ತಿವೆ? ತಾವರೆ ಎಸಳ ದೋಣಿ ಮಾಡಿಕೊಂಡು! ಹೂವಿನಿಂದ ಒಸರುವ ಮಕರಂದದಿಂದ ನದಿಯಲ್ಲ ಕೆಸರಾಗಿ ಬಿಟ್ಟಿದೆ. ದಂಪತಿ ವಕ್ಕಿಗಳು- ಎನ್ನುತ್ತಾರಲ್ಲ ಆ ಕ್ರೌಂಚ ಸಾರಸ ಪಕ್ಷಿಗಳು ಈ ಕೆಸರಲ್ಲಿ ಮುಳುಗಿ ಏಳುತ್ತಾ ಇವೆ- ಎನ್ನುತ್ತಾನೆ ನಮ್ಮ ಗದುಗಿನ ನಾರಣಪ್ಪ.       ಅಷ್ಟೆಲ್ಲ ಕವಿಸಮಯದ ಅತಿ ಉಪಯೋಗ ಬೇಡ, ಎನ್ನುತ್ತಾ, ‘ರಾಮಾಯಣ ದರ್ಶನ’ದಲ್ಲಿ ಕುವೆಂಪು ಚಿಕ್ಕದಾಗಿ, ಚೊಕ್ಕದಾಗಿ ಹೇಳುತ್ತಾರೆ:

      ಟುವ್ವಿ ಮಾಗಿಗೆ ಟುವ್ವಿ
      ಸುವ್ವಿ ಸುಗ್ಗಿಗೆ ಸುವ್ವಿ
      ಮಾಗಿ ಹೋಗಿ, ಮೈದೋರಿದುದು
      ಹಕ್ಕಿ- ಹೂಗಳ ಸುಗ್ಗಿ, ಹಿಗ್ಗಿ

      -ಎನ್ನುತ್ತಾರೆ. “ಸುಗ್ಗಿ ಬರೆ, ಹಿಗ್ಗಿ ತಿರೆ, ಸಗ್ಗ ಸುಖವ ತರುತಿದೆ”- ಎನ್ನುವುದು (ಅಂದರೆ, ಸುಗ್ಗಿ ಬರಲು, ಭೂಮಿ ಹಿಗ್ಗಿ ಹೋಗಿದೆ. ಇಲ್ಲಿಯೇ ಸ್ವರ್ಗದ ಆನಂದ ಕಾಣುವಂತೆ ಆಗಿದೆ!) ಎಷ್ಟು ಅರ್ಥ ಪೂರ್ಣ ಅಲ್ಲವೆ? ಇಷ್ಟೇ ಅರ್ಥ ವ್ಯಾಪ್ತಿಯನ್ನು ಕಾಣುತ್ತೇವೆ “ವಸಂತನೊಬ್ಬನ ಸಹಾಯ ಸಾಕು, ಪಿನಾಕ ಪಾಣಿಯನ್ನೂ ಗೆದ್ದೇನು” (ಸಹಾಯಂ ಏಕಂ ಮಧುಂ ಏವ ಲಬ್ಧ್ವಾ, ಕುರ್ಯಾಂ ಹರಸ್ಯಾಪಿ ಪಿನಾಕಪಾಣೇಃ ಧೈರ್ಯಚ್ಯುತಿಮ್!”) ಎಂಬ ಕಾಳಿದಾಸನ ಮನ್ಮಥನ ಮಾತಿಗೆ.೫

      ಮಾವಿನ ಮರಕ್ಕೆ ಭಾರತೀಯರು ಬೇರೆ ಯಾವ ಕಾರಣಕ್ಕೇ ಪ್ರಾಶಸ್ತ್ಯ ಕೊಟ್ಟಿರಲಿ, ಕವಿಗಳಿಗಂತೂ ವಸಂತ ವರ್ಣನೆಯಲ್ಲಿ ಮಾವಿನ ಮರ ವರ್ಣಿಸದಿದ್ದರೆ ತೃಪ್ತಿಯಿಲ್ಲ.

      ಮತ್ತ-ದ್ವಿರೇಫ-ಪರಿಚುಂಬಿತ ಚಾರುಪುಷ್ಪಾ,
      ಮಂದಾನಿಲ-ಆಕುಲಿತ-ನಮ್ರ ಮೃದು ಪ್ರವಾಲಾಃ

ಹೂವುಗಳ ಮಕರಂದ ಕುಡಿದು ಮತ್ತವಾದ ದುಂಬಿಗಳು ಹೂಗಳನ್ನೇ ಮತ್ತೆ ಮತ್ತೆ ಮುತ್ತಿಡುತ್ತಿವೆ; ಮಂದ ಮಂದವಾಗಿ ಬೀಸುವ ಗಾಳಿ ನವಿರಾದ ಚಿಗುರಗಳನ್ನು ನೃತ್ಯವಾಡಿಸುತ್ತಿದೆ- ಎನ್ನುತ್ತಾನೆ, ಕಾಳಿದಾಸ. ಕನ್ನಡದ ಆದಿಕವಿ ಪಂಪ. “ಮತ್ತೆ ಹುಟ್ಟಿದರೆ, ಕನ್ನಡ ನಾಡಿನಲ್ಲಿಯೇ, ಬನವಾಸಿಯಲ್ಲಿಯೇ ಹುಟ್ಟಬೇಕು”೭- ಎನ್ನುವ ಇವನಿಗೆ ಇನ್ನೊಂದು ಹುಚ್ಚು- ಮಾವಿನ ಮರ.

      (ಎಲೈ ಮಾವಿನ ಮರವೇ),
      ತಳಿರೋಳ್ ನೀನೇ ಬೆಡಂಗನಯ್(ಸೊಗಸುಗಾರನು),
      ನನೆಗಳೋಳ್ ನೀಂ ನೀರನೈ,
      (ಮೊಗ್ಗುಗಳಲ್ಲಿ ನೀನೇ ಕಾಂತಿಯುಳ್ಳವನು)
      ಪುಷ್ಪ ಸಂಕುಳದೊಳ್ (ಹೂವುಗಳ ಗುಂಪಿನಲ್ಲಿ)
      ನೀನೇ ವಿಲಾಸಿಯೈ,
      ಮಿಡಿಗಳೊಳ್ (ಚಿಕ್ಕ ಪುಟಾಣಿ ಕಾಯಿಯಿದ್ದಾಗಲೂ),
      ನೀ ಚೆಲ್ವನೈ;
      ಪಣ್ತ (ಅಂದರೆ ಹಣ್ಣಾದ)
      ಪಣ್ಗಳಿನೋವೋ (ಹಣ್ಣುಗಳಲ್ಲಿ)
      ಪೆರತೇನೂ ನೀನೇ ಭುವನಕ್ಕೆ ಆರಾಧ್ಯನೈ,
      (ಹಣ್ಣುಗಳಲ್ಲಿ ರಾಜಸಮಾನವಾಗಿದ್ದು, ಆರಾಧಿಸಲು
      ಅರ್ಹ ಎಂದರೆ ಮಾವಿನ ಹಣ್ಣು ಅಲ್ಲವೇ,)
      ಭೃಂಗ(ಅಂದರೆ ದುಂಬಿ), ಕೋಕಿಳ,
      ಕೀರ (ಅಂದರೆ ಹಂಸ , ಇವುಗಳೆಲ್ಲದರ)
      ಪ್ರಿಯ, ಚೂತರಾಜ (ಮಾವಿನ ಮರವೇ)
      ತರುಗಳ್ (ಬೇರೆ ಬೇರೆ ಮರಗಳು)
      ನಿನ್ನಂತೆ ಚೆನ್ನಂಗಳೇ? (ನಿನ್ನ ಮುಂದೆ ಅವು ಎಷ್ಟರವು?)
      ಪಂಪ ಹೇಳುವುದು ಸರಿ. ಮಾವಿನ ಮರಕ್ಕೆ ಸಾಟಿಯಿಲ್ಲ.

      “ವಾಸಿರುವ ಕಾಡಿನಲ್ಲಿ ಬೇರೆ ಏನನ್ನ ನೋಡ ಹೊರಟಿರುವೆ? ಇನ್ನೆಲ್ಲೂ ಹೋಗುವುದು ಬೇಡ, ಈ ಕಡೆ ದಯಮಾಡಿಸಬೇಕು”- ಎಂಬಂತೆ, ಕೆಂಪಡರಿದ, ಚಿಗುರು ಹಿಡಿದ, ಮಾವಿನ ಮರವೇ ಕೋಗಿಲೆಯ ದನಿಯಿಂದ ಕೂಗಿದಂತೆ,

      “ಆನಿರ್ದ ಬನದೊಳ್,
      ಉಳಿದುವನ್ ಏನಂ ನೋಳ್ಪೆ?
      ಬರ್ಪುದು”, ಎಂಬಂದದಿಂ,
      “ಪಿಕ-ಮಧುರ-ಧ್ವಾನದಿಂ
      ಆರಕ್ತ ಕೋರಕಂ ಸಹಕಾರಂ”

      ಎಂದಂತೆ, ಮಲ್ಲಿನಾಥ ಕಾವ್ಯದಲ್ಲಿ ಕವಿ ನಾಗಚಂದ್ರನಿಗೆ ಭಾಸವಾಗುತ್ತದೆ, “ತುಂ ತುಂ ತುಂ ತುಂ ತುಂಬಿ ಬಂದಿತ್ತ”೧೦ - ಎಂಬ ಗುಂಜಾರವದಿಂದ ನಮಗೆಲ್ಲ ಪರಿಚಿತರಾದ ಬೇಂದ್ರೆ ಹೇಳುತ್ತಾರೆ:

      ಚೈತ್ರ ರಥದಲಿ ವಸಂತನ ಬರವು ಎಂದಿಗೂ,
      ಮಾಂದಳಿರು ತೋರಣದ
      ಮುಂದೆ ಮಾಮಿಡಿ ಗುಡಿಯು,
      ಚಂದಿರಗು ಶುಕ-ಪಿಕಗು ಮಾಗಧಗು ಬಂದಿಗೂ
      ಕಾಮದ ಅನಿರ್ ವಾಚ್ಯ ಪ್ರೇಮ ಧ್ವನಿಸುವ ನುಡಿಯು೧೧

      ಇನ್ನು, ನಾವೆಲ್ಲ ಚಿಕ್ಕಂದಿನಲ್ಲಿ ಬಾಯಿಪಾಠ ಮಾಡಿದ ಬಿ.ಎಂ.ಶ್ರೀ ಅವರ ಕವನ ನೆನಪಿಸಿಕೊಳ್ಳೋಣ;

      ವಸಂತ ಬಂದ,
      ಋತುಗಳ ರಾಜ ತಾ ಬಂದ,
      ಚಿಗುರನು ತಂದ,
      ಹೆಣ್ಗಳ ಕುಣಿಸುತ ನಿಂದ,
      ಚಳಿಯನು ಕೊಂದ,
      ಹಕ್ಕಿಗಳ ಉಲಿಗಳೇ ಚೆಂದ.
      ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
      ಇನಿಯರ ಬೇಟ, ಬನದಲಿ ಬೆಳದಿಂಗಳ ಊಟ,
      ಹೊಸ ಹೊಸ ನೋಟ, ಹಕ್ಕಿಗೆ ನಲಿವಿನ ಪಾಠ||
      ಮಾವಿನ ಸೊಂಪು, ಮಲ್ಲಿಗೆ ಬಯಲೆಲ್ಲ ಕಂಪು
      ಗಾಳಿಯ ಕಂಪು, ಜನಗಳ ಜಾತ್ರೆಯ ಗುಂಪು
      ಕಿವಿಗಳಿಗೆ ಇಂಪು, ಹಕ್ಕಿಗಳ ಉಲುಹಿನ ಪೆಂಪು
      ಕುಹೂ, ಜಗ್ ಜಗ್, ಟುವ್ವೀ, ಟೂವಿಟ್ಟವೂ||

      ಎಲ್ಲೆಲ್ಲೂ ಸೌಂದರ್ಯವನ್ನು ಕಾಣುತ್ತಾ, ಸತ್ಯವಾದುದಕ್ಕೆ, ಶಿವವಾದುದಕ್ಕೆ ಚೆಲುವನ್ನು ಆರೋಪಿಸುವ ಅರಸುವ ಮನೋಭಾವದವರಿಗೆ ವಸಂತ ಒಂದು ಅಪೂರ್ವ ನಿಧಿಯಿದ್ದಂತೆ. ‘ಕಣ್ಣುಗಳು ತಂಗುವ ಸೊಗಸಿನ ರೇವು’ ಎನ್ನುವುದನ್ನ ಕಾಣುವ, ರಸ ಸರಸ್ವತಿಯ ಆರಾಧಕ ಪು.ತಿ. ನರಸಿಂಹಾಚಾರ್ಯರು ಹೇಳುವಂತೆ- ಸೌಂದರ್ಯ ಎಂಬುದು ನಲಿವಿನ ಒಂದು ವಿಶೇಷ ಅನುಭವ. ಹೇಳುತ್ತಾರೆ:

      ನಲವೇ ನನ್ನ ಕಿರಣವು
      ನರರ ಎದೆಯ ಕರಣವು
      ಎಲ್ಲದರೊಳು ಎಲ್ಲೆಲ್ಲಿಯು
      ಕಾಂಬ ಚೆಲುವೆ ವಿವರಣವು .. ..

      ಸೌಂದರ್ಯ ಸಮೀಕ್ಷಕ ಜಿ.ಎಸ್.ಶಿವರುದ್ರಪ್ಪ ನವರು, ಈ ಚೆಲುವಿನ ಸಮರ್ಥ ಪ್ರತಿನಿಧಿಯಾದ
      ಹರಿವ ಮನವನು ಹಿಡಿದು
      ಒಂದೆಡೆ ನಿಲಿಸಿ ತೊಳೆದಿದೆ ಹೂವಿದು
      ಎನ್ನುವದನ್ನ ವ್ಯಾಖ್ಯಾನಿಸುತ್ತ, “ಹರಿಯುವ ಮನಸ್ಸನ್ನು ಹಿಡಿಯುವುದು ಮಾತ್ರವಲ್ಲ, ನಮ್ಮ ಮನಸ್ಸನ್ನೂ ತೊಳೆದು ಸಂಸ್ಕಾರಗೊಳಿಸುತ್ತದೆ, ಒಂದು ಬಗೆಯ ಕ್ಷಣ ರಸ-ವಿಸ್ಮೃತಿಯಲ್ಲಿ ಅದ್ದುತ್ತದೆ”- ಎನ್ನುತ್ತಾರೆ. ಸುಗ್ಗಿಯ ಕಾಲದಲ್ಲಿ, ಲೋಕದ ಎಲ್ಲ ಚೆಲವು, ಕ್ಷಣಕಾಲ ಒಂದೆಡೆ ಸೇರಿ, ಮತ್ತೆ ಅದೃಶ್ಯವಾಗುವುದನ್ನ, ಗೋಪಾಲಕೃಷ್ಣ ಅಡಿಗರ ಈ ಮಾತುಗಳಲ್ಲಿ ಗುರುತಿಸಬಹುದು;

      ಅದೃಶ್ಯ ಲೋಕದ, ಅನೂಹ್ಯ ರೂಪದ
      ಅನಂತಕಾಲದ ಯಾತ್ರಿಕರೇ,
      ಮಣ್ಣಿನ ಮನದಲಿ, ಹೊನ್ನನೆ ಬೆಳೆಯುವ
      ಅಪೂರ್ವ ತೇಜದ ಮಾಂತ್ರಿಕರೇ
      ಅತಿಥಿಗಳಹ ನೀವೆಲ್ಲರು ಇಲ್ಲಿಗೆ
      ನೆಲಸಲು ಬಂದವರಲ್ಲ
      ಒಂದೆ ಗಳಿಗೆಗೆ ಆಮೋದಕೆ ಬರುವಿರಿ
      ಬಂದ ಅರಗಳಿಗೆಯೊಳೇ ಮೈಗರೆವಿರಿ .. ..

      ಒಟ್ಟಿನಲ್ಲಿ,
      ಮಧುಮಾಸ ಬಂದಿಹುದು,
      ಮಧುಕರಿಗಳೇ ಬನ್ನಿ
      ಮಧುರಸದ ಗೀತಗಳಿಂ ನಾವು ನಲಿವಾ... ...’
      -ಎನ್ನುತ್ತದೆ ಕುವೆಂಪುವಾಣಿ

      ಅಮೆರಿಕಾದ ಕೆಲವು ಕವಿಗಳು ಕಂಡ ವಸ೦ತ:       ಕನ್ನಡ ನಾಡಿನಲ್ಲಿ, ಭಾರತದ ಹಲವಾರು ಕಡೆ ಸುಗ್ಗಿಯಲ್ಲಿ ವಸಂತ ಉತ್ಸವ ನಡೆಸುವುದು ಸಂಪ್ರದಾಯ. ಸ್ನೇಹಿತರು ಬಂಧುಗಳು ಒಂದೆಡೆ ಸೇರಿ ಹಾಡು, ಹಸೆ, ಆಟ, ನಾಟಕ, ನೃತ್ಯ ಹೀಗೆ ಸಂತೋಷವಾಗಿ ದಿನ ಕಳೆಯುವುದೇ ಈ ಸುಗ್ಗಿ ಹಬ್ಬದ ವೈಶಿಷ್ಟ್ಯ. ಪ್ರಕೃತಿಯಲ್ಲಿ ಆಗುವ, ಹಠಾತ್ತನೆ ಗೋಚರಿಸುವ ಬದಲಾವಣೆ; ಅದರಿಂದ ಜನಗಳ ಮೇಲೆ ಹಕ್ಕಿ, ಪ್ರಾಣಿಗಳ ಮೇಲೆ ಆಗುವ ಪರಿಣಾಮ, ರಮ್ಯಜೀವನದ ಸೂಕ್ಷ್ಮ ಅಂಶಗಳನ್ನ ಗುರುತಿಸುವುದು- ಇವನ್ನೆಲ್ಲ ನಮ್ಮ ಕನ್ನಡದ ಹಿಂದಿನ ಕವಿಗಳು ಈ ಮಧುಮಾಸದ ಬಣ್ಣನೆಯಲ್ಲಿ ತುಂಬಿದ್ದಾರೆ.       “ಎತ್ತಣ ಮಾಮರ, ಎತ್ತಣ ಕೋಗಿಲೆ” ಧೋರಣೆ ಬಲಿಯತೊಡಗಿದಾಗ ಕವಿಗಳು ವಸಂತವನ್ನು ಕುರಿತು ಬರೆಯುವ ಪರಿ ಬದಲಾಯಿಸಿತು.

      ಒಂದು ವೇಳೆ ಆ ವಸಂತ -
      ಮಾಸದಲ್ಲೇ ನೀ ಹಾಡಲು
      ಕೇಳುವ ಕವಿಯಿಲ್ಲವೀಗ;
      ನಿನ್ನ ಕುರಿತು ಕವಿತೆ ಬರೆದು
      ಓದುವುದೂ ಸಲ್ಲದೀಗ.
      ಅಯ್ಯೋ, ನಿನಗೆ ಹೇಗೆ ಗೊತ್ತು
      ಸಾಹಿತ್ಯದೊಳಾದ ಕ್ರಾಂತಿ!

      ಈ ಹಿನ್ನೆಲೆಯಲ್ಲಿ, ಊರಿನಿಂದ ದೂರಬಂದು ನೆಲಸಿದ, ಅಮೆರಿಕಾದ ಕೆಲವು ಕನ್ನಡ ಕವಿಗಳು ವಸಂತವನ್ನು ಕಂಡ ಬಗೆಯನ್ನು ಈಗ ನೋಡೋಣ;

ಚೈತ್ರದ ನಡುಹಗಲಿನ
ಸುಡು ಬಿಸಿಲಿನ
ಸೂರ‍್ಯನ ಪಳಗಿಸಿ
ಚಂದ್ರನಂತೆ ತಂಪಾಗಿಸುವ
ಡಾ|| ಹೆಮ್ಮಿಗೆ ರಂಗಾಚಾರ್ (‘ರಂಗ’) ಅವರು
ಚೈತ್ರದ ಉರಿಬಿಸಿಲಿನಲ್ಲಿ
ಸುಟ್ಟು ಬಂದರವಾದ ಕಂದು ಬಯಲುಗಳಲ್ಲಿ
ಮತ್ತೆ ‘ಭಾದ್ರಪದ’ದಲ್ಲಿ
ಕಾಡು ತರಗಣಿಗಳ ಹಸಿರು
ಹಂದರ ಹಬ್ಬುವು೧೮
-ಎಂದು ಮುಂಗಾಣುತ್ತಾರೆ.
ನಿರಾಶೆಯ ಬೆಂಗಾಡಿನಲ್ಲಿ ಅವಿತು
ಪುನಃ ಪುನಃ ಮೊಳೆವ ಆಸೆಯಂತೆ
ಸಾವಿನ ಬೀಸುಕೋಲನು ತಪ್ಪಿಸಿ
ಹೇಗೆ ಹುದುಗಿತ್ತು ಈ ಜೀವ?
-ಎಂದು ಪ್ರಕೃತಿ ರಹಸ್ಯದತ್ತ ಅವರು ಬೊಟ್ಟು ಮಾಡುತ್ತಾರೆ.
ನೆಟ್ಟಗೋಡಿರುವ ನಿನ್ನ ಬೈತಲೆಯಲ್ಲೆನ್ನ
ಬೆರಳು ಜಾರಿಸಬೇಕು
-ಎಂದು ನಲ್ಲೆಯ ಎಲ್ಲ ನೆನಪುಗಳು ಮೆರವಣಿಗೆ ಹೊರಟಾಗ ಹೇಳುವ ಕವಿ ಡಾ. ಹಾ.ಮು. ಪಟೇಲರಿಗೆ (ಮಾಗಿ)ಸುಗ್ಗಿಯಲೊಮ್ಮೆ
ನಮ್ಮ ಎರೇಹೊಲದ ನಡುವೆ
ಒಂದೇ ಸಾಲು ನೇಗಿಲು ಹಾಯಿಸಿದ ಹಾಗೆ
-ಎಂಬ ಸಾದೃಶ್ಯ.
ಹಿತ್ತಲಲ್ಲೇ ಪಾತಿಮಾಡಿ ನೆಟ್ಟ, “ಇಂಥ ಬೀಜ ಬಿತ್ತಿದರೆ ಮಕ್ಕಳಿಗೆ ಒಳ್ಳೆಯದಾಗಲಿಕ್ಕಿಲ್ಲ”- ಎನ್ನುವ ಒಳದನಿ ಅವ್ವನಿಗೂ ಸುಳಿವು ಸಿಕ್ಕದ “ನುಗ್ಗೇ ಗಿಡ” ಕವಿಯ ಎತ್ತರಕ್ಕೂ ಬೆಳೆಯತೊಡಗಿ,
ವಸಂತದಿರುಳಿನಲ್ಲಿ ನನ್ನ ಗಿಡ
ಗಾಳಿಯ ತೋಳುಗಳಲ್ಲಿ ಮುಲು ಮುಲು ತಂದಾಗ
ನನಗೆ ಪುಳಕವಾಗುತ್ತಿತ್ತು.೨೦
“ವನರಾಜಿಯ ಮಡಿಲಲ್ಲಿ ಆತ್ಮಸಂಧಾನ”ಕ್ಕೆ ಹೊರಟ ಚಿ. ಉದಯಶಂಕರರಿಗೆ
ವಸಂತ ಮಳೆಬಿಲ್ಲ ಹೂಡಿ
ಧರೆಗಿಳಿಸಿದ ಧಾರೆ ಧಾರೆ ಮಳೆಗೆ
ಗಿಡಮರ ಬಳ್ಳಿಯಲ್ಲಿ ಫಲ ಪುಷ್ಟರಾಗ
ತುಂಬಿದ
ಕಾಡಿನ ಉದ್ದಗಲಕ್ಕೂ
ಮುಗ್ಧ ಜೀವಜಂತುಗಳ ಹೆಜ್ಜೆ ಹಾಡು
ಶೃತಿಗೆ ಲಯಬದ್ಧ ಗಾಳಿ ಹೊಡೆತ
ಕಂಡು, ಕೇಳಿ ವಿನೂತನ ಆಮೋದ.
ಹಸಿರು ಹಂದರದಲ್ಲಿ ಮನದ ಮಲ್ಲಿಗೆ ಬರಿಯುವದನ್ನ ಬಣ್ಣಿಸುತ್ತ,
“ಚೈತ್ರದ ಹೊಸ ಹೊಸ ಸುಗ್ಗಿ
ಚಿತ್ರ ಬರೆದು ನೆಲದಾಗ ಹೂ ಮಗ್ಗಿ
ಹಾಡಿ ಕೋಗಿಲ ಮಾಮರದಾಗ”
ಎನ್ನುವ ವಿಮಲಾ ಚನ್ನಬಸಪ್ಪ ಅವರು “ವರಷಗೊಮ್ಮೆ ಹೊಸತು ಸುಗ್ಗಿ” ಬಂದಾಗ “ನನ್ನಿ ನೆನಪು ನುಗ್ಗಿ” ಹಾರುವದನ್ನ ಹಾಡುತ್ತಾರೆ.
ಇನಿಯ ರಾಯ ನಕ್ಕರೇನೇ ಮನೆ ಮನ ಚಂದವಾದೀತೆನ್ನುವ ಎಲ್ಲ ಹೆಣ್ಣಿನ ಒಳದನಿಯನ್ನ
“ಮುಗುಳಿನಲಿ ಅಡಗಿದಾ ಎಲೆ ಕೊನರಿದಾಗಲೇ
ಇಲ್ಲಿಹುದು ವಸಂತ .. ..
ಹೃದಯದಲಿ ಅಡಗಿದು ನಗೆ ಮೊಗದಲರಳಿದರೆ
ಬೆಳಗುವುದು ಚಂದ್ರಹಾಸ”
-ದಲ್ಲಿ ಕಾಣುತ್ತೇವೆ. ಇದಕ್ಕೆ ಪೂರಕವಾಗಿ ಆ ‘ಭ್ರಮರ’ಕ್ಕೆ
ಹಸರು ಎಲೆಗಳ ಪಚ್ಚದ ತೋರಣ
ನಿನ್ನಯ ಅರಮನೆಗೆ
ಹೊಸ ಮೊಗ್ಗೆಯ ಹೂ ಬಳ್ಳಿಯ
ಗೊಂಚಲ ಪರಿಮಳ ಗೊನೆಗೊನೆಗೆ
ಎಂದು ಜೀವನ ವಸಂತ ಕುಸುಮದ ಮಧುರ ಪಕಳೆಗಳನ್ನ ಪರಿಚಯಿಸುತ್ತಾರೆ. ‘ನಾನೂ ಅಮೆರಿಕನ್ ಆಗಿಬಿಟ್ಟೆ’ ಖ್ಯಾತಿಯ ಡಾ| ಮೈ.ಶ್ರೀ. ನಟರಾಜರಿಗೆ
ಅಮೆರಿಕೆಯಲ್ಲಿ ವಸಂತ
ಬಂದಿಹನೆಂದು ಮನಸಿನಲಿ
ಮಹದಾನಂದವಾಯ್ತು
ಕಾರಣಗಳು ಹಲವಾರು. ಮುಖ್ಯವಾಗಿ,
ರಗಳೆ ಇಲ್ಲದೆ ಹಗಲು
ಕಾರು ಸ್ಟಾರ್ಟಾಗಿ,
ತಣ್ಣೀರ ನಲ್ಲಿಯಲಿ
ಕೈಕೊರೆತ ನಿಂತು
ಮುಚ್ಚಿ ಸಿಡಿದೆದ್ದ
ಕಿಟಕಿಗಳೆಲ್ಲ ತೆರೆದು
ಮನಸಾರೆ ಉಸಿರಾಡುವಂತಾಯ್ತು!

      ಸುತ್ತಣ ನಿಸರ್ಗದಲ್ಲಿ, ಆ ಮೂಲಕ ಬದುಕಿನಲ್ಲಿ, ಕಾಣ ಸಿಗುವ ವಿವರ ಗಳೆಲ್ಲದರ ಸೂಕ್ಷ್ಮ ವಿವರಣೆ, ಬಣ್ಣನೆ ನಟರಾಜರ ‘ಅಮೆರಿಕಾದಲ್ಲಿ ವಸಂತ’ ದಲ್ಲಿ ಕಾಣುತ್ತೇವೆ. ವಿನೋದಕ್ಕೆ ಪುಷ್ಟಿ ಕೊಡುವ ವಿಡಂಬನೆಯ ಧಾಟಿ ನಟರಾಜರದು. ವಸಂತದ ಚೆಲುವು ನಲಿವೂ ಈ ಚಾಟಿ ಏಟಿನಿಂದ ತಪ್ಪಿಸಿಕೊಂಡಿಲ್ಲ.       ಆಸೆಗಳು ಬಗೆ ಬಗೆಯವು; ಕಾಲ ದೇಶ ಸನ್ನಿವೇಶವನ್ನನುಸರಿಸಿ ಅವು ತಳೆಯುವ ವೇಷಗಳೋ ಹಲವು ವಿಧಗಳು. ಜ್ಯೋತಿ ಮಹದೇವ್ (‘ಸುಪ್ತದೀಪ್ತಿ’) ಅವರಿಗೆ ಈ ಅಭಿಲಾಷೆಗಳನ್ನು ಇನಿಯನೊಂದಿಗೆ ಹೇಳಿಕೊಳ್ಳುವ ಹಂಚಿಕೊಳ್ಳುವ ತೂಗಿಕೊಳ್ಳುವ ಒಂದು ಮಹದಾಸೆಯೂ ಉಂಟು. ಮುಗ್ಧ ಭಾವನೆಗಳು ಲಯ ನಾದ ರೂಪಕಗಳ ಮುಪ್ಪುರಿಯಲ್ಲಿ ಮೇಲೇಳ ತೊಡಗಿರುವ ಸುಪ್ತದೀಪ್ತಿಯವರ ‘ಭಾವ ಲಹರಿ’ಯಲ್ಲಿ.
      ನಿಮ್ಮೊಲವ ಮಾಮರದ ತಣ್ಣೆಳಲ ತಂಪಿನಲಿ
ಕಂಪ ಬೀರುವ ಮಲ್ಲೆಯಾಗರಳುವಾಸೆ;
ಹಿತವಾಗಿ ಮರ ತಬ್ಬಿ, ಚಪ್ಪರದ ತೆರ ಹಬ್ಬಿ,
ಮಲ್ಲಿಗೆಯ ಸೊಂಪಿನೊಲು ಇರುವ ಹಿರಿದಾಸೆ!
ಚೈತ್ರ ತಾ ಕಾಲಿಡಲು ಮಾಮರವು ಕೆಂಪೇರೆ,
ತಳಿರ ಮರೆಯಲಿ ಕೋಗಿಲೆಯಾಗುವಾಸೆ;
ಹೃದಯಸಿಂಹಾಸನದ ಪ್ರೀತಿ ಪಂಜರದಲ್ಲಿ
ಸವಿಮಾತ ಗಿಣಿಯಾಗಿ ಉಲಿಯುತಿರುವಾಸೆ! ....
ಇನಿತೆಲ್ಲ ಕೇಳಿದರೂ, ನನಗಾಗಿ ತುಡಿಯುತಿಹ
ನಿಮ್ಮ ಜೀವದ ಜೀವ ನಾನಾಗುವಾಸೆ!
ಅಂಥ ವಸಂತನನ್ನ ಕವಯಿತ್ರಿ ಕಾತುರದಿಂದ ನಿರೀಕ್ಷಿಸುವುದುಂಟು; “ಬಾರೆಯಾ ವಸಂತ?” ಎಂದು ಹಲುಬುವುದುಂಟು; ನಿರೀಕ್ಷೆಯಲ್ಲೇ ಸುಖ ಕಾಣುವವರು ಬಹಳ ಮಂದಿ; ಒಲವ ಬಳ್ಳಿ ಸೊರಗಿದಾಗ ನಲುಗಿದ ಮನಸ್ಸಿನ ಮಾತುಗಳನ್ನು ಅಮೆರಿಕಾದ ಸುಪ್ರಸಿದ್ಧ ಕವಯಿತ್ರಿ ಸುಪ್ತದೀಪ್ತಿಯವರು ತಮ್ಮ ‘ಬಾರೆಯಾ ವಸಂತ?’ ದಲ್ಲಿ ತೋಡಿಕೊಳ್ಳುತ್ತಾರೆ.
ಓ ವಸಂತ, ನಿನ್ನಾಗಮನದ ಆಸೆಯ-
ಕೊನರುಗಳೇ ತುಂಬಿದ ಹೆಮ್ಮರದಡಿಯ-
ನೆಳಲಲಿ ಇದ್ದರೂ ಮುದುಡುತಿಹುದು,
ಸೊರಗುತಿಹುದು ಎನ್ನ ಒಲವ ಬಳ್ಳಿಯಿದು.....
ಕೋಗಿಲೆಯ ದನಿಯಿಲ್ಲ ಗಿಣಿ ಉಲಿಯುತ್ತಿಲ್ಲ,
ಕಾಕರಾಜನ ಕರ್ಕಶವ ಕೇಳಿ ನೊಂದಿಹೆನಲ್ಲ.....
ದಶದಿಕ್ಕುಗಳಿಂದ ಸೆಳೆಯುತಿರೆ ದುಗುಡಗಳು,
ಬರುವವೇ ನನ್ನ ಬಳಿ ನಿನ್ನ ಕನಸುಗಳು?
ಎಂದು ಕೊರಗುವುದೂ ಉಂಟು. ಮಾಂದಳಿರ ತಂಪು, ಮಲ್ಲಿಗೆಯ ಕ೦ಪು, ಕೋಗಿಲೆಯ ಇಂಪು, ಗಿಣಿಗಳ ಚಿಲಿಮಿಲಿಯ ಉಲಿ, ಕಣ್ಗೆ ಹಸಿರು, ಬಾಯ್ಗೆ ಪಸೆಯ ಇನಿಗಳಿಗಾಗಿ ಹಂಬಲಿಸಿ ತೊಳಲಾಡುವುದುಂಟು. ಎದೆಯ ಭಾವಗಳೆಲ್ಲ ಒಣಗಿ ಹೋದಾವೆ೦ಬ ಅಂಜಿಕೆ ಕಾಡುವುದುಂಟು. ಆಗ ‘ಸುಪ್ತದೀಪ್ತಿ’ ಕರೆಯುತ್ತಾರೆ:
ಇರುಳ ಮಬ್ಬಿನಲಿ ನಾ ಓರ್ವಳೇ ಬಿಕ್ಕಿರಲು
ಮಧುಮಾಸ ಓಡಿ ಬಾ, ಸಂತೈಸಲೆನ್ನ ನಿನ್ನೊಕ್ಕೊರಲು!
‘ಉಗಮಾಗಮ’ದಲ್ಲಿ ಸೃಷ್ಟಿಕ್ರಿಯೆಯನ್ನು ಶಾರೀರಕ-ರಸಾಯನ ಶಾಸ್ತ್ರದಿಂದ ಅವಲೋಕಿಸುವ, ‘ಮುರುಳಿಯ ಕರೆ’, ‘ರಾಧೆಗೆ’ ಕವನಗಳಲ್ಲಿ ಆಶೆ, ನಿರಾಶೆ, ಹತಾಶೆ, ಹುತಾಶೆಗಳನ್ನು ಗುರುತಿಸುವ. ‘ಸುರಸುಮಸಮ’ ದಲ್ಲಿ ಪದಗಳನ್ನು ಕುಣಿದಾಡಿಸುವ ಭಾವಬಿಂಬ೨೯ದ ಭಾವಬಿಂದುಗಳ ಕವಯಿತ್ರಿಗೆ, ಹೊಸ ಬಗೆಯ ಕಲ್ಪನೆಗಳು ಅನೇಕ ಬಾರಿ ಆಳವಾಗಿ ಕಾಡಿ, ವಿಷಾದವೇ ಸ್ಥಾಯಿಭಾವವಾಗಿ ಉಳಿದಂತಾಗುತ್ತದೆ. ಹೀಗೆ ಸಂಕೇತಗಳೂ ಪ್ರತಿಮೆಗಳೂ ನೇರ ನುಡಿಗಳೂ ಎಷ್ಟು ಸಾರ್ಥಕವಾಗಿ ಅನಿಸಿಕೆಗಳಿಗೆ ಪೋಷಕವಾಗಿದೆಯೆಂಬುದನ್ನ ಗಮನಿಸಿದಾಗ, ಅಮೆರಿಕದ ಈ ಕನ್ನಡ ಕವಿಗಳ ವಸಂತದ ನೋಟ ರಮ್ಯ ವಸ್ತು ನವ್ಯದ ನಡುವೆ ತೂಗಾಡುತ್ತದೆ ಎನ್ನಿಸುತ್ತದೆ. ಕವಿ ದತ್ತಾತ್ರಿಯವರಿಗೆ ಹಾಡಿನ ದುಃಖವನ್ನು ಗುರುತಿಸಲಾಗುತ್ತಿಲ್ಲವಲ್ಲ ಎಂಬ ತೀವ್ರ ತೊಳಲಾಟ. ತನಗೆ ವೈಯಕ್ತಿಕವಾದುದನ್ನ ಬೇರೆಯವರು ಹಾಡಲು ಸಾಧ್ಯವೇ ಎಂಬ ಅನುಮಾನ ಕವಿಗಿದೆ. ಹಾಡು ಮೂಡಿತ್ತು ತನಗಾಗಿ ಎಂಬ ಅರಿವು ಮೂಡುವ ವೇಳೆಗೆ, ಜೊತೆಗೆ, ಹಾಡು ನಿಂತು ಕವಿಗೆ ಇನ್ನೂ ನಿಗೂಢತೆ ಆವರಿಸಿಕೊಂಡುಬಿಡುತ್ತದೆ. ಕವಿಯ ಆಯ್ಕೆಯ ವಸ್ತುವೈವಿಧ್ಯತೆಯ ರಭಸದಲ್ಲೂ ಒಂದು ಸೊಗಸಿದೆ. ಮಾರ್ಚ್‌ನಲ್ಲಿ ಬಿದ್ದ ಮಳೆಯ ಪ್ರಭಾವ, ಅದರ ಮುನ್ನಾ ದಿನಗಳ ತಹತಹಿಕೆ, ಮಳೆ ತಂದ ಸುಗಂಧವಾಹ- ಇವೆಲ್ಲ ಏನೋ ನೆನಪುಗಳನ್ನು ತಿಳಿಗೊಳದ ಆಳಗಳಿಂದ ಮೇಲೇರಿಸುವ ಸನ್ನಾಹವಿದೆ, ಎಂ.ಆರ್. ದತ್ತಾತ್ರಿ ಅವರ ‘ಅಲೆಮಾರಿ ಕನಸುಗಳು’ ಕವನ ಸಂಕಲದಲ್ಲಿ. ’

ಮೊನ್ನೆ ಸಂಜೆ ದಿಢೀರನೆ ಬಿದ್ದ
ಮೊದಲ ಮಳೆ
ದಪ್ಪ ದಪ್ಪ ಹನಿಗಳಿಗೆ ತಕ್ಷಣ ಪ್ರತಿಕ್ರಿಯಿಸಿ
ಗಾಳಿಯಲ್ಲಿ ಹರಡಿಕೊಂಡ
ಬೇಸಿಗೆಯ ತಾಪದ ಬಿಸಿಯನ್ನು ನುಂಗಿಕೊಂಡ
ಗಮ್ಮನೆ ಮಣ್ಣಿನ ವಾಸನೆ
ಕಾದಿದ್ದು ಎಷ್ಟೋ ದಿನ
ಹೇಳಬೇಕೆಂದಿದ್ದು ಹೊರಬರದೆ
ಕಪ್ಪೇಚಿಪ್ಪಿನ ಹುಳದಂತೆ ಭದ್ರ ಕೋಟೆಯಲ್ಲಿ ಅವಿತು
ಆಗಾಗ ಮಿಡುಕಾಡಿಕೊಟ್ಟ ನೋವು.....
ಆದರೆ ಮೊನ್ನೆಯ ಮೋಡಗಳು ಹಾಗಲ್ಲ
ಸೂರ್ಯ ಘಟ್ಟಸೇರುವ ಹೊತ್ತಿಗೆ ಬಂದವು
ನೊಂದ ಬುವಿಯನ್ನು ಗಟ್ಟಿಯಾಗಿ ತಬ್ಬಿ ಅತ್ತವು
ಸುಡುವ ದಿನಗಳ ಮಧ್ಯೆ
ಸ್ವಲ್ಪ ಹಗುರ
ಮತ್ತೆ ನಾಳೆಗೆ ಮೈಚಾಚಬೇಕಲ್ಲ
ರವಿ ಉದಯಿಸುವ ಮುನ್ನ
ಪರಕೀಯರಂತೆ ದೂರ ದೂರ ಸರಿಯುವ ಮೊದಲು
ಈ ಬೇಸಿಗೆಯ ದಿನದಲ್ಲಿ
ಬಾನಿಗೂ ಬುವಿಗೂ ರಾತ್ರಿಯ ಸಮಯವಿದೆ...

ಚೈತ್ರದ ಕೋಗಿಲೆಯಿಂಚರ ಎಲ್ಲರಿಗೂ ಮಧುರವಾಗಿಯೇ ಇರುತ್ತೆ ಎನ್ನ ಲಾಗುವುದಿಲ್ಲ- ಎನ್ನುತ್ತಾರೆ, ನವ್ಯಕವಿ ಎಂ.ಆರ್. ದತ್ತಾತ್ರಿ. ಆ ಹಕ್ಕಿಯ ಕೂಗು ಅವರ ಗೆಳೆಯನಿಗೆ ಅರಚಾಟವಾಗಿ ಕೇಳಿಸಿ, ನೋವಿನೆಳೆಗಳ ಜಾಲತಾಣವಾಗಿ ಕಾಣಿಸಿತೆನ್ನುತ್ತಾರೆ. ಕಾರ್ಖಾನೆಯ ಸಿಳ್ಳುಕೂಗಿಗೆ ಪ್ರತಿಧ್ವನಿಸುವಂತಿದೆ ಆ ಕೋಗಿಲೆಗಾನ ಎನ್ನುತ್ತಾನಂತೆ ಅವರ ನೇಹಿಗ. ಅವನ ತರ್ಕವನ್ನು ಒಪ್ಪಿಯೂ ಒಪ್ಪದಂತೆ ವರದಿ ಮಾಡುವದಷ್ಟಕ್ಕೇ ತೃಪ್ತರಾಗುತ್ತಾರೆ.

ಬೆಳಗಿನ ಶುಭ್ರ ನವೋದಯದಲ್ಲಿ
ಮೃದು ಕಿರಣಗಳ ನಡುವೆ ತೂರಿಬರುವ
ಚೈತ್ರ ಕೋಗಿಲೆಯ ಕೂಗು ಎಷ್ಟು ಹಿತ ಎಂದೆ ನಾನು....
ನಿನ್ನ ಹಕ್ಕಿಯ ಅರಚಾಟದಲ್ಲಿ ನನಗೆ ಕಾಣುತಿದೆ
ನೋವಿನೆಳೆಗಳು ಎಂದ ಮಿತ್ರ
ಶುಭ್ರ ನೀಲಿ ಗಗನದಿಂದ ಉದುರಿಬಿದ್ದ ಮುತ್ತರಾಶಿ
ಕೋಗಿಲೆಯ ದನಿಗೆ ನೋಡು ಸ್ಫೂರ್ತಿ ಪಡೆದು ಹೊರಳಿವೆ...
ಹಕ್ಕಿ ಹಾಡಿಗೆ ಮಾತ್ರವಲ್ಲ ಫ಼್ಯಾಕ್ಟರಿ ಸೈರನ್ನಿಗೂ
ನಗುತ್ತವೆ ನಿನ್ನ ಮುತ್ತ ಹನಿಗಳು
ಹಕ್ಕಿ ಪಕ್ಕಿ ಕೂಗಿಗಿಂತ ಸೈರನ್ನಿನ ಶಬ್ದ ಎಷ್ಟೋ ಮೇಲು...
ಎಂದ ಮಿತ್ರ

ದತ್ತಾತ್ರಿಯವರ ಇನ್ನೊಂದು ಸುಂದರವಾದ ಕವನದಲ್ಲಿ ಹೂವುಗಳು ಯಥೇಚ್ಛವಾಗಿ ಅರಳಿವೆ. ವಸಂತವೇ ಬಂದಿರಬೇಕು, ಆಗ. ಅವು ಸ್ವಾತಂತ್ರ್ಯದ ಸಂಕೇತವಾದ ಹೂವುಗಳು. ಅಲ್ಲಿ ಕ್ರಾಂತಿಯ ಬೀಜಗಳೂ ಮೊಳೆತಾವು. ಬಿಡುಗಡೆಯ ಕಹಳೆಯನ್ನೂ ಮೊಳಗಿಯಾವು.

ನಮ್ಮ ಮನೆಯ ಸುತ್ತಾ
ಅಚ್ಚಬಿಳಿಯ ಹೂವುಗಳು
ನಮ್ಮೂರನ್ನು ಕಾಣದ
ನನ್ನ ಭಾಷೆಗೆ ಸಿಲುಕದ
ಬೆಳಗಿನ ಇಬ್ಬನಿಯನ್ನು ಹೀರಿ
ಮೂಡುವ ಸೂರ್ಯನೊಡನೆ ನಕ್ಕು
ಸ್ವಚ್ಛಂದವಾಗಿ ಅರಳುವ ಅಮೆರಿಕೆಯ
ಸ್ವಾತಂತ್ರ್ಯ ಹೂವುಗಳು....
ನೀ ಬೆಳೆದ ಮಣ್ಣಲ್ಲೇ
ಬೆಳೆದವನು ನಾನು ನಾನೆಂದೆ
ನಾವೆಲ್ಲಾ ಇಲ್ಲೇ ಹುಟ್ಟಿ
ಬೆಳೆದವರು
ಬಿಳಿಯ ಹೂವುಗಳೆಲ್ಲಾ ಮತ್ತೆ
ಮೋಹಕವಾಗಿ ನಕ್ಕವು.

ಯಂತ್ರವಿಜ್ಞಾನದಲ್ಲಿ ‘ಕಂಪನ’ದ ಮೇಲೇ ವಿಶೇಷ ಸಂಶೋಧನೆ ನಡೆಸಿರುವ ಕೆನೆಡಾದ ಕನ್ನಡ ಕವಿ ಡಾ| ರಾಮ್‌ಭಟ್ ಅವರಿಗೆ, ಅಲ್ಲಿ ತಾವಿರುವಲ್ಲಿ ಕನ್ನಡದ ಬೆಟ್ಟಗಳು ನದಿಗಳು ಶಿಲ್ಪಕಲೆಗಳು ಇಲ್ಲದಿದ್ದರೂ, ಕನ್ನಡ ಕಣ್ಣುಗಳಿಂದ ಅಲ್ಲಿರುವುದನ್ನೆಲ್ಲ ನೋಡುವ ಮನದಣಿಯುವ ಪ್ರವೃತ್ತಿ. ವಿಜ್ಞಾನವನ್ನು ಕಾವ್ಯಮಯವಾಗಿ ನೋಡುವ ಪ್ರಯತ್ನ ‘ಕಂಪನ’ದಲ್ಲೂ ಕೋಗಿಲೆ ದನಿಗೆ ತಲೆಯೋಲಾಡುತ್ತದೆ. ನಗೆಗೆ ಇರುವ ಪ್ರಾಶಸ್ತ್ಯವನ್ನು ಒತ್ತಿ ಹೇಳುವ ಕವಿಗೆ ಅದು ತರುವ ಸಂತಸ ವಸಂತದಲ್ಲೂ ಮರೆಯಾಗಿಲ್ಲ. ವಸಂತ ಆಗಮನವಾಯಿತೆಂದರೆ ಮಾಮರಕ್ಕೆ ಸುಗ್ಗಿ. ಅದರ ಚಿಗುರು ತಳಿರು, ಬಾಚಿ ತಬ್ಬಿ ಆಲಂಗಿಸಿಕೊ೦ಡು ಮೈಮರೆತ ಮಲ್ಲಿಕಾ ಲತೆ ಅದರ ಸುತ್ತ ಮುತ್ತ ಹಬ್ಬಿದೆ- ಎನ್ನುವುದೊಂದು ಕವಿಸಮಯದ ಮಾತು. ಹಬ್ಬಿ ಹರಡಿದ ಅದರ ನೆರಳಲ್ಲಿ ವಿಶ್ರಮಿಸಿಕೊಳ್ಳುವ, ಜನುಮ ಜನುಮದ ಮೈತ್ರಿಯ ಬಗ್ಗೆ ಸದಾಶಯಗಳನ್ನು ಮೆಲುಕು ಹಾಕಿದ ಕವಿಗೆ ಊರಿಂದ ಎಷ್ಟೇ ದೂರ ಹೋಗಿದ್ದರೂ, ಆ ಮಾಮರದ ನೆನಪು ಮಾತ್ರ ಮಸಕಾಗಿಲ್ಲ.
ನೀರೆ ಬಾರೆಲೆ ದೂರದಲ್ಲಿಹ ಮಾಮರದ ಬಳಿ ಸಾಗುವಾ
ಸೂರೆಗೊಳುತಲಿ ಮನವ ನಿಂದಿದೆ ಬಾರೆ ಬಾ ಬಾ ಪೋಗುವಾ
ಕೋಕಿಲದ ಕಲಕಂಠ ಕೇಳೆಲೆ ಸವಿಯ ಸಂತಸವಪ್ಪುದು
ಏಕೆ ನಾಚುವೆ ನಲ್ಲೆ ನಿನ್ನಿನಿದನಿಯ ಮೀರಿಸಲಾರದು
ಮಾಮರದ ಚೆಲುತನುವ ಬಳಸುತ ಮಲ್ಲಿಕಾಲತೆ ನಿಂದಿದೆ
ಮಲ್ಲಿಗೆಯ ಹೂ ನಿನಗೆ ಮುಡಿಸುವೆ ಚೆಲುವದೆನಿತೋ ಕಾಣದೇ....
ಮಾಮರದ ನೆರಳಿನಲಿ ವಿರಮಿಸಿ ನಮ್ಮ ಬಳಲಿಕೆ ಕಳೆಯುವಾ
ನೀಡು ನವಚೇತನವನೆನ್ನುತ ದೇವನನ್ನೇ ಬೇಡುವಾ.

* * * ಹೊಸ ಚೇತನಕ್ಕಾಗಿ ಹಂಬಲಿಸುವ ಹೆಣ್ಣು ಜೀವದ ತುಡಿತಕ್ಕೆ ಸಹಜವಾದ ಸರಳವಾದ ಅಭಿವ್ಯಕ್ತಿ ದೊರಕಿರುವ ಕವನಸಂಕಲನದಲ್ಲಿ ಕವಯಿತ್ರಿ ಮಾಯಾ ಹರಪಹನಳ್ಳಿ ಅವರು ತಮ್ಮ ಮನದ ಕಲ್ಪನೆ ಹೃದಯದ ಭಾವನೆ ಜೀವನದ ಅನುಭವದ ಹೂಮಾಲೆ ಕಟ್ಟಿದ್ದಾರೆ. ಇಲ್ಲಿ ಮೋಡ ಕರಗಿ ಗಗನ ಮಳೆಗರೆಯುತ್ತದೆ, ಕರುಣೆ ಹೊನಲಾಗಿ ಹರಿಯುತ್ತದೆ, ಕಲ್ಲಿನಲ್ಲೂ ಹೂವು ಅರಳುತ್ತವೆ, ಧರಣಿ ಮಮತೆ ತುಂಬಿ ಮೆರೆಯುತ್ತದೆ- ಕವನಗಳಲ್ಲಿ ವಸಂತ ನಲಿದಾಡುತ್ತಾನೆ. ಹೆಣ್ಣುಮಕ್ಕಳಿಗೆ ತವರಿನ ನೆನಪು ಕಾಡದ ದಿನವಿದೆಯೆ? ತೀಕ್ಷ್ಣತೆ ಸ್ವಲ್ಪ ಹೆಚ್ಚೂ ಕಡಿಮೆ ಆಗಬಹುದೇನೋ, ಆದರೆ ಆ ಸಮಾಧಾನದ ಮುಂದೆ, ಆ ನಿಶ್ಚಿಂತತೆಯ ಮುಂದೆ, ಆ ಸುಖದ ಮುಂದೆ, ಆ ನೆಮ್ಮದಿಯ ಮುಂದೆ ಸ್ವರ್ಗಸುಖವೂ ಒಂದು ಮಟ್ಟ ಕೆಳಗಿನದೇ. ಅದೇ ಅವರ ಪುಸ್ತಕದ ಶೀರ್ಷಿಕೆ. ಹೊಸ ಚೇತನದೊಂದಿಗೇ ಪ್ರಾರಂಭವಾಗುತ್ತದೆ ಕವನಗಳ ಮೆರವಣಿಗೆ. ಆ ನೆನಪಿನ ಮಂಟಪದಲ್ಲಿ ವಸಂತ ಪ್ರವೇಶಿಸಿದಾಗ ಆ ಚೆಲುವಿನ ತುಂತುರಿನಲ್ಲಿ ಕಹಿಯೆಲ್ಲ ದೂರವಾಗಿ ಬಾಳೆಲ್ಲ ಸಿಹಿಯೇ ಸಿಹಿ.

ಹೊಸ ಚಿಗುರು ಚಿಗುರಲಿ ಚೈತ್ರದ ಚೆಲುವಿನಲ್ಲಿ
ಹೊಸ ಹೂವು ಅರಳಲಿ ಸೃಷ್ಟಿಯ ಜಾಲದಲ್ಲಿ
ಹೊಸ ಆಸೆ ಮೂಡಲಿ ಮೈತ್ರಿಯ ಒಲವಿನಲ್ಲಿ
ಹೊಸ ಹಾಡು ಹಾಡಲಿ ಕೋಗಿಲೆ ವಸಂತದಲ್ಲಿ....
ಕಹಿಯ ಮರೆತು ಸಿಹಿಯು ತುಂಬಲಿ ಜೀವನದಲ್ಲಿ
ಕನಸು ನನಸಾಗಿ ಮನ ಆಸೆಯ ಮಾಲೆ ಧರಿಸಲಿ....
ನೋವು-ನಲಿವು ಬೇವು-ಬೆಲ್ಲದ ಸೇವನೆಯಲ್ಲಿ
ಸುಖ-ದುಃಖದಲ್ಲಿಯೂ ಇರಲಿ ಸ್ಮರಣೆ ಭಗವಂತನಲ್ಲಿ

ಕವಯತ್ರಿಗೆ ಕೋಗಿಲೆಯ ಇಂಚರ ಕಾಡದೆ ಬಿಟ್ಟಿಲ್ಲ. ಅಪೂರ್ವ ದೈವೀ ಶಕ್ತಿಯಾಗಿ, ಭಾವೋತ್ಕಟತೆಗೆ ಇಂಬುಕೊಡುತ್ತಿದೆಯೆಂಬಂತೆ ಪಂಚಮಸ್ವರದ ನಿನಾದ ಉಲ್ಲಾಸ ತರುತ್ತಿದೆ.

ಕೂಗುವ ಧ್ವನಿ ಮಧುರ ಗಾನದಲಿ
ತೂಗುವ ಮಾಮರ ಚೈತ್ರದ ಕಾಲದಲಿ
ಸಾಗುವ ಮೋಡವು ನೀಲಿಯ ಬಾನಿನಲಿ
ನಗುವ ಮೊಗವು ಸೃಷ್ಟಿಯ ಜಾಲದಲಿ....
ಹಾಡಿದೆ ಹೃದಯ ಪಂಚಮ ಸ್ವರವ
ಹಾಕಿದೆ ಮನವು ಮುತ್ತಿನ ಸರವ
ಹಿಡಿದಿದೆ ಒಲವಿನಿಂದ ಜೋಡಿ ಕರವ
ಪಡೆದಿದೆ ಜೀವವು ದೇವನ ವರವ೩

ಬನ್ನಿ, ಈ ವಸಂತದ ಚೆಲುವನ್ನು ಊರಿಂದ ದೂರಹೋಗಿ, ಯಾವುದಾದರೊಂದು ಉದ್ಯಾನವನ ವಿಹಾರದಲ್ಲಿ ಪ್ರಕೃತಿಯ ಮಡಿಲಲ್ಲಿ ಸುಖಿಸೋಣ; ಅದು ಸಾಧ್ಯವಾಗದಿದ್ದಲ್ಲಿ, ಮನಸ್ಸಿಗೆ ಹತ್ತಿರದವರೊಡಗೂಡಿ ಸಂಗೀತ ಸಾಹಿತ್ಯ ಕ್ರೀಡೆ ಉಲ್ಲಾಸ ಮನರಂಜನೆಯ ಹಬ್ಬದ ವಾತಾವರಣದಲ್ಲಿಯೇ ಕಲ್ಪನೆಯ ಕಡಿವಾಣ ಕಳಚಿ, ಕವಿಗಳೊಡನೆ ವಿಹರಿಸಿ, ಕೊಂಚ ಅನುಭವಿಸಿ, ಆನಂದಿಸೋಣ!