ಅಮೆರಿಕನ್ನಡ
Amerikannada
ಬಯಲ ಮರಗಳ ತುಂಬ ಜೀವಸೆಲೆಯುಸಿರು -ಭವಾನಿ ಲೋಕೇಶ್, ಮಂಡ್ಯ
      ರಸ್ತೆಯುದ್ದಕ್ಕೂ ಹಳದಿ ಹೂವಿನ ತೆಳುಹಾಸು, ತಂಬೆಲರ ಜೊತೆಗೆ ತೇಲಿ ಬಂದ ಮಲ್ಲಿಗೆಯ ಪರಿಮಳ. ದಾರಿಯ ಇಕ್ಕೆಲಗಳಲ್ಲಿದ್ದ ಮರಗಳ ಮೇಲೆ ಜನರ ಬರುವಿಕೆಯನ್ನೇ ಕಾದು ಕುಳಿತ ಹಾಗೆ ದನಿಯೆತ್ತಿ ಹಾಡುವ ಕೋಗಿಲೆಯ ಗಾನದಿಂಪು. ಹೊಂಬಿಸಿಲ ತೂರಿ ಬಂದ ದಿನಕರನ ಗತ್ತು. ತಮ್ಮ ಪ್ರಿಯಕರನ ಬರುವಿಕೆಯನ್ನೇ ನಿರೀಕ್ಷಿಸುತ್ತಿದ್ದವರ ಹಾಗೆ ಚಂದದಲಿ ಅರೆಬಿರಿದ ಹೂಗಳು, ಅವುಗಳ ಮಧುವನ್ನು ಹೀರಲು ಅರಸಿ ಬಂದ ದುಂಬಿಹಿಂಡು. ಎಷ್ಟು ನೋಡಿದರೂ ಕಣ್ಮನ ತಣಿಯದು, ಎಷ್ಟು ಹಾಡಿದರೂ ಹೊಗಳಿಕೆ ಮುಗಿಯದು.       ಇಷ್ಟೆಲ್ಲ ಚಂದದ ಅಂದವನ್ನು ಹೊತ್ತು ನಿಂತ ಪ್ರಕೃತಿದೇವಿಯ ಮಡಿಲಲ್ಲಾಡುವ ಕನಸಿಗೆ ಪುಷ್ಟಿಯನ್ನು ನೀಡುವುದು, ಅದೇ ವಸಂತ ಋತು. ವಸಂತ ಬಂದ ಋತುಗಳ ರಾಜ ತಾ ಬಂದ ಅಂದ ರಸಋಷಿಯವರಿಗೆ ಪ್ರಕೃತಿಯ ಪುಟ್ಟ ಪುಟ್ಟ ವಿಸ್ಮಯಗಳೂ ಅಗಾಧ, ಅನಂತ. ವಸಂತನೇ ಸಂತರ ಎದೆಯಲ್ಲೂ ಸಂತಸವನ್ನುಕ್ಕಿಸಬಲ್ಲ ಸಾಮಂತ. ಪ್ರಕೃತಿಯೊಳಗಿನ ಪ್ರತಿಯೊಂದರಲ್ಲೂ ಹೊಸತು ಜೀವವನ್ನು ಆವಾಹಿಸಬಲ್ಲ ಆಪ್ತಮಿತ್ರ. ಆತನು ಬಾರದಿದ್ದಾಗ ಬೋಳು ಬಿದ್ದು, ವಿರಹವೇದನೆಯಲ್ಲಿ ಪರಿತಪಿಸುವ ವೃಕ್ಷರಾಶಿ ಆತನ ಆಗಮನವಾಗುತ್ತಿದ್ದಂತೆಯೇ ಆಮೋದದಿಂದ ಆಲಾಪಿಸುತ್ತಾ ಚಿಗುರೊಡೆದು ನಿಲ್ಲುತ್ತದೆ. ಆತನನ್ನೇ ಆರಾಧಿಸುವ ತೆರದಲ್ಲಿ ಮೈತುಂಬಿಕೊಳ್ಳುತ್ತದೆ. ಒಡಲ ತುಂಬೆಲ್ಲ ಒಟ್ಟುಗೂಡಿದ ಕನಸುಗಳನ್ನು ಕಟ್ಟಿಕೊಂಡು ಪಟ್ಟವೇರುತ್ತವೆ. ಹೂವು, ಹೀಚು, ಕಾಯಿ, ಹಣ್ಣುಗಳನ್ನು ಹೆತ್ತು ಹೊತ್ತು ತೊನೆಯುತ್ತವೆ. ಅದು ಚೈತ್ರ ಮಾಸದ ಸಂಭ್ರಮವೂ ಹೌದು. ಬೆಳಕು ಮೂಡುವ ಹೊತ್ತಿಗೆ ಗಿಡಮರಗಳಲ್ಲೆಲ್ಲ ಹೊಸ ಜೀವ, ಹೊಸ ಭಾವ, ಹೊಂಗಿರಣಗಳನ್ನು ಚಾಚಿ ಎಲ್ಲ ಜಡ ಜೀವಗಳನ್ನೂ ಚೈತನ್ಯದ ಚಿಲುಮೆಯಾಗಿಸಿಬಿಡುವ ಆ ದಿನಪನನ್ನು ಕಂಡರೆ ನತ್ತಿಯ ಮೇಲೆ ಹತ್ತುತ್ತಿದ್ದ ಹಾಗೆ ಭೂಮಿಯನ್ನು ಸುಟ್ಟುಬಿಡುವ ಸೂರ್ಯದೇವಾ ಇವನೇನಾ? ಅಂತ ಅನ್ನಿಸುವುದು ನಿಜ. ಮುತ್ತಿದ್ದ ಕತ್ತಲೆಯನ್ನು ಸತ್ತುಹೋಗುವ ಹಾಗೆ ಮಾಡಿದ್ದು ಅದೇ ಸುಮ್ಮಾನದ ಸೂರ್ಯ. ಇಂತಹ ಸಮೃದ್ಧಿಯ ಹೊತ್ತಿನಲ್ಲೇ ಪ್ರಕೃತಿಯ ಕಣಕಣವೂ ಎಚ್ಚತ್ತು ನಿಲ್ಲುವುದು. ಯುಗದ ಆದಿ ಮೊದಲಾಗುವುದು. ಹೌದು ವಸಂತ ಋತು, ಚೈತ್ರ ಮಾಸದ ಸಮ್ಮಿಲನದ ಆದಿಯಲ್ಲಿ ಆರಂಭವಾಗುವುದೇ ಯುಗಾದಿಯ ಸಂಭ್ರಮ. ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಅದು ಹೊಸ ವರುಷದ ಆರಂಭ, ಹರುಷವನ್ನು ಹಂಚಿಕೊಂಡು ನಲಿಯುವ ದಿನ. ಬಾಗಿಲಿಗೆ ಮಾವಿನ ಎಲೆಯ ಎಲೆಗಳನ್ನು ತಂದು ತೋರಣ ಕಟ್ಟಿ ಇಡೀ ಮನೆಯನ್ನು ಹಬ್ಬದ ಸಂಭ್ರಮಕ್ಕೆ ಅಣಿಗೊಳಿಸುವ ಕ್ಷಣ. ಯುಗಾದಿಯಂದು ವರುಷದಾರಂಭಕ್ಕೆ ಹೊಸ ಬಟ್ಟೆ ತೊಟ್ಟು, ಹೋಳಿಗೆಯ ಅಡುಗೆಯನ್ನು ಮಾಡಿ ಇಡೀ ದಿನ ಸಂತಸದಲ್ಲಿಯೇ ಕಾಲ ಕಳೆಯುವ ಮೂಲಕ ಇಡೀ ವರುಷ ಹಾಗೆಯೇ ಇರಬೇಕೆಂಬ ಇರಾದೆ. ಕಷ್ಟ ಸುಖವೆನ್ನುವುದು ಜೀವನದ ಸಂದರ್ಭದಲ್ಲಿ ಸಮನಾಗಿಯೇ ಬರಲಿ ಎಂಬ ಅತ್ಯಪೂರ್ವ, ಅರ್ಥಗಭರ್ಿತ ಯೋಚನೆಯಂತೆ ನಮ್ಮ ಹಿರಿಯರು ಬೇವು ಬೆಲ್ಲವನ್ನು ಮೆಲ್ಲುತ್ತ ಹಬ್ಬವನ್ನು ಆಚರಿಸಿದ್ದರ ಹಿಂದೆ ಅರ್ಥಪೂರ್ಣತೆಯಿದೆ. ಪ್ರಕೃತಿಯನ್ನು ಆರಾಧಿಸುವ ಆಹ್ಕಾದಿಸುವ, ಆಮಂತ್ರಿಸುವ ಚಿಂತನೆಯಿದೆ. ನಮ್ಮೆಲ್ಲ ಸಾಧನೆ ಸಿದ್ಧಿಗಳಿಗೆ ವರವಾಗಿರುವ ಆ ಪ್ರಕೃತಿಯ ಆಶೀವರ್ಾದವನ್ನು ಬೇಡುವ ವಿನಮ್ರತೆ ಇದೆ. ಧನ್ಯತೆ ಇದೆ. ಮಾನವನ ಉಗಮದ ಪ್ರಾರಂಭದ ಹೊತ್ತಿಗೆ ಪ್ರಥಮ ಪೂಜೆಗೆ ಪಾತ್ರವಾದದ್ದು ಪ್ರಕೃತಿಯೇ. ಮಾನವ ಮೊದಲು ಪ್ರಾಂಜಲ ಮನಸ್ಸಿನಿಂದ ಪ್ರಾಥರ್ಿಸಿದ್ದು ಪ್ರಕೃತಿಯನ್ನೇ. ಅದಕ್ಕೆಂದೇ ಪ್ರಕೃತಿಗೆ ಮೊದಲ ಪೂಜೆ. ಯಾಕೆಂದರೆ ತನ್ನ ಕಂದಮ್ಮಗಳನ್ನು ಪ್ರೀತಿಯಿಂದ ಮೈದಡವಿ ಸಾಕಿದ್ದು ಪ್ರಕೃತಿಯೆ. ಆದ್ದರಿಂದಲೇ ಹೊಸ ವರುಷದ ಆರಂಭಕ್ಕೆ ಪ್ರಕೃತಿಯ ಪೂಜೆ. ಆಮೇಲೆ ನಾವೇ ಹೆಸರಿಟ್ಟುಕೊಂಡ ಎಲ್ಲ ದೇವರುಗಳದ್ದು. ಯುಗಾದಿಯ ಈ ಸಂಭ್ರಮದ ನೆನಹು ಮನದಾಳದಲ್ಲಿ ಸುಳಿಯುತ್ತಿದ್ದಂತೆಯೇ ಯುಗಾದಿಯ ಹೊತ್ತಿಗೆಂದೇ ಕೆತ್ತಿಟ್ಟ ಕವನದ ಸಾಲುಗಳು ನೆನಪಾದವು. ಬಯಲ ಮರಗಳ ತುಂಬ ಜೀವಸೆಲೆಯುಸಿರು ವಸಂತ ಬಂದಿಹ ನೋಡು ಮರಮರದಿ ಹಸಿರು ಹೌದಲ್ಲವೇ ಕಣ್ಮನಕ್ಕೆ ತಂಪೆರೆಯುವ ಹಾಗೆ ಪ್ರಕೃತಿಯೆಂಬ ಪ್ರಕೃತಿಯನ್ನೇ ನವ ಯೌವನ ತುಂಬುವಂತೆ ಮಾಡಿಬಿಡುವ ವಸಂತ ಋಉತುವಿನ ಈ ಪ್ರೀತಿಗೆ ನಾವು ತಲೆಬಾಗಲೇಬೇಕು. ಅಕಿಲ ಜೀವಜಾತಗಳಿಗೆಲ್ಲ ಹೊಸತು ಜನ್ಮ ನೀಡುವ ವಸಂತನಿಗೊಂದು ಪ್ರೀತಿಯ ಸ್ವಾಗತವನ್ನು ಹೇಳಿಬಿಡೋಣ. ಬೆಲ್ಲದ ಸಿಹಿಯ ಮರೆಯಲ್ಲಿ ಬೇವಿನ ಕಹಿಯನ್ನು ಮರೆತುಬಿಡುವ ನುಂಗಿಬಿಡುವ ಹಾಗೆಯೇ ಸಂತಸದ ಕ್ಷಣಗಳ ಸವಿನೆನಪಿನೊಂದಿಗೆ ಕೆಟ್ಟ ಘಟನೆಗಳನ್ನು ಕಹಿನೆನಪುಗಳನ್ನು ಕಡೆಗಣಿಸಿದರಾಯ್ತು. ಇಡೀ ವರ್ಷ ಹರ್ಷದ ಹೊನಲಾಗುವುದರಲ್ಲಿ ಸಂದೇಹವಿಲ್ಲ. ಶ್ರೀಖರ ನಾಮ ಸಂವತ್ಸರ ಮನೆಬಾಗಿಲಿಗೆ ಬಂದು ನಿಂತಿದೆ.
ವರುಷವಿದು ಹೊಸತಿಹುದು
ನಮ್ಮ ಕಣ್ಣ ಮುಂದಿಹುದು
ಎಸೆದುಬಿಡಿ ಹಳೆಯ ಕಹಿ ನೆನಪುಗಳನು
ಹೊಸ ವರುಷ ನಮದಿಹುದು
ನಮ್ಮ ಕಣ್ಣ ಮುಂದಿಹುದು
ಒಸೆದು ಬಿಡಿ ನಿಮ್ಮೆಲ್ಲ ಆಸೆಗಳನು