ಅಮೆರಿಕನ್ನಡ
Amerikannada
ಹರಿವ ನೀರಂತಿದ್ದರು ನಮ್ಮ ಹರಿಹರೇಶ್ವರರು
ಪ್ರೊ. ಸಿ. ನಾಗಣ್ಣ
ಹರಿವ ನೀರಂತಿದ್ದರು ನಮ್ಮ ಹರಿಹರೇಶ್ವರರು
ಸರಳ ಬದುಕಿನ ವಿರಳ ಜ್ಞಾನಿಯಾಗಿ
ಮೊಗೆಮೊಗೆದು ಬೊಗಸೆಗಳಲ್ಲಿ
ತೆಗೆದುಕೊಳ್ಳಬಲ್ಲ ತಿಳಿಜಲವೇ ಆಗಿದ್ದರು||1||

ಹಕ್ಕಿಯಂತಿದ್ದರು ನಮ್ಮ ಹರಿಹರೇಶ್ವರರು
ರೆಕ್ಕೆ ಬಡಿದರೆ ಒಮ್ಮೆ ಸಿಕ್ಕೇಬಿಡುವ ಸ್ವರ್ಗ
ಅಲ್ಲಿ ಅವರು ಸುವಿಹಾರಿ ಅನಂತ ಸಂತ ಸಂತತಿಯ
ಸೊಲ್ಲುಲಿಯನಾಲಿಸಿ ಚಪ್ಪರಿಸುವ ವಿಹಗ||2||

ಗಗನದಂತಿದ್ದರು ನಮ್ಮ ಹರಿಹರೇಶ್ವರರು
ಮಿಗಿಲಾದ ಸುಖಕ್ಕೆ ರಂಗಸ್ಥಳವಾಗಿ
ಜಗವಿದು ಸೌಹಾರ್ದ ಸದನವಲ್ಲದೆ ಬೇರಲ್ಲ
ಬಗೆ ಹಗುರವೆಂಬ ಮಾಯೆಯ ಎಲ್ಲರಿಗೆ ಅರುಹಿ||3||

ಬಂಧುವಿನಂತಿದ್ದರು ನಮ್ಮ ಹರಿಹರೇಶ್ವರರು
ಸಿಂಧು ಸಪ್ತಗಳ ದಾಟಿ ನೆಲೆಗೊಂಡರೂ
ಕನ್ನಡ ನುಡಿಯ ಬೆಡಗನ್ನು ಬಿತ್ತರಿಸಿ
ಭಿನ್ನತೆಯೆಂಬ ಭಿತ್ತಿಯ ಬಿಡದೆ ಕೆಡವಿ||4||

ಸಾಗರಶಯನನಂತಿದ್ದರು ನಮ್ಮ ಹರಿಹರೇಶ್ವರರು
ನಾಗಲಕ್ಷ್ಮಿ ಸತಿಶಿರೋಮಣಿಯ ಸಹವಾಸದಲ್ಲಿ
ಸರಸತಿಯ ಪುರದಲ್ಲಿ ಸಂಚರಿಸುತ್ತಿದ್ದರೂ
ವರ ವಿರಾಗಿಗಳ ಬೆರಗನಾವಾಹಿಸಿಕೊಂಡು||5||

ದೇವ ತರುವಿನಂತಿದ್ದರು ನಮ್ಮ ಹರಿಹರೇಶ್ವರರು
ಜೀವವನರ್ಪಿಸಿ ಉದಾತ್ತ ಗುರಿಗಳಿಗೆ
ನೆನಪಿನ ಬುಟ್ಟಿಯ ನಮ್ಮ ಕೈಗಳಲ್ಲಿಟ್ಟು
ಒನಪಿನ ಬಾಳು ಬದುಕಿ ಪರಿಮಳವಾದರು||6||