ಅಮೆರಿಕನ್ನಡ
Amerikannada
ವಸಂತ ನಿಂತಿಹ ಎದುರಿಗೆ
-ಭವಾನಿ ಲೋಕೇಶ್, ಮಂಡ್ಯ
ಕೇಳಿ ಕೇಳಿರಿ ಎಲ್ಲ ಕೇಳಿರಿ
ವಸಂತ ರಾಜನು ಬರುತಿಹ
ಮಿತ್ರಳಾಗಿಹ ಚೈತ್ರಳೊಡನೆ
ಹೇಳಿರೆಲ್ಲರು ಜಯ ಜಯ

ವಸಂತ ಚೈತ್ರರ ಮದುವೆ ನಾಳೆ
ಎಲ್ಲ ಮರೆಯದೆ ಕೂಡಿರಿ
ಬಂಧು ಬಾಂಧವರೆಲ್ಲ ಬಂದು
ನಿಂದು ಮದುವೆಯ ಮಾಡಿರಿ

ಬರಿಯ ಹರಯದ ಸಿರಿಯ ಹಸಿರಿಗೆ
ಕಟ್ಟಿ ಹಸಿರೆಲೆ ತೋರಣ
ಕರೆದು ತನ್ನಿರೆ ಎಲ್ಲರೆಲ್ಲರ
ಜಗದ ಖುಷಿಗಿದು ಕಾರಣ

ಚಿಗುರು ಚಪ್ಪರ ಮಳೆಯ ತುಂತುರು
ಕಣ್ಣಿಗೊಪ್ಪುವ ನೋಟವು
ಉಡಿಸಿ ಚೈತ್ರಗೆ ಪಚ್ಚೆ ಸೀರೆಯ
ವಸಂತಗ್ಹಸಿರೆಲೆ ಪೇಟವು

ಮದನ ರೂಪಿನ ವದನದವನು
ವಸಂತ ನಿಂತಿಹ ಎದುರಿಗೆ
ದಿಟ್ಟಿ ತೆಗೆಯಿರೆ ಬೊಟ್ಟು ಇಡಿರೆ
ಎಂಥ ನಾಚಿಕೆ ವಧುವಿಗೆ

ಶುಕದ ಶಾಸ್ತ್ರವು ಪಿಕದ ಕುಕಿಲು
ನವಿಲ ನಾಟ್ಯವು ಮದುವೆಗೆ
ನೋಡುತಿರುವರು ಸುರರು ಸ್ವರ್ಗದಿ
ಹರಸಿ ಚೈತ್ರ ವಸಂತಗೆ

ಇಲ್ಲಿ ಧರೆಯಲಿ ತೆರೆಯ ಮರೆಯಲಿ
ಎಲ್ಲೂ ನಗುವಿನ ಹಾವಳಿ
ಮೇಲೆ ನೀಲಿಯ ನಭದೊಳಾಡಿದೆ
ಮೇಘ ಮೇಘಗಳೋಕುಳಿ

ಕಳವೆ ಮೂಲದ ಬಗೆಯ ಭೋಜನ
ಸಾಲು ಪಂಕ್ತಿಗೆ ಕುಳ್ಳಿರಿ
ವೀಳ್ಯ ಜಗಿದು ನಗೆಯ ಮೊಗೆದು
ತಾಂಬೂಲ ಫಲವನು ಕೊಳ್ಳಿರಿ

ಮಂಗಲೆಯರು ತಾವೆಲ್ಲ ಬಂದು
ಶುಭದ ಗೀತೆಗಳ್ಹಾಡಿರಿ
ಯುಗಾದಿ ಹೆಸರಿನ ಗಾದಿ ಮೇಲೆ
ಆರತಕ್ಷತೆ ಮಾಡಿರಿ

ನವೀನ ಜೀವಕೆ ನವೀನ ಭಾವಕೆ
ಎಲ್ಲಕ್ಕೂ ಹಾದಿ ಯುಗಾದಿಯು
ತುಡಿವ ಕನಸಿಗೆ ಮಿಡಿವ ಮನಸಿಗೆ
ಸವಿಯ ಹಾಡಿನ ಸಂವಾದಿಯು