ಅಮೆರಿಕನ್ನಡ
Amerikannada
ನಾಟ್ಯವಾಡಿತು ಮನವು ಗಿರಿನವಿಲು . . . .
ಭವಾನಿ ಲೋಕೇಶ್, ಮಂಡ್ಯ
    ಅದು ಕರ್ನಾಟಕ ಶಾಸ್ತ್ರೀಯ ಸಂಗೀತ ಪಿತಾಮಹ ಪುರಂದರದಾಸರ ಒಂದು ಕೃತಿ. ಚಂದ್ರಚೂಡ ಶಿವಶಂಕರಾ. . . ದಾಸರೆಂದರೆ ಪುರಂದರ ದಾಸರಯ್ಯಾ ಎನ್ನುವಂತೆ ಭಕ್ತಿಯ ಪರಾಕಾಷ್ಟೆಯನ್ನು ಮೆರೆವ ದಾಸರ ಕೃತಿಯೆಂದರೆ ಕೇಳಬೇಕೇ? ವರ್ಣನಾತ್ಮಕ ಪದಪುಂಜಗಳ ಮೂಲಕ ದಾಸರು ನೀಲಕಂಠ ಶಿವನನ್ನು ಆರಾಧಿಸುವ ಕೃತಿ ಅದು. ಸಮುದ್ರ ಮಂಥನದ ಸಂದರ್ಭದಲ್ಲಿ ಉಕ್ಕಿ ಬಂದ ವಿಷವನ್ನು ಕುಡಿದು ನೀಲಕಂಠನೆನಿಸಿಕೊಂಡ ಶಿವಸ್ತುತಿ. . . ಪುರಾಣದ ಘಟನೆಗಳನ್ನೆಲ್ಲ ಹತ್ತಿರದಲ್ಲೇ ಕುಳಿತು ನೋಡಿ ಅರಗಿಸಿಕೊಂಡವಳ ಹಾಗೆ ಆಕೆ ಆ ಕೃತಿಗೆ ನರ್ತಿತ್ತಿದ್ದರು. ನೀಳಕಾಯದ, ನೀಲಕಂಗಳ ಸುಂದರಿ ನೀಲಕಂಠನ ಕೃತಿಗೆ ಹೆಜ್ಜೆ ಹಾಕುತ್ತಿದ್ದರೆ ಸಭಾಂಗಣದಲ್ಲಿ ತುಂಬಿದ ಸಭಿಕರ ಕಂಗಳಲ್ಲಿ ಹರ್ಷದ ಹೊನಲು. ಅವರಿಗರಿವಿಲ್ಲದ ಹಾಗೆ ಕರತಾಡನವಾಗುತ್ತಿತ್ತು. ಕಲಾರಸಿಕರ, ಸಹೃದಯ ಪ್ರೇಕ್ಷಕರ ಮನತುಂಬಿ ಬಂದಿತ್ತು.     ಸಾಂಸ್ಕೃತಿಕ ನಗರಿಯೆಂದೇ ಬಿಂಬಿತವಾದ ಮೈಸೂರು, ಹೇಳಿಕೇಳಿ ಕಲೆಯ ತವರು. ತಾಯಿ ಚಾಮುಂಡಿಯ ನೆಲೆವೀಡು. ನಗರದ ಹೃದಯಭಾಗದಲ್ಲಿರುವ ಜಗನ್ಮೋಹನ ಅರಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವದು. ಗುರುದೇವರ ಲಲಿತಕಲಾ ಅಕಾಡೆಮಿಯ ಮೈಸೂರು ಶಾಖೆಯ 4 ನೇ ವರ್ಷದ ವಾರ್ಷಿಕೋತ್ಸವ. ಗಣ್ಯಾತಿಗಣ್ಯರ ದಂಡು ಸಭೆಗೆ ಶುಭಕೋರಲು ಆಗಮಿಸಿತ್ತು. ನಿಶ್ಯಬ್ಧವಾದ ವಾತಾವರಣದಲ್ಲಿ ಪುಟ್ಟ ಪುಟ್ಟ ಮಕ್ಕಳು ಹೆಜ್ಜೆಯಿಡುತ್ತಾ ಗೆಜ್ಜೆ ಕಟ್ಟಿದ ಕಾಲುಗಳನ್ನು ಇಟ್ಟು ಲಯಬದ್ಧವಾಗಿ ನರ್ತಿಸುತ್ತಿದ್ದರು. ಅದರ ನಡುವೆಯೇ ಕಳೆದ ಆರು ತಿಂಗಳಿನಿಂದ ಗುರುದೇವದ ಗುರು ವಿದುಷಿ ಶ್ರೀಮತಿ ಚೇತನಾ ರಾಧಾಕೃಷ್ಣರವರಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ 'ಸಾರಾಗಸ್ಜರ್' ಎಂಬ ವಿದೇಶೀ ವಿದ್ಯಾರ್ಥಿನಿಯೇ ಆ ಚಂದ್ರಚೂಡ ಅನ್ನುವ ಗೀತೆಗೆ ನೃತ್ಯ ಮಾಡಿದ್ದು. ಭಾವಾಭಿನಯದಲ್ಲಿ ಆಕೆಗೆ ನೂರಕ್ಕೆ ನೂರು ಅಂಕ. ಯಾವ ಜನ್ಮದ ಋಣವೋ ಏನೋ ದೂರದ ಸ್ವಿಡ್ಜರ್ರ್ಲ್ಯಾಂಡಿನಿಂದ ನಮ್ಮ ದೇಶದ ಕಲೆಗೆ ಸಂಸ್ಕೃತಿಗೆ ಸಾಹಿತ್ಯಕ್ಕೆ ಮಾರು ಹೋಗಿ ತನ್ನ ಇಡೀ ಕುಟುಂಬವನ್ನೇ ಕರೆತಂದು ಇಲ್ಲಿ ಆಕೆ ನೆಲೆನಿಂತಿದ್ದಾಳೆ. ಪ್ರತಿನಿತ್ಯ 6-7 ಗಂಟೆಗಳ ಸತತ ಅಭ್ಯಾಸ, ತಾಲೀಮು, ಅದಕ್ಕೆ ಗುರು ಚೇತನಾರವರ ಅದಮ್ಯ ಉತ್ಸಾಹದ ಬೋಧನೆ. ಕನ್ನಡವೇ ಬಾರದ ಸಾರಾ ಇಡೀ ಕೃತಿಯನ್ನು ಅರ್ಥಮಾಡಿಕೊಂಡು ಹೆಜ್ಜೆ ಹಾಕುತ್ತಿದ್ದಳು.
“ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?”

    ಅನ್ನುತ್ತದೆ ಕವಿ ಮಾತು. ಹೌದಲ್ಲವೇ? ಅಲ್ಲೆಲ್ಲೋ ಪಬ್ಬು, ಕ್ಲಬ್ಬು ಮುಂತಾದ ಆಧುನಿಕ ಸಂಸ್ಕೃತಿಯ ಜನರೆಲ್ಲಿ? ಅವರೆಲ್ಲರ ಮಧ್ಯೆಯಿಂದ ಎದ್ದು ಬಂದು ಕಾಲಿಗೆ ಗೆಜ್ಜೆಯಿರಿಸಿ ನಾಟ್ಯದೇವತೆಗೆ ನಮಸ್ಕರಿಸಿ, ಗುರುವನ್ನು ಸ್ಮರಿಸಿ, ನೆಲದ ಧೂಳನ್ನು ಕಣ್ಣಿಗೊತ್ತಿಕೊಂಡು ನಾಟ್ಯ ಮಾಡುವ ಸಾರಾ ಎಲ್ಲಿ? ಹೌದು ಜಗತ್ತೇ ನಮ್ಮೆಡೆಗೆ ತಿರುಗಿ ನೋಡಿದ್ದು ಇಲ್ಲಿನ ಕಲೆಗೆ, ಸಂಸ್ಕೃತಿಗೆ, ಋಷಿ ಸಂತತಿಯ ನಾಡಿದು ಅನ್ನುವ ಕಾರಣಕ್ಕೆ, ಅಧ್ಯಾತ್ಮ ಚಿಂತನೆಯಲ್ಲಿ ಬದುಕಿನ ಸಾರ್ಥಕತೆಯನ್ನು ತೋರುವ ನೆಲೆವೀಡಿದು ಅನ್ನುವ ಅಂಶಕ್ಕೆ, ಇವೆಲ್ಲವುಗಳಿಗೋಸ್ಕರವೆ ಪ್ರಪಂಚದ ವಿವಿಧ ಮೂಲೆಗಳಿಂದ ಬರುವ ಜನ ನಮ್ಮ ಪರಂಪರೆಯೆಡೆಗೆ, ಸಂಸ್ಕೃತಿಯೆಡೆಗೆ, ಕಲೆ ಸಾಹಿತ್ಯದೆಡೆಗೆ ಒಲವನ್ನು ಇರಿಸಿಕೊಂಡಿದ್ದು. ಭಾರತೀಯತೆಯನ್ನು ಆವಾಹಿಸಿಕೊಂಡಿದ್ದು. ಹಣ ಐಶ್ವರ್ಯವಿರುವುದು ಮಾತ್ರ ಸುಖ ನೀಡಲಾರದು. ಅದಾವುದೂ ಇಲ್ಲದೆಯೂ ಬದುಕಿನಲ್ಲಿ ಕಂಡುಂಡ ಸತ್ಯಗಳನ್ನು ಮೈಗೂಡಿಸಿಕೊಂಡು ಬದುಕಿದ ಜನ ಇಲ್ಲಿದ್ದಾರೆಂದು ಗುರುತಿಸಿಕೊಂಡದ್ದು. ಇರಲಿ, ಗುರುದೇವ ನಡೆಸಿಕೊಟ್ಟ ಕಾರ್ಯಕ್ರಮದಿಂದ ಸಾರಾ ನರ್ತಿಸುತ್ತಿದ್ದರೆ ಹಾಗನ್ನಿಸುತ್ತಿತ್ತು. ಪರಿಣಾಮಕಾರಿಯಾದ ಇಂತಹ ಪ್ರದರ್ಶನಗಳು, ನಮ್ಮವರನ್ನು ನಮ್ಮ ಸಂಸ್ಕೃತಿಯೆಡೆಗೆ ತಿರುಗಿಸುವುದರಲ್ಲಿ, ಅದನ್ನಿನ್ನಷ್ಟು ಶ್ರೀಮತಗೊಳಿಸುವುದರಲ್ಲಿ ಸಂದೇಹವೇ ಇಲ್ಲ. ಅತಹದ್ದೊಂದು ಕೆಲಸವನ್ನು ಮಾಡಬೇಕಾದುದು ಸಂಸ್ಕೃತಿಯ ರಾಯಭಾರತ್ವವನ್ನು ವಹಿಸಿಕೊಂಡ ಇಂತಹ ಸಂಸ್ಕೃತಿಪ್ರಿಯರ ಆದ್ಯ ಕರ್ತವ್ಯ. ಅದನ್ನು ಗುರುದೇವದ ಜೋಡಿಕಣ್ಣುಗಳಾಗಿ ಶ್ರೀ ರಾಧಾಕೃಷ್ಣ ಮತ್ತು ಚೇತನಾ ರಾಧಾಕೃಷ್ಣ ದಂಪತಿ ಮಾಡುತ್ತಿದ್ದಾರೆ.     ರಂಗಭೂಮಿಯ ಖ್ಯಾತಿಯನ್ನು ಗಳಿಸಿದ ಮಂಡ್ಯದಂಥ ನೆಲದಲ್ಲಿ ಭರತನಾಟ್ಯಕ್ಕೂ ಒಂದು ಸ್ಥಾನವನ್ನು ಭದ್ರಪಡಿಸಿಕೊಟ್ಟದ್ದು ಗುರುದೇವ. ಕಳೆದ 2 ದಶಕಗಳಿಂದ ಗುರುದೇವ ಮಾಡಿರುವ ಸಾಧನೆ ಅಪಾರ. ನಾಟ್ಯಕ್ಕೆ ಎಲ್ಲ ಅಂಗಗಳ ಸ್ಪಷ್ಟ ಹಾಗೂ ಪರಿಪೂರ್ಣ ಸಂಯೋಜನೆ ಎಷ್ಟು ಮುಖ್ಯವೋ ಹಾಗೆಯೇ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಅನೇಕ ವಿದ್ಯಾರ್ಥಿಗಳನ್ನು ತಾಲೀಮಿಗೆ ಹಚ್ಚಿ, ತರಬೇತಿಗೆ ನೀಡಿ ರಂಗಪ್ರವೇಶ ಮಾಡಿಸುವುದೂ ಸಹ ಸಂಸ್ಥೆಯ ಆಧಾರಸ್ತಂಭಗಳೆನಿಸಿಕೊಂಡವರ ಸಂಯೋಜನೆಯ ಕೆಲಸ. ಅದು ಆ ದಂಪತಿಗಳಿಂದ ಸಾಧ್ಯವಾಗುತ್ತಿದೆ. ಮಂಡ್ಯದಿಂದಾಚೆಗೂ ತನ್ನ ಹರವನ್ನು ವಿಸ್ತರಿಸಿಕೊಂಡ ಗುರುದೇವ ನಾಡಿನಾದ್ಯಂತ ಹೆಸರು ಮಾಡುತ್ತಿದೆ.     ವಿದುಷಿ ಚೇತನಾ ರಾಧಾಕೃಷ್ಣ ಸಂಗೀತ ಹಾಗೂ ನಾಟ್ಯ ಎರಡರಲ್ಲೂ ಸಿದ್ಧಹಸ್ತರು. ಅದರೊಂದಿಗೆ ಸಂಸ್ಕೃತದಲ್ಲಿ ವಿದ್ವತ್ತು. ಇವೆಲ್ಲಕ್ಕಿಂತ ಇನ್ನೇನು ಬೇಕು ಹೇಳಿ. ನಮ್ಮ ಇಡೀ ಸಂಸ್ಕೃತಿಯನ್ನು ಅರ್ಥೈಸಿಕೊಂಡು ವಿದ್ಯಾರ್ಥಿಗಳನ್ನು ತಯಾರು ಮಾಡುವುದಕ್ಕೆ. ನಮ್ಮ ನಾಟ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ವಿಸ್ತರಿಸಿ, ಅದು ಚಿರಸ್ಥಾಯಿಯಾಗುವಂತೆ ಮಾಡಬೇಕೆನ್ನುವುದೇ ಗುರುದೇವರ ಉದ್ದೇಶ. ಅದಕ್ಕಾಗಿ ಹಗಲಿರುಳೂ ಶ್ರಮಿಸುವ ಗುರುದೇವದ ಬೆನ್ನೆಲುಬಾಗಿ ನಿಂತ ಇರುವ ಎಲ್ಲರಿಗೂ ಶುಭ ಹಾರೈಸುವುದಷ್ಟೇ ನಾವು ನೀವು ಮಾಡಬೇಕಾದ ಕೆಲಸ.     ಏನೇ ಆಗಲಿ, ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಗಣಪತಿಯ ಶ್ಲೋಕವೊಂದಕ್ಕೆ ನೃತ್ಯವನ್ನು ಮಾಡಿದ ಮಕ್ಕಳ ಅಭಿನಯವನ್ನೊಮ್ಮೆ ನೀವು ನೋಡಬೇಕಿತ್ತು. ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರಸನಿಷ್ಪತ್ತಿಃ ಅಂತ ರಸಸೂತ್ರವನ್ನು ಹೇಳಿದ ಭರತನೂ ಬೆರಗಾಗುತ್ತಿದ್ದನೇನೊ. ಮುಗ್ಧ ಮಕ್ಕಳ ಸ್ನಿಗ್ಧ ಸೌಂದರ್ಯಕ್ಕೆ, ಅವರ ಅಭಿನಯಕ್ಕೆ ಎಂಥವರೂ ಬೆರಗಾಗಬೇಕು. ಮೈದಾನದಲ್ಲಿ ಆಡುವ ಮಕ್ಕಳು ಹಾಡಿಗೆ ಹೆಜ್ಜೆ ಹಾಕುತ್ತಿರುವ ದೃಶ್ಯ ಹೆತ್ತವರಿಗೂ ಮಹದಾನಂದವನ್ನು ಉಂಟುಮಾಡಿತ್ತು. ಹಾಗೇ ನೋಡುತ್ತಾ ನೋಡುತ್ತಾ ಮಂತ್ರಮುಗ್ಧರಾದವರ ಕಣ್ಣುಗಳಲ್ಲಿ ಆನಂದಬಾಷ್ಪ. ಕೈಯಲ್ಲಿ ಚಪ್ಪಾಳೆಯ ಪ್ರೋತ್ಸಾಹ. . ಆಹಾ ಅದೊಂದು ಅದ್ಭುತ ಕ್ಷಣ. . .