ಅಮೆರಿಕನ್ನಡ
Amerikannada
ಸಮರಸವೇ ಜೀವನ
-ಮಾಗಲು ಮಲ್ಲಿಕಾರ್ಜುನ, ಮೈಸೂರು*
    ಜೀವನ ಅಂದರೆ ಏನು? ಜೀವನ ಹೇಗಿರಬೇಕು? ಜೀವನವನ್ನು ಹೇಗೆ ಸಾಗಿಸಬೇಕು?     ಜೀವನ ಎಂದರೇನು? ಎಂದು ತಿಳಿಯುವ ಹೊತ್ತಿಗೆ ಅರ್ಧ ಜೀವನವೇ ಮುಗಿದು ಹೋಗುತ್ತದೆ. ಬದುಕಲ್ಲಿ ಬೇರೆಯವರ ವ್ಯಕ್ತಿತ್ವಕ್ಕೆ ಮಸಿ ಬಳಿದು ತಾನು ಸುಖಿಸುವುದು ಜೀವನವೇ? ಅಥವಾ ತನ್ನ ಸುಖಗಳನ್ನು ತ್ಯಜಿಸಿ ಬೇರೆಯವರನ್ನು ಸಂತೋಷವನ್ನಾಗಿಸುವುದು ಜೀವನವೇ?     ಜೀವನ ಎಂಬುದೊಂದು ಮೇಣದ ಬತ್ತಿ. ಪ್ರೀತಿಯೆಂಬುದೊಂದು ಬೆಳಕನ್ನು ಹೊತ್ತಿ ಕಾಲದಲ್ಲಿ ಮರೆಯಾಗಿ ಕರಗಿ ಶೂನ್ಯ ಆವರಿಸುವುದೇ ಬದುಕು. ಏರಿಳಿತಗಳಿಂದ ಕೂಡಿರುವುದೇ ಜೀವನ. ಜೀವನ ಭೌತಿಕ ಮಟ್ಟದಲ್ಲಿ ಪ್ರಕಟಿತವಾದ ದೇವರು. ಏಕೆಂದರೆ ಆತನಲ್ಲಿ ವಾಸಿಸುತ್ತೇವೆ, ಚಲಿಸುತ್ತೇವೆ ಹಾಗೂ ನಮ್ಮ ಅಸ್ತಿತ್ವ ಪಡೆದಿದ್ದೇವೆ. ಮನುಷ್ಯನಿಗೆ ವಿದ್ಯುಚ್ಚಕ್ತಿ ಏನೆಲ್ಲ ಆಗಿದೆಯೋ, ಅದೇ ದೇವರ ಶಕ್ತಿಯಾಗಿರುವುದು. ನೀವು ಸ್ವರ್ಗಕ್ಕೆ ಹೊಗುವುದಿಲ್ಲ; ನೀವು ಸ್ವರ್ಗಕ್ಕೆ ಬೆಳೆಯುವಿರಿ. ಯಾಕೆಂದರೆ, ಜೀವನ ನಿರಂತರವಾದುದು. ಅಲ್ಲಿ ನಿಲ್ದಾಣವಿಲ್ಲ. ನಾವು ಪ್ರಗತಿ ಹೊಂದುವೆವು, ಇಲ್ಲವೇ ಅವನತಿ ಪಡೆಯುವೆವು.     ಮನುಷ್ಯ ಹೇಗೆ ಸತ್ತ ಎಂಬುದಕ್ಕಿಂತ ಹೇಗೆ ಬದುಕಿ ಬಾಳಿದ ಎನ್ನುವುದು ಮುಖ್ಯ. ಜೀವನವನ್ನು ಹಿಂದೆ ನೋಡಿ ತಿಳಿದುಕೊಳ್ಳಬೇಕು, ಮುಂದೆ ನೋಡಿ ಬದುಕಬೇಕು. ಜೀವನದಲ್ಲಿ ಪ್ರತಿಕ್ಷಣಕ್ಕೂ ತನ್ನದೇ ಆದ ವಿಶೇಷ ಬೆಲೆಯಿದೆ. ಒಳ್ಳೆಯ ಜೀವನ ಎಂದರೆ ಮತ್ತೆ ಅಪೇಕ್ಷಿಸುವ ರೀತಿಯಲ್ಲಿ ಎಲ್ಲರಿಗೂ ಬೇಕಾದವರಾಗಿ ಬಾಳುವುದು. ಜೀವನದಲ್ಲಿ ಪ್ರವಾಹವಿರುವುದು ನಿಜ ಆದರೆ ಅದು ಯಾವಾಗಲೂ ಒಂದೇ ದಿಕ್ಕಿನಲ್ಲಿ ಹರಿಯುವುದಿಲ್ಲ. ಜೀವನ ಕನ್ನಡಿ ಇದ್ದಹಾಗೆ ನಕ್ಕರೆ ನಗುತ್ತದೆ, ಅತ್ತರೆ ಅಳುತ್ತದೆ. ದುಃಖ ಬಂದೊಡನೆಯೆ ಜೀವನವನ್ನು ತಿರಸ್ಕರಿಸಬಾರದು. ಜೀವನವು ನೈಜವಾದುದು, ಉತ್ಸಾಹಪೂರ್ಣವಾದುದು, ಸಮಾಧಿಯೇ ಅದರ ಗುರಿಯಲ್ಲ. ಏಕೆಂದರೆ, ಜೀವನವೆಂಬುದು ಗಂಡುಭೇರುಂಡದ ಎರಡು ಮುಖಗಳಿದ್ದಹಾಗೆ. ಒಂದು ಮುಖ ಸುಖವನ್ನು ಮತ್ತೊಂದು ಮುಖ ದು:ಖವನ್ನು ಸೂಚಿಸುತ್ತದೆ. ಆದರೆ ಅದರ ಫಲವನ್ನು ಒಂದೇ ದೇಹ ಅನುಭವಿಸುತ್ತದೆ. ಮನುಷ್ಯನ ಜೀವನದಲ್ಲಿ ನಾನತ್ವ ಬಹಳಷ್ಟಿರುತ್ತದೆ. ತಾನು ಯಾವ ರೀತಿಯಿಂದಲಾದರೂ ಸರಿ ಹೆಸರುಗಳಿಸಬೇಕು, ತನ್ನನ್ನು ಇತರರು ಹೊಗಳಬೇಕು, ತಾನು ಸುಖವಾಗಿರಬೇಕು, ಎಂದು ಜೀವನದಲ್ಲಿ ಮಹದಾಸೆ ಇರಿಸಿಕೊಂಡಿರುತ್ತಾನೆ. ಇದಕ್ಕಾಗಿ ಆತ ಯಾವ ಕೆಲಸಕ್ಕೂ ಸಿದ್ದನಿರುತ್ತಾನೆ.
“ಇಳೆಯಿಂದ ಮೊಳಕೆಯೊಗೆವೊಂದು ತಮಟೆಗಳಿಲ್ಲ,
ಫಲಮಾಗೊಂದು ತುತ್ತೂರಿ ದನಿಯಿಲ್ಲ,
ಬೆಳಕನೀವ ಸೂರ್ಯಚಂದ್ರರದೊಂದು ಸದ್ದಿಲ್ಲ
ಹೊಲೆ ನಿನ್ನ ತುಟಿಗಳನ್ನು-ಮಂಕುತಿಮ್ಮ”

    -ಡಿ.ವಿ.ಜಿಯವರ ಈ ಕವನದ ಸಾಲು ಮನುಷ್ಯನ ವರ್ತನೆಗೆ ಕನ್ನಡಿ ಹಿಡಿದಿದೆ. ಭೂಮಿಯಿಂದ ಒಂದು ಬೀಜ ಭೂಮಿಯನ್ನು ಸೀಳಿಕೊಂಡು ಹೊರಗೆ ಬರುವಾಗ ಯಾವುದೇ ತಮಟೆಯ ಶಬ್ದ ಬಾರಿಸುವುದಿಲ್ಲ. ಒಂದು ಫಲ ಮಾಗಬೇಕಾದರೆ ತುತ್ತೂರಿಯಿಂದ ಧ್ವನಿಸುವುದಿಲ್ಲ. ಸೂರ್ಯಚಂದ್ರರು ಒಂದು ದಿನವೂ ತಮ್ಮ ಬೆಳಕಿನ ಬಗ್ಗೆ ಚಕಾರವೆತ್ತಿಲ್ಲ. ಆದರೆ ಮನುಷ್ಯ ಯಃಕಶ್ಚಿತ್ ಒಂದು ಸಣ್ಣ ಕೆಲಸ ಮಾಡಿದರೂ ಪೇಪರ್, ಟಿ.ವಿ. ರೇಡಿಯೊ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಹೆಸರಿಕೊಳ್ಳುತ್ತಾನೆ. &ldquoಜನಮೆಚ್ಚಿ ನಡಕೊಂಡರೇನುಂಟು ಜಗದೊಳಗೆ ಮನಮೆಚ್ಚಿ ನಡಕೊಂಬುದೆ ಚೆನ್ನ&rdquo ಎನ್ನುವ ಹಾಗೆ ಎಲ್ಲಾ ಜನರನ್ನು ಮೆಚ್ಚಿಸಲು ಆ ಜನಾರ್ದನನಿಂದಲೂ ಸಾಧ್ಯವಿಲ್ಲ ಅಂದ ಮೇಲೆ ಈ ಮನುಷ್ಯನಿಂದ ಸಾಧ್ಯವೆ? ಜೀವನದಲ್ಲಿ ಎಡರು-ತೊಡರುಗಳು ಸಹಜ. ಆದರೆ ಅದನ್ನು ಮೆಟ್ಟಿನಿಲ್ಲುವುದೇ ಸಾಹಸತನ. ನಡೆವರು ಎಡಹದೆ ಕುಳಿತವರು ಎಡಹುವರೇ ದುಡಿಯದಿದ್ದರೆ ದಿನಗಳಿಗೂ ಪಾವಿತ್ರ್ಯವಿರುವುದಿಲ್ಲ, ಬದುಕಿಗೂ ಪಾವಿತ್ರ್ಯವಿರುವುದಿಲ್ಲ. ಜೀವನವು ನಾವು ಎಣಿಸಿದಂತೆ ಹೂವಿನ ಹಾಸಿಗೆಯಲ್ಲ ಮುಳ್ಳಿನ ಹಾಸಿಗೆಯೂ ಹೌದು. ಆದರೆ ಜೀವಿಸುವವನ ಆತ್ಮಶಕ್ತಿಗೆ ಅನುಗುಣವಾಗಿ ಆ ಹಾಸಿಗೆಯನ್ನು ಹೂವು ಅಥವ ಮುಳ್ಳಿನ ಹಾಸಿಗೆಯನ್ನಾಗಿ ಪರಿವರ್ತಿಸಬಹುದು. ಜೀವನವು ನಾವು ಪರಿಸ್ಥಿತಿಯೊಡನೆ ಮಾಡಿಕೊಂಡ ಒಪ್ಪಂದ, ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ಪಾಠಶಾಲೆ.     ಪ್ರತಿಯೊಂದು ಆತ್ಮವು ಸ್ವಭಾವತಃ ದಿವ್ಯವಾದುದು. ಈ ದಿವ್ಯತೆಯನ್ನು ಬಾಹ್ಯ ಮತ್ತು ಆಂತರಿಕ ಪ್ರಕೃತಿಯ ನಿಗ್ರಹದ ಮೂಲಕ ವ್ಯಕ್ತಗೊಳಿಸುವುದೇ ಜೀವನದ ಮುಖ್ಯಗುರಿ. ಜೀವನದ ಮುಖ್ಯ ಗುರಿ ಇಂದ್ರಿಯ ಸುಖವಲ್ಲ. ಜ್ಞಾನಸಂಪಾದಿಸುವುದೇ ಜೀವನದ ಗುರಿ. ಜೀವನವೆಂಬುದು ನೀರಿನ ಮೇಲಿನ ಗುಳ್ಳೆಯಂತೆ ಕ್ಷಣಿಕವಾದುದು ಒಳ ಮತ್ತು ಹೊರ ಪ್ರಪಂಚದೊಡನೆ ನಡೆಯುವ ಸಂಕೀರ್ಣ ಹೋರಾಟ. ಜೀವನು ಒಂದು ಗಣಿತಶಾಸ್ತ್ರವಿದ್ದಂತೆ. ಅದರಲ್ಲಿ ಸ್ನೇಹಿತರನ್ನು ಕೂಡಿಸಿಕೊಳ್ಳಬೇಕು, ಶತ್ರುಗಳನ್ನು ಕಳೆದುಕೊಳ್ಳಬೇಕು, ಜ್ಞಾನವನ್ನು ಗುಣಿಸಿಕೊಳ್ಳಬೇಕು. ದುಃಖವನ್ನು ಭಾಗಿಸಿಕೊಳ್ಳಬೇಕು. ಜೀವನದಲ್ಲಿ ಮನುಷ್ಯ ಮನುಷ್ಯನನ್ನು ತಿಳಿದು ಬದುಕಬೇಕು ತಿಂದು ಬದುಕಬಾರದು. ನಾವು ಕೇವಲ ಬದುಕುವುದಲ್ಲ; ಬಾಳಬೇಕು. ಹಾಗಾದರೆ ನಾವು ಪ್ರಯತ್ನ ಪೂರ್ವಕವಾಗಿ ಸಾಮಾಜಿಕ ಮನೋಭಾವವನ್ನು ಸಾಮಾಜಿಕ ಒಲವುಗಳನ್ನು ಗಳಿಸಬೇಕು ಬೆಳೆಸಬೇಕು.     ನಮ್ಮ ಜೀವನ ಸುಖಕರ ಮತ್ತು ಯಶಸ್ವಿಯಾಗಬೇಕಾದರೆ ತಮಗೆ ಇತರರ ಸಹಕಾರ ಮತ್ತು ಸಹಾನುಭೂತಿಗಳ ಅವಶ್ಯಕತೆಯಿದೆಯೆಂಬುದು ಸಫಲ ವ್ಯಕ್ತಿತ್ವ ಹೊಂದಿರುವವರಿಗೆ ತಿಳಿದಿದೆ. ತಾನು ಬೇರೆಯವರಿಗೆ ಉಪಯೋಗಿಯಾದರೆ ಬೇರೆಯವರೆಲ್ಲರೂ ತನಗೆ ಉಪಯೋಗಿಯಾಗುವರೆಂಬುದನ್ನು ಬೇಗ ತಿಳಿದಷ್ಟು ಹಿತ. ಜನರಿಗೆ ಉಪಯೋಗಿಯಾಗಿ ಬದುಕುವ ಮೊದಲು ಅವರು ನಮ್ಮನ್ನು ಬಯಸುವಂತಾಗಬೇಕು. ಹಾಗಾದರೆ ಜನ ತನ್ನನ್ನು ಅದೇಕೆ ಬಯಸುತ್ತಾರೆ ಅಥವಾ ತಿರಸ್ಕರಿಸುತ್ತಾರೆಂಬುದನ್ನು ಅರಿಯುವುದು ಅವಶ್ಯ. &ldquoಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನ.&rdquo ಈ ನಿಟ್ಟಿನಲ್ಲಿ ಬೇಂದ್ರೆಯವರ ಈ ಜೀವನ ಸಂದೇಶವನ್ನು ಅರಿಯುವುದು ಮಹತ್ವಪೂರ್ಣವಾಗಿದೆ ಮತ್ತು ಅರ್ಥಪೂರ್ಣವಾಗಿದೆ.
*ಮಾಗಲು ಮಲ್ಲಿಕಾರ್ಜುನ
ನಂ. ೧೩೨, ೨೩ನೇ ಮುಖ್ಯ ರಸ್ತೆ
೨ನೇ ಹಂತ, ಜೆ. ಪಿ. ನಗರ
ಮೈಸೂರು-೫೭೦೦೦೮
ಫೋನ್: ೮೧೪೭೪೭೨೫೪೯