ಅಮೆರಿಕನ್ನಡ
Amerikannada
‘ಹರಿ ಸ್ಮರಣೆ.... ಹೀಗೊಂದು ಕನ್ನಡ ಸಮ್ಮೇಳನ’
ಜಯಂತಿ ಅಮೃತೇಶ್*
    ಆ ದಿನ ಮಾರ್ಚ್ 11, 2011; ಸಾಹಿತಿಗಳು, ಲೇಖಕರು, ಪ್ರಕಾಶಕರು, ವಿಮರ್ಶಕರು, ಊರಿನ ಅನೇಕ ಪ್ರತಿಷ್ಠಿತ ವ್ಯಕ್ತಿಗಳು ಹೀಗೆ ಸಮಾಜದ ನಾನಾ ಶಾಖೆಗಳಿಂದ ಶಾರದಾವಿಲಾಸ ಶತಮಾನೋತ್ಸವ ಭವನದ ಕಡೆಗೆ ಜನ ಸಾಗರವೇ ಹರಿದು ಬರುತ್ತಿತ್ತು. ಆ ದಿನ ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನಕ್ಕೆ ನಾಂದಿ ಹಾಡಿದ ಸುದಿನ. ಆ ದಿನ ಮೈಸೂರಿನಲ್ಲೂ ಹೀಗೊಂದು ಕನ್ನಡ ಸಮ್ಮೇಳನವನ್ನು ಆಯೋಜಿಸಿದವರಾರೆಂದು ಯೋಚಿಸುವಹಾಗಿತ್ತು ಆ ದೃಶ್ಯ. ಹೌದು; ಆ ದಿನ ಶ್ರೀಯುತ ಹರಿಹರೇಶ್ವರ ಅವರು ಜೀವಿಸಿದ್ದಿದ್ದರೆ ಅವರಿಗೆ 75 ನೇ ವರುಷ. ಆ ದಿನವನ್ನು ಹಾಗೆಯೇ ಕಾಲಮಾನದಲ್ಲಿ ಕಳೆದುಹೋಗಲು ಅವರ ಪತ್ನಿ ನಾಗಲಕ್ಷ್ಮಿಯವರು ಬಿಡುವರೆ? ಪತಿಯ ಕನಸುಗಳೆಲ್ಲವನ್ನೂ ಸಾಕಾರಗೊಳಿಸಿದ ಧೀಮಂತ ಮಹಿಳೆ ಆಕೆ; ಆ ದಿನ ಒಂದು ಅದ್ಭುತ ಸಮಾರಂಭವನ್ನು ಆಯೋಜಿಸಿದ್ದರು. ಆ ಸುಂದರ ಸಂಜೆಗಾಗಿ ಅದೆಷ್ಟು ದಿನ, ವಾರ, ತಿಂಗಳುಗಳು ಹಗಲು ರಾತ್ರಿಗಳೆನ್ನದೇ ಶ್ರಮಿಸಿದರೋ, ಸಮಾರಂಭದ ರೂಪು ರೇಷೆಗಳನ್ನು ಹೊಂದಿಸುವದರಲ್ಲಿ ಅದೆಷ್ಟು ದಿನಗಳನ್ನು ಕಳೆದರೋ ಆ "ಶ್ರೀಹರಿ" ಯೇ ಬಲ್ಲ?? ಕನ್ನಡ ನಾಡು ನುಡಿಯ ಅಭಿವೃದ್ಧಿಗಾಗಿ ಅಪ್ರತಿಮ ಕೆಲಸಮಾಡಿದ ಕನ್ನಡದ ಸೇನಾನಿ ಶಿಕಾರಿಪುರ ಹರಿಹರೇಶ್ವರ ಅವರು. "ಕನ್ನಡದ ಪರಿಚಾರಕ", "ಕನ್ನಡದ ಸಾಂಸ್ಕೃತಿಕ ರಾಯಭಾರಿ", "ಸ್ನೇಹಜೀವಿ" ಇವೆಲ್ಲವೂ ಆಗಿದ್ದ ಹರಿ ಅವರು ಕನ್ನಡದ ಸಾರಸ್ವತ ಲೋಕದಲ್ಲಿ "ಹರಿ" ಎಂತಲೇ ಪ್ರಸಿದ್ಧಿ ಪಡೆದಿದ್ದರು. ಅವರು ತಮ್ಮ ವೃತ್ತಿ, ವ್ಯವಹಾರಗಳಲ್ಲಿ ಕಳೆದುಹೋಗದೆ ಕನ್ನಡನಾಡು ಮತ್ತು ಕನ್ನಡ ನುಡಿಯ ಸಿಪಾಯಿಯಾಗಿ ದುಡಿದಿದ್ದಾರೆ. ಇದರಿಂದ ಕನ್ನಡದ ಕಂಪು ಪಾಶ್ಚಿಮಾತ್ಯ ಗೋಳದಲ್ಲಿ ಪಸರಿಸುವಂತೆ ಮಾಡಿದ್ದಾರೆ. 1984 ರಲ್ಲಿ ತಮ್ಮ ಸಂಪಾದಕತ್ವ ಮತ್ತು ಪ್ರಕಾಶನದಲ್ಲಿ "ಅಮೆರಿಕನ್ನಡ" ಎಂಬ ದ್ವೈಮಾಸಿಕ ಪತ್ರಿಕೆಯನ್ನು ಆರಂಭಿಸಿದರು. ಅನೇಕ ವಿಭಿನ್ನ ಪ್ರಕಾರದ ಕೃತಿಗಳನ್ನು ಹೊರತಂದರು. ಇವರ ಸೇವೆಗೆ ದೇಶ ವಿದೇಶಗಳಿಂದ ಪುರಸ್ಕಾರಗಳು ಸಂದಿವೆ. ಅಮೆರಿಕಾಗೆ ಆಗಮಿಸುವ ಎಲ್ಲ ಕನ್ನಡಿಗರಿಗೆ ಹರಿಯವರ ಮನೆ ಒಂದು ಪುಸ್ತಕ ಕಾಶಿಯಾಗಿತ್ತು. 2002 ರಲ್ಲಿ ತಾಯ್ನಾಡಿಗೆ ಮರಳಿದ ಅವರು ಮತ್ತೆ ಒಂದು ವಿಶಿಷ್ಟ ರೀತಿಯಲ್ಲಿ ಕನ್ನಡದ ಏಳಿಗೆಗಾಗಿ ದುಡಿದರು. ಯುವ ಬರಹಗಾರರಿಗೆ ಮಾರ್ಗದರ್ಶಕರಾಗಿ ನಿಂತರು. ಅನೇಕರಿಂದ ವಿವಿಧ ಪ್ರಕಾರದ ಬರಹಗಳನ್ನು ಬರೆಸಿದರು. ಒಬ್ಬ ಸಾಮಾನ್ಯ ಬರಹಗಾರ್ತಿಯಾದ ನನ್ನನ್ನು ಒಂದು ಪುಸ್ತಕದ ಲೇಖಕಿಯನ್ನಾಗಿಸಿದ ಕೌತುಕವೇನು ಸಾದಾರಣವಾದುದ್ದಲ್ಲ. ಕನ್ನಡ ಸಾಹಿತ್ಯದ ಅನೇಕ ಪ್ರಾಕಾರಗಳಿಗೆ ನನ್ನನ್ನು ಪರಿಚಯಿಸಿದ ಅವರು ನನ್ನಿಂದ ಕವಿತೆ, ನಾಟಕ, ಸಂದರ್ಶನ, ವಿಮರ್ಶೆ, ಪ್ರವಾಸ ಕಥನ ಎಲ್ಲವನ್ನೂ ಬರೆಯಿಸಿದರು. ಒಂದು ಗ್ರಂಥದ ಅನುವಾದಕ್ಕೂ ನನ್ನನ್ನು ಪ್ರೋತ್ಸಾಹಿಸಿದರು. ಇಂತಹ ಪ್ರತಿಭಾವಂತ ಮಹನೀಯರ 75ನೇ ಹುಟ್ಟು ಹಬ್ಬದ ದಿನದಂದು ನಾಗಲಕ್ಷ್ಮಿಯವರು ಒಂದು ಕನ್ನಡ ಸಮ್ಮೇಳನವನ್ನೇ ಏರ್ಪಡಿಸಿದ್ದರು.
photo    ಆ ದಿನದ ಕಾರ್ಯಕ್ರಮಗಳು ಹೀಗಿದ್ದುವು: ಶಿಕಾರಿಪುರ ಹರಿಹರೇಶ್ವರರ 75ನೇ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ಪುಸ್ತಕಗಳ ಲೋಕಾರ್ಪಣಾ ಸಮಾರಂಭ; ಆ ಗ್ರಂಥಗಳು: ಸಂಸ್ಮರಣ ಗ್ರಂಥ `ಸ್ನೇಹದಲ್ಲಿ ನಿಮ್ಮ ಹರಿ', `ನಮ್ಮ ಕಾಶ್ಮೀರ' ಮತ್ತು `ತಿರುಗಾಟ' (ಹರಿಹರೇಶ್ವರ ವಿರಚಿತ) ಹಾಗೂ ಪ್ರಕಾಶನ ಸಂಸ್ಥೆಗಳು ನಡೆದು ಬಂದ ದಾರಿಯ ಬಗ್ಗೆ ನಾಗಲಕ್ಷ್ಮಿ ಹರಿಹರೇಶ್ವರ ಸಂಪಾದಕತ್ವದ `ಹೊಂಬೆಳಕ ಹೊನಲು.' ಕಾರ್ಯಕ್ರಮದ ಪೂರ್ವಭಾವಿಯಾಗಿ ನಾಗಲಕ್ಷ್ಮಿಯವರು ಒಂಭತ್ತನೆಯ ತಾರೀಖಿನ ದಿನ ಮೈಸೂರಿನ ಪತ್ರಕರ್ತರ ಭವನದಲ್ಲಿ ಒಂದು ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು. ಸಮಾರಂಭದ ಬಗ್ಗೆ ಪತ್ರಕರ್ತರಿಗೆ ಸಕಲ ವಿವರಗಳನ್ನೂ ನೀಡಲಾಯಿತು. ನಿಗದಿಯಾದ ಆ ದಿನ ಬಂದೇ ಬಿಟ್ಟಿತ್ತು. ಶತಮಾನೋತ್ಸವ ಭವನದ ಮುಂದಿನ ಅಂಗಳದಲ್ಲಿ ಶ್ರೀ ಹರಿಹರೇಶ್ವರ ಅವರ ಜೀವನದ ಅನೇಕ ಘಟನೆಗಳ ಚಿತ್ರಗಳನ್ನು ಪ್ರದರ್ಶನಕ್ಕೆಂದು ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಹರಿಯವರ ಜೀವನದ ನಾನಾ ಮಜಲುಗಳನ್ನು ನಾವಲ್ಲಿ ಕಂಡೆವು. ಅವರು ಬರೆದು ಪ್ರಕಟಿಸಿದ ಎಲ್ಲ ಪುಸ್ತಕಗಳನ್ನೂ ಅಲ್ಲಿ ಸಾಲಾಗಿ ಜೋಡಿಸಲಾಗಿತ್ತು. ತಮ್ಮ ಎಲ್ಲ ಕಾರ್ಯಗಳಲ್ಲಿ ಕಲಾವಂತಿಕೆಗೆ, ಕಲಾ ಪ್ರತಿಭೆಗೆ ಒತ್ತು ನೀಡುವ ನಾಗಲಕ್ಷ್ಮಿಯವರು ಭವನದ ಮೆಟ್ಟಿಲುಗಳು, ಅಂಗಳ ಇವುಗಳ ಮೇಲೆ ಸುಂದರವಾದ ಹೂವುಗಳನ್ನು ರಂಗೋಲಿಯಂತೆ ಬಿಡಿಸುವ ಮೂಲಕ ತಮ್ಮ ವಿಶಿಷ್ಟತೆ ಮೆರೆದರು; ಇವುಗಳ ರೂವಾರಿ ಶ್ರೀಮತಿ ನಳಿನಾರವರು. ಅವುಗಳ ಸುಂದರತೆ, ನಿಖರತೆಯನ್ನು ಆಸ್ವಾದಿಸುತ್ತಾ ನಡೆದಂತೆ ಹಿಂದಿನಿಂದ ಒಂದು ಧ್ವನಿ ಕೇಳಬಂದಿತು. ಪಕ್ಕದಲ್ಲಿ ಕಾಫಿ, ಟೀ ಮತ್ತು ಲಘು ಉಪಹಾರದ ಏರ್ಪಾಡಾಗಿದೆ; ದಯವಿಟ್ಟು ``ಎಲ್ಲರೂ ಅವುಗಳನ್ನು ಸ್ವೀಕರಿಸಿ ಅನಂತರ ಒಳಗೆ ಬಂದು ಆಸೀನರಾಗಬಹುದು'' ಎನ್ನುವ ಮಾತಿನಿಂದ ಎಲ್ಲರಿಗೂ ಸುಸ್ವಾಗತವನ್ನು ಕೋರಿದರು. ಸರಿ, ಹೊರ ಅಂಗಳದಲ್ಲಿ ಸಾಲಾಗಿ ಕುರ್ಚಿಗಳನ್ನು ಜೋಡಿಸಲಾಗಿತ್ತು. ಅನೇಕರು ಉಪಾಹಾರ ಸವಿಯುತ್ತಾ ತಮ್ಮ ತಮ್ಮ ಸ್ನೇಹಿತರು ಮತ್ತು ಪರಿಚಯದವರೊಡನೆ ಸಂಭಾಷಣೆಯಲ್ಲಿ ನಿರತರಾಗಿದ್ದರು. ಉಭಯಕುಶಲೋಪರಿ ನಡೆದಿತ್ತು. ಪಕೋಡ, ಬಾಳೆಯ ಹಣ್ಣು ಮತ್ತು ಕಾಫಿಯ ಉಪಾಹಾರದ ನಂತರ ಎಲ್ಲರೂ ಭವನದ ಸುಸಜ್ಜಿತ ಆಸನಗಳಲ್ಲಿ ಆಸೀನರಾದೆವು.
    ವೇದಿಕೆಯ ವೈವಿಧ್ಯತೆ: ವೇದಿಕೆಯ ಒಂದು ಬದಿಯಲ್ಲಿ ಹರಿಹೇಶ್ವರ ಅವರ ಭಾವಚಿತ್ರವಿತ್ತು. ಅದನ್ನು ಹೂ ಮಾಲೆಗಳಿಂದ ಅಲಂಕರಿಸಲಾಗಿತ್ತು. ಪಕ್ಕದಲ್ಲಿ ಥಳ ಥಳನೆ ಹೊಳೆಯುವ ಒಂದು ಬೃಹತ್ ಹಿತ್ತಾಳೆಯ ದೀಪದ ಕಂಭ; ಒಂದೇ ಕಂಭದಲ್ಲಿ ಒಟ್ಟಾರೆ 25 ದೀಪಗಳು ದೇದೀಪ್ಯಮಾನವಾಗಿ ಬೆಳಗಿ ತಮ್ಮ ಜ್ಯೋತಿಯನ್ನು ಬೀರುತ್ತಿದ್ದವು. ಅವುಗಳ ಏಕ ಪ್ರಕಾರದ ಪ್ರಖರತೆಯನ್ನು ಕಂಡ ನಾನು ಹತ್ತಿರಹೋಗಿ ಪರಾಮರ್ಶಿಸಿದಾಗ ಅಲ್ಲಿ ಕಂಡದ್ದು ಎಣ್ಣೆ ಹಾಕಿದ ಬತ್ತಿಯ ದೀಪಗಳಲ್ಲ? ಒಂದೆ ಸಮನಾಗಿ ಪ್ರಕಾಶವನ್ನು ಬೀರುತ್ತಲಿದ್ದ ಮೇಣದ ಬತ್ತಿಯ ಸೊಡರುಗಳು!! ಬತ್ತಿ ಎಳೆಯಬೇಕು; ದೀಪವು ನಂದದಹಾಗೆ ಎಣ್ಣೆ ಹಾಕುತ್ತಿರಬೇಕು ಎನ್ನುವ ಚಿಂತೆಯೇ ಇಲ್ಲ! ಆಹಾ ಎಂತಹ ಯೋಜನೆ ಎನ್ನಿಸಿತು. ಸಾವಧಾನವಾಗಿ ಬೆಳಗುತ್ತಿದ್ದ ಆ 25 ಜ್ಯೋತಿಗಳು ಎಲ್ಲರ ಮನಸ್ಸಿಗೆ ಮುದ ನೀಡಿದವು. ವೇದಿಕೆಯ ಮತ್ತೊಂದು ಬದಿಯಲ್ಲಿ ಪೂಜಾ ಸಾಮಗ್ರಿಗಳಾದ ಅರಶಿನ ಕುಂಕುಮ, ಬಗೆ ಬಗೆಯ ಹೂಗಳು, ಹಣ್ಣುಗಳು, ದೀಪ, ಮತ್ತು ಒಂದು ಸಾಲಂಕೃತ ಪೂರ್ಣಕುಂಭವೂ ಕಾಣಬಂದಿತು. ಆ ದಿನದ ಕಾರ್ಯಕ್ರಮಕ್ಕೆ ನಾಡಿನ ಪ್ರತಿಷ್ಠಿತ ಮೂವರು ಧರ್ಮ ಗುರುಗಳನ್ನು ನಾಗಲಕ್ಷ್ಮಿಯವರು ಸ್ವಾಗತಿಸಿದರು; ಅವರೆಲ್ಲರೂ ಒಟ್ಟಾಗಿ ಆಗಮಿಸಿ ಈ ಪೂರ್ಣಕುಂಭ ಸ್ವಾಗತವನ್ನು ಸ್ವೀಕರಿಸಿದರೆ ಎಷ್ಟು ಚೆನ್ನಾಗಿರಬಹುದು ಎಂದುಕೊಳ್ಳುತ್ತಿರುವಷ್ಟರಲ್ಲಿ ವೇದಘೋಷ ಕೇಳಿಬಂದಿತು. ಮೈಸೂರಿನ ವೇದಶಾಸ್ತ್ರ ಪೋಷಿಣಿ ಸಭೆಯಿಂದ ಅಗಮಿಸಿದಂತಹ 8 ಜನ ವೇದ ವಿದ್ಯಾರ್ಥಿಗಳು ತಮ್ಮ ಏರು ಧ್ವನಿಯ, ಸುಶ್ರಾವ್ಯ ವೇದ ಘೋಷದೊಂದಿಗೆ ಪ್ರತಿಷ್ಠಿತ ಅತಿಥಿಗಳಿಗೆ ಸುಸ್ವಾಗತವನ್ನು ಕೋರಿದರು. ಘಂಟಾನಾದದಂತೆ ಮೊಳಗುತ್ತಿದ್ದ ಆ ವೇದ ಘೋಷವು ಅಲ್ಲಿ ನೆರೆದಿದ್ದವರನ್ನೆಲ್ಲ ಮೋಡಿಮಾಡಿ ಒಂದು ಕಲ್ಪನಾ ಲೋಕಕ್ಕೆ ಕರೆದೊಯ್ದಿತು. ಪೂರ್ಣ ಕುಂಭದ ಸ್ವಾಗತದ ನಂತರ ಅಥಿತಿಗಳು ವೇದಿಕೆಯ ಆಸನಗಳ ಮೇಲೆ ಆಸೀನರಾದರು. ಅನಂತರ ಅಲ್ಲಿ ನಡೆದದ್ದು ಒಂದು ಸಂಭ್ರಮ ಲೋಕದ ವಿಹಾರವಷ್ಟೆ!!
    ಶ್ರೀಮತಿ ಜ್ಯೋತಿಯವರ ಪ್ರಾರ್ಥನೆಯಿಂದ ಕಾರ್ಯಕ್ರಮದ ಶುಭಾರಂಭವಾಯಿತು. ಆ ಪ್ರಾರ್ಥನೆಯ ಒಳಹುರುಳು ಹೀಗಿದೆ. `ಎಲ್ಲೆಡೆ ಜೇನು, ಎಲ್ಲವೂ ಜೇನು, ಜೇನೇ ಆಗಿರಲಿ, ಜೇನೇ ಜೇನಾಗಿರಲಿ; ಅರಳುತಲೆಲ್ಲೆಡೆ ಹೂಗಳು ಪರಿಮಳ ಬೀರಲಿ ಗಾಳಿಯಲಿ; ಸುತ್ತಲು ಮುತ್ತಿಹ ಧೂಳಿನ ಕಣಕಣ ಜೇನೇ ಆಗಿರಲಿ..' ಈ ಪದ್ಯವು ಪೂಜೆಯಲ್ಲಿ ಬರುವ ಪಂಚಾಮೃತ ಅಭಿಷೇಕದ ಮಂತ್ರದಲ್ಲಿ ಜೇನನ್ನು ಸಮರ್ಪಿಸುವಾಗ ಹೇಳುವ ಮಂತ್ರ; `ಮಧುವಾತಾ ಋತಾಯತೇ..' ಮಂತ್ರದ ಭಾವಾನುವಾದ. ಜ್ಯೋತಿಯವರು ಅರ್ಥಪೂರ್ಣವಾದ ಈ ಪದ್ಯವನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರನ್ನೂ ಮುದಗೊಳಿಸಿದರು. ನಾಗಲಕ್ಷ್ಮಿಯವರ ಮನಮುಟ್ಟುವಂತಹ, ಆತ್ಮೀಯವಾದ ಸ್ವಾಗತ ಭಾಷಣ ಹರಿಯವರು ತಮ್ಮೆದುರಲ್ಲೇ ಇರುವರೇನೋ ಎನ್ನಿಸುವಂತೆ ಮಾಡಿತು. ಗುರು ಪರಂಪರೆಯಿಂದ ಬಂದಿರುವ, ದೇವತಾಸ್ವರೂಪಿಗಳಾದ ತ್ರಿಮೂರ್ತಿ ಮಹಾಸ್ವಾಮಿಗಳನ್ನು ಭಕ್ತಿಯಿಂದ ನಮಿಸಿ ಲೋಕ ಕಲ್ಯಾಣಕ್ಕಾಗಿ ಜನರ ದುಃಖ ದುಮ್ಮಾನಗಳಿಗೆ, ಹಗಲು ರಾತ್ರಿಯೆನ್ನದೇ ತನು, ಮನ ಪೂರ್ವಕವಾಗಿ ಸದಾ ಒಳಿತನ್ನೇ ಮಾಡುತ್ತಿರುವ ಪ್ರಾತಃಸ್ಮರಣೀಯರನ್ನು ಪರಿಚಯಿಸುವ ಸಾಹಸವನ್ನು ಕೈಗೊಂಡರು.
    ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು, ಸುತ್ತೂರು ಮಹಾಸಂಸ್ಥಾನ, ಮೈಸೂರು. ಇವರು ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ತನ್ನ ಸೇವಾ ಕ್ಷೇತ್ರಗಳನ್ನು ಕಾಲದ ಅಗತ್ಯತೆಗಳಿಗೆ ಅನುಗುಣವಾಗಿ ವಿಸ್ತರಿಸುತ್ತಿರುವ ಧಾರ್ಮಿಕ ಪೀಠಗಳಲ್ಲಿ ಸುತ್ತೂರು ಮಠವೂ ಒಂದು. ಈ ಸಂಸ್ಥಾನದ ಗುರು ಪರಂಪರೆಯಲ್ಲಿ 24ನೇ ಪೀಠಾಧ್ಯಕ್ಷರಾದ ಇವರು ಸಾಹಿತ್ಯಕವಾಗಿ, ಶೈಕ್ಷಣಿಕವಾಗಿ ಹಾಗೂ ನಾಡಿನ ಸಮಸ್ತ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಹೀಗೆ ಅವರನ್ನು ಪರಿಚಯಿಸಿ, ಅಮೆರಿಕನ್ನಡ ಅಂತರ್ಜಾಲ ತಾಣವನ್ನು ಲೋಕಾರ್ಪಣೆ ಮಾಡಲು ವಿನಂತಿಸಿಕೊಂಡರು.
    ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ತರಳಬಾಳು ಬೃಹನ್ಮಠ, ಸಿರಿಗೆರೆ. ಯಾವುದೇ ವಿಷಯವನ್ನು ಸರಳವಾಗಿ ಮನಮುಟ್ಟುವಂತೆ ಪಂಡಿತರಿಗೆ, ಪಾಮರರಿಗೆ ಅರ್ಥವಾಗುವ ಹಾಗೆ ವಿಷಯವನ್ನು ನಿರೂಪಿಸುವುದರಲ್ಲಿ ಇವರು ನಿಸ್ಸೀಮರು. ಪ್ರಸ್ತುತ ಪಾಣಿನಿಯ ಸಂಸ್ಕೃತ ವ್ಯಾಕರಣ ಕಬ್ಬಿಣದ ಕಡಲೆಯನ್ನು ಸುಲಿದ ಬಾಳೆಯ ಹಣ್ಣಿನಂದದಿ ಮಾಡಿ ಸಂಸ್ಕೃತ ವ್ಯಾಕರಣವನ್ನು ಸುಲಭವಾಗಿ ಕಲಿಯಲು ದಾರಿ ತೋರಿಸಿದ್ದಾರೆ; ಈ ಮಹಾನುಭಾವನವರನ್ನು `ಸ್ನೇಹದಲ್ಲಿ ನಿಮ್ಮ ಹರಿ' ಮತ್ತು `ನಮ್ಮ ಕಾಶ್ಮೀರ' ಪುಸ್ತಕಗಳನ್ನು ಲೋಕಾರ್ಪಣೆ ಮಾಡಲು ಕೇಳಿಕೊಂಡರು.
    ಶ್ರೀ ವೀರೇಶಾನಂದ ಸ್ವಾಮಿಗಳು, ರಾಮಕೃಷ್ಣ ಆಶ್ರಮ, ಮೈಸೂರು. ಸ್ವಾಮಿ ವಿವೇಕಾನಂದರು ಎಲ್ಲ ಭಾಷೆಗಳಲ್ಲಿಯೂ ಪತ್ರಿಕೆಗಳನ್ನು ಆರಂಭಿಸಬೇಕು ಎಂದು ಬಯಸಿದ್ದರು. ಅದರಂತೆ ರಾಮಕೃಷ್ಣ ಆಶ್ರಮವು ಭಾರತದ ಹಲವಾರು ಮುಖ್ಯ ಭಾಷೆಗಳಲ್ಲಿ ಪತ್ರಿಕೆಗಳನ್ನು ಹೊರ ತರುತ್ತಿದೆ. ಅದರಲ್ಲಿ ಕನ್ನಡದ `ವಿವೇಕ ಪ್ರಭ'ವು ಜನವರಿ 2000 ರಿಂದ ಈ ಪತ್ರಿಕೆಯನ್ನು ಹೊರ ಬರುತ್ತಿದೆ. ಪ್ರತಿ ಸಂಚಿಕೆಯೂ ಒಂದು ವಿಶೇಷವೇ. ಶ್ರೀ ವೀರೇಶಾನಂದ ಮಹಾಸ್ವಾಮಿಗಳ ಶ್ರಮದ ಫಲವನ್ನು ತಿಳಿಸಿದ ನಾಗಲಕ್ಷ್ಮಿಯವರು, ಶ್ರೀಯುತರು ಹರಿಯವರು ರಚಿಸಿದ `ತಿರುಗಾಟ' ಮತ್ತು ನಾಗಲಕ್ಷ್ಮಿ ಹರಿಹರೇಶ್ವರ ಸಂಪಾದಿಸಿದ `ಹೊಂಬೆಳಕ ಹೊನಲು' ಪುಸ್ತಕಗಳನ್ನು ಲೋಕಾರ್ಪಣೆ ಮಾಡಲು ಬಿನ್ನವಿಸಿಕೊಂಡರು.
    ಪ್ರೊ| ಯೋಗಾನಂದ: ಪ್ರಸ್ತುತ ಜಯಚಾಮರಾಜೇಂದ್ರ ಇಂಜನಿಯರಿಂಗ್ ಕಾಲೇಜಿನಲ್ಲಿ ಗಣಿತ ಶಾಸ್ತ್ರ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು ಹರಿಯ ಕನಸಿನ ಕೂಸಾದ `ಅಮೆರಿಕನ್ನಡ ಅಂತರ್ಜಾಲ ತಾಣ'ದ ವಿನ್ಯಾಸಕರು; ಇವರನ್ನು ತಾಣದ ಪರಿಚಯ ಮಾಡಿಕೊಡುವಂತೆ ಕೇಳಿಕೊಂಡ ನಾಗಲಕ್ಷ್ಮಿಯವರು, ಇವರು ವೃತ್ತಿಯ ಜೊತೆಗೆ ವೇದ, ಪುರಾಣಗಳನ್ನು ಸಿಡಿಯ ರೂಪದಲ್ಲಿ ತಂದಿರುತ್ತಾರೆಂಬ ವಿಷಯವನ್ನು ತಿಳಿಸಿದರು. ನಶಿಸಿ ಹೋಗುತ್ತಿರುವ ಪುರಾತನ ಗ್ರಂಥಗಳನ್ನು ಪುನರ್ ನಿರ್ಮಾಣ ಮಾಡುವ ಮಹತ್ಕಾರ್ಯವನ್ನು ಕೈಗೆತ್ತಿಕೊಂಡಿರುವರೆಂಬುದನ್ನು ಸಭಿಕರಿಗೆ ತಿಳಿಸಿದರು. ಅಂತರ್ಜಾಲ ತಾಣದ ವಿನ್ಯಾಸದ ವಿವರಣೆಯನ್ನು ನೀಡಬೇಕೆಂದು ವಿನಂತಿಸಿಕೊಂಡರು.
    ಹರಿಯವರ ಹುಟ್ಟು ಹಬ್ಬದ ಸವಿನೆನಪಿನಲ್ಲಿ ಹರಿಯ ಪುಸ್ತಕಗಳಿಗೆ ಮುನ್ನುಡಿ ಬರೆದ ಮಹನೀಯರಿಗೆ, ಪ್ರಕಾಶಕರಿಗೆ ಮತ್ತು ವಿಶೇಷವಾಗಿ ಡಾ| ಎಚ್.ಕೆ.ರಾಮನಾಥ್, ಮಾಗಲು ಮಲ್ಲಿಕಾರ್ಜುನ ಮತ್ತು ಪ್ರಕಾಶ್ ಚಿಕ್ಕಪಾಳ್ಯ, ನಾಗರತ್ನ ಇವರುಗಳನ್ನು ಸನ್ಮಾನಿಸಲಾಯಿತು.
    ಮುನ್ನುಡಿಕಾರರು: ಪ್ರೊ| ಸಿ.ಪಿ.ಕೆ., ಡಾ| ಟಿ.ವಿ. ಸತ್ಯಾನಾರಾಯಣ, ವಿದ್ವಾನ್. ಎಚ್.ಎಂ. ನಾಗರಾಜರಾವ್, ಪ್ರೊ| ಎಚ್.ಎಸ್. ಹರಿಶಂಕರ್, ಡಾ| ಬಿ.ಬಿ. ರಾಜಪುರೋಹಿತ, ಜಯಪ್ಪ ಹೊನ್ನಾಳಿ, ರಂಗನಾಥ ಮೈಸೂರು, ಪ್ರೊ| ಸಿ. ನಾಗಣ್ಣ, ಡಾ| ನಿರಂಜನ ವಾನಳ್ಳಿ, ವಿಶೇಷವಾಗಿ ಡಾ| ಎಚ್. ಕೆ. ರಾಮನಾಥ್, ಮಾಗಲು ಮಲ್ಲಿಕಾರ್ಜುನ, ಪ್ರಕಾಶ್ ಚಿಕ್ಕಪಾಳ್ಯ, ಪ್ರಕಾಶನ ಸಂಸ್ಥೆಗಳು ಶಾರದಾ ಮಂದಿರ, ಸಮಾಜ ಪುಸ್ತಕಾಲಯ, ಕಾವ್ಯಾಲಯ, ಡಿ.ವಿ.ಕೆ. ಮೂರ್ತಿ, ಸಾಹಿತ್ಯ ಭಂಡಾರ, ಮನೋಹರ ಗ್ರಂಥಮಾಲೆ, ತಳುಕಿನ ವೆಂಕಣ್ಣಯ್ಯ ಸ್ಮಾರಕಗ್ರಂಥಮಾಲೆ, ನವಕರ್ನಾಟಕ ಪ್ರಕಾಶನ, ಸಂವಹನ, ಲಿಪಿ ಪ್ರಕಾಶನ, ರವೀಂದ್ರ ಪುಸ್ತಕಾಲಯ, ಅಕ್ಷರ ಪ್ರಕಾಶನ, ಗೀತಾ ಬುಕ್ ಹೌಸ್, ಕನ್ನಡ ವಿಜ್ಞಾನ ಪರಿಷತ್ತು, ಅಭಿವ್ಯಕ್ತಿ, ಸಪ್ನ ಬುಕ್ ಹೌಸ್, ಭಾರತೀ ಪ್ರಕಾಶನ, ಸರ್ವಜ್ಞ, ಸಂಸ್ಕೃತಿ, ಮಹಿಮಾ ಪ್ರಕಾಶನ ಈ ಮಹನೀಯರೆಲ್ಲರೂ ವೇದಿಕೆಯ ಮೇಲೆ ಆಸೀನರಾಗಿದ್ದುದೇ ಅಲ್ಲದೇ ತಮ್ಮ ಸರದಿಬಂದಾಗ ತ್ರಿಮೂರ್ತಿ ಮಹಸ್ವಾಮಿಗಳಿಂದ ಸನ್ಮಾನವನ್ನು ಸ್ವೀಕರಿಸಿದರು.
photo    ಆ ಸನ್ಮಾನದ ವೈಖರಿ ಹೀಗಿತ್ತು. ಅವರಿಗೆ ಹಾಕಿದ ಹಾರ, ಹೊದೆಸಿದ ಶಾಲು ಹಾಗೂ ಅವರಿಗಿತ್ತ ಹಣ್ಣುಗಳು ಎಲ್ಲದರಲ್ಲೂ ಒಂದು ವಿಶೇಷತೆ ಎದ್ದು ಕಾಣುತ್ತಿತ್ತು. ಹೂವಿನ ಹಾರವಾದರೆ ಅವು ಬಾಡುವುದಲ್ಲವೆ? ಆದ್ದರಿಂದ ಗಂಧದ ಕಂಪನ್ನು, ಸುವಾಸನೆಯನ್ನು ಸೂಸುವ ಗಂಧದ ಹಾರಗಳು; ಹಣ್ಣುಗಳು ಬಿಸಿಲಿನ ಬೇಗೆಗೆ ಹಾಳಾಗಬಹುದೆಂಬ ಕಾಳಜಿಯಿಂದ, ಆ ಭಾರವಾದ ಹಣ್ಣಿನ ಬುಟ್ಟಿಗಳ ಬದಲಾಗಿ ಬಾದಾಮಿ, ದ್ರಾಕ್ಷಿ ಮತ್ತು ಖರ್ಜೂರದಂತಹ ಡ್ರೈಫ್ರೂಟ್ ಡಬ್ಬಿಗಳು ಎಲ್ಲರ ಕೈ ಸೇರಿದುವು. ನಂತರ ತಿಳಿಯಿತು ಒಂದು ಸಾವಿರ ರೂಪಾಯಿನ ಕವರ್ ಸಹ ಅದರ ಮೇಲಿತ್ತು ಅಂತ. ಇದು ನಾಗಲಕ್ಷ್ಮಿಯವರ ಮುಂದಾಲೋಚನೆಯನ್ನೂ, ಜಾಣತನವನ್ನೂ ಎತ್ತಿ ತೋರಿಸಿದುವು. ಥಳ ಥಳನೆ ಹೊಳೆಯುವ, ಬಣ್ಣಬಣ್ಣದ ಶಾಲುಗಳು ನೋಡುಗರ ಕಣ್ಣಿಗೆ ಹಬ್ಬವನ್ನುಂಟುಮಾಡಿದುವು. ಸಾಂಪ್ರದಾಯಿಕವಾದ ಮೈಸೂರು ಪೇಟವನ್ನು ಧರಿಸಿದ ಸನ್ಮಾನಿತರೆಲ್ಲರೂ ಮಹಾರಾಜರಂತೆ ಕಂಡುಬಂದಿದ್ದರೆ ಅತಿಶಯೋಕ್ತಿಯೇನಲ್ಲ. ಸಮಾರಂಭದ ಸಾನ್ನಿಧ್ಯವನ್ನು ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ವಹಿಸಿಕೊಂಡು ಸ್ಥಗಿತಗೊಂಡಿದ್ದ `ಅಮೆರಿಕನ್ನಡ ಅಂತರ್ಜಾಲ' ತಾಣ ಆವೃತ್ತಿಯನ್ನು ಬಿಡುಗಡೆ ಮಾಡಿದರು. `ಸ್ನೇಹದಲ್ಲಿ ನಿಮ್ಮ ಹರಿ', `ನಮ್ಮ ಕಾಶ್ಮೀರ' ಪುಸ್ತಕಗಳನ್ನು ತರಳಬಾಳು ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಲೋಕಾರ್ಪಣೆ ಗೊಳಿಸಿದರು. `ತಿರುಗಾಟ' ಮತ್ತು `ಹೊಂಬೆಳಕ ಹೊನಲು' ಕೃತಿಗಳನ್ನು ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದ ವೀರೇಶಾನಂದ ಮಹಾಸ್ವಾಮಿಗಳವರು ಬಿಡುಗಡೆಗೊಳಿಸಿದರು. ಮುನ್ನುಡಿಕಾರರ ಪರವಾಗಿ ಡಾ| ಬಿ.ಬಿ. ರಾಜಪುರೋಹಿತ ಹಾಗೂ ಪ್ರಕಾಶಕರ ಪರವಾಗಿ ವಿಜ್ಞಾನ ಸಾಹಿತ್ಯ ಪರಿಷತ್ತಿನ ಶ್ರೀ ಸೂ. ಸುಬ್ರಹ್ಮಣ್ಯಂ ಅವರು ಮಾತನಾಡಿದರು. ಹರಿಹರೇಶ್ವರರಿಗೆ, ಡಿಸೆಂಬರ್ 25. 2010 ರಂದು ತಮ್ಮ 10 ಪುಸ್ತಕಗಳನ್ನು ಬಿಡುಗಡೆಗೊಳಿಸಿ 10 ಜನ ಮುನ್ನುಡಿಕಾರರಿಗೆ ಮತ್ತು ಅವರ ಸಂಪರ್ಕಕಕ್ಕೆ ಬಂದಿದ್ದ ಮತ್ತೂ 10 ಜನರಿಗೆ, ಒಟ್ಟು 20 ಪ್ರಕಾಶಕರಿಗೆ ಸನ್ಮಾನ ಮಾಡಬೇಕು; ಹಾಗೂ ಪ್ರಕಾಶನ ಸಂಸ್ಥೆಗಳು ನಡೆದು ಬಂದ ದಾರಿಯನ್ನು ಒಂದು ದಾಖಲೆ ಗ್ರಂಥವನ್ನಾಗಿ ಮಾಡಬೇಕು ಎಂಬ ಕನಸೊಂದಿತ್ತು. ಹರಿಯ ಕನಸನ್ನು ಸಾಕಾರಗೊಳಿಸಿದ ಕೀರ್ತಿ ಅವರ ಮಡದಿ ನಾಗಲಕ್ಷ್ಮೀಗೆ ಸಲ್ಲಬೇಕು.
    ಆ ದಿನದ ಸಮಾರಂಭದಲ್ಲಿ ನಿರೂಪಣಾಕಾರರಾದ ಅಶೋಕ್ ಮತ್ತು ವಾದಿರಾಜ, ಟ್ಯಾಕ್ಸಿ ಡ್ರೈವರ್ ದಿವಾಕರ್ ಮತ್ತು ಎಲ್ಲರಿಗೂ ತಿಂಡಿ ಊಟದ ಸರಬರಾಜಿನ ಹೊಣೆಹೊತ್ತಿದ್ದ ಶ್ರೀಕಾಂತ್ ಇವರನ್ನೂ ಸನ್ಮಾನಿಸಲಾಯಿತು. ಪ್ರೊ| ನಾಗಣ್ಣ ಅವರು ತಾವೇ ರಚಿಸಿದ ಮನೋಜ್ಞವಾದ ಕವಿತೆಯೊಂದನ್ನು ಪ್ರಸ್ತುತ ಪಡಿಸಿದರು. ಮತ್ತೊಂದು ಮುಖ್ಯ ಘಟನೆ ಎಂದರೆ ಹರಿಹರೇಶ್ವರ ಅವರ 75ನೆಯ ಹುಟ್ಟು ಹಬ್ಬದ ಅಂಗವಾಗಿ, ಅವರ ಕನ್ನಡ ಪ್ರೀತಿಯ ದ್ಯೋತಕವಾಗಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಾ ಧ್ವನಿಯನ್ನು ಒದಗಿಸುವ ಮೈಕ್ಸೆಟ್ (ಧ್ವನಿವರ್ಧಕ)ವನ್ನು ನಾಗಲಕ್ಷ್ಮಿಯವರು ದಾನವಾಗಿ ನೀಡಿರುತ್ತಾರೆ. ಈ ಮೂಲಕ ಕನ್ನಡದ ಕಣ್ಮಣಿ ಹರಿಹರೇಶ್ವರರ ಧ್ವನಿ ಸದಾಕಾಲವೂ ಮೊಳಗುತ್ತಿರಲಿ ಎಂದು.
    ತ್ರಿಮೂರ್ತಿ ಮಹಾಸ್ವಾಮಿಗಳ ಹಿತನುಡಿಗಳ ಸಾರಾಂಶ ಹೀಗಿದೆ: `ಸ್ನೇಹದಲ್ಲಿ ನಿಮ್ಮ ಹರಿ' ಹೊತ್ತಗೆಯನ್ನು ಲೋಕಾರ್ಪಣೆಗೊಳಿಸಿದ ಶ್ರೀ ಶಿವಮೂರ್ತಿ ಶಿವಚಾರ್ಯ ಸ್ವಾಮಿಗಳು ಈ ಸಂಸ್ಕರಣ ಗ್ರಂಥ ಹೊರಬರಲು ಕಾರಣಕರ್ತರಾದ ಅಮೆರಿಕದ ಗೆಳೆಯರಾದ ಡಾ| ಮೈ.ಶ್ರೀ. ನಟರಾಜ್, ಶ್ರೀವತ್ಸ ಜೋಷಿ, ಕಾವೇರಿ ಕೃಷ್ಣಮೂರ್ತಿ, ಸಂಜಯ್ ರಾವ್, ಅಶ್ವಥ್ ಎನ್. ರಾವ್ ಮತ್ತಿತರರನ್ನು ಶ್ಲಾಘಿಸಿದರು. ಗೀತಾ ಬುಕ್ ಹೌಸ್ ನ ಶ್ರೀ ಸತ್ಯನಾರಾಯಣ ಅವರು ಬಹಳ ಮುತುವರ್ಜಿ ತೆಗೆದುಕೊಂಡು ಇದನ್ನು ಪ್ರಕಟಿಸಿದ್ದಾರೆ ಎಂದರು. ಈ ಪುಸ್ತಕವು ಒಂದು ಹೊಗಳು ಸಾಹಿತ್ಯವಲ್ಲ; ಒಂದು ಉತ್ತಮ ಗ್ರಂಥ ಎಂದರು. ಪುಸ್ತಕದಲ್ಲಿರುವ ಹಲವು ಲೇಖನಗಳ ಬಗ್ಗೆ ಮಾತನಾಡಿದ ಅವರು ಈ ಹೊತ್ತಗೆಯು ಹರಿಯವರ ಸಂಪೂರ್ಣ ವ್ಯಕ್ತಿತ್ವದ ಅರಿವು ಮೂಡಿಸುತ್ತದೆ ಎಂದರು. ಅವರಲ್ಲಿದ್ದ ಪ್ರೀತಿ, ಪ್ರೇಮ, ವಿಶ್ವಾಸ, ಗೆಳೆತನದ ಛಾಪು ಇಲ್ಲಿದೆ ಎಂದ ಅವರು ಹರಿಯವರಲ್ಲಿ ಹಾಸ್ಯದ ಬಗ್ಗೆ ಒಲವಿತ್ತು ಎನ್ನುತ್ತಾ ಡಾಕ್ಟರೇಟ್ ಗಳ ಬಗ್ಗೆ ವ್ಯಾಖ್ಯಾನಿಸಿದರು. `ಎಲ್ಲಾದರೂ ಇರು ಎಂತಾದರೂ ಇರು ಆದರೆ ನೀನು ಕನ್ನಡವಾಗಿರು' ಎನ್ನುವುದೇ ಹರಿಯವರ ಜಪವಾಗಿತ್ತು. ಬೆಳಗಾವಿಯಲ್ಲಿ ಕನ್ನಡ ಸಮ್ಮೇಳನ ಆಯೋಜಿತವಾಗಿರುವ ದಿನವೇ ಹರಿಯವರ ಹುಟ್ಟು ಹಬ್ಬ ಬಂದಿರುವುದು ಅರ್ಥಪೂರ್ಣ ಎಂದರು. ಅಮೆರಿಕ + ಕನ್ನಡ= ಅಮೆರಿಕನ್ನಡವಾಗಿದೆ. ಇಲ್ಲಿ ಸಾಮಾನ್ಯ ಪದವಾದ 'ಕ' ಎನ್ನುವುದು ಅಲ್ಲಿ ಕನ್ನಡ ಸಮ್ಮೇಳನದ ಲಾಂಛನವೂ ಆಗಿರುವುದು ವಿಶೇಷವಲ್ಲವೇ ಎಂದರು. ಹರಿಹರೇಶ್ವರರು ಜೀವಿಸಿದ್ದಿದ್ದರೆ ಅವರು ಈ ದಿವಸ ಇಲ್ಲಿ ಇರುತ್ತಿರಲಿಲ್ಲ; ಕನ್ನಡದ ಸೇನಾನಿಯಾದ ಅವರು ಬೆಳಗಾವಿಯಲ್ಲಿ ಬಗಲಲ್ಲಿ ಜೋಳಿಗೆಯೊಂದಿಗೆ ಸಂಭ್ರಮದಿಂದ ಓಡಿಯಾಡುತ್ತಿದ್ದಿರ ಬಹುದಲ್ಲವೇ? ಎಂದಾಗ ಎಲ್ಲರ ಕಣ್ಣುಗಳೂ ತೇವಗೊಂಡವು. ಮಗನೋಪಾದಿಯಲ್ಲಿ ಹರಿಹರೇಶ್ವರ ಮತ್ತು ನಾಗಲಕ್ಷ್ಮೀಯವರ ಅಳಿಯಂದಿರಾದ ಗಿರೀಶ್ ರವರು ಅಲ್ಲಿ ಅನೇಕ ಕೆಲಸಗಳನ್ನು ನಿರ್ವಹಿಸುತ್ತಿದ್ದುದನ್ನು ಶ್ಲಾಘಿಸಿದರು. ಹರಿಯವರ ಸಂಸ್ಮರಣೆಯಲ್ಲಿ ನಾಗಲಕ್ಷ್ಮಿಯವರು ಇಂತಹ ಒಂದು ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ತಮ್ಮ ಮನದಾಳದ ಸಂತಸವನ್ನು ವ್ಯಕ್ತಪಡಿಸಿದರು. ತರಳಬಾಳು ಶ್ರೀಯವರನ್ನು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಸನ್ಮಾನಿಸಿದರು.
    ರಾಮಕೃಷ್ಣ ಆಶ್ರಮದ ಶ್ರೀ ವೀರೇಶಾನಂದ ಸ್ವಾಮಿಗಳು ತಾವು ಹರಿಯವರ ವ್ಯಕ್ತಿತ್ವಕ್ಕೆ ಮಾರುಹೋಗಿದ್ದಾಗಿ ತಿಳಿಸಿದರು. ಆ ದಿನ ಶ್ರದ್ಧಾಂಜಲಿ ಸಮಾರಂಭದಂತಿಲ್ಲವೆಂದೂ ಒಂದು ಸಂತೋಷಕೂಟದಂತಿರುವುದಾಗಿಯೂ ಹೇಳಿದರು. ಪ್ರಕಾಶಕರ, ಮುನ್ನುಡಿಕಾರರ ಸನ್ಮಾನವು ಹೇಗೆ ನಡೆಯ ಬೇಕೆಂದು ಅವರು ಅಂದುಕೊಂಡಿದ್ದರೋ ಇಲ್ಲಿ ಹಾಗೆಯೇ ಎಲ್ಲವೂ ಜರುಗುತ್ತಿದೆ ಎಂದರು. ಒಂದಿನಿತೂ ಅಜಾಗರೂಕತೆ, ಅಶಿಸ್ತುಗಳಿಲ್ಲದೇ ಕಾರ್ಯಕ್ರಮ ನಡೆದು ಹೋಗುತ್ತಿದೆ ಎಂದರು. ನಾಗಲಕ್ಷ್ಮಿಯವರು ಶಿಸ್ತನ್ನು ಅಮೆರಿಕದಿಂದ ನಮಗೆ ತಂದಿದ್ದಾರೆ ಎಂದರು. ಹರಿಯವರು ಭೌತಿಕವಾಗಿ ಇಲ್ಲಿ ಇಲ್ಲದಿರುವುದು ಒಂದೇ ಈ ಸಮಾರಂಭದ ಕಪ್ಪು ಚುಕ್ಕೆ ಎಂದರು. ಹರಿಯವರ ಸಹೃದಯತೆ, ಭಕ್ತಿ ಇವುಗಳನ್ನು ಜ್ಞಾಪಿಸಿಕೊಂಡ ಅವರು ಹರಿಯವರೊಡನೆ ಅವರ ಒಡನಾಟದ ಬಗ್ಗೆ ತಿಳಿಸುತ್ತ ಹಲವು ಅವಿಸ್ಮರಣೀಯ ಸನ್ನಿವೇಶಗಳನ್ನು ತಿಳಿಸಿದರು. ನಡೆನುಡಿಯಲ್ಲಿ ಹರಿಯವರ ಸರಳತೆಯನ್ನು ಗಮನಿಸಿದ್ದ ಸ್ವಾಮಿಗಳು ಹರಿಯವರಿಗೆ ಆಧ್ಯಾತ್ಮದ ಬಗ್ಗೆ ಇದ್ದಂತಹ ಒಲವನ್ನು ತಿಳಿಸಿದರು. ಅವರ ಆಳವಾದ ಜ್ಞಾನವನ್ನು ಕೊಂಡಾಡಿದರು. `ತಿರುಗಾಟ' ಪುಸ್ತಕದ ಬಗ್ಗೆ ಮಾತನಾಡುತ್ತಾ ಅವರು ಒಬ್ಬ ವಾಹನ ಚಾಲಕನನ್ನು ತಮ್ಮಂತೆಯೇ ಒಬ್ಬ ಮನುಷ್ಯನೆಂದು ಗುರುತಿಸಿ, ಅವನಿಗೂ ಸುಖ, ಸಂತೋಷ, ದುಃಖ ದುಮ್ಮಾನಗಳಿರುತ್ತವೆ; ಸಂಕಟಗಳಿರುತ್ತವೆ ಎಂಬುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ ಎಂದರು. ಇದೊಂದು ಆತ್ಮ ಚರಿತ್ರೆಯಂತಿದೆ ಎಂದರು. ಇಲ್ಲಿ ಹರಿಯವರ ಮಾನವೀಯ ಪ್ರಜ್ಞೆ ಎದ್ದುಕಾಣುತ್ತದೆ ಎಂದರು. ವಿವಿಧ ರೀತಿಯ ಸಾಹಿತ್ಯ ಪ್ರಾಕಾರಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿರುವ ಅವರ ಸಾಧನೆಯನ್ನು ಸ್ಮರಿಸಿದರು. ವೀರೇಶಾನಂದ ಮಹಾಸ್ವಾಮಿಗಳನ್ನು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಮತ್ತು ತರಳಬಾಳು ಮಹಾಸ್ವಾಮಿಗಳೂ ಸನ್ಮಾನಿಸಿ ಗೌರವಿಸಿದರು.
    ಶ್ರೀ ಶ್ರೀ ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮಿಗಳು ತಮ್ಮ ಭಾಷಣದಲ್ಲಿ ಮೊತ್ತ ಮೊದಲು ಸಾಹಿತಿಗಳನ್ನೂ, ಪ್ರಕಾಶಕರನ್ನೂ ಅಭಿನಂದಿಸಿದರು; ಹರಿಯವರ ಪರಿಚಯವಾದದ್ದನ್ನು ನೆನಸಿಕೊಳ್ಳುತ್ತಾ, ಅವರೊಟ್ಟಿಗೆ ತಾವು ಕಳೆದ ಹಲವು ಸುಂದರ ಕ್ಷಣಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು. ಸಮಾನ ಮನಸ್ಕರಾದ ಹರಿದಂಪತಿಗಳನ್ನು ಶ್ಲಾಘಿಸುತ್ತಾ ಇಂತಹ ದಂಪತಿಗಳು ಅಪೂರ್ವ ಎಂದರು. ಭಾಗವತ ಗ್ರಂಥದ ಲೋಕಾರ್ಪಣಾ ಸಮಾರಂಭದ ಹಲವು ಕ್ಷಣಗಳನ್ನು ಅವರು ಪ್ರೇಕ್ಷಕರೊಡನೆ ಹಂಚಿಕೊಂಡರು. ಹರಿಯವರು ಆಯೋಜಿಸಿದ್ದ ಆ ಕಾರ್ಯಕ್ರಮದ ಅಚ್ಚುಕಟ್ಟುತನವನ್ನು ನೆನಸಿಕೊಂಡರು. ಹರಿಯವರ ಹಮ್ಮು ಬಿಮ್ಮುಗಳಿಲ್ಲದ ವ್ಯಕ್ತಿತ್ವದ ಬಗ್ಗೆ, ಸರಳ ಜೀವನದ ಬಗ್ಗೆ ಮಾತನಾಡಿದರು. ಹೆಸರಿಗೆ ತಕ್ಕಹಾಗೆ ಹರಿಹರೇಶ್ವರ ಅವರು ಶಿವ ವಿಷ್ಣುವಿನ ಸಮನ್ವಯದ ಹಾಗೆ ಎಂದರು. ಸಹೃದಯ ಭಾವನೆಯ ದಂಪತಿಗಳು ತಮ್ಮ ನೆಲದಲ್ಲಿ ಬಂದಿಳಿದು ಸಾಹಿತ್ಯ ಕೃಷಿಯನ್ನು ಕೈಗೊಂಡರು; ಈ ಸಹೃದಯ ದಂಪತಿಗಳು ಅಮೆರಿಕದಲ್ಲಿ ಎಷ್ಟು ಸಂತೋಷದಿಂದ ಬದುಕಿ ಬಾಳಿದರೋ ಮೈಸೂರಿನಲ್ಲಿಯೂ ಹಾಗೆಯೇ ಬಾಳಿದರು. ಅಂತರ್ಜಾಲದ ಬಗ್ಗೆ ಮಾತನಾಡಿದ ಅವರು `ಈ ಅಂತರ್ಜಾಲದ ಅನಾವರಣವು ಮೈಸೂರಿನಿಂದ ವಿಶ್ವಕನ್ನಡ ಸಮ್ಮೇಳನಕ್ಕೆ ಹರಿಹರೇಶ್ವರ ನಾಗಲಕ್ಷ್ಮಿಯವರ ಕೊಡುಗೆ' ಎಂದರು. ಮುನ್ನುಡಿಕಾರರನ್ನು ಸನ್ಮಾನಿಸುವ ಒಂದು ಉತ್ತಮ ಪದ್ಧತಿಗೆ ಈ ದಂಪತಿಗಳು ನಾಂದಿಹಾಡಿದ್ದಾರೆ ಎಂದರು. ಸಾಂಪ್ರದಾಯಿಕವಾಗಿ ಎಲ್ಲರನ್ನೂ ಸನ್ಮಾನಿಸಿ, ಅಮೆರಿಕದ ಶಿಸ್ತನ್ನು ಕಾಪಾಡಿದ್ದಾರೆ; ಮತ್ತು ಭಾರತದ ಸಂಪ್ರದಾಯವನ್ನೂ ಉಳಿಸಿಕೊಂಡಿದ್ದಾರೆ ಎಂದರು. ಬೆಳಗಾವಿ ಸಮ್ಮೇಳನದಲ್ಲಿ ಭಾಗವಹಿಸದಿದ್ದರೂ ನಾವೆಲ್ಲರೂ ಈ ದಿನ ವಿಶ್ವ ಕನ್ನಡ ಸಮ್ಮೇಳನದ ಒಂದು ಭಾಗವಾಗಿ ಇಲ್ಲಿ ಸೇರಿದ್ದೇವೆ ಎಂದಾಗ ನಾವೆಲ್ಲರೂ ಅತ್ಯಂತ ಭಾವುಕರಾದೆವು. ಇಂತಹ ಒಂದು ಕನ್ನಡ ಸಮ್ಮೇಳನವನ್ನು ಆಯೋಜಿಸಿದಂತಹ ನಾಗಲಕ್ಷ್ಮಿಯವರು ಅವರ ಕುಟುಂಬಕ್ಕೆ ಹಿರಿಯರಾದ ತಮ್ಮ ಚಿಕ್ಕಪ್ಪ ಚಿಕ್ಕಮ್ಮ ನವರನ್ನೂ ಆತ್ಮೀಯವಾಗಿ ಸನ್ಮಾನಿಸಿದರು. `ತೇನವಿನಾ ತೃಣಮಪಿ ನಚಲತಿ' ಎನ್ನುತ್ತಾ ತಮ್ಮ ಸ್ವಗೃಹದಲ್ಲಿ ಸದಾಕಾಲವೂ ತಮ್ಮೊಂದಿಗಿರುವ, ತಮ್ಮ ಒಡನಾಡಿಯಾದ ನಾಗರತ್ನಳನ್ನು ಅವರು ಗೌರವಿಸಿ ಸನ್ಮಾನಿಸಿದಾಗ ಪ್ರೇಕ್ಷಕವರ್ಗದಲ್ಲಿ ಚಪ್ಪಾಳೆಗಳ ಸುರಿಮಳೆಯಾಯಿತು. ಅವಳಿಲ್ಲದೇ ತಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಈ ರೀತಿಯಾಗಿ ಅಕೆಗೆ ಮನವರಿಕೆ ಮಾಡಿದರು. ಇಂತಹ ಯಶಸ್ವೀ ಕಾರ್ಯಕ್ರಮವನ್ನೂ ಆಯೋಜಿಸಿದ್ದ ನಾಗಲಕ್ಷ್ಮಿಯವರು ತಮ್ಮ ವಂದನಾರ್ಪಣೆಯಲ್ಲಿ ಸಮಯದ ಪ್ರಜ್ಞೆಯನ್ನು ಹೊಂದಿರುವ ಮಹಾಸ್ವಾಮಿಗಳೇ ಕಾರಣ; ಸನ್ಮಾನಿತರೇ ಕಾರಣ; ಭಾಗವಹಿಸಿದ ಅಭಿಮಾನಿ ಪ್ರೇಕ್ಷಕರೇ ಕಾರಣ ಎಂದು ಎಲ್ಲ ಹೆಮ್ಮೆಯನ್ನೂ ನಮ್ಮ ಮೇಲೆ ಹೊರಿಸಿ ನಿರಾಳವಾದದ್ದು ಮನಮುಟ್ಟುವಂತಿತ್ತು. ಮರೆತ ಮಾತು: ನಾಗಲಕ್ಷ್ಮಿಯವರನ್ನೂ ಸಹ ಆಸನದಲ್ಲಿ ಕುಳ್ಳಿರಿಸಿ ಆ ಮೂವರು ಮಹನೀಯರೂ ಶಾಲು ಹೊದಿಸಿ ಆಕೆಗೆ ಸನ್ಮಾನ ಮಾಡಿದ್ದು ಹೃದಯಂಗಮ ದೃಶ್ಯವಾಗಿತ್ತು. ನಿಗದಿಪಡಿಸಿದ ವೇಳೆಗೆ ಸರಿಯಾಗಿ ಪ್ರಾರಂಭವಾದ ಈ ಅಭೂತಪೂರ್ವ ಕಾರ್ಯಕ್ರಮವು ಸಮಯಕ್ಕೆ ಸರಿಯಾಗಿ ಮುಕ್ತಾಯಗೊಂಡಿತು.
    ನಾಗಲಕ್ಷ್ಮಿಯವರು ಎಲ್ಲರನ್ನೂ ಊಟಮಾಡಿಕೊಂಡೇ ಹೋಗಬೇಕೆಂದು ಕಳಕಳಿಯಿಂದ ಬಿನ್ನವಿಸಿಕೊಂಡರೆ ಇಲ್ಲವೆನ್ನಲಾದೀತೇ? ಜಹಾಂಗೀರು, ರವೆ ಇಡ್ಲಿ, ಅದಕ್ಕೆ ಮೇಲೋಗರ ಮತ್ತು ಚಟ್ನಿ, ಅರಳು ಸಂಡಿಗೆ; ಇವುಗಳೊಡನೆ ಚಿತ್ರಾನ್ನ ಮತ್ತು ಮೊಸರನ್ನಗಳ ಪುಷ್ಕಳ ಭೋಜನ, ಜೊತೆಗೆ ಲೋಕಾರ್ಪಣೆಗೊಂಡ `ಸ್ನೇಹದಲ್ಲಿ ನಿಮ್ಮ ಹರಿ' ಪುಸ್ತಕವನ್ನೂ ನೀಡಿದರು. ಅವರ ಆತಿಥ್ಯವನ್ನು ಸ್ವೀಕರಿಸಿದ ನಾವೆಲ್ಲರೂ ಸಂತೃಪ್ತರಾಗಿ ಕಾರ್ಯಕ್ರಮದ ಆಗುಹೋಗುಗಳನ್ನು ಮೆಲುಕು ಹಾಕುತ್ತಾ ನಮ್ಮ ನಮ್ಮಮನೆಗಳತ್ತ ಸಾಗಿದೆವು. ಕನ್ನಡ ಸಮ್ಮೇಳನಕ್ಕೆ ಹೋಗಲು ಆಗದಿದ್ದರೇನಂತೆ ಇದಾವ ಕನ್ನಡ ಸಮ್ಮೇಳನಕ್ಕೆ ಕಡಿಮೆ? ಎನ್ನುವ ಭಾವನೆ ಎಲ್ಲರ ಮನದಲ್ಲಿ ತಾಂಡವವಾಡುತ್ತಿದ್ದರೆ ಅತಿಶಯೋಕ್ತಿಯೆನಲ್ಲ!!
*-ಜಯಂತಿ ಅಮೃತೇಶ್
`ಕೃತ್ತಿಕ', ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com