ಅಮೆರಿಕನ್ನಡ
Amerikannada
ಮೂರು ದಿನದ ಬಾಳು
ಶಿಕಾರಿಪುರ ಹರಿಹರೇಶ್ವರ, ಮೈಸೂರು
ಜೀವನದಲ್ಲಿ ‘ಶ್ರೇಯಸ್ಸು’ ಮತ್ತು ‘ಪ್ರೇಯಸ್ಸು’ ಎಂಬ ಎರಡು ಗುರಿಗಳು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತವೆ ಎನ್ನುತ್ತಾರೆ. ‘ಪ್ರೇಯಸ್ಸು’ ಎಂದರೆ, ಇಲ್ಲಿ ಇದೀಗ ಸಿಗುವ ಐಹಿಕ ಸುಖ, ದೈಹಿಕವಾಗಿ ಮಾನಸಿಕವಾಗಿ ನಾವು ಅನುಭವಿಸ ಬಹುದಾದ ಎಲ್ಲ ಆನಂದ. ಇದನ್ನು ಮೀರಿದ, ಇಲ್ಲಿಂದ ನಾವು ಮರೆಯಾದಮೇಲೂ ನಮ್ಮ ಪಾಲಿಗೆ ಉಳಿಯುವ ಮಧುರ ಭಾವವೇ ‘ಶ್ರೇಯಸ್ಸು’. ಕಠೋಪನಿಷತ್ತಿನಲ್ಲಿ ಈ ಬಗ್ಗೆ ಒಂದು ಮಾತು ಬರುತ್ತದೆ: ನಮ್ಮ ಜೀವನ-ಪಥದಿ ಒಂದಲ್ಲ ಒಂದು ದಿನ
ಆ ಕವಲು ದಾರಿಯ ಬುಡವ ಸಂಧಿಸಲೇ ಬೇಕು;
ಆಗ ಶ್ರೇಯ-ಪ್ರೇಯವು ಬಂದು
ಕೈ ಮುಗಿದು ಕೇಳುವುವು:
“ಇತ್ತ ಬಾ, ಇತ್ತ ಬಾ, ನನ್ನತ್ತ ಬಾ ಬಾ”ರೆಂದು;
ದೂರದೃಷ್ಟಿಯ ಧೀರ ‘ಶ್ರೇಯಸ್ಸ’ ಬಯಸಿದರೆ,
ನಡೆವ ಮಂದಮತಿ ಬರಿ ಯೋಗಕ್ಷೇಮದ
‘ಪ್ರೇಯಸ್ಸಿ’ನೆಡೆಗೆ!

ಮನುಷ್ಯನ ಹತ್ತಿರ ಬಂದ ಶ್ರೇಯಸ್ಸು- ಪ್ರೇಯಸ್ಸುಗಳು “ನನ್ನನ್ನು ಆರಿಸಿಕೋ, ನನ್ನನ್ನು ಆರಿಸಿಕೋ’- ಎಂದು ಕೇಳಿಕೊಳ್ಳುತ್ತವೆಯಂತೆ. ವಿವೇಕಿಯಾದವನು/ಳು ಶ್ರೇಯಸ್ಸನ್ನೇ ಆರಿಸಿಕೊಳ್ಳುತ್ತಾನೆ/ಳೆ, ಎಂಬ ಭಾವ. ಇದು ಏಕೆ? ಎಲ್ಲರಿಗೂ ಗೊತ್ತಿದ್ದಂತೆ, ನಮಗೆ ಕೊನೆಗೆ ನೆನಪಿನಲ್ಲಿ ಉಳಿಯ ಬಹುದಾದದ್ದು/ ಉಳಿಯುವುದು ಒಬ್ಬ ಮನುಷ್ಯ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕೆಲಸಗಳೇ ವಿನಹಾ ಆ ಮನುಷ್ಯನ ಗಾತ್ರ, ತೂಕ, ಎತ್ತರ ಮುಂತಾದ ದೇಹಕ್ಕೆ ಸಂಬಂಧಿಸಿದ ವಿವರಗಳಲ್ಲ; ಆ ವ್ಯಕ್ತಿ ಅನುಭವಿಸಿರಬಹುದಾದ ಸುಖ-ಸಂತೋಷಗಳಲ್ಲ. ಆತ ಮಾಡಿದ, ತೊಡಗಿದ ಕೆಲಸಗಳಿಂದ ಆ ವ್ಯಕ್ತಿಗೆ ಒಳ್ಳೆಯ ಅಥವಾ ಕೆಟ್ಟ ಹೆಸರು ಬಂದಿರಬಹುದು, ಜನಗಳಿಗೆ ಉಪಕಾರ ಅಥವಾ ಅಪಕಾರ ಆಗಿರಬಹುದು. ಇವನ್ನು ಜನ ನೆನೆಯುತ್ತಾರೇ ವಿನಾ ಬೇರೆಯದನ್ನ ಅಲ್ಲ. ಇದೇ ಗತಿಸಿದ ವ್ಯಕ್ತಿ ಗಳಿಸಿದ ಶ್ರೇಯಸ್ಸು, ಕೀರ್ತಿ ಅಥವಾ ಅಪಕೀರ್ತಿ. ಕವಿ ಸಾದಿ ಹೇಳಿದ ಮಾತನ್ನೂ ನೆನಪಿಗೆ ತಂದುಕೊಳ್ಳೋಣ: ಹುಟ್ಟುತ್ತಾ ಬಂದಾಗ, ನಾವು ಅಳುತ್ತಿದ್ದೆವು; ಹತ್ತಿರದ ಬಂಧುಗಳು ನಗುತ್ತಾ ಸಂತೋಷಿಸುತ್ತಿದ್ದರು. ಬಾಳನ್ನ ಹೇಗೆ ಕಳೆಯಬೇಕೆಂದರೆ, ಸಾಯುವ ವೇಳೆ ನಾವು ನಗು ನಗುತ್ತಾ ಕೊನೆಯುಸಿರೆಳಯಬೇಕು; ಸುತ್ತಲೂ ನೆರೆದವರು ಕಣ್ಣೀರ್ಗರೆ ಯುತ್ತಿರಬೇಕು! ಇದನ್ನೇ ‘ಶರಣರ ಗುಣವನ್ನ ಮರಣದಲ್ಲಿ ನೋಡು’ ಎಂದಾಗ, ಶ್ರೀಮದ್ ಭಾಗವತದ ಕವಿ ಚಮತ್ಕಾರ-ಪೂರ್ವಕವಾಗಿ ‘ತಮ್ಮದಲ್ಲದ ದೇಹವನು ಬಿಟ್ಟು ಹೋದುದಾದರೂ ಎಂತು?’- ಎಂದು ಈ ಬಗ್ಗೆ ಪ್ರಶ್ನಿಸುವುದನ್ನು ಕೇಳಿ:
ತಮಗಾಗಿ ಜೀವಿಸದೆ ಪರರಿಗೇ ಇದ್ದಂಥವರು ಇವರು,
ಎಲ್ಲರುನ್ನತಿಯನ್ನ ಮೂಲೋಕದೊಳಿತ ಬಯಸುತಿದ್ದವರು,
ಅನುದಿನವೂ ಮನಸಾರೆ ಹಾಡಿ ಈ ಹೊಗಳಬೇಕಾದವರು-
ಯಾರ ಕೇಳದೆ ದೇಹ ಬಿಟ್ಟು ಹೋದುದಾದರೂ ಹೇಗೆ?

“ಮಾಡ ಬೇಕಾದ್ದನ್ನೆಲ್ಲಾ ಮಾಡಿ ಮುಗಿಸಿದವರು, ತಮಗೆ ಇಷ್ಟನಾದ ಅತಿಥಿಯನ್ನು ಸ್ವಾಗತಿಸಲು ಕಾದಿರುವಂತೆ, ಸಾವನ್ನು ನಿರೀಕ್ಷಿಸುತ್ತಾರೆ” (ಕೃತಕೃತ್ಯಾಃ ಪ್ರತೀಕ್ಷ್ಯನ್ತೇ ಮೃತ್ಯುಂ ಪ್ರಿಯಂ ಇವ ಅತಿಥಿಮ್|)- ಎಂಬ ಮಾತೊಂದಿದೆ. ಅದಕ್ಕೆ ಪೂರಕವಾಗಿ ಇಲ್ಲಿ ನೋಡಿ:
ಮೃತ್ಯುವಿಗೆ ಭಯಪಡುವೆ, ಮೂಢ, ನೀ ಆಶಿಸುವೆ:
ಯಮ ನನ್ನ ಬಿಟ್ಟಾನು; ಪಾಪ!, ಹೆದರಿದನೆಂದು;
ಇದು ಗುಟ್ಟು:
ಮುಟ್ಟನೋ ಆ ಹುಟ್ಟದವನನ್ನ ಯಮ,
ಮತ್ತೆ ಹುಟ್ಟದ ಹಾಗೆ ನೀ ಬಾಳಿ ಬದುಕೋ!

ಅಂದರೆ, ನಾವು ಇಲ್ಲಿ ಹೇಗೆ ಬಾಳುತ್ತೇವೋ ಅದನ್ನ ಅವಲಂಬಿಸಿದೆ ನಮ್ಮ ಮುಂದಿನ ಬಾರಿಯ ಪ್ರಯಾಣ- ಎಂಬ ಭಾವ, ಪುನರ್ಜನ್ಮವನ್ನು ನಂಬಿದವರ ವಿಶ್ವಾಸ. ಅಥವಾ, ಸಂಸ್ಕೃತ ನಾಟಕಕಾರ ಭಾಸ ಕವಿ ತನ್ನ ಪಾಂಚರಾತ್ರದಲ್ಲಿ ಹೇಳಿದಂತೆ,
“ಮಾಡಿದೊಳ್ಳೆಯದಕ್ಕೆ ಸತ್ತು, ಸ್ವರ್ಗಕೆ ಹೋದ”-
ಎಂಬ ಮಾತೇನಿಹುದು, ಅದು ಹಸಿಯ ಸುಳ್ಳು!
ಸ್ವರ್ಗ-ನರಕಗಳೆಲ್ಲ ಪರೋಕ್ಷ ಬೇರೆಲ್ಲೋ ಇಲ್ಲ
-ಎಲ್ಲವೂ ಫಲಿಸುವುದು ಇಲ್ಲೆ ಇಲ್ಲೇ!

ಇನ್ನೇಕೆ ಮತ್ತೆ ಹುಟ್ಟುವ ಮಾತು? ಜೀವನದ ಹಲವು ಹೆದ್ದಾರಿಗಳಲ್ಲಿ ತೆವಳಿ, ಕುಪ್ಪಳಿಸಿ, ನಡೆದು, ಓಡಿ ಏನೇನೋ ಪ್ರಾಣಿಗಳಾಗಲಿಲ್ಲವೇ ನಾನು? ಎಂಥದೆಂತದೋ ಪಾತ್ರಗಳನ್ನು ವಹಿಸಿ, ನಾಟಕವಾಡಲಿಲ್ಲವೇ ನಾನು? -ಎನ್ನುತ್ತಾ,
ಮತ್ತೆ ಹುಟ್ಟುವುದೇನೂ ಬೇಕಿಲ್ಲ, ನಾನಿಲ್ಲೆ
ಹಲವು ಜನ್ಮಗಳನ್ನ ಎತ್ತಿರುವೆನಲ್ಲ!
ಅನುಭವದ ಮೂಸೆಯಲಿ ಕರಗಿ ನೀರಾಗೆದ್ದು,
ಘನಿಸಿ ರೂಪಗಳೆನಿತೋ ತಳೆದಿರುವೆನಲ್ಲ!

ಎಂದು ವಾದಿಸುವವರೂ ಇರಬಹುದು. ಅಂಥವರು ಈ ಬಂಧ-ಮೋಕ್ಷ ಎರಡೂ ನಮ್ಮ ಮನಸ್ಸಿನ ವ್ಯಾಪಾರ ಮಾತ್ರ ಎನ್ನುತ್ತಾ,
ತೊಡಗಿ ಜೊತೆಗೂಡುವುದೂ
ಕಳಚಿಕೊಂಡೋಡುವುದೂ,
ಎರಡೂನು ಮನದಾಟ ವ್ಯಾಪಾರವಣ್ಣಾ;
ಬಂಧನಕು ಬಿಡುಗಡೆಗೂ
ಮನೆವೊಂದೆ ಕಾರಣ, ಜಾಣ;
ಅಂಟಿಕೊಂಡಿರೆ ಅದೇನೆ ಸೆರೆ,
ತಗಲದಲೆ ಇರೆ ತಾನೆ ಮೋಕ್ಷ ಕಾಣ!

-ಎನ್ನಬಹುದು. ಹೌದು, ಮನಸ್ಸೇ ಎಲ್ಲಕ್ಕೂ ಮೂಲ. ಸ್ವರ್ಗದೋಪಾದಿಯ ಆದರ್ಶಸುಖ, ನರಕ-ಸದೃಶ ಪರಮ-ಯಾತನೆ, ಅದರ ಸಮ್ಮಿಶ್ರತತೆಯ ಈ ಮತ್ರ್ಯಲೋಕಾನುಭವ ಎಲ್ಲಕ್ಕೂ ಕಾರಣ ಈ ಮನಸ್ಸಿನ ತುಡಿತ ಮಿಡಿತಗಳೇ ತಾನೆ? ಮನಸ್ಸಿನ ವ್ಯಾಪಾರ? ಜೀವನವೇ ಉದ್ದಕ್ಕೂ ಒಂದಲ್ಲ ಒಂದು ಬಗೆಯ ಕೊಡುವ ಕೊಳ್ಳುವ ಸಂಪಾದಿಸುವ ಅಮೂಲ್ಯ ವ್ಯಾಪಾರವೇ ಅಲ್ಲವೇ?
ಸುಖ-ದುಃಖಗಳ, ಲಾಭ-ಅಲಾಭಗಳ ಸಮೀಕರಣಕ್ಕೆ ಹಿಂತಿರುಗುವಾ. ಭರತೇಶ ವೈಭವ (ಕ್ರಿ.ಶ. 1557)ದ ರತ್ನಾಕರವರ್ಣಿ ಹೇಳುವಂತೆ: “ಸುಖಕೆ ಉಬ್ಬಿ, ದುಃಖಕೆ ಮರುಗಿದರೆ, ಒಡನೆ ಮುಂದೆ ಅಖಿಳ ಕರ್ಮಗಳು ಕಟ್ಟುವುವು; ಸುಖ, ದುಃಖಕೆ ಅತ್ತಿತ್ತಲಾಗದೆ ಧ್ಯಾನಾಭಿಮುಖದೊಳು ಇದ್ದರೆ ಬಂಧವಿಲ್ಲ!”- ಎಂಬ, ಆತ್ಮನಿಗೆ ಕರ್ಮವನ್ನು ಸುಡುವ ಸಾಮರ್ಥ್ಯ ಉಂಟೇ ಎಂದು ಚಿಂತಿಸಬಹುದು.
ಇವೆಲ್ಲಕ್ಕಿಂತ ನೂರಾ ಎಂಭತ್ತು ಡಿಗ್ರಿ ವಿಮುಖರಾಗಿರುವವರು, ನಮ್ಮ ಚಾರ್ವಾಕರ ಮಾತನ್ನು ಅನುಮೋದಿಸುವವರು, ಪಾರಲೌಕಿಕತೆಯನ್ನು ಅಲ್ಲಗಳೆದು ನಿರಾಕರಿಸುವವರು ಹೀಗೆ ದನಿಗೂಡಿಸಬಹುದು:
ಬಾಳು! ಕಳೆದುದು ಸಿಗದು! ಸಂತೋಷದಲಿ ಓಲಾಡು!
ಸುಖವ ಅನುಭವಿಸುತ್ತ ಕೊನೆಯುಸಿರ ಹಾಡು!
ಸಾಲವಾದರೂ ಮಾಡು, ತಿಂದುಂಡು ನಲಿದಾಡು!
ಮತ್ತೆ ಬಂದೀತೆಲ್ಲಿಂದ ಸುಟ್ಟ ಮೇಲೀ ಗೂಡು!!

-ಹೀಗೆಂದರೂ, ಅವರು ಪಾಪಮಾರ್ಗದಲ್ಲಿ ನಡೆಯಿರಿ ಎಂದೇನೂ ಬೋಧಿಸುವುದಿಲ್ಲ. ವಿಶಾಂತಿ, ಹರುಷ, ಸಜ್ಜನರ ಸಂಗ ಮತ್ತು ವೈಚಾರಿಕ ಚಿಂತನೆಗಳೇ ಆ ಮೋಕ್ಷದ ಅರಮನೆಯ ಬಾಗಿಲನ್ನು ಕಾಯುತ್ತಿರುವ ನಾಲ್ವರು ಪರಿಚಾರಕರು - ಎಂಬ ಜ್ಞಾನವಾಸಿಷ್ಠದ ಮಾತಿನ ಸಂಕೇತವನ್ನು ಅವರೂ ಒಪ್ಪುತ್ತಾರೆ. “ಯಮನೆಲ್ಲೋ ಕಾಣನೆಂದು ಹೇಳಬೇಡ&rdquo-ಎಂದು ದಾಸರು ಹೇಳಿದಾಗ, ಸರಿ-ತಪ್ಪುಗಳನ್ನು ಸದಾ ವೀಕ್ಷಿಸುತ್ತಿರುವ ಆ ವೈವಸ್ವತ ಧರ್ಮರಾಜ ಬೇರೆಲ್ಲೋ ಇಲ್ಲ, ಇಲ್ಲೇ ನಮ್ಮ ಶರೀರದಲ್ಲೇ ಹೃದಯದಲ್ಲಿ “ಕುಳಿತು ಪಾಪಂ ಪುಣ್ಯಂ ಚ ಸರ್ವಶಃ ತತ್ರ ಪಶ್ಯನ್ತಿ”- ಎನ್ನುತ್ತದೆ ಗರುಡಪುರಾಣ. ನಮ್ಮ ಬಾಳೇ ಒಂದು ಬಗೆಯ ತೀರ್ಥಯಾತ್ರೆ; ಬೇರೊಂದು ಗಂಗೆಯನ್ನ, ಕುರುಕ್ಷೇತ್ರವನ್ನ ಅರಸಿ ಹೋಗಬೇಕಿಲ್ಲ. ಎದೆಯಲ್ಲಿ ಕುಳಿತವನೊಂದಿಗೆ ಚೌಕಾಶಿ ಮಾಡಬೇಕಿಲ್ಲದಿದ್ದಾಗ, ಪಾಪವನ್ನೇ ಮಾಡದಿದ್ದರೆ, ಅದನ್ನು ತೊಳೆಯಲು ಹೋಗಬೇಕೆಲ್ಲಿಗೆ? ಯಾಕೆ?
ಪಾಪ-ಪುಣ್ಯಗಳನ್ನ ಪಟ್ಟಿಮಾಡಿಟ್ಟಲ್ಲಿ
ಎಲ್ಲಿಯೋ ಮೇಲೆ ಕುಳಿತೆಲ್ಲವನು ನೋಡುತಿಹನೆಂದು
ಏಕೆ ಕಸಿವಿಸಿ ಪಡುವೆ? ಅಲ್ಲಿಲ್ಲ, ಇಲ್ಲಿಯೇ ಇಲ್ಲಿಯೇ
ನಿನ್ನೆದೆಯ ಮೂಲೆಯಲೇ ಯಮನಿಹ ಸುಳಿವ ಕಾಣಹೋದೆಯಲ್ಲ;
ತೀರ್ಥವೋ ಕ್ಷೇತ್ರವೋ ಸುತ್ತಾಡಿ ಮಿಂದರೆ ಬಂತೆ?
ಕಳೆದು ಗಳಿಸುವುದೆಲ್ಲ ಇದ್ದಲ್ಲಿಯೇ ನೀನಿಂತು ಮಾಡಬಹುದಲ್ಲ!

ಕೇಳೋಣವೆಂದರೆ, ಅತ್ತ ಹೋದವರಾರೂ ಹಿಂತಿರುಗಿ ಬಂದಿಲ್ಲ; ಆ ಕತ್ತಲ ಆಚೆಗೆ ಏನಿದೆಯೋ ಯಾರಿಗೂ ಗೊತ್ತಿಲ್ಲ! ವಿಷ್ಣು ಸ್ಮೃತಿಯಲ್ಲಿ ಈ ವಿಚಾರವಾಗಿ “ಕೊನೆಯ ಅಂಕದ ಪರದೆ ಇಳಿವ ಮುನ್ನಿನ ಮಾತು”ಗಳು ಸ್ವಾರಸ್ಯಕರವಾಗಿ ಬರುತ್ತವೆ. ಇದನ್ನು ನಿಮ್ಮ ಮುಂದಿಟ್ಟು, ನಿಮ್ಮಿಂದ ಸಧ್ಯಕ್ಕೆ ಬಿಡುಗಡೆ ಕೇಳಿಕೊಳ್ಳುತ್ತೇನೆ:
ಕರೆದಲ್ಲಿಗಲ್ಲಿಗೆ ನಮ್ಮನನುಸರಿಸಿ ಬಂದಾರು
ಬಂಧುಗಳು ಬಾಂಧವರು ಕೈ ಹಿಡಿದ ಸಂಗಾತಿ;
ಗೊತ್ತೆ ಗಡಿ? ನಡೆಗೆ ತಡೆ? ಕೊನೆಯ ಕಾಣಿಸುವಾತ
ಕರೆದು ಕೊಂಡೊಯ್ಯುವ ಹಾದಿ ಕಟ್ಟೆವರೆಗೆ!

ನಾವು ಗಳಿಸಿದ ಪುಣ್ಯ-ಪಾಪಗಳೆ ನಮ್ಮೊಡನೆಲ್ಲೂ
ಬೆಂಬಿಡದೆ ಜೊತೆ ಬರುವ ನಮ್ಮದೇ ನೆರಳು;
ಅದ ತಿಳಿದು ಸರಿ-ದಾರಿ ಹಿಡಿದು ನಡೆಯಲು ಬಾಳು
ನಾವು ರೂಪಿಸಿಕೊಂಡಂತೇನೇ ಹಗಲು- ಇರುಳು!

ನಾಳೆ ಮಾಡುವುದೇನು ಇಂದೇ ಮಾಡಲು ತೊಡಗಿ,
ಸಂಜೆಗೇತಕೆ ಕಾಯುವುದು? ಮುಂಜಾನೆಯೇ ಮುಗಿಸಿ;
ಮೃತ್ಯು ಕಾಯುವನಲ್ಲ, ಮುಗಿದಿರಲಿ ಮುಗಿಯದೆ ಇರಲಿ -
ಕನಸ ಸಂಕಲ್ಪದ ಕೆಲಸ ಹೋಗುವುದೇ ಉಳಿಸಿ?

ಮನವಂತು ಹರಿದಾಡುತಿದೆ ಮನೆ ಮಠವು ಎಲ್ಲೊ
ಗಳಿಸಿ ಉಳಿಸುವ ಅದನು ಕಾಯ್ದಿಡುವ ಪರಿಯ;
ಎತ್ತಲೆತ್ತಲೊ ಗಮನ, ಇದ್ದಕಿದ್ದಂತೆರಗಿ
ಮೃತ್ಯು ಕೊಂಡೊಯ್ದೀತು ತೋಳದೊಲು ಕುರಿಯ!

ಮೇಲು-ಕೀಳುಗಳಿಲ್ಲ, ಹಗೆಯಿಲ್ಲ, ನೇಹಿಗನಿಲ್ಲ,
ಬಲ್ಲ ಕಾಲನಿಗೆ ಸಮವೆ `ಎಳಸು ಮಾಗಿದುದೆಲ್ಲ';
ಹಿಂದಿನಂದಿನ ಕರ್ಮ ಈಗೊದಗಿದಾಯಸ್ಸು
ಸವೆ ಸವೆದು ಬರಿದಾಗಲಸು ಅವ ಎಳೆವ ಮಲ್ಲ!

ನೂರು ಬಾಣದ ಮೊನಚು ಎದೆಗೆ ಬಂದೆರಗಿದರೂ
ಕೂಡಿ ಬಾರದೆ ಕಾಲ ಅಸು ನೀಗರೆಂದೂ;
ವೇಳೆ ಬಂದಾಯ್ತೆನಲು ಹುಲ್ಲು ಕಡ್ಡಿಯೆ ಸಾಕು
ಕೊನೆಯುಸಿರನೆಳೆಯಲೊಂದು ನೆಪ ತಗುಲಿತೆಂದು!

ಮದ್ದು ಪಥ್ಯಗಳಿರಲಿ, ಮಂತ್ರ ಪೂಜೆಗಳಿರಲಿ,
ಹೋಮ ಜಪ ತಪಾದಿಗಳೆಲ್ಲ ಅತ್ತ ಇರಲಿ;
ಯಾವುದೂ ಸಿದ್ಧಿಸದು ಮುಪ್ಪಡರಿ ಬಾಗಿಲಲಿ
ನಿಂತಿರಲು ಜವರಾಯ ಹಿಡಿದೊಂದು ಕೊಡಲಿ!

ಏನು ಪ್ರಯೋಜನವಿಲ್ಲ, ಎಷ್ಟು ಮಾಡಿದರಷ್ಟೆ,
ನೂರು ಮುನ್ನೆಚ್ಚರಿಕೆಗಳೇನು ತಪ್ಪಿಸದು, ವ್ಯರ್ಥ!
ಇಂದಿಲ್ಲದೊಂದು ದಿನ ಅದು ಬಂದೆ ಬರುವುದಿರೆ
ತಲೆ ಕೆಡಿಸಿಕೊಳ್ಳುವುದೇಕೆ? ಬಿಡಿ, ಬರಲಿ ಅನರ್ಥ!

ಮಂದೆಯಲಿ ನೂರಾರು ಹಸು-ಕರುಗಳಿದ್ದರೂ
ಕರು ಓಡಿ ತಾಯ ಬಳಿ ಕೂಡಿ ಸೇರುವ ತೆರದಿ
ನಮ್ಮ ಸಂಚಿತ ಕರ್ಮ ಬಿಮ್ಮನರಸುತ ಬಂದು
ಹಮ್ಮೇಳು-ಬೀಳಿನ ವೇಳಾ-ಪಟ್ಟಿ ಯೋಜಿಸಿಹುದು!

ಗೊತ್ತೆ ಮೊದಲೆಲ್ಲಿತ್ತೆಂದು? ಗೊತ್ತಿಲ್ಲ ಮುಂದೇನೆಂದು!
ಈ ನಡುವೆ ಓಲಾಡುವುದರರಿವು ಇದ್ದಂತೆ ಭಾಸ ;
ಏಕೀ ಆಟಾಟೋಪ? ಬಿಟ್ಟು ಬಿಡುವುದೆ ಲೇಸು
ತುಂಬ ಯೋಚನೆ ಬೇಡ, ಅದು ಸಲ್ಲದಾಭಾಸ!