ಅಮೆರಿಕನ್ನಡ
Amerikannada
ಅಮ್ಮನ ಜಾಣತನ
ಜಯಂತಿ ಅಮೃತೇಶ್
ನನ್ನ ತಾಯಿಗೆ ಯಾವಾಗಲೂ ಉಪದೇಶ ಮಾಡುವುದು ಬಹಳ ಪ್ರಿಯವಾದ ಹವ್ಯಾಸ. ದೊಡ್ಡ ದೊಡ್ಡ ಅಥವಾ ಬಹು ಮುಖ್ಯವಾದ ವಿಷಯಗಳಲ್ಲಿ ಅಲ್ಲವೇ ಅಲ್ಲ. ಆಕೆ ಯಾವತ್ತೂ ನಾನು ಯಾರನ್ನು ಮದುವೆ ಆಗಬೇಕು ಎಂದಾಗಲೀ, ಯಾವ ಉದ್ಯೋಗ ಮಾಡಬೇಕು ಎಂದಾಗಲೀ ಉಪದೇಶ ಮಾಡಿದವಳೇ ಅಲ್ಲ. ಅತಿ ಸಾಮಾನ್ಯವಾದ ವಿಷಯಗಳ ಬಗ್ಗೆ ಉಪದೇಶ ಕೊಡುವಲ್ಲಿ ಆಕೆ ನಿಸ್ಸೀಮಳು.
ಆರೋಗ್ಯದ ನಿಯಮಗಳ ಬಗ್ಗೆ ಸಲಹೆ ಕೊಡುವುದರಲ್ಲಿ ಆಕೆ ಪರಿಣತಳು. ಒದ್ದೆಯಾದ ಕೂದಲಿನೊಡನೆ ಹೊರಗಡೆ ಓಡಾಡಿದರೆ ನಿನಗೆ ನ್ಯುಮೋನಿಯಾ ಅಂಟಿಕೊಳ್ಳುವುದು, ತಣ್ಣಗಿನ ಬೆಂಚಿನ ಮೇಲೆ ಕೊತರೆ ಮೊಳೆರೋಗ ಬರುವುದೆಂದು ಹೆದರಿಸುವಳು. ಹೊರಗಡೆ ಗುಡುಗು ಮಿಂಚಿನ ಮಳೆಯಿದ್ದರೆ ಟೆಲಿಫೋನಿನ ಹತ್ತಿರ ಹೋಗಬೇಡ. ಇಲ್ಲವಾದರೆ ಆ ಮಿಂಚು ಫೋನಿನ ತಂತಿಯ ಮೂಲಕ ಹಾಯ್ದು ನಿನ್ನನ್ನು ಕೊಲ್ಲಬಹುದು! ಇತ್ಯಾದಿ ಇತ್ಯಾದಿ. ನೀವು ಈಗಲೇ ಸರಿ ಸರಿ ಎಂದು ಅಲ್ಲಾಡಿಸುತ್ತಿದ್ದೀರಿ ಅಲ್ಲವೇ? ಹೌದು ಇದೇ ತಾಯ್ತನದ ವೈಖರಿ!
ತಾಯಂದಿರು ವಿಷಯದ ಮೂಲಕ್ಕೇ ಹೋಗಿ ಅಳೆಯ ಬೇಕೆಂದೇನೂ ಇಲ್ಲ. ಚರಿತ್ರೆಯ ಕಥೆಗಳೆಲ್ಲವೂ ಅವರಿಗೆ ತಿಳಿದಿರಬೇಕೆಂದೇನೂ ಇಲ್ಲ. ತಾಯಿಯಾದವಳಿಗೆ ಉಪದೇಶ ಕೊಡುವಂತಹ ಸರ್ವಮಾನ್ಯ ಹಕ್ಕು ಇದ್ದೇ ಇದೆ. ಏಕೆಂದರೆ ಅವಳು 'ತಾಯಿ' ಇದೇ ಅವಳಿಗೆ ಇರಬೇಕಾದ ಅರ್ಹತೆ.
ನನ್ನ ಜೀವನದುದ್ದಕ್ಕೂ ತಾಯಿಯ ಪ್ರಭಾವ ನನ್ನ ಮೇಲಾಗಿದೆ. ನಾವು ನಾಲ್ಕು ಜನ ಒಡಹುಟ್ಟಿದವರಾದರೂ ಚಿಕ್ಕವರಾಗಿದ್ದಾಗ ನಮ್ಮ ತಾಯಿಯು ರಹಸ್ಯಮಯವಾದ ಪಿಸುಮಾತಿನಲ್ಲಿ ಅನೇಕ ನತದೃಷ್ಟರ ಕಥೆಗಳನ್ನು ಹೇಳುತ್ತಿದ್ದಳು. ನಾವು ಕುರ್ಚಿಯ ಹಿಂಗಾಲುಗಳ ಮೇಲೆ ನಮ್ಮೆಲ್ಲ ಭಾರ ಹಾಕಿ ಓಲಾಡುತ್ತಿದ್ದಾಗ ನಮ್ಮ ತಾಯಿಯು ತನಗೆ ಗೊತ್ತಿದ್ದ ವ್ಯಕ್ತಿಯೊಬ್ಬ ಬಹಳ ದಿನಗಳ ಹಿಂದೆ ಹೀಗೆಯೇ ಮಾಡಿ, ಕತ್ತಿನ ಮೂಳೆ ಮುರಿದುಕೊಂಡು, ಆಜೀವ ಪರ್ಯಂತ ಶಾಶ್ವತವಾಗಿ ಕೈ ಕಾಲುಗಳ ಸ್ವಾಧೀನ ಕಳೆದುಕೊಂಡು ಬಹಳ ಕಡಿಮೆ ದಿವಸಗಳು ಬದುಕಿ, ನರಳಿ ಸತ್ತ ಉದಾಹರಣೆ ಕೊಡುವಳು. ಕಡಲೆ ಕಾಯಿಯನ್ನು ಪೊಟ್ಟಣದಿಂದ ತೆಗೆದು ಅದನ್ನು ಗಾಳಿಯಲ್ಲಿ ಎಗರಿಸಿ ಹಾಗೆಯೇ ಬಾಯಿಯೊಳಕ್ಕೆ ಹಾಕಿಕೊಂಡಾಗ ಆಕೆ ಒಬ್ಬಾತ ಹೀಗೆಯೇ ಮಾಡಿ ಆ ಕಡಲೆಕಾಯಿ ಗಂಟಲೊಳಗೆ ಸಿಕ್ಕಿಹಾಕಿಕೊಂಡು ಸತ್ತೇ ಹೋದೆನೆನ್ನುವ ನಿದರ್ಶನ ನೀಡುವಳು.
ಈ ಪಟ್ಟಿಗಂತೂ ಕೊನೆ ಮೊದಲಿಲ್ಲ. ನಾನು ಮತ್ತು ನನ್ನ ತಂಗಿ ಬಾಲ್ಯದಲ್ಲಿ ಸೂಪರ್ ಮಾರ್ಕೆಟ್ಟಿನ ತಣ್ಣಗಿನ ಐಸ್ ಕ್ರೀಮ್ ಡಬ್ಬಿಗೇ ನಮ್ಮ ನಾಲಿಗೆಯನ್ನು ಇಟ್ಟಾಗ ಅಮ್ಮನಿಂದ ಅದಕ್ಕೂ ಒಂದು ಕಥೆ ಇತ್ತು. ಒಬ್ಬ ನತದೃಷ್ಟ ಹೀಗೆಯೇ ಮಾಡಿದಾಗ ಅವನ ನಾಲಿಗೆ ಆ ಡಬ್ಬಿಗೇ ಅಂಟಿಕೊಂಡು ಅಗ್ನಿಶಾಮಕ ದಳದವರು ಬಂದು ನಾಲಿಗೆಯನ್ನು ಅರ್ಧಕ್ಕೆ ಕತ್ತರಿಸಿ ಹಾಕಿದರಂತೆ! ಆ ದಿನದಿಂದ ಅವನ ಉಚ್ಚಾರಣೆಯೇ ಬದಲಾಗಿದೆಯಂತೆ! ನಾವು ಯೌವನಕ್ಕೆ ಕಾಲಿಟ್ಟಾಗ ನನ್ನ ತಾಯಿಯ ತಾಯ್ತನವು ನಮ್ಮನ್ನು ಹುಡುಗರೊಡನೆ ಬೆರೆಯುವುದನ್ನು ತಪ್ಪಿಸಲು ಸದಾ ಪ್ರಯತ್ನಿಸುತ್ತಿತ್ತು. ಇಲ್ಲಿದೆ ಆಕೆಯ ಕಾರ್ಯ ವೈಖರಿ.
ಮೊದಲನೆಯದಾಗಿ ಹೆಂಗಸರಾದವರು ಮಾಡಬಾರದಂತಹ ಕೆಲಗಳ ಪಟ್ಟಿ. ಹೆಂಗಸರು ಚೂಯಿಂಗ್ ಗಮ್ ಚೀಪಬಾರದು; ಹೆಂಗಸರು ಶಿಳ್ಳೆಹಾಕಬಾರದು; ಹೆಂಗಸರು ಕಾಲನ್ನು ಮಡಚಿಟ್ಟು ಕುಳಿತುಕೊಳ್ಳುವುದನ್ನು ಮರೆಯಬಾರದು. ಇದರ ನಂತರ ನಾವು ಯಾರನ್ನು ನಂಬಬಾರದು ಎನ್ನುವುದರ ಪಟ್ಟಿ. ಉತ್ತರ ದೇಶದವರು ಮೋಸ ಮಾಡಬಹುದು; ಪಶ್ಚಿಮದವರು, ದಕ್ಷಿಣದವರು, ಕಣಿವೆ ಪ್ರಾಂತದವರು, ಪೂರ್ವ ಪ್ರದೇಶದವರು ಇತ್ಯಾದಿಯಾಗಿ ಎಲ್ಲರೂ ಹೀಗೆಯೇ. ಆದರೆ ಶಾಲೆಯಲ್ಲಿ ಇವರುಗಳೇ ನಮ್ಮ ಸಹಪಾಠಿಗಳು. ಅಮ್ಮನ ಪಟ್ಟಿ ಮುಗಿದಾಗ ಹುಡುಗಿಯರಿಗೆ ತಮ್ಮ ಪುಟ್ಟ ತಮ್ಮನೊಬ್ಬನೇ ಸ್ನೇಹಕ್ಕೆ ಉಳಿದದ್ದು ! ಉಳಿದವರೆಲ್ಲ ಮೋಸಗಾರರು! ಆದರೆ ಅವನಿಗೂ ತಾಯ್ತನದ ಎಚ್ಚರಿಕೆಗಳು ಇದ್ದೇ ಇರುತ್ತಿದ್ದವು. ಅವನೂ ಅಮ್ಮನ ಉಪದೇಶದಿಂದ ಪೀಡಿತನಾಗುತ್ತಿದ್ದ. ಅವನಿಗೆ ಅಮ್ಮನ ಉಪದೇಶವೇನೆಂದರೆ, ಹುಡುಗಿಯರನ್ನು ನಿನ್ನ ಸಹೋದರಿಯರಂತೆ ಕಾಣು. ಈ ನಮ್ಮ ತಮ್ಮನೇ ಅಲ್ಲವೇ ನಾವು ರಾತ್ರಿ ಮಲಗಿದ್ದಾಗ ನಮ್ಮ ಮೂಗುಗಳಿಗೆ ಕೆನೆಯನ್ನು ತುಂಬಿಸಿ ನಾವು ಇಲಿ ಮತ್ತು ನಾಯಿ ಮೂತಿಯವರೆಂದು ಹೀಗಳೆಯುತ್ತಿದ್ದುದು?
ನನ್ನ ಅನಿಸಿಕೆ ಏನಿತ್ತೆಂದರೆ, ನಾನು ಮಕ್ಕಳ ತಾಯಿಯಾದಾಗಲಾದರೂ ನನ್ನ ತಾಯಿಯ ಉಪದೇಶ ನಿಲ್ಲಬಹುದು ಎಂದು. ಆದರೆ ಅದು ಹಾಗಾಗಲಿಲ್ಲ. ನನ್ನ ರವಿಕೆಯ ಕತ್ತಿನ ಪಟ್ಟಿ ಕೆಳಗೆ ಇಳಿದಿತ್ತೆಂದು ಹಂಗಿಸುತ್ತಾ ಮಾರಾಟಕ್ಕೆ ಇಲ್ಲದಿರುವ ವಸ್ತುಗಳ ಪ್ರದರ್ಶನ ಬೇಡ ಎಂದಳು. ಈ ತಾಯ್ತನದ ಹೇಳಿಕೆಗಳಿಗೆ ಕೊನೆಯೇ ಇಲ್ಲವೆಂದು ಆಗ ನನಗೆ ಅನ್ನಿಸಿತು. ನಾನು ನಗುತ್ತಾ ನನಗೆ ನೆನಪಿಸಿದ್ದಕ್ಕೆ ವಂದನೆಗಳನ್ನು ಸಲ್ಲಿಸುತ್ತಿದ್ದೆ.
ನಾನು ಆಕೆಗೆ ನಿಜಕ್ಕೂ ಆಭಾರಿಯಾಗಿದ್ದೇನೆ. ಈಗಷ್ಟೇ ನಾನು ಆಕೆಯನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದೇನೆ. ಹೇಗೆಂದರೆ, ಉದಾಹರಣೆಗಾಗಿ, ಮೊನ್ನೆತಾನೇ ನನ್ನ ಮಗಳು ಕುರ್ಚಿಯ ಹಿಂಗಾಲುಗಳ ಮೇಲೆ ತನ್ನ ಭಾರವನ್ನೆಲ್ಲಾ ಬಿಟ್ಟು ತೂಗಾಡಲು ಪ್ರಾರಂಭಿಸಿದಾಗ ನಾನು ಅದೇ ರಹಸ್ಯಕರವಾದ ಪಿಸುಧ್ವನಿಯಲ್ಲಿ ಪ್ರಾರಂಭಿಸಿದೆ-ನೋಡೆ ಅಮ್ಮಯ್ಯ, ನಿನ್ನ ಅಜ್ಜಿಗೆ ಪರಿಚಯವಿದ್ದ ಒಬ್ಬ ನತದೃಷ್ಟ ಮನುಷ್ಯನಿದ್ದ ಅವನು ಹೀಗೆಯೇ ಕುರ್ಚಿಯ ಹಿಂಗಾಲುಗಳ ಮೇಲೆ. . . .
-ಮೂಲ: 1998 ಜನವರಿ ತಿಂಗಳ ರೀಡರ್ಸ್ ಡೈಜೆಸ್ಟ್ ನ &lsqluo;ಮಮ್ ನೋಸ್ ಬೆಸ್ಟ್&rsquo ಎಂಬ ಕೋನೀ ರವರ ಲೇಖಕನದ ಕನ್ನಡ ಅನುವಾದ
*-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com