ಅಮೆರಿಕನ್ನಡ
Amerikannada
ಹರಿ ಒಂದು ದಿವ್ಯ ಚೇತನ
ಸು. ನಳಿನಾ, ಮೈಸೂರು
ಹರಿಹರೇಶ್ವರ ಎಂತಹ ದಿವ್ಯ ಚೇತನವುಳ್ಳ ದಿವ್ಯನಾಮ. ಹುಟ್ಟಿದಾಗಲೇ ಇವರಲ್ಲಿ ಈ ಎರಡು ದೈವಾಂಶಗಳು ಮೇಳೈಸಿ ಭೂಮಿಗೆ ದೇವಮಾನವರಾಗಿ ಬಂದವರು. ಬದುಕಿನ ಉದ್ದಕ್ಕೂ ಒಂದಲ್ಲಾ ಒಂದು ಚೇತೋಹಾರಿಯಾದ ಚಿಲುಮೆಯನ್ನು ಚಿಮ್ಮಿಸುತ್ತಲೇ ಬಂದವರು. ಕನ್ನಡವೇ ಇವರ ಉಸಿರಾದರೆ, ಬರಹವೇ ಇವರ ಬದುಕಾಗಿತ್ತು. ಪರದೇಶದಲ್ಲಿ ನೆಲಸಿದ್ದರಾದರೂ ಅಲ್ಲಿಯೇ ಹೆತ್ತಮ್ಮನ ಭಾಷೆಗೆ ಉಸಿರಾಗಿ ಅದೇ ನೆಲದಲ್ಲಿಯೇ ತಾಯ್ನುಡಿಯ ಬೀಜ ಬಿತ್ತಿ ‘ಅಮೆರಿಕನ್ನಡ’ ಎಂಬ ಫಸಲನ್ನು ತೆಗೆದರು. ಇದರ ಸಮೃದ್ಧ ಫಲ ಇಂದು ಅಲ್ಲಿ ಇಲ್ಲಿ ಎಲ್ಲೆಲ್ಲೋ ರಾರಾಜಿಸುತ್ತಿದೆ ಎಂದರೆ ಅದು ಹರಿಹರೇಶ್ವರ ನಾಗಲಕ್ಷ್ಮಿಯರ ಮಹೋನ್ನತ ಸಾಧನೆಯ ಫಲ.
ಹರಿಯವರ ಚರಿತ್ರೆಯನ್ನು ಗಮನಿಸುತ್ತಾ ಹೋದರೆ ಅಲ್ಲಿ ಎಲ್ಲಾ ಒಳ್ಳೇ ಗುಣಗಳೂ + ಆಗುತ್ತಾ ಹೋದರೆ ಕೆಟ್ಟದ್ದು ಶೂನ್ಯ ಮಾತ್ರ. ಮೊದಲನೆಯದಾಗಿ ಸ್ನೇಹಜೀವಿ. ಇವರ ದಾಂಪತ್ಯ ಹೇಗಿತ್ತೆಂದರೆ ಇಬ್ಬರೂ ಎಷ್ಟು ಗಾಢವಾದ ಸ್ನೇಹಜೀವಿಗಳಾಗಿದ್ದರೆಂದರೆ ಹರಿಯವರು ‘ನಾಗಲಕ್ಷ್ಮಿ’ ಎಂದರೆ ಅವರ ಕೂಗಿನ ಧ್ವನಿಗೆ ಓಗೊಡುವ ಮುನ್ನವೇ ನಾಗಲಕ್ಷ್ಮಿ ಪ್ರೀತಿಯಿಂದ ‘ಹರಿ’ ಎಂದು ಕರೆಗೊಟ್ಟಾಗ ಹರಿಯವರ ಪ್ರಶ್ನೆಗೆ ಉತ್ತರ ಸಿಕ್ಕಂತೆಯೇ. ಇಬ್ಬರೂ ಒಬ್ಬರ ಉಸಿರಿನಲ್ಲಿ ಮತ್ತೊಬ್ಬರು ಚೇತೋಹಾರಿಯಾಗಿ ಬೆರೆತು ಅತೀ ಉತ್ತಮವಾದ ಕೆಲಸಗಳನ್ನು ಸಾಧಿಸಿ ಉನ್ನತವಾದ ಯಶಸ್ಸು ಗಳಿಸಿ ಜನಮನದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಮನೆಗೆ ಬರುವ ಒಬ್ಬ ಸಾಮಾನ್ಯ ವ್ಯಕ್ತಿಯಾಗಲೀ ಅಥವಾ ಗಣ್ಯವ್ಯಕ್ತಿಯಾಗಲೀ ಅವರನ್ನು ಹೇಗಿದ್ದೀರಾ? ಚೆನ್ನಾಗಿದ್ದೀರಾ? ಬನ್ನೀ ಎಂದು ಮುಗುಳ್ನಗೆಯಿಂದ ಬರಮಾಡಿಕೊಂಡು ನಾಗಲಕ್ಷ್ಮಿ ಎಂದು ಪ್ರೀತಿಯಿಂದ ಕರೆದು ದಂಪತಿಗಳಿಬ್ಬರೂ ಬಂದವರನ್ನು ಆದರಾಭಿಮಾನದಿಂದ ಸತ್ಕರಿಸುವ ಈ ಪರಿ ಅವಿಸ್ಮರಣೀಯವಾದುದು ಏಕೆಂದರೆ ಅವರು ಹಂಚುವ ಪ್ರೀತಿ, ಸ್ನೇಹದಲ್ಲಿ ಇವ ಸಣ್ಣವ, ಇವ ದೊಡ್ಡವ, ಇವ ಬಡವ, ಇವ ಶ್ರೀಮಂತ ಎಂಬ ಭೇದಭಾವವಿರುತ್ತಿರಲಿಲ್ಲ. ಇಂತಹ ತಾರತಮ್ಯವಿಲ್ಲದ ಸ್ನೇಹ ಪ್ರೀತಿ ಹಂಚುವ ದೊಡ್ಡ ಸಂಪತ್ತು ಎಷ್ಟು ಜನ ಗಣ್ಯವ್ಯಕ್ತಿಗಳಲ್ಲಿ ದೊಡ್ಡಮನುಷ್ಯರಲ್ಲಿ, ವಿದ್ಯಾವಂತರಲ್ಲಿ, ಬುದ್ಧಿವಂತರಲ್ಲಿ ಕಾಣಬಹುದು? ಹರಿ ನಾಗಲಕ್ಷ್ಮೀಯವರು ಎಷ್ಟೇ ಉಳ್ಳವರಾದರೂ ಅವರಲ್ಲಿದ್ದ ಇರುವ ದೊಡ್ಡ ಸಂಪತ್ತು ಸ್ನೇಹ, ಪ್ರೀತಿ, ಆದರಾಭಿಮಾನ, ಅಕ್ಕರೆಯ ಸಕ್ಕರೆಯ ಮಾತು ಒಂದೇ ಎರಡೇ ವರ್ಣಿಸಲು ಪದಗಳು ಸಾಲದು. ಹರಿಯವರಿಗೆ ಕೋಪ ಬೇಗ ಬರುತ್ತಿತ್ತು. ನಾಗಲಕ್ಷ್ಮಿಯವರು ತಾಳ್ಮೆಯಿಂದ ನಗುನಗುತ್ತಾ ಉತ್ತರಿಸಿದಾಗ ಗುಡುಗಿನಂತೆ ಬಂದ ಕೋಪ ಮಿಂಚಿನಂತೆ ಮಾಯವಾಗಿ ಮಗುವಿನಂತೆ ಮುಗ್ದ ನಗೆ ಬೀರುತ್ತಿದ್ದರು. ಪ್ರತಿಯೊಬ್ಬ ಗಂಡಸಿನ ಯಶಸ್ಸಿನ ಹಿಂದೆ ಒಂದು ಹೆಣ್ಣಿನ ಶಕ್ತಿಯುಂಟು. ಎಂಬ ಮಾತು ಈ ದಂಪತಿಗಳ ಜೀವನದಲ್ಲಿ ಸತ್ಯವಾದುದು. ಹರಿಯವರ ಸಾಧನೆಯ ಹೆಜ್ಜೆಯಲ್ಲಿ ನಾಗಲಕ್ಷ್ಮಿಯವರ ಹೆಜ್ಜೆಯ ಗುರುತು ಕನ್ನಡನಾಡಿನಲ್ಲಷ್ಟೇ ಅಲ್ಲಾ ಹೊರದೇಶದಲ್ಲೂ ಮೂಡಿ ಇವರು ಹಚ್ಚಿರುವ ಕನ್ನಡದ ದೀಪ ಅಲ್ಲಿ ಇಲ್ಲಿ ಎಲ್ಲೆಲ್ಲೂ ಯಾವಾಗಲೂ ಪ್ರಜ್ವಲಿಸುತ್ತಲೇ ಇರುತ್ತದೆ. ಇದು ಸ್ನೇಹದ ದೀಪ, ಪ್ರೀತಿಯ ದೀಪ, ನುಡಿಯ ದೀಪ, ನಾಡದೀಪ.
ಹರಿಯವರ ಮನೆ ಒಂದು ವಿಶ್ವವಿದ್ಯಾನಿಲಯವಿದ್ದಂತೆ ಅಲ್ಲೊಂದು ದೊಡ್ಡ ಪುಸ್ತಕ ಭಂಡಾರ. ಮತ್ತೆ ಸಂಶೋಧನಾ ಕೇಂದ್ರಕೂಡ. ಇಲ್ಲಿ ಹರಿಯವರು ಯಾವಾಗಲೂ ಹುಡುಕಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಿದ್ದರು. ಹುಡುಕಿದ್ದನ್ನು ಚಿಂತಿಸಿ ಮಥಿಸಿ ಅದಕ್ಕೆ ರೂಪಕೊಟ್ಟು ಬೇಗನೆ ಬೆಳಕಿಗೆ ತಂದು ಅದಕ್ಕೊಂದು ಸಂತೋಷ ಸಮಾರಂಭ ಏರ್ಪಡಿಸಿ ಬಹಳ ಅಚ್ಚುಕಟ್ಟಾಗಿ ಅದನ್ನು ಪ್ರದರ್ಶಿಸಿ ತಮ್ಮ ಜ್ಞಾನ ಸಂತೋಷವೆರಡನ್ನೂ ಎಲ್ಲರಿಗೂ ಹಂಚುವ ಉದಾರಿ ಹರಿಯವರು. ಅದಕ್ಕೆ ಮುನ್ನ ಅದರ ಸಾಧಕ ಬಾಧಕಗಳನ್ನು ನಾಗಲಕ್ಷ್ಮಿಯವರೊಂದಿಗೆ ಚರ್ಚಿಸಿ ಅವರ ಸಲಹೆಯಂತೆ ಇಬ್ಬರೂ ಕೂಡಿ ಅದಕ್ಕೊಂದು ವೇದಿಕೆಯನ್ನು ಸಜ್ಜುಗೊಳಿಸಿ ಅದಕ್ಕೆ ಬೇಕಾದ ಗಣ್ಯವ್ಯಕ್ತಿಗಳನ್ನು ಹುಡುಕಿ ತಂದು ಗೌರವಿಸುವುದು ಸನ್ಮಾನಿಸುವುದು ಹೀಗೆ ಎಷ್ಟು ಸಮಾರಂಭಗಳು ನಡೆದಿವೆ. ಎಷ್ಟು ಜನ ಜ್ಞಾನಿಗಳು, ಸಾಹಿತಿಗಳು, ಸಂಗೀತಗಾರರು, ಗಮಕಿಗಳು, ಮಾಧ್ಯಮದ ಕಲಾವಿದರುಗಳು, ಸ್ವಾಮಿಗಳು ಹೀಗೆ ಹೇಳುತ್ತಾ ಹೋದರೆ ಪಟ್ಟಿದೊಡ್ಡದಾಗುತ್ತಾ ಹೋಗುತ್ತದೆ. ಹೀಗೆ ಹರಿಯವರ ಎಷ್ಟು ಪುಸ್ತಕಗಳು ಬೆಳಕಿಗೆ ಬಂದು ಕನ್ನಡಿಗರ ಕೈಸೇರಿದೆ. ಎಷ್ಟೋ ಸಾಹಿತಿಗಳು ತಮ್ಮ ತಮ್ಮ ಬರವಣಿಗೆಯನ್ನು ಬೆಳಕಿಗೆ ತರಲಾಗದೆ ಸಂಕಟ ಪಡುವಾಗ ಅವರ ಬರವಣಿಗೆಯನ್ನು ಪ್ರಕಟಪಡಿಸಿ ಪ್ರೋತ್ಸಾಹಿಸಿದ್ದಾರೆ. ಇಂದು ಹುಡುಕಿದರೆ ಇಂತಹಾ ನಿಸ್ವಾರ್ಥ ಸೇವಾಮನೋಭಾವವುಳ್ಳ ಸ್ಮೇಹಮಯಿ ನಿಗರ್ವಿ ಎಷ್ಟು ಜನ ಹರಿಯವರು ಸಿಕ್ಕುತ್ತಾರೆ? ಇಂತಹಾ ಒಳ್ಳೇ ಗುಣಕ್ಕೆ ಪ್ರೋತ್ಸಾಹ ನೀಡುವ ಎಷ್ಟು ನಾಗಲಕ್ಷ್ಮಿಯರು ಸಿಕ್ಕುತ್ತಾರೆ. ಹರಿಯವರು ಪ್ರತಿಯೊಂದು ಕಲೆಯನ್ನು ಪ್ರೀತಿಸುತ್ತಿದ್ದರು ಗೌರವಿಸುತ್ತಿದ್ದರು. ಬೇರೊಬ್ಬರಲ್ಲಿರುವ ಕಲೆಯನ್ನು ಗುರುತಿಸಿ ನೋಡಿ ಹರ್ಷಪಟ್ಟು ಅವರನ್ನು ಅವರ ಕಲೆಯನ್ನು ಗೌರವಿಸಿ ಪ್ರೋತ್ಸಾಹಿಸುತ್ತಿದ್ದರು. ನಾನು ಅವರ ಮನೆಯಲ್ಲಿ ದೇವರ ಮನೆ ಮುಂದೆ ರಂಗೋಲಿಯನ್ನು ಇಟ್ಟಾಗ ಅದನ್ನು ನೋಡಿ ಹಿಗ್ಗಿ ಅತೀ ಆನಂದದಿಮದ ದಂಪತಿಗಳಿಬ್ಬರೂ ನನ್ನ ಕಲೆಗೆ ಪ್ರೋತ್ಸಾಹಿಸಿ ಆಶೀರ್ವದಿಸುತ್ತಿದ್ದರು. ಇಷ್ಟೇ ಅಲ್ಲಾ ಇವರು ಎಷ್ಟು ಸಂಸಾರಕ್ಕೆ ಆಸರೆಯಾಗಿದ್ದಾರೆ, ಎಷ್ಟು ಬಡ ವಿದ್ಯಾರ್ಥಿಗಳು ಇವರ ಸಹಾಯದಿಂದ ವಿದ್ಯಾವಂತರಾಗಿ ಉನ್ನತ ಹುದ್ದೆಯಲ್ಲಿದ್ದಾರೆ. ಗುಡಿಸಲಾಗಿದ್ದ ಶಾಲೆಗಳು ದೊಡ್ಡ ಕಟ್ಟಡವಾಗಿದೆ. ಬನ್ನೂರಿನ ಒಂದು ಶಾಲೆಯಲ್ಲಿ ಇಂದು ಸಾವಿರಾರು ಮಕ್ಕಳು ವಿದ್ಯಾ ವಸತಿ ಊಟೋಪಚಾರಗಳಿಗೆ ಕೊರತೆಯಿಲ್ಲದೆ ಕಲಿಯುತ್ತಿದ್ದಾರೆ. ಪ್ರತಿಭೆಯುಳ್ಳ ವಿದ್ಯಾರ್ಥಿಗಳು ವರ್ಷ ವರ್ಷವೂ ಇವರ ಹೆಸರಿನಲ್ಲಿ ಪ್ರತಿಭಾಪುರಸ್ಕಾರವನ್ನು ಪಡೆಯುತ್ತಿದ್ದಾರೆ. ಹರಿ ‘ಪಾಲನಕರರ್ತಾ’ ಎಂಬುದು ಎಷ್ಟು ಬಡ ವಿದ್ಯಾರ್ಥಿಗಳ ಜೀವನದಲ್ಲಿ ನಿಜಾಂಶವಾಗಿದೆ. ಹರನ ಮಡದಿ ಅನ್ನಪೂರ್ಣೆಯಾದ ನಾಗಲಕ್ಷ್ಮಿಯವರು ಹರಹರರೊಟ್ಟಿಗೆ ಲಕ್ಷ್ಮೀ, ಪಾರ್ವತಿಯಾಗಿ ಅವರೊಟ್ಟಿಗೆ ಜ್ಞಾನದಾಸೋಹ ಅನ್ನದಾಸೋಹವನ್ನು ನಡೆಸುತ್ತಲೇ ಬಂದಿದ್ದಾರೆ. ಇಬ್ಬರೂ ಹೃದಯದಿಂದ ಶ್ರೀಮಂತರು, ವಿದ್ಯಾವಂತರು, ಬುದ್ಧಿವಂತರು, ಉದಾರಿಗಳು, ಸ್ನೇಹಜೀವಿಗಳು, ಸಾಹಿತಿಗಳು, ಕಲಾರಾಧಕರು, ಕಲಾಪೋಷಕರು ಒಂದಲ್ಲಾ ಎರಡಲ್ಲಾ ಇವರ ಗುಣಗಾನಕ್ಕೆ ಮಿತಿಯೇ ಇಲ್ಲಾ. ಹರಿಯವರು ವಾಸ್ತವವಾಗಿ ಇಂದು ಇಲ್ಲ. ಆದರೆ ಅವರು ಅತೀ ಗಣ್ಯಾತಿಗಣ್ಯವ್ಯಕ್ತಿಗಳಿಂದ ಹಿಡಿದು ಚಿಕ್ಕಮಕ್ಕಳ ಮನಸ್ಸಿನಲ್ಲೂ ಜೀವಂತವಾಗಿ ಉಳಿದಿದ್ದಾರೆ. ಅವರು ಇಂಜಿನಿಯರಾಗಿ ಅಮೆರಿಕೆಯಲ್ಲೆ ಉಳಿದು ತುಂಬಾ ಗಳಿಸಿ ಅಲ್ಲಿಯೇ ಹೆಸರು ಮಾಡಬಹುದಿತ್ತು. ಆದರೆ ಅವರ ತಾಯ್ನಾಡು, ನುಡಿಯ ಅಭಿಮಾನ, ಅವರ ಮನಸ್ಸಿನಲ್ಲಿದ್ದ ಭಾಷೆಯ ಬಗ್ಗೆ ಮಿಡಿತ ತುಡಿತಗಳು ಅವರಲ್ಲಿ ಹೊರಹೊಮ್ಮುತ್ತಿದ್ದ ಕನ್ನಡದ ಉಸಿರು ಅವರಿಂದ ಎಷ್ಟು ಕೆಲಸ ಮಾಡಿಸಿತು. ಎಂತಹ ಚಿಂತಕರಾದರು ಎಷ್ಟು ಒಳ್ಳೆಯ ಸಾಧನೆ ಮಾಡಿದರು ಎಲ್ಲವೂ ತಾಯ್ನಾಡಿಗಾಗಿ ತಾಯ್ನುಡಿಗಾಗಿ ಎಂತಹ ಅಪರೂಪದ ವ್ಯಕ್ತಿ! ಅದೆಂತಹ ಸಾರ್ಥಕತೆಯ ಬದುಕು. ಇವರ ದಾಂಪತ್ಯವು ಮುದ್ದಣ ಮನೋರಮೆಯಂತಹಾ ಆಪ್ಯಾಯಮಾನವಾದ ಆದರ್ಶ ದಾಂಪತ್ಯ. ಇದೊಂದು ಸಾಧಾರಣ ಲೇಖನ. ಆದರೆ ಹರಿಯವರು ದಂಪತಿಗಳ ಸಹಿತ ನಾನು ಹೊಸ ಮನೆಕಟ್ಟಿ ಆಹ್ವಾನಿಸಿದಾಗ ಅಪ್ಪ ಅಮ್ಮ ಇಲ್ಲದ ಅತೀ ಸಾಧಾರಣ ವ್ಯಕ್ತಿಯಾದ ನನ್ನ ಮನೆಗೆ ಬಂದು ನನ್ನ ಮನೆಯ ಎಲ್ಲಾ ಕೆಲಸ ಪೂರೈಸುವವರೆಗೆ ಇದ್ದು ಧೈರ್ಯ ತುಂಬಿ ಪ್ರೀತಿಯಿಂದ ಆಶೀರ್ವದಿಸಿ ನನ್ನ ಮನೆಯ ಬೆಳಕಾಗಿ ಉಳಿದಿರುವ ಹರಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಇನ್ನೇನು ತಾನೇ ಸಮರ್ಪಿಸಲಿ? ಅವರೊಂದು ಮಹಾನ್ ದಿವ್ಯ ಚೇತನ, ಅತೀ ಅಮೂಲ್ಯವಾದ ಅನರ್ಘ್ಯರತ್ನ. ಅಸಾಧಾರಣವಾದ ಈ ರತ್ನಕ್ಕೆ ಮೆರಗು ಕೊಟ್ಟು ನಾಗಲಕ್ಷ್ಮೀಯವರು ಅದರ ಪ್ರಕಾಶವನ್ನು ಹೆಚ್ಚಿಸುತ್ತಲೇ ಹರಿಯವರ ಮನಸ್ಸಿಗೆ ಆತ್ಮಕ್ಕೆ ನೆಮ್ಮದಿಯನ್ನುಂಟುಮಾಡುತ್ತಿದ್ದಾರೆ. ಹರಿಯವರ ಚರಣಾರವಿಂದಗಳಿಗೆ ನನ್ನ ಭಕ್ತಿಪೂರ್ವಕ ನಮನಗಳು. ಬನ್ನಿ ಇವರು ಹತ್ತಿಸಿರುವ ಸ್ನೇಹ ಪ್ರೀತಿಯ ಹಣತೆಯನ್ನು ಹಿಡಿದು ದೀಪದಿಂದ ದೀಪ ಹಚ್ಚುತ್ತಾ ಆ ಬೆಳಕಿನಲ್ಲಿ ಸ್ನೇಹ, ಪ್ರೀತಿ, ವಿಶ್ವಾಸ, ಉದಾರತೆ ಏನೆಲ್ಲಾ ಅವರ ಒಳ್ಳೆತ ಗುಣಗಳಿವೆ. ಅವೆಲ್ಲವನ್ನೂ ನಮ್ಮದಾಗಿಸಿಕೊಳ್ಳೋಣ. ಹರಿಯವರೇ ನಿಮ್ಮ ಸ್ನೇಹ, ಪ್ರೀತಿ, ಆಶೀರ್ವಾದ ಎಂದಿಗೂ ನಮ್ಮೊಟ್ಟಿಗಿರಲಿ. ನಿಮ್ಮ ಕನ್ನಡಾಭಿಮಾನ ಎಲ್ಲ ಕನ್ನಡಿಗರಲ್ಲೂ ಮೂಡಿಬರಲಿ.