ಅಮೆರಿಕನ್ನಡ
Amerikannada
ಕೆಸರಿನಲ್ಲಿ ಕಮಲ
-ನಾಗಲಕ್ಷ್ಮೀ ಹರಿಹರೇಶ್ವರ*
“ಕಮಲ! ಎಷ್ಟು ಸುಂದರವಾದ ಹೂವು. ಎಂಥ ಪರಿಮಳ ಬೀರುವ ಪುಷ್ಪ. ಹಿಂದೆ, ಸಮುದ್ರಮಥನ ಆದಾಗ, ಲಕ್ಷ್ಮಿ ತಾವರೆಯ ಹೂವನ್ನ ಕೈಯಲ್ಲಿ ಹಿಡಿದು, ಆ ಕ್ಷೀರಸಾಗರದ ಮಡಿಲ ಒಳಗಿನಿಂದ ಮೇಲೆದ್ದು ಬಂದಳಂತೆ!” ಕವಿ ಕಲ್ಪನೆಯ ಎಂತಹ ಸುಂದರ ದೃಶ್ಯ ಅದು!
ನೀರಿನ ಮಧ್ಯೆ, ಅಗಲಗಲ ಎಲೆಗಳ ನಡುವೆ, ರಾಜಠೀವಿಯಿಂದ ನೆಟ್ಟಗೆ ನಿಂತು, ಅರುಣೋದಯದ ವೇಳೆಯಲ್ಲಿ ಅತ್ತ ದಿಗಂತದಲ್ಲಿ ನೇಸರು ಮೂಡಿ, ಆಗಸದಲ್ಲಿ ಆ ಬೆಂಗದಿರ ಮೇಲೆ ಮೇಲೇರಿ ಬಂದಂತೆಲ್ಲ ಇತ್ತ ಈ ಬಿಸಜ ಮೆಲ್ಲ ಮೆಲ್ಲನೆ ಬಿರಿದು, ಸುಗಂಧವನ್ನು ಸುತ್ತಲೂ ಹರಡುವ ಹೂವು ಕಮಲ, ಕಮನೀಯ ಕಮಲ. ರೇಷ್ಮೆಯ ಹಾಗೆ ನುಣುಪು; ಬಣ್ಣವೋ ಕಣ್ಣಿಗೆ ತಂಪನ್ನೀವ ನಸುಗೆಂಪು. ಸೌಂದರ್ಯದ ಅಧಿದೇವತೆಯಾದ ನಮ್ಮ ಲಕ್ಷ್ಮಿ ಇಂಥ ಪದ್ಮಪುಷ್ಪವನ್ನಲ್ಲದೇ ಬೇರೇನನ್ನು ಆರಿಸಿಕೊಂಡಾಳು? ಪ್ರಕೃತಿ-ಸಖರನ್ನ, ಭಾವುಕರನ್ನ, ಕವಿಗಳನ್ನ, ಪಂಡಿತರನ್ನ ಪಾಮರರನ್ನ, ಸಾಮಾನ್ಯ ಜನರನ್ನ, ಗಂಡಸರನ್ನ ಹೆಂಗಸರನ್ನ ಎಲ್ಲರನ್ನೂ ಬೆರಗುಗೊಳಿಸಿ ಮನಸೆಳೆವ ಸುಮನೋಹರ ಸುಮ-ವಿಶೇಷ ಈ ತಾವರೆಯ ಹೂವು!
ತಾವರೆಯದು ನಸುಗೆಂಪಾದರೆ, ಕೆಂದಾವರೆಯದು ಕಣ್ಣು ಕೋರೈಸುವ ಸುಡುಗೆಂಪು. ನೈದಿಲೆ, ಕನ್ನೈದಿಲೆಗಳೋ ಕಂದು, ನೀಲಿ, ಕಪ್ಪು ಬಣ್ಣದೊಡಗೂಡಿ, ಕೆಲವು ಸಂಜೆ ಅರಳುವದೆಂಬ ಕವಿಸಮಯಕ್ಕೆ ಪಾತ್ರವಾಗುತ್ತವೆ. ಎಲ್ಲ ದೇವಿಯರ ಕೈಯಲ್ಲೂ ಒಂದು ಕಮಲ ಇರಲೇಬೇಕೆಂಬುದು ಸಾಮಾನ್ಯ ನಿಯಮ. ನಾಭಿಯಲ್ಲೊಂದು ಕಮಲವಿಟ್ತುಕೊಂದೇ ನಮ್ಮ ವಿಷ್ಣು ಪದ್ಮನಾಭನಾಗಿದ್ದನೆ. ಬ್ರಹ್ಮನಂತೂ ಆ ಕಮಲದಲ್ಲೇ ಹುಟ್ಟಿರುವ ಬಿಸಜ ಸಂಭವ.
ಸಂಸ್ಕೃತದಲ್ಲಿ ಕಮಲದ ನೆಪದಲ್ಲಿ ಆಶೆ-ನಿರಾಶೆಯ ಬಗ್ಗೆ ಒಂದು ಸುಭಾಷಿತವಿದೆ. ಅದರ ಕನ್ನಡಭಾವ ಇದು: ಈ ಇರುಳು ಜಾರುವುದು, ಕಳೆಯುವುದು, ಬೇಗ ಕಳೆಯುವುದು; ಮೆಲ್ಲ ಮೆಲ್ಲನೆ ನೇಸರು ಉದಯಿಸುವನು, ನಗು ನಗುತ ತಾವರೆಗಳಂತೂ ಅರಳುವುವು- ಎನುತ ಕುಳಿತಿತ್ತೊಂದು ದುಂಬಿ, ಹಿಂದಿನ ದಿನ ಅರೆಬಿರಿದ ತಾವರೆಯ ಒಂದು ಮೊಗ್ಗಿನಲಿ, ಯೋಚಿಸುತ. ಎಲ್ಲಿಂದಲೋ ಬಂದ ಮದ್ದಾನೆಯೊಂದಯ್ಯೋ, ಬುಡಸಹಿತ ಈ ಕಮಲಿನಿಯ ಗಿಡವನ್ನೇ ಕಿತ್ತೆಸೆಯಿತೇ!
ಆದರೆ, ಈ ಕಮಲ ಹುಟ್ಟುವುದು ಕೆಸರಿನಲ್ಲಿ. ಬೆಳೆಯುವುದೂ ಅಲ್ಲೇ. ಅದಕ್ಕೇ ಹೇಳುತ್ತಾರೆ, ಪಂಕಜ, ಪಂಕೇರುಹ ಅಂತ, ಹುಟ್ಟು ಎಲ್ಲಿಯಾದರೇನು, ಅದನ್ನ ಪರಿಗಣಿಸಬೇಡಿ: ತೌರನ್ನು ಹಳಿಯುವದೇನು ಬೇಡ ಬಿಡಿ; ಬೆಳೆದು ಬಿಮ್ಮನೆ ನಿಂತ, ಈ ಬಿಂಕದ ಸಿಂಗಾರಿಯ ಸೌದರ್ಯವನ್ನು ನೋಡಿ, ಕಣ್ಮನಗಳನ್ನು ಸೂರೆಗೊಳ್ಳುವ ಈ ಹೂವ ಚೆಲುವನ್ನ ನೋಡಿ ಎಂದು ಪ್ರಕೃತಿ ನಮಗೆ ಪಾಠ ಹೇಳಿಕೊಡುವಂತಿದೆ!
ಹೌದು, “ನದೀಮೂಲ ಋಷಿಮೂಲಗಳನ್ನು ಹುಡುಕಿಕೊಂಡು ಹೋಗಬೇಡಿ’ಎಂದು ಹಿರಿಯರು ಕಿವಿಮಾತು ಹೇಳುವುದು ಇದಕ್ಕೇ. ಯಾವ ಗಿಡದಲ್ಲಿ, ಎಂಥ ಬಣ್ಣದ, ಏನು ವಿನ್ಯಾಸದ, ಯಾವ ಬಗೆಯ ಎಷ್ಟು ಬೆರಗಿನ ಮೋಜು, ಬೆಡಗಿನ ಸಡಗರ ಅಡಗಿದೆಯೋ ಆ ನಿಸರ್ಗವೇ ಬಲ್ಲದು; ಊಹಿಸಲೂ ಸಾದ್ಯವಾಗದು. ಸಿರಿತನವೋ, ಬಡತನವೋ “ಕುಲಕುಲವೆಂದು ಬಡಿದಾಡದಿರಿ, ಹೊಡೆದಾಡದಿರಿ. ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ?’ ಎಷ್ಟೆಲ್ಲ ಹೇಳಿದರೂ, ಕಟ್ಟಕಡೆಗೆ ಕೊನೆಗೆ, ನಮಗೆ ಬೇಕಾದದ್ದು ಒಂದೇ ಒಂದು- ಇದರಿಂದ, ಇವರಿಂದ ಆದ ಲೋಕೋಪಕಾರ ಏನು, ಎಷ್ಟು? ಎಂಬುದೊಂದೇ; ಮಿಕ್ಕುದೆಲ್ಲವೂ ಗೌಣ, ಉಳಿದುದೆಲ್ಲವೂ ಅಪ್ರಸ್ತುತ.
ಹುಟ್ಟು ನಮ್ಮ ಕೈಯಲ್ಲಿಲ್ಲ, ನಿಜ. ಎಲ್ಲಿ ಯಾವ ಪರಿಸರದಲ್ಲಿ ನಾವು ಜನ್ಮತಾಳುತ್ತೇವೆಯೋ ಅದು ನಮ್ಮ ಆಯ್ಕೆಗೆ ಸಿಲುಕದ, ನಮ್ಮ ನಿರ್ಧಾರಕ್ಕೆ ಒಳಪಡುವ ವಿಷಯವಲ್ಲ. ಹೌದು. ನಮ್ಮ ತಾಯಿ, ನಮ್ಮ ತಂದೆ, ನಮ್ಮ ಒಡಹುಟ್ಟಿದವರನ್ನ ನಾವೇ ಆರಿಸಿಕೊಂಡು ಇಲ್ಲಿಗೆ ಬರುವ ಸಾಧ್ಯತೆಯಿಲ್ಲ, ಒಪ್ಪಬೇಕಾದದ್ದೇ. ಆದರೆ, ನಮ್ಮ ಜೀವನವನ್ನ ನಾವು ಒಪ್ಪವಾಗಿ ರೂಢಿಸಿಕೊಳ್ಳಬಹುದಲ್ಲ, ಒಳ್ಳೆಯ ಗೆಳೆಯರನ್ನ ಗೆಳತಿಯರನ್ನ ಸಂಪಾದಿಸಿಕೊಂಡು, ಇನಿಯ ಇನಿತಿಯರ ಒಡನಾಟದಲ್ಲಿ ನೆಮ್ಮದಿಯ ಬಾಳನ್ನ ನಾವು ಆರೋಗ್ಯಕರವಾಗಿ ನಡೆಸಬಹುದಲ್ಲ. ಇದ್ದಲ್ಲೇ ಸಗ್ಗಸುಖವನ್ನು ಸವಿಯಬಹುದಲ್ಲ!
ಕಮಲ ಮುಟ್ಟಿದ ಕೈ ಕೆಸರಾದರೇನು, ಎಲ್ಲರ ಬಾಯಿ ಮೊಸರಾಗಲಿ!
*ನಾಗಲಕ್ಷ್ಮೀ ಹರಿಹರೇಶ್ವರ
ನಂ. 4, 3ನೇ ಮುಖ್ಯರಸ್ತೆ
5ನೇ ಅಡ್ಡರಸ್ತೆ, ಸರಸ್ವತೀಪುರಂ
ಮೈಸೂರು-570 009