ಅಮೆರಿಕನ್ನಡ
Amerikannada
ನಗೂ ಎಂದಿದೇ ಮಂಜಿನಾ ಬಿಂದು . . .
-ಭವಾನಿ ಲೋಕೇಶ್, ಮಂಡ್ಯ
ಸಾಮಾನ್ಯವಾಗಿ ಹುಟ್ಟುಹಬ್ಬಕ್ಕೋ, ಮದುವೆಗೋ, ವಾರ್ಷಿಕೋತ್ಸವಗಳಿಗೋ ಹತ್ತಿರದವರು, ನೆಂಟರಿಷ್ಟರು, ಬಂಧುಬಳಗ, ಸ್ನೇಹಿತರು ಹಾರೈಸುವಾಗ ನಿನ್ನ ಜೀವನದಲ್ಲಿ ಸದಾ ನಗು ತುಂಬಿರಲಿ ಅಂತಲೋ ಎಂದೆಂದಿಗೂ ನಗು ನಿನ್ನ ಪಾಲಿಗಿರಲಿ ಅಂತಲೋ ಹೇಳುವುದನ್ನು ಕೇಳಿದ್ದೇವೆ. ಒಂದು ಹಳೇ ಕನ್ನಡ ಚಿತ್ರಗೀತೆ ಇದೆಯಲ್ಲಾ . . ನೀ ನಡೆವ ಹಾದಿಯಲ್ಲಿ, ನಗೆ ಹೂವು ಬಾಡದಿರಲಿ ಈ ಬಾಳ ಬುತ್ತಿಯಲಿ ಸಿಹಿಪಾಲು ನಿನಗಿರಲಿ, ಕಹಿ ಎಲ್ಲಾ ನನಗಿರಲಿ ತುಂಬಾ ಭಾವುಕರಾಗಿ ಹಾಡಿರುವ ಹಾಡು ಇದು. ಯಾವಾಗ್ಲೂ ನಗ್ತಾ ನಗ್ತಾ ಇರು ಅಂದರೆ ಅದರರ್ಥ ಹ್ಹ ಹ್ಹ ಹ್ಹಾ . . ಅಂತಿರು ಅಂತಲ್ಲ! ನಿನ್ನ ಜೀವನದಲ್ಲಿ ಸಂತೋಷ ತುಂಬಿರಲಿ. . ಅಂದರೆ ದುಃಖದ ದುಮ್ಮಾನದ ಕ್ಷಣಗಳು ಹೆಚ್ಚು ಕಾಡದಿರಲಿ ಅನ್ನುವ ಹಾರೈಕೆ ಅದು. ನಮ್ಮ ಬದುಕಿನಲ್ಲಿ ನಗುವಿಗೆ ಅಷ್ಟು ಮಹತ್ವದ ಸ್ಥಾನವನ್ನು ಕೊಟ್ಟಿದ್ದಾರೆ ಹಿರಿಯರು.
ನಗುವು ಸಹಜದ ಧರ್ಮ,
ನಗಿಸುವುದು ಪರಧರ್ಮ,
ನಗುವ ಕೇಳುತ ನಗುವುದು ಅತಿಶಯದ ಧರ್ಮ,
ನಗುವ ನಗಿಸುವ ನಗಿಸಿ ನಗುತ
ಬಾಳುವ ವರವ ಮಿಗೆ ಬೇಡಿಕೊಳೊ ಮಂಕುತಿಮ್ಮ.

ಬಹುಶಃ ಯಾವ ನಗೆಕೂಟಗಳಿರಲಿ, ನಗುವಿನ ಬಗೆಗಿನ ಉಪನ್ಯಾಸಗಳಿರಲಿ, ಭಾಷಣಗಳಿರಲಿ ಡಿ.ವಿ.ಜಿ.ಯವರ ಈ ಸಾಲುಗಳಂತೂ ಇರಲೇಬೇಕು ಅನ್ನುವಷ್ಟರ ಮಟ್ಟಿಗೆ ನಗುವಿನ ಏಕಮೇವಾದ್ವಿತೀಯ ಸ್ಥಾನವನ್ನು ಈ ಕಗ್ಗ ಪಡೆದುಕೊಂಡಿದೆ. ಬೇವು-ಬೆಲ್ಲ, ಸುಖ-ದುಃಖ, ಎಲ್ಲವೂ ಜೀವನದ ಹಾದಿಯಲ್ಲಿ ಸಮಸಮನಾಗಿರುತ್ತದೆ ಎಂಬುದು ಸತ್ಯವಾದರೂ ಎಲ್ಲರೂ ಬಯಸುವುದು ತುಸು ಹೆಚ್ಚೇ ಸಂತೋಷವನ್ನು.
ಇನ್ನು ನಗುವಿನ ಬಗೆಗಳಂತೂ ವೈವಿಧ್ಯಮಯ. ಆಗಷ್ಟೇ ಹುಟ್ಟಿದ ಹಸುಕಂದನ ಮುಗ್ಧ ನಗು, ಹದಿಹರಯದವರ ಪ್ರೇಮಪೂರ್ಣ ನಗು, ಗಾಂಭೀರ್ಯದಿಂದ ತುಟಿಯನ್ನು ತುಸು ಓರೆ ಮಾಡಿದ ಶಿಸ್ತಿನ ಸಿಪಾಯಿ ಮನೆಯೊಡೆಯನ ನಗು, ಪುಟ್ಟ ಜೋಕಿಗೂ ಬಾಯಗಲಿಸಿ ನಗುವ ಅಜ್ಜಿಯ ಚಂದದ ನಗು, ನಗುವುದಕ್ಕೇ ಹುಟ್ಟಿದ್ದೇವೆನ್ನುವಂತೆ ಬಸ್ಸಿನಲ್ಲೋ ರೈಲಿನಲ್ಲೋ ಕುಳಿತು ಕಾಲೇಜಿನ ದಾರಿ ಸವೆಯುವ ತನಕ ಅವರಿವರ ಬಗ್ಗೆ ಆಡಿಕೊಂಡೋ, ಮಾತಾಡಿಕೊಂಡೋ ಸಿಡಿಸುವ ಪಕಪಕ ನಗು. . . ನಗೂ. . ನಗೂ. . ಇವತ್ಯಾಕಿಷ್ಟು ನಗುವಿನ ಬಗ್ಗೆ ಹೀಗೆಲ್ಲಾ ಕೊರೆಯುತ್ತಿದ್ದೀನಿ ಅಂತ ಫಕ್ಕನೆ ನಕ್ಕುಬಿಡದಿರಿ. ಅದಕ್ಕೂ ಕಾರಣವಿದೆ.
ಏಪ್ರಿಲ್ ತಿಂಗಳ 16 ನೇ ತಾರೀಖು ನಗೆ ಸಾಮ್ರಾಟನೆನಿಸಿಕೊಂಡ ಚಾರ್ಲಿಚಾಪ್ಲಿನ್ ಹುಟ್ಟಿದ ದಿನ. ಬೆಟ್ಟದಷ್ಟು ದುಃಖವನ್ನು ತನ್ನ ಒಡಲೊಳಗಿರಿಸಿಕೊಂಡಿದ್ದರೂ. . . ಕೇವಲ ಆಂಗಿಕ ಅಭಿನಯದಿಂದಲೇ ಎದುರಿನವರನ್ನು ನಗೆಯ ಹಾಯಿದೋಣಿಯಲ್ಲಿ ತೇಲುವಂತೆ ಮಾಡುತ್ತಿದ್ದ ನಗೆ ಚಕ್ರವರ್ತಿ ಅವನು.
ಮಾತೇಕೆ ಆಡುವೆ ನೀನು?
ಮೌನಕೆ ದನಿಯಿಲ್ಲವೇನು?
ಮೌನಕೆ ಸಾವಿರ ‘ಸಾವಿ’ರದ ಅರ್ಥಗಳು

ಅಂತ ಎಲ್ಲೋ ಕೇಳಿದ ಸಾಲುಗಳು. ಅಕ್ಷರಶಃ ಚಾಪ್ಲಿನ್ಗೇ ಅನ್ವಯವಾಗುವಂತಿವೆ. ಬಹುಶಃ ಆ ಕಾರಣಕ್ಕೇ ಏನೋ ಚಾಪ್ಲಿನ್ ಮೌನದ ತೆಕ್ಕೆಯಲ್ಲಿದ್ದುಕೊಂಡೇ ಬಡಜನರ, ಅತೀಸಾಮಾನ್ಯರ ಸಿಂಬಲ್ ಆಗಿ ರೂಪುಗೊಂಡುಬಿಟ್ಟಿದ್ದು. ಮಾತಿನ ಮೊನಚಿಗಿಂತ ಮೌನದ ಅಲಗು ಎಂಥವರ ಮನಸ್ಸನ್ನೂ ನಾಟಬಹುದೆಂಬುದನ್ನು ಸಾಧ್ಯವಾಗಿಸಿದ್ದೇ ಚಾರ್ಲಿಚಾಪ್ಲಿನ್. ತಂದೆಯ ಮರಣ, ತಾಯಿಯ ಹುಚ್ಚುತನ , ತುತ್ತು ಕೂಳಿಗೂ ಪರದಾಡಿದ ಕರಾಳ ನೆನಪು ಎಲ್ಲವನ್ನೂ ಅರಗಿಸಿಕೊಂಡ ಅವನ ಮನಸ್ಸಿನಿಂದ ಅರಳಿದ್ದು ನಗು ಹಂಚುವ ಕಲೆ.
ಇವತ್ತಿನ ಬಿಝೀ ಬದುಕಿನಲ್ಲಿ ನಮಗ್ಯಾರಿಗೂ ನಗುವುದಕ್ಕೇ ಸಮಯವಿಲ್ಲದಂತಾಗಿದೆ. ಬೆಳಿಗ್ಗೆಯಿಂದ ಸಂಜೆಯ ತನಕ ಬರೀ ಧಾವಂತ. ಊಟ ಮಾಡಲಿಕ್ಕೂ ಸಮಯವಿಲ್ಲದ ಬದುಕು. ಅದಕ್ಕೆಂದೇ ಇತ್ತೀಚೆಗೆ ನಗೆಕೂಟಗಳು ಹೆಚ್ಚಾಗಿವೆ. ನಗೆಕೂಟಗಳಂತೂ ಬಲವಂತವಾಗಿಯಾದರೂ ನಗಿಸುತ್ತವೆ. ದುಡ್ಡು ಕೊಟ್ಟು ನಗಬೇಕಾದ ಅನಿವಾರ್ಯತೆ ನಮ್ಮದು. ಕೂಡು ಕುಟುಂಬದಲ್ಲಿ ಒಟ್ಟಾಗಿ ಊಟಕ್ಕೆ ಕೂತಾಗ ಮನೆಯ ಸದಸ್ಯರೆಲ್ಲರ ನಡುವೆ ಹರಿದಾಡುತ್ತಿದ್ದ ಪುಟ್ಟ ಪುಟ್ಟ ನಗು ಇವತ್ತು ಕಾಣೆಯಾಗಿಹೋಗಿದೆ. ಆದರೆ ಎಲ್ಲರಿಗೂ ಗೊತ್ತು. ಬದುಕಿನಲ್ಲಿ ನಗುವಿನ ಮಹತ್ವವೇನೆಂಬುದು. ಕೆಲವರಂತೂ ನಗಿಸಲಿಕ್ಕೇ ಹುಟ್ಟಿದ ಹಾಗಿರುತ್ತಾರೆ. ಅವರು ಇದ್ದ ಕಡೆಯಲ್ಲೆಲ್ಲ ಉಲ್ಲಾಸದ ವಾತಾವರಣ. ಖುಷಿಯಲ್ಲಿ ಮನಸ್ಸು ಖುಲ್ಲಂಖುಲ್ಲ.
ನಗುವು ನಗಿಸುವುದದುವೆ ಕಲೆಯು
ಇರದು ಎಲ್ಲರ ಬಳಿಯಲು
ನಗುವೆ ಸಾಧನ, ನಗುವೆ ಜೀವನ
ಎಲ್ಲ ದುಃಖವ ಕಳೆಯಲು

ಅಂತ ನೆನಪಿಟ್ಟುಕೊಳ್ಳಲೇಬೇಕು. ಒಂದು ನಗು ಸಾಕು, ಮನದ ಮೂಲೆಯೊಳಗೆ ಕಾಡುತ್ತ ಕುಳಿತ ದುಃಖದ ಸೆಲೆಯೊಂದನ್ನು ಕಿತ್ತೊಗೆಯಲು. ಆದ್ದರಿಂದಲೇ ಎಲ್ಲರೂ ಏನೇ ಬರಲಿ ನಗುನಗುತ್ತಲೇ ಎಲ್ಲವನ್ನೂ ಮರೆಯಬೇಕು.
ತಾನೆಷ್ಟೇ ದುಃಖಿಯಾಗಿರಲಿ, ತನ್ನ ಅಭಿನಯದ ಮೂಲಕ ಎಲ್ಲರನ್ನೂ ನಕ್ಕುನಗಿಸಿದ ಚಾರ್ಲಿಚಾಪ್ಲಿನ್ ಹೇಳುತ್ತಿದ್ದ ಮಾತುಗಳು ಇಂದಿಗೂ ನೆನಪಾಗುತ್ತವೆ. ನನ್ನ ದುಃಖ ಯಾರಿಗೂ ಕಾಣಲಾರದು ಅಂತ.
ಅಂತಹ ಉದಾತ್ತ ಮನೋಭಾವವನ್ನಿಟ್ಟುಕೊಂಡು ಬದುಕಿ ಎಲ್ಲರಲ್ಲಿ ನಗೆಯ ಬುಗ್ಗೆಯನ್ನು ಚಿಮ್ಮಿಸಿದ ಚಾರ್ಲಿಚಾಪ್ಲಿನ್. ಯಾಕೋ ತುಂಬಾ ನೆನಪಾಗಿ ಕಾಡಿದ.