ಅಮೆರಿಕನ್ನಡ
Amerikannada
ಈಸಬೇಕು ಇದ್ದು ಜೈಸಬೇಕು
-ಜಯಂತಿ ಅಮೃತೇಶ್*
“ಪ್ರಪಂಚದಲ್ಲಿ ಎಲ್ಲದಕ್ಕೂ ನಿರೀಕ್ಷೆಯೂ, ಅಭಿಲಾಷೆಯೂ ಕೂಡಿದ ಭರವಸೆಯೇ ಕಾರಣ”-ಹೀಗೆ ಹೇಳಿದವರು ಮಾರ್ಟಿನ್ ಲೂಥರ್. “ಭರವಸೆಯೇ ನಮಗೆ ಈ ಪ್ರಪಂಚ ನೀಡಿರುವ ಅತ್ಯಂತ ಸಂತಸದಾಯಕ ಕೊಡುಗೆ” -ಹೀಗೆಂದವರು ಸಾಮ್ಯುಯಲ್ ಜಾನ್ಸನ್. ಒಂದು ವಿಷಯವಂತೂ ಖಂಡಿತ. ಭರವಸೆಯಿಲ್ಲದೆ ಯಾವ ಸಮಾಜವೇ ಆಗಲಿ ಜೀವಿಸಿರಲು ಸಾಧ್ಯವಿಲ್ಲ. ಭರವಸೆ ಎನ್ನುವ ಮಂತ್ರಮಾನವ ಜನಾಂಗ ಭದ್ರವಾಗಿ ಉಳಿಯಲು ಮತ್ತು ಕನಸುಗಳನ್ನು ನನಸು ಮಾಡಿಕೊಂಡು ಮುನ್ನಡೆಯಲು ಸಹಕರಿಸಿದೆ. ಭರವಸೆಯು ಸತ್ಯಕ್ಕೆ ವಿರುದ್ಧವೇನಲ್ಲ. ಆದರೆ ಇದು ತಿರಸ್ಕಾರ ಮತ್ತು ನಿರಾಶೆಗೆ ವಿರುದ್ಧ. ಯಾವ ದಾರಿಯೂ ಕಾಣದಿದ್ದಾಗ ಮಾನವ ಕುಲವು ಭರವಸೆಯ ಮೊರೆ ಹೊಕ್ಕಿದೆ. ಅಚೇತನವನ್ನು ಚೇತನಗೊಳಿಸಿದೆ ಮತ್ತು ಕಟ್ಟಡ ಕಟ್ಟಲು ಏನೂ ಇಲ್ಲದಿದ್ದಾಗಲೂ ಅದನ್ನು ಕಟ್ಟಲು ಸಹಕರಿಸಿದೆ.
ಭರವಸೆಯು ಮನುಕುಲದ ಒಂದು ಸಹಜ ಮತ್ತು ಆರೋಗ್ಯಕರ ಮನೋಭಾವ. “ಆಹ್ಲಾದಕರ ಹೃದಯ ಅತ್ಯತ್ತಮ ಔಷಧಿ”-ಎಂದುಹೇಳುವ ನಾಣ್ಣುಡಿ ಉಂಟು. ಈ ಪುರಾತನವಾದ ಅರಿವು ಇತ್ತೀಚಿನ ದಿನಗಳಲ್ಲಿ ಒಂದು ನಿಶ್ಚಿತ ಸ್ಥಿತಿಯನ್ನು ತಲುಪಿದೆ. ಎರಡನೇ ಮಹಾ ಯುದ್ಧದ ಕಾಲದಲ್ಲಿ ಯುದ್ದದ ಖೈದಿಗಳಲ್ಲಿ ಬದುಕುವ ಆಸೆ ಇದ್ದವರೂ, ಜೀವನದಲ್ಲಿ ಆಕಾಂಕ್ಷೆ ಇದ್ದವರೂ ಯಾವುದೇ ಆಘಾತವೂ ಇಲ್ಲದೇ ಹೊರಬಂದರು. ಆದರೆ ಭರವಸೆ ಇಲ್ಲದೇ ಇದ್ದವರಿಗೆ ಇದು ಸಾಧ್ಯವಾಗಲಿಲ್ಲ.
ಮನೋವೈದ್ಯರಾದ ಫ್ಲಾಂಡರ್ಸ್ ಡನ್ಬಾರ್ ತಮ್ಮ ಇಬ್ಬರು ಹೃದ್ರೋಗಿಗಳ ಬಗ್ಗೆ ಈ ರೀತಿ ಬರೆದಿದ್ದಾರೆ. “ಒಬ್ಬನು ಇನ್ನು ಎಲ್ಲ ನಿಮ್ಮ ಕೈಯಲ್ಲಿದೆ ಡಾಕ್ಟರ್” ಎಂದಿದ್ದ. ಮತ್ತೊಬ್ಬನು “ನಾನು ಹೇಗಾದರೂ ಮಾಡಿ ಗುಣಮುಖನಾಗಬೇಕು” ಎಂದಿದ್ದ. ಮೊದಲನೆಯವ ಮೃತನಾದ ; ಎರಡನೆಯವ ಗುಣಮುಖನಾದ.
ಪೆನ್ಸಿಲ್ವೇನಿಯಾದ ಪ್ರಾಧ್ಯಾಪಕರಾದ ಡಾ. ಮಾರ್ಟಿನ್ ಸೆಲಿಗ್ಮನ್ರವರು ‹ಖಿನ್ನತೆ› ಮತ್ತು ಅದರಿಂದ ಲಕ್ಷಾಂತರ ಜನರ ಮೇಲಾಗುವ ಪರಿಣಾಮಗಳ ಬಗ್ಗೆ ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ. ಅವರು ಹೇಳುವುದೇನೆಂದರೆ ಖಿನ್ನತೆಯಿಂದ ನರಳುವ ಜನರು ಪ್ರತಿಯೊಂದು ಅಡಚಣೆಯನ್ನೂ ಒಂದು ಅಸಾಧ್ಯವಾದ ಅಡ್ಡಗೋಡೆ ಎಂದೇ ಭಾವಿಸುತ್ತಾರೆ. ಯಾವುದೇ ವಿಧವಾದ ಪ್ರತಿಕ್ರಿಯೆಯೂ ಅಪ್ರಯೋಜಕ ಎನ್ನುತ್ತಾರೆ. ಏಕೆಂದರೆ “ನಾವೇನು ಮಾಡುವುದೂ ಸಾಧ್ಯವಿಲ್ಲ›-ನಾವು ಯಾವಾಗ ನಮ್ಮನ್ನು ಉತ್ತಮ ಜನಾಂಗ ಎಂದು ನಂಬುತ್ತೇವೆಯೋ, ನಮ್ಮ ಜೀವನವನ್ನು ನಾವು ರೂಪಿಸಿಕೊಳ್ಳುತ್ತೇವೆಯೋ- ಆಗ ಸಫಲವಾದ ಚಿಕಿತ್ಸೆಯೂ ಪ್ರಾರಂಭವಾಗುತ್ತದೆ. ನಮ್ಮ ಬಗ್ಗೆ ನಾವಿಟ್ಟಿರುವ ಭರವಸೆ ನಾವು ಮತ್ತೊಬ್ಬರೊಂದಿಗೆ ಹೇಗೆ ವ್ಯವಹರಿಸುತ್ತೇವೆ ಎನ್ನುವುದನ್ನು ರೂಪಿಸುತ್ತದೆ.
ಎ.ಇ.ಹೌಸ್ಮನ್ ತಿಳಿದಿರುವಂತೆ ನಾವೆಲ್ಲರೂ ಈ ರೀತಿಯ ವ್ಯಕ್ತಿಯನ್ನು ಭೇಟಿ ಮಾಡಿರುತ್ತೇವೆ. ಅದೇನೆಂದರೆ ಅನಾರೋಗ್ಯದಿಂದ ಬಳಲುತ್ತಿರುವ ಮನಸ್ಸು ಕರುಣೆಯನ್ನು ತೋರಲಾರದಷ್ಟು ಅಸಂತುಷ್ಟವಾಗಿರುತ್ತದೆ. ಭರವಸೆಯಿಂದ ಕೂಡಿರುವ ವ್ಯಕ್ತಿ, ಮತ್ತೊಬ್ಬ ಮನುಷ್ಯನನ್ನು ಅದೇ ರೀತಿ ಇರುವನೆಂದು ಭಾವಿಸುತ್ತಾನೆ ಮತ್ತು ಆ ರೀತಿ ಇರಲು ಸಹಾಯ ಹಸ್ತವನ್ನೂ ನೀಡುತ್ತಾನೆ.
ನನಗೆ ತಿಳಿದ ಒಬ್ಬ ವ್ಯಕ್ತಿಗೆ ಕುಡುಕ ಹೆಂಡತಿಯಿದ್ದಳು ಮತ್ತು ಆಕೆ ಆತನನ್ನು ಪದೇ ಪದೇ ನಿರಾಶೆ ಗೊಳಿಸುತ್ತಿದ್ದಳು. ಆದರೆ ಆತನು ಭರವಸೆಗುಂದಲಿಲ್ಲ. ಒಂದು ರಾತ್ರಿ ಆಕೆ ತಮ್ಮ ಹಳೆಯ ಸ್ನೇಹಿತರ ಎದುರು ಆತನನ್ನು ಅವಮಾನಿಸಿದಳು. ಅನಂತರ ಕಣ್ಣೀರು ಹಾಕಿದಳು. “ನೀನೇಕೆ ನನ್ನನ್ನು ಬಿಟ್ಟುಬಿಡುವುದಿಲ್ಲ ಎಂದು ಭೋರೆಂದು ಅತ್ತಳು. ಅದಕ್ಕೆ ಅವನು ನನಗೊಬ್ಬ ಸುಂದರವಾದ ವ್ಯಕ್ತಿಯ ಪರಿಚಯವಿದೆ. ಆಕೆ ಈಗಲೂ ಇರುವಳೆಂದೇ ನಂಬುತ್ತೇನೆ” ಎಂದ. ಆಕೆ ನಿಜವಾಗಲೂ ಗುಣಮುಖಳಾದಳು. ಆದರೆ ಈ ಭರವಸೆ ಪ್ರತಿದಿನವೂ ನಮ್ಮನ್ನು ಮೋಸಗೊಳಿಸುತ್ತಿಲ್ಲವೆ? ಅನೇಕರಿಗೆ ಭರವಸೆ ಕತ್ತಲಲ್ಲಿ ಶಿಳ್ಳೆಹಾಕಿದಂತಲ್ಲವೆ? ಇದಕ್ಕೆಲ್ಲ ಯಾವಾಗಲೂ ನಾವು ತಿಳಿದದ್ದನ್ನು ಹೇಳಬೇಕಾಗುತ್ತೆ. ಕಷ್ಟಗಳ ವಿರುದ್ಧ ಭರವಸೆ ಇರಬೇಕು. ಜೀವನದಲ್ಲಿ ಆರು ಸರಿ ಇರುವುದಿಲ್ಲ, ಒಂದು ಸರಿಹೋಗ ಬಹುದು. ಇದು ಯಾವಾಗಲೂ ಹಾಗೆಯೇ. ಜೀವನವು ಉದ್ದಕ್ಕೂ ಕತ್ತಲೆಯೊಂದಿಗೆ ಬೆಳಕಿನ ಸ್ಪರ್ಧೆ; ದುಃಖದೊಂದಿಗೆ ಸಂತಸದ ಸ್ಪರ್ಧೆ. ಆದರೂ ಪ್ರತಿಸಲವೂ ನಾವೆಲ್ಲರೂ ಭರವಸೆಯಿಂದ ಮುನ್ನಡೆಯುತ್ತೇವೆ. ಏತಕ್ಕಾಗಿ? ಬಹುಶಃ ಮನುಷ್ಯನಿಗೆ ಭರವಸೆಯು ಪ್ರಕೃತಿದತ್ತವಾಗಿ ಬಂದದ್ದಾಗಿರಬೇಕು. ಏಕೆಂದರೆ ಹೇಗೋ ನಾವು ಪ್ರತಿ ಮುಂಜಾನೆಯೂ ಹೊಸ ಮನುಷ್ಯರಾಗುತ್ತೇವೆ. ಪ್ರತಿರಾತ್ರಿಯೂ ಕತ್ತಲೆಯಿಂದ ಬೆಳಕಿನೆಡೆಗೆ ಪಯಣಿಸುತ್ತೇವೆ.
ಈ ಸಮಯದಲ್ಲಿ ನನಗೆ ಸಂಕಟಗಳಿಂದ ಅಸ್ತವ್ಯಸ್ತನಾದ ಒಬ್ಬ ಮನುಷ್ಯನ ನೆನಪು ಬರುತ್ತದೆ. ಆತನ ಹೆಂಡತಿ ಪರಪುರುಷನೊಡನೆ ಓಡಿಹೋದಳು-ಆತನ ಮಗು ವಿಶೇಷವಾಗಿ ನಿಯುಕ್ತವಾದ ಶಾಲೆಯಲ್ಲಿ ಓದುತ್ತಿತ್ತು. ಅದು ಶಕ್ತಿಗುಂದಿಸಿರುವ ಖಾಯಿಲೆಯಿಂದ ನರಳುತ್ತಿತ್ತು. ಕಡೆಯದಾಗಿ ಆತನ ಮನೆ ಬೆಂಕಿಯ ಅನಾಹುತಕ್ಕೆ ಈಡಾಗಿತ್ತು. ಆತ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಮರುದಿನ ತನ್ನ ಸ್ನೇಹಿತರೊಂದಿಗೆ ಹೇಳಿದ್ದೇನೆಂದರೆ “ಇದು ಅದೆಷ್ಟು ಸುಂದರವಾದ ಮುಂಜಾನೆ? ನಾನು ಮತ್ತೆ ನನ್ನ ಮನೆಯನ್ನು ಕಟ್ಟುತ್ತೇನೆ”-ಎಂದ. ಆತನಲ್ಲಿ ಮತ್ತೆ ಜೀವನ ಚೇತನ ಬೆಳಗಿತ್ತು.
ಭರವಸೆ ಅತ್ಯಂತ ಸಹಜವಾದ ಮನೋಭಾವ. ಬೀಜದಿಂದ ಸಸಿ ಬರುವಂತೆ, ಪೂರ್ವದಲ್ಲಿ ಸೂರ್ಯನು ಉದಯಿಸುವಂತೆ, ಭೂಮಿ, ಆಕಾಶ, ಸಮುದ್ರ ಮೊದಲಾದ ಎಲ್ಲ ಜೀವಂತ ತಥ್ಯಗಳಲ್ಲಿಯೂ ಭರವಸೆ ತನ್ನ ಮುದ್ರೆಯನ್ನೊತ್ತಿದೆ. ಜೀವಕೋಶಗಳ ವಿಭಜನೆ ಯಾಗುತ್ತದೆ; ಹೂವು ಅರಳುತ್ತದೆ; ಮರದಲ್ಲಿ ಎಲೆಗಳು ಹುಟ್ಟುತ್ತದೆ; ಪ್ರಾಣಿಗಳಲ್ಲಿ ಸಂತಾನೋತ್ಪತ್ತಿಯಾಗುತ್ತದೆ ಮತ್ತು ಅವು ತಮ್ಮ ಎಳೆಯ ಮರಿಗಳನ್ನು ರಕ್ಷಿಸಿಕೊಳ್ಳುತ್ತವೆ. ಎಷ್ಟೇ ಸಹಜವೂ, ಮುಖ್ಯವೂ ಆದರೂ ನಾವು ಭರವಸೆಯನ್ನು ಕಳೆದುಕೊಳ್ಳಬಹುದು. ನಮ್ಮಲ್ಲಿ ಅನೇಕರಿಗೆ ಜೀವನ ಬೆಳೆಯುತ್ತಾ, ಆಯುಷ್ಯ ಕ್ಷೀಣಿಸಿದಂತೆ ಭರವಸೆ ನಶಿಸುತ್ತಾ ಹೋಗುತ್ತದೆ. ನಮಗೆ ಭರವಸೆಯೊಂದಿಗೆ ಮುನ್ನಡೆಯಲು ಹೇಳಿಕೊಡಬಹುದು ಅಥವಾ ಭರವಸೆಯನ್ನು ಮತ್ತೆ ನಮ್ಮದಾಗಿಸಲು ಹೆಳಿಕೊಡಬಹುದು.
ಹೌದು; ಇದು ಖಂಡಿತವಾಗಿಯೂ ಸಾಧ್ಯ. ಸಂಕ್ಷಿಪ್ತವಾಗಿ ಹೇಳುವುದಾದರೆ ಭರವಸೆಯು ನಮ್ಮ ಜೀವನದ ದಾರಿಯಲ್ಲಿಯೇ ಅಡಗಿದೆ. ವಿಶೇಷವಾದ ಅಡ್ಡಿಮಾಡುವ ಅಡಚಣೆಗಳಿಂದ ಹೊರಬರಲು ಭರವಸೆಯು ಸಹಾಯಮಾಡುತ್ತದೆ. ಇಲ್ಲಿ ಕೆಲವು ಉದಾಹರಣೆಗಳಿವೆ:
ಆ ಕ್ಷಣಕ್ಕಾಗಿ ಭರವಸೆ ಇಡು:ಸಾಕಷ್ಟು ಧೈರ್ಯಶಾಲಿಗಳಾಗದೇ ಇದ್ದರೆ ನಾವು ಭವಿಷ್ಯತ್ ಕಾಲಕ್ಕೆ ಹೆದರುತ್ತೇವೆ. ಈ ಅನುಭವವಾದಾಗ ವರ್ತಮಾನಕ್ಕೆ ಹೆಚ್ಚು ಗಮನ ಕೊಡಬೇಕು. ಪಾನಪ್ರಿಯರು ದಿನಕ್ಕೆ ಒಮ್ಮೆ ಶಾಂತ ಚಿತ್ತರಾಗಿರಲು ಪ್ರಯತ್ನಿಸಬೇಕು. ಹತಾಶರಾದವರು ಕಡೆಯಪಕ್ಷ ಒಂದು ದಿನಕ್ಕಾಗಿಯಾದರೂ ಭರವಸೆಯಿಂದ ಕಾಯಬೇಕು. ಧೈರ್ಯ ತಂದುಕೊಳ್ಳುವುದಕ್ಕಾಗಿ ಶ್ರಮಿಸಬೇಕು. ಮುಂದಿನ ಕ್ಷಣದ ಸುಂದರತೆಗಾಗಿ ಕಾಯಬೇಕು. ಉತ್ತಮವಾದ ಆಹಾರ, ನಿದ್ರೆ, ಪುಸ್ತಕ, ಚಲನಚಿತ್ರ ಇವುಗಳಿಗಾಗಿ ಕಾಯಬೇಕು. ಬೇರುಗಳನ್ನು ವರ್ತಮಾಕಾಲದಲ್ಲಿ ಹೂತು ಭವಿಷ್ಯತ್ತಿನ ನಾಳೆಯ ಶಕ್ತಿಗಾಗಿ ಕಾಯಬೇಕು.
ಕಾಯಕಕ್ಕೆ ಸಿದ್ಧನಾಗು: ಒಬ್ಬ ಅಪರಿಚಿತ ನನಗೆ ಬರೆದಿದ್ದುದೇನೆಂದರೆ, “ಬೇರೆ ದಾರಿಯೇ ತೋರದಿದ್ದಾಗ ನಾನು ಏನನ್ನಾದರೂ ಮಾಡುತ್ತೇನೆ”, ನಿರಾಶೆಯಲ್ಲಿ ಮುಳುಗಿರುವವರಿಗೆ ಇದೊಂದು ಉಪದೇಶ. ಸರಿಯಾದ ಮಾರ್ಗಕ್ಕೆ ಇದು ಒಂದು ಹೆಜ್ಜೆ. ಚಾರ್ಲಸ್ ಮೆಕೇಬ್ ಹೇಳಿದಂತೆ ಈ ಪ್ರಪಂಚದ ನಿಜವಾದ ಪಾಪಕರ್ಮವೆಂದರೆ ಹೋರಾಟವಿಲ್ಲದೆ ಇರುವುದು ಮತ್ತು ನಮ್ಮ ಸ್ವಭಾವದ ಪೂರ್ಣಪರಿಚಯ ನಮಗೆ ಅರಿವು ಇಲ್ಲದೇ ಇರುವುದು. ಇವೆಲ್ಲವನ್ನೂ ನಾವು ಓಡಿಸಿದಲ್ಲಿ ನಮ್ಮನ್ನು ನಾವು ಬದಲಾಯಿಸಿಕೊಳ್ಳವಹುದು.
ಭರವಸೆಯಲ್ಲಿ ನಂಬಿಕೆ ಇಡು: ಅಶುಭದ ಪ್ರತೀಕ್ಷೆ ಮಾಡುವವರೆಲ್ಲರಿಗೂ ಸತ್ಯದ ಮೇಲೆ ಪೂರ್ಣ ಅಧಿಕಾರವಿದೆ ಎಂದು ನಂಬಬೇಡಿ. ಈ ಜನರು ಸಂದೇಹ ವಾದದ ಸುಳಿಯಲ್ಲಿ ಸಿಕ್ಕಿರುತ್ತಾರೆ. ಅಷ್ಟೇ ಅಲ್ಲದೇ ಮುಂದಕ್ಕೆ ಭರವಸೆಯೇ ಇಲ್ಲವೆಂದಾಗ ಇವರು ಏನೂ ಮಾಡಲಿಕ್ಕಿಲ್ಲ ಎಂದುಬಿಡುತ್ತಾರೆ. ಕೆಲಸಗಳಿಂದ ತಪ್ಪಿಸಿಕೊಳ್ಳಲು ಇದು ಒಂದು ಒಳ್ಳೆಯ ನೆಪ. ಆದರೆ ಸೋತು ಬಿದ್ದಿರುವ ವ್ಯಕ್ತಿ ಎದ್ದು ನಿಂತು ಕಷ್ಟ ಪರಂಪರೆಗೆ ಹೇಳಬಹುದು, ‹ನಾಳೆಯ ದಿನ ಉತ್ತಮವಾಗಬಹುದು › ಭರವಸೆಯು ಮಿಥ್ಯೆಯಲ್ಲ, ಅದು ಸತ್ಯ. ಮನುಷ್ಯನು ತಾನು ನಶಿಸುತ್ತಾ ಹೋದಾಗಲೂ ಭರವಸೆಯಿಟ್ಟು ಸಂಘವು ಮುನ್ನಡೆಯಬೇಕೆಂದು ಆಶಿಸುತ್ತಾನೆ. ನಂಬಿಕೆಯಿಂದ ಬಲಶಾಲಿಗಳಾದ ಸಾಮಾನ್ಯ ಮನುಷ್ಯರೂ ಪವಿತ್ರವಾದ ಮತ್ತು ವೀರೋಚಿತವಾದ ಸಾಧನೆಗಳನ್ನು ಮಾಡಬಲ್ಲರು.
ಆದ್ದರಿಂದ ಭರವಸೆಯನ್ನು ಮೈಗೂಡಿಸಿಕೊಳ್ಳಿ. ಇದು ವಸಂತ ಮಾಸದ ಬಿಸಿಲಿನಂತೆ ಸತ್ಯ. ಹಾಗಾಗದಿದ್ದರೂ ಇದು ಇಂದ್ರಜಾಲದಂತೆ ಕೆಲಸಮಾಡುತ್ತದೆ. ಏಕಂದರೆ ಭರವಸೆಯೇ ಒಂದು ಗುರಿಯಾಗಿದೆ. ಇದು ಒಂದು ವೀರೋಚಿತ ಪರಿಶ್ರಮವಾಗಿದೆ. ಮನಸ್ಸಿನ ಒಂದು ಕನ್ನಡಿಯಾಗಿದೆ. ಜೀವನದ ರೀತಿ ಮತ್ತು ಹೃದಯದ ಒಂದು ಮಿಡಿತವಾಗಿದೆ.
ಒಂದುವೇಳೆ ನಾವು ಜಯಶಾಲಿಗಳಾಗದೇ ಇದ್ದಾಗಲೂ ಸಾವು ನೋವುಗಳು ನಮ್ಮನ್ನು ಸುತ್ತುವರಿದಾಗಲೂ ಭರವಸೆ ಇಡುವುದು ಒಳ್ಳೆಯದು ಏಕೆಂದರೆ ಇದು ನಮ್ಮಲ್ಲಿರುವ ಸಂತಸದ ಕೊನೆಯ ಹನಿಯನ್ನು ಆರದೇ ಇಡುತ್ತದೆ. ಭರವಸೆಯಿಂದ ಸಂತಸ ಉಕ್ಕಿ ಬರುತ್ತದೆ. ಒಂದು ವೇಳೆ ವಿಪತ್ತು ಸಂಭವಿಸಿದರೆ ಭರವಸೆಯಿಂದ ಅದನ್ನು ಎದುರಿಸುವ ಶಕ್ತಿ ಬರುತ್ತದೆ . . . .

ಆರ್ಡಲ್ಸ್ ವೈಟ್ಮನ್ ರವರ ‘ದಿ ವಿಟಲ್ ಸ್ಪಾಕರ್’ ಲೇಖನದ ಭಾವಾನುವಾದ

*-ಜಯಂತಿ ಅಮೃತೇಶ್
`ಕೃತ್ತಿಕ', ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com