ಅಮೆರಿಕನ್ನಡ
Amerikannada
ನನ್ನ ಅಮ್ಮನ ಪ್ರೀತಿ
-ನಳಿನಿ ಮೈಯ್ಯ, ಅಮೆರಿಕಾ
ನನ್ನ ಅಮ್ಮನ ಪ್ರೀತಿ
ಹಾಲಲ್ಲಡಗಿದ ಮೊಸರಿನಂತೆ
ಮೊಸರಲ್ಲಡಗಿದ ಬೆಣ್ಣೆಯಂತೆ
ಗುಪ್ತವಾಗಿ, ಸುಪ್ತವಾಗಿ ನನ್ನ
ಮುತ್ತುವುದು, ಸುತ್ತುವುದು
ಕಾಡುವುದು, ಕಾಯುವುದು

ಮುದ್ದು ಮಾಡಿ ಗೊತ್ತಿಲ್ಲದವಳವಳು
ತಬ್ಬಿ ಮುಂಗುರುಳ ನೇವರಿಸಳವಳು
ಲಲ್ಲೆ ಮಾತನಾಡಳು
ಮೆಲ್ಲ ನಗುವ ಬೀರಳು

ಆದರೆ...
ಮನೆ ಬಿಟ್ಟು ಹೊರಟಾಗ ಕಣ್ಣಲ್ಲಿ ನೀರಾಗಿ ತುಂಬಿತ್ತು ಅವಳ ಪ್ರೀತಿ
ದಿನ ನಿತ್ಯ ಮಗಳ ಸಲುವಾಗಿ ದೇವರಲಿ ಬೇಡಿಕೊಂಡಿತ್ತು ಅವಳ ಪ್ರೀತಿ
ಕಷ್ಟದಲಿ ಅಕ್ಷರವ ಜೋಡಿಸುತ ಬರೆದ ಕಾಗದದಲ್ಲಿ ಅವಳ ಪ್ರೀತಿ
ಎಷ್ಟು ಸುಸ್ತಾದರೂ ಬಿಡದೆ ಮೊಮ್ಮಕ್ಕಳಿಗೆ ಅಟ್ಟ ಅಡಿಗೆಯಲೆಲ್ಲ ಅವಳ ಪ್ರೀತಿ

ನಮ್ಮನ್ನಗಲಿ ಹೊರಟೆ ಹೋದಳು ಅವಳು
ಹೋದಳೆಂದೆನೆ? ಸುಳ್ಳು! ಇಲ್ಲಿರುವಳು

ದೇವರ ಮನೆಯಲ್ಲಿ ಬೆಳಗುವ ನಂದಾದೀಪದಲ್ಲಿ
ಬೆಳಕಾಗಿ ಕಂಡು ಬರುವಳು ಅವಳು

ಅಡಿಗೆ ಮನೆಯಲ್ಲಿ ಹಬ್ಬದ ದಿನ
ಏಲಕ್ಕಿ ಪರಿಮಳವಾಗಿ ತೇಲಿ ಬರುವಳು ಅವಳು

ನನ್ನ ಕಣ್ಣೀರನೊರೆಸುವ ಕರವಸ್ತ್ರದಲ್ಲಿ
ಆಶೀರ್ವಾದವಾಗಿ ಅವಿತುಕೊಂಡಿರುವಳು ಅವಳು

ಕಷ್ಟದ ಹಾದಿಯಲ್ಲಿ ನಾನು ನಡೆದಾಗೆಲ್ಲ ಬೆನ್ನಲ್ಲಿ
ರಕ್ಷೆಯಾಗಿ ನನ್ನ ಹಿಂಬಾಲಿಸುತಿದೆ ಅವಳ ನೆರಳು