ಅಮೆರಿಕನ್ನಡ
Amerikannada
ಅಮ್ಮ
-ಶಿಕಾರಿಪುರ ಹರಿಹರೇಶ್ವರ, ಮೈಸೂರು
‘ಅಮ್ಮ’ ಎಂಬ ಎರಡು ಮತ್ತೊಂದರ್ಧ ಅಕ್ಷರದ ಈ ಚಿಕ್ಕ ಕನ್ನಡ ಪದವೊಂದರಲ್ಲಿ ಏನೆಲ್ಲ ಅರ್ಥ ಭಾವನೆ ನೆನಪು ಅಕ್ಕರೆ ಹೊಣೆ ಗೌರವ ಋಣದ ಗುಣಗಳು, ಸಾಸಿವೆಯಲ್ಲಿ ಆನೆಯಂತೆ, ಅಡಗಿ ಕುಳಿತು ಸುರುಳಿ ಸುರುಳಿಯಾಗಿ ಅರಳಿ ಅರಳಿ, ಯೋಚಿಸಿದಷ್ಟೂ ಹೆಚ್ಚು ಹೆಚ್ಚಾಗಿ ಬಿಚ್ಚಿಕೊಳ್ಳುತ್ತಾ ಬೆರಗುಗೊಳಿಸುತ್ತದಲ್ಲವೇ? ಇದನ್ನು ಕುರಿತು ಸ್ವಲ್ಪ ಹೊತ್ತು ನಿಮ್ಮೊಂದಿಗೆ ಮಾತನಾಡುತ್ತಾ, ನನಗೆ ತಿಳಿದ ಕೊಂಚ ವಿಷಯಗಳನ್ನು ಹಂಚಿಕೊಳ್ಳುವ ಹಂಬಲ ನನ್ನದು.
ಜೊತೆಗೆ, ನಮ್ಮನ್ನು ಹೊತ್ತಿರುವ ಈ ಭೂಮಿಗಿಂತ ಒಂದು ತೂಕ ಹೆಚ್ಚೆಂದು ಯಾವಳನ್ನು ಬಲ್ಲವರು ಬಣ್ಣಿಸಿದ್ದಾರೋ, ಆ ಹೊತ್ತು ಹೆತ್ತವಳನ್ನ ಕುರಿತು ತಿಳಿದವರು ಅಲ್ಲಲ್ಲಿ ಹೇಳಿರುವ ನಾಲ್ಕಾರು ಮಾತುಗಳನ್ನು ಉಪಯೋಗಿಸಿಕೊಂಡು ಈ ನುಡಿಮಾಲೆಯನ್ನು ಕಟ್ಟಿ, ಜಗತ್ತಿನ ಎಲ್ಲ ತಾಯಿಯರ ಕೊರಳಿಗೆ ಒಮ್ಮೆಲೇ ಹಾಕುವ ಕಿರು ಪ್ರಯತ್ನ ಇದು.
ತಾಯಿಯೇ ದೇವರು: ‘ದೇವರು’ ಅಂದಾಗ ಹುಟ್ಟು ಉಳಿವು ಅಳಿವು-ಈ ಮೂರೇ ಅಲ್ಲವೇ ಆ ಪರಮೋಚ್ಚ ಶಕ್ತಿಯ ಪ್ರಧಾನ ವೈಶಿಷ್ಟ್ಯಗಳು? ಹಾಗಾಗಿ, ಇಲ್ಲಿಗೆ ಬರಲು ಅವಳೇ ಕಾರಣ, ಇಲ್ಲಿರಲು ಎಡೆಕೊಟ್ಟಿದ್ದೂ ಸಹ ಮೊಟ್ಟ ಮೊದಲು ಅವಳೇ; ಯಾವುದು ಇರದೇ ಹೋಗಿದ್ದರೆ ಇದ್ದೂ ಇಲ್ಲದ ಹಾಗೆ ಬಾಳು ವ್ಯರ್ಥವಾಗಿ ಹೋಗುತ್ತಿತ್ತೋ ಆ ತಿಳುವಳಿಕೆಯ ಬೆಳಕನ್ನು ಮಗುವಿದ್ದಾಗಿಂದಲೇ ಯಾರು ಮೂಡಿಸಿದರೋ ಆ ‘ಬೆಳಕ ಒಡಲ’ನ್ನ, ತಾಯಿಗಿಂತ ದೊಡ್ಡ ದೇವರಿಲ್ಲ ಎನ್ನುವ ಮಾತಿನಿಂದ ಸೂಚಿಸಿದೆವು. ಇದನ್ನೇ ತೈತ್ತಿರೀಯ ಉಪನಿಷತ್ತಿನ ಗುರು ಶಿಷ್ಯನಿಗೆ ನೆನಪಿಸುವುದು: “ತಾಯಿಯೇ ದೇವರಾದವನು ನೀನಾಗು, ಅಥವಾ ನಿನಗೆ ತಾಯಿಯೇ ದೇವರಾಗಿರಲಿ ಮಾತೃ ದೇವೋ ಭವ” ಎಂದು.
ಇಸ್ಲಾಂನಲ್ಲಿ ಏಕಮೇವಾದ್ವಿತೀಯನಾದ ಅಲ್ಲಾಹ್ಗೆ ಗುಣಗಳನ್ನು ಆರೋಪಿಸಿ ಸ್ತುತಿಸುವಾಗ ಹೇಳುತ್ತಾರೆ: ‘ಅರ್-ರಹಮಾನ್’(ಪರಮ ಉದಾರಿ), ‘ಅರ್ ರಜ್ಜಾಕ್’(ಪರಮ ಪೋಷಕ) ಮತ್ತು ‘ಅಲ್-ಗಫ್ಫಾರ್’(ಎಲ್ಲರನ್ನೂ ಕ್ಷಮಿಸುವವ) ಎಂದು. ಯಾವ ಮಗುವಿಗೆ ಆಗಲಿ, ‘ಅರ್-ರಹಮಾನ್’, ‘ಅರ್-ರಜ್ಜಾಕ್’ ಮತ್ತು ‘ಅಲ್-ಗಫ್ಫಾರ್’ ಆಗಿರುವ ಪವಿತ್ರಾತ್ಮವೆಂದರೆ, ತಾಯಿಯಲ್ಲದೆ ಬೇರೆ ಇನ್ನಾರು? ಈ ಕಾರಣಕ್ಕೆ ಅಲ್ಲೂ ತಾಯಿಯೇ ದೇವರು!
ತಾಯ್ತನವನ್ನೇ ದೈವತ್ವವೆನ್ನುವುದು. ತಾಯ ತೋಳತೆಕ್ಕೆಯಲ್ಲಿ ನಿಶ್ಚಿಂತತೆಯ ಅನಿರ್ವಚನೀಯ ಸುಖ ಸಿಕ್ಕುವುದೆಂಬ ಕಾರಣಕ್ಕೇ ಅದನ್ನೇ ‘ಸ್ವರ್ಗ’ವೆಂದು ಮಗು ಭಾವಿಸುವುದು. ಮಗುವಿನ ಮತ್ತು ಮಗುವಿನಂಥವರ ಮನಸ್ಸಿನಲ್ಲಿ ಸ್ವರ್ಗದ ಕಲ್ಪನೆ ಇನ್ನು ಏನಿದ್ದೀತು, ಹೇಳಿ. ಕೇಳಿಲ್ಲವೇ
“ಸ್ವರ್ಗ ಶಮನಗೊಳಿಸಲಾರದಂಥ,
ನೆಲದ ಮೇಲೆ ಏನಿಹುದು, ಎಲ್ಲಿಹುದು-
ಯಾವುದಿಹುದು ವ್ಯಥೆ ಕಷ್ಟ ದುಃಖ?”

ಎಂದಾಗ ತಾನೆ ತಾಯಿಯನ್ನೇ ಸ್ವರ್ಗವಾಗಿ, ಸ್ವರ್ಗಕ್ಕೆ ಏಕಮೇವಾದ್ವಿತೀಯ ಒಡತಿಯಾಗಿ, ದೇವರಾಗಿ ಕಂಡು ಹಾಡಿದ್ದು! ಜೊತೆಗೆ
“ಎಲ್ಲೆಡೆಯಲೂ ಎಲ್ಲರೊಡನೆ
ಎಲ್ಲ ಸಮಯದಲ್ಲೂ ಇರಲು ನನಗೆ
ಅಲ್ಪ ಸ್ವಲ್ಪ ತೊಂದರೆ;
ಆದ್ದರಿಂದ ನಿಮ್ಮ ಯೋಗಕ್ಷೇಮ
ನೋಡಿಕೊಳ್ಳಲೆಂದೇ ನಾನು ನಿಮ್ಮ
ತಾಯಿಯನ್ನು ಕಳಿಸಿದೆ!”
-ಎಂಬ, ದೇವರೇ ಆಡಿದ ಹಾಗಿರುವ, ಜಾಣಮಾತೊಂದಿದೆ.

“ಆಕಾಶ (ದ್ಯೌ) ಮತ್ತು ಭೂಮಿ(ಪೃಥಿವೀ) ಇಬ್ಬರೂ ಮಹಾ ಮಾತೆಯರು, ಅವರು ಎಲ್ಲರ ತಂದೆತಾಯಿಗಳು; ಹಾಗಿರುತ್ತ, ಎಲ್ಲ ಜೀವಿಗಳನ್ನೂ ಅವರೇ ಕ್ಷೇಮವಾಗಿ ಇರಿಸಿರುವವರು” ಎನ್ನುತ್ತದೆ, ಋಗ್ವೇದ. ತಾಯಿಯಂತೆಯೇ ಕೇಳಿದ್ದ ಕೊಡುವವಳೆಂದೇ ಅಲ್ಲವೇ ‘ಜನನೀ ಪೃಥ್ವೀ ಕಾಮ-ಧುಕ್ ಆರ್ತೇ’, ಹೊತ್ತ ನೆಲವೇ ನಿಜಕ್ಕೂ ಹೆತ್ತ ತಾಯಿಯಂತೆಯೇ ಎಂದು ನಾವು ಹಾಡಿದ್ದು?
ತಾಯಿ ನಮಗೆ ಮಾಡಿದ ಉಪಕಾರವನ್ನು ನಾವು ಹಿಂತಿರುಗಿಸಲು ಸಾಧ್ಯವೇ? ತಾಯಿಯು ಭೂಮಿಯ ಸಾಕ್ಷಾತ್ ರೂಪ ಎನ್ನುವ ಮನು ತನ್ನ ಸ್ಮೃತಿಯಲ್ಲಿ ಈ ಬಗ್ಗೆ ಹೇಳುವುದನ್ನು ಕೇಳಿ:
“ಚಿಕ್ಕಂದಿನಲ್ಲಿ ಪಾಠ ಹೇಳಿಕೊಟ್ಟ ಉಪಾಧ್ಯಾಯ, ವಿಶೇಷ ಅಧ್ಯಯನವನ್ನು ಅನುಗ್ರಹಿಸಿದ ಗುರು, ಪಾಲಿಸಿದ ತಂದೆ ಇವರೆಲ್ಲರಿಗಿಂತ ತಾಯಿ ನೂರಾರು ಪಟ್ಟು ಮಿಗಿಲು”. ಮಗುವಿನ ಹುಟ್ಟಿನಿಂದ ಹಿಡಿದು ಕೊನೆಯವರೆಗೂ ತಂದೆತಾಯಿಗಳು ಪಡುವ ಪಾಡು, ಸಹಿಸುವ ನೋವನ್ನು ‘ತೀರಿಸ’ಲೆನೆ ನೂರಾರು ವರ್ಷಗಳು ಸಾಲದು. ತಾಯಿ, ತಂದೆ ಮತ್ತು ಗುರುವಿಗೆ ನಿತ್ಯವೂ ಹಿತಕರವಾದುದನ್ನೇ ಮಾಡಿರಿ; ಇವರು ಮೂವರು ತೃಪ್ತರಾದರೆ ನೀವು ಎಲ್ಲ ಬಗೆಯ ತಪಸ್ಸನ್ನು ಮಾಡಿ ಮುಗಿಸಿದಂತೆಯೇ! ತಾಯಿ, ತಂದೆ ಮತ್ತು ಗುರುವಿಗೆ ಮಾಡುವ ಶುಶ್ರೂಷೆಯೇ ನಿಜವಾದ ತಪಸ್ಸು; ಇವರ ಅನುಮತಿಯಿಲ್ಲದೆ, ಸಮ್ಮತಿಯಿಲ್ಲದೆ ಇಲ್ಲವೇ ಇವರ ವಿರುದ್ಧವಾಗಿ ಯಾವ ಕೆಲಸದಲ್ಲೂ ತೊಡಗುವುದು ಬೇಡ! ಇವರ ಪ್ರತ್ಯಕ್ಷ/ಪರೋಕ್ಷ ಸಮ್ಮತಿಯಿಲ್ಲದೆ ನೀವು ನಡೆಸಿದುದೆಲ್ಲ ನಿಷ್ಫಲವೇ! ಸ್ವರ್ಗ ಮರ್ತ್ಯ ಪಾತಾಳವೆಂಬ ಮೂರು ಲೋಕಗಳು ಬೇರೆ ಎಲ್ಲೋ ಇಲ್ಲ ಕಾಣಿರೋ, ತಾಯಿ ತಂದೆ ಗುರುಗಳೇ ಅವು; ಇವರೇ ನಮ್ಮ ಜೀವನದ ನಿಜ ಮೈಲಿಗಲ್ಲುಗಳು, ಇವರೇ ನಿಮ್ಮ ಎಲ್ಲ ತಿಳುವಳಿಕೆಯ ರಸಮೂಲಗಳು, ಇವರೇ ನಿಮ್ಮ ಬಾಳ ದೀವಿಗೆಗಳು! ನಿಮ್ಮ ‘ಧರ್ಮ’ವೆಂದರೆ ಈ ಮೂವರೇ!

ಗೌತಮ ಬುದ್ಧ ಹೇಳುವುದೂ ಅದನ್ನೇ: “ಕೆಟ್ಟದನ್ನ ಬಿಟ್ಟುಬಿಡಿ; ಬಲ್ಲವರನ್ನು ಆಶ್ರಯಿಸಿ. ಪೂಜಾರ್ಹರನ್ನು ಗೌರವಿಸಿರಿ ಇದು ನಿಮಗೆ ಕಲ್ಯಾಣಕರವಾದದ್ದು. ತಾಯಿ, ತಂದೆ, ಉಪಾಧ್ಯಾಯರು, ಮಕ್ಕಳು, ಹೆಂಡತಿ ಇವರುಗಳನ್ನು ಪ್ರೀತಿಯಿಂದ ಒಳ್ಳೆಯ ಕೆಲಸಗಳಿಂದ ಕಾಪಾಡಿರಿ ಇದೇ ನಿಮಗೆ ಶುಭಕರವಾದದ್ದು; ತಪಸ್ಸಿನ ಮಾರ್ಗ, ಇಂದ್ರಿಯ ನಿಗ್ರಹ, ಆರ್ಯ ಸಜ್ಜನರ ದರ್ಶನ, ನಿರ್ವಾಣದತ್ತ ಕೊಂಡೊಯ್ಯುವ ಸತ್ಕಾರ್ಯಗಳು ಇವೇ ನಿಮಗೆ ಶಾಂತಿತರುವಂತಹವು. ಇದೇ ನಿಮಗೆ ನಾನು ಕೊಡಬಲ್ಲ ಮಂಗಳ ಶಾಸನ!”
“ಈ ಜಗತ್ತಿಗೆ ತಂದೆಯೂ ನಾನೇ, ತಾಯಿಯೂ ನಾನೇ” ಎಂದು ಶ್ರೀ ಕೃಷ್ಣ ಹೇಳುವ ಸಂದರ್ಭದಲ್ಲಿ ತಾಯಿ(ತಂದೆ)ಯಾಗಿ ಏನೆಲ್ಲ ಜವಾಬ್ದಾರಿಯನ್ನು ನಿರ್ವಹಿಸುವೆ ಎಂದು ಪಟ್ಟಿ ಮಾಡುತ್ತಾನೆ. ‘ತಾಯಿಗಿಂತ ನೆರಳಿಲ್ಲ’ ಎಂಬ ಮಾತನ್ನು ಚೆನ್ನಾಗಿ ಅನುಭವಿಸಿ ಹೇಳಬಲ್ಲವರೆಂದರೆ ಅದು ಇನ್ನೊಂದು ಹೆಣ್ಣು ಮಾತ್ರಾ ಅದೇ ‘ಮಗಳು’! ಅವಳೊಬ್ಬಳಿಗೇನೇ ಮಹಾಭಾರತದ ಈ ಮಾತು ಚೆನ್ನಾಗಿ ಗೊತ್ತು:
ಆಶ್ರಯವೋ ಅಸದೃಶ, ಬೆಂಬಲವೋ ಅನುಪಮ;
ಕುಗ್ಗಿದೆದೆಗೆ ಧೈರ್ಯದ ಸೆಲೆ ಚಿಮ್ಮಿಸುವಳು ನಿರಂತರ,
ಪ್ರೀತಿಸುಧೆಯ ಆ ಬುಗ್ಗೆಗೆ ಎಣೆಯಿಹುದೆ ಸಮಸಮ?
ತಾಯಿ ಎಲ್ಲವನ್ನೂ ಮೀರಿ ಮೇಲೆ ನಿಂತಿಹಳು ಎತ್ತರ!

ಇದನ್ನೇ ಅನಾಮಿಕ ಜಾನಪದ ಕವಯಿತ್ರಿಯೊಬ್ಬಳು ತನ್ನ ಮನಸ್ಸಿನ ಮಾತುಗಳನ್ನು ಒಂದು ಶಬ್ದಚಿತ್ರದ ಪತ್ತಲವನ್ನಾಗಿ ನೇಯುವುದು, ಬಿಸುಸುಯ್ಯುವುದು:
“ಬ್ಯಾಸಗಿ ದಿವಸಕ ಬೇವಿನ ಮರ ತಂಪ|
ಭೀಮರತಿಯೆಂಬ ಹೊಳಿತಂಪ| ಹಡೆದವ್ವ|
ನೀತಂಪ ನನ್ನ ತವರೀಗಿ||
ತಾಯಿ ಮಕ್ಕಳ ದನಿಯು, ತಾಳ ಬಾರಿಸಿದಾಂಗ|
ಜೋಡ ಕಿನ್ನುರಿ ನುಡಿದಾಂಗ| ಹಲಸಂಗಿ|
ಹೊತ್ತೇರಿ ತಾಸೆ ಬಡೆದಾಂಗ||
ತಾಯಿ ಕಾಣದ ಜೀವ ತಾವೂರಿ ಬಾವೂರಿ,
ಭಾಳ ಬಿಸಲಾನ ಅವರೀಯ| ಹೂವಿನ್ಹಾಂಗ|
ಬಾಡತೀನಿ ತಾಯ ಕರಯದೊಯ್ಯ||
ತಾಯಿಲ್ದ ತವರೀಗಿ ಹೋಗದಿರು ನನ ಮನವ|
ನೀರಿಲ್ದ ಕೆರಿಗಿ ಕರ ಬಂದು| ತಿರುಗಾಗ|
ಆಗ ನೋಡದರ ದುಃಖಗಳ||
ತಾಯಿದ್ರ ತವರ್ಹೆಚ್ಚು, ತಂದಿದ್ರ ಬಳಗ್ಹೆಚ್ಚು|
ಸಾವಿರಕೆ ಹೆಚ್ಚು ಪತಿಪುರುಷ| ಹೊಟ್ಟೀಯ|
ಮಾಣಿಕದ ಹರಳು ಮಗ ಹೆಚ್ಚು||”

‘ಅಮ್ಮ’ನಿಗೆ ಹಲವು ಹೆಸರುಗಳು:
‘ಅಮ್ಮ’ನಿಗೆ ಅಕ್ಕರೆಯಿಂದ ಕವಿಗಳು ಕರೆದ ಹೆಸರುಗಳು ಹಲವು. ಮೊದಲು ಸಂಸ್ಕೃತದಲ್ಲಿ ನೋಡೋಣ: ಹೊಟ್ಟೆಯಲ್ಲಿ ಹೊತ್ತವಳೆಂದು ಅವಳು ‘ಧಾತ್ರಿ’ ಜನ್ಮವಿತ್ತವಳೆಂದು ಅವಳು ‘ಜನನೀ’ ಅಂಗಾಂಗಗಳ ಬೆಳವಣಿಗೆಗೆ ಕಾರಣಳು ಅವಳೆಂದು ‘ಅಂಬಾ’, ವೀರನನ್ನು ಹೆತ್ತಳೆಂದು ಆಕೆ ‘ವೀರಸೂ’, ಶುಶ್ರೂಷೆ ಮಾಡಿ ಬೆಳಸಿದಳೆಂದು ‘ಶುಶ್ರೂ’-ಹೀಗೆ, ತನ್ನ ಮಗುವಿಗೂ ತನಗೂ ದೇಹದಲ್ಲಿ ಏನೂ ಅಂತರ ಇರಿಸಿಕೊಳ್ಳದೇ ಇರುವಾಕೆಯೇ ‘ತಾಯಿ’ -ಎಂದು ಜ್ಞಾನಮಯ ಪ್ರದೀಪವನ್ನು ಪ್ರಜ್ವಲಿಸಿದ ವ್ಯಾಸರು ನಿಷ್ಪತ್ತಿ ಹೇಳುತ್ತಾರೆ! ಅಮರಕೋಶಕಾರ ಹೆತ್ತವಳನ್ನು ‘ಜನಯಿತ್ರೀ, ಪ್ರಸೂ, ಮಾತೃ ಮತ್ತು ಜನನೀ’ ಎಂದು ಹೆಸರಿಸುತ್ತಾನೆ. ವೈದಿಕ ವಾಂಙ್ಮಯದಲ್ಲಿ ‘ಮಾತೃ’ ಶಬ್ದವೇ ಬಹುವಾಗಿ ಬಳಕೆಯಲ್ಲಿದ್ದ ಪದ. ಹಡೆದವಳೆಂದು ‘ಪ್ರಸವಿತ್ರೀ, ಪ್ರಸವಿನೀ, ಜನೀ’ ಎಂದೂ, ಮಕ್ಕಳುಳ್ಳವಳೆಂದು ‘ಪುತ್ರವತೀ, ಅಪತ್ಯವತೀ’ ಎಂದು ಸಂಸ್ಕೃತದಲ್ಲಿ ಉಂಟು. ಅವಳಿಗೆ ‘ಸವಿತ್ರೀ’ ಒಂದು ಅಪರೂಪದ ಹೆಸರಿನ ಪ್ರಯೋಗವೂ ಉಂಟು. ಹಿಂದಿಯ ತಾಯಿ ‘ಮಾ’ ಪದ, ಸಂಸ್ಕೃತದಲ್ಲಿ ಎಲ್ಲ ವಿಧದ ಶ್ರೇಯಸ್ಸಿನ ಅಧಿಷ್ಠಾತ್ರೀ ದೇವಿ ‘ಲಕ್ಷ್ಮೀ’ ಆಗಿರುವುದು ಅರ್ಥಪೂರ್ಣ.

ಕನ್ನಡದಲ್ಲಿ: ಸಂಸ್ಕೃತದ ‘ಅಮ್ಬಾ’ ಕನ್ನಡದಲ್ಲಿ ಅಬ್ಬಾ, ಅಬ್ಬೆ, ಅವ್ವೆ, ಅವ್ವ, ಅಮ್ಮಾ, ಅಮ್ಮ, ಅಮ್ಮೆ, ಅಮ್ಮೈ, ಅಮ್ಮಣ್ಣಿಗಳ ರೂಪ ತಳೆದವು, (ತಮಿಳಿನಲ್ಲಿ ಅಮ್ಮ ಅಮ್ಮೈ, ತೆಲುಗುವಿನಲ್ಲಿ ಮಲೆಯಾಳದಲ್ಲಿ ಅಮೆ, ತುಳುವಿನಲ್ಲಿ ಅಪ್ಪೆ ಇದರ ರೂಪಾಂತರಗಳು). ಹಳೆಗನ್ನಡದಲ್ಲಿ ‘ಅಬ್ಬೆ’ ಎಂದಾಗ ತಾಯಿ. ‘ನಿನ್ನ ಕೈಯಿಂದಂ ಕೊಳ್ಳೆ ಪೋಗ್ ಅಬ್ಬಾ’, ‘ನಿನ್ನಂ ಏಕೆ ಕಾಷ್ಠಕೂಟಂ ಬಡಿದನ್ ಅಬ್ಬಾ ಎಂದು ಬೆಸಗೊಂಡಡೆ’, ‘ಅರಸಿಗೆಂದರ್ ಅಬ್ಬಾ ಇಂದೆಮಗೆ ಉಣ್ಕೆ ಬಗೆಯಿಲ್ಲ’ -ಎಂದೆಲ್ಲಾ ‘ಅಬ್ಬೆ’ಯನ್ನು ಗೋಳು ಹೊಯ್ದುಕೊಳ್ಳುತ್ತಿದ್ದರು ಆ ಕಾಲದಲ್ಲಿ! ಜಾಕಬ್ಬೆ, ದೇಕಬ್ಬೆ- ಎಂದು ‘ಚಾರು ಚರಿತ್ರೆ, ಗೋತ್ರಪವಿತ್ರೆ, ಸುಶೀಲಯುಕ್ತೆ’ಯರಿಗೆ ಹೆಸರಿಡುತ್ತಿದ್ದ ಕಾಲವೊಂದಿತ್ತು. ಕುನ್ದಕಬ್ಬೆ, ಕೌಣ್ಡಿಕಬ್ಬೆ, ಪೋಳಕಬ್ಬೆಗಳು ಸಹ ಇದ್ದರು. ಈಗ ‘ಅಬ್ಬೆ’ ಮತ್ತು ‘ಅಬೇ’ ಹೀನಾರ್ಥದಲ್ಲಿ ಬಳಕೆಯಾಗುತ್ತಿದೆಯೆಂಬ ಮಾತು ಬೇರೆ. ‘ಅಬ್ಬೆ’ ಎಂಬುದು ‘ಅವ್ವಾ’ ‘ಅವ್ವ’ ಆಗಲು ತಡವಾಗಲಿಲ್ಲ: ‘ಸತ್ಯವಾದಿಯೈ, ಪೋಗ್ ಅವ್ವಾ ಎಂದು ಪೇಳ್ದೊಡೆ’ ಎಂಬ ಪ್ರಯೋಗಕ್ಕೆ ಎಡೆಮಾಡಿಕೊಟ್ಟಿತು.
‘ಅಮ್ಮ’ ಎಂದರೆ ‘ತಂದೆ’ ಎಂದೂ ಅರ್ಥ ಒಂದು ಕಾಲದಲ್ಲಿತ್ತು. ‘ಮಗಳೆ, ಎಮ್ಮ ಕೊಟ್ಟ ಬ್ರತಂಗಳಂ ನಿಮ್ಮ ಅಮ್ಮಂ ಬಿಸುಡಲ್..’ ‘ನಾಗಶ್ರೀಯೆಂದಳ್ ಅಮ್ಮಾ ವ್ರತಂಗಳಂ ಕೊತ್ತ ರಿಸಿಯರ್ಗೆ..’ ನಂತರ ಬರುವ ‘ಕೇಳ್ ಕರ್ಣ, ನಿನ್ನ್ ಆದಿಯೊಳ್ ಅಬ್ಬೆ ಕೊಂತಿ, ನಿನಗ್ ಅಮ್ಮನ್ ಅಹರ್ಪತಿ’, ‘ಎಮ್ಮ್ ಅಮ್ಮನಿಗಪ್ಪ ಶಂತನುಗಂ ಯೋಜನಿಗಂಧಿಯೆನಿಸಿದ ಸತ್ಯವತಿಗಂ..’-ಎಂಬುವು ಆ ಕಾಲದಲ್ಲಿ ‘ಅಬ್ಬೆ ಅಮ್ಮ’ ಯಾವ ಯಾವ ಅರ್ಥದಲ್ಲಿ ಪ್ರಯೋಗವಾಗುತ್ತಿತ್ತೆಂಬುದು ಸಿದ್ಧವಾಗುತ್ತದೆ. (ಚೇಷ್ಟೆಗಾಗಿ ಸ್ನೇಹಿತರಿಗೆ ‘ಏನಮ್ಮಾ..’ ಎಂದು ಹುಡುಗರು ಹುಡುಗರಿಗೆ ಹೇಳುವುದುಂಟು. ಆದರೆ, ‘ಅಮ್ಮ’ ಎಂಬ ಪದ ಕೆಲವು ಕಡೆ ಅವಹೇಳನಾರ್ಥದಲ್ಲಿ ಉಪಯೋಗವಾಗುವುದಕ್ಕೆ, ಮುತ್ತೈದೆಯರ ಕೆಂಗಣ್ಣ ಉರಿಗೆ, ಕಾರಣ ಹುಡುಕಬೇಕು!)
ಗಾದೆಗಳಲ್ಲಿ ತಾಯಿ:
ತಾಯಿ, ತಾಯಿಯೊಡನೆ ಮಕ್ಕಳು, ತಾಯಿ ಮತ್ತು ತಂದೆಯನ್ನೇ ವಸ್ತುವಾಗುಳ್ಳ ಕನ್ನಡ ಸೂಕ್ತಿಗಳು, ನಾಣ್ಣುಡಿಗಳು ಮತ್ತು ಗಾದೆಗಳು ಹಲವಿವೆ. ಅರ್ಥಗರ್ಭಿತವಾದ ಈ ಗಾದೆಗಳು ತಾಯಿಯ-ಮಕ್ಕಳ ಸಂಬಂಧವನ್ನ, ಅವಳ ಅನನ್ಯವಾದ ಗುಣಸಾಮಗ್ರ್ಯವನ್ನ ಸೂತ್ರರೂಪದಲ್ಲಿ ಘನೀಕರಿಸಿವೆ:
ತಾಯಂತೆ ಮಕ್ಕಳು, ನೂಲಂತೆ ಶಾಲೆ; ತಾಯಂತೆ ಕರು, ನಾಯಂತೆ ಬಾಲ; ತಾಯಿಗಿಂತಾ ಬಂಧುವಿಲ್ಲ, ಉಪ್ಪಿಗಿಂತಾ ರುಚಿಯಿಲ್ಲ; ತಾಯಿಗಿಂತಾ ಹಿತವರಿಲ್ಲ, ಸಕ್ಕರೆಗಿಂತಾ ಸವಿಯಿಲ್ಲ; ತಾಯಿದ್ದರೆ ತವರು ಮನೆ, ನೀರಿದ್ದರೆ ಕೆರೆ ಬಾವಿ; ತಾಯಿಯಿಲ್ಲದ ತವರು, ಕಾತಕರಿದ್ದ ಅಡವಿ; ತಾಯಿ ಒಂದಾದರೂ ಬಾಯಿ ಬೇರೆ; ತಾಯಿ ಕಲಿಸಿದ ಊಟ, ತಂದೆ ಕಲಿಸಿದ ಬುದ್ಧಿ; ತಾಯಿ ಮಾಡಿದ ಹೊತ್ತೆ, ಊರು ಮಾಡಿದ ಕೊಳಗ; ತಾಯಿಯ ಹತ್ತಿರ ತರ್ಕವಲ್ಲ, ಗುರುವಿನ ಹತ್ತಿರ ವಿದ್ಯೆಯಿಲ್ಲ; ತಾಯಿಯ ಕಂಡರೆ ತಲೆ ನೋವು; ತಾಯಿಗೆ ಕುಲವಿದ್ದರೆ ಅಷ್ಟೆ, ಮಗಳಿಗೆ ಕುಲ; ತಾಯಿಗೆ ಸೇರದ್ದು ನಾಯಿಗೂ ಸೇರದು; ತಾಯಿ ಬೇಕು, ಇಲ್ಲವೇ ನಾಲಗೆ ಬೇಕು; ತಾಯಿಯೇ ಮಾರಿಯಾದರೆ ತರಲನು ಇನ್ನೆಲ್ಲಿ ಹೋದಾನು?; ಹೆತ್ತ ತಾಯೀನೇ ತಿಂಬೋಳು ಅತ್ತೇನ ಬಿಟ್ಟಾಳೆ?; ತಾಯೀನ ನೋಡಿ ಮಗಳನ್ನ ತಕ್ಕೋ, ಹಾಲನ್ನು ನೋಡಿ ಎಮ್ಮೆಯನ್ನ ತಕ್ಕೋ! ಅಮ್ಮನ ಮನಸು ಬೆಲ್ಲದ ಹಾಗೆ, ಮಗಳ ಮನಸು ಕಲ್ಲಿನ ಹಾಗೆ; ಅಮ್ಮನವರು ಪ್ರಾಯಸಮರ್ಥೆ ಆಗುವಾಗ, ಅಯ್ಯನವರಿಗೆ ಕೈಲಾಸ ಯಾತ್ರೆ; ಅಬ್ಬೆ ಕಲಿಸಿದ್ದು ಠಕ್ಕು, ಗುರು ಕಲಿಸಿದ್ದು ವಿದ್ಯೆ (ಈ ಎಲ್ಲ ಗಾದೆಗಳಿಗೂ ಕಿಟೆಲ್ ಕೋಶ ಆಕರ).

ಇದಲ್ಲದೆ, ಕನ್ನಡದ ಪ್ರಾಚೀನ ಸಾಹಿತ್ಯದಲ್ಲಿ ತಾಯಿಗೆ ಸಂಬಧಿಸಿದ ಸೂಕ್ತಿಗಳು ವಿಪುಲ. ‘ತಾಯೊರ್ವಳೆ ತಂದೆ ಬೇರೆ’ ಎಂಬ ಸೂಕ್ತಿಯಿದೆ. ‹ಮಾತಾಪಿತೃ’ ಎಂಬ ಜೋಡಿಪದವೇ ಹೆಚ್ಚು ಬಳಕೆಯಲ್ಲಿದ್ದಂತೆ ಕಾಣುತ್ತದೆ. ‘ಮಾತಾ ಚ ಪಿತಾ ಚ ಪಿತರೌ’ ಎಂಬ ನಿಷ್ಪತ್ತಿಯಿಂದ, ‘ಪಿತರೌ’ ಎಂದಾಗ ತಾಯಿತಂದೆಗಳು ಎಂಬ ಸಾಮಾನ್ಯಾರ್ಥ ಒದಗಿಬರುತ್ತಿತ್ತು.
ಆಚಾರ್ಯ ಶಂಕರರೇ ಹೇಳಿಲ್ಲವೇ?: ತಾಯಿಯ ಮಾತು ಕೇಳದೆ ಆಡಿ, ನಡೆದು, ಅವಳ ಮನ ನೋಯಿಸಿ ಮಗ ಅವಳ ಪಾಲಿಗೆ ಕೆಟ್ಟವನಾದರೂ ಆದಾನು; ನೊಂದರೂ ತಾಯಿ ಮಾತ್ರಾ ಮಕ್ಕಳ ವಿರುದ್ಧ ಏನೂ ಮಾಡ ಬಯಸಳು; ಕೆಟ್ಟವಳಾಗಳು!