ಅಮೆರಿಕನ್ನಡ
Amerikannada
ಶ್ರೀ ಚಹಾಗೀತಾ: ಒಂದು ಅಣಕವಾಡು
-ಡಾ. ಬಿ. ಬಿ. ರಾಜಪುರೋಹಿತ, ಮೈಸೂರು*
ಅಣಕವಾಡು ಎಂಬುದು ಸುಪ್ರಸಿದ್ಧ ಹಾಡುಗಳನ್ನು ಅನುಕರಿಸುವ, ಅಣಕಿಸುವ ಪದ್ಯಪ್ರಕಾರ. ಸುಪ್ರಸಿದ್ಧ ಸಂಸ್ಕೃತ ಪದ್ಯವಾದ ‘ವಾಯುಸ್ತುತಿ’ಯ ಅಣಕವಾಡು: ‘ಎಂಟೆತ್ತಂ ಬಾರಕೋಲಂ ಕುಳಮಿಣಿ ಸಹಿತಂ ಮೇಲೆ ತತ್ರಾಣಿಯುಕ್ತಂ’ ಎಂಬ ಸಾಲು ಉತ್ತರ ಕರ್ನಾಟಕದ ಅನೇಕರ ಬಾಯಲ್ಲಿದೆ. ಇಂಥವೇ ಅನೇಕ ಪದ್ಯಗಳು ಹುಟ್ಟಿಕೊಂಡಿವೆ. ಅಣಕವಾಡು ಎಂಬುದು ಇಂಗ್ಲೀಷಿನಲ್ಲಿ ಪ್ಯಾರಡಿ ಅನ್ನುವ ಒಂದು ಕಾವ್ಯಪ್ರಕಾರ. ಅದರ ರಚನೆಗೂ ಸಾಕಷ್ಟು ಪ್ರತಿಭೆ ಮತ್ತು ಕವಿತ್ವ ಬೇಕಾಗುತ್ತದೆ ಎಂಬ ಬಗ್ಗೆ ಬಹುಜನರಲ್ಲಿ ವಿಶ್ವಾಸವಿದ್ದಂತಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಅಣಕವಾಡು ಅಂದರೆ ಮೂಲಕೃತಿಯ ವಿಡಂಬನೆ ಅಥವಾ ಅವಮಾನ ಮಾಡುವದಕ್ಕಾಗಿಯೇ ಬರೆಯುವ ಒಂದು ಕಾವ್ಯ ಪ್ರಕಾರ ಎಂಬ ತಿಳುವಳಿಕೆ ಜನಜನಿತವಾದದ್ದೇ ಕಾರಣ. ಕನ್ನಡದಲ್ಲಿಯೂ ಬೇಂದ್ರೆಯವರ ಸುಪ್ರಸಿದ್ಧ ಕವಿತೆ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬ ಸುಪ್ರಸಿದ್ಧ ಕವಿತೆಗೆ ಅನೇಕ ಅಣಕವಾಡುಗಳು ಅವರ ತಲೆಮಾರಿನಲ್ಲಿಯೇ ಹುಟ್ಟಿದ್ದವು. ಕವಿಯನ್ನು ಅಣಕಿಸುವವರಿಗೆ ಉತ್ತರವಾಗಿ ಬೇಂದ್ರೆಯವರೇ ಅಣಕವಾಡು ಹೇಗಿರಬೇಕು ಎಂಬುದನ್ನು ತೋರಿಸಲು ‘ಬೆಕ್ಕು ಹಾರುತಿದೆ ನೋಡಿದಿರಾ’ ಎಂಬ ಗೀತೆಯನ್ನು ಬರೆದರು.
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತ ಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ ?

ಇದರ ಅಣಕವಾಡು:
ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲೂ ಕತ್ತಲೆಯೊಳಗೆ
ಯಾವುದ ಯಾವುದ ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ ?

ಎಂದು ಪ್ರಾರಂಭವಾಗಿ ಮೂಲಪದ್ಯದ ಏಳೂ ನುಡಿಗೆ ಏಳು ನುಡಿಗಳ ಅಣಕವಾಡನ್ನು ಬರೆದಿದ್ದಾರೆ. ಅದೇ ರೀತಿ ‘ವರದಾ ಕಂಚೀವರದಾ’ ಎಂಬ ಪದ್ಯಕ್ಕೂ ‘ಒರದಾ ! ತಗಣೀ ಒರದಾ’ ಎಂಬ ಅಣಕವಾಡನ್ನು ಬರೆದಿದ್ದಾರೆ. ಅಂತೂ ಅಣಕವಾಡು ಎಂಬುದನ್ನು ಬರೆಯುವದೂ ಕಾವ್ಯದಷ್ಟೇ ಕಷ್ಟದ ಕೆಲಸ.
ಇಂಥ ಒಂದು ಅಣಕ ರೀತಿಯ ಕಾವ್ಯ ಕಳೆದ ಶತಮಾನದ ಆದಿಭಾಗದಲ್ಲಿ ಸಂಸ್ಕೃತದಲ್ಲಿ ರಚಿತವಾಗಿದೆ. ಅದರ ರೂಪವಿಲಾಸಗಳನ್ನು ಇಲ್ಲಿ ನೋಡೋಣ. 1910ರಿಂದ 1930ರ ಕಾಲಾವಧಿಯಲ್ಲಿ ಧಾರವಾಡದಿಂದ ಪ್ರಕಟವಾದ ಚಿಂತಾಮಣಿ ರಾಮಚಂದ್ರ ಸಹಸ್ರಬುದ್ಧೇ ಅವರ ‘ರಾಷ್ಟ್ರಿಯಮೋಹಮುದ್ಗರ’, ‘ರಾಷ್ಟ್ರಿಯೋಪನಿಷತ್’, ‘ಚಹಾಗೀತಾ’, ‘ಕಾಕದೂತಂ’ ಮೊದಲಾದ ಸಂಸ್ಕೃತದಲ್ಲಿ ರಚಿತವಾದ ಕೃತಿಗಳು ಸುಶಿಕ್ಷಿತ ಓದುಗರ ಗಮನ ಸೆಳೆದಿದ್ದವು. ಧೋಂಡೋಪಂತ ಎಂದೇ ಸಾಮಾನ್ಯವಾಗಿ ಪರಿಚಿತರಾಗಿದ್ದ ಸಹಸ್ರಬುದ್ಧೇ ಅವರ ಸಂಸ್ಕೃತ ಪಾಂಡಿತ್ಯ ಹಾಗೂ ಕಾವ್ಯರಚನಾಶಕ್ತಿ ಅದ್ಭುತವಾಗಿದ್ದವು. ‘ಕಾಕದೂತಂ’ ಎಂಬುದು ಕಾಳಿದಾಸನ ‘ಮೇಘದೂತ’ದ ಅಣಕವಾಡಾದರೆ ‘ಶ್ರೀಚಹಾಗೀತಾ’ವು ‘ಭಗವದ್ಗೀತಾ’ದ ಅಣಕವಾಡು. ‘ಶ್ರೀಚಹಾಗೀತಾ’ವನ್ನು 1915ರಲ್ಲಿ ರಚಿಸಿದ್ದರೂ ಅದು ಇಂದಿಗೂ ಕುತೂಹಲಕಾರಿಯಾದ, ಗಮನಸೆಳೆಯುವ, ಕೃತಿಯಾಗಿದೆ. ಆದುದರಿಂದ ಅದರ ಪರಿಚಯ ಮಾಡಿಕೊಡಬೇಕೆಂದೆನಿಸುತ್ತದೆ.
ಶ್ರೀಚಹಾಗೀತಾ ಕ್ರೌನ್ 1/16 ಸೈಜಿನ ಅಂದರೆ 3.5" * 5" ಅಳತೆಯ 14+96=110 ಪುಟಗಳ ಪುಟ್ಟ ಮಹದ್ಗ್ರಂಥ. ಈ ಗ್ರಂಥಕ್ಕೆ ಧಾರವಾಡದ ಶ್ರೀ ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ, ಬಹುದೊಡ್ಡ ಸಂಸ್ಕೃತ ಪಂಡಿತರಾಗಿದ್ದ ಶ್ರೀ ಕೃಷ್ಣಶಾಸ್ತ್ರಿ ಬೆಟ್ಟಿಗೇರಿ (ಬೆಟಗೇರಿ) ಅವರು ಮುನ್ನುಡಿ ಬರೆದಿದ್ದಾರೆ. ಅಲ್ಲದೇ ಶೃಂಗೇರಿ ಶ್ರೀಮಠದಲ್ಲಿ ಪಂಡಿತರಾಗಿದ್ದ, ನಂತರ ಕೂಡಲಿ ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದ ಪ್ರಕಾಂಡ ಸಂಸ್ಕೃತ ಪಂಡಿತ ಶ್ರೀ ವಿರೂಪಾಕ್ಷಶಾಸ್ತ್ರಿ ಹಾನಗಲ್ಲ ಅವರು ಅಭಿಪ್ರಾಯ ಬರೆದಿದ್ದಾರೆ. ಸಹಸ್ರಬುದ್ಧೆ ಅವರ ಮಾತೃ ಭಾಷೆ ಮರಾಠಿಯಾಗಿದ್ದರೂ ಈ ಪುಸ್ತಕಕ್ಕೆ ತಮ್ಮ ನಿವೇದನವನ್ನು ಹಿಂದಿಯಲ್ಲಿ ಬರೆದಿದ್ದಾರೆ.
ಅವರ ಕಾವ್ಯಚಾತುರ್ಯಕ್ಕೆ ಕೆಲವು ಉದಾಹರಣೆಗಳನ್ನು ನೋಡೋಣ: ಭಗವದ್ಗೀತೆಯ ಪೀಠಿಕಾ ಪದ್ಯಗಳಲ್ಲೊಂದಾದ-
ಪ್ರಪನ್ನ ಪಾರಿಜಾತಾಯ ತೋತ್ರವೇತ್ರೈಕ ಪಾಣಯೇ|
ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ ||

ಎಂಬ ಶ್ಲೋಕದ ಅವತಾರವನ್ನು ಚಹಾಗೀತಾದಲ್ಲಿ ನೋಡಿ:
ಪ್ರಪನ್ನ ಕ್ಷುದ್ವಿನಾಶಾಯ ವಂಗಸ್ಪೂನೈಕ ಪಾಣಯೇ |
ಝುರ್-ಝುರ್-ಮುದ್ರಾಯ ಪೇಯಾಯ ಮೇಹರೋಗದುಹೇ ನಮಃ ||

ಭಗವದ್ಗೀತೆಯ ಇನ್ನೊಂದು ಪ್ರಸಿದ್ಧ ಶ್ಲೋಕ:
ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲನಂದನಃ |
ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||

ಇದು ಚಹಾಗೀತಾದಲ್ಲಿ:
ಮಹಿಷಾಃ ಸಕಲಾ ವೃಕ್ಷಾ ದೋಗ್ಧಾ ಚೀನಸ್ಥ ಭಿಕ್ಷುಕಃ |
ಭಕ್ತೋ ವತ್ಸಃ ಕುಧೀರ್ಭೋಕ್ತಾ ಚಹಾಗೀತಾಮೃತಂ ಪಯಃ ||

ಮೂಲದಲ್ಲಿಯ ಇನ್ನೊಂದು ಮಹತ್ತ್ವದ ಈ ಶ್ಲೋಕ ನೋಡಿ:
ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರ ನೀಲೋಪಲಾ |
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣನ ವೇಲಾಕುಲಾ ||
ಅಶ್ವತ್ಥಾಮ ವಿಕರ್ಣ ಘೋರ ಮಕರಾ ದುರ್ಯೋಧನಾವರ್ತಿನೀ |
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ ||

ಇದು ಚಹಾಗೀತಾದಲ್ಲಿ:
ಚಕ್ಲೀ-ರೋಟ-ತಟಾ ಲ್ಯಮೋನ್ಯಡ ಜಲಾ ಬಿಸ್ಕೇಟ ಪಾಂಡೂತ್ಪಲಾ |
ಚಿವಡಾ ಗ್ರಾಹವತೀ ಫುಗೇನ ವಹನೀ ಸ್ಟ್ರಾಂಗ್ ವ್ಹಿಸ್ಕಿ ವೇಲಾಕುಲಾ ||
ದಶ್ಮೀ-ಚಟ್ಣಿ-ಪಲಾಂಡು ಶಾಕ ಮಕರಾ ಸೋಡಾ ಸುರಾವರ್ತಿನೀ |
ಸೋತ್ತೀರ್ಣಾಧುನಿಕೇನ ಪಾರ್ಟಿ ತಟಿನೀ ಕೈವರ್ತಕಃ ಟೀಪ್ರಭುಃ ||

ಇದರಲ್ಲಿ ಚಕ್ಲಿ, ಲೆಮೊನೇಡ್, ಬಿಸ್ಕೀಟ್, ಚಿವಡಾ, ಸ್ಟ್ರಾಂಗ್ ವ್ಹಿಸ್ಕಿ, ದಶ್ಮಿ, ಚಟ್ಣಿ, ಸೋಡಾ, ಪಾರ್ಟಿ, ಟೀ ಮೊದಲಾದ ಸಂಸ್ಕೃತೇತರ ಭಾಷೆಯ ಶಬ್ದಗಳನ್ನು ಶಾರ್ದೂಲ ವಿಕ್ರೀಡಿತ ವೃತ್ತದಲ್ಲಿ ಸ್ವಾಭಾವಿಕವೆನ್ನಿಸುವ ಶೈಲಿಯಲ್ಲಿ ಬಳಸಿದುದನ್ನು ನೋಡಬಹುದು.
ಪ್ರಸ್ತಾವನಾ ಪದ್ಯಗಳ ನಂತರ ಪ್ರತಿ ಅಧ್ಯಾಯದಲ್ಲಿ 70ರಿಂದ 110 ಶ್ಲೋಕಗಳುಳ್ಳ ಏಳು ಅಧ್ಯಾಯಗಳಲ್ಲಿ ಪೇಯದೇವನಾದ ಚಹಾದೊಡನೆ ಅನೇಕರು ನಡೆಸಿದ ಸಂಭಾಷಣೆ ಪ್ರಾರಂಭವಾಗುತ್ತದೆ. ಸಭಿಕರು ಮಾಡಿದ ಪ್ರಶ್ನೆಗೆ ಪೇಯದೇವನಾದ ಚಹಾ ಉತ್ತರಕೊಡುತ್ತಾನೆ:
ಅಸ್ತ್ಯುತ್ತರಸ್ಯಾಂ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ
ತಮುತ್ತರೇಣಾಸ್ತಿ ತಿಬೇಟದೇಶಃ ತತಸ್ತಮುಲ್ಲಂಘ್ಯ ಚ ಚೀನದೇಶಃ |
ಅವಗಚ್ಛತ ತಂ ದೇಶಂ ವಾಸಭೂಮಿಂ ಪ್ರಿಯಾಂ ಮಮ
ಮನ್ಯೇಹಂ ಯಂ ಗರೀಯಾಂಸಂ ಸ್ವರ್ಗಲೋಕಾದಪಿ ಧ್ರುವಂ |

ಎಂದು ಚಹಾದೇವನು ಸ್ವದೇಶವಾದ ಚೀನದೇಶವನ್ನು ನೆನಪಿಸಿಕೊಳ್ಳುತ್ತಾನೆ. ತನಗೆ ಇರುವ ನಾಮಾಭಿಧೇಯಗಳನ್ನು ಹೇಳಿಕೊಳ್ಳುತ್ತಾನೆ:
ಕೇಚಿತ್ ಮಾಂ `ಚಾಂ' ಆಹುಃ ಕೇಚನ `ಥಾಂ', ಕೇಪಿ `ಟೀಂ', `ಚಹಾಂ' ಅನ್ಯೇ |
ಇತರೇ `ಚಾಈ', ಏವಂ ನೈಕಾನಿ ಮಮಾಭಿಧೇಯಾನಿ ||

ಮುಂದೆ ತನ್ನ ಪರಿವಾರವನ್ನೂ ಪರಿಚಯ ಮಾಡಿಕೊಡುತ್ತಾನೆ.
ಬಿಸ್ಕಿಟಂ ಮಮಪುತ್ರಂ, ರೋಟಂ ಪೌತ್ರಂ, ತಥಾಗ್ರಜಾ ಮದಿರಾಂ |
ಅನುಜಾ ಪಲಾಂಡು ಭಜಿಕಾಂ, ಅವೇತ ಸಹಧರ್ಮಿಣೀ ಕಾಫೀಂ ||
ಬಂಧು ಸೋಡಾ ವಾಟರಂಥ ದಶಮೀ ಚಟ್ಣಿ, ಚಕ್ಲಿ, ಚಿವಡಾಶ್ಚ |
ಸೀಗಾರ-ಬೀಡೀ-ಚಿರೂಟಾ ಏತಾನ್ ಮೇ ಪರಿಜನಾನ್ ವಿಜಾನೀಧ್ವಂ ||

ಹಿಂದಿನ ಕಾಲಕ್ಕಿಂತ ಇಂದಿನ ಕಾಲ ಬೇರೆಯಾಗಿದೆ. ಆದುದರಿಂದ ಅತಿಥಿ ಸತ್ಕಾರದ ರೀತಿಯೂ ಭಿನ್ನವಾಗಿದೆ.
ಪುರಾತಿಥಯಂ ವಿದಧುಃ ಸಮರ್ಪ್ಯ ಸ್ನಿಗ್ಧಾನ್ ಪದಾರ್ಥಾನ್ ವಿಧಿನಾತಿಥಿಭ್ಯಃ |
ಪರಂತು ಮೋಹಾತ್ ಕ್ರಿಯತೇಧುನಾ ತತ್ ಚಹಾ-ಚಿರೋಟ್-ಬಿಸ್ಕಿಟ-ಬಾಟ್ಲಿ ದಾನೈಃ ||

ಏಕೆಂದರೆ ಚಹಾದೇವನ ಉಪದೇಶ ಕೇಳಿ:
ಯಾ ನಿಶಾ ಪ್ರಾಣಿನಾಂ ತಸ್ಯಾಂ ಟಿಯೋ ಜಾಗರ್ತಿ ಸೇವಕಃ |
ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಮದ್ಯಪಾಯಿನಃ ||

ಹೀಗೆ ಚಹಾಗೀತಾದ ಏಳು ಅಧ್ಯಾಯಗಳಲ್ಲಿ ಬರುವ ವಿವಿಧ ಪಾತ್ರಗಳಾದ ನಾರಾಯಣ, ಬ್ರಹ್ಮ ಮೊದಲಾದವರ ಸಮಾಧಾನ; ಸಾಮಾಜಿಕರು, ಚಹಾಭಕ್ತರು ಮೊದಲಾದವರಿಗೆ ಪೇಯದೇವನು ಕೊಡುವ ನವರಸಪೂರ್ಣ ಉಪದೇಶ ಹಾಗೂ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಇವೆಲ್ಲವುಗಳ ವಿಸ್ತಾರ ಭಗವದ್ಗೀತೆಯಷ್ಟೇ ವಿಶಾಲವಾಗಿದೆ. ನಿಜವಾಗಿಯೂ `ಚಹಾಗೀತಾ'ದ ವಿಡಂಬನೆಯ ಸ್ಥಾಯಿ ಅಷ್ಟು ದೀರ್ಘವಾಗಿ ಉಳಿದುದು ಆಶ್ಚರ್ಯಜನಕವಾಗಿದೆ. ಕೊನೆಗೆ ಟೀ ಭಕ್ತರು ಚಹಾಮುನಿಗೆ ಕೊಡುವ ಆಶ್ವಾಸನೆ:
ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾತ್ ಚಹಾಮುನೇ |
ಸ್ಥಿತಾಃ ಸ್ಮಃ ಗತಸಂದೇಹಾಃ ಕರಿಷ್ಯಾಮೋ ವಚಸ್ತವ ||

ಇದನ್ನು ಕೇಳಿ ಚಹಾದೇವನು ಭರತವಾಕ್ಯ ನುಡಿಯುತ್ತಾನೆ:
ಯತ್ರ ಪೇಯೇಶ-ಟೀ-ದೇವೋ ಯತ್ರ ಕಪ್ಪಧರಾ ನರಾಃ |
ತತ್ರಾಲ್ಪಾಯುರ್ವಿಪತ್ ರೋಗಾ ಧ್ರುವಾನೀತಿರ್ಮತಿಮಮಮ ||

ಎಂದು `ಇತಿಶ್ರೀ ಚಹಾ-ತದ್ಭಕ್ತ ಸಂವಾದೇ ವಿಶ್ವರೂಪದರ್ಶನಂ' ಎಂದು ಕಾವ್ಯ ಮುಗಿಯುತ್ತದೆ. ವಿಡಂಬನೆಯನ್ನು ಸುದೀರ್ಘಕಾಲದವರೆಗೆ ಸ್ಥಾಯಿಯಾಗಿ ನಿಲ್ಲಿಸುವದು ಕಷ್ಟ. ಅಂಥದರಲ್ಲಿ `ಚಹಾಗೀತಾ'ದ ವಿಡಂಬನೆ ಹಾಸ್ಯವನ್ನೂ ಮೀರಿ ಸುದೀರ್ಘವಾಗಿ ನಿಲ್ಲುತ್ತದೆ.

* ಡಾ. ಬಿ. ಬಿ. ರಾಜಪುರೋಹಿತ
ನಂ. 716, 16ನೇ ಮುಖ್ಯರಸ್ತೆ
ಸರಸ್ವತಿಪುರಂ
ಮೈಸೂರು-570009
ಫೋನ್: 9845454750