ಅಮೆರಿಕನ್ನಡ
Amerikannada
ಬಾಂಧವ್ಯವೊಂದರ ಸುತ್ತ. . .
-ಭವಾನಿ ಲೋಕೇಶ್, ಮಂಡ್ಯ
ಒಂದು ದೀರ್ಘ ನಿಟ್ಟುಸಿರನ್ನು ಎಳೆದುಕೊಂಡ ಆತ ತುಂಬ ಹೊತ್ತಿನ ನಂತರ ಆತನ ಅಮ್ಮನ ಬಗ್ಗೆ ಹೇಳುತ್ತಾ ಹೋದ. ಅಮ್ಮ ಯಾವತ್ತಿಗೂ ನನ್ನನ್ನು ಸಣ್ಣದಾಗಿ ಕೂಡ ರೇಗಿದವಳಲ್ಲ. ತಾನು ಮದುವೆಯಾದ 10 ವರ್ಷಗಳ ಬಳಿಕ ಶಿಕ್ಷಕರ ತರಬೇತಿಯನ್ನು ಪಡೆದು ಶಿಕ್ಷಕಿಯಾಗಿ ಪ್ರಾಥಮಿಕ ಶಾಲೆಯೊಂದರಲ್ಲಿ ನೇಮಕಗೊಂಡ ಅಮ್ಮ, ಅಲ್ಲಿರುವ ಎಲ್ಲ ಮಕ್ಕಳನ್ನೂ ಸಹ ನನ್ನ ಹಾಗೆಯೇ ನೋಡಿಕೊಂಡವಳು. ಆಕೆಯ ತಾಳ್ಮೆಯನ್ನು ನೋಡಿಯೇ ಏನೋ ದೇವರು ಆ ವೃತ್ತಿಯನ್ನು ಆಕೆಗೆ ದಯಪಾಲಿಸಿರಬೇಕು ಅನ್ನಿಸುತ್ತೆ. ಅಂತಹ ಸಾಧು ಸ್ವಭಾವದವರು. ಅಮ್ಮನೆಂದರೆ ಟಿಪಿಕಲ್ ಅಮ್ಮನೇ. ವೃತ್ತಿಯಲ್ಲಿದ್ದೆ ಅನ್ನುವ ಕಾರಣಕ್ಕೆ ಯಾವತ್ತಿಗೂ ನಮ್ಮನ್ನು ನೋಡಿಕೊಳ್ಳುವ ವಿಷಯದಲ್ಲಿ ರಾಜಿ ಮಾಡಿಕೊಂಡವಳೇ ಅಲ್ಲ. ನಾವು ಮೂವರು ಮಕ್ಕಳು. ನನ್ನ ಮಗ ದೊಡ್ಡ ಇಂಜಿನಿಯರ್ ಆಗಲಿ ಅಂತ ಬಯಸದೇ ಇದ್ದರೂ ಚೆನ್ನಾಗಿ ಓದಿ ವಿದ್ಯಾವಂತನಾಗಲಿ, ಒಳ್ಳೆಯ ನಾಗರೀಕನಾಗಲೀ ಅಂತ ಮನಸ್ಸಿನಲ್ಲಿ ಲೆಕ್ಕಾಚಾರ ಹಾಕಿದವಳು. ಅದೇ ಕಾರಣಕ್ಕೆ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಸೇರಿಸಿದರೂ ಅಮ್ಮನನ್ನು ಬಿಟ್ಟಿರಲಾಗದ ನನ್ನ ಸ್ಥಿತಿಯನ್ನು ನೋಡಿ 'ಅಯ್ಯೋ ಕಲಿತಷ್ಟು ಕಲಿಯಲಿ ಮಗು' ಅಂತ ತನ್ನೊಂದಿಗೆ ಸರ್ಕಾರಿ ಶಾಲೆಯ ಮೆಟ್ಟಿಲು ಹತ್ತಿಸಿದವಳು. ಹಾಗಂತ ಸರ್ಕಾರಿ ಶಾಲೆಯಲ್ಲೇ ಓದಿದರೂ ನಾನು ಮಾತ್ರ ನನ್ನಮ್ಮನಿಗೆ, ಆಕೆಯ ಕನಸಿಗೆ ತಣ್ಣೀರೆರಚಲಿಲ್ಲ. ಓದಿದೆ. . . ಓದೇ ಓದಿದೆ. . . ಇವತ್ತು ಇಲ್ಲಿ ಕುಳಿತಿದ್ದೇನೆ. ಇದಕ್ಕೆಲ್ಲ ನನ್ನಮ್ಮನ ನಿರ್ವ್ಯಾಜ ಪ್ರೀತಿ ಮಾತ್ರವೇ ಕಾರಣ. ಆಕೆಯ ಸ್ವಾರ್ಥರಹಿತ ಸೇವೆಯ ಒಂದಂಶ ನನ್ನ ರಕ್ತದೊಳಗೂ ಬಂದಿದೆ ಎಂದರೆ ನನ್ನಮ್ಮನಿಗೆ ಥ್ಯಾಂಕ್ಸ್ ಹೇಳಲೇಬೇಕು. ನನಗೂ ಅವಳ ಬಗ್ಗೆ ಇರುವುದೆಲ್ಲ ಸಾತ್ವಿಕ ಸಿಟ್ಟು ಮಾತ್ರವೇ. ಅದಾಗಲೇ ನಿವೃತ್ತಿಯ ಅಂಚಿಗೆ ಬಂದಿರುವ ಅಮ್ಮ ನನಗೆ ಕೆಲಸ ಸಿಕ್ಕಿ ಸಂಪಾದಿಸತೊಡಗಿರುವ ಈ ಹೊತ್ತಿಗಾದರೂ ಸ್ವಯಂ ನಿವೃತ್ತಿ ತೆಗೆದುಕೊಂಡು ಮನೆಯಲ್ಲಿರಬಾರದೇ ಆರಾಮಾಗಿ ಅನ್ನೋದು ಅಥವಾ ಈ ಅಮ್ಮ ಇನ್ನೂ ಎದ್ದು ಯಾಕೆ ವಾಕ್ ಹೋಗಲಿಲ್ಲ ಅನ್ನೋದು ಅಥವಾ ಅಮ್ಮ ಕೆಲಸ ಮಾಡುವ ಗಡಿಬಿಡಿಯೊಳಗೆ ಊಟ ತಿಂಡಿಯ ಕಡೆ ಹೆಚ್ಚು ಗಮನವನ್ನೇ ಕೊಡೋದಿಲ್ವಲ್ಲ ಅನ್ನೋದು ಅಥವಾ ಈಗಷ್ಟೇ ಕಾಣಿಸಿಕೊಂಡಿರುವ ಮಧುಮೇಹದ ಜೊತೆಗೆ ಅಮ್ಮ ಎಲ್ಲಿ ಸಮಾರಂಭಗಳಲ್ಲಿ ಸಿಹಿ ತಿಂದುಬಿಡ್ತಾಳೋ ಅನ್ನೋದು ಇಂತಹ ಸಣ್ಣಪುಟ್ಟ ವಿಷಯಗಳನ್ನು ಬಿಟ್ಟರೆ ನಾನು ನನ್ನಮ್ಮನ ಮೇಲೆ ಮಾಡಬಹುದಾದ ಯಾವ ದೊಡ್ಡ ಆಪಾದನೆಗಳು ಇಲ್ಲ. ತನಗೇ ಅಂತ ಅಮ್ಮ ಯಾವತ್ತಿಗೂ ಒಂದು ಕರವಸ್ತ್ರವನ್ನೂ ಆಸೆಯಿಂದ ಕೊಂಡುಕೊಂಡವಳಲ್ಲ. ತನ್ನ ಮಕ್ಕಳಿಗಿರಲಿ ಅಂತ ಎಲ್ಲವನ್ನೂ ನಮಗಾಗಿಯೇ ಮುಡಿಪಿಟ್ಟವಳು. ಅದಿರಲಿ, ಚಿತ್ರಕಲೆಯ ಹುಚ್ಚಿಗೆ ನಾನು ಮನೆ ತುಂಬಾ ಮಾಡಿಟ್ಟ ಕಸವನ್ನು ಕಂಡು ಅಬ್ಬಾ! ನನ್ನ ಮಗ ಎಷ್ಟು ಚಂದದ ಚಿತ್ರ ಬಿಡಿಸಿದ್ದಾನೆ ಅಂತಲೋ, ಎಷ್ಟು ಚಂದದ ರಟ್ಟಿನ ಮನೆ ಕಟ್ಟಿದ್ದಾನೆ ಅಂತಲೋ ಖುಷಿ ಪಡುತ್ತಲೇ ಕಸವನ್ನು ಎತ್ತಿ ಆಚೆಗೆ ಹಾಕುತ್ತಿದ್ದವಳು. ಕೆಲಸದಿಂದ ಸುಸ್ತಾಗಿ ಬಂದ ಅಮ್ಮನಿಗೆ ನಾನು ಮನೆಯಲ್ಲಿ ಮಾಡಿಟ್ಟ ಅವ್ಯವಸ್ಥೆಯನ್ನು ಕಂಡೂ ಸಿಟ್ಟು ಬರಲಿಲ್ಲವೆಂದರೆ ಆಕೆಯ ತಾಳ್ಮೆಯನ್ನು ಅರ್ಥೈಸಿಕೊಳ್ಳಿ. ಮನೆಯ ಷೋಕೇಸಿಗೆಲ್ಲ ಜೇಡಿಮಣ್ಣು ಮೆತ್ತಿ ಬಿಡುತ್ತಿದ್ದ ನನ್ನ ಅಂಥಾ ತುಂಟತನಕ್ಕೂ ಅಮ್ಮ ಕೋಪಿಸಿಕೊಂಡವಳಲ್ಲ. ಅದಕ್ಕೇ ಯಾವತ್ತಿಗೂ ನನಗೆ ನನ್ನಮ್ಮನ ಬಗ್ಗೆ ಎಲ್ಲಿಲ್ಲದ ಗೌರವ. . . . ಆತ ಮಾತು ನಿಲ್ಲಿಸಿದ್ದ. ಅಮ್ಮನ ಬಗ್ಗೆ ಮಾತಾಡಿದ್ದಕ್ಕೋ ಏನೋ ಅವನ ಮುಖದಲ್ಲಿ ಒಂದು ಬಗೆಯ ಸಂತೋಷದ ಭಾವ ಮನೆಮಾಡಿತ್ತು.
ಹಾಗೆ ನೋಡಿದರೆ ಆತ ನನಗೆ ಅಚಾನಕ್ಕಾಗಿ ಸಿಕ್ಕವನು. ತಮ್ಮನಂತಹ ಹುಡುಗ. ವಿಪ್ರೋನಂತಹ ದೊಡ್ಡ ಕಂಪನಿಯಲ್ಲಿ ದೊಡ್ಡ ಸಂಬಳಕ್ಕಿರುವ ಸಾಫ್ಟ್ವೇರ್ ಟೆಕ್ಕಿ. ನಾನವನನ್ನು ಅವನಮ್ಮನೊಂದಿಗೆ ಭೇಟಿ ಮಾಡಿದಾಗ ಒಬ್ಬ ಆದರ್ಶ ಅಮ್ಮ ಮಗನ ಜೋಡಿ ಹೇಗಿರಬಹುದೆಂದು ನಾನು ಕಲ್ಪಿಸಿದ್ದೆನೋ ಅವರಿಬ್ಬರೂ ಹಾಗೇ ಇದ್ದರು. ಗಂಟೆಗಟ್ಟಲೆ ಪ್ರಾಜೆಕ್ಟುಗಳಲ್ಲಿ ಮಗ್ನರಾಗಿಬಿಡುವ ಟೆಕ್ಕಿಗಳಲ್ಲಿ ಭಾವನೆಗಳೇ ಬತ್ತಿಹೋಗಿರುತ್ತವೆ ಅನ್ನೋದು ಸಂಶೋಧನೆಯೊಂದರ ವರದಿ. ಆದರೆ ಆತನಿಗೆ ಯಾವತ್ತೂ ಹಾಗೆ ಅನ್ನಿಸಿಯೇ ಇರಲಿಲ್ಲ. ಭರಪೂರ ಪ್ರೀತಿಯನ್ನ, ಬಾಂಧವ್ಯವನ್ನು, ಅನುಬಂಧವನ್ನು ಇವನೇ ಗುತ್ತಿಗೆ ತೆಗೆದುಕೊಂಡುಬಿಟ್ಟಿದ್ದಾನೆಯೋ ಅನ್ನುವ ಹಾಗೆಯೇ ಇದ್ದ. ಕೆಲಸ ಮಾಡುವ ಸಮಯದಲ್ಲಿ ಕೊಂಚ ಬಿಡುವು ಸಿಕ್ಕರೂ ಸಾಕು ಅಮ್ಮನ ಫೋನಿಗೆ ಬಿಝಿಯಾಗಿಬಿಡುತ್ತಿದ್ದ. ಅದರೊಂದಿಗೆ ಇಬ್ಬರು ಅಕ್ಕಂದಿರ ಜೊತೆ ಕಾನ್ಫರೆನ್ಸ್ ಕಾಲ್! ಯಾರನ್ನೂ ಬಿಟ್ಟಿರಲಾರ ಮಾನಸಿಕವಾಗಿ. ಕುಳಿತಲ್ಲಿಂದಲೇ ಊಟಕ್ಕೆ, ತಿಂಡಿಗೆ, ಮಾತ್ರೆಗೆ, ವಾಕ್ ಮಾಡೋಕೆ ಎಲ್ಲದಕ್ಕೂ ಅಮ್ಮನಿಗೊಂದು ಸಂದೇಶ. ಎಂಥ ಕಕ್ಕುಲತೆ, ಪ್ರೀತಿ ಇಬ್ಬರಲ್ಲೂ ಇದೆ ಅನ್ನಿಸಿತ್ತು. ಜಗತ್ತಿನಲ್ಲಿರುವ ಎಲ್ಲರ ಹಾಗೆಯೇ ಇವರೂ ಇದ್ದಾರೆ ಅಂತ ನೀವಂದುಕೊಳ್ಳಬಹುದು. ಆದರೆ ಅಮ್ಮ ಮಗನ ನಡುವೆ ಕಿಂಚಿತ್ತೂ ವೈರುಧ್ಯ ಬಾರದ ಹಾಗೆ ಇರುವುದು ಎಲ್ಲೋ ಸಾವಿರಕ್ಕೆ ಒಬ್ಬರಲ್ಲಿ ಮಾತ್ರ. ಹಾಗೆ ನೋಡಿದರೆ ಅವರ ಇಡೀ ಕುಟುಂಬ ಅದೆಷ್ಟು ಅನ್ಯೋನ್ಯತೆಯಿಂದ ಕೂಡಿತ್ತೆಂದರೆ ಅದನ್ನು ಬರೆಯಲು ಇನ್ನೊಂದು ಸಂಚಿಕೆ ಬೇಕಾದೀತು. ಅದಿರಲಿ ಮೊನ್ನೆ ಮಾತನಾಡುತ್ತಾ ಮೇ ತಿಂಗಳ ಮೊದಲ ಭಾನುವಾರ ಅಮ್ಮಂದಿರ ದಿನ ಅಂತೆ ಹೇಗಿದೆ ತಯಾರಿ ಅಂತ ಕೇಳಿದೆನಷ್ಟೇ. . . ಆಗ ಆತ ಹೇಳಿದ್ದು ಹೀಗೆ. ಪ್ರತಿದಿನವೂ ಅಮ್ಮನನ್ನು ದೇವರಂತೆ, ಸ್ನೇಹಿತೆಯಂತೆ ನಮ್ಮದೇ ಮನಸ್ಸಿನ ಭಾಗದಂತೆ ಪ್ರೀತಿ ಮಾಡುವ ನನ್ನಂಥವರಿಗೆ ಅಮ್ಮಂದಿರ ದಿನದ ಅಗತ್ಯವಿಲ್ಲ ಅಕ್ಕಾ. . . ದೇವರು ಒಬ್ಬ ಒಳ್ಳೆಯ ಪ್ರೋಗ್ರಾಮರ್. ಈ ಮೊದಲೆ ಯಾರ್ಯಾರಿಗೆ ಎಷ್ಟೆಷ್ಟು ಪ್ರೀತಿ ದಕ್ಕಬೇಕು ಎಂಬುದನ್ನು ಪ್ರೋಗ್ರಾಮ್ ಮಾಡಿ ಇಟ್ಟುಬಿಟ್ಟಿದ್ದಾನೆ. ಅವನ ನಿಯಮವನ್ನು ನಾವು ಮೀರುವ ಹಾಗಿಲ್ಲ. ಅನ್ನುತ್ತಲೇ ತನ್ನದೇ ವೃತ್ತಿಯ ಭಾಷೆಯಲ್ಲಿ ದೇವರಿಗೂ ಸ್ಥಾನ ಕೊಟ್ಟಿದ್ದ. !
ಏನೇ ಇರಲಿ ನನ್ನ ಬೆನ್ನಿಗೊಬ್ಬ ಇಂತಹ ತಮ್ಮನಿರಬಾರದಿತ್ತೇ ಅಂತ ಅನ್ನಿಸಿದ್ದು ಮಾತ್ರ ಸುಳ್ಳಲ್ಲ. ಇದೂ ಒಂಥರಾ ದೇವರದ್ದೇ ಪ್ರೋಗ್ರಾಮಿಂಗ್.