ಅಮೆರಿಕನ್ನಡ
Amerikannada
ಚಿಗುರು
-ವಿಶ್ವ, ಸ್ಯಾನ್ ರಮೋನ್
ಚಿಗುರು ಉಡಿಗೆಯನುಟ್ಟು ಕಾಲಾಂಬೆ
ಹಗರಣದ ಹಳೆಯ ವರುಷದ ದಿನಚರಿಯ ದಣಿವ
ಹಗುರವಾಗಿಸಲು ಹೊಸ ಹರುಷವ ತಂದಿಹಳು
ಸೊಗಸಿನುಡುಗರೆಗಳಲಿ ಕೊಲ್ಲೀಸೀಮೆ ಕನ್ನಡಿಗರಿಗೆ ||

ಚಿಗುರುತಿರುವ ಸಿರಿನುಡಿಯ ಲತೆಗಳಿಂಪಿನ ಗುಂಜನ
ಆಗಸ ನಿವಾಸಿಗಳ ಬಾನು ಯಾನದ ಫಲ ಪಠನ
ಇಬ್ಬನಿಯ ಹನಿಮಣಿಗಳು ಬೀರುವ ಕಿರಣಗಳೊಳ ಪ್ರತಿಭೆ ಶೋಧನ
ಹೊಗಳಲರ್ಹ ಹಿರಿಯನರ್ಪಿಸಿದ ಕೊಡುಗೆಗಳ ಪ್ರಶಂಸೆ ನಡುವೆ ||

ಸೊಬಗಿನ ಲೋಕದ ಮಾಯೆಯಾ ಮೀರುವ ಜಾದೂ ಆಟ
ಯುಗಗಳ ಗಾರುಡಿಗನನೂ ಬೆರಗಿಸುವ ಬೊಂಬೆಯಾಟ
ನಗೆನದಿಯ ನೆರೆಯನುಕ್ಕಿಸುವ ಮೂಕಮೂರ್ತಿಯ ಮಾತಿನಾಟ
ಬಗೆ ಬಗೆಯ ಕಲೆಯಲಿ ಕಹಿಮರೆಸಿ ಹರಿಸಿಹಳು ಸಿಹಿಯ ಹೊಳೆಯ ||