ಅಮೆರಿಕನ್ನಡ
Amerikannada
ಪತಿ ಮತ್ತು ಹಂಡೆ
ಜಯಂತಿ ಅಮೃತೇಶ್, ಮೈಸೂರು*
ಇದೇನಿದು? ಹಂಡೆಗೆ ಉರಿ ಹಾಕುತ್ತೇವೆ, ನೀರು ಕಾಯುತ್ತದೆ; ಅದರಿಂದ ಮನೆ ಮಂದಿಗೆಲ್ಲಾ ಸ್ನಾನ ವಾಗುತ್ತದೆ. ಪತಿಗೂ ಹಂಡೆಗೂ ಏನಿದು ಸಂಬಂಧ ಎಂದು ನೀವು ಮೂಗಿನ ಮೆಲೆ ಬೆರಳಿಟ್ಟು ಕೊಳ್ಳುತ್ತೀರಾ? ಇಷ್ಟು ಸಾಧಾರಣ ವಿಷಯಕ್ಕೆ ಒಂದು ಲೇಖನವೇ ಎಂದು ನೀವು ಆಶ್ಚರ್ಯ ಪಡುತ್ತೀರಾ? ಈಗ ಓದಿನೋಡಿ.
ಹಲವಾರು ವರುಷಗಳು ಮುಂಬೈ ನಗರದ ಜೀವನ. ಅಪಾರ್ಟ್ಮೆಂಟ್ಗಳಲ್ಲಿ ವಾಸ. ನಸುಕಿನಲ್ಲಿ 5 ಗಂಟೆಗೆಲ್ಲಾ ಗೀಸರ್ ಸ್ವಿಚ್ ಹಾಕಿ ಆತುರದ ಸ್ನಾನ ಮುಗಿಸಿ 7.10 ರ ಲೋಕಲ್ ಹಿಡಿಯಲು ಓಡುವ ಅವಾಂತರ. ಮುಂಬಯಿಯ ಜೀವನದಲ್ಲಿ ಹಂಡೆ ಒಂದು ಕನಸು.
ನಿವೃತ್ತಿಯನಂತರ ನಾವು ನಮ್ಮ ಸ್ವಂತ ಊರಾದ ಮೈಸೂರಲ್ಲಿ ನೆಲಸಿದೆವು. ನಮ್ಮ ಚಿಕ್ಕ ಮಾವನವರು ನಮ್ಮ ಈ ಸ್ವಂತ ಮನೆಯನ್ನು ಕಟ್ಟಿಸಿದ್ದು. ಒಂದು ಬಾತ್ ರೂಮಿನಲ್ಲಿ ಬಾಯ್ಲರ್, ಮತ್ತೊಂದರಲ್ಲಿ ಚಿಕ್ಕದಾದ ಒಂದು ಹಂಡೆಯನ್ನು ಕೂರಿಸಿ, ಅದಕ್ಕೊಂದು ಒಲೆಯನ್ನೂ ಕಟ್ಟಿಸಿದ್ದರು. ಮನೆ ಎಂದ ಮೇಲೆ ಹಂಡೆ ಇರಲೇಬೇಕು ಅಲ್ಲವೇ? ಇದು ಸ್ವಲ್ಪ ಹಳೆಯ ಕಾಲದ ಸೂತ್ರ. ಸರಿ, ಮೈಸೂರಿಗೆ ಬಂದು ವಾಸ್ತವ್ಯ ಹೂಡಿದಮೇಲೆ ಹಂಡೆಯೂ ಒಲೆಯೂ ನಮ್ಮವರನ್ನು ಕೈಬೀಸಿ ಕರೆಯಿತು. ಒಲೆಗೆ ಉರಿಹಾಕಿ ಹಂಡೆಯ ನೀರನ್ನು ಕಾಯಿಸುವ ಕೆಲಸವನ್ನು ಇವರು ತಮ್ಮದಾಗಿಸಿಕೊಂಡರು.
ಹಂಡೆಯಮೇಲೆ ನಲ್ಲಿಯಿದ್ದರೂ ಅದರಿಂದ ನೀರನ್ನು ಹರಿಯಲು ಬಿಟ್ಟು ತುಂಬಿಸಬಾರದಂತೆ. ನಲ್ಲಿಯಿಂದ ನೀರು ತೊಟ್ಟು ತೊಟ್ಟಾಗಿ, ಲಯಬದ್ಧವಾಗಿ ಹಂಡೆಯೊಳಗೆ ಬೀಳುತ್ತಿರಬೇಕು. ಇದು ಅವರ ವಾದ. ಅದಕ್ಕೆ ನಾನು ಅಯ್ಯೋ, ಹಂಡೆಯ ಮೇಲೆ ತಟ್ಟೆಯಿಟ್ಟು ಮುಚ್ಚಬೇಕ್ರೀ; ಇಲ್ಲದಿದ್ದರೆ ನೀರುಕಾಯುವುದು ನಿಧಾನ ಎಂದರೆ, ಸುಮ್ಮನಿರು, ನಿನಗೆ ಗೊತ್ತಿಲ್ಲ. ದಬ ದಬ ಎಂದು ನೀರು ಸುರಿದ ಮಾತ್ರಕ್ಕೆ ನೀರು ಕಾದುಬಿಡುವುದೇನು? ಮೇಲಿನಿಂದ ನೀರು ಸಣ್ಣಗೆ ಬೀಳುತ್ತಾ, ಕೆಳಗಡೆ ಹಾಕಿರುವ ಉರಿಯಲ್ಲಿ ಆ ನೀರು ಕಾಯುತ್ತಾ ಇರಬೇಕು ಗೊತ್ತೇನು? ಎಂದು ದಬಾಯಿಸುತ್ತಾರೆ.
ನನ್ನ ತಿಳುವಳಿಕೆಯ ಪ್ರಕಾರ ಹಂಡೆಗೆ ನೀರು ಸಾಕಷ್ಟು ತುಂಬದೆ, ಕೆಳಗಡೆ ಉರಿ ಹಾಕಿದರೆ ಹಂಡೆ ತೂತಾದರೂ ಆಗಬಹುದೆಂಬ ಹೆದರಿಕೆ. ಆದರೆ ಈ ಮಾತನ್ನು ಇವರು ಸುತರಾಂ ಒಪ್ಪುತ್ತಿರಲಿಲ್ಲ. ಇನ್ನು ಇವರು ಒಲೆಗೆ ಉರಿ ಹಾಕುವ ವಿಧಾನವೇ ಒಂದು ವಿಶಿಷ್ಟ ರೀತಿಯದು. ಗರಿಯನ್ನು ಒಟ್ಟಾಗಿ ಒಲೆಗೆ ಒಟ್ಟುವುದಿಲ್ಲ. ಅದನ್ನು ಒಂದೊಂದಾಗಿ ಕಿತ್ತು ಕಿತ್ತು ಒಂದು ಗರಿ ಉರಿದ ಮೇಲೆ ಮತ್ತೊಂದನ್ನು ಒಲೆಗೆ ಒಟ್ಟುತ್ತಿರಬೇಕು. ನಮ್ಮ ಒಂದು ಕಾಗದದ ಚೂರೂ ಕಸವಾಗುವುದಿಲ್ಲ. ಎಲ್ಲವೂ ಒಲೆ ಸೇರುತ್ತದೆ. ಅದೂ ಚೂರು ಚೂರಾಗಿ ಅಣು ಅಣುವಾಗಿ. ಅರ್ಧ ಗಂಟೆಗೊಂದು ಕರಟವನ್ನೋ, ತೆಂಗಿನಮಟ್ಟೆಯನ್ನೋ ಹಾಕಬಹುದಷ್ಟೆ. ಸೌದೆ ದಿನಕ್ಕೆ ಒಂದೋ ಎರಡೋ!! ಬೆನ್ನು ನೋವು, ಸೊಂಟನೋವಿನ ಚಿಂತೆಯಿಲ್ಲದೇ ಇವರು ಎದ್ದು, ಕೂತು ಒಲೆಗೆ ಹಾಕುವ ಪರಿ ನೋಡಿದರೆ ಒಂದೊಂದು ಸಲ ಕೋಪ ಬರುತ್ತದೆ. ಈ ರೀತಿ ನೀರು ಕಾಯಿಸುವುದರಲ್ಲಿ ಗಂಟೆಗಳೇ ಕಳೆದು ಹೋಗುತ್ತದೆ. ಅವರಿಗೆ ಕಾಣದಂತೆ ನಾನು ಒಂದೊಂದುಸಲ ಒಲೆಗೆ ಗರಿಯನ್ನೋ, ಮಟ್ಟೆಯನ್ನೋ ಹಾಕಿಬಿಟ್ಟರಂತೂ ಇವರು ದೂರ್ವಾಸಮುನಿಯ ಅವತಾರವೆತ್ತುತ್ತಾರೆ. ನಾನು ಒಲೆಗಿಟ್ಟುದನ್ನು ಈಚೆಗಿಡುವುದೂ ಉಂಟು!
ಅಂತೂ ವೃತ್ತಿಯಿಂದ ನಿವೃತ್ತರಾದಮೇಲೆ ಇದೊಳ್ಳೆ ಪ್ರವೃತ್ತಿ ಎಂದು ನಾನು ಮುನಿಸಿಕೊಂಡದ್ದೂ ಉಂಟು. ಮನೆಯಲ್ಲಿ ಪ್ರತಿಯೊಬ್ಬರ ಸ್ನಾನವಾದಮೆಲೂ ಹಂಡೆಯೊಳಗೆ ಕೈ ಇಟ್ಟು ಜಾಲಾಡಿಸಿ ನೀರಿನ ಉಷ್ಣತೆ ಎಷ್ಟಿದೆ ಎಂದು ನೋಡುತ್ತಾರೆ. ಇವರ ಈ ಅಭ್ಯಾಸದಿಂದ ಮನೆಗೆ ಬರುವ ನೆಂಟರು ನಮ್ಮನ್ನು ಅಪಾರ್ಥಮಾಡಿಕೊಳ್ಳುವ ಸಂದರ್ಭವೂ ಉಂಟಾಗುತ್ತದೆ. ಇವರೇನೋ ಸ್ನಾನಕ್ಕೆ ಬರುವ ಮತ್ತೊಬ್ಬರಿಗೆ ನೀರು ಕಾದಿರುವುದು ಸಾಕೇ ಎಂದು ನೋಡುತ್ತಾರೆ. ಇವರ ಈ ಕಾರ್ಯಕ್ರಮದಿಂದ ಒಂದು ಸಲ ಆಭಾಸವೇ ಆಯಿತು. ನಮ್ಮ ಮನೆಗೆ ನೆಂಟರು ಬಂದಿದ್ದ ಸಮಯ. ಒಬ್ಬೊಬ್ಬರ ಸ್ನಾನವಾದಮೇಲೂ ಇವರು ಹಂಡೆಯ ಮುಚ್ಚಳ ತೆಗೆದು ತೆಗೆದು ನೋಡುತ್ತಿದ್ದುದರಿಂದ ಬಂದಿದ್ದ ನೆಂಟರು ತಪ್ಪು ಅರ್ಥವನ್ನೇ ಮಾಡಿಕೊಂಡರು. ಅಸಮಾಧಾನಗೊಂಡರು. ತಾವು ಎಷ್ಟು ನೀರನ್ನು ಉಪಯೋಗಿಸಿದ್ದೇವೆಂದು ಇವರು ನೊಡುತ್ತಾರೆ ಎಂದು ತಿಳಿದುಕೊಂಡುಬಿಟ್ಟರು. ಬಂದಿದ್ದ ನೆಂಟರನ್ನು ಸಮಾಧಾನಪಡಿಸಿ, ಇವರ ಸ್ವಭಾವ ಹೀಗೆ ಎಂದು ನಯ ನಾಜೂಕಾಗಿ ತಿಳಿಸಿ ಹೇಳುವಷ್ಟರಲ್ಲಿ ಸಾಕು ಸಾಕಾಯಿತು. ಒಂದುಸಲ ಇಂಗ್ಲೆಂಡಿನಲ್ಲಿ ವಾಸವಾಗಿರುವ ನಮ್ಮ ಭಾವನವರ ಮಗಳು ಅಳಿಯ ತಮ್ಮ ಮಕ್ಕಳೊಡನೆ ಬಂದಿದ್ದ ಸಮಯ. ಅವರೆಲ್ಲರೂ ಹಲವಾರು ವರುಷಗಳಿಂದ ಭಾರತಕ್ಕೆ ಬಂದು ಹೋಗಿ ಮಾಡುತ್ತಿದ್ದುದರಿಂದ ಹಂಡೆಯ ವಿಷಯ ಅವರಿಗೆ ಹೊಸದೇನೂ ಅಲ್ಲ. ಅವಳ ಮಕ್ಕಳು ದೂರದಲ್ಲಿ ನಿಂತು ಫಯರ್ ಫಯರ್ ಎನ್ನುತ್ತಾ ಒಂದು ಕೌತುಕವನ್ನು ನೋಡುವಂತೆ ನೋಡುತ್ತಿದ್ದರು. ಭಾವನವರ ಮಗಳು "ನನಗೆ ಸೌದೆ ಉರಿಯಿಂದ ಕಾದ ನೀರೇ ಇಷ್ಟ; ಸೌದೆ ಉರಿಯ ಆ ಘಮ್ಮೆನ್ನುವ ವಾಸನೆ, ಆ ಪರಿಮಳ ನನಗೆ ಪ್ರೀತಿ" ಎಂದು ಹೇಳಿದಾಗಲಂತೂ ನಮ್ಮವರಿಗಾದ ಆನಂದಕ್ಕೆ ಪಾರವೇ ಇಲ್ಲ. ಸೌದೆ, ತೆಂಗಿನ ಗರಿ ಒಟ್ಟಿದ್ದೂ ಒಟ್ಟಿದ್ದೇ. ಬೇರೆಯವರ ವಿಷಯದಲ್ಲಿ ಎಷ್ಟು ಅಕ್ಕರೆ ಎಂದು ನೀವಂದರೂ, ನನಗೆ ಇವರ ಆಪ್ಯಾಯತೆ ಹುಚ್ಚು ಹಿಡಿಸುತ್ತದೆ. ಅಂತೂ ಇಂತೂ ತೊಟ್ಟಿಕ್ಕುವ ನೀರಿನಿಂದಲೇ ಹಂಡೆ ತುಂಬಿ, ಒಂದೊಂದಾಗಿ ಹಾಕುವ ಗರಿಗಳಿಂದಲೇ ನೀರು ಕಾಯುವುದು ಆಶ್ಚರ್ಯವಲ್ಲವೇ?
ಊಟಕ್ಕೆ ಮುಂಚು ಸ್ನಾನಕ್ಕೆ ಹಿಂಚು ಎನ್ನುವ ನಾಣ್ಣುಡಿಯನ್ನು ನಿಜವಾಗಿಸುವುದರಲ್ಲಿ ಇವರು ನಿಸ್ಸೀಮರು. ಕಡೆಯಲ್ಲಿ ತಾವು ಸ್ನಾನಕ್ಕಿಳಿದು ಸಮೃದ್ಧಿಯಾಗಿ ಸ್ನಾನವನ್ನು ಮುಗಿಸುತ್ತಾರೆ. ಹಂಡೆಯ ಬೂದಿಯೂ ಗೊಬ್ಬರವಾಗಲು ಸಹಕಾರ; ಮನೆಯ ತರಕಾರಿ ಹಣ್ಣಿನ ಸಿಪ್ಪೆಗಳು ಗೊಬ್ಬರವಾದರೆ, ಕಸಕಡ್ಡಿಗಳು ಹಂಡೆಯ ಉರಿಗೆ ಸಹಕಾರವಾದರೆ, ನಮ್ಮ ಮನೆಯಿಂದ ಪರಿಸರ ಮಾಲಿನ್ಯಕ್ಕೆ ಯಾವ ಕೊಡುಗೆಯೂ ಇಲ್ಲವೇ ಇಲ್ಲವಲ್ಲ ಎನ್ನುವ ಜಂಭ ನಮಗುಂಟು.
ಕಾಲಚಕ್ರ ಹೀಗೆ ಉರುಳುತ್ತಿರುವಾಗ ನಮ್ಮ ಮನೆಗೂ ಸೋಲಾರ್ ವಾಟರ್ ಹೀಟರ್ ಬಂದಿದೆ. ಇದು ನನಗೆ ಪರಮಾನಂದ ಕೊಡುತ್ತಿರುವ ವಿಷಯ. ಆದರೆ ಪಾಪ, ನಮ್ಮವರು ಏನೋ ಕಳೆದುಕೊಂಡವರಂತೆ ಕುಳಿತಿರುತ್ತಾರೆ. ತೋಟಗಾರಿಕೆ ಮಾಡಲು, ದಿನ ಪತ್ರಿಕೆ ಓದಲು ಅರರಲ್ಲಿ ಈಗ ಅಪಾರ ಸಮಯವಿದೆ. ಆದರೂ ಇವರು ಸ್ವಲ್ಪ ಮಂಕಾಗಿಯೇ ಕಾಣುತ್ತಾರಲ್ಲ? ಏಕೆ ? ನೀವೇ ಹೇಳಿ ನೋಡೋಣ. ಹಾಂ! ಹಂಡೆಗೆ ಉರಿ ಹಾಕದೇ ಪಾಪ ಕೈ ಚುರುಚುರು ಎನ್ನುತ್ತಿರಬೇಕಲ್ಲವೇ?? ಅದಕ್ಕೂ ಇವರು ಒಂದು ದಾರಿಯನ್ನು ಕಂಡು ಹಿಡಿದಿದ್ದಾರೆ. ಕೈ ತೋಟದಲ್ಲಿ ಆಗಾಗ್ಗೆ ಸಿಗುವ ಕಾಂಡ ಮತ್ತು ಕಸ ಕಡ್ಡಿ ಇವುಗಳನ್ನೆಲ್ಲ ಸೇರಿಸಿಕೊಂಡು ಒಲೆಯ ಹತ್ತಿರ ನಡೆಯುತ್ತಾರೆ. “ಅಯ್ಯೋ, ಎಷ್ಟೊಂದು ಕಸ ಕಡ್ಡಿ ಸೇರಿದೆ ಗೊತ್ತಾ? ಅದೆಲ್ಲ ಕ್ಲೀನಾಗಲು ಈ ದಿನ ಒಲೆ ಉರಿಸುವುದೊಂದೇ ದಾರಿ” ಹೀಗೆ ಹೇಳುತ್ತಾ ತಮ್ಮ ವಾಂಛೆಯನ್ನು ಈಡೇರಿಸಿಕೊಳ್ಳುತ್ತಾರೆ. ಆದರೆ ನಮ್ಮ ಮನೆಯಲ್ಲಿ ತೆಂಗಿನ ಮರ ಇಲ್ಲವೇ ಇಲ್ಲ. ಹಾಗೂ ಒಲೆಗೆ ಉರಿಹಾಕುವ ಈ ಸಂಭ್ರಮಕ್ಕೇನೋ ಕೊರತೆಯಿಲ್ಲ. ಏನು ಆಶ್ಚರ್ಯ ಪಡುತ್ತಿದ್ದೀರಾ?
ಆದರೆ ಬೇಸಗೆಯಲ್ಲಿ ಕುದಿಯುವ ನೀರನ್ನು ದಯಪಾಲಿಸುವ ಈ ಸೋಲಾರ್ ವಾಟರ್ ಹೀಟರ್ ಮಳೆಗಾಲದಲ್ಲಿ ತಣ್ಣಗಾಗುತ್ತದೆ. ಈ ಸಂದರ್ಭದಲ್ಲಿ ನಮ್ಮ ಯಜಮಾನರಲ್ಲಿ ಏನೋ ಒಂದು ಲವಲವಿಕೆ ಕಂಡು ಬರುತ್ತದೆ. ಇವರು ಉತ್ಸಾಹದಿಂದ, ಹುಮ್ಮಸ್ಸಿನಿಂದ ಹೊರಡುತ್ತಾರೆ. ಗರಿಗಳನ್ನು, ತೆಂಗಿನ ಮಟ್ಟೆಯನ್ನು, ಒಂದುಗೂಡಿಸುತ್ತಾರೆ. ಮತ್ತೆ ಅದೇ ಪುರಾಣ.. ಹಂಡೆಗೆ ನೀರು ತೊಟ್ಟಬೇಕು.. ಒಂದೊಂದಾಗಿ ಗರಿ ಉರಿಯಬೇಕು..
*-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com