ಅಮೆರಿಕನ್ನಡ
Amerikannada
ಮಾಯವಾದ ಗುಬ್ಬಿ ಸಂಕುಲದ ‘ಕತೆ’ ಪುಸ್ತಕದಲ್ಲಿ ಪ್ರತ್ಯಕ್ಷ
-ಶ್ಯಾಮಸುಂದರ ಬಿದರಕುಂದಿ
Gubbi Cover Pageಗುಬ್ಬಿ, ಹೆಸರೇ ಸೂಚಿಸುವಂತೆ ಪಕ್ಷಿ ಪ್ರಪಂಚದಲ್ಲೇ ಅತೀ ಸಣ್ಣ ಹಕ್ಕಿ ಅದನ್ನು ಚಿಟಗುಬ್ಬಿ, ಗುಬ್ಬಚ್ಚಿ ಎಂದು ಪ್ರೀತಿಯಿಂದ ಕರೆಯುವುದಕ್ಕೆ ಕಾರಣ, ಮನುಷ್ಯನಿಗೆ ಹೆದರದೇ ಸಮೀಪ ಸುಳಿಯುವ, ಗೂಡು ಕಟ್ಟುವ, ಮನೆಯೊಳಗೆ ಬಂದು ಸದ್ದು ಮಾಡುವ ಅದರ ನಿರುಪದ್ರವಿ ಸ್ವಭಾವ. ನೋಡಲು ಚೆಂದ, ಹಿಡಿದರೆ ಮುಷ್ಟಿಯೊಳಗೆ ಮುಚ್ಚಬಹುದಾದ ಗುಬ್ಬಿ, ಮನುಷ್ಯನ ನುಡಿಗಟ್ಟಿನಲ್ಲಿ, ಕಟ್ಟಿದ ಕತೆಗಳಲ್ಲಿ, ರೂಪಕವಾಗಿ, ಉಪಮೆಯಾಗಿ ಬಳಕೆಯಾಗುತ್ತಿದೆ. ಮಕ್ಕಳಿಗೆ ಹೇಳುವ ‘ಕಾಗಕ್ಕ-ಗುಬ್ಬಕ್ಕ’ ಕತೆಯಲ್ಲಿ ಗುಬ್ಬಿಯು ಸ್ನಿಗ್ಧ ಮುಗ್ಧ ಪಕ್ಷಿ; ಆತ್ಮೀಯ ಸ್ವಭಾವದ ಹಕ್ಕಿ ಗುಬ್ಬಿಯ ಆಕಾರದ ದಿನ ಬಳಕೆಯ ಪುಸ್ತಕಗಳು ಕೆಲವು. ಅದರಲ್ಲಿ ನೆನಪಾಗುವದು ಒಂದು ಗುಬ್ಬೀ ಚಿಮಣಿ ವಿದ್ಯುತ್ ದೀಪ ಬ೦ದಂದಿನಿಂದ ಗುಬ್ಬಿ ಚಿಮಣಿ ಕಣ್ಮರೆಯಾದಂತೆ, ತಾರ ಕಂಬಗಳು, ಮೊಬೈಲ್ ಗೋಪುರಗಳು, ಬ೦ದಾಗಿನಿಂದ ಶಬ್ದ ತರಂಗಗಳಿಗೆ ಅ೦ಜಿ ಗುಬ್ಬಿಗಳು ಮಾಯಾವಾಗಿವೆ. ಗುಬ್ಬಿ ನೆನಪಿನ ಇತಿಹಾಸದಲ್ಲಿ, ಕಲಾವಿದರು ತೆಗೆದ ಚಿತ್ರದಲ್ಲಿ ಹಳೆಯ ಛಾಯರೂಪದಲ್ಲಿ ಮಾತ್ರ ಕಾಣಿಸುವ ಅಪೂರ್ವ ಪಕ್ಷಿ ವಿಶೇಷದ ಬಗ್ಗೆ ಮೈಸೂರಿನ ಹರಿಹರೇಶ್ವರರು ಒಂದು ಸುಂದರ ಪ್ರಬ೦ಧವನ್ನು ಬರೆದು ಗುಬ್ಬಿಯನ್ನು ಪ್ರೀತಿಸಿದ್ದಾರೆ; ದಾಖಲಿಸಿದ್ದಾರೆ.
ಶಿಕಾರಿಪುರದ ಹರಿಹರೇಶ್ವರರು ಮೂಲತಃ ಎಂಜನಿಯರರು. ೩೦ಕ್ಕೂ ಹೆಚ್ಚು ವರುಷ ಅಮೆರಿಕಾದಲ್ಲಿ ಎಂಜನಿಯರ್ ಆಗಿ ವೃತ್ತಿ ಯಶಸ್ಸು ಪಡೆದು ತವರೂರಿಗೆ ಹಿಂದುರುಗಿ, ಮೈಸೂರಿನಲ್ಲಿನ ಜ್ಞಾನ ವಿಭಾಗದ ಸಾಹಿತ್ಯ ಪ್ರಬ೦ಧಕಾರರಾಗಿ ಪ್ರಕಾಶೀತರಾಗುತ್ತಿದ್ದಾರೆ. ಯಾವುದೇ ವಿಷಯದಲ್ಲಿ ಆಸ್ಥೆ ಬ೦ದರೆ ಸಾಕು, ಅದರ ಚೂಲಮೂಲವನ್ನು ಇ೦ಟರ್ನೆಟ್, ಪುಸ್ತಕ ಲೈಬ್ರರಿಗಳಿಂದ ಸಂಗ್ರಹಿಸಿ, ಗ್ರಹಿಸಿ ಪ್ರಬಂಧ ರಚಿಸುವ ಕಲೆ ಹರಿಹರೇಶ್ವರರಿಗೆ ಕರಗತವಾಗಿದೆ. ಮಾತಿನ ಚಪ್ಪರ, ಕನ್ನಡ-ಉಳಿಸಿ ಬೆಳೆಸುವ ಬಗೆ, ಮಾತೇ ಮುತ್ತು, ಮುಂತಾದ ೧೨ ಪುಸ್ತಕಗಳನ್ನು ಪ್ರಕಟಿಸಿದ ಹರಿಹರೇಶ್ವರರು ‘ಅಮೇರಿಕನ್ನಡ’ದಂತಹ ಅಪರೂಪದ ದ್ವೈಮಾಸಿಕದ ಮೊದಲ ಸಂಪಾದಕರು. ಸಂಸ್ಕೃತವನ್ನು ಬಲ್ಲವರಾದ್ದರಿಂದ ಗೀತ, ವೇದಗಳಿಂದ ಅನೇಕ ಅನುವಾದಗಳನ್ನು ತಂದಿದ್ದಾರೆ. ಕವನ, ಲಲಿತ ಪ್ರಬ೦ಧ, ಚಿಂತನೆ, ವೈಚಾರಿಕ, ವೈಜ್ಞಾನಿಕ ಪ್ರಕಾರಗಳನ್ನು ಕರಗತ ಮಾಡಿಕೊಂಡ ಇವರು ‘ಎಲ್ಲೇ ಇರು ಎಂತೇ ಇರು ಎಂದೆಂದಿಗೂ ನೀ ಕನ್ನಡಿಗನಾಗಿರು (ಸಾಹಿತಿಯಂತೂ ಆಗಿಯೇ ತೀರು’) ಎಂಬ ಕುವೆಂಪು ವಾಣಿಯನ್ನು ನಿಜವಾಗಿಸಿರುವ ಧೀಮಂತ.
ಈಗ ಹರಿಹರೇಶ್ವರರ ಗಮನ ‘ಗುಬ್ಬಿ’ ಎಂಬ ಕಿರುಹಕ್ಕಿಯತ್ತ ಹರಿದಿದ್ದು, ಅದರ ಇತಿವೃತ್ತವನ್ನು ‘ವಿವೇಚನೆ’ ಎಂದು ಕರೆದು, ಶೋಧನೆ ತನಿಖೆ ಸಂಗ್ರಹ- ಅನ್ನಬಹುದಾದ ರೀತಿಯಲ್ಲಿ ಪ್ರಬ೦ಧವನ್ನು ರಚಿಸಿದ್ದಾರೆ. ಇವರು ಯಾವುದೇ ವಿಷಯದ ಮೇಲೆ ಗಮನ ಹರಿಸಿದರೂ ಅತ್ಯಾಧುನಿಕವಾದ ಶೋಧನ ಸಂಗ್ರಹದ ತಂತ್ರವನ್ನು ಬಳಸಿ ಆಕರಗಳನ್ನು ಒದಗಿಸುತ್ತಾರೆ. ವಿಷಯದ ಸಮಗ್ರ ನೋಟ ಒದಗಿಸುವದಕ್ಕೆ ಎಲ್ಲ ನಮೂನೆಯ ಭೌದ್ಧಿಕ ಮಾರ್ಗಗಳನ್ನು ಹೊಕ್ಕು ಹೊರಬರುತ್ತಾರೆ.
ಎಂಟು ಅಧ್ಯಾಯಗಳ ಗುಬ್ಬಿ. . . . ಗುಬ್ಬಿಚ್ಚಿಯ ವಿವೇಚನೆ, ಗುಬ್ಬಿಯ ಹೆಸರು ದೆಸೆಗಳಿ೦ದ ಆರಂಭವಾಗಿ ಮಕ್ಕಳು ಕಂಡ ಗುಬ್ಬಿ, ಊರುಗಳಾಗಿ ಗುಬ್ಬಿ, ನೀ ಹಾರಿ ಬಂದುದೆಲ್ಲಿಂದ ಗುಬ್ಬಿ, ಗುಬ್ಬಿ ಪದ -ವಿಲಾಸ ವೈಖರಿ ಗುಬ್ಬಿಯೆಂಬ ಮಗು, ನೀ ಹೋದುದೆಲ್ಲಿಗೆ ಗುಬ್ಬಿ-ಹೀಗೆ ಮುಖ್ಯ ಶೀರ್ಷಿಕೆಗಳಲ್ಲಿ ವಿಷಯ ನಿರೂಪಿಸುವುದರ ಜತೆಗೆ ಅಡಿ ಟಿಪ್ಪಣಿಗಳಲ್ಲಿ ಆಕರಗಳ ವಿಫುಲ ಸಾಮಗ್ರಿಯನ್ನು ವ್ಯವಸ್ಥಿತವಾಗಿ ಕೊಟ್ಟು ‘ಗುಬ್ಬಿ ಪ್ರಪಂಚ’ದ ಸಮಸ್ತವನ್ನು ಬೆಳಕಿಗೆ ಒಡ್ಡುತ್ತಾರೆ.
‘ಗುಬ್ಬಿ ಪದ-ವಿಲಾಸ ವೈಖರಿ’ ಭಾಗದಲ್ಲಿ ಹರಿಹರೇಶ್ವರರು ಕನ್ನಡದ ವಿವೇಚನೆಯನ್ನು ‘ಗುಬ್ಬಿ’ಯ ಮೇಲೆ ‘ಬ್ರಹ್ಮಾಸ್ತ್ರ’ ಎಸೆದಂತೆ ವ್ಯಾಪಕವಾಗಿ ನಡೆಸುತ್ತಾರೆ. ಗುಬ್ಬಿಯನ್ನು ನೇರವಾಗಿ, ಪರ್ಯಾಯವಾಗಿ ಉಲ್ಲೇಖಿಸುವ, ವರ್ಣಿಸುವ ಹಳೆ-ಹೊಸ ಕವಿತೆಗಳನ್ನೂ ಉದಾಹರಿಸಿರುವುದು ಸ್ವಾರಸ್ಯಕರ ಓದು.
ಹರಿಹರೇಶ್ವರರ ವಿವೇಚನೆಯ ವೈಜ್ಞಾನಿಕ ವಿಧಾನವನ್ನು ಸ್ಪಷ್ಟಪಡಿಸುವ ಭಾಗ ಅನುಬಂಧಗಳು. ೮೦ ಪುಟದುದ್ದಕ್ಕೂ ಈ ಭಾಗದಲ್ಲಿ ದೇಶ-ವಿದೇಶಗಳಲ್ಲಿ ಗುಬ್ಬಿ; ಪ್ರಾಣಿ ಶಾಸ್ತ್ರದಲ್ಲಿ ಗುಬ್ಬಿ ಸಂಸ್ಕೃತ ಕನ್ನಡದ ಪಕ್ಷಿ ಸಂಕುಲ; ಗುಬ್ಬಿಯ ಎರಡು ಕತೆಗಳು, ಕವನಗಳು ಮುಂ. ಆಧಾರ ಸಾಮಗ್ರಿಗಳು ಮುಖ್ಯ ಪ್ರಬ೦ಧಕ್ಕೆ ಪೂರಕವಾಗಿ ಬಂದಿವೆ. ಗುಬ್ಬಿಯ ಜತೆಗೆ ಇತರ ಹಲವಾರು ಜಾತಿ, ಪ್ರಭೇದದ ಹಕ್ಕಿ ಪಕ್ಕಿಗಳ ಹೆಸರಿನ ಪಟ್ಟಿಯೂ ಇಲ್ಲಿದೆ. ಶಬ್ದಕೋಶ ತಯಾರಿಸುವವರಿಗೆ ಉಪಯುಕ್ತವಾಗುವ ಉಲ್ಲೇಖಗಳು ಇವು.
ಪ್ರಬ೦ಧ ರಚನೆಯ ಕಲೆ ಹರಿಹರೇಶ್ವರರಿಗೆ ಕರಗತವಾದ ರೀತಿಯನ್ನು ಈ ಪ್ರಬ೦ಧದ ಉದಾಹರಣೆಯಿ೦ದ ಕಲಿಯಬಹುದು; ಅನುಸರಿಸಬಹುದು. ಪಿ.ಎಚ್.ಡಿ., ಎಂ.ಫಿಲ್‌ಗೆ ಹೆಸರು ಹಚ್ಚಿ, ಅದ್ವಾನರೂಪೀ ಪ್ರಬ೦ಧ ಗೀಚಿ, ವಿಶ್ವವಿದ್ಯಾಲಯಗಳಿಗೆ ಸಾದರ ಪಡಿಸುವ ಅವಸರದ ಪದವೀಧರರು ‘ಗುಬ್ಬಿ. . . . ಗುಬ್ಬಚ್ಚಿ’ ಯ ಈ ವಿವೇಚನೆಯನ್ನು ಒಂದು ಮಾದರಿ ಪಠ್ಯವನ್ನಾಗಿ ಎದುರಿಗಿಟ್ಟುಕೊಂಡರೆ ಪಿ.ಎಚ್.ಡಿ.ಗಳಿಗೆ ನಿಜವಾದ ಆದರ ಗೌರವ ಬ೦ದೀತು.