ಅಮೆರಿಕನ್ನಡ
Amerikannada
ತನು ತರುವಿನ ಹಕ್ಕಿ
ವಿಶ್ವ, ಸ್ಯಾನ್ ರಮೋನ್. ಕ್ಯಾಲಿಫೋರ್ನಿಯಾ
ತನು ತರುವಲಿ ನೆಲಸಿಹದೊಂದು ಹಕ್ಕಿ
ನಲಿದು ನರ್ತಿಸುವುದು ಜೀವ ರಸಸವಿಯಾನಂದಕೆ
ಎಲ್ಲಿಹುದದು ಅರ್ಥ್ವೇವೇನದರಗಾನ ಪಲ್ಲವಿಗೆ ಬಲ್ಲವರಾರೋ ||

ಗೂಡಿಡುವುದು ರಂಬೆಗಳ ಛಾಯೆ ಮೂಡುವಲ್ಲಿ
ಬೀಡ ಸೇರಿ ಸಂಜೆಗೆ ಓಡುವುದು ಮುಂಜಾವಲಿ
ಆಡದೆಂದೂ ಅದರಿಂಗಿತದ ಸುಳಿಯನೀವ ನುಡಿಯ ||

ಹೇಳರಾರು ಎನ್ನೋಳ ಹಾಡುವಾ ಹಕ್ಕಿ ಬಗೆಯ
ಹೋಲದದಕಾವ ರಂಗು ವರ್ಣವಿಲ್ಲದಿಲ್ಲ
ಸಲ್ಲದದಕೆ ರೂಪ ಆಕೃತಿ ಚಹರೆಗಳೆಲ್ಲ ||

ಕುಳಿತಿಹುದು ಪ್ರೇಮದಾ ಚಾಯೆಯಲೆಂದೆಂದಿಗೂ
ಬಾಳುವುದು ಎಟುಕಬಾರದ ಗಡಿಯಿರದನಂತದೊಳು
ತಿಳಿಯರಾರದರ ತಿರುಗಿಬರುವ ರೀತಿ ನಿಯತಿಯ ||

ಸಹಪಥಿಕರೆ ಕೇಳಿ ಕಬೀರನುಲಿವೆ
ಬಹು ಸೋಜಿಗದ ವಿಸ್ಮಯ ಹಕ್ಕಿಯಿದು
ಗಹನ ಸಾಧನೆಯಲರಸಿ ಈ ಹಕ್ಕಿತಣಿವ ತಾಣವ ||


ಕಬೀರರ ಪದ್ಯದ ಭಾವಾನುವಾದ, ಟ್ಯಾಗೋರ್‌ರವರ ಅನುವಾದ ಆಧಾರ