ಅಮೆರಿಕನ್ನಡ
Amerikannada
ಮೌನವೇ ಒಂದು ಕಲೆ
-ನಾಗಲಕ್ಷ್ಮೀ ಹರಿಹರೇಶ್ವರ, ಮೈಸೂರು
‘ಮಾತು ಬೆಳ್ಳಿ’ಯಾದರೆ, ‘ಮೌನ ಬಂಗಾರ’- ಎನ್ನುವ ನಾಣ್ಣುಡಿಯೊಂದಿದೆ. ಹೌದು, ಆಡುವ ಮಾತು ಮುತ್ತಿನಂತಿರಬೇಕು, ಸ್ಫಟಿಕದ ಶಲಾಕೆಯಂತಿರಬೇಕು, ಕೇಳಿದವರು ‘ಅಹುದಹುದು’ ಎನ್ನುತ್ತಿರಬೇಕು, ದೇವರೂ ಸಹ ಮೆಚ್ಚಬೇಕು!- ನಿಜ. ಆದರೆ, ಅದನ್ನು ಮೀರಿಸಿದ ಒಂದು ಸಾಧನವಿದೆ. ಅದೇ ಮೌನ!
ಹಾಗೆಂದ ಮಾತ್ರಕ್ಕೆ ಸುಮ್ಮನಿರುವುದು ಎಲ್ಲ ಸಮಯದಲ್ಲೂ ಸರಿ, ಎಲ್ಲ ಸಂದರ್ಭಗಳಲ್ಲೂ ಉಪಯುಕ್ತವೆ೦ದಾಗಲೀ, ಎಲ್ಲಾ ಸನ್ನಿವೇಶಗಳಲ್ಲೂ ಸಮಂಜಸ ಎಂದಾಗಲೀ ಅಲ್ಲ. ಆಡಲೇ ಬೇಕಾದಾಗ ಎಷ್ಟು ಬೇಕೋ ಅಷ್ಟು ಮಾತಾಡಿ, ದೇಶ-ಕಾಲಗಳ ಪರಿಸ್ಥಿತಿಗೆ ಅನುಗುಣವಾಗಿ, ಮಾತನಾಡದೇ ಸುಮ್ಮನಿದ್ದು ನಮ್ಮ ಇಂಗಿತವನ್ನು ಇನ್ನೊಬ್ಬರಿಗೆ ತಿಳಿಯಪಡಿಸುವುದು ಇದೆಯಲ್ಲ, ಅದು, ಬೇರೆ ವಿಶಿಷ್ಟ ಆಚಾರ, ಅದು ಜಾಣತನದ ವಿಚಾರ, ಅದು ಬುದ್ಧಿವಂತರ ಒಂದು ಲಕ್ಷಣ, ಹೀಗಾಗಿ, ‘ಮೌನವೇ ಒಂದು ಕಲೆ’
ಈ ಕಲೆ ಸುಲಭವಾಗಿ ಕರಗತವಾಗುವ ಅಂಗೈನೆಲ್ಲಿಕಾಯಿ ಎಂದುಕೊಳ್ಳಬೇಡಿ. ಬಾಯಿಯಿಂದಲ್ಲ, ಕಣ್ಣಿನಿಂದ, ಮುಖಭಾವದಿಂದ, ಆಂಗಿಕ ಅಭಿನಯದಿಂದ, ಮನಸ್ಸಿನ ಅನಿಸಿಕೆಗಳನ್ನ ಅಭಿವ್ಯಕ್ತಿಸುವ ಈ ಕಲೆ ಸಿದ್ಧಿಸಬೇಕಾದರೆ, ಬಹಳ ಪ್ರಯತ್ನ ಪಡಬೇಕು, ಎಲ್ಲರಿಗೂ ಒಗ್ಗವುದಲ್ಲ; ಇದಕ್ಕೆ ಸಾಕಷ್ಟು ಅಭ್ಯಾಸವನ್ನೂ ಮಾಡಬೇಕು. ಕೆಲವು ಉದಾಹರಣೆಗಳನ್ನು ಗಮನಿಸೋಣ:
ನಾಲ್ಕು ಜನ ಒಂದುಗೂಡಿದಾಗ, ಯಾರಾದರೂ ಮಾತನಾಡುತ್ತಿದ್ದಾಗ ತತ್‌ಕ್ಷಣ ಮಧ್ಯೆ ಬಾಯಿಹಾಕಿ ‘ಅದು ನನಗೂ ಗೊತ್ತು, ಅದೇ ವಿಷಯದಲ್ಲಿ ನನಗೆ ಇನ್ನೂ ಹೆಚ್ಚು ಗೊತ್ತು, ಅಥವಾ ನಿಮಗೆ ಗೊತ್ತಿರುವುದು ತಪ್ಪು’- ಹೀಗೆ ಏನೋ ಒಂದು ಆಡಿಬಿಡುವುದು ನಮ್ಮಲ್ಲಿ ಬಹಳ ಜನರ ಸಹಜ ಸ್ವಭಾವ. ಸುಮ್ಮನೇ ಕಾಲಕಳೆಯುವುದಕ್ಕೆ ಅಥವಾ ಕಾಲೆಳೆಯುವುದಕ್ಕೆ ಹೀಗೆ ಮಾತಿನ ಮ೦ಟಪ, ಮಾತಿನ ಚಪ್ಪರ ಕಟ್ಟುತ್ತ, ನಾಲಿಗೆಗೆ ಕಡಿವಾಣ ಹಾಕದೆ, ‘ಮಾತು ಮಾತು ಮಾತು ಮಾತಿನ ಗೈರತ್ತಿನಲ್ಲೇ ಕರಾಮತ್ತು’ ನಡೆಸುತ್ತಾ ಹೋಗುವುದೂ ಸಹ ಒಂದು ಥರಹಾ ಕಲೆಯೇ. ಇರಲಿ, ಆ ವಿಚಾರ ಬೇರೆ. ಆದರೆ, ‘ಮೌನೇನ ಕಲಹಂ ನಾಸ್ತಿ’ಯಂತೂ ಅನುಭವದ ಮಾತು! ಇನ್ನೊಬ್ಬರು ಮಾತನಾಡುತ್ತಿದ್ದಾಗ ತಾಳ್ಮೆಗೆಡದೆ, ಮಧ್ಯೆ ಬಾಯಿ ಹಾಕದೆ, ಕೇಳುವ ಮೌನೋಪಾಸನೆ ಮಾಡುವುದಿದೆಯಲ್ಲ, ಅದು ಅಭ್ಯಾಸಹೀನರಿಗೆ ಸುಲಭವಾಗಿ ದಕ್ಕುವ ಸೊತ್ತಲ್ಲ!
ಭಾಷಣ ಕಾರ್ಯಕ್ರಮಗಳಿಗೆ ಹೋದ ಸಭಿಕರು, ಚಪ್ಪಾಳೆಗಳ ನಡುವೆ ಮೌನವಾಗಿರಬೇಡವೇ? ಸಂಗೀತಕಛೇರಿಗಳಿಗೆ ಹೋದ ನಾವು, ಪಿಸಿ ಪಿಸಿ ಗುಸ ಗುಸ ಹರಟುತ್ತಿದ್ದರೆ ಎಂತಹ ಆಭಾಸವಲ್ಲವೇ? ಕೋರ್ಟಿನಲ್ಲಿ ಕಲಾಪ ನಡೆಯುತ್ತಿದ್ದಾಗ ಮೌನವಾಗಿರದಿದ್ದರೆ ಸಭಿಕರನ್ನು ನ್ಯಾಯಾಧೀಶರು ಹೊರತಳ್ಳಿಯಾರು, ಅಲ್ಲವೇ?
ಇನ್ನೊಬ್ಬರ ಮಾತು ಮುಗಿಯುವವರೆಗೂ ತಾವು ಮಧ್ಯೆ ಮಾತನಾಡಬಾರದು ಎಂಬುದನ್ನು ಚಿಕ್ಕವರಿದ್ದಾಗಲೇ ಶಾಲೆಯಲ್ಲಿ ಮಕ್ಕಳು ಕಲಿತಿರಬೇಕು.
ನಾವೆಲ್ಲ ಗಂಭೀರವಾಗಿ ಯೋಚನೆಮಾಡುವುದು ಮೌನದಲ್ಲಿ; ಚಿ೦ತಿಸುವುದು ಮೌನದಲ್ಲೇ. ರಾಜಗಾಂಭೀರ್ಯ ಬಲ್ಲಿರಷ್ಟೆ? ಆಡಿದ ಮಾತು ಒಂದು ಅರ್ಥ ಸ್ಫುರಿಸಿದರೆ, ಆಡಬೇಕಾಗಿದ್ದ, ಆದರೆ ಆಡದ, ಮಾತಿದೆಯಲ್ಲ ಆ ಮೌನ ನೂರೆಂಟು ಅರ್ಥ ಸ್ಫುರಿಸೀತು. ‘ಶ್ರುತಗಾನ೦ ಅಭಿರಾಮ೦, ಅಶ್ರುತಗಾನಂ? ಅದು, ಅಭಿರಾಮತರಂ!’ ಮುನಿಯದ ಮುನಿಗಳೆಲ್ಲ ತಪಸ್ಸು ಮಾಡುವುದು ಮೌನದಲ್ಲೇ! ‘ಅನಿರ್ವಚನೀಯತೆ’ ಪದ ಬಂದದ್ದೂ ಹೀಗೇನೇ. ಬಣ್ಣಿಸಲು ಅಸದಳವಾದಾಗ ಮೌನಕ್ಕೇ ಶರಣು ಹೋದೇವು. ಕುವೆಂಪು ‘ಕೃತ್ತಿಕೆ’ಯಲ್ಲಿ ಹೇಳಿದ ಹಾಗೆ, “ಮಿತ್ರರಿರಾ, ಮಾತಿಲ್ಲಿ ಮೈಲಿಗೆ; ಸುಮ್ಮನಿರಿ. ಮೌನವೇ ಮಹತ್ತಿಲ್ಲಿ. .. .. ಆನಂದವೇ ಪೂಜೆ; ಮೌನವೇ ಮಹಾ ಸ್ತೊತ್ರ!”- ಎಂದೇವು.
ಒಂದು ಕೊನೆಯ ಮಾತು: ಎಲ್ಲರಿಗೂ ಗೊತ್ತು, ಹೆಣ್ಣು ಮಾತುಗಾರ್ತಿ- ಎಂದು. ಆದರೆ, ಅವಳಿಗೆ ಮಾತ್ರ ಗೊತ್ತು, ಮಾತಿನಿಂದ ಸಾಧಿಸದ ಇನ್ನು ಎಷ್ಟೆಷ್ಟನ್ನೋ ತಾನು ಮೌನದಿಂದಲೇ ಗಿಟ್ಟಿಸಿಕೊಳ್ಳುತ್ತಾಳೆ- ಎಂಬುದು!