ಅಮೆರಿಕನ್ನಡ
Amerikannada
ಮುಗ್ಧ ಮನಸ್ಸಿಗೆ ಹರ್ಷೋಲ್ಲಾಸದ ಗ್ರಾಸ ‘ಮಕ್ಕಳ ಸಾಹಿತ್ಯ ಪುಸ್ತಕಗಳು’
-ಶಿಕಾರಿಪುರ ಹರಿಹರೇಶ್ವರ
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶ (೧೯೮೪-೯೭) ಮತ್ತು ಕನ್ನಡ ಗ್ರಂಥಸೂಚಿ ಸಂಪುಟಗಳ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡಿರುವ (೧೯೯೭-೨೦೦೧) ಎಸ್. ಚನ್ನಪ್ಪನವರು ಬರೆದಿರುವ ಪುಸ್ತಕಗಳು ಮಕ್ಕಳಿಗೂ ಮತ್ತು ಮಕ್ಕಳ ಮನಸ್ಸಿನ ಹಿರಿಯರಿಗೂ ಮೆಚ್ಚುಗೆಯಾಗುವಂತಹವು.
ಕಥೆ ಹೇಳುವ ಕಲೆ ಚನ್ನಪ್ಪನವರಿಗೆ ಸಿದ್ಧಿಸಿದೆ. ಸರಳ ಭಾಷೆ, ಸುಲಭ ಶೈಲಿಯ ನಿರೂಪಣೆ ಮನಸ್ಸಿಗೆ ಮುಟ್ಟುತ್ತದೆ. ವಿಷಯ ಸಂಗ್ರಹಣೆಯಲ್ಲಿ ಇವರದು ಸಿದ್ಧಹಸ್ತ. ವ್ಯಕ್ತಿಚಿತ್ರಗಳನ್ನು ಹೆಣೆಯುವಾಗ ಆದರ್ಶ ವ್ಯಕ್ತಿಗಳ ಜೀವನ ಮತ್ತು ಸಾಧನೆಯ ಮುಖ್ಯಾಂಶಗಳನ್ನ ಗುರುತಿಸಿ ಕ್ಲಿಷ್ಟ ವಿಷಯಗಳನ್ನೂ ಸರಳವಾಗಿ ಅರ್ಥವತ್ತಾಗಿ ನಿರೂಪಿಸುವುದು ಚನ್ನಪ್ಪನವರ ಹೆಗ್ಗಳಿಕೆ. ಈ ಕಾರಣಕ್ಕೆ ಇವರ ಪುಸ್ತಕಗಳಿಗೆ ರಾಜ್ಯ ಸಾಹಿತ್ಯ ಅಕಾಡಮಿಯಿಂದ, ಇನ್ನಿತರ ಸಂಘಸಂಸ್ಥೆಗಳಿಂದ ಪಾರಿತೋಷಕಗಳು ಲಭಿಸಿವೆ. ಕನ್ನಡದ ಇವರ ಈ ಗಮನಾರ್ಹ ಸೇವೆಯನ್ನ ಪರಿಗಣಿಸಿ ಹಲವಾರು ಸಾಹಿತ್ಯ ಸಮಾವೇಶಗಳು ಅಧ್ಯಕ್ಷಪೀಠ ಅಲಂಕರಿಸಲು ಆಹ್ವಾನವಿತ್ತು ಇವರನ್ನ ಗೌರವಿಸಿವೆ.
ಇವರ ಪ್ರಕಟಿತ ಪುಸ್ತಕಗಳ ಶೀರ್ಷಿಕೆಗಳನ್ನು ಗಮನಿಸಿದರೆ ಸಾಕು, ಶ್ರೀ ಚನ್ನಪ್ಪನವರು ಆರಿಸಿಕೊಳ್ಳುವ ವಿಷಯಗಳ ವ್ಯಾಪಕತೆಯನ್ನ ಮತ್ತು ಒಂದು ಬಗೆಯಲ್ಲಿ ಚನ್ನಪ್ಪನವರ ಸವ್ಯಸಾಚಿತ್ವವನ್ನ ನಾವು ಮನಗಾಣುತ್ತೇವೆ: ಮಕ್ಕಳಿಗಾಗಿ ಕಥೆಗಳನ್ನು ಬರೆದಿದ್ದಾರೆ. ಕನ್ನಡದ ಸಾಹಿತ್ಯ ದಿಗ್ಗಜರ ಜೀವನ ಸಾಧನೆಗಳ ಹೊತ್ತಗೆಗಳನ್ನ ತಂದಿದ್ದಾರೆ. ಭಾರತದ ಪ್ರಾತಃಸ್ಮರಣೀಯರ ಜೀವನಗಾಥೆಯನ್ನ ಕಥೆಗಳ ಮುಖಾಂತರ ಹೆಣೆದಿದ್ದಾರೆ. ದೊಡ್ಡವರ ಹಿತವಚನಗಳನ್ನ ಸೂಕ್ತಿಗಳನ್ನ ತಿಳಿಗನ್ನಡದಲ್ಲಿ ನೇಯ್ದಿದ್ದಾರೆ. ಸಂತರ ಸಮಾಜ ಸುಧಾರಕರ ಮುತ್ತಿನಂಥ ಮಾತು ಮಾಣಿಕ್ಯಗಳ ಮಂಟಪ ಕಟ್ಟಿದ್ದಾರೆ. ಮಕ್ಕಳಿಗಾಗಿಯೇ ಕನ್ನಡದಲ್ಲಿ ಬರೆದ ಸಾಹಿತಿಗಳ ನೆನಪಿನ ಮಾಲೆಯನ್ನ ಹೆಣೆದಿದ್ದಾರೆ. ವಿವಿಧ ಪ್ರಕಾರಗಳಲ್ಲಿ ಎಪ್ಪತ್ತೈದಕ್ಕೂ ಹೆಚ್ಚಾಗಿ ಕೃತಿಗಳನ್ನ ರಚಿಸಿದ್ದಾರೆ:
ಮಕ್ಕಳ ಸಾಹಿತ್ಯ ಸಂಪದದ ಕೆಲವು ಪುಟ್ಟ ಹೊತ್ತಿಗೆಗಳು:
ಸ್ವತಂತ್ರ ಕೃತಿಗಳು: ಚಿನ್ನದ ತಟ್ಟೆ ಮತ್ತು ಇತರೆ ಕಥೆಗಳು, ಚಿನ್ನದಂಥ ಮಾತುಗಳು, (ಸ್ವಾತಂತ್ರ್ಯ ಪೂರ್ವ ಯುಗದ) ಕರ್ನಾಟಕದಲ್ಲಿ ಮಿಂಚಿದ ಮಹಿಳೆಯರು, ಇಬ್ಬರು ಹಿರಿಯರು, ಇಬ್ಬರು ಮಾನ್ಯರು, ಮೂವರು ಮಹನೀಯರು (ವಿಶ್ವೇಶ್ವರಯ್ಯ, ಜಯಚಾಮರಾಜ ಒಡೆಯರ್ ಮತ್ತು ರಾಧಾಕೃಷ್ಣನ್), ಕನ್ನಡದ ನಾಲ್ವರು ಹಿರಿಯರು, ಕನ್ನಡದ ಐವರು ಮಾನ್ಯರು, ಟಾಲ್ಸ್‌ಟಾಯ್ ಕಥೆಗಳು, ಗಾಂಧೀಜಿ ಕಥೆಗಳು, ನೆಹರೂಜಿ ಕಥೆಗಳು, ಗಾಂಧೀಜಿ-ನೆಹರೂಜಿ, ಕನ್ನಡ ಕಣ್ವ ಬಿ.ಎಂ.ಶ್ರೀ. ಕುವೆಂಪು ಕಥೆ, ಬೆಳ್ಳಾವೆ ವೆಂಕಟನಾರಣಪ್ಪ, ಎಮ್ ಎಸ್ ಪುಟ್ಟಣ್ಣ, ಧರ್ಮದೀಪಕರು, ಮಕ್ಕಳ ಸಾಹಿತ್ಯ ನಿರ್ಮಾಪಕರು, ಮಕ್ಕಳ ಸಾಹಿತ್ಯ ಸಮೀಕ್ಷೆ, ಮಕ್ಕಳ ಸಾಹಿತ್ಯ ಸಂಪುಟ, ಶಿವರಾಮ ಕಾರಂತ, ಪಂಜೆ ಮಂಗೇಶರಾವ್, ಆಲೂರು ವೆಂಕಟರಾವ್, ಜಿ.ಪಿ. ರಾಜರತ್ನಂ, ಡಿವಿಜಿ, ಹೀಗಿದ್ದರು ಗಾಂಧೀಜಿ, ಹೀಗಿದ್ದರು ನೆಹರೂಜಿ- ಮುಂತಾದವು.

ವ್ಯಕ್ತಿಚಿತ್ರಗಳು: ಸಾಹಿತ್ಯಪರಿಚಾರಕ (ಜಿ.ಪಿ. ರಾಜರತ್ನಂ), ಸಹೃದಯರು, ವಾಙ್ಮಯವ್ಯಕ್ತಿಗಳು, ಹತ್ತು ವ್ಯಕ್ತಿಚಿತ್ರಗಳು, ಇಪ್ಪತ್ತು ವ್ಯಕ್ತಿಚಿತ್ರಗಳು, ಕನ್ನಡದ ಹತ್ತು ಪ್ರತಿಭೆಗಳು, ವ್ಯಕ್ತಿನೋಟಗಳು, ವ್ಯಕ್ತಿಸಂಗತಿ, ಸಾಹಿತ್ಯಚಿಂತಕರು, ಬದುಕು ಬೆಳದಿಂಗಳು, ಸಪ್ತಾಹ, ದಶಕ, ನವಮಿ- ಇತ್ಯಾದಿ. ಣ್ಯವ್ಯಕ್ತಿಗಳ ವಿಚಾರ, ಮಾತು, ಹೇಳಿಕೆ, ಸೂಕ್ತಿಗಳ- ಸಂಗ್ರಹಗಳು: ಬುದ್ಧ, ಮಹಾವೀರ, ವಿವೇಕಾನಂದ, ಗಾಂಧೀಜಿ, ಕುವೆಂಪು, ಸಂತರುಗಳ ಸೂಕ್ತಿಗಳ ಪ್ರತ್ಯೇಕ ಪುಸ್ತಕಗಳು; ವಾಕ್ಯ-ಮಾಣಿಕ್ಯ, ಸೂಕ್ತ ಪ್ರಭೆ, ಇದು ಭಾರತ, ಇದು ಕರ್ನಾಟಕ, ನಮ್ಮ ನಾಡು; ನಮ್ಮ ನುಡಿ, ಬೆಳಕಿನದಾರಿ- ಮುಂತಾದವು.
ವಿಚಾರ ವಿಮರ್ಶೆ: ಸಾಹಿತ್ಯ ಸಪ್ತಾಹ, ಸಮುಚ್ಚಯ, ಸಾಹಿತ್ಯಸಮೂಹಿತ, ವಚನಕಾರರ ವಿಚಾರ, ಅವರವರ ಲೋಕ, ಆಯ್ದ ಹತ್ತು ಲೇಖನಗಳು, ಸಂಕೀರ್ಣ ಲೇಖನಗಳು- ಇತ್ಯಾದಿ.
ಸಂಪಾದಿತ ಗ್ರಂಥಗಳು: ಕುವೆಂಪು ಸಾಹಿತ್ಯ ಕುರಿತ ಆರು ಗ್ರಂಥಗಳು; ಪುತಿನ, ಗೋಕಾಕ, ತರಾಸು, ಗೊರೂರು, ಕೈಲಾಸಮ್ ಮತ್ತು ಬೇಂದ್ರೆ ಸಾಹಿತ್ಯ ಕುರಿತು ಸಮೀಕ್ಷಾ ಗ್ರಂಥಗಳು; ಕವಿಗಳು ಕಂಡ ಕರ್ಣಾಟಕ, ವಚನವಾಹಿನಿ- ಮುಂತಾದವು.
ಚಿಕ್ಕವಾದರೂ ಬಹು ಉಪಯುಕ್ತವಾಗಿರುವ, ಸರಳ ಮತ್ತು ಸ್ಪಷ್ಟವಾಗಿ ಅಂಕಿ ಅಂಶಗಳೊಂದಿಗೆ ಸಾಕಷ್ಟು ವಿವರಗಳನ್ನು ಒದಗಿಸುವ ಶ್ರೀ ಚನ್ನಪ್ಪನವರ ಕೃತಿಗಳನ್ನು ಕುರಿತು ಓದುಗರು ಮುಕ್ತಕಂಠದಿಂದ ಪ್ರಶಂಸಿದ್ದಾರೆ. ಅವುಗಳಲ್ಲಿ ಕೆಲವು ಹೀಗಿವೆ:
"ಚಿನ್ನದ ತಟ್ಟೆಯಲ್ಲಿರುವ ಕಥೆಗಳು ಮಕ್ಕಳಿಗೆ ಬೋಧಪ್ರದವಾಗುವುವು. ಕಥೆಗಳಲ್ಲಿ ಇರುವ ನೀತಿ ಬೆಳೆಯುವ ಚೇತನಗಳಿಗೆ ಬೆಳಕನ್ನು ನೀಡುವಂಥದು. ನೀತಿ, ಜಾಣ್ಮೆಗಳೇ ಪ್ರಧಾನವಾಗಿರುವ ಕಥೆಗಳು ಮಕ್ಕಳನ್ನು ರಂಜಿಸಬಲ್ಲವು. ಕಥೆಗಳ ಸರಳ ಭಾಷೆ, ನಿರೂಪಣೆ ಹಾಗೂ ಮಕ್ಕಳ ಮನಸ್ಸಿಗೆ ಮುಟ್ಟುವಂತಿದೆ; ಕುತೂಹಲ ಕೆರಳಿಸುವ ಕಥೆಗಳ ವಸ್ತು ಮಕ್ಕಳಿಗೆ ಪ್ರಿಯವಾಗುತ್ತವೆ."
"ಮಿಂಚಿದ ಮಹಿಳೆಯರ ಚರಿತ್ರೆಗಳನ್ನು ಮನಮುಟ್ಟುವಂತೆ ಸ್ವಾರಸ್ಯಕರವಾಗಿ ತಿಳಿಯಾದ ಶೈಲಿಯಲ್ಲಿ ಬರೆದಿದ್ದಾರೆ. ತಿಳಿನುಡಿಯಲ್ಲಿ ಓದುಬಲ್ಲ ಮಕ್ಕಳಿಗೆ ಸೊಗಸಾಗಿ ಚಿತ್ರಿಸಿದ್ದಾರೆ. ಮಕ್ಕಳಿಗೆ ಉಪಯುಕ್ತವೂ, ಶಕ್ತಿದಾಯಕವೂ ಆಗಿದೆ."
"ಚೇತೋಹಾರಿ ಸುಲಭ ಶೈಲಿಯಲ್ಲಿ ಕುವೆಂಪು ಅವರ ಉನ್ನತ ವ್ಯಕ್ತಿತ್ವ ಚಿತ್ರಿತವಾಗಿದೆ. ಮಕ್ಕಳೂ ದೊಡ್ಡವರೂ ಓದಿ ಸಂತೋಷವನ್ನೂ ಅಭಿಮಾನವನ್ನೂ ಪಡುವ ಸೊಗಸಾದ ಪುಸ್ತಕ."
ಬೆಂಗಳೂರು ದೇವನಹಳ್ಳಿಯ ಆವತಿಯಲ್ಲಿ ಹುಟ್ಟಿದ (ಜನನ ೧೯೪೩) ಎಸ್. ಚನ್ನಪ್ಪನವರು ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಭಾಷೆ (ಸಾಹಿತ್ಯ)ದಲ್ಲಿ ಎಂ.ಎ. (೧೯೭೪), ಭಾರತೀಯ ಸಾಹಿತ್ಯ ಸ್ನಾತಕೋತ್ತರ ಡಿಪ್ಲೊಮೋ (೧೯೭೬) ಪದವಿಗಳನ್ನು ಗಳಿಸಿದ್ದಾರೆ. ‘ಕುವೆಂಪು ಕಥೆ’ (೧೯೭೧) ಮತ್ತು ‘ನೆಹರೂಜಿ ಕಥೆಗಳು’ (೧೯೮೧) ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ, ‘ಪಂಜೆ ಮಂಗೇಶರಾವ್’ ಅತ್ಯುತ್ತಮ ಮಕ್ಕಳ ಸಾಹಿತ್ಯ ಕೃತಿ ಎಂದು ಕರ್ನಾಟಕ ರಾಜ್ಯ ಶೈಕ್ಷಣಿಕ ಮತ್ತು ಸಂಶೋಧನಾ ನಿರ್ದೇಶನಾಲಯದಿಂದ ಮನ್ನಣೆ ಸಂದಿದೆ.
ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿತರಾದ ಶ್ರೀ ಎಸ್. ಚನ್ನಪ್ಪನವರ ‘ಕುವೆಂಪು ಕಥೆ’ ತೆಲುಗು ಭಾಷೆಯಲ್ಲಿ ‘ಪುಟ್ಟಪ್ಪ ಕಥೆ’ ಹೆಸರಿನಲ್ಲಿ ಆಂಧ್ರಪ್ರದೇಶ ಸಾಹಿತ್ಯ ಅಕಾಡೆಮಿಯಿಂದ ಅನುವಾದಿತವಾಗಿದೆ. ಶ್ರೀ ಎಸ್. ಚನ್ನಪ್ಪನವರ ಬಗ್ಗೆಯೇ ‘ವ್ಯಕ್ತಿ ಸಾಹಿತ್ಯ’ (೧೯೮೪), ‘ಸಾಹಿತ್ಯ ಸಂಪದ’ (೨೦೦೩), ಅಭಿಮಾನಿಗಳಿಂದ ರಚಿತವಾಗಿದೆ.
ಸಜ್ಜನರು ಸ್ನೇಹಜೀವಿಗಳು ನಿಗರ್ವಿಗಳು ಆದ, ಸೌಜನ್ಯ ತುಂಬಿದ, ಸಹೃದಯಿ ಚನ್ನಪ್ಪನವರ ಲೇಖಣಿಯಿಂದ ಇನ್ನೂ ಇಂಥ ಹಲವಾರು ಪುಸ್ತಕರತ್ನಗಳು ಹೊರಬಂದು ಮಕ್ಕಳ ಕನ್ನಡ ಸಾಹಿತ್ಯ ಕ್ಷೇತ್ರ ನಿತ್ಯ ಹಸಿರಾಗಿರಲೆಂದು ಆಶಿಸುತ್ತೇನೆ.