ಅಮೆರಿಕನ್ನಡ
Amerikannada
ಉಪ್ಪೇರಿಯ ಸವಿ
-ಜಯಂತಿ ಅಮೃತೇಶ್, ಮೈಸೂರು*
ಜೀವನದ ಬಾಳ ತೋಟದಲ್ಲಿ ಕುಳಿತು ಬದುಕಿನ ಸಂಧ್ಯೆಯ ಸವಿಯನ್ನು ಸವಿಯುತ್ತಾ ಹಿಂತಿರುಗಿ ನೋಟವನ್ನು ಹರಿಸಿದಾಗ ಆಗುವ ಆ ನೆನಪಿನ ಸರಮಾಲೆಗಳ ಸ್ವಾರಸ್ಯ ಅದೆಷ್ಟು ಆಹ್ಲಾದಕರ ಮತ್ತು ಹಿತಕರ!! ಈ ನೆನಪಿನ ಮೆರವಣಿಗೆಯಲ್ಲಿ ಸಿಹಿ-ಕಹಿ, ಸೋಲು-ಗೆಲುವು, ನಡೆಸಿದ ಹೋರಾಟಗಳು, ಸಾಧಿಸಿದ ಸಾಧನೆಗಳು ಎಲ್ಲದರ ಸಮ್ಮಿಳನ ಸಿಗುತ್ತದೆ. ಎಷ್ಟೋ ಅಹಿತಕರ, ದುಃಖಪೂರಿತ ಘಟನೆಗಳೂ ಇರುತ್ತವೆ. ಜೀವನವೇ ಬೇವು ಮತ್ತು ಬೆಲ್ಲವಲ್ಲವೇ? ನೆನಪಿನ ಸಿಹಿಯನ್ನು ಚಪ್ಪರಿಸಿದಾಗ ಆಗಾಗ್ಗೆ ನಡೆದ ಅನೇಕ ಆಹ್ಲಾದಕರ ಸ್ವಾರಸ್ಯಕರ ಘಟನೆಗಳು ನಮ್ಮ ಕಣ್ಣಮುಂದೆ ನಲಿದಾಡುತ್ತವೆ. ೧೯೬೪ ನೆಯ ಇಸವಿಯಲ್ಲಿ ಮದುವೆಯಾಗಿ ಹೊಸಪೇಟೆಯಿಂದ ಮುಂಬೈಗೆ ಸಂಸಾರ ಹೂಡಲು ಹೊರಟಿದ್ದು. ನನಗೆ ಮೊದಲಿನಿಂದಲೂ ಚಲನಚಿತ್ರಗಳನ್ನು ನೋಡುವ ಆಸೆ. ನಾಲ್ಕೈದು ಭಾಷೆಗಳನ್ನು ಕಲಿತಿದ್ದೆನಾದ್ದರಿಂದ ಎಲ್ಲ ಭಾಷೆಗಳ ಚಿತ್ರಗಳ ಮೇಲೂ ವ್ಯಾಮೋಹವೇ. ಹಿಂದಿ ನನ್ನ ನೆಚ್ಚಿನ ಬಾಷೆಗಳಲ್ಲಿ ಒಂದು. ಮುಂಬೈಯಲ್ಲಿ ನೆಲೆಸಿದ ಮೇಲೆ ಹೊಸ ಹೊಸ ಹಿಂದಿ ಚಿತ್ರಗಳನ್ನು “ಮೊದಲು” ವೀಕ್ಷಿಸಿ ಅವುಗಳ ಬಗ್ಗೆ ನನ್ನ ಅಪಾರ ಗೆಳತಿಯರ ವೃಂದಕ್ಕೆ ಬರೆದು ತಿಳಿಸಬೇಕೆಂಬ ನನ್ನ ಹರೆಯದ ಹಂಬಲ. ನನ್ನ ಪತಿದೇವರಿಗೆ ಸಿನಿಮ ಎಂದರೆ ಅಷ್ಟಕ್ಕಷ್ಟೆ; ಅದರಲ್ಲೂ ಹಿಂದಿ ಸಿನಿಮ ಎಂದರೆ ಮೂಗು ಮುರಿಯುತ್ತಿದ್ದರು. ಅವರು ಆಂಗ್ಲ ಭಾಷೆಯ ಚಿತ್ರಗಳ ಪರಮಭಕ್ತರಾಗಿದ್ದರು. ಅವರನ್ನು ಖುಷಿಪಡಿಸಲು ಆಂಗ್ಲಭಾಷಾ ಚಿತ್ರಗಳಿಗೆ ನಮ್ಮ ಮೆರವಣಿಗೆ ಹೊರಟಿದ್ದೂ ನಿಜವೇ. ನನಗೆ ಅರ್ಥವಾಗದ ಆ ಸಿನಿಮಾಗಳನ್ನು ನಾನು ನೋಡುತ್ತಿದ್ದುದೂ ನಿಜವೇ.
ಹಾಗೂ ಹೀಗೂ ಇವರನ್ನು ಒಪ್ಪಿಸಿ, ನನ್ನ ಮೊತ್ತ ಮೊದಲನೆಯ ಹಿಂದಿ ಚಿತ್ರ ವೀಕ್ಷಣೆಗೆ ಹತ್ತಿರದ ಒಂದು ಚಿತ್ರಮಂದಿರವನ್ನು ಆರಿಸಿಕೊಂಡೆವು. ನನ್ನವರು ಇಷ್ಟವಿಲ್ಲದೇ ಹೊರಟರು ಎಂಬುದಂತೂ ನಿಜ. ಅದೊಂದು ದೀರ್ಘವಾದ ಹಿಂದಿ ಚಿತ್ರ. ಚಿತ್ರಮಂದಿರದಲ್ಲಿ ಬಗೆ ಬಗೆಯ ತಿಂಡಿಯ ಪೊಟ್ಟಣಗಳನ್ನೂ ವಿಧ ವಿಧವಾದ ಪಾನೀಯಗಳನ್ನೂ ವಿಕ್ರಯಕ್ಕೆ ಇಟ್ಟಿದ್ದರು. ಸಿನಿಮದ ಮಧ್ಯದ ವಿರಾಮದ ಕಾಲದಲ್ಲಿ ಎಲ್ಲರೂ ಹೋಗಿ ತಿಂಡಿಯ ಪೊಟ್ಟಣಗಳನ್ನು ತರುತ್ತಿದ್ದುದನ್ನು ನೋಡುತ್ತಿದ್ದೆ. ನನಗೂ ಆಸೆ ಆಯಿತು. ಆ ಬಿಳಿ ಜಲ್ಲಿ ಕಾಗದದ ಪೊಟ್ಟಣದ ಉಪ್ಪೇರಿಯ ಸವಿ ಹೇಗಿರ ಬಹುದು? ಅದನ್ನು ಮೆಲ್ಲುತ್ತಾ ಚಿತ್ರ ವೀಕ್ಷಿಸಬೇಕೆನ್ನುವ ಮಹದಾಸೆ ಈಗ ನನ್ನದಾಯಿತು. ಇದನ್ನು ತಿಳಿಸಿದ ತಕ್ಷಣ ಇವರು ಹೌಹಾರಿದರು. “ಏನು ನಿನಗೆ ‘ವೇಫರ‍್ಸ್’ (ಆ ಉಪ್ಪೇರಿಯ ಹೆಸರು) ತಿನ್ನಬೇಕೆ? ಖಂಡಿತಾ ಅದಾಗದು. ಆ ಪೊಟ್ಟಣ ತಂದು ಅದನ್ನು ಬಿಡಿಸುವಾಗ ಆಗುವ ‘ಪರ ಪರ’ ಶಬ್ದವನ್ನು ನಾನು ಸಹಿಸಲಾರೆ. ನೀನು ಅದನ್ನು ಮೆಲ್ಲುವಾಗ ‘ಕರಂ ಕುರುಂ’ ಎಂಬ ಶಬ್ದ ಹೊರಡುತ್ತದೆ, ಕಾಗಕ್ಕ ಗುಬ್ಬಕ್ಕನ ಕಥೆಯ ತರಹ. ಅದೆಲ್ಲ ನನಗೆ ಹಿಡಿಸುವುದಿಲ್ಲ. ಪಕ್ಕದವರು ಏನೆಂದುಕೊಂಡಾರು? ಬೇಡವೇ ಬೇಡ.” ಎಂದುಬಿಟ್ಟರು. ನನಗೆ ಅಳುವೇ ಬಂದಿತ್ತು. ಕೋಪವೂ ಸಹ; ಇದು ಅಸಹಾಯಕತೆಯ ಕೋಪ. ಅಕ್ಕ ಪಕ್ಕದಲ್ಲಿದ್ದವರೆಲ್ಲಾ ಏನೇನೋ ತಿನ್ನುತ್ತಿದ್ದುದನ್ನು ನೋಡುತ್ತಾ ನನ್ನ ದುಃಖವನ್ನು ಹೇಗೋ ಹತ್ತಿಕ್ಕಿಕೊಳ್ಳಲು ಪ್ರಯತ್ನಿಸಿದೆ.
ಕಾಲ ಕಳೆದಂತೆ ಮುಂಬೈ ಜೀವನಕ್ಕೆ ಒಗ್ಗಿಕೊಂಡೆ. ನಾನೂ ಅಲ್ಲಿಯವರಲ್ಲೊಬ್ಬಳಾದೆ. ಆಗ ನನಗೆ ಧೈರ್ಯ ಬಂದಿತು; ನನ್ನಾಸೆ ಪೂರೈಸಿತು. ಕೈಗೆ ವ್ಯಾನಿಟಿ ಬ್ಯಾಗ್ ಬಂದಿತ್ತು; ಅದರಲ್ಲಿ ಹಣವೂ ಇರುತ್ತಿತ್ತು ಎಂದು ಬೇರೇ ಹೇಳಬೇಕಿಲ್ಲ. ನಾನೇ ಹೋಗಿ ಅದೇ ಬಿಳಿಯ ಜಲ್ಲಿಕಾಗದದ ಪೊಟ್ಟಣದಲ್ಲಿರುತ್ತಿದ್ದ ‘ವೇಫರ‍್ಸ್’ ಕೊಂಡು ತರುತ್ತಿದ್ದೆ. ಕೆಲವು ಸಲ ಸಮೋಸವೂ ಸಹ! ಆ ವೇಳೆಗೆ ಇವರೂ ಸಹ ನನ್ನ ಆಸೆ ಆಕಾಂಕ್ಷೆಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ತನಗೆ ಬೇಡವಾಗಿದ್ದರೂ ನನಗೆ ಕಂಪೆನಿ ಕೊಡಲೋಸುಗ, ಆದಷ್ಟು ಶಬ್ದ ಬರಿಸದೇ ಉಪ್ಪೇರಿಯನ್ನು ಮೆಲ್ಲುತ್ತಿದ್ದರು!
*-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com