ಅಮೆರಿಕನ್ನಡ
Amerikannada
ಮಕ್ಕಳ ಗೆಳೆಯ ರಿಕ್ಕೀ. . . ರಿಕ್ಕಿಯ ಅಮ್ಮ ಸುಮಾ . . .
-ಭವಾನಿ ಲೋಕೇಶ್, ಮಂಡ್ಯ
ಅಲ್ಲಿ ಚಿಕ್ಕ ಚಿಕ್ಕ ಮಕ್ಕಳದ್ದೊಂದು ದೊಡ್ಡ ಕಲರವ. ಎದುರಿಗಿದ್ದ ಅಷ್ಟೂ ಮಕ್ಕಳು ತುಂಟ ರಿಕ್ಕಿ ಕೇಳುತ್ತಿದ್ದ ಸಿಂಪಲ್ ಸಿಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡುತ್ತಾ ಲಕ್ಕೀ ರಿಕ್ಕಿಗೊಂದಷ್ಟು ಸಿಕ್ಕ ಸಿಕ್ಕ ವಿಷಯಗಳ ಬಗ್ಗೆ ಮಾತನಾಡಿಸುತ್ತಾ ನಕ್ಕು ನಗಿಸುತ್ತಿದ್ದವು. “ನೀನ್ಯಾಕೆ ಕುಳ್ಳಗಿದ್ದೀಯಾ?” ನೀನು ಸ್ಕೂಲಿಗೆ ಹೋಗಲ್ವಾ?, ಏನು ಊಟ ಮಾಡ್ತಿಯಾ? ಎಷ್ಟೊತ್ತು ನಿದ್ರೆ ಮಾಡ್ತಿಯಾ? ಒಂದಾ. . ಎರಡಾ. . . ಆ ಮಕ್ಕಳು ಕೇಳುತ್ತಿದ್ದ ಪ್ರಶ್ನೆಗಳಿಗೆಲ್ಲಾ ತನ್ನ ತಲೆಯನ್ನು ಅತ್ತಿಂದಿತ್ತ ತಿರುಗಿಸುತ್ತಾ, ಆಶ್ಚರ್ಯವಾಗೊಮ್ಮೆ, ಖುಷಿಯಲ್ಲಿ ಒಮ್ಮೆ ತುಂಟ ಉತ್ತರಗಳನ್ನೇ ಹೇಳುತ್ತಿದ್ದ ರಿಕ್ಕಿ . ಎಷ್ಟೇ ಆದರೂ ಅವನಮ್ಮನಿಗೆ ಅವನು ತರ‍್ಲೆ ರಿಕ್ಕಿಯೇ ಅಲ್ಲವೇ? ಅಂದ ಹಾಗೆ ಸುಮಾ ರಿಕ್ಕಿಯ ಅಮ್ಮ! ಆತನ ಜೀವದ ಜೀವ. ಅವನು ನಗಲಿಕ್ಕೆ, ನೆಗೆಯಲಿಕ್ಕೆ, ಮಾತಾಡಲಿಕ್ಕೆ, ಓಡಾಡಲಿಕ್ಕೆ ಎಲ್ಲದಕ್ಕೂ ಅವನಮ್ಮ ಬೇಕೇಬೇಕು. ಹ್ಞಾ! ಹೆಚ್ಚು ಕಥೆ ಎಳೆಯೋದು ಬೇಡ ಅನ್ಸುತ್ತೆ. ಅದು ಮೆಗಾ ಸೀರಿಯಲ್ ಆಗ್ಬಿಟ್ರೆ ಕಷ್ಟ. ನಾನಿಷ್ಟೂ ಹೊತ್ತು ಹೇಳ್ತಿದ್ದದ್ದು ಮೈಸೂರಿನ ಪ್ರಪ್ರಥಮ ಮಾತನಾಡುವ ಗೊಂಬೆ ಮಹಿಳಾ ಕಲಾವಿದೆಸುಮಾ ರಾಜಕುಮಾರ್ ಬಗ್ಗೆ. ಹೆಚ್ಚೂ ಕಡಿಮೆ ಕಳೆದ ಎರಡೂವರೆ ವರ್ಷಗಳಿಂದ ರಿಕ್ಕಿಯನ್ನು ಜೊತೆಯಲ್ಲಿ ಹೊತ್ತು ಊರೂರು ನೋಡಿ ಬಂದಿರುವ ಸುಮಾಗೆ ರಿಕ್ಕಿ ಸಿಕ್ಕಿದ್ದು ಆಕಸ್ಮಿಕವೇ.
ಮದುವೆಯಾಗಿ ಹಲವು ವರ್ಷಗಳ ಕಾಲ ಸದ್ಗೃಹಿಣಿಯಾಗಿ ಮನೆವಾರ್ತೆ ನೋಡಿಕೊಂಡು ಅತ್ತೆ, ಮಾವ, ಗಮಡ, ಮಕ್ಕಳು ಅಂತ ಸುಧಾರಿಸುತ್ತಿದ್ದ ಸುಮಾ ತಮ್ಮೊಳಗಿದ್ದ ಪ್ರತಿಭೆಯನ್ನು ಹೊರತೆಗೆಯಲಿಕ್ಕೆ ಅಷ್ಟು ವರ್ಷ ಕಾಯಲೇಬೇಕಾಯಿತು. ಗುರುಗಳಾದ ಜಾದೂಗಾರ್ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ರಿಕ್ಕಿಯನ್ನು ಹೆಗಲೇರಿಸಿಕೊಂಡ ಸುಮಾ ರಾಜಕುಮಾರ್ ಒಂದೊಂದೇ ಹೆಜ್ಜೆ ಇಟ್ಟು ಸಾಧನೆಯ ಹಾದಿಯಲ್ಲಿ ಇವತ್ತು ಅನೇಕ ಗಣ್ಯರ , ಸಂಘಸಂಸ್ಥೆಗಳ ಊರ ಜನರ ಪುಟ್ಟ ಮಕ್ಕಳ, ಅಭಿಮಾನಿಗಳ ಮನೆ ಮನ ಗೆದ್ದಿದ್ದಾರೆ. ಹೆಮ್ಮೆ ಪಡುವ ವಿಷಯವೆಂದರೆ ಭಾರತದ ಏಕೈಕ ಮಾತನಾಡುವ ಗೊಂಬೆ ಕಲಾವಿದೆ ಅನ್ನಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಕುಮಾರಿ ಇಂದುಶ್ರೀಯವರ ನಂತರದ ಭಾರತದ ೨ ನೇ ಕಲಾವಿದೆ ನಮ್ಮ ಮೈಸೂರಿನ ಹೆಣ್ಣುಮಗಳು ಸುಮಾ ರಾಜಕುಮಾರ್ ಅನ್ನುವುದು. ಮದುವೆ, ಮಕ್ಕಳು ಅಂತೊಂದಾದ ಮೇಲೆ ಟಿ.ವಿ., ಸೀರಿಯಲ್ಲು, ಹರಟೆ, ಶಾಪಿಂಗು, ಸವಿರುಚಿ ಅನ್ನುತ್ತ ಸಂಸಾರದ ತಾಪತ್ರಯಗಳ ನಡುವೆಯೇ ಕಳೆದುಹೋಗುವ ಸಹಸ್ರಾರು ಹೆಣ್ಣುಮಕ್ಕಳಿಗೆ ನಮ್ಮ ಸುಮಾ ಮಾದರಿಯಾಗಿ ನಿಲ್ಲುತ್ತಾರೆ. ಹಾಗಂದ ಮಾತ್ರಕ್ಕೆ ಸುಮಾ ಎಲ್ಲವನ್ನೂ ಬಿಟ್ಟು ತಮ್ಮ ಪ್ರತಿಭೆಯನ್ನು ಮಾತ್ರ ಬೆಳಗಲಿಲ್ಲ. ಬದಲಾಗಿ ಎಲ್ಲದಕ್ಕೂ ಅಷ್ಟೂ ನ್ಯಾಯ ಒದಗಿಸುತ್ತಾ ಅವರನ್ನವರು ಇನ್ನಷ್ಟು ಒರೆಗೆ ಹಚ್ಚಿಕೊಳ್ಳುತ್ತಾ ಸಾಗುತ್ತಿದ್ದಾರೆ. ಹಲವಾರು ಬಹುಮಾನ, ಪ್ರಶಸ್ತಿ, ಸನ್ಮಾನಗಳನ್ನು ಪಡೆದಿರುವ ಸುಮಾ ತನ್ನ ಮಡಿಲಲ್ಲಿ ರಿಕ್ಕಿಯನ್ನು ಕೂರಿಸಿಕೊಂಡು ಅಭಿಮಾನಿಗಳ, ಪ್ರೇಕ್ಷಕರ, ಮಕ್ಕಳ ಮುಂದೆ ಗಂಟೆಗೂ ಹೆಚ್ಚು ಕಾಲ ಕಾರ್ಯಕ್ರಮವನ್ನು ನೀಡುವ ಸುಮಾ ಕೇವಲ ಮಾತನಾಡುವ ಗೊಂಬೆ ಕಲಾವಿದೆ ಮಾತ್ರವಲ್ಲ. ಆಕೆಯದ್ದು ಬಹುಮುಖ ಪ್ರತಿಭೆ. ಆದರೆ ರಿಕ್ಕಿಯ ಮುಂದೆ ಅವೆಲ್ಲವೂ ಸೈಡ್ಸ್ ಇದ್ದ ಹಾಗೆ ಅನ್ನುತ್ತಾರೆ ಸುಮಾ ರಾಜಕುಮಾರ್. ಶುಚಿರುಚಿಯಾಗಿ ಮಾಡುವ ಅಡುಗೆ ಸ್ಪರ್ಧೆಗಳಲ್ಲಿ, ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್‌ಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಸುಮಾ ನಯ ವಿನಯಗಳ ಗಣಿ, ಸರಳ ಸ್ನಿಗ್ಧ ಸುಂದರಿ. ಕಲ್ಲನ್ನೂ ಕೂಡ ಮಾತನಾಡಿಸುವಷ್ಟು ಕೌಶಲ್ಯ ಉಳ್ಳವರು. ಸಮಯಕ್ಕೆ ತಕ್ಕ ಹಾಗೆ ಮಾತುಗಳನ್ನು ಪೋಣಿಸುತ್ತಾ, ಹಾಸ್ಯದ ನವಿರುತನವನ್ನೂ ಸೇರಿಸುತ್ತಾ ರಿಕ್ಕಿಯೊಂದಿಗೆ ಸುಮಾ ಮಾತನಾಡುವುದನ್ನು ನೋಡುವುದೇ ಒಂದು ಚೆಂದ.
ಕಸ್ತೂರಿ ವಾಹಿನಿಯ ಕಾಮನಬಿಲ್ಲು ಹೆಸರಿನ ಬೆಳಗಿನ ಮಕ್ಕಳ ಕಾರ್ಯಕ್ರಮದಲ್ಲಿ ಹಲವು ಭಾನುವಾರ, ಭಾಗವಹಿಸಿರುವ ಸುಮಾ ಉದಯ ವಾಹಿನಿಯ ಮಾತಿನ ಮಂಟಪದಲ್ಲಿ ಮಾತಿನ ಚತುರೆಯಾಗಿ, ಕಸ್ತೂರಿಯ ಅದೃಷ್ಟ ಲಕ್ಷ್ಮಿ ಕಾರ್ಯಕ್ರಮದಲ್ಲಿ ೩೧ ಸಾವಿರ ಬಹುಮಾನ ಗೆದ್ದ ಅದೃಷ್ಟವಂತೆಯಾಗಿ ಕಾಣಿಸಿಕೊಂಡಿದ್ದಾರೆ. ಮೈಸೂರು ಆಕಾಶವಾಣಿ ಮಹಿಳಾ ರಂಗ, ಬಿಂಬ ಮುಂತಾದ ಕಾರ್ಯಕ್ರಮಗಳಲ್ಲಿ ಸುಮಾ ರವರನ್ನು ಈ ನಾಡಿಗೆ ಪರಿಚಯಿಸಿದೆ. ಜೊತೆಗೆ ೯೨.೭ ಎಫ್.ಎಂ, ೯೩.೫ ಎಫ್.ಎಂ. ಗಳಲ್ಲಿಯೂ ಸುಮಾ ಭಾಗವಹಿಸಿದ್ದಾರೆ.
ಮಾತನಾಡುವ ಗೊಂಬೆ ಅಷ್ಟೇ ಅಲ್ಲದೆ ಸುಮಾ ಜಾದೂ ಕೂಡಾ ಮಾಡುತ್ತಾರೆ, ನಿರೂಪಣೆಯಲ್ಲೂ ಮಿಂಚುತ್ತಾರೆ. ಜಾದೂ ಕ್ಷೇತ್ರದಲ್ಲಿ ಹೆಸರು ಮಾಡಿರುವ ಖ್ಯಾತಿ ಪಡೆದಿರುವ ಗಣ್ಯರಾದ ಶ್ರೀ ಉದಯ್ ಜಾದೂಗಾರ್‌ರವರು ಸುಮಾರವರ ಬಹುಮುಖ ಪ್ರತಿಭೆಗೆ ಮೆಚ್ಚುಗೆಯ ಮಾತುಗಳನ್ನಾಡಿ ಬೆನ್ತಟ್ಟಿದ್ದಾರೆ. ಅವರ ನುಡಿಗಳೇ ನನಗೆ ಆಶೀರ್ವಾದ ಅನ್ನುತ್ತಾರೆ ಸುಮಾ. ಜಾದೂಗಾರರಿಗೆ ಬೇಕಾಗಿರುವುದು ಮುಖ್ಯವಾಗಿ ಅದನ್ನು ಪ್ರೆಸೆಂಟ್ ಮಾಡುವ ಶೈಲಿ. ನಗುಮೊಗದೊಂದಿಗೆ ವೇದಿಕೆಗೆ ಇಳಿಯುವ ಸುಮಾ ತನ್ನ ಕೈಚಳಕದಿಂದ ಜಾದೂ ನೋಡಲು ಕುಳಿತ ಪ್ರೇಕ್ಷಕ ವರ್ಗವನ್ನು ಮೋಡಿ ಮಾಡಬಲ್ಲರು.
ಹವ್ಯಾಸಕ್ಕೆಂದೋ, ಆರೋಗ್ಯಕ್ಕೆಂದೋ ಕಲಿತ ಯೋಗವನ್ನೂ ಸುಮಾ ಕೈಬಿಟ್ಟಿಲ್ಲ. ತನ್ನ ಮನೆಯಲ್ಲಿಯೇ ಯೋಗಾಸನದ ತರಗತಿಗಳನ್ನು ನಡೆಸುವ ಸುಮಾ ಯೋಗ ಗುರುವಾಗಿ ಕಲಿಯಲು ಬಂದವರಿಗೆ ದಾರಿತೋರುತ್ತಾರೆ.
ಎಲ್ಲ ಪ್ರತಿಭೆಯೂ ಪ್ರಕಾಶಿಸಬೇಕಾದರೆ ಅದನ್ನು ಪ್ರೋತ್ಸಾಹಿಸುವವರು ಬೇಕೆಬೇಕು. ಅದು ಕುಟುಂಬದಿಂದಲೇ ಸಿಕ್ಕರೆ ಅದಕ್ಕಿಂತ ಅದೃಷ್ಟ ಇನ್ನೊಂದಿಲ್ಲ. ಪತಿ ರಾಜಕುಮಾರ್ ಸುಮಾರವರ ಪ್ರತಿಯೊಂದು ಕೆಲಸದಲ್ಲೂ ಬೆಂಗಾವಲಾಗಿ, ಸ್ಫೂರ್ತಿ ನೀಡುತ್ತ ನಿಂತಿದ್ದಾರೆ. ಕುಟುಂಬದ ಎರಡು ಕಣ್ಣುಗಳಂತಿರುವ ಸುನಿಲ್ ಮತ್ತು ಸುರಭಿ ಅಮ್ಮನೊಂದಿಗೆ ವೇದಿಕೆಯಲ್ಲೂ ಸಹಕಾರ ನೀಡುತ್ತಾರೆ. ಅದರೊಂದಿಗೆ ತನ್ನ ಹೆತ್ತವರು, ನೆಂಟರಿಷ್ಟರು, ಅಭಿಮಾನಿಗಳು ರಿಕ್ಕಿಯೊಂದಿಗಿನ ಈ ಬದುಕಿನ ಹಾದಿಯಲ್ಲಿ ಸಿಕ್ಕಿರುವ ನೂರಾರು ಸ್ನೇಹಿತರು, ಹಿತೈಷಿಗಳು, ಆಪ್ರನ್ನೂ ಸುಮಾ ಪ್ರೀತಿಯಿಂದ ಮೆಚ್ಚುಗೆಯಿಂದ ನೆನೆಯುತ್ತಾ, ಭಾವುಕರಾಗುತ್ತಾರೆ. ಸ್ನೇಹವರ್ಗದ ಬೆನ್ತಟ್ಟುವಿಕೆಯೇ ನನ್ನೆಲ್ಲ ಕೆಲಸಗಳಿಗೂ ಸ್ಫೂರ್ತಿ ಅನ್ನುವುದನ್ನು ಹೇಳಲು ಮರೆಯುವುದಿಲ್ಲ ಸುಮಾ ರಾಜಕುಮಾರ್.
ಉದ್ಯಾನ ನಗರಿ ಮೈಸೂರಿನಲ್ಲಿ ಅರಮನೆಯ ಪಕ್ಕದ ಲಕ್ಷ್ಮೀ ಥಿಯೇಟರ್‌ನ ಬಳಿಯಲ್ಲಿಯೇ ವಾಸಿಸುತ್ತಿರುವ ಸುಮಾ ರಾಜಕುಮಾರ್ ತಾನು ಒಪ್ಪಿಕೊಂಡಿರುವ ಅಪ್ಪಿಕೊಂಡಿರುವ ಎಲ್ಲ ಪ್ರಕಾರಗಳಲ್ಲೂ ಇನ್ನಷ್ಟು ಉನ್ನತಿಯನ್ನು ಸಾಧಿಸಲಿ ಅನ್ನುವುದೊಂದೇ ಹಾರೈಕೆ.