ಅಮೆರಿಕನ್ನಡ
Amerikannada
ಅಮ್ಮನ ಕೈ
ಸಂಧ್ಯಾ ರವೀಂದ್ರನಾಥ್, ಅಮೆರಿಕಾ
“ಆಯುಷ್ಯವಂತಳಾಗಿ, ಆರೋಗ್ಯವಂತಳಾಗಿ,
ವಿದ್ಯಾವಂತಳಾಗಿ, ಗುಣವಂತಳಾಗಿ,
ಪುಟ್ಟ ಗಂಡನ್ನ ಮದುವೆ ಮಾಡ್ಕೊಂಡು,
ಪಟ್ಟದ ಸೀರೆ ಉಟ್ಕೊಂಡು,
ಚಿನ್ನದಂತಹ ಮಕ್ಕಳನ್ನ ಪಡ್ಕೊಂಡು,
ಸುಖವಾಗಿರು” ಎಂದು
ಎಣ್ಣೆ ಒತ್ತಿ, ನೀರೆರೆದು, ಹರಸಿದ ಕೈ!


ನನ್ನ ಉದ್ದನೆಯ ಕೂದಲ ಬಾಚಿ,
ಸಿಕ್ಕು ಬಿಡಿಸಿ, ಜಡೆ ಹೆಣೆದು,
ಗಲ್ಲ ಹಿಡಿದು ಮುಖವನೆತ್ತಿ,
‘ಮುದಿಗಂಡ ಸಿಗದಿರಲಿ’ ಎನ್ನುತ್ತಾ
ಮುಂದಲೆಯ ಬಾಚಿ, ಹೂಮುಡಿಸಿದ ಕೈ!


‘ಹಾಳು ಕಣ್ಣು, ಹದ್ದಿನ ಕಣ್ಣು
ನಾಯಿ ಕಣ್ಣು, ನರಿ ಕಣ್ಣು,
ಆ ಕಣ್ಣು, ಈ ಕಣ್ಣು’ ಎಂದು
ಉಪ್ಪು ನೀವಳಿಸಿ, ದೃಷ್ಟಿ ತೆಗೆದು,
ಚಿಟಚಿಟನೆ ನೆಟ್ಟಿಗೆ ತೆಗೆದ ಕೈ!


ಬೆಳದಿಂಗಳ ರಾತ್ರಿಯಲ್ಲಿ,
ಅಂಗಳದ ತುಳಸಿಕಟ್ಟೆಯ ಬಳಿ,
ಹುಳಿ ಅನ್ನದ ಕೈ ತುತ್ತು ಹಾಕಿ,
ಮೊಸರನ್ನದ ಬಳಬಚ್ಚಿ ಭಾಗ್ಯವ
ನಲ್ಮೆಯಿಂದ ಉಣಿಸಿದ ಕೈ!


ನಾನು ತುಂಟಾಟ ಮಾಡಿದಾಗ,
ಹೇಳಿದ ಮಾತು ಕೇಳದೆ,
ಹಟ ಹಿಡಿದು ನಿಂತಾಗ,
ಮೆಲ್ಲನೆ ಎರಡೇಟು ಹೊಡೆದು,
ಸರಿದಾರಿ ತೋರಿದ ಕೈ!


ಎಂದಾದರೊಮ್ಮೆ ತಲೆನೋವು ತಾಳಲಾರದೆ,
ನನ್ನ ಮುಖ ಸಪ್ಪಗಾದಾಗ,
ಮೃದು ಮಾತನಾಡುತ್ತಾ,
ಅಮೃತಾಂಜನವ ಹಚ್ಚಿ,
ಹಿತವಾಗಿ ತಲೆಯೊತ್ತಿದ ಕೈ!


ತಾನೇ ಹೇಳಿಕೊಟ್ಟ ಹಾಡುಹಸೆಯ,
ನಾನು ಚೆನ್ನಾಗಿ ಹಾಡಿದಾಗ,
ಕಂಡೂ ಕಾಣದ ಹಾಗೆ,
ಹೆಮ್ಮೆಯ ನಗೆ ಬೀರಿ,
ಚಪ್ಪಾಳೆ ತಟ್ಟುತ್ತಾ ಉತ್ತೇಜಿಸಿದ ಕೈ!


ಇಂದಿಗೂ ಆ ಕೈಗಳ ಒಲುಮೆಯ
ಧಾರೆ ಹರಿಯುತ್ತಲೇ ಇದೆ...


‘ನಾನು ಮಾಡಿದ ಚಟ್ನಿಪುಡಿ, ಮೆಣಸಿನಪುಡಿ
ನಿನಗಿಷ್ಟ ಕಣೆ’ ಎಂದು,
ಊರಿಂದ ಹೊರಡುವಾಗ ಪುಡಿಗಳನ್ನು
ಮಾಡಿಕೊಡುವ ಕೈ!
ರಾತ್ರಾನುರಾತ್ರಿ ಕೋಡುಬಳೆ, ಚಕ್ಕುಲಿ ಕರಿದು,
ನನ್ನ ಸೂಟ್‌ಕೇಸೆಲ್ಲ ತುಂಬಿಸಿಡುವ ಕೈ!


ಜಗತ್ತಿನಲ್ಲಿ ನಾನೆಲ್ಲೇ ಇದ್ದರೂ,
ಅಮ್ಮನ ಈ ಕೈ,
ನನ್ನ ನೆತ್ತಿಯ ಮೇಲಿರುವ ತನಕ,
ವಿಜಯದ ಪತಾಕೆ ನನ್ನದೇ ಸೈ!


(ರಚನೆ: ದಿನಾಂಕ: ಮೇ ೨೦೦೦)