ಅಮೆರಿಕನ್ನಡ
Amerikannada
ತತ್ವ ಸಾಮ್ಯತೆ ಬಾಡಿಲೇರ್ ‘ಲಾ ಕರೆಸ್ಪಾಂಡೆನ್ಸ್’ ಭಾವಾನುವಾದ
ವಿಶ್ವ, ಸ್ಯಾನ್ ರಮೋನ್, ಕ್ಯಾಲಿಫೋರ್ನಿಯ.
ತತ್ವ ಸಾಮ್ಯತೆ ಪರಿಚಯ ಸಿನೆಸ್ತೇಸಿಯ (Synesthesia) ಒಂದು ವಿಧವಾದ ವ್ಯಾಧಿ. ಈ ವ್ಯಾಧಿ ಪೀಡಿತರಿಗೆ ಇಂದ್ರಿಯಗಳಿಂದ ಗ್ರಹಿಸುವ ನೋಟ, ಶಬ್ದ, ವಾಸನೆ ಇತ್ಯಾದಿ ತತ್ವಗಳು ಅದಲು ಬದಲಾಗುತ್ತವೆ. ಫ್ರಾನ್ಸ್ ದೇಶದ, ಹತ್ತೊಂಬತ್ತನೇ ಶತಮಾನದ ಪ್ರಖ್ಯಾತ ಕವಿ, ಚಾರ್ಲ್ಸ್ ಬಾಡಿಲೇರ್‌ರವರ ಕೃತಿ ’ಕರೆಸ್ಪಾಂಡೆನ್ಸ್’ ಸಿನೆಸ್ತೇಸಿಯದ ಬಗ್ಗೆ ಮೊದಲ ಕವನವೆಂದು ವಿಮರ್ಶಕರು ಹೇಳುತ್ತಾರೆ. ಮತ್ತೆ ಕೆಲವು ವಿಮರ್ಶಕರು, ಲೊಕದ ಸಮಸ್ತ ವಸ್ತುಗಳೂ ಜೀವಿಯ ಅತೀವ ಆನಂದಕ್ಕಾಗಿಯೇ ಇರುವುದು ಎನ್ನುವುದು ಚಾರ್ಲ್ಸ್ ಬಾಡಿಲೇರ್ ರವರ ಪದ್ಯದ ಹಾಗೂ ಜೀವನದ ತಾತ್ಪರ್ಯ ಎಂದು ಹೇಳುತ್ತಾರೆ.
ಮಹಾಯೋಗಿ ಶ್ರೀ ಕುಮಾರಸ್ವಾಮಿಯವರು (http://www.shivayoga.net) “ಸುಪ್ತಚೇತನ ರಂಗದಲ್ಲಿ ಕೇಳುವ ಶಬ್ದವು ಕಾಲ್ಪನಿಕ ಬಣ್ಣ, ಕಾಣುವ ಬಣ್ಣ ಅಗೋಚರವಾದ ಶಬ್ದ” ಎಂದು ಹೇಳುತ್ತಾರೆ. ಇಲ್ಲಿ ಕರೆಸ್ಪಾಂಡೆನ್ಸ್ ಪದ್ಯದ ಭಾವಾನುವಾದವನ್ನು ಪ್ರಯತ್ನಿಸಿದೆ. (ದ್ವಿತೀಯಾಕ್ಷರ ಮತ್ತು ಅಂತ್ಯ ಪ್ರಾಸ, ೨೦ ವರ್ಣ ನಾಲ್ಕು ಪಾದ, ೨೬ ವರ್ಣದ ಮೂರು ಪಾದ)
ನಿಸರ್ಗ ವನದಲಿ ಬಾಳಪಥದ ಸಜೀವ ಕೈಗಂಬಗಳು
ಕಸವಿಸಿ ನುಡಿಗಳಲಾಗೀಗ ಉಲಿವುವು ಬೆರಗುಗಳ
ನಸುಳುತಿರೆ ಜೀವಿಯೀ ಅಪಚರಿತ ಕುರುಹಿನ ಕಾಡೊಳು
ಅಸುವಿನಿಂಗಿತವರಿತಂತೆ ಬೀರುವವು ಕುಡಿನೋಟಗಳ ||

ನಿರಂತರ ಧ್ವನಿ ಅದರ ಮಾರ್ಧ್ವನಿಯ ಲಯಮಿಲನದಿ ನವ್ಯರಾಗವು ಹೂಡಿ
ಧರೆಯ ಭ್ರಮಣೆ ಬಾನಿನಳಿಯದಾ ಹಗಲೊಳು ಘನನಿಶೆಯ ಇರುಳ ತೋಡಿ
ಬೆರೆತು ಗಂಧ ರೂಪ ನಾದ ಒಂದನೊಂದು ವರ್ಧಿಸಿ ಏಕಸತ್ವವ ಸಾರಿವೆ ಕೂಡಿ ||

ಹಸಿರು ರಂಗಿನ ಹುಲ್ಲಹಸಲೆ ಹೊಸತನದ ಕಂಪ ಪೂಸಿ
ಶಿಶುವಿನ ಸ್ನಾಯುಕಾಂತಿ ಶಾಂತ ಶಿತಲತೆಯ ತಂಪ ಸೋಂಕಿಸಿ,
ರಸಿಕನ ಕೊಳಲುಲಿ ಹೆಜ್ಜೇನಿನ ಸವಿಯ ಸೊಂಪ ಸ್ರವಿಸಿ,
ವಿಷಯ ರಸಾಸ್ವಾದನಾ ಸಾಮ್ಯತೆಯ ಮೆರಸಿವೆ ಸಂಭ್ರಮಿಸಿ ||

ಶಿಲಾರಸ ಕಸ್ತೂರಿ ಹೇಮಗಂಧ ಸಾಂಬಾಣಿ ಜ್ವಲಿಸಿ ಸುರಭಿ ಪಸರಿಸುವಂತೆ
ಇಳೆಯನಂತ ದ್ರವ್ಯಕುಸುಮಗಳು ಮಸೆತು ಮನರತಿರಂಗದಲಿ ಕಲೆತು
ಮಿಲಿತು ತಣಿಸಿವೆ ನರರ ಭವದ ಋತಾನೃತ ತೃಷೆಗಳಾ ಬಾಳ ಪರ್ಯಂತ||