ಅಮೆರಿಕನ್ನಡ
Amerikannada
ಪ್ರತಿಭೆ ಮತ್ತು ಪ್ರಯತ್ನ
-ನಾಗಲಕ್ಷ್ಮೀ ಹರಿಹರೇಶ್ವರ
ಜಗತ್ತಿನಲ್ಲಿ ಎರಡು ಬಗೆಯ ಜನರಿದ್ದಾರೆ: ಏನನ್ನಾದರೂ ಸಾಧಿಸಿದವರು, ಏನನ್ನೂ ಸಾಧಿಸದೇ ಸುಮ್ಮನೇ ಇದ್ದು ಹೋದವರು. ಸಾಧನೆ ಮಾಡಿದವರ ವಿಚಾರ ಬಂದಾಗ, ಅವರ ಬಗ್ಗೆ ನಮಗೆ ಥಟ್ಟನೆ ಹೊಳೆಯುವ ಲಕ್ಷಣವೆಂದರೆ- ಪ್ರತಿಭೆ ಮತ್ತು ಪ್ರಯತ್ನ.
‘ಪ್ರತಿಭೆ ನವ-ನವೋನ್ಮೇಷಶಾಲಿನೀ’ ಎಂಬ ಮಾತನ್ನ ಬಲ್ಲವರು ಹೇಳುತ್ತಾರೆ. ಹೊಸ ಹೊಸದನ್ನು ಅವಿರತವಾಗಿ, ನಿರಂತರವಾಗಿ ಉಂಟುಮಾಡುವ ಗುಣ ಈ ಪ್ರತಿಭೆಯದು. ಕಲೆಯಾಗಲೀ, ಸಾಹಿತ್ಯವಾಗಲೀ, ವಿಜ್ಞಾನವಾಗಲಿ ಅದರಲ್ಲಿ ತೊಡಗಿರುವ ಒಬ್ಬ ವ್ಯಕ್ತಿ ಅಸಮಾನ್ಯವಾದ ಲಕ್ಷಣಗಳನ್ನು ತೋರುತ್ತಾರೆ ಎನ್ನಿ; ಆಗ, ಅವನಲ್ಲಿ ಅಥವಾ ಅವಳಲ್ಲಿ ಪ್ರತಿಭೆ ಮನೆಮಾಡಿದೆ ಎನ್ನುತ್ತೇವೆ. ಹಾಗೆ ನೋಡಿದರೆ, ಎಲ್ಲರಲ್ಲೂ ಒಂದಲ್ಲ ಒಂದು ತರಹಾ ಪ್ರತಿಭೆ ಇದ್ದೇ ಇರುತ್ತದೆ; ಹಲವರಲ್ಲಿ ಕಡಿಮೆ ಪ್ರಮಾಣದಲ್ಲಿ, ಕೆಲವರಲ್ಲಿ ಮಾತ್ರ ಹೆಚ್ಚು ಪ್ರಮಾಣದಲ್ಲಿ ಹುದುಗಿರಬಹುದು. ಮುಸುಕು ಕಳಚಿ, ಮೂಲೆಯಲ್ಲಿರುವ ವೀಣೆ ನುಡಿಯತೊಡಗಿ, ಅಡಗಿದ ಈ ಪ್ರತಿಭೆಯ ನಾದತರಂಗಗಳು ಹರಡತೊಡಗಿದಾಗ ಗೊತ್ತಾಗುತ್ತೆ- ರಾಗ ಯಾವುದು ಅಂತ!
ಕೆಲವರಿಗೆ ತಮ್ಮಲ್ಲಿ ಪ್ರತಿಭೆ ಇದೆ- ಎಂಬುದೇ ತಿಳಿದಿರುವುದಿಲ್ಲ. “ತನ್ನ ಮರೆಯ ಕಂಪನ್ನು ಅರಿಯದೆ, ಅದನೆ ಹೊರಗೆ ಹುಡುಕುವ ಮೃಗದ ಸೇಡು” ಅವರ ಪಾಡು! ಗೊತ್ತಿದ್ದರೂ ಅವರದು ಸಂಕೋಚ-ಸ್ವಭಾವ. ಕಾಲಕೂಡಿಬಂದಾಗ, ಯಾರೋ ಒಬ್ಬ ಪುಣ್ಯಾತ್ಮ ಇವರ ಪ್ರತಿಭೆಯನ್ನು ಗುರುತಿಸುತ್ತಾನೆ; ಅಸಾಧ್ಯ ಕೆಲಸಗಳನ್ನು ಇವರಿಂದ ಮಾಡಿಸಿ, ಮಾನವಜನಾಂಗಕ್ಕೆ ಮಹದುಪಕಾರ ಮಾಡುತ್ತಾನೆ. ಚರಿತ್ರೆಯಲ್ಲಿ ಇದಕ್ಕೆ ನಿದರ್ಶನಗಳು ಒಂದೇ ಎರಡೇ? ಹಲವಾರು.
ಕೆಲವು ಪ್ರತಿಭಾವಂತರಿಗೆ ಸಾಧನಗಳೇ ಬೇಕಿರುವುದಿಲ್ಲ; ಪೂರಕ ಸಹಾಯಕ ಸಾಮಗ್ರಿಗಳ ಅವಶ್ಯಕತೆಯೇ ಇರುವುದಿಲ್ಲ. ಅವರ ಅಂತಃಸತ್ವವೇ ಅವರ ಹೆಚ್ಚುಗಾರಿಕೆ. ಜೊತೆಯ ಪರಿಕರಗಳೆಲ್ಲ, ಸಿ೦ಗರಿಸುವ ಬರಿಯ ಅಲಂಕಾರ ರೂಪ ಮಾತ್ರ. ಕೇಳಿದ್ದೀರಲ್ಲ: “ಹಲಗೆ ಬಳಪವ ಪಿಡಿಯದೊಂದು ಅಗ್ಗಳಿಕೆ; ಪದವಿಟ್ಟು ಅಳುಪದು ಇನ್ನೂಂದು ಅಗ್ಗಳಿಕೆ”, ಹೀಗೆ. ಸ್ವ-ಸಹಾಯಶೂರರ ಗೋತ್ರದವರು ಇವರು. ಮೊದಲು ದೊರೆಯಾದವರು, ರಾಜರ್ಷಿಯಾದಾರು, ಆಮೇಲೆ ಬ್ರಹ್ಮರ್ಷಿಯೂ ಆದಾರು; “ಇನ್ನೊಬ್ಬ ಇಂದ್ರನನ್ನೇ ಮಾಡಿಯೇನು” ಎನ್ನುತ್ತಾ ಪ್ರತಿ-ಸೃಷ್ಟಿಯನ್ನೂ ಮಾಡ ಹೊರಟ ಸಾಹಸಿಗಳು, ಈ ಬಗೆಯವರು!
ಇದು ಪ್ರತಿಭಾವಂತರ ವಿಚಾರವಾದರೆ, ಇನ್ನು ಕೆಲವರು ತಮ್ಮ ಸ್ವ-ಪ್ರಯತ್ನದಿಂದಲೇ ಏನನ್ನಾದರೂ ಸಾಧಿಸಲು ತೊಡಗಿರುತ್ತಾರೆ. ಏಳಿ ಎದ್ದೇಳಿ, ಮರಳಿ ಯತ್ನವ ಮಾಡಿ, ಮರಳಿ ಯತ್ನವ ಮಾಡಿ. ಗುರಿ ಮುಟ್ಟುವವರೆಗೂ ನಿಲ್ಲದಿರಿ! ಪ್ರಯತ್ನಿಸಿದರೂ ಸಫಲರಾಗದಿದ್ದರೆ ಎದೆಗುಂದಬೇಕಿಲ್ಲ; ನಡೆವರಲ್ಲದೆ, ಕುಳಿತವರು ಎಡುಹುವರೇ?- ಎನ್ನುವವರು ಇವರು. ಬರಿಯ ಮಂತ್ರದಿಂದ ಮಾವಿನ ಕಾಯಿ ಉದುರುವುದಿಲ್ಲ- ಎಂದೂ ಇವರಿಗೆ ಗೊತ್ತು. ಶ್ರದ್ಧಾಪೂರ್ಣ ನಡೆ-ನುಡಿಯ, ಆತ್ಮವಿಶ್ವಾಸಿಗಳಾದ ಇಂಥವರಿಂದಲೇ ಉದ್ದಕ್ಕೂ ಅಸಾಧ್ಯ ಕೆಲಸಗಳು, ನಂಬಲಾಗದ ಮಹತ್ಕಾರ್ಯಗಳು ನಡೆದಿರುವುದು. ‘ಭಗೀರಥ-ಪ್ರಯತ್ನ’ ಪದ ಬಂದದ್ದು ಇಂಥವರ ಪ್ರಯತ್ನಗಳ ಸಲುವಾಗಿಯೇ, ಸಾಹಸದ ಫಲವಾಗಿಯೇ. ಇವರೇ ಯುವಪೀಳಿಗೆಗೆ ಆದರ್ಶಪ್ರಾಯರು!
ಇನ್ನು ಪ್ರತಿಭೆ ಮತ್ತು ಪ್ರಯತ್ನ ಮೇಳೈಸಿದರಂತೂ ಅಂಥವರ ಸಾಧನೆಗೆ ಎಲ್ಲಿದೆ ಸೀಮೆ? ಎಲ್ಲಿದೆ ಎಲ್ಲೆ? ತಾವು ಸ್ಥಾಪಿಸಿಕೊಂಡ ವಿಕ್ರಮಗಳನ್ನ ತಾವೇ ಮುರಿದು ಕಿತ್ತೊಗೆಯುತ್ತ, ತಮ್ಮ ದಿಗಂತಗಳನ್ನ ತಾವೇ ವಿಸ್ತರಿಕೊಳುತ್ತ ಸಾಗುವ ಈ ಧೀರ-ಉದಾತ್ತರೇ ಪ್ರ್ರಾತಃಸ್ಮರಣೀಯರು, ನೆನಪಿನಲ್ಲಿ ಹಸಿರಾಗಿ ಉಳಿಯುವರು, ಇವರು!