ಅಮೆರಿಕನ್ನಡ
Amerikannada
ಸಂಧ್ಯಾರಾಗ
-ಜಯಂತಿ ಅಮೃತೇಶ್, ಮೈಸೂರು*
ಸುಂದರವಾದ ಸಂಜೆ; ತಂಗಾಳಿ ಬೀಸುತ್ತಿತ್ತು. ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ತಮ್ಮ ತಮ್ಮ ತಾಣಗಳಿಗೆ ಹಿಂತಿರುಗುತ್ತಿದ್ದುವು. ಅವುಗಳ ಕಲರವ ಕೇಳಲು ಇಂಪಾಗಿದ್ದಿತು. ಇಂತಹ ವಾತಾವರಣದಲ್ಲಿ ಸುನೀತಿಯು ತಮ್ಮ ಮನೆಯ ಹಿಂಭಾಗದ ತೋಟದಲ್ಲಿ, ತನಗೆ ಪ್ರಿಯವಾದ ಮಾವಿನ ಮರದ ಕೆಳಗಿನ ಕಲ್ಲು ಬೆಂಚಿನಮೇಲೆ ಕುಳಿತು ಗಾಢ ಚಿಂತನೆಯಲ್ಲಿ ತೊಡಗಿದ್ದಳು. ಎರಡು ದಿನಗಳಹಿಂದೆ ಅವಳ ಕೈ ಸೇರಿದ್ದ ಒಂದು ಪತ್ರ ಅವಳ ಈ ಚಿಂತೆಗೆ ಕಾರಣವಾಗಿದ್ದಿತು.
ಸುನೀತಿಯು ಇಬ್ಬರು ತಮ್ಮಂದಿರೊಂದಿಗೆ ಹುಟ್ಟಿದ ಒಬ್ಬಳೇ ಮಗಳು. ಕಾರಣಾಂತರಗಳಿಂದ ಅವಳಿಗೆ ಕಂಕಣ ಬಲ ಕೂಡಿ ಬಂದಿರಲಿಲ್ಲ. ಪದವೀಧರೆಯಾಗಿದ್ದ ಅವಳು ಬ್ಯಾಂಕಿನಲ್ಲಿ ಒಂದು ಉತ್ತಮ ಉದ್ಯೋಗದಲ್ಲಿದ್ದಳು. ತಮ್ಮಂದಿರಲ್ಲಿ ಒಬ್ಬನಾದ ರಮೇಶನಿಗೆ ಮದುವೆಯಾಗಿತ್ತು. ಸುನೀತಿಯ ಸ್ನೇಹಿತೆ ವಸುಧಾ ಅವಳ ಅತ್ತಿಗೆಯಾಗಿ ಮನೆ ತುಂಬಿದ್ದಳು. ಸುರೇಶ ಕಾಲೇಜಿನಲ್ಲಿ ಓದುತ್ತಿದ್ದ. ಮನೆಯಲ್ಲಿ ಎತ್ತನೋಡಿದರೂ ಸ್ನೇಹಮಯ ವಾತಾವರಣವೇ ಕಾಣಿಸುತ್ತಿತ್ತು. ಯಾವುದೇ ಕೊರತೆಯಿಲ್ಲದೇ ಸುಮುಖವಾಗಿ ಜೀವನ ನಡೆಯುತ್ತಿತ್ತು. ಮದುವೆ ಎಂಬ ಆಕಾಂಕ್ಷೆಯನ್ನು ಸುನೀತಿಯು ನೀರೆರದು ಪೋಷಿಸದೆ, ಇದೆ ಸುಖೀಜೀವನ ಎಂದುಕೊಂಡು ತೃಪ್ತಿಯಿಂದ ಜೀವನ ಸಾಗಿಸುತ್ತಿದ್ದ.
ಹೀಗಿರುವಾಗ ಒಮ್ಮೆ ದಿನ ಪತ್ರಿಕೆಯಲ್ಲಿ ಪ್ರಕಟವಾದ ಒಂದು ವಿಜ್ಞಾಪನೆ ರಮೇಶನ ಗಮನ ಸೆಳೆಯಿತು. ಅದರಲ್ಲಿ ಒಬ್ಬರು, ಬಾಳ ಸಂಗಾತಿಗಾಗಿ ಕಳಕಳಿಯ ವಿಜ್ಞಾಪನೆಯೊಂದನ್ನು ಪ್ರಕಟಿಸಿದ್ದರು. ಅದರ ಸಾರಾಂಶ ಹೀಗಿತ್ತು “ನಾನು ಅರವತ್ತೆರಡರ ವಿಧುರ. ನನಗೆ ಬಾಳಿನಲ್ಲಿ ಸಂಗಾತಿಯೊಬ್ಬಳು ಬೇಕೆನ್ನಿಸಿದ್ದಾಳೆ. ವಯಸ್ಸು ೫೫ ರ ಆಸುಪಾಸಿನಲ್ಲಿರಬೇಕು; ವಿಧವೆಯಾಗಿದ್ದರೆ ಒಳಿತು; ಹಾಗಿಲ್ಲದಿದ್ದರೆ ಒಂಟಿ ಮಹಿಳೆಯಾದರೂ ಸರಿಯೆ. ಆಸಕ್ತಿಯುಳ್ಳವರು ಕೂಡಲೇ ಸಂಪರ್ಕಿಸಿ” ಈ ವಿಜ್ಞಾಪನೆಗೆ ರಮೇಶನು ಯಾರಿಗೂ ತಿಳೀಸದೆ ಉತ್ತರಿಸಿದ್ದನು. ಅದಕ್ಕೆ ಬಂದ ಪ್ರತ್ಯುತ್ತರವನ್ನು ಸುನೀತಿಯ ಮುಂದಿಟ್ಟಿದ್ದ ರಮೇಶ. ಆ ಪತ್ರವನ್ನು ಓದಿದ ಸುನೀತಿಯು, “ಏನಿದು, ಯಾರಿಗೆ ಬಂದ ಪತ್ರ ಇದು?” ಎಂದು ಅಚ್ಚರಿಗೊಂಡಳು. ವಿಷಯ ತಿಳಿದಮೇಲೆ, “ಏನಿದು ರಮೇಶ? ಇದೆಲ್ಲಾ ಏಕೀಗ? ನನಗೆ ವಿಷಯ ತಿಳೀಸದೆ ನೀನು ಪತ್ರ ಬರೆದದ್ದದಾದರೂ ಏಕೆ?” ಎಂದಳು. ಅದಕ್ಕವನು “ಅಕ್ಕ, ಇದೊಂದು ಉತ್ತಮವಾದ ಅವಕಾಶ ಎನಿಸಿತು.” ಎಂದಾಗ ಅವಳು, “ಹಾಗಾದರೆ ನಿಮಗೆಲ್ಲಾ ನಾನು ಭಾರವಾದೆನೆ? ಬೇಡವಾದೆನೆ? ಹೇಳು” ಎಂದಳು. ಆಗ ರಮೇಶನು “ನೀನು ತಪ್ಪು ತಿಳಿಯ ಬೇಡಕ್ಕಾ. ಈ ತರಹದ ಅವಕಾಶಗಳು ಪದೇ ಪದೇ ಬರುವುದಿಲ್ಲ. ನಿನ್ನ ಜೀವನಕ್ಕೆ ನಿನ್ನದೇ ಆದ ಒಂದು ನೆಲೆಯಾಗಲಿ ಎಂದು ನಾವು ಬಯಸುತ್ತೇವೆ ಅಷ್ಟೆ”ಎಂದ. “ಹಾಗಾದರೆ ಇದು ಅಪ್ಪ, ಅಮ್ಮ ಮೊದಲಾಗಿ ಎಲ್ಲರಿಗೂ ತಿಳಿದಿದೆಯೆ? ನನ್ನಿಂದ ಎಲ್ಲ ಮುಚ್ಚಿಟ್ಟು ನೀವೆಲ್ಲಾ ಏನೋ ಸಂಚು ನಡೆಸುತ್ತಿರುವಹಾಗಿದೆ” ಎಂದಳು. ಅದಕ್ಕೆ ರಮೇಶನು, “ಅಕ್ಕಾ, ನಿನ್ನ ನಿರ್ಧಾರವೇ ಅಂತಿಮವಾದದ್ದು. ನಾವೆಲ್ಲರೂ ನಿನ್ನ ಭಾವನೆಗಳನ್ನು ಗೌರವಿಸುತ್ತೇವೆ. ಯೋಚಿಸಿ ನಿರ್ಧರಿಸುವ ಹಕ್ಕು ನಿನಗಿದೆ” ಎಂದು ಹೇಳಿ ಹೊರಟು ಹೋದ.
ಸುನೀತಿಯ ಮಾನಸಿಕ ತುಮುಲ ಪ್ರಾರಂಭವಾಯಿತು. ಅವಳ ವಯಸ್ಸು ೫೦ ದಾಟಿತ್ತು. ಜೀವನದ ಈ ತಿರುವಿನಲ್ಲಿ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಸುಲಭದ ಮಾತಾಗಿರಲಿಲ್ಲ. ತಾನು ಈಗ ಉತ್ತಮ ಉದ್ಯೋಗದಲ್ಲಿದ್ದು ಸಂತೃಪ್ತ ಜೀವನ ನಡೆಸುತ್ತಿರುವವಳು. ಮದುವೆ ಯಾಗಿಲ್ಲ ಎನ್ನುವ ಕೊರತೆಯೊಂದನ್ನು ಬಿಟ್ಟರೆ ಜಿವನದಲ್ಲಿ ಬೇರೇನೂ ಕಳೆದುಕೊಂಡ ಅನುಭವ ಆಗಿಲ್ಲ. ಕುಟುಂಬದ ಸದಸ್ಯರು ತನ್ನಮೇಲೆ ಪ್ರೀತಿಯ ಧಾರೆಯನ್ನೇ ಎರೆಯುತ್ತಿದ್ದಾರೆ. ಬೇಕಾದದ್ದನ್ನು ಕೊಂಡುಕೊಂಡು ಅನುಭವಿಸುವ ಶಕ್ತಿ ಇದೆ. ಹೀಗಿರುವಾಗ ಏತಕ್ಕಾಗಿ ಈಗ ಈ ಮದುವೆಯ ವ್ಯಾಮೋಹ ಎನ್ನಿಸುತ್ತಿತ್ತು. ಆ ದಿನ ಪೂರ್ತಿ ಸುನೀತಿಯು ಈ ಚಿಂತೆಯಲ್ಲಿಯೇ ಕಳೆದಳು.
ವಿಜ್ಞಾಪನೆ ನೀಡಿದ ರಾಮಚಂದ್ರ ಅವರು ಮುಂಬೈನಲ್ಲಿ ವಿಜ್ಞಾನಿಯಾಗಿ ಹಲವು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದವರು. ಉತ್ತಮ ಹುದ್ದೆಯಲ್ಲಿದ್ದ ಅವರಿಗೆ ಮುತ್ತಿನಂತಹ ಮಡದಿ, ಇಬ್ಬರು ಪುತ್ರಿಯರು ಓರ್ವ ಪುತ್ರ.. ಎಲ್ಲರೂ ಮದುವೆಯಾಗಿ ತಮ್ಮ ತಮ್ಮ ಸಂಸಾರದೊಂದಿಗೆ ಖುಷೀ ಜೀವನ ನಡೆಸುತ್ತಿದ್ದರು. ಈ ಸಮಯದಲ್ಲಿ ರಾಮಚಂದ್ರ ಅವರಿಗೆ ಪತ್ನೀ ವಿಯೋಗವಾಯಿತು. ಆಗ ಅವರಿಗೆ ತಾನು ಏಕಾಕಿ ಎನ್ನುವ ಭಾವನೆ ಕಾಡಲು ಪ್ರಾರಂಭವಾಯಿತು. ತಮ್ಮ ಮಕ್ಕಳ ಮನೆಗೆ ಹೋಗಿ ಇರಲು ಪ್ರಾರಂಭಿಸಿದ ಅವರಿಗೆ ಮಕ್ಕಳ ತುಂಬಿದ ಮನೆಗಳಲ್ಲಿ ಏನೋ ಒಂದುರೀತಿಯ ಒಂಟಿತನ ಕಾಡಿತು. ಈ ವಿಷಯಗಳೆಲ್ಲವನ್ನೂ ಅವರು ತಮ್ಮ ಪತ್ರದಲ್ಲಿ ವಿಷದವಾಗಿ ತಿಳಿಸಿದ್ದರು. ತಮ್ಮ ಹಣಕಾಸಿನ ಪರಿಸ್ಥಿತಿಯನ್ನೂ ಮುಚ್ಚಿಡಲಿಲ್ಲ. ಮಕ್ಕಳು, ಅಳಿಯಂದಿರು, ಸೊಸೆ, ಮೊಮ್ಮಕ್ಕಳು ಎಲ್ಲರೂ ಅವರನ್ನು ಅತ್ಯಂತ ಪ್ರೀತಿಯಿಂದಲೇ ಕಾಣುತ್ತಾರೆ. ಆದರೆ ಎಲ್ಲೋ ಏನೋ ಆ ವೃತ್ತದಲ್ಲಿ ತಾನು ಪರಕೀಯ ಎನ್ನುವ ಭಾವನೆ ಬಂದುಬಿಡುತ್ತದೆ ಎಂದರು. “ನಿನಗಾಗಿ ನಾನು” ಎಂದು ತಮ್ಮೊಂದಿಗೆ ಸ್ಪಂದಿಸುವ ಜೀವಕ್ಕಾಗಿ ತಾನು ಹಾತೊರೆಯುತ್ತಿರುವಂತೆ ಅವರಿಗೆ ಅನ್ನಿಸುತ್ತಿದೆಯಂತೆ. ಆದುದರಿಂದ ಮದುವೆಯಾಗಿ, ಪ್ರತ್ಯೇಕವಾಗಿ ಬೇರೇ ಊರಿಗೆ ಹೋಗಿ ನೆಲಸುವ ತಮ್ಮ ನಿರ್ಧಾರವನ್ನು ತಿಳಿಸಿ, ತಮ್ಮ ಆಸ್ತಿಯ ವಿವರಗಳನ್ನೂ ಸುನೀತಿಯ ಮುಂದೆ ಇಟ್ಟಿದ್ದರು. ತಾವೇ ಖುದ್ದಾಗಿ ಬಂದು ಸುನೀತಿಯನ್ನು ಭೇಟಿಯಾಗುವ ತಾರೀಕನ್ನೂ ತಿಳಿಸಿದ್ದರು.
ಈಗ ಗೊಂದಲಕ್ಕೀಡಾದವಳು ಸುನೀತಿ. ಮನೆಯಲ್ಲಿ ತಂದೆತಾಯಿಯರಾಗಲೀ ತಮ್ಮಂದಿರಾಗಲೀ ಯಾರೂ ಅವಳನ್ನು ಯಾವುದೇ ಬಂಧನಕ್ಕೊಳಗಾಗಲು ಬಲವಂತ ಪಡಿಸಲಿಲ್ಲ. ಬೆಟ್ಟದಂತಹ ಅಂತಿಮ ನಿರ್ದಾರವನ್ನು ಅವಳೊಬ್ಬಳೇ ತೆಗೆದುಕೊಳ್ಳಬೇಕಿತ್ತು.
ನಿಶ್ಚಯಿಸಿದ ದಿನ ಸುನೀತಿಯನ್ನು ಭೇಟಿಯಾಗಲು ರಾಮಚಂದ್ರ ಅವರು ಬಂದೇ ಬಿಟ್ಟರು. ವಾತಾವರಣ ಸ್ವಲ್ಪ ಮುಜುಗರದ್ದೇ ಆಗಿತ್ತು. ಆದರೆ ರಮೇಶನ ಎರಡೂವರೆ ವರುಷದ ಮಗಳ ಮುದ್ದು ಮಾತುಗಳು ವಾತಾವರಣವನ್ನು ತಿಳಿಯಾಗಿಸಿತು. ಮುಂದಿನ ಜೀವನದ ಬಗ್ಗೆ ಮಾತನಾಡಿಕೊಂಡು ಮುಖ್ಯ ನಿರ್ದಾರ ತೆಗೆದುಕೊಳ್ಳಲು ಅವರಿಬ್ಬರನ್ನೇ ಅಲ್ಲಿ ಬಿಟ್ಟು, ಮನೆಯ ಇತರ ಸದಸ್ಯರು ಬೇರೆ ಬೇರೆ ಕೆಲಸದ ನೆಪ ಹೆಳಿಕೊಂಡು ಚದುರಿದರು. ಕೆಲವು ನಿಮಿಷಗಳ ಮೌನದ ನಂತರ ರಾಮಚಂದ್ರ, “ನಿಮ್ಮ ನಿರ್ಧಾರ ಏನೇ ಆದರೂ ನಾನು ಅದನ್ನು ಗೌವರವಿಸುತ್ತೇನೆ. ಸಂಕೋಚವಿಲ್ಲದೇ ಮಾತನಾಡಬಹುದು.” ಎಂದರು. ಅದಕ್ಕೆ ಸುನೀತಿಯು, “ನನ್ನ ಜೀವನದಲ್ಲಿ ಈ ರೀತಿಯ ಒಂದು ಸಂದರ್ಭ ಬರಬಹುದೆಂದು ಎಣಿಸಿರಲಿಲ್ಲ. ಈಗ ಯಾವುದು ಸರಿ ಯಾವುದು ತಪ್ಪು ಎನ್ನುವ ಜಿಜ್ಞಾಸೆಯಲ್ಲಿ ಸಿಲುಕಿದ್ದೇನೆ” ಎಂದಳು. ಅದಕ್ಕವರು “ನಿಮಗೆ ಯಾವ ವಿಷಯದಲ್ಲಿ ಸಂಶಯವಿದ್ದರೂ ಕೇಳಿ. ನನಗೆ ಧೂಮಪಾನ, ಕುಡಿತ ಮೊದಲಾದ ಯಾವುದೇ ದುರಭ್ಯಾಸಗಳಿಲ್ಲ. ಪುಸ್ತಕಗಳನ್ನು ಓದುವುದು, ಅಂಚೆಚೀಟಿ ಸಂಗ್ರಹ, ಸಂಗೀತ ಕೇಳುವುದು ಇವೇ ನನ್ನ ಹವ್ಯಾಸಗಳು. ನಾನು ಅಲ್ಪ ಸ್ವಲ್ಪ ಸಮಾಜಸೇವೆ ಮಾಡಲು ಇಷ್ಟ ಪಡುತ್ತೇನೆ. ಸ್ನೇಹಿತರೆಂದರು ನನಗೆ ಗೌರವ” ಎಂದರು. ಕೆಲವು ವಿಷಯಗಳ ಬಗ್ಗೆ ಸಂಶಯ ನಿವಾರಣೆಯಾದನಂತರ ಸುನೀತಿಯು “ನಿಮ್ಮ ಮಕ್ಕಳು ನನ್ನನ್ನು ಯಾವರೀತಿಯಲ್ಲಿ ಸ್ವೀಕರಿಸುತ್ತಾರೋ ಎನ್ನುವ ಭೀತಿ ಮತ್ತು ಕಳವಳ ನನ್ನನ್ನು ಕಾಡುತ್ತಿದೆ” ಎಂದಳು. ಅದಕ್ಕವರು “ಆ ಬಗ್ಗೆ ಹೆದರಿಕೆ ಬೇಡ . ಅವರೆಲ್ಲರೂ ತಮ್ಮ ತಮ್ಮ ಕುಟುಂಬಗಳಲ್ಲಿ ತೃಪ್ತರಾಗಿ, ಸಂತುಷ್ಟರಾಗಿ ಜೀವನ ನಡೆಸುತ್ತಿದ್ದಾರೆ. ನಮ್ಮಿಬ್ಬರ ಮುಂದಿನ ಬಾಳು ಕೇವಲ ನಮ್ಮದೇ ಆಗಿರುತ್ತದೆ. ಅವರುಗಳು ನಿಮ್ಮನ್ನು ಪ್ರೀತಿಸದೇಹೋದರೂ ಖಂಡಿತ ದ್ವೇಷಿಸುವುದಿಲ್ಲ. ಅವರನ್ನು ಒಲಿಸಿಕೊಳ್ಳಲೇಬೇಕೆಂಬ ಕಡ್ಡಾಯವೂ ಇಲ್ಲ” ಎಂದರು. ತಮ್ಮ ಜೀವನದ ಸಂಧ್ಯೆಯ ದಿನಗಳನ್ನು ಬೇರೆ ಊರಿನಲ್ಲಿ ಪ್ರಾರಂಭಿಸಬೇಕೆಂಬ ನಿರ್ಧಾರದೊಂದಿಗೆ ಮಾತು ಮುಗಿಯಿತು. ಸುನೀತಿಗೆ ಮತ್ತೂ ಕೆಲವು ದಿನಗಳ ಕಾಲಾವಕಾಶವನ್ನು ನೀಡಿ ರಾಮಚಂದ್ರ ಊರಿಗೆ ತೆರಳಿದರು.
ಇಷ್ಟೆಲ್ಲ ಮಾತುಕತೆಯ ನಂತರವೂ ಒಂದು ನಿರ್ಧಾರವನ್ನು ತೆಗದುಕೊಳ್ಳಲು ಸುನೀತಿಯು ಬಹಳ ಹೆಣಗಾಡಬೇಕಾಯಿತು. ಒಂಟಿಬಾಳು ಅಸಹನೀಯವೆಂದು ಅವಳಿಗೆ ಗೊತ್ತಿತ್ತು. ಮುಂದಕ್ಕೆ ಒಂದೊಂದು ದಿನವೂ ಒಂದೊಂದು ಯುಗವಾಗಬಹುದೆಂಬ ಅನುಮಾನವೂ ಈಚೆಗೆ ಬರತೊಡಗಿತ್ತು. ರಾಮಚಂದ್ರ ಅವರು ಹೇಳಿದ್ದರಲ್ಲಿ ಎಷ್ಟು ನಿಜಾಂಶ ಇದೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.
ಕೆಲವು ಸಲ ಸುನೀತಿಗೆ ಈ ಮದುವೆಯ ಸಂಬಂಧವನ್ನು ತಾನು ತಿರಸ್ಕರಿಸಿಬಿಟ್ಟರೆ ನೆಮ್ಮದಿಯಾಗಿರಬಹುದೇನೋ ಎನ್ನಿಸಿದ್ದೂ ಉಂಟು. ಆಗ ಯಾವುದೇ ಅಡ್ಡಿ ಆತಂಕಗಳಿಲ್ಲದೇ, ಹೊಸ ಹೊಸ ಸವರಣೆಗಳಿಲ್ಲದೇ ಹಾಯಾಗಿ ಮೊದಲಿನಂತೆ ಜೀವನ ಸಾಗಿಸುತ್ತಿರಬಹುದಲ್ಲವೆ ಎನಿಸಿತ್ತು. ಹೊಸಜೀವನ, ಹೊಸ ಜನ ಈಗ ಬೇಕೇ? ಈ ತರಹದ ಪ್ರಶ್ನೆಗಳು ಪೊಂಖಾನು ಪುಂಖವಾಗಿ ಸುನೀತಿಯ ಮನದಲ್ಲಿ ಏಳುತ್ತಿತ್ತು. ಹಾಗಾದರೆ ಇಲ್ಲಿ ತನಗಾಗಿ ಮಿಡಿಯುವ ಜೀವ ಇದೆಯೇ ಎಂದು ಯೋಚಿಸಿದಾಗ ಮಾತ್ರ ಅವಳಿಗೆ ಸಿಕ್ಕಿದ್ದು ನಕಾರಾತ್ಮಕ ಉತ್ತರ. ಹಾಗಾದರೆ ಈ ದಾಂಪತ್ಯ ಜೀವನದಲ್ಲಿ ಅತ್ತಕಡೆ ಹೇಗಿರಬಹುದು? ವ್ಯಕ್ತಿ ಏನೋ ಗುಣವಂತರಂತೆ ಕಾಣುತ್ತಾರೆ; ಮಾತುಕತೆ ನಯ ವಿನಯದಿಂದ ಕೂಡಿದೆ; ವಿದ್ಯೆ ಇದೆ; ಸಂಸ್ಕಾರವಿದೆ; ಬಾಳ ಸಂಗಾತಿಗಾಗಿ ಕಳಕಳಿಯ ಹಾತೊರೆಯುವಿಕೆ ಕಂಡುಬರುತ್ತದೆ. ತನ್ನ ಒಪ್ಪಿಗೆಯಿಂದ ಅವರ ಜೀನದಲ್ಲಿ ನೆಮ್ಮದಿ ಮೂಡಬಹುದು. ಇಬ್ಬರೂ ಸಂತೃಪ್ತಿಯಿಂದ ಬಾಳಬಹುದೇನೋ ಎನ್ನಿಸತೊಡಗಿತು. ಆದರೆ ಪರಕೀಯಳಾದ ತನ್ನನ್ನು ಅವರ ಬೆಳೆದ ಮಕ್ಕಳು ಹೇಗೆ ಸ್ವೀಕರಿಸುವರೋ ಎಂಬ ಅಳುಕು, ಅನುಮಾನ, ಭೀತಿ ಮನದಲ್ಲಿ ಆವರಿಸಿತ್ತು.
ಈಸಂದರ್ಭದಲ್ಲಿ ನಡೆದ ಒಂದು ಘಟನೆ ಸುನೀತಿಯ ಜೀವನದ ತಿರುವಿಗೆ ಕಾರಣವಾಯಿತು. ಒಂದು ಸಲ ಸುನೀತಿಯ ತಂದೆಯವರು ಜ್ವರದಿಂದ ಹಾಸಿಗೆ ಹಿಡಿದರು. ಆ ಸಮಯದಲ್ಲಿ ಅವರತಾಯಿಯವರಿಗೆ ಪಕ್ಕದ ಊರಿನಲ್ಲಿ ನಡೆಯುವ ತಮ್ಮ, ತಮ್ಮನ ಮಗಳ ಮದುವೆಗೆ ಹೋಗಲೇ ಬೇಕಾದ ಸಂದರ್ಭ ಬಂದಿತು. ಯಾವಾಗಲೂ ದಂಪತಿಗಳಿಬ್ಬರು ಎಲ್ಲ ಸಮಾರಂಭಗಳಿಗೆ ಹೋಗಿ ಬರುವುದು ವಾಡಿಕೆ. ಈಗ ಇವರ ಅಸ್ವಸ್ಥತೆಯಕಾರಣ ಆಕೆ ಮಾತ್ರ ಹೊರಟರು. ಆಕೆ ಹೊರಡುವುದು ಆ ಹಿರಿಯರಿಗೆ ಅಷ್ಟು ಒಪ್ಪಿಗೆ ಯಾಗಲಿಲ್ಲ. ಹಾಗೂ ಹೀಗೂ ಅವರ ಒಪ್ಪಿಗೆ ಪಡೆದು ಆಕೆ ಕಾರು ಹತ್ತಿದರು. ಮತ್ತೆ ಮತ್ತೆ ಬೇಗ ಹಿಂತಿರುಗುವ ಆಶ್ವಾಸನೆ ಇತ್ತು ಹೊರಟರು. ಇದು ಸುನೀತಿಗೆ ಅಚ್ಚರಿಯನ್ನು ತಂದಿತು. ಹಿಂದೆಲ್ಲ ಸುನೀತಿಯು ಇಂತಹ ಘಟನೆಗಳನ್ನು ಅಷ್ಟು ಗಮನಕ್ಕೆ ತಂದುಕೊಳ್ಳುತ್ತಿರಲಿಲ್ಲ. ಈಗ ಸೂಕ್ಷ್ಮವಾಗಿ ನೋಡಿದಳು. ಮನೆತುಂಬಾ ಜನರಿದ್ದೇವೆ; ಮುದ್ದಿನ ಮಗಳಾದ ತಾನಿದ್ದೇನೆ; ಒಂದು ದಿನ ತಾನು ತಂದೆಯ ಸೇವೆ ಮಾಡಲಾರೆನೆ ಎನ್ನಿಸಿತು. ಸಂಜೆಯಾಗುತ್ತಾ ಹೋದಂತೆ ತಂದೆಯವರ ಚಡಪಡಿಕೆ ಹೆಚ್ಚಾಯಿತು. ಅವರ ಕಣ್ಣು ಬಾಗಿಲಿನತ್ತ ನೆಟ್ಟಿತ್ತು. ಸಂಜೆ ಸುನೀತಿಯ ತಾಯಿ ಬಂದವರೇ ತಕ್ಷಣ ಹೋಗಿ ಅವರಿಗೆ ತನ್ನ ಕೈಯಾರೆ ಹಾರ್ಲಿಕ್ಸ್ ಮಾಡಿ ತಂದುಕೊಟ್ಟರು. ಅತ್ಯಂತ ಕಳಕಳಿಯಿಂದ ಅವರ ಯೋಗ ಕ್ಷೇಮ ವಿಚಾರಿಸಿದರು. ಮದುವೆಯ ಮನೆಯ ವಿವರಗಳನ್ನು ಅವರೊಂದಿಗೆ ಹರ್ಷದಿಂದ ಹಂಚಿಕೊಂಡರು. ಸುನೀತಿ ಇವನ್ನೆಲ್ಲ ಬಿಟ್ಟ ಕಣ್ಣು ಬಿಟ್ಟ ಬಾಯ್ಗಳಿಂದ ನೋಡಿದಳು. ಅವಳಿಗೆ ತನ್ನ ಯಾವುದೋ ಒಂದು ಅತಿ ಮುಖ್ಯವಾದ ಪ್ರಶ್ನೆಗೆ ಉತ್ತರ ಸಿಕ್ಕಿಬಿಟ್ಟಿತ್ತು.
ಜೀವನದ ಸಂಧ್ಯೆಯಲ್ಲಿ ಬಾಳಸಂಗಾತಿಯು ಕೇವಲ ಯಾವ ದೈಹಿಕ ಆಕರ್ಷಣೆಗೂ ಅಲ್ಲ, ಜೀವನದ ಇತರ ಆಗುಹೋಗುಗಳಿಗೆ ಸಂಗಾತಿ ಬೇಕು. ನಿನಗಾಗಿನಾನು, ನನಗಾಗಿ ನೀನು ಎನ್ನುತ್ತಾ ಪರಸ್ಪರ ಸ್ಪಂದಿಸುವ ಒಂದು ಜೀವ ಬೇಕು. ತನ್ನ ಎಲ್ಲ ಗೊಂದಲಗಳಿಂದ ಸುನೀತಿಯು ಮುಕ್ತಳಾದಳು. ರಾಮಚಂದ್ರ ಅವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಬೇಕೆನ್ನುವ ನಿರ್ಧಾರಕ್ಕೆ ಬಂದಳು. ತಕ್ಷಣ ಯಾವ ಸಂಕೋಚವೂ ಇಲ್ಲದೇ ದೂರವಾಣಿಯ ಮೂಲಕ ಅವರನ್ನು ಸಂಪರ್ಕಿಸಿದಳು. ತನ್ನ ಸಂಪೂರ್ಣ ಸಮ್ಮತವನ್ನು ಮುಕ್ತ ಮನಸ್ಸಿನಿಂದ ತಿಳಿಸಿದಳು. ಉದಯರಾಗ ಹಾಡುತ್ತಿರುವ ತನ್ನ ಜೀವನದ ಸಂಧ್ಯಾರಾಗದ ಬಗ್ಗೆ ಬಣ್ಣದ ಕನಸುಗಳನ್ನು ಕಾಣತೊಡಗಿದಳು.
*-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com