ಅಮೆರಿಕನ್ನಡ
Amerikannada
ಪತಿತ ಪಾವನ ಯತಿರಾಜ ವ್ಯಾಸ ಮುನೀಂದ್ರ
ಭವಾನಿ ಲೋಕೇಶ್, ಮಂಡ್ಯ
ಕರ್ನಾಟಕದ ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಅನೇಕ ಮಹಾಮಹಿಮರ ಸಾಲಿನಲ್ಲಿ ಮಧ್ವಮತದ ಸನ್ಯಾಸಿಯಾಗಿ ನಾಡನುದ್ಧರಿಸಿದ ಶ್ರೀ ವ್ಯಾಸತೀರ್ಥರದು ಪ್ರಮುಖವಾದ ಹೆಸರು. “ಈಸು ಮುನಿಗಳಿದೇನು ಮಾಡಿದರು, ವ್ಯಾಸಮುನಿ ಮಧ್ವಮತವನುದ್ಧರಿಸಿದ” ಅನ್ನುವ ಪುರಂದರದಾಸರ ಕೀರ್ತನೆಯ ಸಾಲು ಅವರ ಮಹತ್ವವನ್ನು ಸಾರಿ ಹೇಳುತ್ತವೆ. ಆದಾಗ್ಯೂ ವ್ಯಾಸ ಮುನೀಂದ್ರರು ಯಾವ ಜಾತಿ ಮತ ಸಂಕೋಲೆಯಗಳಿಂದ ಬಂಧಿತರಾಗದೇ ಸಕಲರಿಗೂ ಕಲ್ಪವೃಕ್ಷವಾಗಿ ಇದ್ದವರು.
ಇಂತಹ ವ್ಯಾಸರಾಯರನ್ನು ಸಮಗ್ರವಾಗಿ ಪರಿಚಯಿಸಿಕೊಡುವ ಅಚ್ಚುಕಟ್ಟಾದ ಕೆಲಸವನ್ನು ಡಾ|| ಪ್ರದೀಪಕುಮಾರ ಹೆಬ್ರಿ ಮಾಡಿದ್ದಾರೆ. ಈಗಾಗಲೇ ಪೂರ್ಣಪ್ರಜ್ಞ ಮಧ್ವಾಚಾರ್ಯರ ಬಗೆಗಿನ ಮಹಾಕಾವ್ಯವನ್ನು ಸಲಲಿತವಾದ ಐದು ಸಾಲುಗಳ ಪದ್ಯಗಳೊಂದಿಗೆ ನಾಡಿಗೆ ನೀಡಿರುವ ಡಾ|| ಹೆಬ್ರಿ ಇದೀಗ ನಿಮ್ಮ ಕೈಗಿಡುತ್ತಿರುವ ಪುಸ್ತಕವೇ ‘ಯತಿರಾಜ ಶ್ರೀ ವ್ಯಾಸರಾಯರು’ ವಿಜ್ಞಾನದಲ್ಲಿ ಯಾವುದಾದರೊಂದು ಮುಖ್ಯ ಉತ್ಪನ್ನದ ತಯಾರಿಕೆಯಲ್ಲಿ ತೊಡಗಿದಾಗ ಆ ರಾಸಾಯನಿಕ ಕ್ರಿಯೆಯಲ್ಲಿ ಅರಿವೇ ಇಲ್ಲದ ಹಾಗೆ ಉಪ ಉತ್ಪನ್ನಗಳು ತಯಾರಾಗುವಂತೆ ಮಹಾಕಾವ್ಯಗಳ ಸೃಷ್ಟಿಯಲ್ಲಿ ತೊಡಗಿರುವ ಹೆಬ್ರಿಯವರ ಲೇಖನಿಯಿಂದ ಮೂಡಿಬಂದಿರುವ ಉತ್ಪನ್ನವಿದು ಅಂದರೆ ತಪ್ಪಾಗಲಾರದು.
ದೂರದ ಅರಬ್ ದೇಶದಲ್ಲಿ ಬೆಳೆದ ಗಿಡವೊಂದು ಇಲ್ಲಿ ಕಾಫಿ ಬೆಳೆಯಾಗಿ ಸಮೃದ್ಧವಾಗಿ ಇಲ್ಲಿನ ನೇಟಿವಿಟಿಗೆ ಹೊಂದಿಕೊಂಡುಬಿಡುವ ಹಾಗೆ ದೂರದ ಉಡುಪಿ ಜಿಲ್ಲೆಯ ಹೆಬ್ರಿಯ ಸೊಗಡನ್ನುಂಡು ಮಂಡ್ಯಕ್ಕೆ ಬಂದ ಡಾ|| ಹೆಬ್ರಿಯವರು ಸಾಹಿತ್ಯ ಲೋಕಕ್ಕೆ ಶ್ರೀಮಂತಿಕೆಯನ್ನು ತಂದುಕೊಡುವ ಕೆಲಸವನ್ನು ಅನೂಚಾನವಾಗಿ ನಡೆಸಿಕೊಂಡು ಬಂದಿದ್ದಾರೆ. ಮುಂದೆ ಶ್ರೀ ಗುರು ರಾಘವೇಂದ್ರರ ಬಗ್ಗೆ ಮಹಾಕಾವ್ಯದ ಸಿದ್ಧತೆಯಲ್ಲಿ ತೊಡಗಿರುವ ಡಾ|| ಹೆಬ್ರಿಯವರು ಅದಕ್ಕೆ ಮೊದಲು ಭಾಗವತ ಧರ್ಮವನ್ನು ಎತ್ತಿಹಿಡಿದ ಚಿಜ್ಯೋತಿ, ಕೀರ್ತನ ಪರಂಪರೆಗೆ ನಾಂದಿ ಹಾಡಿದ ಮಧ್ವ ಮುಕುಟ ಮಣಿ ಶ್ರೀ ವ್ಯಾಸರಾಯರ ಸಂಪೂರ್ಣ ಪರಿಚಯವನ್ನು ಈ ಕೃತಿಯಲ್ಲಿ ಮಾಡಿಕೊಟ್ಟಿದ್ದಾರೆ.
ಹಾಗೆ ನೋಡಿದರೆ ವ್ಯಾಸ ಮುನೀಂದ್ರರನ್ನು ಡಾ|| ಹೆಬ್ರಿ ಪರಿಚಯಿಸಿರುವ ರೀತಿಯೂ ಬಹಳ ಸರಳವಾಗಿದೆ. ವ್ಯಾಸರಾಯರ ಬದುಕಿನ ವೃತ್ತಾಂತವೇ ಐತಿಹ್ಯಗಳಿಂದ ತುಂಬಿ ಹೋಗಿದೆ. ಅವರು ಬದುಕಿ ಬಾಳಿದ ಬಗ್ಗೆ ಬೇರೆ ಬೇರೆಯವರು ಅವರದ್ದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ ಹೋಗಿದ್ದಾರೆ. ಅವೆಲ್ಲವುಗಳನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಹೆಬ್ರಿ ಮಾಡಿದ್ದಾರೆ.
ಹರಿದಾಸ ಯತಿತ್ರಯರೆನಿಸಿಕೊಂಡ ಶ್ರೀಪಾದರಾಯರು, ವ್ಯಾಸರಾಯರು, ವಾದಿರಾಜರುಗಳಲ್ಲಿ ವ್ಯಾಸತೀರ್ಥರ ಮಹಿಮೆ ಅಕಳಂಕವಾದುದು, ಚಿರಸ್ಥಾಯಿಯಾದುದು. ಯಾವುದೇ ಪಾತ್ರದ ವೈಭವೀಕರಣ ನೆಲೆಗಟ್ಟಿನಿಂದ ಸ್ವಲ್ಪ ದೂರವೇ ಉಳಿಯುವುದಾದರೂ ಇತಿಹಾಸದ ಪ್ರಜ್ಞೆ ಹಾಗೂ ಸಾಧನೆಯ ಸ್ಪಷ್ಟತೆ ಆ ಪಾತ್ರದ ಚಿತ್ರಣಕ್ಕೆ ನ್ಯಾಯವನ್ನು ಒದಗಿಸುತ್ತದೆ. ಹಾಗಾಗಿ ಹೆಬ್ರಿಯವರ ಈ ಕೃತಿಯು ಆರಂಭದಿಂದ ಅಂತ್ಯದ ನಡುವೆ ವ್ಯಾಸರಾಯರ ಪರಿಚಯವನ್ನು ಸ್ಪಷ್ಟವಾಗಿ ಮಾಡಿಕೊಟ್ಟಿದೆ ಎಂದರೆ ತಪ್ಪಾಗದು.
ಯುಗಾವತಾರಿ ಬಸವದರ್ಶನದ ಸಮಯದಿಂದಲೂ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಹೆಬ್ರಿಯವರ ಕಿರುಶೀರ್ಷಿಕೆಗಳ ಆಯ್ಕೆ ಮತ್ತು ಆ ಬಗೆಯ ಆಲೋಚನೆ. ಶೀರ್ಷಿಕೆಗಳನ್ನೇ ಪಟ್ಟಿ ಮಾಡಿದರೆ ಇಡೀ ಪುಸ್ತಕದ ಸ್ವರೂಪವೇ ತಿಳಿದುಬರುವ ರೀತಿಯಲ್ಲಿ ಅವರ ಶೀರ್ಷಿಕೆಗಳು ಪ್ರಾಸಬದ್ಧವಾಗಿಯೂ ಆಕರ್ಷಕವಾಗಿಯೂ ಅರ್ಥಗರ್ಭಿತವಾಗಿಯೂ ಇರುತ್ತವೆ. ಇಲ್ಲಿಯೂ ಆ ಕಾರ್ಯ ನೆರವೇರಿದೆ. ‘ವ್ಯಾಸರಾಯರ ವಿಶೇಷತೆ’, ‘ಸಂಶಯದ ಸುಳಿಯಲ್ಲಿ ಕಾಲಗಣನೆ’, ‘ಯತಿಯಾಗುವಲ್ಲಿ ಯತಿರಾಜ’, ‘ರಾಜಗುರು ಸಮ್ಮಿಲನ’, ‘ಗುರುಮನೆಯಾಗಿ ಅರಮನೆ’, ‘ವಿದ್ಯಾ ವಿಜಯೋತ್ಸವ’ ಹೀಗೆ ಶೀರ್ಷಿಕೆಗಳು ಆಕರ್ಷಿಸುತ್ತವೆ.
ಶ್ರೀಹರಿಯ ಮೇಲೆ ವ್ಯಾಸರಾಯರಿಗಿದ್ದ ಅನನ್ಯ ಅನುಪಮ ಭಕ್ತಿಪ್ರೀತಿಯನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಸಿರಿಕೃಷ್ಣ ಅನ್ನುವ ಅಂಕಿತವನ್ನಿಟ್ಟುಕೊಂಡು ವ್ಯಾಸರಾಯರು ಬರೆದ ಕೀರ್ತನೆಗಳನ್ನು ಉಗಾಭೋಗಗಳು ಆ ಭಕ್ತಿಯನ್ನು ನಿರೂಪಿಸುತ್ತವೆ. ಅವರ ಆ ಕೀರ್ತನೆಗಳನ್ನೂ ಈ ಕೃತಿಯಲ್ಲಿ ಸೇರಿಸಿದ್ದಾರೆ ಹೆಬ್ರಿಯವರು. ಅಷ್ಟಾದರೆ ಮಾತ್ರ ಸಾಕೆ? ಇಲ್ಲ. . . ವ್ಯಾಸರಾಯರ ಆ ಕೀರ್ತನೆಗಳಿಗೆ ತಮ್ಮದೇ ಆದ ಧಾಟಿಯಲ್ಲಿ ವ್ಯಾಖ್ಯಾನ ನೀಡಿದ್ದಾರೆ. ಈಗಾಗಲೇ ನಾಡಿನಾದ್ಯಂತ ಬಸವಣ್ಣನವರ ಕಾವ್ಯಕ್ಕೆ ವ್ಯಾಖ್ಯಾನ ನೀಡುತ್ತಲೇ ತಮ್ಮ ವಿಶಿಷ್ಟ ಧಾಟಿಯನ್ನು ರೂಢಿಸಿಕೊಂಡಿದ್ದಾರೆ. ಹಾಗಾಗಿ ಕೀರ್ತನೆಗಳನ್ನು ಸರಳ ಪದಗಳಲ್ಲಿ ಅರ್ಥೈಸಿಕೊಡುವ ಕೆಲಸ ಹೆಬ್ರಿಯವರಿಂದಾಗಿದೆ.
ಈ ಕೃತಿಯಿಂದ ಅನೇಕರಿಗೆ ಲಾಭವಿದೆ. ಐತಿಹಾಸಿಕ ಪಾತ್ರವಾದರೆ ಇತಿಹಾಸಕಾರರಿಗೆ, ಸಾಹಿತ್ಯದ ಸಂದರ್ಭದಲ್ಲಿ ಸಾಹಿತಿಗಳಿಗೆ, ಸಂಗೀತದ ವಿದ್ವತ್ತಿನಿಂದ ಸಂಗೀತಗಾರರಿಗೆ, ಯತಿಯಾಗಿ, ಗುರುವಾಗಿ, ಮಾಧ್ವ ಕುಲಕೋಟಿಗೆ ಹೀಗೆ ಸರ್ವರಿಗೂ ಓದಿನ ಸಾಮಗ್ರಿಯಾಗುವಲ್ಲಿ ಪರಸ್ತುತ ಕೃತಿಯು ಮೇಳವಿಸುತ್ತದೆ. ಆದ್ದರಿಂದಲೇ ಯತಿರಾಜ ವ್ಯಾಸಮುನೀಂದ್ರರ ಬದುಕಿನ ದರ್ಶನವನ್ನು ಪರಿಚಯಿಸಿಕೊಡುವ ಈ ಕೃತಿಯು ಮೌಲಿಕವಾದುದಾಗಿದೆ.
ಡಾ|| ಪ್ರದೀಪಕುಮಾರ ಹೆಬ್ರಿಯವರ ಮನಸ್ಸಿಗೆ ಇನ್ಯಾವ್ಯಾವ ಮಹಾಮಹಿಮರು ಧಾಂಗುಡಿಯಿಡುತ್ತಾರೋ ತಿಳಿಯದು. ವಿಶ್ವಕ್ಕೇ ಜ್ಯೋತಿಯಾದ ಬಸವಣ್ಣನಿಂದ ಮೊದಲ್ಗೊಂಡು ಪೂರ್ಣಪ್ರಜ್ಞ ಮಧ್ವಾಚಾರ್ಯರು, ಯತಿರಾಜ ವ್ಯಾಸಮುನೀಂದ್ರರು, ಶ್ರೀ ಗುರು ರಾಘವೇಂದ್ರರು, ಉಡುತಡಿಯ ಅಕ್ಕಮಹಾದೇವಿ, ಅನುಭವ ಮಂಟಪದ ಅಲ್ಲಮಪ್ರಭು ಹೀಗೆ ಒಬ್ಬೊಬ್ಬರೂ ಒಂದೊಂದು ಸಮಯದಲ್ಲಿ ತಮ್ಮ ಆಟೋ ಬಯಾಗ್ರಫಿಯನ್ನು ಹೆಬ್ರಿಯವರ ಲೇಖನಿಯಿಂದ ಬರೆಸಿಕೊಳ್ಳುತ್ತಿದ್ದಾರೇನೋ! ತಿಳಿಯದು. ಅಂತೂ ಸಾಹಿತ್ಯಲೋಕಕ್ಕೊಂದು ಸದ್ವಿಚಾರಗಳನ್ನೊಳಗೊಂಡ, ಸತ್ಪಾತ್ರರ ಬಗೆಗಿನ ಕೃತಿಯನ್ನು ನೀಡಿದ್ದಕ್ಕೆ ಅವರಿಗೆ ಅಭಿನಂದನೆಗಳನ್ನು ಹೇಳಲೇಬೇಕು.
ಹೆಬ್ರಿಯವರ ನುಡಿಗಡಣ ಶ್ರೀಮಂತವಾಗುತ್ತಿರುವ ಹಾಗೆಯೇ ಕರ್ನಾಟಕದಾದ್ಯಂತ ಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಅವರೊಬ್ಬ ದೇವ-ಮಾನವರ ನಡುವಿರುವ ಮಧ್ಯಸ್ಥನಂತೆ ಕಂಡಿರುವುದರಲ್ಲಿ ಆಶ್ಚರ್ಯವೇನಿಲ್ಲ. ನುಡಿ ಶ್ರೀಮಂತವಾಗಿ, ಲೇಖನಿಯನ್ನು ಹಿಡಿದ ಕೈಗೆ ಇನ್ನಷ್ಟು ಬಲ ದೊರೆಯಲಿ ಅನ್ನುವುದಷ್ಟೇ ನನ್ನಂಥವರೆಲ್ಲರ ಹಾರೈಕೆ.