ಅಮೆರಿಕನ್ನಡ
Amerikannada
ಕುಹಕ ಕಲ್ಪನೆ
ವಿಶ್ವ, ಸ್ಯಾನ್ ರಮೋನ್, ಕ್ಯಾಲಿಫೋರ್ನಿಯ

ಯಾರ ಕುಹಕ ಕಲ್ಪನೆಯ ಕೃತಿಯೊ ಇಹದಾಟ
ತೋರದೇಕೋ ಅದರೊಳಾಡಿ ಗೆಲುವ ನಿಲವು
ಅರಿತವರಿದ್ದಂತಿಲ್ಲ ಇದರ ಸುಪ್ತ ನಿಯತಿ ನಿಗದಿ
ಅರಿಯಬಾರದೆಂತರಿತೊಡನೆ ಮಗಿಸಲಾರದೇಕೋ || 1 ||


ಕಾಲರಾಯನ ಸಮಯ ಜಾಲದ ನಿಯಮದಲಿ
ಬಳಲುವ ಒಡಲ ಕೂಳ ಕಿರಿಕಿರಿಗೆ ಬೇಸತ್ತು
ಬಲೆಯಿಂದ ಬಿಡುಗಡೆಯ ಬೇಡಿದೊಡನೇ
ಅಲೆಯೆದ್ದು ಆಕ್ಷಣದಲೆನ್ನ ಸೆಳೆದೊಯ್ಯದೇಕೇ || 2 ||


ಭರವಸೆ ಬರಿದಾದ ಸೋಗು ಬದುಕಿನ
ತೆರೆಯನೆಳೆದು ಕೊನೆಕಾಣ ಮನವಾದೊಡನೆ
ಬಿರುಗಾಳಿಯೊಡಲಲಿ ಭರದಿ ತಿರುಗುವ
ಸುರುಳಿ ಸುತ್ತೆನ್ನ ಎತ್ತೊಯ್ಯದೇಕೆ || 3 ||


ರವಿಕೋಟಿ ಕಿರಣದರುಣಕೆ ಕರಗದಿಹ
ಜೀವನ ಅಂಧಕಾರ ಸಹಿಸೆನೆಂದೊಡನೆ
ಭುವಿಯು ನಡುಗಿ ಗುಡುಗಿ ಬಿರಿದು
ಗವಿಯಾಗೆನ್ನ ನಿಂತೆಲ್ಲೇ ನುಂಗದೇಕೇ || 4 ||


ನೆಚ್ಚಿ ಆಚರಿಸುತಿರೆ ಬಿಡುಗಡೆಯ ವಿಧಿತ ನಿಯಮ
ಮೆಚ್ಚಿ ಬಹುಕಾಲ ದಕ್ಕದ ಸಕ್ಕರೆಯ ಅಕ್ಕರೆಯನುಣಿಸಿ
ಹೆಚ್ಚಿನ ಸಿಹಿ ಸವಿವ ಬಯಕೆಯ ಕಿಚ್ಚ ನನ್ನೊಳು
ಹಚ್ಚಿ ಚಿರಬಾಳ ಕೋರಿಸುವುದೇಕೇ || 5 ||


ಕಾಲರಾಯನ ಕ್ರೂರ ಸಮಯ ಕಡಲೊಲಿದು
ಚಲನ ಬಳಕುತಳಕಿನ ನೌಕೆ ಯಾನವಾಗಿ
ಚೆಲವು ಹಿಗ್ಗಿನ ಸುಗ್ಗಿಯಾಗಿ ಬಾಳಬೆಡಗಿನ
ಬಲೆಯಲಿ ಮತ್ತೆ ಬೀಳಿಸುವುದೇಕೇ || 6 ||


ಬಿರುಗಾಳಿ ಭರದಲಿ ಸಿರಿ ಹರಿದು ಬಂದು
ಸುರರ ಸುಖದ ಮಕರಶಿಖರವನೇರಿಸಿ
ಕೊರಗನಾರಿಸಿ ಬೆರಗಿನ ನಾಳೆಗಳ
ಮರುಳನಂತರಸಿ ಕೊನೆಯ ಮರೆಸುವುದೇಕೇ || 7 ||


ಭುವಿಯ ಬೆರಗಿನ ಸುಗ್ಗಿಗೆ ಸಿಕ್ಕಿ ಸೊಕ್ಕಿ
ಸವೆದು ಸುಕ್ಕಾಗುತಿಹ ದೇಹವನು
ನವಿಲ ಗರಿಯಂತೆ ಮೆರುಗಿಸುವಾಸೆತಂದು
ಭವದ ಬವಣೆ ಸೆಳೆದು ಎಳೆವುದೇಕೇ || 8 ||


ಕಹಿ ಸಹಿಸಿ ನೋವತಿಂದು ಗಳಿಸಿದೊಂದೂ ಕೊನೆಗೆ
ಸಹಿತ ಬರವು ವಿಜಯಿಗೆಂದಿಗೂ ಬಹುಮಾನವೆಂದು
ಆಹ್ವಾನ ಬಯಸಿ ಗಳಿಸದ ಸರಕೊಂದು ಭುವಿಗೆ ಮರಳೆಂದು
ಗ್ರಹಿಸಲಾಗದ ಗಣಿತವಿದು ಯಾರ ಕುಹಕ ಕಲ್ಪನೆ || 9 ||