ಅಮೆರಿಕನ್ನಡ
Amerikannada
ಸಂಜೀವಿನಿ ವ್ರತ
-ನಾಗಲಕ್ಷ್ಮೀ ಹರಿಹರೇಶ್ವರ

ಪ್ರತಿ ಗುರುವಾರದಂತೆ ಈ ಗುರುವಾರವೂ ವಿಳ್ಳೆದೆಲೆ ಮಾರುವ ಮುದುಕಿ ಮನೆ ಬಾಗಿಲಿಗೆ ಬಂದು “ವಿಳ್ಳೆದೆಲೆ” ಎಂದು ಕೂಗಿದಳು.
“ನಾಳೆ ಹಬ್ಬ ಬಂದೈತೆ ವಿಳ್ಳೆದೆಲೆ ತೊಗೊ ಅವ್ವಾ” ಎಂದಳು.
ನಾನು ಮನೆಯೊಳಗಿಂದಲೇ “ಯಾವ ಹಬ್ಬಾನೆ”- ಅಂದೆ.
“ಅದೇ ಕಣ್ರವ್ವ ಗಂಡನ ಹಬ್ಬ”
“ನಿನ್ನ ಗಂಡಂಗೂ ಪೂಜೆ ಮಾಡ್ತೀಯೇನೆ?”- ಎಂದು ಕೇಳಿದೆ.
“ನಂಗೆ ಆ ಭಾಗ್ಯ ಎಲ್ಲವ್ವ?” ಎಂದಳು.
“ಯಾಕೆ?” ಅಂದೆ.
“ಇಂಗೇ ಅವ್ನಿ ಕಣ್ರವ್ವ. ಮದ್ವಿಲ್ಲ, ದಿರಿಸಿಲ್ಲ. ನನ್ನದೂ ಒಂದು ಬದುಕೇ ಹೇಳಿ” ಎಂದಳು.
“ಸರಿ ನಿನ್ಹತ್ರ ಮಾತಾಡ್ತಾ ಕೂರೋದಿಕ್ಕೆ ಟೈಂ ಇಲ್ಲ ಒಂದು ಹತ್ತು ರೂಪಾಯಿಗೆ ವಿಳ್ಳೆದೆಲೆ ಕೊಡು” ಅವಳ ಬಡತನ ಗೊತ್ತಿದ್ದದ್ದೆ. ಒಂದು ಬೌಲ್‌ಗೆ ಚಿತ್ರಾನ್ನ ಹಾಕಿ, ಒಂದು ಬಾಟಲ್ ನೀರು ಕೊಟ್ಟು, ಹತ್ತು ರೂಪಾಯಿಯನ್ನ ಕೈಗಿತ್ತು “ಇಲ್ಲೇ ಚಿತ್ರಾನ್ನ ತಿನ್ಕೊಂಡು ಹೋಗು, ಕೈಯಲ್ಲಿ ತೊಗೊಂಡು ಹೋಗ್ಬೇಡ” ಅಂತ ಹೇಳ್ತಾ ಮನೆಯೊಳಗೆ ಬಂದೆ.
ಹೊರಗಡೆ ಗಾಳಿ ಜೋರಾಗಿ ಬೀಸ್ತಾ ಇತ್ತು. ತುಂತುರು ಮಳೆ ಹನಿನೂ ಬೀಳ್ತಾ ಇತ್ತು. ಇನ್ನೇನು ಆಷಾಢ ಕಳಿತಾ ಬಂತು. ಆಷಾಢದ ಅಮಾವಾಸ್ಯೆಯೆಂದರೆ ಭೀಮನ ಅಮಾವಾಸ್ಯೆ, ಪತಿ ಸಂಜೀವಿನೀ ವ್ರತ, ಜ್ಯೀತಿಸ್ತಂಭ ವ್ರತ ಅಥವಾ ಉಮಾಮಹೇಶ್ವರ ವ್ರತ ಹೀಗೆ ಆ ಹಬ್ಬಕ್ಕೆ ನಾಲ್ಕಾರು ಹೆಸರುಗಳಿವೆ.
ಹಾಗೇ ಜ್ಯೋತಿಸ್ತಂಭವ್ರತದ ಬಗ್ಗೆ ಯೋಚ್ನೆ ಮಾಡ್ತಾ ಕೂತಿದ್ದೆ. ಇದೊಂದು ವಿಶೇಷ ಹಬ್ಬ ಅನ್ನಿಸಿತು. ಅಮಾವಾಸ್ಯೆಯ ರಾತ್ರಿ ದೀಪಕ್ಕೆ ಪೂಜೆ ಮಾಡಬೇಕು. ದೀಪವು ಬೆಳಕು ಮತ್ತು ಜ್ಞಾನದ ಸಂಕೇತ. ಬೆಳಕು ಎಲ್ಲರಿಗೂ ಬೇಕು. ಎಲ್ಲ ಧರ್ಮದವರಲ್ಲೂ ಕ್ಯಾಂಡಲ್ ಹಚ್ಚುವುದು, ದೀಪ ಹಚ್ಚುವ ಪದ್ಧತಿ ಇದೆ. ದೇವರ ಪೂಜೆ ಅಥವಾ ಏನಾದರೂ ಕೇಳಿಕೊಳ್ಳುವುದಾದರೆ ದೀಪ ಹಚ್ಚುತ್ತಾರೆ. ದೀಪದ ಬಗ್ಗೆ ‘ಹರಿಹರೇಶ್ವರ’ ಹೀಗೆ ಹೇಳುತ್ತಾರೆ.
ಬಾ ಬೆಳಕೆ, ಕಾಪಾಡು; ಹೃದಯದಲಿ ತಳವೂರು
ಕತ್ತರಿಸಿ, ಕಿತ್ತೊಗೆದು ಅಜ್ಞಾನ ಜಡತೆಯ ಬೇರು;
ಛಲ ಕೋಪ ಅತಿ ಆಸೆ ಅಸೂಯೆ ಕತ್ತಲ ತೌರು
ತಲೆಯೆನ್ನದಾಗಿಸದಂತೆ ಪ್ರಭಾವವನು ಬೀರು;
ತೆರೆಸಿ ಕಣ್ಣನು, ತೋರು
ಕತ್ತಲಲಿ ಕಳೆದುಳಿದ ಗುರುತಿಸದ ಮೇರು;
ಅರಳಿಸೆನ್ನಂಗಳದಿ ಸ್ನೇಹಸುಮಗಳ ನೂರು;
ಅನುದಿನವೂ ನಡೆ ನುಡಿಯಲೆಳೆದು ತಿಳಿವಿನ ತೇರು,
ಗಡಿಯ ದಾಟುವ ಸುಳಿವ ನೀಡು, ಕೃಪೆದೋರು!

ದೀಪದ ಬಗ್ಗೆ, ಬೆಳಕಿನ ಬಗ್ಗೆ ಹರಿ ಬರೆದ ಪದ್ಯದ ಬಗ್ಗೆ ಚಿಂತಿಸ್ತಾ ಇದ್ದಾಗ ಅಮೆರಿಕಾದಿಂದ ಮಗಳ ಫೋನ್ ಬಂತು.
“ಹಲೋ” ಎಂದೆ.
“ನಾನು ನವಿಲು, ಏನ್ ಮಾಡ್ತಾ ಇದ್ದಿ ಅಮ್ಮ?” ಅಂದಳು.
“ಭೀಮನ ಅಮಾವಾಸ್ಯೆ ಅದೇ ಕಣೆ ಹಸ್ಬೆಂಡ್ ಪೂಜೆ” ಬಗ್ಗೆ ಯೋಚಿಸ್ತಾ ಇದ್ದೆ.
“ಅಮ್ಮ ನೀನು ಪ್ರತಿವರ್ಷ ಈ ವಿಷಯ ಹೇಳ್ತಾ ಇರ‍್ತೀಯಾ. ಆದ್ರೆ ನನಗನ್ನಿಸುತ್ತೆ ಹೆಂಗಸರೆ ಯಾಕೆ ಗಂಡನ ಪೂಜೆ ಮಾಡ್ಬೇಕು? ಗಂಡಸರಿಗೆ ಹೆಂಡ್ತಿ ಪೂಜೆ ಮಾಡೋ ಯಾವ ವ್ರತ ಇದೆ? ನಮಗೆ ಒಳ್ಳೆಯ ಗೆಳೆಯ ಸಿಗಬೇಕು ಅನ್ನೋ ಹಾಗೆ ಅವರ‍್ಗೂ ಒಳ್ಳೆ ಗೆಳತಿ ಸಿಗಲಿ ಅಂತ ಆಸೆ ಇರಲ್ವೆ”
ಅವಳ ಪ್ರಶ್ನೆಗಳಿಗೆ ನನಗೆ ತಕ್ಷಣ ಉತ್ತರಿಸಲಾಗಲಿಲ್ಲ. ಅವಳು ಹೇಳೋದೆಲ್ಲ ಸರಿ ಅನ್ನಿಸಿತು. ಮನು ಧರ್ಮಶಾಸ್ತ್ರವನ್ನು ಗಂಡಸರೇ ಬರ‍್ದಿದ್ರಿಂದ ಬರೀ ಹೆಂಗಸರ ಮೇಲೆ ಅಧಿಕಾರ ಚಲಾಸ್ತಾರೆ. ತಲೆಯಲ್ಲಿ ಆ ಪೂಜೆಯ ಕಥೆ ಉಕ್ಕಿ ಉಕ್ಕಿ ಬರುತ್ತಿತ್ತು.
ಒಬ್ಬ ಬಡವ ತನ್ನ ಐದು ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ರಾಜನ ಮಗನ ಶವಕ್ಕೆ, ಒಂದು ಲಕ್ಷ ರೂಪಾಯಿ ಹಣ ತೆಗೆದುಕೊಂಡು ಮದುವೆಮಾಡಿಕೊಡುತ್ತಾನೆ. ಆ ಹುಡುಗಿ ಸ್ಮಶಾನದಲ್ಲಿ ಮಣ್ಣಿನಲ್ಲಿ ದೀಪಮಾಡಿ, ನಾರಿನ ಬತ್ತಿ ಮಾಡಿ ನೀರನ್ನೇ ಎಣ್ಣೆಯನ್ನಾಗಿ ಮಾಡಿ, ಪತ್ರಂ, ಪುಷ್ಪಂ, ಫಲಂ, ತೋಯಂ(ನೀರು) ಭಕ್ತಿಯಿಂದ ಶ್ರದ್ಧೆಯಿಂದ ಪೂಜೆ ಮಾಡಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡು, ತನ್ನ ಗಂಡನನ್ನು ಬದುಕಿಸಿಕೊಳ್ಳುತ್ತಾಳೆ ಇದು ಕಥೆ. ಆದರೆ ಈ ವೈಜ್ಞಾನಿಕ ಯುಗದಲ್ಲಿ ಬೆಳೆಯುತ್ತಿರುವ ನಮ್ಮ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸೋದು ತುಂಬಾ ಕಷ್ಟ. ಈ ವಿಷಯ ಅವಳ ಹತ್ರ ಮಾತಾಡ್ತಾ ಇದ್ದಾಗ..
ಅವಳೇ, “ಅಮ್ಮಾ ನೀನು ಕ್ರಯಾನಿಕ್ಸ್ ಬಗ್ಗೆ ಕೇಳಿದಿಯಾ ಓದಿದಿಯಾ?” ಅಂದ್ಲು.
ನನಗೆ ಪ್ರಜಾವಾಣಿಯಲ್ಲಿ ಬಂದಿದ್ದ ಶ್ರೀ ನಾಗೇಶ್ ಹೆಗಡೆ ಅವರ ಮೈಮನಗಳನ್ನು ಮರಗಟ್ಟಿಸುವ ಕ್ರಯೊನಿಕ್ಸ್ ತಂತ್ರ (ಶೀತ ವಿಜ್ಞಾನ) ಲೇಖನ ನೆನಪಿಗೆ ಬಂತು.
“ಜುಲೈ ೨೩ ರಂದು ರಾಬರ್ಟ್ ಎಂಟ್ವಿಜರ್ ಗತಿಸಿದ. ಆತನ ಮೃತದೇಹದ ಎದೆಯ ಮೇಲೆ ವೈರು ಎಚ್ಚೆಲ್ಲಾರ್ ಯಂತ್ರವನ್ನು ಹೊಂದಿಸಿ ಸ್ವಿಚ್ ಹಾಕಿದರು. ಯಂತ್ರದ ಮೆತ್ತನೆ ಒತ್ತು ಮಣಿ ಮೇಲಕ್ಕೆ ಕೆಳಕ್ಕೆ ಚಲಿಸದಂತೆ ಶ್ವಾಸಕೋಶ ಕೃತಕವಾಗಿ ಉಬ್ಬುತ್ತ ಇಳಿಯುತ್ತೆ ಉಸಿರಾಟ ಮತ್ತೆ ಆರಂಭವಾಯಿತು.
ಹಾಗೇನೆ ಆ ಕಥೆಯಲ್ಲಿರುವ ರಾಜನ ಮಗನ ದೇಹ ಶೈತಾಂಶದಲ್ಲಿತ್ತು ಅಂತ ಕಾಣುತ್ತೆ. ಅಥವಾ ಅವನು ಪೂರ್ಣ ಸತ್ತಿಲ್ಲದೇ ಹೋಗಿರಬಹುದು. ಅಂದಿನ ದಿನಗಳಲ್ಲಿ ಕೋಮಕ್ಕೆ ಹೋಗಿದ್ದಿರಬಹುದು ಗೊತ್ತಿಲ್ಲ. ಈ ಕಥೆಗೆ ಪತಿ ಸಂಜೀವಿನಿ ವ್ರತ ಎಂಬ ಹೆಸರು ಬಂದಿದೆ. ಸಂಜೀವಿನಿ ಗಿಡ ಮೂಲಿಕೆಗಳಿಂದ ಬೇಕಾದಷ್ಟು ಪ್ರಾಣಿ ಪಕ್ಷಿಗಳು ಬದುಕಿ ಉಳಿದಿರುವ ನಿದರ್ಶನಗಳಿವೆ. ಸಂಜೀವಿನಿ ಎಂದರೇನೆ ಎಂತಹ ಮೃತ್ಯುವಿಗಾದರೂ ಮದ್ದು ಎಂದರ್ಥ ಸಂಜೀವಿನಿ ಪ್ರಾಶನದಿಂದ, ಲೇಪನದಿಂದ ಸತ್ತವರು ಎದ್ದುಬಂದಿರುವ ಕಥೆಗಳು ನಮ್ಮ ಪುರಾಣ ಇತಿಹಾಸಗಳಲ್ಲಿ ಬೇಕಾದಷ್ಟಿದೆ. ಸ್ವಲ್ಪ ಬಿಸಿ ತಗಲಿ ಹೋಮಕ್ಕೆ ಏನಾದ್ರೂ ಮೆಡಿಸನಲ್ ವ್ಯಾಲ್ಯೂ ಇರುವ ಗಿಡಮೂಲಿಕೆಗಳನ್ನು ಹಾಕಿ ಆ ಶವವಾಗಿದ್ದ ದೇಹ ಬದುಕಿ ಬಂದಿರಬಹುದು. ಅದೊಂದು ಮಿರಾಕಲ್ ಆಗಿರಬಹುದು. ಅದೊಂದು ಕಾಕತಾಳಿಯ ಅಷ್ಟೆ. ಅಥವಾ ಭಾರತದಲ್ಲಿ ಆಗಲೇ ಕ್ರಯೋನಿಕ್ಸ್ ಪದ್ಧತಿ ಕೆಲವರಿಗೆ ತಿಳಿದಿತ್ತಾ ಹೇಗೆ?” ಎಂದಳು.
ಈ ಬಗ್ಗೆ ಚರ್ಚೆ ಮಾಡ್ತಾ ಮಾಡ್ತಾ ಇರುವಾಗ “ಓ ಅಮ್ಮಾ ನಿನ್ನ ಹತ್ರ ಹರಟುತ್ತಾ ಕೂತ್ರೆ ನನಗೆ ಮೆಟ್ರೊಗೆ ಹೊತ್ತಾಯ್ತು. ನಿನ್ನ ನಂಬಿಕೆ ನಿನಗೆ, ನನ್ನ ದೃಷ್ಟಿ ನನಗೆ, ಮತ್ತೆ ಮಾತಾಡ್ತಿನಿ. ಬರ‍್ತೀನಿ ನಾನು” ಎಂದು ಫೋನ್ ಡಿಸ್ ಕನೆಕ್ಟ್ ಮಾಡಿದ್ಲು.
ನನಗೆ ಆ ತಕ್ಷಣ ಅವಳ ಮಾತಿಂದ ಹೊರಬರಲು ಆಗಲಿಲ್ಲ. ಬಾಲ್ಯದಲ್ಲಿ ನಮ್ಮ ತಂದೆ-ತಾಯಿ ಮನೆಯಲ್ಲಿ ನಾವು ಅಕ್ಕ ತಂಗಿಯರೆಲ್ಲ ಸಂಜೆ ಉಮಾಮಹೇಶ್ವರನ ದೀಪ ಪೂಜೆಮಾಡಿ ದಾರ ಕಟ್ಟಿಕೊಂಡು ರಾತ್ರಿ ದೀಪದ ಅಕ್ಕಪಕ್ಕದಲ್ಲಿ ಮಲಗಲು ಸ್ಪರ್ಧೆ ನಡೆಸುತ್ತಿದ್ದುದು ಕಣ್ಣಮುಂದೆ ನೆನಪಿಗೆ ಬರುತ್ತಿತ್ತು.
ಅನುಭವವು ಸವಿಯು. ಅದರ ನೆನಪು ಮತ್ತೂ ಸವಿಯು.