ಅಮೆರಿಕನ್ನಡ
Amerikannada
ಸಂಸ್ಕೃತಿ ಮತ್ತು ಸಂಬಂಧಗಳ ತೊಳಲಾಟ ‘ಸೆಳೆತ ಮತ್ತು ಮರುಭೂಮಿ’
-ಬಿ.ಆರ್. ನಾಗರತ್ನ, ಮೈಸೂರು

seleta book coverಶ್ರೀಮತಿ ನಾಗಲಕ್ಷ್ಮಿ ಹರಿಹರೇಶ್ವರ ಅಮೆರಿಕದಲ್ಲಿ ಕನ್ನಡ ಓದುಗರನ್ನು ಕಲೆಹಾಕಿ ಅವರೊಡನೆ ಪರಸ್ಪರ ಸಂವಹನ ಬೆಳೆಸಲು ‘ಅಮೆರಿಕನ್ನಡ’ ಎಂಬ ಕನ್ನಡ ದ್ವೈಮಾಸಿಕ ಪತ್ರಿಕೆಯೊಂದನ್ನು ಪತಿಯೊಡನೆ ಹುಟ್ಟುಹಾಕಿ ೧೯೮೪ ರಿಂದ ಹಲವಾರು ವರ್ಷ ತಮ್ಮದೇ ಸಂಪಾದಕತ್ವದಲ್ಲಿ ನಡೆಸಿದ ಸಾಹಸಿ ಮಹಿಳೆ. ಮೊದಲಿನಿಂತಲೂ ಸಾಹಿತ್ಯಾಸಕ್ತರಾಗಿದ್ದ ಇವರಿಗೆ ಪತಿಯ ಸಹಕಾರವೂ ಸೇರಿದ್ದರೂ, ‘ಕಿಶೋರಿ’ ಎಂಬ ಕವಲ ಸಂಕಲನ, ಭಾನುಮತಿ ಎಂಬ ಪ್ರಬಂಧ ಸಂಕಲನ, ‘ಚಿಂತನೆಯ ಅಲೆಗಳು’ ಎಂಬ ವೈಚಾರಿಕ ಲೇಖನಗಳ ಸಂಕಲನಗಳನ್ನು ಸಾಹಿತ್ಯಕ್ಷೇತ್ರಕ್ಕೆ ಕೊಡುಗೆಯಾಗಿತ್ತು ತಮ್ಮ ಸ್ವಂತಿಕೆಯ ನಿಲುವನ್ನು ನಿರೂಪಿಸಿದ್ದಾರೆ. ಈಗಾಗಲೇ ‘ಅಮೆರಿಕನ್ನಡ’ ಪತ್ರಿಕೆಯಲ್ಲಿ ಪ್ರಕಟವಾಗಿ ಅಲ್ಲಿನ ಸಾಹಿತ್ಯಾಸಕ್ತರ ಮನವನ್ನು ಗೆದ್ದಿರುವ ‘ಸೆಳೆತ ಮತ್ತು ಮರುಭೂಮಿ’ ಎಂಬ ನೀಳ್ಗತೆಗಳನ್ನು ಕನ್ನಡನಾಡಿನಲ್ಲಿರುವ ಸಾಹಿತ್ಯಾಸಕ್ತರಿಗೆ ಉಣಬಡಿಸಲು ಬಿಡುಗಡೆಗೆ ಸಿದ್ಧಪಡಿಸಿದ್ದಾರೆ.
‘ಸೆಳೆತ’ ಕತೆ ವಿವಾಹಿತ ಸ್ತ್ರೀ ಸುಬ್ಬಮ್ಮ ಅಲ್ಪಕಾಲದ ನಂತರ ವಿಧವೆಯಾಗಿ ಒಂಟಿತನವನ್ನು ಅನುಭವಿಸುವ ಜೊತೆಗೆ ಅತೃಪ್ತ ಕಾಮಲಾಲಸೆಯನ್ನು ವಿಕೃತಕೃತ್ಯಗಳಿಂದ ಶಮನಗೊಳಿಸಿಕೊಳ್ಳುವ ಮನೋವಿಕಲ್ಪದ ಸುತ್ತ ವ್ಯಾಪಿಸಿದೆ. ಸಾಂಪ್ರದಾಯಿಕ ಸಮಾಜದಲ್ಲಿ ವಿಧವೆಯ ಮರುಮದುವೆಗೆ ಅವಕಾಶಗಳು ಕಡಿಮೆ. ಅಂತಹ ಸಂದರ್ಭದಲ್ಲಿ ಕಾಮದ ಸೆಳೆತ ಅವಳನ್ನು ದಾರಿತಪ್ಪಿಸುವ ಸಾಧ್ಯತೆಗಳಿಗೆ ಒಡ್ಡುತ್ತದೆ. ಬೇರೆ ಪುರುಷರ ಸಂಗವನ್ನು ಅನೈತಿಕವೆಂದು ಪರಿಗಣಿಸುವುದರಿಂದ ಆಕೆ ಮನೆಯ ಆವರಣದೊಳಗೆ ಸಾಧ್ಯತೆಗಳನ್ನು ಹುಡುಕುತ್ತಾಳೆ. ಅಂತಹ ಅವಕಾಶ ತಾನಾಗಿಯೇ ತನ್ನ ಅಕ್ಕನ ಮಕ್ಕಳಲ್ಲಿ ಒದಗಿ ಬರುತ್ತದೆ. ಮಕ್ಕಳು ಮುಗ್ಧರು. ಅವರಿಗೆ ಸಭ್ಯ, ಅಸಭ್ಯ ವರ್ತನೆಗಳ ಬಗ್ಗೆ ವಿವೇಚನೆಯಿರದು. ಚಿಕ್ಕಮ್ಮನ ಬೆದರಿಕೆ ತಾವು ಬೇರೆ ಹಿರಿಯರಿಗೆ ಏನಾದರೂ ಹೇಳಿದರೆ ಅವರು ನಂಬುತ್ತಾರೆಯೇ ಎಂಬ ಶಂಕೆ ಅವರನ್ನು ಮೌನಕ್ಕೆ ಶರಣಾಗಲು ಕಾರಣಗಳೆಂದು ಲೇಖಕರ ಅಭಿಪ್ರಾಯ. ಇಂತಹ ಶೋಷಣೆಯಿಂದ ಅಕ್ಕನ ನಾಲ್ಕು ಗಂಡುಮಕ್ಕಳಲ್ಲಿ ಒಬ್ಬ ಮೂರ್ಛೆರೋಗಗ್ರಸ್ಥನಾಗಿ ಅಕಾಲಮರಣ ಹೊಂದಿದರೆ, ಮತ್ತೊಬ್ಬ ಬುದ್ಧಿಮಾಂದ್ಯತೆ ಹೊಂದುತ್ತಾನೆ. ಇವೆಲ್ಲಕ್ಕೂ ಮೂಲಕಾರಣ ಚಿಕ್ಕಮ್ಮನ ವಿಕೃತಕ್ರಿಯೆ ಎಂಬ ಅಭಿಪ್ರಾಯ ಬಲವಾಗಿ ತಾನು ಅಮ್ಮ ಚಿಕ್ಕಮ್ಮನಿಂದ ದೂರ ಉಳಿಯುತ್ತಾನೆ ಕೊನೆಯ ಮಗ ರಾಜ. ಇದು ಇಷ್ಟಕ್ಕೆ ನಿಲ್ಲದೆ ಆ ಕುಟುಂಬದ ಒಬ್ಬಳೇ ಮಗಳ, ಮಕ್ಕಳ ಮೇಲೂ ಮುಂದುವರೆಯುತ್ತದೆ. ಆ ಮಕ್ಕಳು ಅಜ್ಜಿಯ ಮನೆಗೆ ಬಂದಾಗ ಇಬ್ಬರೂ ಮೊಮ್ಮಕ್ಕಳಲ್ಲಿ ಒಬ್ಬನನ್ನು ತನ್ನ ಲೈಂಗಿಕ ಸೆಳೆತಕ್ಕೆ ಬಳಸಿಕೊಳ್ಳಲು ಪ್ರಾರಂಭಿಸುತ್ತಾಳೆ. ಈ ವರ್ತನೆಯ ಹಿನ್ನೆಲೆ ಅರಿತ ನಾಗರಾಜ ತನ್ನ ತಂಗಿಯ ಮಗನನ್ನು ಉಳಿಸಿಕೊಳ್ಳಲು ಮನಃಶಾಸ್ತ್ರಜ್ಞರ ಹತ್ತಿರ ಎಲ್ಲವನ್ನು ಹೇಳುತ್ತಾನೆ. ಮನೆಯವರಲ್ಲಿ ಮತ್ಯಾವ ಹಿರಿಯರಿಗೂ ಈ ವಿಚಿತ್ರ ವರ್ತನೆ ತಿಳಿದಿರಲಿಲ್ಲವೆಂಬ ಅಂಶ ಆಶ್ಚರ್ಯಕರವಾಗಿದೆ.
ವಿಕೃತ ವರ್ತನೆಯನ್ನು ತೋರುವ ಸುಬ್ಬಮ್ಮನಿಗೆ ಮನಶಾಸ್ತ್ರಜ್ಞರ ಸಲಹೆ, ಚಿಕಿತ್ಸೆ ಅತ್ಯವಶ್ಯಕವಾದರೂ ಅವರು ವೈದ್ಯರನ್ನು ಎಂದೂ ಭೇಟಿ ಮಾಡುವುದಿಲ್ಲ. ಸಮಸ್ಯೆಗೆ ಪರಿಹಾರವಾಗಿ ನಾಗರಾಜ ತಾನೇ ತಂಗಿಯ ಗಂಡನಿಗೆ ಮಕ್ಕಳನ್ನು ಯಾವುದೇ ಕಾರಣಕ್ಕೂ ಅಜ್ಜಿ ಮನೆಯಲ್ಲಿ ಬಿಟ್ಟುಹೋಗಬೇಡಿ ಎಂಬ ಸಲಹೆ ನೀಡಿದಲ್ಲಿಗೆ ಕತೆಯನ್ನು ಮುಕ್ತಾಯಗೊಳಿಸಲಾಗಿದೆ. ಸಮಸ್ಯೆಯ ಆಳಕ್ಕೆ ಹೋಗಿ ಪರಿಹಾರ ಕಂಡುಹಿಡಿದು ನಿಜವಾಗಿ ವಿಕೃತಮನಸ್ಸಿನ ರೋಗಿಗೆ ಖಚಿತ ಚಿಕಿತ್ಸೆ ನೀಡುವಂತೆ ಮಾಡಿದ್ದರೆ ಇನ್ನೂ ಉತ್ತಮ ಮುಕ್ತಾಯವಾಗಬಹುದಿತ್ತು. ಕಥಾವಸ್ತುವಿನ ಆಯ್ಕೆ ಚೆನ್ನಾಗಿದ್ದರೂ, ಕತೆಯ ಬೆಳವಣಿಗೆ ಪೇಲವವಾಗಿ ಮುಕ್ತಾಯ ದಿಢೀರ್ ಎಂಬಂತಾಗಿದೆ ಎನ್ನಿಸುತ್ತದೆ.
ಈ ಸಂಕಲನದ ಎರಡನೇ ಕತೆ ‘ಮರುಭೂಮಿ’ ಬೆಳೆದ ಹೆಣ್ಣಿಗೆ ವಿವಾಹವನ್ನು ಸಕಾಲದಲ್ಲಿ ಮಾಡಬೇಕೆಂಬುದು ಮಾತಪಿತೃಗಳ ಮಹದಾಸೆ. ಅದರಲ್ಲೂ ಮಧ್ಯಮವರ್ಗದ ಕುಟುಂಬದಲ್ಲಿನ ಗಂಡನನ್ನು ಕಳೆದುಕೊಂಡ ಒಂಟಿ ಮಹಿಳೆ ತನ್ನ ಮಗಳ ಕಲ್ಯಾಣ ಮಾಡಲು ಹಪಹಪಿಸುವುದು ಸಹಜ. ಈ ಕಥೆಯಲ್ಲಿ ಅಂತಹುದೇ ಒಬ್ಬ ಮಹಿಳೆ ತನ್ನ ಮಗಳಿಗೆ ವರಾನ್ವೇಷಣೆಯಲ್ಲಿ ತೊಡಗಿದಾಗ ಯಾವುದೇ ಅನುಕೂಲಕರ ಸಂಬಂಧ ಒದಗದೆ ಒದ್ದಾಡುತ್ತಿರುತ್ತಾಳೆ. ಆ ಸಮಯದಲ್ಲಿ ಆಕಾಶದಲ್ಲಿ ಮೂಡಿಬಂದಂತೆ ವಿದೇಶದಲ್ಲಿ ನೆಲೆಸಿ ಉತ್ತಮ ಹುದ್ದೆಯನ್ನಲಂಕರಿಸಿದ್ದ ‘ವರ’ ಸ್ವಲ್ಪ ವಯಸ್ಸಾದವನಾದರೂ ಮನೆ ಬಾಗಿಲಿಗೆ ಕನ್ಯಾಕಾಂಕ್ಷಿಯಾಗಿ ಬರುತ್ತಾನೆ. ಅನಿರೀಕ್ಷಿತವೆಂಬಂತೆ ಮಗಳ ಬಾಲ್ಯಗೆಳತಿಯ ಆಗಮನವಾಗುತ್ತದೆ. ಯಾವ ಬೇಡಿಕೆ ಇಲ್ಲದೆ ಸರಳ ವಿವಾಹಕ್ಕೆ ಸಮ್ಮತಿಯಿತ್ತ ಗಂಡಿನ ಕಡೆಯವರು ಕಡಿಮೆ ಅವಧಿಯಲ್ಲೇ ವಿವಾಹಕಾರ್ಯ ಮುಗಿಸಿ ಬಿಡಲು ಹೇಳುತ್ತಾರೆ. ಇವೆಲ್ಲದರಿಂದ ಬೀಗಿದ ತಾಯಿ ಮಗಳನ್ನು ಅಮೆರಿಕಾ ವರನಿಗಿತ್ತು ಕೃತಾರ್ಥಳಾಗುತ್ತಾಳೆ. ವಿವಾಹದ ಕನ್ಯೆ ಅದೇ ಬಾಲ್ಯದ ಗೆಳತಿಯ ಸಹಾಯದಿಂದ ವೀಸಾ ಪಡೆದು ಅಮೆರಿಕಾಕ್ಕೆ ಹಾರುತ್ತಾಳೆ. ನವಜೀವನದ ಹೊಂಗನಸನ್ನು ಹೊತ್ತು ಬಂದ ಅವಳಿಗೆ ತನ್ನ ಬಾಳಸಂಗಾತಿಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ ಎಂಬ ಸಂಗತಿ ಸಿಡಿಲೆರಗಿದಂತಾಗುತ್ತದೆ. ಅಲ್ಲದೆ ತನ್ನ ಗಂಡ ತನ್ನ ತಂದೆತಾಯಿಗಳ ಒತ್ತಾಯಕ್ಕೆ ಮಣಿದು ನನ್ನನ್ನು ವರಿಸಿದ್ದಾನೆಂಬ ಅಂಶ ತಿಳಿದು ನಿರಾಸೆಯ ಮಡುವಿನಲ್ಲಿ ಬೀಳುತ್ತಾಳೆ. ಹೆಚ್ಚಿನ ವಿದ್ಯಾಭ್ಯಾಸ ಹೊಂದಿಲ್ಲದೆ ಆಕೆ ಪರಿಹಾರ ಕಂಡುಕೊಳ್ಳಲಾಗದೆ ಕಂಗಾಲಾಗುತ್ತಾಳೆ. ಆದರೂ ತನಗೆ ಬರುತ್ತಿದ್ದ ಹರಕು, ಮುರುಕು ಆಂಗ್ಲ ಪದಗಳಿಂದ ನೆರೆಮನೆಯ ಹೆಂಗಸಿನ ಸಹಾಯ ಪಡೆದು ಅಮೆರಿಕದಲ್ಲಿ ನೆಲೆಸಿದ್ದ ಗೆಳತಿಯ ಸಂಪರ್ಕ ಪಡೆಯುವುದರಲ್ಲಿ ಯಶಸ್ವಿಯಾಗುತ್ತಾಳೆ. ಆ ಬಾಲ್ಯದ ಗೆಳತಿ ಅವಳ ಕುಟುಂಬದ ನೆರವಿನಿಂದ ತನ್ನ ಜೀವನಕ್ಕೆ ಮರು ಚೇತನವನ್ನು ಪಡೆಯುವುದರಲ್ಲಿ ಸಫಲಳಾಗುತ್ತಾಳೆ.
ಕತೆಯ ವಸ್ತು ಚೆನ್ನಾಗಿದೆ. ವಿದೇಶಿ ‘ಗ್ರೀನ್ ಕಾರ್ಡ್’ ವರಗಳ ಬೆನ್ನು ಹತ್ತುವ ಕನ್ಯೆಯರ ಸಂಖ್ಯೆ ಈಗ ಹೆಚ್ಚಾಗಿದ್ದು ಈ ರೀತಿಯ ಬೇಸ್ತು ಪ್ರಕರಣಗಳು ಹತ್ತು ಹಲವು ಕಣ್ಣಮುಂದಿವೆ. ಪೂರ್ವಾಪರ ವಿವೇಚನೆ, ವಿವರಗಳನ್ನು ಖಚಿತಪಡಿಸಿಕೊಳ್ಳದೇ ಮುಂದುವರೆದು ಈ ರೀತಿ ತೊಂದರೆಗಳಿಗೆಡೆಕೊಡಬೇಡಿ ಎಂಬ ಎಚ್ಚರಿಕೆ ಇಲ್ಲಿದೆ. ಲೇಖಕರು ಹಲವಾರು ವರ್ಷ ಅಮೆರಿಕೆಯಲ್ಲಿ ವಾಸವಾಗಿದ್ದು ದಾಂಪತ್ಯ ಸಮಸ್ಯೆಗಳಿಗೆ ಸಲಹೆಗಳನ್ನು ನೀಡುತ್ತಿದ್ದರೆಂಬುದರ ಹಿನ್ನೆಲೆಯಲ್ಲಿ ಈ ಕಥಾವಸ್ತು ಅತ್ಯಂತ ಸೂಕ್ತವಾಗಿದೆ.
ಹಿಂದುಮುಂದು ಯೋಚಿಸದೇ ಮುನ್ನುಗ್ಗಿದರೆ ನಿಮ್ಮ ಜೀವನ ಮರುಭೂಮಿಯಾಗುವುದರಲ್ಲಿ ಎರಡು ಮಾತಿಲ್ಲ ಎಂಬ ಧ್ವನಿ ಪರಿಣಾಮಕಾರಿಯಾಗಿ ಮೂಡಿಬಂದಿದೆ.