ಅಮೆರಿಕನ್ನಡ
Amerikannada
ತಪ್ಪಾದೀತೆಂದು ಮಾತಾಡುವುದನ್ನೇ ನಿಲ್ಲಿಸಬೇಡಿ!
-ಶಿಕಾರಿಪುರ ಹರಿಹರೇಶ್ವರ
ಈ ಲೇಖನವನ್ನು ನಾನು ಬರೆಯುವಾಗ, ಯಾರಿಗಾದರೂ ಅವಹೇಳನ ಕರವಾಗಿ, ವ್ಯಂಗ್ಯವಾಗಿ ಬರೆದು, ವಿಡಂಬನೆ ಮಾಡಿ, ಕುಚೋದ್ಯ ಮಾಡಲಾಗಲೀ, ಅವಮಾನಿಸಿ ಅಪಮಾನಿಸಲಿಕ್ಕಾಗಲೀ ಖಂಡಿತಾ ಬರೆದುದಲ್ಲ- ಎಂಬುದನ್ನ ಪ್ರಾರಂಭದಲ್ಲೇ ನಿರಾಕರಣೆ (ಡಿಸ್‌ಕ್ಲೈಮರ್) ಥರಾ ನಮೂದಿಸಿ ಮುಂದುವರೆಯುತ್ತೇನೆ. ಏಕೆಂದರೆ, ಉದ್ದೇಶ ಉತ್ತಮವಾಗಿದ್ದರೂ, ಇದರ ವಿಷಯವೇ ಹಾಗೊಂದು ತಪ್ಪು ಅರ್ಥಕ್ಕೆ ಎಡೆಮಾಡಿಕೊಡುವ ಸಂಭವವಿದೆ. ಇದು, ಕುಚೋದ್ಯದ ಲಘುವಾದ ವಿಷಯ ಅಲ್ಲ; ನಾವೆಲ್ಲರೂ ಕನ್ನಡದಲ್ಲಿ ಮಾತನಾಡುವಾಗ ಉಚ್ಚಾರಣೆಯ ಬಗ್ಗೆ ನಮಗೆ ಆಗಬಹುದಾದ, ಕೆಲವರಿಗೆ ಆಗಿಯೇ ಆಗುವ, ತೊಂದರೆಯನ್ನು ಕುರಿತು ಒಂದು ಸರಳ ಪರಿಹಾರ ಸೂತ್ರದ ಪ್ರಯತ್ನ ಅಷ್ಟೆ. ಕನ್ನಡದ ಬರವಣಿಗೆಯಲ್ಲಿ ಸಾಮಾನ್ಯವಾಗಿ ನಮಗೆ ಏನೂ ತೊಂದರೆ ತಲೆದೋರುವುದಿಲ್ಲ (ಅಲ್ಲೂ ಆಗಾಗ್ಗೆ ಕೆಲವೆಡೆ ಕಾಗುಣಿತದ ಅನುಮಾನದ ಸಮಸ್ಯೆಗಳಿವೆ, ಅದರ ಬಗ್ಗೆ ಆಮೇಲೆ ಯೋಚನೆ ಮಾಡೋಣ); ಆದರೆ ಮಾತನಾಡುವಾಗ, ಅದೂ ಭಾಷಣ ಮಾಡಬೇಕಾದಾಗ ನಮ್ಮನ್ನು ಕಾಡುವ ಕೆಲವು ಪ್ರಶ್ನೆಗಳು, ಇದಕ್ಕೆ ಪರಿಹಾರ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ನಮ್ಮನ್ನು ಅಧೀರರನ್ನಾಗಿ ಮಾಡಿಬಿಡುತ್ತವೆ. ಹಾಗಾಗಿ, ಕೆಲವರು ಕನ್ನಡಿಗ ಮುಖಂಡರು “ಇಂಗ್ಲೀಷಿನಲ್ಲಿ ಮಾತನಾಡುವುದೇ ತಮಗೆ ಕ್ಷೇಮ೦ಕರ”- ಎಂದು ಸೀರೆಯುಟ್ಟ ಸುಲಕ್ಷಣೆ ಕನ್ನಡತಿಯನ್ನು ಬಿಟ್ಟು, ಲಂಗ ತೊಟ್ಟ ಮಂಗಳಾಂಗಿಯ ಕಡೆ ಒಲವು ತೋರುವುದುಂಟು. ಕನ್ನಡಕ್ಕಿಂತ ಇಂಗ್ಲೀಷಿನಲ್ಲಿ ಮಾತನಾಡುವುದೇ ನನಗೆ ಸೌಕರ್ಯ, ಅನುಕೂಲ, ಹಿತಕರ, ಸಮಾಧಾನಕರ- ಕಂಫರ್ಟಬಲ್- ಎಂದು ಜಾರಿ ಬಿಡುತ್ತಾರೆ. ಅ೦ಥವರನ್ನ ಅತ್ತ ಹೋಗುತ್ತಿರುವವರನ್ನ, ಬೇಲಿಯ ಮೇಲೆ ಕುಳಿತವರನ್ನ ಮತ್ತೆ ಇತ್ತ ಸೆಳೆವುದು ಸಾಧ್ಯವೇ- ಎಂಬುದೇ ಈಗ ನಮ್ಮ ಮುಂದಿರುವ ಮುಖ್ಯ ಪ್ರಶ್ನೆ.
ಮೊದಲೇ ಮುಚ್ಚುಮರೆಯಿಲ್ಲದೆ, ಒಪ್ಪಿಕೊಂಡು ಬಿಡೋಣ: ಚಿಕ್ಕಂದಿನಲ್ಲಿ ನಾವು ಬೆಳೆದ ವಾತಾವರಣಕ್ಕೆ ಅನುಗುಣವಾಗಿ ನಮ್ಮ ಭಾಷಾ ಉಚ್ಚಾರಣಾ ಶುದ್ಧಿ, ಆಮೇಲೆ ಶಾಲೆಯಲ್ಲಿ, ಗೆಳೆಯ ಗೆಳತಿಯರೊಡನೆ ಆಟ ಪಾಠಗಳಲ್ಲಿ, ಮೌಖಿಕವಾಗಿ ತೊಡಗಿದ್ದಾಗ ಅದಕ್ಕಾದ ಪೋಷಣೆ, ಆಮೇಲೆ ನಮ್ಮ ಓದಿನ ಹರವು ವಿಸ್ತರಿಸಿದಂತೆಲ್ಲ, ಮನೆಯ ಹೊಸಿಲನ್ನು ದಾಟಿ ಹೊರಬಂದಂತೆಲ್ಲ ನಾವಾಡುವ ಮಾತಿನ ರೀತಿ ನೀತಿ ಪ್ರಯೋಗಗಳಲ್ಲಿ ಪರಿಣತಿ- ಹೀಗೆ ನಾವು ಬೆಳೆದಂತೆಲ್ಲ ನಮ್ಮೊಡನೆ ನೆರಳಾಗಿ ನಮ್ಮ ಆಡುನುಡಿಯೂ ರೂಪುಗೊಂಡಿತು, ಬೆಳೆಯಿತು.
ಕೆಲವರಿಗೆ ಅನಾಯಾಸವಾಗಿ ಅವಕಾಶಗಳು ದೊರಕಿದ್ದವು, ಕೆಲವರು ಕಷ್ಟಪಟ್ಟು ಅವನ್ನು ಗಳಿಸಿಕೊಳ್ಳಬೇಕಾಯಿತು- ಆ ಮಾತು ಇಲ್ಲಿ ಬೇಡ. ಈಗ ರಣರಂಗದಲ್ಲಿ ಇದ್ದೇವೆ, ಯುದ್ಧ ಇನ್ನೇನು ಶುರುವಾದೀತು. ಹೇಳಿ, ನಿಮ್ಮ ಬಳಿ ಯಾವ ಯಾವ ಬಗೆಯ ಕೂರಂಬುಗಳು, ಅಸ್ತ್ರ ಶಸ್ತ್ರಗಳು ಬತ್ತಳಿಕೆಯಲ್ಲಿವೆ? ಮಾತನಾಡುವ ರೀತಿ, ಬಳಸುವ ಶಬ್ದಸಂಪತ್ತೇ ವ್ಯಕ್ತಿತ್ವದ ಒಂದು ಛಾಪು, ಮೊಹರು, ಪ್ರಭಾವ ಸೃಷ್ಟಿ (ಇಂಪ್ರೆಷನ್ ಕ್ರಿಯೇಟ್) ಮಾಡಿಬಿಡುತ್ತದೆ- ಎಂಬ ಭಾಸ ಹೆಚ್ಚೂ ಕಡಿಮೆ ಸತ್ಯವೇ. ಕವಚವನ್ನಷ್ಟೇ ನೋಡಿ, ಹೂರಣ ಹೇಗಿರಬಹುದೆಂದು ಊಹಿಸಿ ಮೋಸ ಹೋಗಬೇಡಿ- ಎ೦ಬ ಮಾತೂ ನಿಜವೇ.
ಹೀಗೆ ಅಂದುಕೊಳ್ಳೋಣ: ನಮ್ಮಲ್ಲಿ ಬಹಳ ಮಂದಿಗೆ ಕನ್ನಡದಲ್ಲಿ ಆಗುವ ಉಚ್ಚಾರಣೆಯ ತೊಂದರೆ ಎಂದರೆ ಅದೇ, ಅ ಮತ್ತು ಹ- ಕಾರದ ಪಲ್ಲಟನೆ. ಪದಗಳ ಪ್ರಾರಂಭದಲ್ಲಿ ಈ ಅಕ್ಷರ ಇದ್ದರೆ, ಅದಕ್ಕೆ ಇದು, ಇದಕ್ಕೆ ಅದು- ಅಕಾರಕ್ಕೆ ಹಕಾರ, ಹಕಾರಕ್ಕೆ ಅಕಾರ- ಹೇಳುವ ಸಮಸ್ಯೆ, ಹೇಳಿ ಬಿಡುವ ಸಾಧ್ಯತೆ ಇದ್ದೀತು. ಇದಕ್ಕೆ ಒಂದು ಸುಲಭ ಪರಿಹಾರೋಪಾಯ ಹೇಳುತ್ತೇನೆ, ಪ್ರಯತ್ನಿಸಿ:
ಒಂದು ಸಮಾನಾರ್ಥಕ ಪದಕೋಶವನ್ನು ನೀವೇ ತಯಾರಿಸಿಕೊಳ್ಳಿ. ಮಾತನಾಡುವಾಗ ನೀವು ಸಾಮಾನ್ಯವಾಗಿ ಬಳಸುವ ಮುಖ್ಯ ಪದಗಳನ್ನು ಅಲ್ಲಿ ಪಟ್ಟಿಮಾಡಿಕೊಳ್ಳಿ. ಆ ಪಟ್ಟಿಯಲ್ಲಿ ಅಆಇಈಉಊಒಓ- ಕಾರದಿಂದ ಮತ್ತು ಹಕಾರದಿಂದ ಪ್ರಾರಂಭವಾಗುವ ಪದಗಳ ಮೇಲೆ ಕಣ್ಣಾಡಿಸಿರಿ. ಅದೇ ಅರ್ಥ ಕೊಡುವ, ಬೇರೆ ಬೇರೆ ಅಕ್ಷರಗಳಿಂದ ಪ್ರಾರಂಭವಾಗುವ ಬೇರೆ ಕನ್ನಡ ಪದಗಳನ್ನ ಆ ನಿಮ್ಮ ಸಮಾನಾರ್ಥಕ ಪದಕೋಶದಲ್ಲಿ ಗುರುತು ಹಾಕಿಕೊಂಡಿದ್ದೀರಿ ತಾನೆ. ಅವನ್ನು ಬಳಸಿದರಾಯಿತು. ಸಮಸ್ಯೆ ಮಾಯ! ಹಾಗೆಯೇ ಅಆಇಈ ಗಳಿಗೆ ಹಹಾಹಿಹೀ- ಗಳ ನುಗ್ಗಾಟಗಳೂ ಅಂತರ್ಧಾನ ಇಲ್ಲ, ಮಂಗಮಾಯ!
ಉದಾಹರಣೆಗೆ, ಒಂದು ಮಾದರಿ ಇಲ್ಲಿದೆ ನೋಡಿ (ಕಂಸದೊಳಗೆ ಇರುವುದು ಕಷ್ಟಕೊಡುವ ಅ-ಹಕಾರಾದಿಗಳು), ಅದಕ್ಕೆ ಮೊದಲಿರುವದು ಹೆಚ್ಚೂ ಕಡಿಮೆ ಸಮಾನಾರ್ಥಕ ಪದಗಳು:
‘ಸಭಾಧ್ಯಕ್ಷರೇ’-ಎಂದು ಬಿಡಿ (‘ಅಧ್ಯಕ್ಷರೇ’ ಅಂತ ಹೇಳಲೇ ಬೇಡಿ); ಕುಳಿತಿರುವ (ಅಲಂಕರಿಸಿರುವ, ಉಪಸ್ಥಿತರಿರುವ); ವಿಜೃಂಭಣೆಯ, ಸಡಗರದ (ಅದ್ಧೂರಿಯ); ಸಂತೋಷ, ಖುಷಿಯಾಗುತ್ತಿದೆ (ಆನಂದವಾಗುತ್ತಿದೆ); ಸಮರ್ಪಕ ವಾಗಿ, ವ್ಯವಸ್ಥಿತವಾಗಿ (ಅಚ್ಚುಕಟ್ಟಾಗಿ); ದಿನ-ರಾತ್ರಿ (ಹಗಲಿರುಳು); ಬಹಳ (ಎಷ್ಟೊಂದು); ಯೋಚಿಸಬಲ್ಲೆ (ಅಂದಾಜು ಮಾಡಬಲ್ಲೆ, ಊಹಿಸಬಲ್ಲೆ, ಅರ್ಥಮಾಡಿ ಕೊಳ್ಳಬಲ್ಲೆ); ನಾವಿಂದು (ಇಂದು, ಇವತ್ತು); ಕಾರ್ಯಕ್ರಮದ (ಇದರ); ಮೆಚ್ಚುಗೆ, ಪ್ರಶಂಸೆ (ಅಭಿನಂದನೆ, ಹೊಗಳಿಕೆ); ಋಣಿಯಾಗಿದ್ದೇನೆ (ಆಭಾರಿಯಾಗಿದ್ದೇನೆ); ಮನಸ್ಸಿನ ಮಾತುಗಳನ್ನ (ಅಭಿಪ್ರಾಯಗಳನ್ನು); ವಿನಿಮಯ ಮಾಡಿಕೊಳ್ಳಲು, ತೋಡಿಕೊಳ್ಳಲು (ಹಂಚಿಕೊಳ್ಳಲು); ಎಡೆ (ಅವಕಾಶ) ಮಾಡಿಕೊಟ್ಟಿದ್ದೀರಿ; ನಿಮ್ಮನ್ನು ನೆನೆಸಿಕೊಳ್ಳುತ್ತೇನೆ, ನಿಮ್ಮ ಸಹಾಯವನ್ನು ನೆನೆಯುತ್ತೇನೆ (ನಿಮಗೆ ಕೃತಜ್ಞನಾಗಿದ್ದೇನೆ). ವಿಶೇಷವಾದ (ಅಪೂರ್ವವಾದ) ದಿನ; . .. .. .. ಸನ್ಮಾನ್ಯರು, ಭಾಷಣಕಾರರು (ಅತಿಥಿಗಳು); ಜೊತೆಗೆ (ಅದೂ ಅಲ್ಲದೆ); ಸಂಗೀತ, ಗೀತ (ಹಾಡು); ವ್ಯವಸ್ಥೆ (ಏರ್ಪಾಟು); ಕುತೂಹಲ, ಶ್ರದ್ಧೆ (ಆಸಕ್ತಿ); ಮಧ್ಯ ನಿಲ್ಲುವುದಿಲ್ಲ (ಅಡ್ಡ ಬರುವುದಿಲ್ಲ).
ಈಗ ಹಕಾರಾದಿಯ ಕೆಲವು ಪದಗಳಿಗೆ ಪರ್ಯಾಯ ಶಬ್ದಗಳನ್ನು ನೋಡೋಣ: ಮೂದಲಿಸು (ಹಂಗಿಸು); ಋಣ, ದಾಕ್ಷಿಣ್ಯ (ಹಂಗು); ತಂತ್ರ (ಹಂಚಿಕೆ, ಉಪಾಯ); ವಿತರಣೆ (ಹಂಚುವುದು); ಕಡಾಯಿ, ಕೊಪ್ಪರಿಗೆ (ಹಂಡೆ); ಕೊಲೆಗಡುಕ, ಕೊಲೆಗಾರ (ಹಂತಕ); ಬಯಕೆ, ಕೋರಿಕೆ (ಇರಾದೆ, ಆಸೆ, ಆಶಯ, ಹಂಬಲ); ಪಕ್ಷಿ, ಬಾನಾಡಿ(ಹಕ್ಕಿ); ದಿನರಾತ್ರಿ (ಹಗಲಿರುಳು, ಅಹೋರಾತ್ರಿ), ಲಘು (ಹಗುರ); ವೈರಿ, ಶತ್ರು (ಹಗೆ, ಅರಿ); ಗೋವು (ಹಸು, ಆಕಳು); ಇತ್ಯಾದಿ
ಅವನು ಅವಳು ಅವರು ಇವರು ಅದು ಇದು ಈ -ಮುಂತಾದ ಸ್ವರಾದಿಯ ಸರ್ವನಾಮಗಳನ್ನ ಉಪಯೋಗಿಸಲೇ ಬೇಡಿ, ಬದಲಾಗಿ ನೇರವಾಗಿ ಅಂಕಿತ ನಾಮಗಳನ್ನೇ ಬಳಸಿಬಿಡಿ. ಕೆಲವರಿಗೆ ಕೃತಜ್ಞ ಮತ್ತು ಕೃತಘ್ನ ತೊಂದರೆ ಕೊಡುತ್ತದೆ. ಇವೆರಡೂ ವಿರುದ್ಧಾರ್ಥಕ ಪದಗಳು; ಗಲಿಬಿಲಿಯಾಗುವುದಾದರೆ ಬಳಸಲೇ ಬೇಡಿ.
ಈಗ ಅಆ ಇಈ-ಕಾರಾದಿ ಹಹಾ-ಕಾರಾದಿ ಪದಗಳಿಲ್ಲದ, ಪರಿಷ್ಕೃತ ಭಾಷಣದ ಈ ಪಾಠವನ್ನು ನೋಡಿ:
“ಸಭಾಧ್ಯಕ್ಷರೇ, ವೇದಿಕೆಯ ಮೇಲೆ ಕುಳಿತಿರುವ ಗಣ್ಯವ್ಯಕ್ತಿಗಳೇ, ನಿಮ್ಮ ವಿಜೃಂಭಣೆಯ, ಸಡಗರದ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತುಂಬಾ ಸಂತೋಷ, ಖುಷಿಯಾಗುತ್ತಿದೆ. ಕೊರತೆಯಿಲ್ಲದಷ್ಟು ಸಮರ್ಪಕವಾಗಿ, ವ್ಯವಸ್ಥಿತವಾಗಿ, ಸಮಾರಂಭವನ್ನು ನಡೆಸಲು ನೀವೆಲ್ಲಾ ಪದಾಧಿಕಾರಿಗಳು ದಿನ-ರಾತ್ರಿ ಶ್ರಮಪಟ್ಟು ಬಹಳ ಕಷ್ಟಪಟ್ಟಿರಬೇಕೆಂದು ನಾನು ಯೋಚಿಸಿ, ತಿಳಿಯಬಲ್ಲೆ; ಕಾರ್ಯಕ್ರಮದ ಯಶಸ್ಸಿಗೆ ನೀವೇ ಕಾರಣರು. ಮೆಚ್ಚುಗೆಗೆ ನೀವೇ ಬಾಧ್ಯರು. ನನ್ನನ್ನು ಸಮಾರಂಭಕ್ಕೆ ಕರೆದು ಗೌರವ ತೋರಿಸಿದ್ದೀರಿ. ನಿಮಗೆ ನಾನಂತೂ ತುಂಬಾ ಋಣಿಯಾಗಿದ್ದೇನೆ.

“ನನ್ನ ಮನಸ್ಸಿನ ಕೆಲವು ಮಾತುಗಳನ್ನ ನಿಮ್ಮೊಂದಿಗೆ ವಿನಿಮಯ ಮಾಡಿಕೊಳ್ಳಲು ನನಗೆ ಸಮಯ ಕೊಟ್ಟಿದ್ದೀರಿ; ನಿಮ್ಮುಪಕಾರಕ್ಕಾಗಿ, ನಿಮ್ಮ ಸಹಾಯಕ್ಕಾಗಿ ಯಾವಾಗಲೂ ನಿಮ್ಮನ್ನು ನೆನೆಸಿಕೊಳ್ಳುತ್ತೇನೆ. ವಿಷಯಕ್ಕೆ ಬರೋಣ: ಮಹನೀಯರೇ, ಮಹಿಳೆಯರೇ, ನಾವಿಲ್ಲಿ ಸೇರಿರುವುದು ವಿಶೇಷವಾದ ಕಾರಣಕ್ಕಾಗಿ. .. .. ..
“ನನಗಿಂತಾ ತುಂಬಾ ಚೆನ್ನಾಗಿ ಮಾತನಾಡುವ ಸನ್ಮಾನ್ಯ ಭಾಷಣಕಾರರು ವೇದಿಕೆಯಲ್ಲಿದ್ದಾರೆ. ಜೊತೆಗೆ, ಸಂಗೀತ ನಾಟಕ ನೃತ್ಯ ಮುಂತಾದ ಭರ್ಜರಿ ಮನರಂಜನಾ ಕಾರ್ಯಕ್ರಮವನ್ನೂ ಸಹ ವ್ಯವಸ್ಥೆ ಮಾಡಿದ್ದೀರಿ; ಕುತೂಹಲದಿಂದ ಕಾತರದಿಂದ ನೋಡಲು ಸಂತೋಷಿಸಲು ನೀವುಗಳೆಲ್ಲ ಕಾದಿದ್ದೀರಿ. ನಾನು ಮಧ್ಯ ನಿಲ್ಲುವುದಿಲ್ಲ. ನನ್ನ ಮಾತನ್ನ ನಿಲ್ಲಿಸಿ ವಿರಮಿಸುತ್ತೇನೆ. ಜೈ ಕರ್ನಾಟಕ, ಜೈ ಭಾರತ ಮಾತಾ!”
ಈಗ ಹೇಳಿ, ಏನಾದರೂ ಕಷ್ಟವಾಯಿತೇ? ಬರೆದಿಟ್ಟುಕೊಂಡ ನಿಮ್ಮ ಭಾಷಣವನ್ನ ಮನೆಯಲ್ಲಿ, ಕೋಣೆ ಬಾಗಿಲು ಹಾಕಿಕೊಂಡು, ಕನ್ನಡಿಯ ಮುಂದೆ ನಿಂತು ಗಟ್ಟಿಮಾಡಿ. ಅಲ್ಲಿ ವೇದಿಕೆಯಮೇಲೆ ಪೋಡಿಯಂನಲ್ಲಿ, ಧ್ವನಿವರ್ಧಕದ ಮುಂದೆ ನಿಂತಾಗಲೂ ನಿಮ್ಮ ಕೈಯಲ್ಲಿ ಭಾಷಣದ ಚೀಟಿಯೊಂದು ಸುಮ್ಮನೆ ಇರಲಿ. ಬೇಕಾದಾಗ ಮರೆತುದನ್ನ ನೆನಪಿಸಲು, ಊರುಗೋಲಾಗಿ ಅಷ್ಟೆ. ಅದನ್ನು ನೋಡಿಕೊಳ್ಳದೆ ಮಾತಾಡಿ; ಚಪ್ಪಾಳೆ ಗಿಟ್ಟಿಸಿ.
ಮಹಾಪ್ರಾಣಗಳನ್ನು ಅಲ್ಪಪ್ರಾಣಗಳಾಗಿ ಉಚ್ಚರಿಸುವ ಅಭ್ಯಾಸ ಕೆಲವರಿಗೆ ಇದೆ. ಏನು ಮಾ(ತನಾ)ಡುತ್ತಿದ್ದೇವೆಂಬ ಪ್ರಜ್ಞಾಪೂರ್ವಕ ಮನಃಸ್ಥಿತಿಯಲ್ಲಿದ್ದಾಗ ಅವರು ತಪ್ಪಾಗಿ ಉಚ್ಚರಿಸುವುದಿಲ್ಲ; ಆದರೆ, ಅವರ ಗಮನ ಎತ್ತಲೋ ಇದ್ದಾಗ ಈ ಸಮಸ್ಯೆ ಉದ್ಭವಿಸುತ್ತೆ, ಕೆಲವೊಮ್ಮೆ ಉಲ್ಬಣಿಸುತ್ತದೆ. ಕೆಲವರು ಸ್ವಲ್ಪ ಹೆದರಿಕೆಯಾದರೆ ಅದಕ್ಕೆ ಬಯ ಅಂತಲೂ, ಅದು ಜಾಸ್ತಿಯಾಗಿದ್ದರೆ ಅದನ್ನೇ ಭಯ ಅಂತಲೂ ಹೇಳುತ್ತಾರೆ! ಇನ್ನು ಕೆಲವರು, ಜಾಸ್ತಿ ಒತ್ತುಕೊಡುವ ಸಲುವಾಗಿ ಗರ್ಜನೆಯನ್ನು ತಪ್ಪಾಗಿ ಘರ್ಜನೆ ಯೆಂದೂ, ಸದ್ಯವನ್ನು ತಪ್ಪಾಗಿ ಸಧ್ಯ ಎಂದೂ ಉಚ್ಚರಿಸುವುದುಂಟು. ಹುಲಿ ವ್ಯಾಘ್ರ ಸರಿ, ಆದರದು ಘರ್ಜಿಸುವುದಿಲ್ಲ! ಎಷ್ಟೇ ಜಾಣ ಇರಬಹುದು, ಆದರವನು ವಿಧ್ಯಾರ್ಥಿಯಲ್ಲ! ಎರಡೂ ರೀತಿಯ ಪದಗಳಿದ್ದಾಗ ತೊಂದರೆ ಇನ್ನೂ ಜಾಸ್ತಿ: ಮದ್ಯ (ಹೆಂಡ)ವನ್ನ ಏಕೆ ಮಧ್ಯ (ನಡುವೆ) ಇಡಬೇಕು? ಹಾಗೇ ನಿದಾನ ಮತ್ತು ನಿಧಾನ, ಇತ್ಯಾದಿ. ತುಂಬಿ ತುಳುಕುವಷ್ಟು ಎಷ್ಟು ಹೆಚ್ಚು ಹಣವಿದ್ದರೂ ನಮ್ಮ ಜನಾರ್ದನ ಸ್ವಾಮಿಗಳು ಜನಾರ್ಧನ ರಾಗಲಾರರು.
ನಮ್ಮ ಮನೆಗೆ ಮನೆಗೆಲಸಕ್ಕಾಗಿ ಬರುತ್ತಿದ್ದ ಲಕ್ಷ್ಮಿಯನ್ನ ಒಂದು ದಿನ ಕೇಳಿದೆ: “ನಿನ್ನ ಪೂರ್ಣ ಹೆಸರು ಏನಮ್ಮಾ?”- ಅಂತ. “ಶಾಲೆಯಲ್ಲಿ ನನ್ನ ಹೆಸರು ಧನಲಕ್ಷ್ಮಿ ಎಂದೇ ಇದೆ”- ಎಂದಳು. “ಎಷ್ಟು ಸೊಗಸಾದ ಹೆಸರು, ಯಾಕಮ್ಮಾ ನೀನು ಬರಿ ಲಕ್ಷ್ಮಿಯಾದೆ”- ಎಂದು ಕೇಳಿದೆ. ಅದಕ್ಕವಳು “ಶಾಲೆಯಲ್ಲಿ ನನ್ನ ಜೊತೆಯ ಹುಡುಗ ಹುಡುಗಿಯರೆಲ್ಲ ನನ್ನನ್ನು ‘ದನ ದನ’ ಎಂದು ಅಡ್ಡ ಹೆಸರಿನಿಂದ ಕರೆಯತೊಡಗಿದರು, ನನಗೆ ನಾಚಿಕೆಯಾಯಿತು. ಧನ ಕಳಚಿಕೊಂಡುಬಿಟ್ಟಿತು, ಬರಿ ಲಕ್ಷ್ಮಿಯಾಗಿ ಉಳಿದೆ!” ಎಂದಳು. ನಮಗೆ ಕೆಲವು ಪದಗಳ ಕಾಗುಣಿತ ತೊಂದರೆ ಕೊಡುತ್ತವೆ: ಬಂಧು ಬಾಂಧವರು (ಸರಿ) ಬದಲಿಗೆ, ಬ೦ಧು ಭಾಂದವರು (ತಪ್ಪು) ಎನ್ನುವುದುಂಟು. ಬಂದು ಎನ್ನುವುದು ತಪ್ಪು, ಬಂಧು ಪದ ಸರಿ ಗೊತ್ತಿದೆ ತಾನೆ? ಅದರಿಂದಲೇ ಹುಟ್ಟಿದ ಪದ ಬಾಂಧವರು- ಎಂಬುದನ್ನ ನೆನಪಿನಲ್ಲಿಟ್ಟುಕೊಳ್ಳೋಣ; ತೊಂದರೆಯೇ ಆಗದು. ವಿದ್ಯೆ ಹೊಟ್ಟೆ ಸೀಳಿದರೂ ಬಾರದು, ಅಭ್ಯಾಸ ಹೊಟ್ಟೆ ಸೀಳಿಹೋಗುವಷ್ಟು ಮಾಡಿದರೇ ಪ್ರಯೋಜನ- ಅಂದುಕೊಂಡರೆ, ವಿಧ್ಯಾಬ್ಯಾಸ (ತಪ್ಪು) ಎನ್ನದೇ, ವಿದ್ಯಾಭ್ಯಾಸ ಎಂದೇ ಹೇಳುತ್ತೇವೆ. ಹಾಗೇ ವಿದ್ಯೆ ಅರ್ಥ ಆಗಬೇಕಾದರೆ ಬಹಳ ಕಷ್ಟಪಡಬೇಕು, ಅರಸಿಕೊಂಡು ಹೋಗಬೇಕು, ಬೇಡಿಕೊಳ್ಳಬೇಕು.
ಆದ್ದರಿಂದ ಅರ್ತಿ ಅಲ್ಲ, ಅರ್ಥಿ- ವಿದ್ಯಾರ್ಥಿ(ಸರಿ), ಪ್ರಕಾರ ಅ೦ದರೆ ಬಗೆ, ರೀತಿ, ವಿಧಾನಗಳು; ಪ್ರಾಕಾರ ಅಂದರೆ ಸುತ್ತುಗಳು- ದೇವಸ್ಥಾನದಲ್ಲಿ ಗರ್ಭಗುಡಿ ತಲುಪುವ ಮುನ್ನ ಕೆಲವಾರು ಆವರಣಗಳು ಇರುತ್ತವೆಯಲ್ಲ ಅಂತಹವು ಪ್ರಾಕಾರಗಳು. ಆಜನ್ಮಸಿದ್ಧ ಹಕ್ಕು, ಆಬಾಲವೃದ್ಧ, ಆಜೀವಸದಸ್ಯ, ಆಮರಣಾ೦ತ ಉಪವಾಸ- ಇತ್ಯಾದಿಗಳಲ್ಲಿ ಅಕ್ಷರಮಾಲೆಯ ಎರಡನೆಯ ದೀರ್ಘಾಕ್ಷರ ‘ಆ’ ಉಪಯೋಗಿಸಬೇಕು; ಮುದ್ರಣದಲ್ಲಿ ಮೊದಲ ಹೃಸ್ವ ಅಕ್ಷರ ‘ಅ’ದಂತೆ ಅದು ಕಂಡರೂ, ಎರಡನೆಯ ‘ಆ’ ಅಕ್ಷರವೇ ಅಲ್ಲೆಲ್ಲಾ ಸರಿಯಾದದ್ದು. ಜಾತಿ + ಅತೀತ = ಜಾತ್ಯತೀತವಾಗಿದೆ; ಜಾತ್ಯಾತೀತವಲ್ಲ. ಹಾಗೆಯೇ, ಅತ್ಯಧಿಕ, ಕೋಟ್ಯಧಿಪತಿ, ಸ್ತುತ್ಯರ್ಹ, ಸ್ಥಿತ್ಯಂತರಗಳು.