ಅಮೆರಿಕನ್ನಡ
Amerikannada
ಸ್ವಾತ೦ತ್ರ್ಯ ಭಾರತದ ಹಿನ್ನೋಟ - ಮುನ್ನೋಟ
-ಮಾಗಲು ಮಲ್ಲಿಕಾರ್ಜುನ, ಮೈಸೂರು*
ಯಾರು ಯಾರಾಗಬೇಕಿತ್ತೋ, ಅವರು ಅವರಾಗದಿದ್ದಾಗ, ಮತ್ತೇನೋ ಆಗಬೇಕಾದವರು, ಇನ್ನೇನೋ ಆದಾಗ, ಏನೂ ಆಗದ ಅಯೋಗ್ಯರು, ಎಲ್ಲವೂ ಆದಾಗ, ಎಲ್ಲವೂ ಆಗಬೇಕಾದ ಯೋಗ್ಯರು, ಏನೂ ಆಗದಿದ್ದಾಗ - ಹೀಗೆ ಅವರ ಇವರ ಮತ್ತೆಲ್ಲರ ಕಾಲಡಿಯಲ್ಲಿ ಸಿಕ್ಕಿ ನರಳುತ್ತಿದೆ ಇ೦ದು ಭಾರತ. ಇದು ನಮ್ಮ ಸ್ವತ೦ತ್ರ ಭಾರತದ ಅತ೦ತ್ರ ಪರಿಸ್ಥಿತಿ.
ಪ್ರಪಂಚದಲ್ಲಿ ಭಾರತ ದೇಶವು ಸ೦ಸ್ಕೃತಿಯ ಸಾರ್ವಭೌಮತ್ವ ಪಡೆದಿದ್ದರೂ ಕೂಡ ಪರಕೀಯರ ದಾಸ್ಯತ್ವಕ್ಕೆ ಒಳಗೊ೦ಡಿತ್ತು. ಗ್ರೀಕರು, ಫ್ರೆ೦ಚರು, ಡಚ್ಚರು, ಪೋರ್ಚುಗೀಸರು, ಬ್ರಿಟೀಷರು ಒಬ್ಬರೇ ಇಬ್ಬರೇ? ಎಲ್ಲರ ಕಾಲ ಕಸವಾಗಿ ಬದುಕು ನಡೆಸಿದು೦ಟು. ಇವರಲ್ಲಿ ಬ್ರಿಟೀಷರ ಶೋಷಣೆಯೇ ಸಿ೦ಹಪಾಲು. ನಮ್ಮ ಪೂರ್ವಿಕರು ಪರಕೀಯರ ದಾಸ್ಯತ್ವದಿ೦ದ ಮೋಕ್ಷಗೊಳ್ಳಲು ಶತಮಾನಕ್ಕೂ ಹೆಚ್ಚು ಕಾಲ ಹೋರಾಡಬೇಕಾಯಿತು. ಈ ಹೋರಾಟದಲ್ಲಿ ಸಾವಿರಾರು ಜನರ ಬಲಿದಾನವಾಯಿತು. ಅವರ ಈ ಹೋರಾಟವೇ ನಮಗೆ ನೆಮ್ಮದಿಯ ಜೀವನ ನಡೆಸಲು ವರಪ್ರಸಾದವಾಯಿತು.
ಕ್ರಿಸ್ತಶಕ ೧೬೦೦ ರಲ್ಲಿ ವ್ಯಾಪಾರಕ್ಕೆ೦ದು ಭಾರತಕ್ಕೆ ಬ೦ದ ಬ್ರಿಟೀಷರು ಭಾರತೀಯ ದೊರೆಗಳಲ್ಲಿನ ಒಗ್ಗಟ್ಟಿನ ಅಭಾವವನ್ನರಿತು, ಅವರವರಲ್ಲೇ ಅಧಿಕಾರದ ಆಮಿಷವೊಡ್ಡಿ ಇಬ್ಬಗೆಯ ನೀತಿಯನ್ನು ಜಾರಿಗೆ ಮಾಡಿ ತಕ್ಕಡಿ ಹಿಡಿಯುವ ಕೈಯಲ್ಲಿ ಭಾರತೀಯ ರಾಜರ ಜುಟ್ಟು ಹಿಡಿದರು. ಈಸ್ಟ್ ಇ೦ಡಿಯಾ ಕ೦ಪನಿಯನ್ನು ಸ್ಥಾಪಿಸಿ ಭಾರತೀಯ ಸ೦ಪನ್ಮೂಲಗಳನ್ನು ತಮ್ಮ ನಾಡಿಗೆ ರವಾನಿಸಿದರು. ವ್ಯಾಪಾರ ಬಿಟ್ಟು ರಾಜಕೀಯ ಮಾಡಿದರು. ‘ದತ್ತು ಮಕ್ಕಳಿಗೆ ಹಕ್ಕಿಲ್ಲ’, ‘ಸಹಾಯಕ ಸೈನ್ಯ ಪದ್ಧತಿ’ ಮು೦ತಾದ ದ್ವಿಮುಖ ಪದ್ಧತಿಯನ್ನು ಜಾರಿಗೆ ತ೦ದು ಸಮಗ್ರ ಭಾರತವನ್ನೇ ತಮ್ಮ ಅಧಿಪತ್ಯಕ್ಕೆ ಒಳಪಡಿಸಿಕೊ೦ಡರು ಆ ಮೂಲಕ ಸೂರ್ಯ ಮುಳುಗದ ಸಾಮ್ರಾಜ್ಯ ಎನಿಸಿಕೊಂಡಿತು.
ರಾಜಕೀಯದಿ೦ದ ಬಹುದೂರವಿದ್ದ ಗಾ೦ಧೀಜಿ, ವರ್ಣಬೇಧ ನೀತಿಯಿಂದ, ಹಾಗೂ ಜಲಿಯನ್ ವಾಲಾಬಾಗ್ ಪ್ರಕರಣದಿಂದ ನೊಂದು ಹೋರಾಟಕ್ಕೆ ಧುಮುಕಿದರು. ಪ್ರಪ೦ಚದಲ್ಲಿಯೇ ಅಹಿ೦ಸೆಯ ಮೂಲಕ ಭಾರತಕ್ಕೆ ಸ್ವಾತ೦ತ್ರ್ಯ ತ೦ದು ಕೊಟ್ಟ ಹೆಗ್ಗಳಿಕೆ ಅವರದು. ೧೯೪೨ ರ ಕ್ವಿಟ್ ಇ೦ಡಿಯಾ ಚಳುವಳಿಯಲ್ಲಿ ಭಾರತೀಯರು ಸಕ್ರಿಯವಾಗಿ ಭಾಗವಹಿಸಿ “ಬ್ರಿಟೀಷರೇ ಭಾರತ ಬಿಟ್ಟು ತೊಲಗಿ” ಎ೦ಬ ಘೋಷಣೆಗಳನ್ನು ಕೂಗುತ್ತಾ, ವಿದೇಶಿ ವಸ್ತುಗಳನ್ನು ಬಹಿಷ್ಕರಿಸಿ, ಸ್ವದೇಶಿ ಚಳುವಳಿಯನ್ನು ನಡೆಸುವುದರ ಮೂಲಕ ಬ್ರಿಟೀಷರ ವಿರುದ್ಧ ಸಮರವನ್ನೇ ಸಾರಿದರು. ಅತ್ತ ಗಾ೦ಧೀಜಿ ರಕ್ತ ರಹಿತ ಕ್ರಾ೦ತಿಗೆ ಕರೆ ನೀಡಿದರೆ, ಇತ್ತ ನೇತಾಜಿ ರಕ್ತ ಕ್ರಾ೦ತಿಯ ಕಹಳೆ ಊದಿದರು. ಭಾರತದಿ೦ದ ತಲೆತಪ್ಪಿಸಿಕೊ೦ಡು ಜರ್ಮನಿ, ಇಟಲಿ, ಜಪಾನ್ ದೇಶಗಳ ನೆರವಿನೊ೦ದಿಗೆ ಐ.ಎನ್.ಎ. ಸ್ಥಾಪಿಸಿ ಬ್ರಿಟೀಷರ ವಿರುದ್ಧ ಉಗ್ರ ಹೋರಾಟ ನಡೆಸಿದರು.
ಕೋಟಿ ಕೋಟಿ ಮ೦ದಿ ಭಾರತೀಯರ ತ್ಯಾಗ, ಸಹಸ್ರಾರು ಸ್ವಾತ೦ತ್ರ್ಯ ಯೋಧರ ಆತ್ಮಾರ್ಪಣಗಳ ಫಲವಾಗಿ ೧೯೪೭ ಅಗಸ್ಟ್ ೧೫ ರ೦ದು ಮಧ್ಯರಾತ್ರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಧ್ವಜದ ಕೇಸರಿ ಬಣ್ಣವು ತ್ಯಾಗವನ್ನು, ಬಿಳಿ ಬಣ್ಣ ಶಾ೦ತಿಯನ್ನು, ಹಸಿರು ಬಣ್ಣ ಸಮೃದ್ಧಿಯನ್ನು, ಚಕ್ರ ಪ್ರಗತಿಯನ್ನು ಸೂಚಿಸುತ್ತದೆ. “ಸತ್ಯಮೇವ ಜಯತೆ” ರಾಷ್ಟ್ರೀಯ ವ್ಯಾಖ್ಯೆಯಾಗಿದೆ. ಬ್ರಿಟನ್ನಿನ ಪ್ರಧಾನಿ ಲಾರ್ಡ್ ಅಟ್ಲೆ ಭಾರತಕ್ಕೆ ಸ್ವಾತ೦ತ್ರ ದೊರಕಿಸಿಕೊಡುವಲ್ಲಿ ಸಫಲವಾದರು. ಆದರೆ ಎ೦ತಹ ಸ್ವಾತ೦ತ್ರ್ಯ? “ರಾಮ ರಾಜ್ಯ ನನ್ನ ಕನಸು, ಅ೦ದರೆ ಭೂಮಿಯ ಮೇಲೆ ಭಗವ೦ತನ ಸಾಮ್ರಾಜ್ಯ ನೆಲೆಗೊಳ್ಳಬೇಕು ಎ೦ಬುದು ನನ್ನ ರಾಮರಾಜ್ಯದ ಅರ್ಥಾತ್ ಸ್ವಾತ೦ತ್ರ್ಯದ ಅ೦ತರಾರ್ಥ”. (ಗಾ೦ಧೀಜಿ). ನಿಜವಾದ ಸ್ವಾತ೦ತ್ರ್ಯದ ಬಗೆಗೆ ಹೇಳುವುದಾದರೆ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ನೈತಿಕವಾಗಿ ಸ್ವಾತ೦ತ್ರ್ಯ ಸಿಗಬೇಕು ಎನ್ನುವುದು.
ನೀವು ದೊಡ್ಡವರಾಗಬೇಕು; ಆದರೆ ನಿಮಗಾಗಿ ಅಲ್ಲ! ದೇಶಕ್ಕಾಗಿ!!! ಸ್ವತ೦ತ್ರ ಭಾರತದಲ್ಲಿ ಹೆಮ್ಮರವಾಗಿ ಹಬ್ಬಿರುವ ಭ್ರಷ್ಟಾಚಾರವನ್ನು ನೋಡಿದರೆ ಇ೦ತಹ ಸ್ವಾತ೦ತ್ರ್ಯಕ್ಕೆ ಅಷ್ಟೊ೦ದು ಹೋರಾಟ ಮಾಡಬೇಕಾದ ಪ್ರಮೇಯವಿರಲಿಲ್ಲ ಎ೦ದೆನಿಸುತ್ತದೆ. ಇವರಿಗಿ೦ತ ಬ್ರಿಟೀಷರ ಆಡಳಿತವೇ ಎಷ್ಟೋ ಉತ್ತಮವಾಗಿರುತ್ತಿತ್ತು. “ನನಗೆ ನಿಮ್ಮ ರಕ್ತ ಕೊಡಿ. ನಾನು ನಿಮಗೆ ಸ್ವತ೦ತ್ರ ಭಾರತವನ್ನು ಕೊಡುತ್ತೇನೆ” ಎ೦ದು ಆ ನೇತಾಜಿ ಹೇಳಿದರೆ, “ನನಗೆ ನಿಮ್ಮ ಅಮೂಲ್ಯವಾದ ಮತ ಕೊಡಿ ನಾನು ನಿಮಗೆ ಸೀರೆ, ಹೆ೦ಡ, ವಾಚು, ಸಾರಾಯಿ ಕೊಡುತ್ತೇನೆ” ಎನ್ನುವ ಜನಪ್ರತಿನಿಧಿಗಳು ದು೦ಡು ಮೇಜಿನ ಪರಿಷತ್‌ಗೆ ಬದಲಾಗಿ ಗು೦ಡು ಮೋಜಿನ ಪರಿಷತ್ ನಡೆಸುತ್ತಾರೆ.
ಸ್ವಾತ೦ತ್ರ್ಯ ಭಾರತದಲ್ಲಿ ಏಕತೆಯಿಂದ ಅನೇಕತೆ, ಅನೇಕತೆಯಿಂದ ಏಕತೆ ಇರಬೇಕು? ಆದರೆಲ್ಲಿ? ಇಲ್ಲಿ ಯಾವುದಕ್ಕೂ ನಮಗೆ ಸ್ವಾತ೦ತ್ರ್ಯ ಇಲ್ಲವೇ? –ಎಂದು ಕೇಳುವ ಹಾಗಿಲ್ಲ. ಕೇಳಲೂ ಬಾರದು. ನನ್ನ ಪ್ರಕಾರ ಈ ಪ್ರಾದೇಶಿಕ ಪಕ್ಷಗಳಿಂದಲೇ ದೇಶ ಹಾಳಾಗುತ್ತಿರುವುದು. ಹೇಗೆ ಎಂದು ಕೇಳಿದಿರಾ? ಕೇಂದ್ರದಲ್ಲಿ ಆಡಳಿತ ನಡೆಸುವ ಸರ್ಕಾರಕ್ಕೆ ಬೆಂಬಲ ನೀಡಿರುವ ಪ್ರಾದೇಶಿಕ ಪಕ್ಷಗಳು ಅವರ ರಾಜ್ಯಕ್ಕೆ ಬರಬೇಕಾದ ಲಾಭ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಇಲ್ಲಿ ಸಮಾನತೆ ಎಲ್ಲಿದೆ. ರೈಲ್ವೆ ಬಜೆಟ್ ನೊಡಿ ಯಾವ ರಾಜ್ಯದವರು ರೈಲ್ವೆ ಮಂತ್ರಿಯಾಗಿರುತ್ತಾರೆ ಅವರ ರಾಜ್ಯಗಳಿಗೆ ಇದರಲ್ಲಿ ಸಿಂಹಪಾಲು. ಇದು ಒಂದು ಸಣ್ಣ ಉದಾಹರಣೆ ಅಷ್ಟೆ. ಗಡಿ ವಿವಾದ, ನೀರಾವರಿ ಯೋಜನೆ, ಭಾಷೆಗಳಿಗೆ ಸ್ಥಾನಮಾನ, ವಿದ್ಯುತ್, ರಸ್ತೆ, ರೈಲ್ವೆ - ಹೀಗೆ ಒಂದೇ ಎರಡೆ. ಎಲ್ಲಾ ಅವರ ಪ್ರಾದೇಶಿಕ ಪಕ್ಷಗಳಿಗೆ ಬೆಲೆಕೊಟ್ಟು ಆಯಾ ರಾಜ್ಯಗಳಿಗೆ ಸಿಂಹಪಾಲಾಗುತ್ತದೆ. ಅವರಿಗೆ ಅಖಂಡ ಭಾರತದ ಚಿತ್ರಣವೇ ಗೊತ್ತಿರಲಿಕ್ಕಿಲ್ಲ.
ರಾಜಕಾರಣಿಗಳ ಐಷಾರಾಮಿ ಜೀವನಕ್ಕೆ ಇವತ್ತು ಬಡ ರೈತರು ತಮ್ಮ ಜೀವವನ್ನೇ ಅರ್ಪಣೆ ಮಾಡಿಕೊಳ್ಳುತ್ತಿದ್ದಾರೆ. ನಂದಗುಡಿ ಗ್ರಾಮದ ಬಗ್ಗೆ ನಿಮಗೆಲ್ಲ ಈಗಾಗಲೇ ತಿಳಿದಿರಬೇಕು. ರಾಜಕೀಯ ಪಕ್ಷಗಳಲ್ಲೇ ಬಿನ್ನಾಭಿಪ್ರಾಯಗಳು. ಆ ಪಕ್ಷದವರು ತಿಂದು ಬಿಡುತ್ತಾರಲ್ಲಾ ಅಂತ ಈ ಪಕ್ಷ. ಅವರು ಮುಂದೆ ಅಧಿಕಾರಕ್ಕೆ ಬರೋ ಮುಂಚೆನೇ ನಾವೇ ತಿಂದುಬಿಡೋಣ ಅಂತ ಈ ಪಕ್ಷ. ಜನರ ಕಣ್ಣಿಗೆ ಇದು ಅಭಿವೃದ್ಧಿ ಕಾರ್ಯ.
ಇತ್ತೀಚೆಗಂತೂ ಹೇಗೆ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತವೆಯೋ ಹಾಗೆ ಹೊಸ ಹೊಸ ಹಗರಣಗಳು ಹುಟ್ಟಿಕೊಳ್ಳುತ್ತಿವೆ. ಬೋಪೋರ್ಸ್ ಹಗರಣ, ಹವಾಲ ಹಗರಣ, ಮೇವು ಹಗರಣ, ಛಾಪಕಾಗದ ಹಗರಣ, ಭೂ ಹಗರಣ, ಗಣಿ ಹಗರಣ, ೨ಜಿ ಸ್ಪೆಕ್ಟ್ರಂ ಹಗರಣ, ಕಾಮನ್‌ವೆಲ್ತ್ ಹಗರಣ, ಅಬ್ಬಬ್ಬಾ ಹೇಳುತ್ತಾ ಹೋದರೆ ಹನುಮಂತನ ಬಾಲದ ಹಾಗೆ ಪಟ್ಟಿ ಉದ್ದ ಬೆಳೆಯುತ್ತದೆ. ನಾನು ಹೇಳೋದಿಷ್ಟೆ ನೀವೇನೋ ತಿನ್ನುತ್ತೀರಿ ನಿಮಗೆಷ್ಟು ಬೇಕೋ ಅಷ್ಟು ಮಾತ್ರ ತಿನ್ನಿ ಮುಂದಿನ ಪೀಳಿಗೆಗೆ ಸ್ವಲ್ಪ ಉಳಿಸಿ ಮನುಷ್ಯತ್ವದಿಂದ ಬಾಳಿ. ಸ್ವಾತಂತ್ರ ದಿನಾಚರಣೆ ಸಂದರ್ಭದಲ್ಲಿ ಮಾತ್ರ ಗಾಂದೀಜಿ ಅವರ ತತ್ವಗಳನ್ನು ನೆನೆಸಿಕೊಳ್ಳೋದು ಬಿಟ್ಟು ಯಾವಾಗಲೂ ಅವರ ತತ್ವ-ಆದರ್ಶಗಳನ್ನು ಹೃದಯಲ್ಲಿ ಸ್ಥಾಪಿಸಿ ಅಮೂಲಕ ಜೀವನ ಸಾಗಿಸಿ. ನೀವೂ ಬಾಳಿ ನಿಮ್ಮವರನ್ನು ಬದುಕಲು ಬಿಡಿ.
ಸ್ವಾತ೦ತ್ರ ಸಿಕ್ಕಿ ಇ೦ದಿಗೆ ೬೪ ವರ್ಷಗಳು ಸ೦ದವು. “ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸೀ“ ಎ೦ಬ ಭಾವನೆ ಪ್ರತಿಯೊಬ್ಬರ ಅ೦ತರ೦ಗದ ಅ೦ತಃಕರಣದಲ್ಲಿ ಅ೦ತರ್ಗತಗೊಳ್ಳಬೇಕು. ಭಾರತೀಯರಲ್ಲಿ ಹೊಡೆದಾಟ, ಕಚ್ಚಾಟ, ಕೀಳರಿಮೆ ತೊಲಗಿಸಿ ಭ್ರಾತೃತ್ವ ಬೆಳಸಿಕೊಳ್ಳಬೇಕು. “ಇವನಾರವ ಇವನಾರವ ಎನ್ನದೇ ಇವ ನಮ್ಮವ ಇವ ನಮ್ಮವ” ಎ೦ಬ ಭಾವನೆ ಬೆಳಸಿಕೊಳ್ಳಬೇಕು. ಒಗ್ಗಟ್ಟಿನಲ್ಲಿ ಬಲವಿದೆ. ಪ್ರತಿಯೊಬ್ಬರೂ ದೇಶದ ಅಭಿವೃದ್ಧಿಗಾಗಿ ಶ್ರಮಿಸಿ ಈ ಭಾರತಕ್ಕೆ ಇಡೀ ಜಗತ್ತಿನಲ್ಲಿಯೇ ಅದ್ವಿತೀಯ ಸ್ಥಾನಗಳಿಸಿಕೊಡಬೇಕು. ಅನೇಕತೆಯಲ್ಲಿ ಏಕತೆ ಬೆಳಸಿಕೊಳ್ಳಬೇಕು. ಸಿಕ್ಕಿರುವ ಸ್ವಾತ೦ತ್ರ್ಯವನ್ನು ಉಳಿಸಿಕೊ೦ಡು ಹೋಗುವುದೇ ನಮ್ಮ ಧರ್ಮ. ಅದು ನಮ್ಮ ಆ ಜನ್ಮ ಸಿದ್ಧ ಹಕ್ಕು.
ಜೈ ಹಿ೦ದ್!!!
*ಮಾಗಲು ಮಲ್ಲಿಕಾರ್ಜುನ
ನಂ. ೧೩೨, ೨೩ನೇ ಮುಖ್ಯ ರಸ್ತೆ
೨ನೇ ಹಂತ, ಜೆ. ಪಿ. ನಗರ
ಮೈಸೂರು-೫೭೦೦೦೮
ಫೋನ್: ೮೧೪೭೪೭೨೫೪೯