ಅಮೆರಿಕನ್ನಡ
Amerikannada
ಸ್ವಾತಂತ್ರೋತ್ಸವದ ಒಂದು ಮಧುರ ನೆನಪು
-ನಾಗಲಕ್ಷ್ಮೀ ಹರಿಹರೇಶ್ವರ, ಮೈಸೂರು
ಚಿಕ್ಕ ಹುಡುಗಿಯಿಂದಲೂ ನನಗೆ ಆಟದಲ್ಲಿ ತುಂಬಾ ಆಸಕ್ತಿ ಇತ್ತು. ಆ ಕಾಲದಲ್ಲಿ ಆಗಸ್ಟ್ ೧೫ ಇಂಡಿಪೆಂಡೆನ್ಸ್ ಡೇ ಮತ್ತು ಜನವರಿ ೨೬ ರಿಪಬ್ಲಿಕ್ ಡೇಗೆ ಶಾಲಾ ಮಕ್ಕಳನ್ನೆಲ್ಲ ಕಂಠೀರವ ಸ್ಟೇಡಿಯಂಗೆ ಕರಕೊಂಡುಹೋಗಿ ಹಲವಾರು ಸ್ಪರ್ಧಾತ್ಮಕ ಆಟಗಳನ್ನು ಆಡಿಸುತ್ತಿದ್ದರು. ಅದಕ್ಕೆ ಬಿಳಿ ಕ್ಯಾನ್‌ವಾಸ್ ಶೂಸ್ ಮತ್ತೆ ಬಿಳಿಸಾಕ್ಸ್, ಕೂದಲು ಮುಖದ ಮೇಲೆ ಬಂದು ಆಟಕ್ಕೆ ತೊಂದರೆ ಆಗಬಾರದೆಂದು ಎರಡು ಜಡೆಯನ್ನು ಬಿಳಿ ಟೇಪಿನಿಂದ ಮೇಲಕ್ಕೆತ್ತಿ ಕಟ್ಟಿಕೊಳ್ಳಬೇಕಿತ್ತು. ಆಗಸ್ಟ್ ೧೫ ರಂದು ಬಹುಮಾನ ವಿತರಣೆ ಸಮಾರಂಭ ಇರುತ್ತಿತ್ತು. ಆ ದಿನ ಬೆಳಗ್ಗೆ ೭:೦೦ ಗಂಟೆಗೆ ನಮ್ಮ ಶಾಲೆಯ ಸೀತಾಲಕ್ಷ್ಮೀ ಟೀಚರ್ ನಮಗೆಲ್ಲ ಗಾಂಧಿಬಜಾರ್‌ನ ಗೀತಾ ರೆಸ್ಟೊರೆಂಟ್‌ನಿಂದ ಇಡ್ಲಿವಡೆ ಕೇಸರಿಬಾತ್ ತರಿಸಿಕೊಡುತ್ತಿದ್ದರು. ನಂತರ ನಾವೆಲ್ಲ ಬಸ್‌ನಲ್ಲಿ ಕಾರ್ಪೊರೇಷನ್ ಆಫೀಸ್ ಹತ್ತಿರ ಇಳಿದು ಸಾಲಾಗಿ ನಡೆದುಕೊಂಡು ಹೋಗುತ್ತಿದ್ದೆವು. ಬೆಳಿಗ್ಗೆ ಸರಿಯಾಗಿ ಒಂಬತ್ತು ಗಂಟೆಗೆ ಮಾರ್ಚ್ ಫಾಸ್ಟ್ ಇರುತ್ತಿತ್ತು. ಅದರಲ್ಲಿ ಭಾಗವಹಿಸಿ, ನಮ್ಮ ಶಾಲೆಗೆ ನಿಗದಿತ ಜಾಗದಲ್ಲಿ ನಾವು ಕುಳಿತುಕೊಳ್ಳುತ್ತಿದ್ದೆವು. ದ್ವಜಾರೋಹಣ, ರಾಷ್ಟ್ರಗೀತೆ ಇವೆಲ್ಲ ನಡೆಯುವಾಗ ನಮಗೆ ರೋಮಾಂಚನ, ದೇಶಭಕ್ತಿಗೀತೆಗಳು, ದೇಶಭಕ್ತಿ ಭಾಷಣಗಳನ್ನೆಲ್ಲ ಕೇಳುತ್ತಾ ಮೈಮರೆಯುತ್ತಿದ್ದೆವು. ಕೊನೆಗೆ ಬಹುಮಾನ ವಿತರಣೆ. ಅದಾದ ನಂತರ ದೊಡ್ಡ ದೊಡ್ಡ ಡಬ್ಬಿಯ ತುಂಬಾ ಸಿಹಿ ತಿಂಡಿ ಚಾಕಲೇಟ್ ಮುಂತಾದವುಗಳನ್ನು ವಿತರಣೆ ಮಾಡುತ್ತಿದ್ದರು. ನಮಗೂ ದೇಶಕ್ಕೋಸ್ಕರ ಏನಾದರೂ ಮಾಡಬೇಕು ಎಂಬ ಆಲೋಚನೆ ಬರುತ್ತಿತ್ತು.
ಒಮ್ಮೆ ಬಹುಶಃ ನಾನು ಒಂಬತ್ತನೇ ತರಗತಿಯಲ್ಲಿದ್ದೆ ಎಂಬ ನೆನಪು. ಮನೆಯಲ್ಲಿ ನಾನು ಹಠ ಮಾಡುತ್ತಾ ಕೂತೆ. ನಾಳೆ ಆಗಸ್ಟ್ ೧೫. ನಮ್ಮ ದೇಶದ ಹಬ್ಬ. ಸ್ವತಂತ್ರ ದಿನಾಚರಣೆ. ದೇಶದ ಹಬ್ಬವನ್ನು ನಾವು ಮನೆ ಹಬ್ಬವಾಗಿ ಮಾಡಬೇಕು. ನಾವು ಗೌರಿ-ಗಣೇಶ, ದೀಪಾವಳಿ ಹೇಗೆ ಮಾಡುತ್ತೇವೋ ಹಾಗೆ ಸ್ವತಂತ್ರ ದಿನಾಚರಣೆಯನ್ನೂ ಹಬ್ಬವನ್ನಾಗಿ ಆಚರಿಸಬೇಕು. ಮನೆಯಲ್ಲಿ ಸಿಹಿತಿಂಡಿ ಮಾಡಬೇಕು. ಎಲ್ಲರೂ ಒಟ್ಟಿಗೆ ಕೂತು ರಾಷ್ಟ್ರಕ್ಕೆ, ವಿಶ್ವಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸೋಣ, ಪ್ರಾರ್ಥಿಸಬೇಕು. ನಾವೆಲ್ಲ ದೇಶದ ಒಳಿತಿಗಾಗಿ ಒಳ್ಳೆಯದನ್ನೆ ಚಿಂತಿಸಬೇಕು ಎಂದು ನಮ್ಮ ತಂದೆ ತಾಯಿಯರನ್ನು ಒಪ್ಪಿಸಿದೆ. ನಂತರ ಪ್ರತಿ ಆಗಸ್ಟ್ ೧೫ ರಂದು ನಮ್ಮ ಮನೆಯಲ್ಲಿ ಈ ರೀತಿ ಮಾಡಿಕೊಂಡು ಬಂದೆ. ನಾನು ಹರಿಯನ್ನು ವಿವಾಹವಾದ ನಂತರ ಈ ಕಟ್ಟಳೆ ನಮ್ಮ ಮನೆಯಲ್ಲಿ ಮುಂದುವರಿಯಿತು. ಈ ಸಂಪ್ರದಾಯ ಎಲ್ಲರ ಮನೆಯಲ್ಲೂ ಆಗಬೇಕೆಂದು ನನ್ನಿಚ್ಛೆ. ಅಮೆರಿಕೆಯಲ್ಲಿ ಜುಲೈ ೪ ರಂದು, ಅವರವರ ಮನೆ ಮೇಲೆ ಅಲ್ಲಿಯ ರಾಷ್ಟ್ರಧ್ವಜ ಹಾರಿಸಿ, ನೆಂಟರಿಸ್ಟರೆಲ್ಲ ಸೇರಿ ಬಾರ್-ಬೇ-ಕ್ಯೂ ಮಾಡಿಕೊಂಡು ಹಾಡುತ್ತ, ಕುಣಿಯುತ್ತಾರೆ. ಹಾಗೆ ನಮ್ಮಲ್ಲೂ ಮನೆ-ಮನೆ-ಮನದಲ್ಲೂ ರಾಷ್ಟ್ರಭಕ್ತಿ ದೇಶಪ್ರೇಮ ಉಕ್ಕಿ ಸುರಿಯಲಿ ಎಂದು ಹಾರೈಸುತ್ತೇನೆ. ನಾವೇ ಮಾಡಿ ತೋರಿಸದಿದ್ದರೆ ನಮ್ಮ ಮಕ್ಕಳಿಗೆ ಕಲಿಸುವವರು ಯಾರು? ಮನೆಯೇ ಮೊದಲ ಪಾಠಶಾಲೆ ಅಲ್ಲವೇ?
ತಮಗೆಲ್ಲರಿಗೂ ಅಮೆರಿಕನ್ನಡದ ಪರವಾಗಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.