ಅಮೆರಿಕನ್ನಡ
Amerikannada
ಧಾರಾವಾಹಿಗಳ ಸುಳಿಯಲ್ಲಿ
-ಜಯಂತಿ ಅಮೃತೇಶ್, ಮೈಸೂರು*
“ಹಲೋ, ರಾಧಾ, ಹೇಗಿದ್ದೀಯ? ಸುರೇಶ್ ಮನೆಗೆ ಬಂದಾಯಿತಾ? ನಾವು ನಿಮ್ಮನ್ನು ನೋಡಿ ಬಹಳ ದಿನಗಳಾಯಿತಲ್ಲಮ್ಮ; ಆ ಕಡೆ ಬರೋಣ ಎಂದಿದ್ದೇವೆ? ೬.೩೦ರ ಹೊತ್ತಿಗೆ ಅಲ್ಲಿರುತ್ತೇವೆ. ನೀವುಗಳು ಮನೆಯಲ್ಲಿರುತ್ತೀರ ತಾನೆ? ಇದನ್ನು ಕೇಳಲು ಫೋನ್ ಮಾಡಿದೆ?” ಈ ಕರೆಗೆ ಅತ್ತ ಕಡೆಯಿಂದ ಬಂದ ಉತ್ತರ ಅಷ್ಟೇನೂ ಅಶಾದಾಯಕವಾಗಿರಲಿಲ್ಲ. “ಬನ್ನಿ, ಆದರೆ ೫ ಗಂಟೆಗೆ ಬರಲು ಸಾಧ್ಯವಾ? ಅಥವಾ ೮ ಗಂಟೆಯ ಹೊತ್ತಿಗೆ ಬನ್ನಿ” ಎಂದಳು ನನ್ನ ಪ್ರೀತಿಯ ಗೆಳತಿ. ಧ್ವನಿಯಲ್ಲಿ ನಿರುತ್ಸಾಹ ಕಂಡು ಬರುತ್ತಿತ್ತು.
ಒಂದು ಸಲ ರಾಮರಾವ್ ದಂಪತಿಗಳು ಹತ್ತು ಕಿಲೋ ಮೀಟರ್ ದೂರದಲ್ಲಿರುವ ತಮ್ಮ ನೆಂಟರ ಮನೆಗೆ ಹೋಗಿದ್ದರು. ಪುಟ್ಟ ಹುಡುಗಿಯೊಂದು ಬಾಗಿಲು ತೆಗೆದು ಓಡಿ ಹೋಗಿ ಪುನಃ ಟೆಲಿವಿಷನ್ ಮುಂದೆ ಕುಳಿತುಬಿಟ್ಟಳು. ಪರದೆಯ ಮೇಲೆ ಯಾವುದೋ ಧಾರಾವಾಹಿ ಬಿತ್ತರಿಸಲ್ಪಡುತ್ತಿತ್ತು. ಅಲ್ಲಿದ್ದವರೆಲ್ಲರೂ ಮಂತ್ರಮುಗ್ಧರಾಗಿ ದೂರದರ್ಶನದ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದರು. ಅದನ್ನು ನಿಲ್ಲಿಸುವ ಮಾತಿರಲಿ, ಧ್ವನಿಯನ್ನು ಚಿಕ್ಕದು ಮಾಡಲೂ ಸಹಾ ಯಾರೂ ತಯಾರಿರಲಿಲ್ಲ. ಮಧ್ಯೆ ಮಧ್ಯೆ ಬರುವ ವಿರಾಮದ ವೇಳೆಯಲ್ಲಿ ಉಭಯಕುಶಲೋಪರಿ ಮತ್ತು ಕಾಫಿ ಸತ್ಕಾರ ನಡೆಯಿತು. ಇಷ್ಟು ದೂರ ಬಂದದ್ದಕ್ಕೆ ಏನೂ ಪ್ರಯೋಜನವಾಗಲಿಲ್ಲ ಎಂದುಕೊಂಡ ರಾಮರಾವ್ ದಂಪತಿಗಳು ಬಹಳ ಬೇಗನೆ ಅಲ್ಲಿಂದ ಕಾಲ್ತೆಗೆದರು.
ಒಂದು ಸಲ ನನ್ನವರ ಜೊತೆಯಲ್ಲಿ ಅವರ ಪ್ರೀತಿಯ ಚಿಕ್ಕಮ್ಮನ ಮನೆಗೆ ಹೋದೆವು. ಅದೂ ಪಕ್ಕದ ಊರಿನಲ್ಲಿ. ಬೈಠಕ್ ಖಾನೆಯಲ್ಲಿ ಬರೀ ಸೋಫಾಸೆಟ್ ಮತ್ತು ಟೀಪಾಯಿ ಇವುಗಳನ್ನು ನೋಡಿ ನಮಗೆ ಪರಮಾನಂದವಾಯಿತು. ಕಾರಣ, “ಸಧ್ಯ, ಇವರ ಮನೆಯ ಟಿ.ವಿ. ರಿಪೇರಿಗೆ ಹೋಗಿರಬೇಕು; ಆ ದೂರದರ್ಶನದ ಧಾರಾವಾಹಿಯ ಹಾವಳಿ ಇಲ್ಲಿ ಇಲ್ಲವಲ್ಲ” ಎಂದು ಸಂತೋಷಗೊಂಡೆವು. ಆನಂದದಿಂದ ಅದೂ ಇದೂ ಮಾತನಾಡುತ್ತ ಕುಳಿತಿದ್ದೆವು. ಹಾಗಿರುವಾಗ ಚಿಕ್ಕಮ್ಮನು ಏನನ್ನೋ ಜ್ಞಾಪಿಸಿಕೊಂಡವರಂತೆ ದಿಢೀರೆಂದು ಎದ್ದರು. “ನೀವು ಮಾತನಾಡುತ್ತಾ ಕುಳಿತಿರಿ, ನಾನು ಇದೋ ಬಂದೆ” ಎನ್ನುತ್ತಾ ಪಕ್ಕದ ಕೋಣೆಗೆ ಓಡಿದರು. ಐದು ನಿಮಿಷಗಳು ಕಳೆದುವು. ಅವರ ಸುಳಿವಿಲ್ಲ. ಆ ಕೋಣೆಯಲ್ಲಿ ನಮ್ಮಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಇರಲಿಲ್ಲ. ನಾವು ನಾವು ಮಾತನಾಡಲು ಇವರ ಮನೆಗೆ ಏಕೆ ಬರಬೇಕಿತ್ತು ಎನ್ನಿಸಿತು. ಮತ್ತೂ ಐದು ನಿಮಿಷಗಳು ಕಳೆದ ಮೇಲೆ ಮೆಲ್ಲಗೆ ಹೋಗಿ ಪಕ್ಕದ ಕೋಣೆಯಲ್ಲಿ ಇಣುಕಿ ನೋಡಿದೆವು. ಬಹಳ ಕಾಲದ ನಂತರ ಚಿಕ್ಕಮ್ಮನನ್ನು ನೋಡಿದ ಸಂತೋಷ ಝರ್ರನೆ ಇಳಿಯಿತು. ಏಕೆಂದರೆ ಆಕೆಯು ಪರದೆಗೆ ತೀರ ಸನಿಹದಲ್ಲಿ ಕುಳಿತು ಯಾವುದೋ ಧಾರಾವಾಹಿಯನ್ನು ಮಂತ್ರಮುಗ್ಧರಂತೆ ವೀಕ್ಷಿಸುತ್ತಿದ್ದರು. ಹಾಗಾದರೆ ನೂರಾರು ಮೈಲಿ ದೂರದಿಂದ ಬಂದವರಿಗಿಂತಲೂ ಆ ದೂರದರ್ಶನದ ಧಾರಾವಾಹಿಯೇ ಹೆಚ್ಚಾಯಿತೆ ಎಂದು ಖಿನ್ನರಾದೆವು.
ಹೀಗೆಯೇ ಒಮ್ಮೆ ನಾವು ನಮ್ಮ ಅಕ್ಕನ ಮನೆಗೆ ಹೋಗಿದ್ದೆವು. ಅಲ್ಲೂ ನಮ್ಮ ಅಕ್ಕ ಭಾವ ಅವರುಗಳಿಗೆ ಇಷ್ಟವಾದ ಧಾರಾವಾಹಿ ಪ್ರಸಾರವಾಗುತ್ತಿತ್ತು. ಅದರ ಮಧ್ಯೆ ಪಿಸು ಧ್ವನಿಯಲ್ಲಿ ಮಾತುಕತೆಯೂ ನಡೆಯುತ್ತಿತ್ತು. ಆ ಸಮಯದಲ್ಲಿ ಅವರ ಮನೆಗೆ. ಮದುವೆಯ ಕರೆಯೋಲೆ ನೀಡಲು ಅವರ ಮಿತ್ರರು ಆಗಮಿಸಿದರು. ಆ ದಂಪತಿಗಳಿಗೂ ಧಾರಾವಾಹಿಯನ್ನು ನೋಡುವ ಚಟವೇನೋ? ಮದುವೆಯ ಪತ್ರಿಕೆಯನ್ನು ನೀಡಿ ತಾವೂ ಕುಳಿತು ಧಾರಾವಾಹಿಯ ವೀಕ್ಷಣೆಗೆ ತೊಡಗಿದರು. ಅದು ಮುಗಿದ ಮೇಲೆ ಅದರ ಕಥೆಯ ಬಗ್ಗೆ, ಅದರಲ್ಲಿ ಬರುವ ಪಾತ್ರಗಳ ಬಗ್ಗೆ ಚರ್ಚೆ ಪ್ರಾರಂಭವಾಯಿತು. ಈ ವಿಷಯದಲ್ಲಿ ಅಷ್ಟೇನೂ ತಿಳಿದಿರದ ನಾವು ಮೂಕ ಪ್ರೇಕ್ಷಕರಂತೆ ಸುಮ್ಮನೇ ಕುಳಿತೆವು. ಆ ಧಾರಾವಾಹಿಯ ನಟ, ನಟಿಯರ ನಿಜ ಜೀವನದ ಬಗ್ಗೆಯೂ ಮಾತು ನಡೆಯುತ್ತಿತ್ತು. ಇದರ ಗಂಧವೇ ಇಲ್ಲದ ನಮ್ಮವರು ನೀರಿನಿಂದ ಹೊರಕ್ಕೆಸೆದ ಮೀನಿನಂತೆ ಚಡಪಡಿಸಹತ್ತಿದರು. ಅ ಅತಿಥಿಗಳು ಊಟ ಮುಗಿಸಿ ಹೊರಟಾಗ ಆಕೆಯು ನನ್ನೊಡನೆ “ನಿಮ್ಮ ಯಜಮಾನರು ಹೆಚ್ಚು ಮಾತಾಡುವುದಿಲ್ಲ ಎಂದು ತೋರುತ್ತೆ” ಎಂದರು. ಅದಕ್ಕೆ ನಾನು “ನೋಡಿ, ನೀವು ಬಂದಷ್ಟು ಹೊತ್ತಿನಿಂದಲೂ ಬರೀ ಧಾರಾವಾಹಿಯ ಬಗ್ಗೆ, ಆ ಪಾತ್ರಗಳ ಬಗ್ಗೆಯೇ ಮಾತನಾಡುತ್ತಿದ್ದೀರಿ. ಈ ವಿಷಯದ ಗಂಧವೇ ಇಲ್ಲದ ಅವರು ಮಾತನಾಡುವುದರೂ ಏನನ್ನು?” ಎಂದಾಗ ಆಕೆ ತೆಪ್ಪಗಾದರು.
ಕಳೆದವಾರ ದೆಹಲಿಯಿಂದ ನಮ್ಮ ಹಳೆಯ ಸ್ನೇಹಿತ ದಂಪತಿಗಳು ಬಂದಿಳಿದರು. ಅವರನ್ನು ನೋಡಿ ನಮ್ಮ ಆನಂದಕ್ಕೆ ಪಾರವೇ ಇಲ್ಲವಾಯಿತು. ಅದೆಷ್ಟು ವರುಷದ ಹಿಂದಿನ ಒಡನಾಟ. ಮಾತನಾಡಲು, ಚರ್ಚಿಸಲು, ಕಷ್ಟ ಸುಖ ಹೇಳಿಕೊಳ್ಳುವಂಥ ದೊಡ್ಡ ಭಂಡಾರವೇ ನಮ್ಮಲ್ಲಿತ್ತು. ಊರಿನಿಂದ ಬಂದ ದಿನ ನನ್ನ ಸ್ನೇಹಿತನ ಹೆಂಡತಿ ಫಲಾನಾ ಧಾರಾವಾಹಿಯನ್ನು ಹಾಕುತ್ತೀರಾ? ಎಂದು ಕೇಳಿದರು. ಆ ಸಮಯದಲ್ಲಿ ವಾರ್ತೆಗಳನ್ನು ವೀಕ್ಷಿಸುತ್ತಿದ್ದ ನನ್ನ ಯಜಮಾನರು ತನ್ನ ಕಾರ್ಯಕ್ರಮವನ್ನು ತ್ಯಾಗಮಾಡಿ ಆಕೆಗೆ ಬೇಕಾದದ್ದನ್ನು ಹಾಕಿದರು. ಮರುದಿನ ಬೆಳಿಗ್ಗೆ ಆಕೆಯು “ನಿಮ್ಮ ಟಿ.ವಿ. ಬಹಳ ಚೆನ್ನಾಗಿದೆ. ಅಮೆರಿಕದ್ದೆ?” ಎಂದು ಕೇಳುತ್ತಾ ಅದರ ರಿಮೋಟಿನ ಗುಂಡಿಗಳ ಪರಿಚಯವನ್ನೆಲ್ಲ ತಾನೇ ಮಾಡಿಕೊಂಡಳು. ಆ ನಂತರ ಆಕೆಯು ತಾನು ಎಡೆಬಿಡದ ಧಾರಾವಾಹಿಗಳ ಸುಳಿಯಲ್ಲಿ ಸಿಲುಕಿದ್ದೇ ಅಲ್ಲದೆ ನಮ್ಮನ್ನೂ ಸಿಲುಕಿಸಿ ನಲುಗಿಸಿದಳು. ಒಂದಾದ ಮೇಲೊಂದರಂತೆ ಸಾಂಸಾರಿಕ ಘಟನೆಗಳ ಸರಪಳಿಗಳೂ, ಎಲ್ಲ ಬಗೆಯ ಭಾವೋದ್ವೇಗಗಳೂ ಪರದೆಯ ಮೇಲೆ ಮೂಡಿ ಬರುತ್ತಿದ್ದುವು. ರಿಮೋಟನ್ನು ಆಕೆ ಯಾರಿಗೂ ಕೊಡದೆ ತಾನೇ ಭದ್ರವಾಗಿ ಹಿಡಿದಳು. ಅವರು ಇಲ್ಲಿದ್ದ ಮೂರು ದಿನಗಳು ಇದೇ ಹಾಡು. ಅವರು ಇಲ್ಲಿದ್ದ ಸಮಯದಲ್ಲೇ ನಮ್ಮನ್ನು ನೋಡಲು ಯಾರೋ ಬಂದಾಗಲಾದರೂ ಟಿ,ವಿ. ಆರಿಸುವುದು ಬೇಡವಾ? ಮನಸ್ಸಿಗೆ ಕಸಿವಿಸಿಯಾದರೂ ‘ಅತಿಥಿ ದೇವೋಭವ’ ಎಂದು ನಾವು ಸುಮ್ಮನೇ ಕುಳಿತೆವು. ನಾವೆಲ್ಲ ಬೇರೆ ಮಾತುಕತೆಯಲ್ಲಿ ತೊಡಗಿದಾಗ ಆಕೆಯು ಟಿ.ವಿ. ಪರದೆಗೆ ಮುಖಕೊಟ್ಟು ಕುಳಿತಳು. ಏಕೆ ಈ ಹುಚ್ಚು? ಒಂದುದಿನವಲ್ಲ, ಇಡೀ ವಾರ ನೋಡದೇ ಹೋದರೂ ಆ ಧಾರಾವಾಹಿಯ ಕಥೆ ಮುಂದಕ್ಕೇನೂ ಹೋಗಿರುವುದಿಲ್ಲ. ಅದರ ಕಥೆ ಕೆರೆಯಾಗಿ ನಿಂತಲ್ಲೇ ನಿಂತಿರುತ್ತದೆ. ಇದೇಕೆ ಎಲ್ಲರಿಗೂ ಅರ್ಥವಾಗದು?
ಹಿಂದೊಮ್ಮೆ ನಮ್ಮ ಮನೆಗೆ ನನ್ನ ಪ್ರೀತಿಯ ಚಿಕ್ಕಮ್ಮನ ಮಗಳು ನಮ್ಮೊಟ್ಟಿಗೆ ಕೆಲವು ದಿನಗಳಿರಲು ಬಂದಳು. ಆಗ ನಮ್ಮ ಮನೆಗೆ ಕೇಬಲ್ ಬಂದಿರಲಿಲ್ಲ. ಅವಳು ಆ ದಿನ ಬಂದ ತಕ್ಷಣ ಧಾರಾವಾಹಿ ಹಾಕಮ್ಮ ಎಂದಳು. ನಾವು ನಮ್ಮ ಮನೆಗೆ ಆ ಸೌಲಭ್ಯವಿಲ್ಲ ಎಂದಾಗ ಆಕೆಗೆ ಬಹಳ ನಿರಾಸೆಯಾಯಿತು. ಬ್ಯಾಗನ್ನು ಹಿಡಿದವಳೇ “ಇಲ್ಲೇ ಪಕ್ಕದ ಕ್ರಾಸ್ ನಲ್ಲಿ ನಮ್ಮ ಸೋದರತ್ತೆ ಮಗಳಿದ್ದಾಳೆ ಕಣೆ. ಅವಳನ್ನು ನೋಡಿ ಬರುತ್ತೇನೆ” ಎಂದು ಹೋದವಳು ಪತ್ತೆಯೇ ಇಲ್ಲ! ಜೈ ಧಾರಾವಾಹಿ ಎಂದು ಮೂಗಿನ ಮೇಲೆ ಬೆರಳಿಟ್ಟೆ !
ಈಗೀಗ ಈ ಧಾರಾವಾಹಿ ವೀಕ್ಷಣೆ ಒಂದು ಗಂಭೀರ ರೂಪವನ್ನು ತಾಳುತ್ತಿದೆ. ಶಾಲೆಗೆ ಹೋಗುವ ಮಕ್ಕಳು ಸಹಾ ಈ ಸುಳಿಯಲ್ಲಿ ಸಿಲುಕಿದ್ದಾರೆ. ಅವರ ಮನಸ್ಸಿನಮೇಲೆ ಈ ಧಾರಾವಾಹಿಗಳು ಯಾವ ರೀತಿಯ ಪ್ರಭಾವವನ್ನು ಬೀರುತ್ತಿದೆ? ಇದರ ಪರಿಣಾಮವೇನು? ಎಂದು ತಂದೆ ತಾಯಿಯರು ಗಹನವಾಗಿ ಯೋಚಿಸಬೇಕಾಗಿದೆ. ಇದರಿಂದ ಅವರನ್ನು ದೂರ ಇಡುವುದಾದರೂ ಹೇಗೆ? ಮನೆಯಲ್ಲಿ ನೊಡಲು ಅವಕಾಶವಿಲ್ಲದಿದ್ದಾಗ ಪರರ ಮನೆಗಾದರೂ ಹೋಗಿ ವೀಕ್ಷಿಸುತ್ತಾರಲ್ಲ? ಇದನ್ನು ತಪ್ಪಿಸುವುದಾದರೂ ಹೇಗೆ? ಇದರಿಂದ ಮಕ್ಕಳ ಆಟ ಪಾಠಗಳು ಕುಂಠಿತಗೊಂಡಿವೆ, ವ್ಯಾಯಾಮದಲ್ಲಿ ಆಸಕ್ತಿ ಕ್ಷೀಣಿಸಿದೆ, ಪುಸ್ತಕಗಳನ್ನು ಓದುವ ಹವ್ಯಾಸದಿಂದ ಮಕ್ಕಳು ದೂರವಾಗುತ್ತಿದ್ದಾರೆ. ಕೇವಲ ಶಾಲೆಯ ಪಾಠಗಳನ್ನು ಓದಿ ಬರೆದು ಮುಗಿಸಿದರೆ ಆಯಿತು ಎಂಬ ಧೋರಣೆ ಕಂಡುಬರುತ್ತಿದೆ. ಪಠ್ಯೇತರ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆ ಪಡೆಯಬಹುದೆನ್ನುವ ಸತ್ಯ ಬಿಸಿಲ್ಗುದುರೆಯಾಗಿದೆ.
ಕೇವಲ ಮನೋರಂಜನೆಗೆಂದೇ ಪ್ರಾರಂಭವಾದ ಈ ಧಾರಾವಾಹಿಗಳು ನಮ್ಮನ್ನು ತಮ್ಮ ಸುಳಿಯಲ್ಲಿ ಸಿಲುಕಿಸಿ ಎತ್ತ ಎಳೆದೊಯ್ಯುತ್ತಿದೆ? ಇದರಿಂದ ವಿಮುಖರಾಗಲು ಅಪಾರ ಸಂಯಮ ಬೇಕಾಗಬಹುದೇನೋ? ಈ ನಿಟ್ಟಿನಲ್ಲಿ ನಾವು ಯೋಚಿಸುವುದು ಅತ್ಯಾವಶ್ಯವಾಗಿದೆ.
ಮುಂದೆ ನೀವು ಯಾರನ್ನಾದರೂ ಭೇಟಿ ಮಾಡಲು ಹೋಗಬೇಕಾದರೆ ಅವರಿಗೆ “ಅನುಕೂಲ” ವಾದ ಸಮಯ ಯಾವುದೆಂದು ಕೇಳಿಕೊಂಡು ಹೋಗಿ!
*-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com