ಅಮೆರಿಕನ್ನಡ
Amerikannada
‘ನಾಟಕ ಕಲಾವತಂಸ’ ಪ್ರಶಸ್ತಿ ಪುರಸ್ಕೃತರಾದ ಅಮೆರಿಕಾದ ಹೆಸರಾಂತ ನಗೆನಾಟಕ ಕಲಾವಿದೆ ಅಲಮೇಲು ಐಯಂಗಾರ್
-ಶಿಕಾರಿಪುರ ಹರಿಹರೇಶ್ವರ
ತೌರಿನಿಂದ ದೂರ ಹೋದ ವಿದೇಶದ ಕನ್ನಡಿಗರಿಗೆ ನಾಟಕ ನೋಡುವುದು, ಆಡುವುದು ಖುಷಿ ತರುವ ವಿಷಯ. ಚೆನ್ನಾಗಿ ತಯಾರಿ ಮಾಡಿಕೊಂಡು ಒಂದು ಒಳ್ಳೆಯನಾಟಕ ಆಡುತ್ತಿದ್ದಾರೆ ಅಂದರೆ ಇದ್ದಬದ್ದ ಕೆಲಸವನ್ನು ಬಿಟ್ಟು, ದುಡ್ಡುಕೊಟ್ಟು ಹೋಗಿ ನೋಡಿ, ಆನಂದಿಸಿ, ಚಪ್ಪಾಳೆ ಹೊಡಿಯುವುದು ಅಲ್ಲಿ ಸಾಮಾನ್ಯ. ಮೊದಮೊದಲು ಸರ್ವಶ್ರೀ ಕೈಲಾಸಂ, ಪರ್ವತವಾಣಿ, ಗುಂಡಣ್ಣ, ಸುಬ್ಬುಕೃಷ್ಣ, ದಾಶರಥಿ ದೀಕ್ಷಿತ್ ಮುಂತಾದವರ ನಾಟಕಗಳನ್ನ ಅಮೆರಿಕನ್ನಡಿಗರು ಪ್ರಯೋಗಿಸಿದರು. ಆವಾಗಲೆಲ್ಲ ಪ್ರಹಸನಗಳಿಗೇ ಹೆಚ್ಚು ಒಜ್ಜೆ. ಮೆಲ್ಲಮೆಲ್ಲಗೆ ಕುವೆಂಪು ಅವರ ‘ಬೆರಳ್ಗೆ ಕೊರಳ್’, ಪುತಿನ ಅವರ ‘ಹರಿಣಾಭಿಸರಣ’, ಲಂಕೇಶರ ‘ಕ್ರಾಂತಿ ಬಂತು ಕ್ರಾಂತಿ’, ಗಿರೀಶ್ ಕಾರ್ನಾಡರ ‘ಮಾ ನಿಷಾದ’ ಇತ್ಯಾದಿಗಳನ್ನು ಯಶಸ್ವಿಯಾಗಿ ಕನ್ನಡ ಕೂಟದ ವೇದಿಕೆಗಳ ಮೇಲೆ ವಲಯ ಸಮ್ಮೇಳನಗಳ ನಾಟಕೋತ್ಸವಗಳ ಅಂಗವಾಗಿ ಅಲ್ಲಿ ಅಭಿನಯಿಸಿದರು.
Alamelu ಈ ವೇಳೆಗಾಗಲೇ ಅಮೆರಿಕಾದಲ್ಲಿ ನಾಟಕಗಳನ್ನು ಆಡುವವರೇ ಸ್ವಂತ ನಾಟಕ ಕೃತಿ ರಚನೆ ಮಾಡಲೂ ಪ್ರಾರಂಭಿಸಿದ್ದರು. ಮೊಟ್ಟಮೊದಲು ಅಮೆರಿಕಾದ ಗಾಳಿಯಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪ್ರಸಾರವಾದ ಬಾನುಲಿ ನಾಟಕ ಡಾ| ಮೈ.ಶ್ರೀ. ನಟರಾಜರ ‘ಮರಳಿ ಯತ್ನವ ಮಾಡು’ (೧೯೭೦). ಅಮೆರಿಕದ ಕನ್ನಡ ರಂಗಕರ್ಮಿಗಳಲ್ಲಿ ನಟಿ, ನಿರ್ದೇಶಕಿ ಮತ್ತು ನಾಟಕಕಾರರಾಗಿ ಹೆಸರು ಮಾಡಿರುವ ಬಹುಮುಖ ಪ್ರತಿಭೆಯ ಕಲಾವಿದರಲ್ಲಿ ಅಗ್ರಗಣ್ಯರು- ಕ್ಯಾಲಿಫೋರ್ನಿಯಾದ ಶ್ರೀಮತಿ ಅಲಮೇಲು ನಾರಾಯಣ ಐಯಂಗಾರರು.
ಮೊದಲಿನಿಂದಲೂ ನಾಟಕದಲ್ಲಿ ಅಪಾರ ಆಸಕ್ತಿ ಇದ್ದು, ಅದು ಬೆಳೆದು, ಸಮಾಜದ ಓರೆಕೋರೆಗಳನ್ನು ಕನ್ನಡಿ ಹಿಡಿದು ನೋಡುವ, ಕಾಣಿಸುವ ಪ್ರವೃತ್ತಿ ಅಲಮೇಲು ಅವರ ಲೇಖನಿಯಲ್ಲಿ ಪ್ರಹಸನಗಳಾಗಿ ಮೂಡಿಬಂದಿವೆ. ಉತ್ತರ ಅಮೆರಿಕಾದ ಹಲವಾರು ಕನ್ನಡ ಕೂಟಗಳ ವೇದಿಕೆಗಳ ಮೇಲೆ ಮತ್ತೆ ಮತ್ತೆ ಪ್ರದರ್ಶಿತವಾದ, ವಿಶ್ವಕನ್ನಡ ಸಮ್ಮೇಳನ-೨೦೦೦ರಲ್ಲಿ ಅಭಿನಯಿಸಲ್ಪಟ್ಟ ಅವರ ನಾಟಕಗಳ ಪಟ್ಟಿ ಚಿಕ್ಕದೇನಲ್ಲ. ‘ಅಪ್ ಟು ಡೇಟ್ ಅಂಬುಜಮ್ಮ’(ರಚನೆ ೧೯೮೬), ‘ಮದುವೇ ರೀ ಮದುವೆ’(೧೯೯೦), ‘ನಳಪಾಕ’(೧೯೯೧), ‘ಹೈ ಟೆಕ್ ಹಯವದನಾಚಾರ್’(೧೯೯೪), ‘ಆನ್ತ್ರಪೆನೂರ್ ಆಂಡಾಳಮ್ಮ’(೧೯೯೮), ‘ಸಾಮರಸ್ಯಕ್ಕೆ ಒಂದು ಸಲಹೆ’(೧೯೯೯) ಮತ್ತು ಇತ್ತೀಚಿನ ರಚನೆಗಳು- ‘ನಂಜುಂಡ ಶ್ರೀನಿವಾಸ’, ‘ಕುಜದೋಷವೋ? ಶುಕ್ರದೆಸೆಯೋ’, ‘ನಾಣಿಯ ಪೀಕಲಾಟ’(ಡಾ| ಪು.ತಿ.ನ ಪ್ರಬಂಧದ ಮೇಲೆ ಆಧಾರಿತ ಕಿರು ನಾಟಕ) ಮೊದಲಾದ ನಗೆ ನಾಟಕಗಳ ರಚನಕಾರರಾಗಿ, ಅಭಿನೇತೃವಾಗಿ, ನಿರ್ದೇಶಕರಾಗಿ, ಅಲಮೇಲು ವಿದೇಶದ ಕನ್ನಡ ರಂಗಮಟಪವನ್ನು ಬೆಳಗುತ್ತಿದ್ದಾರೆ. ಹೈಟೆಕ್..., ನಳಪಾಕ, ಸಾಮರಸ್ಯಕ್ಕೆ..., ಅಪ್‌ಟುಡೇಟ್...- ಗಳು ಪುಸ್ತಕರೂಪದಲ್ಲೂ ಪ್ರಕಟವಾಗಿದೆ (ಅಭಿವ್ಯಕ್ತಿ ೨೦೦೩).
‘ಅಪ್ ಟು ಡೇಟ್ ಅಂಬುಜಮ್ಮ’ನವರಲ್ಲಿ ಹೊಟ್ಟೆ ಹುಣ್ಣಾಗಿಸುವ ನಗೆ ಚಟಾಕಿಗಳ ಜೊತೆಗೆ. ಸತ್ಯಕ್ಕೆ ಇರುವ ಚಿನ್ನದ ಮುಚ್ಚಳ (‘ಹಿರಣ್ಮಯೇನ ಪಾತ್ರೇಣ ಸತ್ಯಸ್ಯ ಅಪಿಹಿತಂ ಮುಖಮ್’) ತೆರೆಸುವ ಪ್ರಯತ್ನವಿದೆ; ‘ಮದುವೇ ರೀ ಮದುವೆ’ಯಲ್ಲಿ ಇಲ್ಲಿಗೆ ವಲಸೆ ಬಂದ ಆಗಮಿಕನ, ಇಮಿಗ್ರೆಂಟ್ ಒಬ್ಬನ ಬವಣೆ, ತಾನು ಕೆಲಸಕಳೆದುಕೊಂಡಾಗ ಮದುವೆ ದಳ್ಳಾಳಿ (‘ಮ್ಯಾಚ್ ಮೇಕಿಂಗ್’)ಧಂದೆಯಲ್ಲಿ ತೊಡಗಿದ್ದುದರ ವಿಡಂಬನೆ ಇದೆ; ‘ನಳಪಾಕ’ದಲ್ಲಾದರೋ ಸೋಗು ಹಾಕುವ ವಿದ್ಯ್ಯಾರ್ಥಿ/ವಿದಾರ್ಥಿನಿಯರ ಬೇಳೆ ಬೇಯದು; ‘ಹೈ ಟೆಕ್ ಹಯವದನಾಚಾರ್’ ಊರಿಂದ ಬಂದವರು ವಿದೇಶದ ಎಲ್ಲ ಆಧುನಿಕ ಉಪಕರಣಗಳ ಸೌಲಭ್ಯವನ್ನು ಅಳವಡಿಸಿಕೊಂಡು, ಹಳೆಯ ನೀರನ್ನು ಹೊಸ ಬಾಟಲಿಗೆ ಆತುರಾತುರವಾಗಿ ತುಂಬಿಸುವವರತ್ತ ಬೊಟ್ಟು ಮಾಡಿ ತೋರಿಸುವುದಿದೆ; ‘ಆನ್ತ್ರಪೆನೂರ್ ಆಂಡಾಳಮ್ಮ’ ನವರಲ್ಲಿ ಹೆಸರೇ ಸೂಚಿಸುವಂತೆ, ಹೊಸಹೊಸ ದಿಗಂತಗಳನ್ನು ಕಾಣಲು ಹೊರಟ ಸಾಹಸದ ಹೆಜ್ಜೆ ಗುರುತುಗಳಿವೆ, ಎಷ್ಟಾದರೂ ತಲೆಗೆ ಬೆಲೆ, ತಲೆಗೇ ಬೆಲೆ ಎಂಬ ಮಾತನ್ನು ನಗೆ ಬುಗ್ಗೆಯ ನೆರಳಲ್ಲಿ ಮನಗಾಣಿಸುವ ವಸ್ತುವಿದೆ; ‘ಸಾಮರಸ್ಯಕ್ಕೆ ಒಂದು ಸಲಹೆ’ ಹಿಂದೆ ಯಾರು ಯಾರೋ ಕೊಟ್ಟಿರ ಬಹುದು, ಇಲ್ಲಿರುವುದು ಬೇರೆ. ಇನ್ನೊಂದಿದೆ: ‘ವೆಂಕಜ್ಜಿ’. (ಸುಧಾದಲ್ಲಿ, ೧೯೭೦ರಲ್ಲಿ ಪ್ರಕಟಿತ). ಇದರಲ್ಲಿ ಆಧುನಿಕ ಮಾರಕಾಸ್ತ್ರಗಳನ್ನು ನಮ್ಮ ಪೌರಾಣಿಕ ಕನ್ನಡಕದ ಮೂಲಕ ನೋಡಿದಾಗ ಆಗುವ ಆಭಾಸಗಳ ಚಕಮಕಿ ಇದೆ. ಮತ್ತೊಂದಿದೆ: ‘ಸಂಪದ್ಗಿರಿರಾಯನ ಸಂಪಾದಕಗಿರಿ’ (ಸುಧಾ, ೧೯೭೧) ಅದು ಪತ್ರಿಕೋದ್ಯಮ ನಿರತರ ನಗೆಪಾಟಲು ಸನ್ನಿವೇಶಗಳ ಒಂದು ಚಿತ್ರಣ. ಮೇರಿಲ್ಯಾ೦ಡ್‌ನ ಹೆಸರಾಂತ ನಾಟಕಕಾರ ಡಾ. ಮೈ. ಶ್ರೀ. ನಟರಾಜ ಹೇಳುತ್ತಾರೆ: “ಅಲಮೇಲು ಅವರ ನಾಟಕಗಳೆಂದರೆ ಥಟ್ಟನೆ ಮನಸ್ಸಿಗೆ ಬರುವ ಪ್ರತಿಕ್ರಿಯೆ ‘ನಗು’. ತಿಳಿಹಾಸ್ಯದ ಕಡಲಿನಲ್ಲಿ ಪ್ರೇಕ್ಷಕರನ್ನು ತೇಲಿಸುವ ಮೋಡಿ ಅವರ ನಾಟಕಗಳಲ್ಲಿದೆ. ಅವರ ‘ಹೈ ಟೆಕ್ ಹಯವದನಾಚಾರ್ಯ’ರನ್ನು ‘ಕಾವೇರಿ’ಯ ಕಲಾವಿದರು ಪ್ರದರ್ಶಿಸಿದ್ದನ್ನೂ, ಅದನ್ನೇ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದವರು ಹ್ಯೂಸ್ಟನ್ ವಿಶ್ವಕನ್ನಡ ಸಮ್ಮೇಳನದಲ್ಲಿ ಪ್ರದರ್ಶಿಸಿದ್ದನ್ನೂ ಕಂಡು ನಕ್ಕು ನಲಿದಿದ್ದೇನೆ. ಇತ್ತೀಚೆಗೆ ಡಿಸೆಂಬರ್ ನಲ್ಲಿ ‘ತ್ರಿವೇಣಿ’ಯ ರಜತೋತ್ಸವದಲ್ಲಿ ನ್ಯೂಜೆರ್ಸಿಯಲ್ಲಿ ಅವರ ಇನ್ನೊಂದು ನಾಟಕ ‘ಸಾಮರಸ್ಯಕ್ಕೊಂದು ಸಲಹೆ’ಯನ್ನು ನೋಡುವ, ಸವಿಯುವ ಅವಕಾಶ ಸಿಕ್ಕಿತು. ಈ ಪ್ರಹಸನದಲ್ಲಿಯೂ ಸಹ ಅಲಮೇಲು ಅವರ ಹಾಸ್ಯಪ್ರವೃತ್ತಿಯನ್ನೂ ಕುಶಲ ಸಂಭಾಷಣೆಯ ಚುರುಕನ್ನೂ ಕಾಣುತ್ತೇವೆ!”
ತುಂಬಾ ಒಳ್ಳೆಯವರು ಅವರು ನಿಜ; ಆದರೆ ನಿಮಗೆ ಗೊತ್ತಿರಲಿ: ಅಲಮೇಲು ಅವರು ‘ಉಟ್ಟು ಓರಾಟಗಾರರು’. ಸರಿಯೆಂದು ಕಾಣಿಸದಿದ್ದರೆ, ಮೊದಲು ನಯವಾಗಿ ತಿಳಿಯಪಡಿಸಿ, ಬಗ್ಗದಿದ್ದರೆ ಆಮೇಲೆ ಸಂಬಂಧಪಟ್ಟವರನ್ನು ಮುಲಾಜಿಲ್ಲದೆ ತರಾಟೆಗೆ ತೆಗೆದು ಕೊಂಡು ತಪ್ಪನ್ನು ಸರಿಪಡಿಸುವ ದಿಟ್ಟಗಾತಿ ಅವರು. ಹೈಸ್ಕೂಲಿನಲ್ಲಿ ಕನ್ನಡಮಾಧ್ಯಮದಲ್ಲಿ ಓದಿದ್ದು, ಚರ್ಚಾ ಕೂಟ ಮತ್ತು ನಾಟಕಗಳಲ್ಲಿ ಯಾವಾಗಲೂ ಭಾಗವಹಿಸುತಿದ್ದರು.
ಕ್ರೀಡಾ ಚಟುವಟಿಕೆಗಳಲ್ಲೂ ಹಿಂದೆ ಬಿದ್ದವಳಲ್ಲ ಈ ಹುಡುಗಿ. ಥ್ರೋ ಬಾಲ್, ಬ್ಯಾಸ್ಕೆಟ್ ಬಾಲ್, ಷಟ್ಲ್, ಬ್ಯಾಡ್‌ಮಿಂಟನ್ ಮುಂತಾದವುಗಳಲ್ಲಿ ತನ್ನನ್ನು ತೀವ್ರವಾಗಿ ತೊಡಗಿಸಿಕೊಂಡಿದ್ದುಂಟು. ಈಜುವುದರಲ್ಲೋ ಮುಂದಾಳು, ಛಾಂಪಿಯನ್; ಹಲವಾರು ಅಂತರ್ ಕಾಲೇಜು ಈಜು ಸ್ಪರ್ಧೆಗಳಲ್ಲಿ ಪ್ರಶಸ್ತಿ ವಿಜೇತರು, ಕಂಚು ಮತ್ತು ಬೆಳ್ಳಿ ಢಾಲುಗಳನ್ನು ಪದಕಗಳನ್ನು ಗೆದ್ದು ಕಾಲೇಜಿಗೆ ಕೀರ್ತಿ ತಂದವರು. ಈಜುವುದರಲ್ಲಿ ಆತ್ಮ ವಿಶ್ವಾಸ ಹೆಚ್ಚು. ೧೯೬೯ರಲ್ಲಿ ನಡೆದದ್ದು: ‘ಹರಿಯುವ ನೀರೆಂದರೆ ನನಗೆ ಭಯ, ನಾನಿಳಿಯಲಾರೆ ನದಿಗೆ’ ಇತ್ಯಾದಿ ಬಿಳಿ ಸುಳ್ಳು ಮೊದಲು ಹೇಳಿ, ಆಮೇಲೆ ಧಡಾರನೇ ನೀರಿಗೆ ಬಿದ್ದು, ದಡದಲ್ಲಿದ್ದವರ ಗಾಭರಿ ಕಿರುಚಾಟಕ್ಕೆ ಕಾರಣರಾಗಿ, ತುಂಟು ಚೇಷ್ಟೆ ಮಾಡಿದ ಈ ಹುಡುಗಿ, ಶೃಂಗೇರಿಯ ತುಂಗೆಯ ಹೊಳೆಯ ಮಡುವಿನಲ್ಲಿ ಸಲೀಸಾಗಿ ಈಜಿದ ಪ್ರಸಂಗವನ್ನ ಕನ್ನಡ ಗಣಕ ಪರಿಷತ್ತಿನ ಶ್ರೀನಾಥಶಾಸ್ತ್ರಿಗಳು ‘ವಿಶ್ವಕನ್ನಡ’(ಸ೦ಪುಟ ೩, ಸಂಚಿಕೆ ೧)ದಲ್ಲಿ ಸೊಗಸಾಗಿ ಕತೆ ಹೇಳಿದ್ದಾರೆ.
ಆಟಗಾರರ ಮಾತಾಯ್ತು, ಇನ್ನು ಹೋರಾಟಗಾರರನ್ನು ಗುರುತಿಸೋಣ! ಕಾಲೇಜಿನಲ್ಲಿ ಪ್ರಿ-ಯೂನಿವರ್ಸಿಟಿ ತರಗತಿಗಳಲ್ಲಿ ವಿಜ್ಞಾನ ವಿಷಯಗಳನ್ನು ತೆಗೆದುಕೊಂಡಿದ್ದರೂ, ಕರ್ನಾಟಕದಲ್ಲೇ ದೊಡ್ಡಸಂಸ್ಥೆಯಾದ ಮಹಾರಾಣಿ ಕಾಲೇಜಿನಲ್ಲಿ ಕನ್ನಡವನ್ನು ಮುಖ್ಯ ವಿಷಯ (ಮೇಜರ್ ಸಬ್ಜಕ್ಟ್) ಆಗಿ ಹೇಳಿಕೊಡಲು ಅವಕಾಶವಿರದಿದ್ದನ್ನು ಕಂಡು ನೊಂದಿದ್ದ ಶ್ರೀಮತಿ ಕಮಲಾ ಹಂಪನಾ ಮತ್ತು ಇತರ ಕನ್ನಡ ಅಧ್ಯಾಪಕರ ಪರವಾಗಿ ಸರ್ಕಾರ ಮತ್ತು ವಿಶ್ವವಿದ್ಯಾನಿಲಯದ ಸಿಬ್ಬಂದಿಯೊಡನೆ ಪೂಜ್ಯ ತೀನಂಶ್ರೀ ಅವರ ಬೆಂಬಲದಿಂದ ಹೋರಾಡಿ, ಮೊಟ್ಟಮೊದಲ ಬಾರಿಗೆ ಕನ್ನಡವನ್ನು ಮುಖ್ಯ(ಮೇಜರ್) ವಿಷಯವಾಗಿ ಅಭ್ಯಸಿಸುವ ಅವಕಾಶ ದೊರಕುವಂತೆ ಮಾಡಿದ ಸಾಧನೆಯಿಂದ ಅನೇಕರ ಮೆಚ್ಚುಗೆಗೆ ಪಾತ್ರಳಾದವರು- ಅಲಮೇಲು ಅವರು.
“ವಿಜ್ಞಾನದಿಂದ ಸಾಹಿತ್ಯದತ್ತ ನನ್ನ ಒಲವನ್ನು ತಿರುಗಿಸಿದ ಮುಖ್ಯ ಘಟನೆ ಇದು. ಅಂದು ಕನ್ನಡದ ದೆಸೆಯಲ್ಲಿ ಇಟ್ಟ ದಿಟ್ಟ ಹೆಜ್ಜೆ, ಮಹಾರಾಣಿ ಕಾಲೇಜಿನಿಂದ ಮಾನಸಗಂಗೋತ್ರಿಯವರೆಗೂ ನನ್ನನ್ನು ನಡೆಸಿಕೊಂಡು ಬಂದಿತು.”- ಎನ್ನುತ್ತಾರೆ, ಅಲಮೇಲು ಅವರು.
ಕನ್ನಡ ಎಂ. ಎ. ಪದವೀಧರಳಾದ (೧೯೬೯) ನಂತರ ‘ಜ್ಞಾನ ಗಂಗೋತ್ರಿ’ ಮಕ್ಕಳ ವಿಶ್ವಕೋಶದಲ್ಲಿ ಶ್ರೀ ನಿರಂಜನ ಮತ್ತು ಪೊಫಸರ್ ಎಲ್. ಎಸ್. ಶೇಷಗಿರಿರಾವ್ ಅವರ ನೇತೃತ್ವದಲ್ಲಿ ಎರಡು ವರ್ಷಗಳ ಕಾಲ (೧೯೬೯-೭೧) ಉಪಸಂಪಾದಕರಾಗಿದ್ದರು. ಆಮೇಲೆ ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದರು (೧೯೭೧-೭೨). ಈ ದಿನಗಳಲ್ಲಿ, (ಅಂದರೆ, ೧೯೫೬-೬೬) ಬೆಂಗಳೂರಿನಲ್ಲಿದ್ದು ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ, ವನಿತಾವಿಹಾರ, ರೇಡಿಯೋ ನಾಟಕ, ಮಾತಿನ ಚಾವಡಿ-ಗಳಲ್ಲಿ ಭಾಗವಹಿಸುತ್ತಿದ್ದರು.
೧೯೭೧ ರಿಂದ ೧೯೭೯ ರವರೆಗೆ ಆಂಧ್ರಪ್ರದೇಶದ ಹೈದರಾಬಾದಿನಲ್ಲಿ ವಾಸ. ಅಲ್ಲಿದ್ದಾಗ ಹೈದರಾಬಾದಿನಲ್ಲೊಂದು ಕನ್ನಡ ಕೂಟ ಅರಂಭಿಸಿ, ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಆಲ್ಲಿನ ಆಕಾಶವಾಣಿ ಕೇಂದ್ರದಲ್ಲಿ ಕನ್ನಡ ನಾಟಕ, ಭಾವಗೀತೆಗಳ ಕಾರ್ಯಕ್ರಮಗಳನ್ನು ಪ್ರಸಾರಮಾಡಿದ್ದೇ ಅಲ್ಲದೆ ಕನ್ನಡ ಜಾನಪದ ಸಾಹಿತ್ಯದಮೇಲೆ ಆರು ಭಾಷಣಗಳನ್ನು ಬಿತ್ತರಿಸಿದರು. ಅವುಗಳಲ್ಲಿ ಅಲಮೇಲು ಆಗಾಗ್ಗೆ ನೆನಪಿಸಿಕೊಳ್ಳುವುದು ಈ ನಾಲ್ಕನ್ನು: ‘ಜನಪದಸಾಹಿತ್ಯದಲ್ಲಿ ತಾಯಿ’, ‘ಜನಪದಸಾಹಿತ್ಯದಲ್ಲಿ ತಾಯಿ ಮಗಳ ಬಾಂಧವ್ಯ’, ‘ಜನಪದಸಾಹಿತ್ಯದಲ್ಲಿ ಸೊಸೆ’ ಮತ್ತು ‘ಜನಪದಸಾಹಿತ್ಯದಲ್ಲಿ ಶಿಶು’.
ಈ ಮಧ್ಯೆ ಸುಧಾ, ಪ್ರಜಾಮತ (ಜನಪದ ಸಾಹಿತ್ಯದಲ್ಲಿ ಶಿವ ಶಿವೆಯರ ಸರಸ ಸಲ್ಲಾಪ, ೧೯೭೧, ಯದುಗಿರಿಯಲ್ಲಿ ವೈರಮುಡಿ, ೧೯೭೧- ಹೆಸರಿಸ ಬಹುದು) ಮತ್ತಿತರ ಪತ್ರಿಕೆಗಳಿಗೆ ಆಗೊಂದು ಈಗೊಂದು ಲೇಖನ ಬರೆಯುತ್ತಿದ್ದರು. ಅವರ ಲಘು ಹಾಸ್ಯ ಬರೆಹಗಳಲ್ಲಿ ಜನ ಜ್ಞಾಪಿಸಿಕೊಳ್ಳುವುದು- ವೆಂಕಜ್ಜಿ ಜೇಮ್ಸ್ ಬಾಂಡ್, ಸಂಪದ್‌ಗಿರಿರಾಯನ ಸಂಪಾದಕಗಿರಿ, ವಾಯ್ಸ್ ಮೇಲ್ ವಿಪರ್ಯಾಸ, ಮೊಬೈಲ್ ಮೋಹಿನಿ ಮುಂತಾದವನ್ನು. ಕಾಣಿಕೆ, ಸಂಧ್ಯಾಭಿವಂದನೆ, ಕನ್ನಡಿ ನನ್ನೊಡನಾಡಿ, ಐವತ್ತರ ಹೊಸ್ತಿಲು, ಸ್ಸಾರಿ, ಬಿನ್ನಹ, ನಿದ್ದೆ... ನೀನೆಲ್ಲಿದ್ದೇ?, ಅರವತ್ತರ ಗಮ್ಮತ್ತು ಮುಂತಾದ ಇವರ ಕವನಗಳಲ್ಲೂ ಹಾಸ್ಯ ಪ್ರವೃತ್ತಿಯ ಮೆರವಣಿಗೆ ನಿಂತಿಲ್ಲ. ಇದಲ್ಲದೆ ವಿವಾಹ ಮತ್ತು ಇತರ ಸಾಮಾಜಿಕ ಸಂದರ್ಭಕ್ಕೆ ರಚಿಸಿದ ಹಾಡುಗಳಿಗೂ ಕಡಿಮೆಯೇನಿಲ್ಲ. ಉಪಕುಲಪತಿ ದೇಜಗೌ ಅಭಿನಂದನಾ ಗ್ರಂಥಕ್ಕೆ ‘ಗುರುವರೇಣ್ಯ’ ಬರೆದದ್ದು ೧೯೮೦ರಲ್ಲಿ. ಯದುಗಿರಿಯಲ್ಲಿ ವೈರಮುಡಿ (ಪ್ರಜಾಮತ). ಜಾನಪದ ಸಾಹಿತ್ಯದಲ್ಲಿ ಶಿವ ಶಿವೆಯರ ಸರಸ ಕಲಹ (ಸುಧಾ), ನನ್ನ ಪೂಜ್ಯ ತಂದೆ ಡಾ| ಪು.ತಿ. ನರಸಿಂಹಾಚಾರ್ (ವಿಕಾಸ), ಅಣ್ಣನ ನೆನೆಪಿನಲ್ಲಿ (ಯದುಗಿರಿಯ ಬೆಳಕು), ಪುರಂದರ ಸಾಹಿತ್ಯದಲ್ಲಿ ವಿಡಂಬನೆ (ನಗೆಗನ್ನಡಂ ಗೆಲ್ಗೆ), ನನ್ನ ನೆಚ್ಚಿನ ಕವಿ ಡಾ| ನಿಸಾರ್ (ನಿಸಾರ್ ನಿಮಗಿದೋ ನಮನ), ಸಾಹಿತ್ಯ ದಿಗ್ಗಜರ ಸಾನಿಧ್ಯದಲ್ಲಿ (ಪೂಜ್ಯ ಮಾಸ್ತಿಯವರನ್ನು ಕುರಿತ ಲೇಖನ, ಕನ್ನಡದ ಅಮರ ಚೇತನ) ಇವರ ಇನ್ನಿತರ ವಿಮರ್ಶಾತ್ಮಕ ಲೇಖನಗಳು.
ಆಮೇಲೆ ಅಲಮೇಲು ಅಮೆರಿಕಾಕ್ಕೆ ಬಂದರು; ಕ್ಯಾಲಿಫೋರ್ನಿಯಾದ ಸಾಂಸ್ಕೃತಿಕ ಪ್ರಪಂಚಕ್ಕೆ ಧುಮ್ಮಿಕ್ಕಿ ‘ಭೋಂಕನೆ ನಿಖಿಳ ಜನಾ೦ತರಂಗಮಂ ರಂಗಮುವಂ’ (ಪ೦ಪನ ಆದಿಪುರಾಣದ ನೀಳಾಂಜನೆಯಂತೆ) ಹೊಕ್ಕರು, ಅದೃಶ್ಯವಾಗದೆ ದೃಶ್ಯಕಾವ್ಯಗಳಲ್ಲಿ ನಿಂತರು. ನಾಟಕಗಳನ್ನು ಬರೆದರು, ಆಡಿದರು, ಆಡಿಸಿದರು, ಆಡಿಸುತ್ತಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾದ ಕನ್ನಡ ಕೂಟದ ಮನರ೦ಜನಾ ಕಾರ್ಯದರ್ಶಿಗಳಾಗಿ, ಅಧ್ಯಕ್ಷರಾಗಿ (೧೯೮೬-೮೭) ಒಳ್ಳೊಳ್ಳೆಯ ಕಾರ್ಯಕ್ರಮಗಳಿಗೆ ಕಾರಣರಾದರು: ವರಕವಿ ಡಾ. ಪು ತಿ ನ ಅವರ ಶ್ರೀರಾಮ ಪಟ್ಟಾಭಿಷೇಕ (೧೯೮೩), ಹರಿಣಾಬಿಸರಣ (೧೯೮೬, ೧೯೯೭), ದೀಪಲಕ್ಷ್ಮಿ(೧೯೮೭) ಗೀತನಾಟಕಗಳನ್ನು ಯಶಸ್ವಿಯಾಗಿ ತಾವೇ ಸಂಗೀತ ನಿರ್ದೇಶನ, ರಂಗ ನಿರ್ದೇಶನಗಳೊಂದಿಗೆ ಪ್ರದರ್ಶಿಸಿದರು. ಇಲ್ಲಿನ ದಕ್ಷಿಣಭಾರತೀಯ ಲಲಿತಕಲೆಗಳ ಸಂಸ್ಥೆ (ಸೌತ್ ಇಂಡಿಯಾ ಫೈನ್ ಆರ್‌ಟ್ಸ್)ಗೆ ಉಪಾಧ್ಯಕ್ಷರಾಗಿ, ಲಿವರ್ ಮೋರ್‌ನ ಶಿವ-ವಿಷ್ಣು ದೇವಾಲಯದ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ; ಹಲವಾರು ಸಾಂಸ್ಕೃತಿಕ ಸಂಸ್ಥೆಗಳ ಸಲಹಾ ಮಂಡಳಿಗಳಲ್ಲಿದ್ದು ನೃತ್ಯ, ಸಂಗೀತ, ಚಿತ್ರಕಲೆಗಳ ಚಟುವಟಿಕೆಗಳ ಪೋಷಣೆಗೆ ಸಹಾಯಕರಾಗಿದ್ದಾರೆ. ಇ೦ಥವುಗಳ ಮತ್ತು ವಿಶ್ವವಿದ್ಯಾಲಯಗಳ ವೇದಿಕೆಯ ಮೇಲೆ ನಿಂತು ಭಾರತದ ಬಗ್ಗೆ, ಕರ್ನಾಟಕದ ಬಗ್ಗೆ ಸೊಗಸಾಗಿ ಮಾತನಾಡುತ್ತಾರೆ, ಸ್ಥಳೀಯ ಬಾನುಲಿ ಮತ್ತು ದೂರದರ್ಶನ ಕೇಂದ್ರಗಳಲ್ಲಿ ಉಪನ್ಯಾಸ ಮತ್ತು ಸಮಾವೇಶ (ಸಿಂಪೋಜಿಯಮ್) ಗಳಲ್ಲಿ ಭಾಗವಹಿಸುತ್ತಾರೆ. ಕವನಗಳನ್ನು ಬರೆಯುತ್ತಾರೆ; ಹಾಡುತ್ತಾರೆ. ಕರ್ನಾಟಕ ಸಂಗೀತದಲ್ಲಿ ವಿಶೇಷ ಆಸಕ್ತಿ. ಚಿಕ್ಕಂದಿನಲ್ಲೇ ಸಂಗೀತ ಅಭ್ಯಾಸ ಮಾಡಿದವರು, ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಗಮನಾರ್ಹ ವರಿಷ್ಠ ಮಟ್ಟದಲ್ಲಿ (ಡಿಸ್ಟಿನ್ಕ್‌ಷನ್) ಉತ್ತೀರ್ಣರು.
ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ದಶವಾರ್ಷಿಕ ಸಂಚಿಕೆ(೧೯೮೩) ‘ಸಹೃದಯ’ ದ ಮುಖ್ಯ ಸಂಪಾದಕಿ ಆಗಿದ್ದರು, ಅಲಮೇಲು. ಈ ಸಂಚಿಕೆಯೇ ಕೂಟದ ಮುಂದಿನ ವಾರ್ಷಿಕ ಸಂಚಿಕೆಗಳನ್ನು ತರಲು ಸ್ಪೂರ್ತಿ ಮತ್ತು ಮಾದರಿ ಆಯಿತು- ಎನ್ನುತ್ತಾರೆ, ಕ್ಯಾಲಿಫೋರ್ನಿಯಾದ ಇನ್ನೊಬ್ಬ ನಾಟಕಕಾರರು, ಶ್ರೀಮತಿ ಸಂಧ್ಯಾ ರವೀಂದ್ರನಾಥ್ ಅವರು. ನಾಗತಿಹಳ್ಳಿ ಶ್ರೀ ಚಂದ್ರಶೇಖರರ ‘ಅಮೇರಿಕ ಅಮೇರಿಕ’ ಚಿತ್ರದ (೧೯೯೬) ಕಥಾ ರಚನೆಯ ಮಂಡಳಿಯಲ್ಲಿ, ಅವರದೇ ಆದ ‘ನನ್ನ ಪ್ರೀತಿಯ ಹುಡುಗಿ’ (೨೦೦೦)ಚಿತ್ರಕಥೆಗೆ ಮೂಲ ಹಂದರದ ಕೊಡುಗೆಯಲ್ಲಿ ಅಲಮೇಲು ಅವರ ಪಾತ್ರವಿದೆ.
ಎಲ್ಲಕ್ಕೂ ಮಿಗಿಲಾಗಿ ಅಲಮೇಲು ಅವರ ನಾಟಕವಿದೆಯೆಂದರೆ ಕಿಕ್ಕಿರಿದು ನೆರೆಯುವ ಜನಸ್ತೋಮಕ್ಕೆ ನಗೆಪಾಯಸ ಕಟ್ಟಿಟ್ಟ ಬುತ್ತಿ. ಈ ಸೆಳೆತ-ಒತ್ತಡ-ಎಳೆತಗಳ ಜಂಜಾಟದ ಇಲಿ-ಪಂದ್ಯದ ಜೀವನದಿಂದ ದೂರ ಕರೆದೊಯ್ದು ಅವರು ನೋಡುಗರನ್ನು ಭ್ರಾಮಕ ಪ್ರಪಂಚವೊಂದರಲ್ಲಿ ಕ್ಷಣಕಾಲ ಮೈಮರೆಸುತ್ತಾರೆ.
‘ನಗು ನಗುತಾ ನಲೀ, ನಲಿ; ಏನೇ ಆಗಲೀ’- ಹಾಡುತ್ತಾ ಹೋಗುವ ಬಂಗಾರದ ಮನುಷ್ಯ ನೆನಪಾಗುತ್ತಾನೆ; ‘ನಗುವುದು ಸಹಜ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದು ಅತಿಶಯದ ಧರ್ಮ; ನಗುವ, ನಗಿಸುವ, ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೋ’ - ಎಂದಿಲ್ಲವೇ ಮಂಕುತಿಮ್ಮನ ಕಗ್ಗ? ಆ ವರ ಇಲ್ಲಿ ಇವರಿಗೆ ದಕ್ಕಿದೆ.
ಕೊನೆಯಲ್ಲಿ ಹೇಳಲು ಉಳಿಸಿಕೊಂಡಿದ್ದೇನೆ: ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದಿಂದ ‘ನಾಟಕ ಕಲಾವತಂಸ’ ಪ್ರಶಸ್ತಿ ಪುರಸ್ಕೃತ ಅಲಮೇಲು ಅವರು ಕನ್ನಡದ ಹೆಸರಾಂತ ಕವಿ, ಗೀತರೂಪಕಕಾರ ಶ್ರೀ ಪು.ತಿ.ನ ಅವರ ಮಗಳು. ಅಲಮೇಲು ಅವರ ಪತಿ ಶ್ರೀ ತಿರು ನಾರಾಯಣ ಅವರು ಟೆಲೆಕಮ್ಯೂನಿಕೇಷನ್ ಇಂಜನಿಯರ್. ಕನ್ನಡ, ಸಂಸ್ಕೃತ ಮತ್ತು ಸಂಗೀತದಲ್ಲಿ ಅಪಾರ ಆಸಕ್ತಿ ತಿರು ನಾರಾಯಣರಿಗೆ. ಈ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು: ವಿಜಯ್ ಮತ್ತು ಜಯಂತ್. ಸುಚರಿತಾ ಅವರ ಅಚ್ಚುಮೆಚ್ಚಿನ ಹಿರಿಯ ಸೊಸೆ. ಉತ್ತರ ಕ್ಯಾಲಿಫೋರ್ನಿಯಾದ ಸರಟೋಗಾ ನಗರದಲ್ಲಿ ಅಲಮೇಲು ದಂಪತಿಗಳ ವಾಸ. ವಿ-ಅಂಚೆ: iyengars@gmail.com