ಅಮೆರಿಕನ್ನಡ
Amerikannada
ಮೆಚ್ಚುವ ಕೀರ್ತನೆಗಳ ‘ಶ್ರೀಪುರಂದರದಾಸರು’
ಕೆ. ಜೆ. ನಾರಾಯಣ ಕಿಕ್ಕೇರಿ
ಮೈಸೂರಿನ ಕಲಾ ಸುರುಚಿ ತಂಡವು ಇತ್ತೀಚೆಗೆ ಕುವೆಂಪುನಗರದ ರೋಟರಿ ವೆಸ್ಟ್ ಶಾಲೆಯ ಸಭಾಂಗಣದಲ್ಲಿ ದಿವಂಗತ ಶಿಕಾರಿಪುರ ಹರಿಹರೇಶ್ವರ ವಿರಚಿತ ‘ಶ್ರೀ ಪುರಂದರದಾಸರು’ ನಾಟಕವನ್ನು ಪ್ರಸ್ತುತಪಡಿಸಿದರು. ಇದರ ರಂಗರೂಪ ಹಾಗೂ ನಿರ್ದೇಶನ ಪ್ರೊ| ಸಿ.ವಿ. ಶ್ರೀಧರಮೂರ್ತಿ ಅವರು.
Drama ಸೂತ್ರಧಾರನ ಪ್ರವೇಶದಿಂದ ನಾಟಕ ಆರಂಭವಾಗುತ್ತದೆ. ಪುರಂದರರ ಪೂರ್ವ ವೃತ್ತಾಂತವನ್ನು ಹೇಳುತ್ತಾ ಅವರ ರತ್ನಪಡಿ ವ್ಯಾಪಾರ, ನವಕೋಟಿ ನಾರಾಯಣ ಎಂಬ ಹೆಸರಿದ್ದರೂ ಅವನ ಜಿಪುಣತನದ ಹಿರಿಮೆ ಕಥೆಯನ್ನು ಪರಿಚಯಿಸುತ್ತಾನೆ. ಸಂಗೀತ ಶಿಕ್ಷಕಿಯು ಸಂಗೀತ ಹೇಳಿಕೊಡುತ್ತಾ ಪುರಂದರದಾಸರ ಬಗ್ಗೆ ಮಕ್ಕಳಿಗೆ ಕಥೆ ಹೇಳುತ್ತಾ ಪರಿಚಯಿಸುತ್ತಾ ಹೋಗುತ್ತಾಳೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ. ರತ್ನಗಳ ವ್ಯಾಪಾರಿ. ಒಮ್ಮೆ ಈತನ ಅಂಗಡಿಗೆ ಒಬ್ಬ ಬಡ ಬ್ರಾಹ್ಮಣ ಮಗನ ಉಪನಯನಕ್ಕೆಂದು ಸಹಾಯ ಕೇಳಿಕೊಂಡು ಭಿಕ್ಷೆಗೆ ಬರುತ್ತಾನೆ. ಎಂಜಲು ಕೈಯಲ್ಲಿ ಕಾಗೆ ಓಡಿಸೋ ಬುದ್ಧಿಯ ಜಿಪುಣ ಶ್ರೀನಿವಾಸ ಏನೂ ಕೊಡದೆ ಅವನನ್ನು ಅಟ್ಟುತ್ತಾನೆ. ಆತ ಶ್ರೀನಿವಾಸನ ಮನೆಗೆ ಬಂದು ಅವನ ಪತ್ನಿ ಸರಸ್ವತಿಯಲ್ಲಿ ಸಹಾಯ ಬೇಡುತ್ತಾನೆ. ಗಂಡನ ಅನುಮತಿಯಿಲ್ಲದೆ ಏನನ್ನು ದಾನ ಮಾಡಲಾಗದ ಕಟ್ಟಪ್ಪಣೆಯಲ್ಲಿದ್ದ ಈಕೆ ತನ್ನ ಮದುವೆಗೆ ಮುನ್ನ ತವರಿನ ಮನೆಯಲ್ಲಿ ಕೊಟ್ಟ ಚಿನ್ನದ ಮೂಗುತಿಯನ್ನು ನೀಡುತ್ತಾಳೆ. ಈತ ಈ ಮೂಗುತಿಯನ್ನು ಶ್ರೀನಿವಾಸ ಅಂಗಡಿಗೆ ತಂದು ಹಣ ಕೊಡಲು ಕೇಳುತ್ತಾನೆ. ತನ್ನ ಹೆಂಡತಿಯ ಮೂಗುತಿಯನ್ನು ನೋಡಿ ಕೋಪಗೊಂಡ ಶ್ರೀನಿವಾಸ, ಬ್ರಾಹ್ಮಣನನ್ನು ಕೂರಿಸಿ ತನ್ನ ಮನೆಗೆ ಧಾವಿಸುತ್ತಾನೆ. ಹೆಂಡತಿ ಸರಸ್ವತಿಯಲ್ಲಿ ಮೂಗುತಿಯನ್ನು ತೋರಿಸಲು ಕೇಳುತ್ತಾನೆ. ಧರ್ಮಸಂಕಟಕ್ಕೆ ಸಿಕ್ಕಿಕೊಂಡ ಈಕೆ ಶ್ರೀ ಹರಿಯನ್ನು ಪ್ರಾರ್ಥಿಸಿ ಬಟ್ಟಲಿನಲ್ಲಿ ವಿಷ ಹಾಕಿಕೊಂಡು ಕುಡಿಯಲು ಹೋಗುತ್ತಾಳೆ. ಆ ಬಟ್ಟಲಿನಲ್ಲಿ ಮೂಗುತಿ ಕಾಣುತ್ತದೆ. ಅದನ್ನು ತನ್ನ ಗಂಡನಿಗೆ ಕೊಡುತ್ತಾಳೆ. ಆಶ್ಚರ್ಯಗೊಂಡ ಶ್ರೀನಿವಾಸ ಜೇಬಿನಲ್ಲಿದ್ದ ಮೂಗುತಿಯನ್ನು ಹುಡುಕಿದಾಗ ಅದು ಇರುವುದಿಲ್ಲ. ಈ ಪವಾಡದ ಘಟನೆಯಿಂದ ಆತನಲ್ಲಿ ವೈರಾಗ್ಯ ಮೂಡುತ್ತದೆ. ತನ್ನ ಹೆಂಡತಿಯ ಒಪ್ಪಿಗೆ ಪಡೆದು ತನ್ನ ಸಕಲ ಸಂಪತ್ತನ್ನು ದಾನ ಮಾಡಿ ನಿಜ ಮುಕ್ತಿಮಾರ್ಗ ಕಂಡುಕೊಳ್ಳಲು ಮುಂದಾಗುತ್ತಾನೆ. ನಂತರದಲ್ಲಿ ಹೆಂಡತಿ ಮಕ್ಕಳೊಂದಿಗೆ ವ್ಯಾಸರಾಯರ ಮಠಕ್ಕೆ ಬಂದು ವ್ಯಾಸರಾಯರಿಂದ ಆಶೀರ್ವಾದ ಪಡೆದು ಹರಿದಾಸ ದೀಕ್ಷೆಯನ್ನು ಪಡೆದು ಪುರಂದರದಾಸನಾಗುತ್ತಾನೆ. ರಾಯರಿಂದ ಅಲ್ಲಿ ಕನಕದಾಸರು ಮತ್ತು ಗದುಗಿನ ಭಾರತದ ಕರ್ತೃ ಕುಮಾರವ್ಯಾಸರ ಪರಿಚಯವಾಗುತ್ತದೆ. ಕನಕದಾಸರಿಗೆ ತಮ್ಮ ತಂಬೂರಿಯನ್ನು ನೀಡಿ ಪುರಂದರರು ಗೌರವಿಸುತ್ತಾನೆ. ಈ ಮೂವರ ಸಮಾಗಮ ಕಂಡು ವ್ಯಾಸರಾಯರಿಗೂ ಆನಂದವಾಗುತ್ತದೆ. ಇದು ಈ ನಾಟಕದ ಸ್ಥೂಲವಾದ ಕಥೆ.
Drama ಈಗಾಗಲೇ ಪುರಂದರದಾಸರ ಜೀವನದ ಬಗ್ಗೆ ಪರ್ವತವಾಣಿಯವರು ರಚಿಸಿದ ‘ಮುಕುತಿ ಮೂಗುತಿ’ ನಾಟಕ ಹೆಚ್ಚು ಜನಪ್ರಿಯವಾಗಿ ಜನಮನ್ನಣೆ ಗಳಿಸಿದೆ. ಪುರಂದರದಾಸರ ಜೀವನ ಚಿತ್ರಣದ ಮುಖ್ಯ ಗುರಿ ಹೊಂದಿರುವ ಈ ನಾಟಕದಲ್ಲಿ ಅವರ ಹಲವು ಮುಖಗಳನ್ನು ಹರಿಹರೇಶ್ವರರು ಇಲ್ಲಿ ಪರಿಚಯಿಸಿದ್ದಾರೆ. ಅವರ ಬದುಕು, ಸಾಹಿತ್ಯ, ಕೀರ್ತನೆಗಳು, ಆಧ್ಯಾತ್ಮ ವ್ಯಕ್ತಿತ್ವಗಳ ಜತೆಯಲ್ಲೇ ಅವರ ಸಾಮಾಜಿಕ ನಿಲುವುಗಳು, ಜನಪರ ಚಿಂತನೆಗಳ ಮೇಲೆ ಬೆಳಕು ಚೆಲ್ಲುತ್ತವೆ. ಇದೊಂದು ಸಂಗೀತ ಪ್ರಧಾನ ಕಿರುನಾಟಕ. ಇಲ್ಲಿ ಅವರ ಕೀರ್ತನೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಐತಿಹಾಸಿಕ ಅಂಶವುಳ್ಳ ಈ ನಾಟಕದಲ್ಲಿ ಕಾಲಘಟ್ಟವನ್ನು ಮೀರಿ ಪುರಂದರರು ಕನಕದಾಸರು, ಕುಮಾರವ್ಯಾಸತ್ರಯರ ಒಟ್ಟಿಗೆ ಸಮಾಗಮದ ಸನ್ನಿವೇಶ ಕೃತಿಕಾರರ ಔನ್ನತ್ಯದ ಹಿರಿಮೆಯನ್ನು ಸಾರುತ್ತದೆ. ಮೇರು ವ್ಯಕ್ತಿತ್ವ ಚಿತ್ರಿಸುವ ಈ ಭಾವನೆ ನೈಜತೆಯನ್ನು ಮೀರಿ ಹೊಸನೋಟವನ್ನು ಕಲ್ಪಿಸುತ್ತದೆ. ರಂಗರೂಪಕ್ಕೆ ಅಳವಡಿಸುವಲ್ಲಿ ನಿರ್ದೇಶಕರು ಹಲವು ಮಾರ್ಪಾಡುಗಳನ್ನು ಮಾಡಿಕೊಂಡಿರುವುದು ಸೂಕ್ತವೆನಿಸಿದರೂ ಸೂತ್ರಧಾರ ಅಗತ್ಯವಿರಲಿಲ್ಲ. ವ್ಯಾಪಾರದ ಅಂಗಡಿಯ ದೃಶ್ಯ, ಮನೆಯ ದೃಶ್ಯ, ವ್ಯಕ್ತಿಗಳ ಸಂವಾದ, ವ್ಯಾಸರಾಯರ ಮಠದ ದೃಶ್ಯ, ರಾವಣ ಆಂಜನೇಯರ ಸಮಾಗಮದ ದೃಶ್ಯಗಳನ್ನು ಸಂಯೋಜಿಸುವಲ್ಲಿ ನಿರ್ದೇಶನದ ಅನುಭವ ವ್ಯಕ್ತವಾಯಿತು. ಉತ್ತಮ ಅಭಿನಯದ ರಾವಣ ಆಂಜನೇಯರ ದೃಶ್ಯವಂತೂ ನಾಟಕದ ಹೈಲೈಟ್ ಆಗಿ ಸುಂದರ ದೃಶ್ಯ ರೂಪಕವಾಗಿ ಮೂಡಿಬಂದಿತು. ಸಂಗೀತ ಶಿಕ್ಷಕಿಯ ಕೊನೆಯ ದೃಶ್ಯ ಬೇಕಿರಲಿಲ್ಲ ಎನಿಸಿತು. ಇದರ ಬದಲಾಗಿ ಮೂಲ ನಾಟಕದಲ್ಲಿದ್ದ ಕೃಷ್ಣ ಮೇಲಿನ ಕೀರ್ತನೆಗಳ ಬಾಲಕೃಷ್ಣನ ನರ್ತನದ ಎರಡು ದೃಶ್ಯಗಳನ್ನು ಅಳವಡಿಸಿದ್ದರೆ ನಾಟಕಕ್ಕೆ ಹೆಚ್ಚು ತೂಕ ತರುವ ಸಾಧ್ಯತೆಯಿತ್ತು. ಇಲ್ಲಿ ದೃಶ್ಯರೂಪಕ ತುಂಬ ಅಂಶಗಳು ಕಡಿಮೆಯಿರುವ ದೃಶ್ಯಗಳ ಕೊರತೆಯಿದ್ದು, ಪದೇ ಪದೇ ಸಂಗೀತ ಶಿಕ್ಷಕಿಯಿಂದ ಮಾಡಿಸುವ ನಿರೂಪಣೆ ನಾಟಕದ ಗಂಭೀರತೆಗೆ ಧಕ್ಕೆ ತಂದು ನಾಟಕದ ಗತಿಯಲ್ಲಿನ ಬಿಗಿಯನ್ನು ಹಾಳುಮಾಡಿತು. ಈ ಕಡೆಗೆ ನಿರ್ದೇಶಕರ ಗಮನ ಅಗತ್ಯವಿತ್ತು.
ಸೂತ್ರಧಾರನಾಗಿ ತಿಪ್ಪಣ್ಣ ಅವರ ಹಾಡುಗಾರಿಕೆ ಹಾಗೂ ನಟನೆ ಒಪ್ಪವಾಗಿತ್ತು. ಪುರಂದರದಾಸರಾಗಿ ಎನ್. ಧನಂಜಯರ ನಟನೆಯಲ್ಲಿ ಆಧ್ಯಾತ್ಮ ಪ್ರತಿಭೆ ತಲ್ಲೀನತೆಯ ಕೊರತೆ ಕಾಣುತ್ತಿತ್ತು. ವ್ಯಾಸರಾಯರಾಗಿ ಪಿ. ನಾಗಭೂಷಣ್ ಪಾತ್ರಕ್ಕೆ ನ್ಯಾಯ ಒದಗಿಸಿದರು. ರಾವಣನಾಗಿ ರಾಜಶೇಖರ ಕದಂಬ ತಮ್ಮೊಳಗಿರುವ ಪೌರಾಣಿಕ ನಟನೆಯ ಪ್ರಬುದ್ಧತೆಯನ್ನು ಛಾಪಿಸಿದರು. ಆಂಜನೇಯನಾಗಿ ಹೆಜ್ಜೆಗೆಜ್ಜೆ ವಿ. ಉದಯಕುಮಾರ್ ಲೀಲಾಜಾಲವಾಗಿ ನಟಿಸಿ ರಾವಣನಿಗೆ ಸಾಥ್ ನೀಡಿದರು. ಕನಕದಾಸರ ಪಾತ್ರಕ್ಕೆ ಒಪ್ಪುವಂತಿದ್ದ ಯು.ಎಸ್. ರಾಮಣ್ಣ ಕೀರ್ತನೆ ಹಾಡುವಾಗ ಚಲನವಲನದ ಕಡೆ ಗಮನ ನೀಡಿದ್ದರೆ ಉತ್ತಮವಾಗುತ್ತಿತ್ತು. ಕುಮಾರವ್ಯಾಸನಾಗಿ ಶಶಿಧರಸಿಂಹ, ಬ್ರಾಹ್ಮಣನಾಗಿ ಸುಬ್ಬು ನರಸಿಂಹ ಅವರ ನಟನೆಯಲ್ಲಿ ಸಹಜತೆಯಿತ್ತು. ಸರಸ್ವತಿಯಾಗಿ ಎಸ್. ನಾಗರತ್ನ ಪಾತ್ರವನ್ನು ತೂಗಿದರು. ಸಂಗೀತ ಶಿಕ್ಷಕಿಯಾಗಿ ಎಚ್.ಎಸ್. ಕವಿತಾ, ಗೃಹಿಣಿಯಾಗಿ ಶ್ರೀಮತಿ ಹರಿಪ್ರಸಾದ್, ಅತ್ತೆಯಾಗಿ ಸುಧಾ ಗುಡಗುಂಟಿ, ಪುರಂದರರ ಮಕ್ಕಳಾಗಿ ಪ್ರದ್ಯುಮ್ನ, ಎಂ. ಪ್ರಜ್ಞಾ, ವಿದ್ಯಾರ್ಥಿಗಳಾಗಿ ಎಂ.ಎಸ್. ಪ್ರಣವ್, ಎಂ. ಪ್ರತಿಮಾ, ಮಠದ ಶಿಷ್ಯ, ಸೈನಿಕನಾಗಿ ಶ್ರೀಕಂಠ, ವ್ಯಕ್ತಿಗಳಾಗಿ ಶ್ರೀಕಂಠೇಶ್, ಕೃಷ್ಣ ಜಂಬೂರು ಗಮನ ಸೆಳೆದರು. ಕೆ.ಎನ್. ವಾಸುದೇವಮೂರ್ತಿ ಅವರ ರಂಗಸಜ್ಜಿಕೆ ನಾಟಕಕ್ಕೆ ಒಳ್ಳೆಯ ಅನಾವರಣ ನಿರ್ಮಿಸಿತು. ಬಿ.ಎ.ಪಿ. ಭಟ್, ಬಿ.ಎಂ. ರಾಮಚಂದ್ರರ ಪ್ರಸಾಧನದಲ್ಲಿ ಸೊಗಸಿತ್ತು. ಉಡುಗೆ-ತೊಡುಗೆ ರಾಜೇಶ್ವರಿ ವಸ್ತ್ರಾಲಂಕಾರ ವೈ.ಎಂ. ಪುಟ್ಟಯ್ಯ, ಕಿರಗಸೂರು ರಾಜಪ್ಪ, ಕುಪ್ಯ ವೆಂಕಟರಾಂ ಈ ಹಿರಿಯ ಕಲಾವಿದರು ಹಾಡಿದ ಪುರಂದರ, ಕನಕದಾಸರ ಕೀರ್ತನೆಗಳಿಗೆ ಅಯಸ್ಕಾಂತದ ಆಕರ್ಷಣೆಯಿತ್ತು. ಆದರೆ ಈ ಹಾಡುಗಳು ನಟರಿಗೆ ಹೊಂದಾಣಿಕೆಯಾಗದೆ ಹೊರಗುಳಿದ ಕೊರತೆ ಎದ್ದು ಕಾಣುತ್ತಿತ್ತು. ಇವೇನೇ ಏರುಪೇರುಗಳಿದ್ದರೂ ರಂಗಮಂದಿರದಲ್ಲಿ ಪ್ರೇಕ್ಷಕರು ಈ ನಾಟಕವನ್ನು ವೀಕ್ಷಿಸಿ ಚಪ್ಪಾಳೆ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸಿದರು.