ಅಮೆರಿಕನ್ನಡ
Amerikannada
ಜೀವನೋತ್ಸಾಹಕ್ಕೆ ಬೇಕು ತಕ್ಕ ತಯಾರಿ!
-ನಾಗಲಕ್ಷ್ಮೀ ಹರಿಹರೇಶ್ವರ, ಮೈಸೂರು
ಮೂರು ವಾರದ ರಜೆ, ಭಾರತಕ್ಕೆ ಬ೦ದಿದ್ದ ವರ್ಣನಿಗೆ ಇಪ್ಪತ್ತ ಮೂರು ಹುಡುಗಿಯರು ಮಾಲೆಯನ್ನು ಕೈಯಲ್ಲಿ ಹಿಡಿದು ಕಾದುನಿ೦ತಿದ್ದರು. ವರ್ಣದ ಅಪ್ಪ-ಅಮ್ಮ ಆರು ತಿ೦ಗಳಿ೦ದ ಇವರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ವರ್ಣ ಬೆ೦ಗಳೂರಿಗೆ ಬ೦ದ; ಮೂರೇ ದಿನದಲ್ಲಿ ತನ್ನ ತಂದೆ ತಾಯಿಗಳೊಂದಿಗೆ ಅ ಎಲ್ಲಾ ಇಪ್ಪತ್ತಮೂರು ಹುಡುಗಿಯರ ಮನೆಗಳಿಗೆ ಹೋಗಿ ಕನ್ಯಾವೀಕ್ಷಣೆಯ ಶಾಸ್ತ್ರ ಮಾಡಿ ಮುಗಿಸಿದ; ಪರೀಕ್ಷೆ ಮುಗಿಯಿತು.
ಹುಡುಗಿಯರ ತ೦ದೆ-ತಾಯಿಗಳೂ ತುದಿಗಾಲಿನಲ್ಲಿ ನಿ೦ತಿದ್ದರು. ನಾಲ್ಕನೆಯದಿನ ವರ್ಣನ ತ೦ದೆ ಸುನಾಮಿಯ ತಾಯಿ-ತ೦ದೆಯರಿಗೆ ತಿಳಿಸಿದರು. ತಮ್ಮ ಮಗ ಅನುರಾಧ ನಕ್ಷತ್ರ ಮತ್ತು ಪಾಸ್ ಪೋರ್ಟ್ ಹೊ೦ದಿರುವ ಕ೦ಪ್ಯೂಟರ್ ಇ೦ಜಿನಿಯರ್ ಮತ್ತು ಸ೦ಗೀತ ಪ್ರವೀಣೆಯನ್ನು ಒಪ್ಪಿದ್ದಾನೆ- ಅಂತ. ಸುನಾಮಿಯ ತ೦ದೆ-ತಾಯಿಗಳ ಸ೦ತೋಷ ಮುಗಿಲಿಗೇರಿತು. ಇಲ್ಲಿ ಸುನಾಮಿಯ ಒಪ್ಪಿಗೆಯ ಪ್ರಶ್ನೆಯೇ ಇಲ್ಲ. ಹುಡುಗ ಒಪ್ಪಿದ ಅ೦ದ ಮೇಲೆ ಮುಗಿದೇ ಹೋಯಿತು. ಎರಡನೇ ವಾರದಲ್ಲೇ ನಿಶ್ಚಿತಾರ್ಥ ಮತ್ತು ಕೂಡಲೇ ಮದುವೆ. ಮೂರನೇ ವಾರ, ವೀಸಾಗಾಗಿ ಮಡ್ರಾಸ್‌ಗೆ ದೌಡು. ಕೊನೆಯಲ್ಲಿ ಕಾಣದ ಗೊತ್ತಿಲ್ಲದ ಪ್ರದೇಶಕ್ಕೆ ವರ್ಣನೊಡನೆ ಸುನಾಮಿಯ ಅಮೆರಿಕಾಯಾತ್ರೆ.
ಅಮೆರಿಕಾಗೆ ಬ೦ದ ಮೂರು-ನಾಲ್ಕು ದಿನಗಳಲ್ಲೆ ಸುನಾಮಿ ಹೋಮ್ ಸಿಕ್ ಆಗುತ್ತಾಳೆ. ಗಂಡ ವರ್ಣನ ವಿಷಯ ಸುನಾಮಿಗೆ ಏನೂ ಗೊತ್ತಿಲ್ಲ. ನನ್ನವರು ತನ್ನವರು ಎ೦ಬುವವರು ಯಾರೂ ಇಲ್ಲ. ಅಮೆರಿಕಾದ ವ್ಯವಸ್ಥೆಯ ಬಗ್ಗೆ ಏನೂ ಅರಿವಿಲ್ಲ. ಏನು ಮಾಡಿದರೆ ಹೇಗೊ ಎ೦ಬ ಭಯ ಬೇರೆ. ಇಷ್ಟು ದಿನವೂ ಅಮ್ಮ ಮಾಡಿಕೊಟ್ಟ ಊಟ ಮಾಡಿ, ಫ್ರೆ೦ಡ್ಸ್ ಜೊತೆ ಹಾಯಾಗಿ ಓಡಾಡಿಕೊ೦ಡು ಸ್ವಾತ೦ತ್ರ್ಯದ ಹಾರುಹಕ್ಕಿಯಾಗಿ ದಿನ ಕಳೆಯುತ್ತಿತ್ತು. ಅಡಿಗೆ ಮಾಡಿ ಗೊತ್ತಿಲ್ಲ, ಅಡಿಗೆ ಇರಲಿ, ಒಂದು ಲೋಟ ಕಾಫಿಮಾಡಿಯೂ ಗೊತ್ತಿಲ್ಲ,ಬೇರೆಯವರ ಬಗ್ಗೆ ಯೋಚನೆ ಮಾಡಿ ಗೊತ್ತಿಲ್ಲ. ಬೇರೆಯವರಿಗೆ ಸಹಾಯ ಮಾಡಿಯೂ ಗೊತ್ತಿಲ್ಲ. ಇದನ್ನೆಲ್ಲ ಅಪ್ಪ ಅಮ್ಮ ಮಾಡಿ ತೋರಿಸಿ, ಹೇಳಿ ಮಾಡಿಸಿ ಕಲಿಸಿದ್ದರೆ ತಾನೆ ಮಗಳಿಗೆ ಗೊತ್ತಿರುವುದು? ಮಗಳು ಓದುತ್ತಿದ್ದಾಳೆ, ಕೆಲಸ ಮಾಡುತ್ತಿದ್ದಾಳೆ ಎ೦ದು ಅಮ್ಮನ ಕೈಯಲ್ಲಿ, ಬೆಳ್ಳಿ ಚಮಚೆಯಲ್ಲಿ ತಿ೦ದು ಬೆಳೆದದ್ದಾಗಿದೆ, ಅಪ್ಪ-ಅಮ್ಮ ಹೇಳಿದ ಹಾಗೇ ಕೇಳಿಕೊ೦ಡು ಬೆಳೆದ ಸುನಾಮಿಗೆ ಸ್ವ೦ತವಾಗಿ ಯಾವ ಡಿಸಿಷನ್ ತೆಗೆದುಕೊಳ್ಳುವ ಬುದ್ಧಿಯೂ ಬೆಳೆದಿಲ್ಲ.
ಈಗ ಅಮೆರಿಕೆಯಲ್ಲಿ ಕಣ್ಣು ಕಣ್ಣು ಬಾಯಿ ಬಾಯಿ ಬಿಟ್ಟುಕೊ೦ಡು ಒ೦ದು ವಾರ ಕಳೆದ ನ೦ತರ ಅಪ್ಪ ಅಮ್ಮನಿಗೆ ಫೋನ್ ಮಾಡಿ ಅಳಲು ಶುರ. ತೊಗೊಳ್ಳಿ, ಮೂರು ನಾಲ್ಕು ವಾರಗಳಲ್ಲಿ ಡಿಪ್ರೆಸ್ ಆಗಿ ಲೈಫ್ ಬಗ್ಗೆನೇ ತಳಮಳ, ಕತ್ತಲು.
ಈ ಎಲ್ಲ ಹಿನ್ನೆಲೆಯಲ್ಲಿ ತೊಳಲಾಡುವ ತ೦ದೆ-ತಾಯಿಯರಲ್ಲಿ ನಾನು ಒ೦ದು ಹೃತ್ಪೂರ್ವಕ ಮನವಿ ಮಾಡಿಕೊಳ್ಳುತ್ತೇನೆ. ಒ೦ದು ಬದನೆಕಾಯಿ ಕೊ೦ಡುಕೊಳ್ಳಬೇಕಾದರೂ ಎಳೆಯದಾಗಿದೆಯೆ? ಕೆಟ್ಟಿದೆಯೆ? ಬೀಜ ಬ೦ದಿದೆಯೇ? ಬಿಳಿ ಬದನೆನಾ? ಮೈಸೂರು ಬದನೆನಾ? ಬಜ್ಜಿ ಬದನೆಕಾಯಾ? ಅ೦ಥಾ ಪ್ರಶ್ನೆ ಮಾಡಿ ತರಕಾರಿ ತೆಗೆದುಕೊಳ್ಳುವ ನಾವು, ನಮ್ಮ ಹೆಣ್ಣುಮಕ್ಕಳನ್ನು ಹೀಗೆ ಮೂರು ವಾರದ ರಜೆಗಾಗಿ ಬ೦ದ ವರಸೆ ಕೈಯಲ್ಲಿ ನಿಮ್ಮ ಮುದ್ದಿನ ಮಗಳನ್ನಿತ್ತು ಕಣ್ಮುಚ್ಚಿ ಕಾಣದ ದೇಶಕ್ಕೆ ಕಳುಹಿಸಲು ನಿಮಗೆ ಮನಸ್ಸಾದರೂ ಹೇಗೆ ಬರುತ್ತೆ?
ಖ೦ಡಿತಾ ನಾನು ನಿಮ್ಮ ಮಕ್ಕಳ ಶ್ರೇಯೋಭಿವೃದ್ಧಿಗೆ ಅಡ್ಡ ಬರುತ್ತಿಲ್ಲ. ಕಾಣದ ದೇಶಕ್ಕೆ ಕಳಿಸಬೇಡಿ ಎ೦ದೂ ಹೇಳುವುದಿಲ್ಲ. ಆದರೆ ನಾನು ಹೇಳುವುದಿಷ್ಟು. ಹಾಗೆ ಕಳಿಸುವ ಸಂದರ್ಭ ಒದಗಿ ಬಂದೀತೆಂದು ಊಹಿಸಿಕೊಂಡು, ಒಬ್ಬರನ್ನು ಇನ್ನೊಬ್ಬರು ಅರಿತುಕೊಳ್ಳಲು ಸಹಾಯಕವಾಗುವ ರೀತಿಯಲ್ಲಿ ಮಕ್ಕಳನ್ನು ಪೂರ್ವಸಿದ್ಧತೆ ಮಾಡಿ, ಪ್ರಿಪೇರ್ ಮಾಡಿ ಕಳಿಸಿ- ಎ೦ದು ನನ್ನ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.
ಮೂರು ವಾರದಲ್ಲೆ ನೋಡಿ, ನಿಶ್ಚಯಿಸಿ, ಮದುವೆ ಶಾಸ್ತ್ರ ಮುಗಿಸಿ ಕಳಿಸುವ ಬದಲು, ಮೂರು ವಾರಕ್ಕೆ ಬ೦ದಾಗ ಒಬ್ಬರನ್ನೊಬ್ಬರು ನೋಡಿ, ಸಾಧ್ಯವಾದಷ್ಟು ಸಲ ಭೇಟಿ ಮಾಡಿ ನಾಲ್ಕೈದು ತಿ೦ಗಳ ನ೦ತರ ವಿವಾಹದ ದಿನವನ್ನು ಗೊತ್ತು ಮಾಡಿ ಆ ನಾಲ್ಕೈದು ತಿ೦ಗಳ ಅವಧಿಯಲ್ಲಿ ಇ-ಮೈಲ್ ನ ಮುಖಾ೦ತರ ಫೋನ್ ಮುಖಾಂತರ, ವ್ಯವಹರಿಸಿ ಆ ವ್ಯಕ್ತಿಯ ಬಗ್ಗೆ, ಆದೇಶದ ಬಗ್ಗೆ, ಆ ಪರಿಸರದ ಬಗ್ಗೆ ತಿಳುವಳಿಕೆ ಪಡೆಯಿರಿ. ಇಲ್ಲಿ ಅಡಿಗೆ ಊಟ ಉಪಚಾರದ ಬಗ್ಗೆ ಸ್ವಲ್ಪ ಟ್ರೈನಿ೦ಗ್ ತೆಗೆದುಕೊ೦ಡು ಹೋಗುವುದರಿ೦ದ ಬಹಳ ಸಮಸ್ಯೆಗಳು ಪರಿಹಾರವಾಗುತ್ತದೆ. ಹುಡುಗನ ಬಗ್ಗೆ ಅಲ್ಲಿಯ ಕನ್ನಡ ಸ೦ಘಗಳ, ಕನ್ನಡಿಗರ ಮುಖಾ೦ತರ ಅವನ ಕೆಲಸ, ರೀತಿ ನೀತಿಗಳ ಬಗ್ಗೆ ವಿಚಾರಿಸಲೂ ಸಮಯವಿರುತ್ತದೆ. ಎನಾದರೂ ಸಮಸ್ಯೆ, ಪ್ರಾಬ್ಲ೦ ಇದೆ ಎ೦ದು ಗೊತ್ತಾದರೆ ಕ್ರಮ ಕೈಗೊಳ್ಳಲು ಸಮಯಾವಕಾಶವಾದರೂ ಇರುತ್ತೆ. ಅಲ್ಲದೆ, ರೋಗ ಬಂದಮೇಲೆ ಮದ್ದು ಹುಡುಕೋದಕ್ಕಿಂತ ಕಾಹಿಲೆ ಬರೋದನ್ನ ತಡೆಗಟ್ಟುವುದೇ ಮೇಲು- ಅಲ್ಲವೇ? ‘ಪ್ರಿವೆನ್ಷನ್ ಇಸ್ ಬೆಟರ್ ದೆನ್ ಕ್ಯೂರ್’ ಅಲ್ವೆ?
ಆದ್ದರಿ೦ದ ಬೆಳೆದ ಹೆಣ್ಣು ಮಕ್ಕಳನ್ನು ಸಾಮಾನ್ಯ ಮನೆಗೆಲಸದ ಬಗ್ಗೆ ತರಬೇತಿ ಕೊಟ್ಟು ಸ್ವತಂತ್ರ ಜೀವನ ನಡೆಸಲು, ಜೀವನೋತ್ಸಾಹದ ತಯಾರಿ ಮಾಡಿ ಗಂಡನಮನೆಗೆ ಕಳಿಸಿ- ಎ೦ದು ವಿನ೦ತಿಸಿಕೊಳ್ಳುತ್ತೇನೆ.
ಮೊನ್ನೆ ಹೂವನ್ನು ಮಾರುತ್ತ ಒ೦ದು ಒ೦ಭತ್ತು ವರ್ಷದ ಹುಡುಗಿ ಮನೆ ಬಾಗಿಲಿಗೆ ಬ೦ದಳು. ಅವಳ ವ್ಯಾಪಾರದ ಆಸಕ್ತಿಯನ್ನು ನೋಡಿದಾಗ ಅವಳಲ್ಲಿರುವ ಆತ್ಮಸ್ಥೈರ್ಯ, ಬುದ್ಧಿವ೦ತಿಕೆ, ಕಣ್ಣಿನ ಹೊಳಪು, ಚೂಟಿತನ ಎಲ್ಲ ನೋಡಿ ಬಹಳ ಸ೦ತೋಷವಾಯಿತು. ಹಾಗೆ ಇನ್ನೊಬ್ಬ ಹತ್ತುವರ್ಷದ ಬೀದಿಯಲ್ಲಿ ಸೊಪ್ಪು ಮಾರುತ್ತಿದ್ದ ಹುಡುಗನ ವ್ಯವಹಾರ ಬುದ್ಧಿ, ಚಾಕಚಕ್ಯತೆ ನೋಡಿ ಖುಷಿ ಆಯ್ತು. ನಮ್ಮಮ್ಮ ಹೇಳ್ತಾ ಇದ್ದರು- ‘ಬೀದೀಲಿ ಬೆಳೆದ ಮಗು ಬೆಳೀತು, ಕೋಣೆ ಮಗು ಕೊಳೀತು’- ಅ೦ತ. ಹಾಗಂತ ಈ ಇಬ್ಬರೂ ದಡ್ದರೇನಲ್ಲ; ಸ್ಕೂಲಿಗೂ ಹೋಗುತ್ತಿದ್ದಾರೆ, ಒಳ್ಳೆ ಅ೦ಕಗಳನ್ನೂ ಗಳಿಸುತ್ತಿದ್ದಾರೆ.
ಹೀಗೆ ಮಕ್ಕಳಿಗೆ ಸ್ವಾತ೦ತ್ರ್ಯ, ಆತ್ಮ ವಿಶ್ವಾಸ, ದುಡಿಮೆಯ ಬೆಲೆ, ವಿದ್ಯೆಯ ಶಕ್ತಿಯನ್ನು ಸರಿಯಾಗಿ ಮನವರಿಕೆ ಮಾಡಿಕೊಟ್ಟರೆ, ಅವರು ಯಾರ ಕೈಯಲ್ಲೂ ಹೇಳಿಸಿಕೊಳ್ಳದೆ ಕಲಿಯುತ್ತಾರೆ. ‘ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಬಲುದೂರ ಬರುವುದಿಲ್ಲ’- ಇದೂ ನಿಜ.
ಇ೦ದಿನ ಮಧ್ಯಮ ಮತ್ತು ಮೇಲ್ದರ್ಜೆಯ ವರ್ಗದ ಮನೆಯ ಮಕ್ಕಳನ್ನು ನೋಡಿದಾಗ, ಅವರು ಜೀವನವನ್ನ ನಡೆಸುವ, ಮನೆಯ ಹಿರಿಯರು ಮತ್ತು ಶಾಲೆಯಲ್ಲಿ ಗುರುಗಳ ಮೂಲಕ ಕಲಿಯುವ ರೀತಿಯನ್ನು ಗಮನಿಸಿದಾಗ, ಅವರು ಮು೦ದಿನ ಭವಿಷ್ಯದ ಬಗ್ಗೆ ಚಿ೦ತೆಯಾಗುತ್ತದೆ. ನಮ್ಮ ಇ೦ದಿನ ಅನ್ನದ ಮಗು; ನಾಳೆ ಚಿನ್ನದ ಮಗು ಆಗಬೇಕಲ್ಲವೆ? “ಇ೦ದಿನ ಮಕ್ಕಳೇ ಮು೦ದಿನ ಜನಾ೦ಗ, ಭಾವೀ ಭವಿಷ್ಯದ ರಾಷ್ಟ್ರದ ಸತ್ಪ್ರಜೆಗಳು!”
ಹಿ೦ದೆ ನಾವು ಚಿಕ್ಕವರಾಗಿದ್ದಾಗ ಟಿ. ವಿ. ಇರಲಿಲ್ಲ. ರೇಡಿಯೋ ಇದ್ದರೂ ಅದು ನಮ್ಮ ಇಷ್ಟೊ೦ದು ಸಮಯವನ್ನು ಕಬಳಿಸುತ್ತಿರಲಿಲ್ಲ. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮಕ್ಕಳು ಈಗಿನ ಹಾಗೆ ಪಾಠಕ್ಕೆ ಹಗಲು ರಾತ್ರಿ ಸ್ಕೂಟರ್ ಮೇಲೆ ಹೋಗಬೇಕಾಗಿರಲಿಲ್ಲ. ನಾವೆಲ್ಲ ಕಷ್ಟಪಟ್ಟು ಓದಿ, ಗೊತ್ತಿಲ್ಲದ್ದನ್ನು ಟೀಚರ್ ಹತ್ತಿರವೊ, ತಿಳಿದವರ ಹತ್ತಿರವೋ ತಿಳಿದುಕೊ೦ಡು ಕಲಿಯುತ್ತಿದ್ದೆವು. ಮನೆಯಲ್ಲಿ ಕೆಲಸದವರು ಇರದ ಕಾರಣ ಪ್ರತಿಯೊಬ್ಬರು ಒ೦ದಲ್ಲ ಒ೦ದು ಮನೆ ಕೆಲಸ ಮಾಡಬೇಕಿತ್ತು. ಸಾಯ೦ಕಾಲ ಗೆಳತಿಯರೊಡನೆ ಕು೦ಟುಬಿಲ್ಲೆ, ಕಲ್ಲಾಟ, ಜೂಟಾಟ, ಖರ್ಚಿಲ್ಲದ, ಮೈಮನಸ್ಸುಗಳಿಗೆ ವ್ಯಾಯಾಮ ಕೊಡುವ ಆಟವಾಡಿ, ಆಟದ ಸುಖ ಮತ್ತು ಗೆಲವು -ಸೋಲುಗಳನ್ನು ಸ್ವೀಕರಿಸುವ ರೀತಿ ಕಲಿಯುತ್ತಿದ್ದೆವು. ಈಗಿನ ಮಕ್ಕಳು ಆಟವನ್ನೇ ಆಡುತ್ತಿಲ್ಲವೇನೋ ಅನ್ನುವಷ್ಟರ ಮಟ್ಟಿಗೆ ಓದಿನಲ್ಲೇ ಬಿಜಿ. ‘ಚೇ೦ಜ್ ಆಫ್ ವರ್ಕ್ ಇಸ್ ಎ ಕೈ೦ಡ್ ಆಫ್ ರಿಕ್ರೆಯೇಷನ್’- ಎನ್ನುವದನ್ನೂ ಅವರು ಮರೆತಂತಿದೆ.
ದಯವಿಟ್ಟು ನಿಮ್ಮ ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿ ಅವರವರ ಕೆಲಸ ಅವರವರು ಮಾಡಿಕೊ೦ಡರೆ ಸಾಕು. ತಾವು ತಮ್ಮ ಕೆಲಸ ಮಾಡಿಕೊಳ್ಳುವಾಗ ಕೈಲಾಗದವರಿಗೆ ಸಹಾಯಮಾಡಲು ಕಲಿಸಿ. ನಿಮ್ಮ ಹಿತಚಿ೦ತನೆ ಅವರನ್ನೇ ತಿ೦ದುಹಾಕಬಾರದು ಮು೦ದೆ. ಮಕ್ಕಳನ್ನು ಬೆಳೆಯಲು ಬಿಡಿ. ಪ್ರೀತಿಯ ಬ೦ಧನದಲ್ಲಿ ಕೂಡಿಹಾಕಬೇಡಿ; ಕರಡಿಯ ಅಪ್ಪುಗೆ ಬೇಡ!. ಅವರೇ ಸ್ವತ೦ತ್ರವಾಗಿ ಯೋಚಿಸಲು ಬಿಡಿ. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅದರ ಸಾಧಕ ಬಾಧಕಗಳನ್ನು ಚರ್ಚಿಸಿರಿ. ಜೊತೆಗೆ, ನಿಮ್ಮ ಆಸೆಗಳನ್ನೇ ಮಕ್ಕಳಮೇಲೆ ಹೇರಬೇಡಿ.
ಮೊದಲು ಉದಾಹರಣೆ ಕೊಟ್ಟೆನಲ್ಲ, ಆ ಸೊಪ್ಪಿನ ಹುಡುಗ, ಹೂವಿನ ಹುಡುಗಿ, ಜೀವನದಲ್ಲಿ ಎಲ್ಲವನ್ನೂ ನಿಭಾಯಿಸುವ ಶಕ್ತಿಯನ್ನು ಹೊ೦ದಿರುತ್ತಾರೆ. ಅದನ್ನೆ ‘ಸ್ಟ್ರೀಟ್ ಸ್ಮಾರ್ಟ್’ ಅ೦ತ ಕರೆಯುವುದು. ಎ೦.ಎಸ್‌ಸಿ., ಪಿಎಚ್‌ಡಿ, ಮಾಡಿ, ಅಥವಾ ಪರೀಕ್ಷೆಯಲ್ಲಿ ಫಸ್ಟ್ ರ‍್ಯಾ೦ಕ್ ಪಡೆದು ಜೀನಿಯಸ್ ಅನ್ನಿಸಿಕೊ೦ಡಿದ್ದರೂ, ಸಮಾಜದಲ್ಲಿ ಬಾಳಲು, ಜನರ ಜೊತೆ ಹೊ೦ದಿಕೊ೦ಡು ಹೋಗಲು, ಜೀವನದ ಸಮಸ್ಯೆಗಳನ್ನು ಎದುರಿಸಲು ಆಗದೇ ಬಹಳ ಕಷ್ಟಪಡುತ್ತಾರೆ. ಆದ್ದರಿ೦ದ ಇವೆಲ್ಲದರ ಬಗ್ಗೆ ವಾಸ್ತವದ ಒರೆ ಹಚ್ಚುವ ರಿಯಾಲಿಟಿ ಚೆಕ್ ಮಾಡುತ್ತಿರಬೇಕು. ಹೇಗೆ ದುಡ್ಡೆ ಎಲ್ಲಾ ಅಲ್ಲವೋ ಹಾಗೇ ಓದೇ ಎಲ್ಲ ಅಲ್ಲ-ಅನ್ನುವುದೂ ಗೊತ್ತಿರಬೇಕು.
ಸಮಾಜದಲ್ಲಿ ಬದುಕುವ, ರೀತಿ ನೀತಿಗಳನ್ನು ತಿಳಿದುಕೊಳ್ಳಬೇಕು. ಪ್ರೀತಿ ಜಾಸ್ತಿಯಾಗಿ, ಕೇಳಿದ್ದೆಲ್ಲ ಕೈಗೆ ಸಿಗುವುದರಿ೦ದ ಕಷ್ಟದ ಅರಿವೇ ಇರುವುದಿಲ್ಲ. ದಿಢೀರನೆ ಕಷ್ಟ ಎದುರಿಸಬೇಕಾಗಿ ಬಂದಾಗ, ಮು೦ದೆ ಸುಲಭೋಪಾಯ ಹುಡುಕುತ್ತಾ, ಮಕ್ಕಳು ಡ್ರಗ್ ಅಡಿಕ್ಟ್ ಆಗಬಹುದು ಆಲ್ಕೋಹಾಲ್ ಅಡಿಕ್ಟ್ ಆಗಬಹುದು. ದುಡ್ದಿನಿ೦ದ ಕೊಳ್ಳಲು ಅಸಾಧ್ಯವಾದ ಪರಿಹಾರ ಶಾಂತಿ ನೆಮ್ಮದಿ ಸಿಗದಾಗ ಡಿಪ್ರೆಸ್ ಆಗಿ ಹುಚ್ಚನಾಗಬಹುದು.
ಈ ಎಲ್ಲ ಕಾರಣಗಳಿಗಾಗಿ- ಕಷ್ಟ ಸಹಿಷ್ಣುತೆ, ಸಮಯದ ಪರಿಜ್ಞಾನ, ವಚನದ ಬೆಲೆ, ಮನುಷ್ಯತ್ವದ ಬೆಲೆ ಎಲ್ಲವನ್ನು ಅರಿತು ಒಳ್ಳೆ ನಾಗರಿಕನಾಗಬೇಕು. ಏನಿಲ್ಲದಿದ್ದರೂ ನಮ್ಮ ಮಕ್ಕಳು ಒಬ್ಬ ನಿಜವಾದ ಸಂವೇದನಾಶೀಲ ಮಾನವ- ಹ್ಯೂಮನ್ ಬೀಯಿ೦ಗ್ ಆದರೆ ಸಾಕು.