ಅಮೆರಿಕನ್ನಡ
Amerikannada
ಕಂಟ್ರಾಕ್ಟರ್ ಕೆ.ಎಲ್. ಸುಬ್ಬರಾಯರು
-ವೀಣಾ, ಮೈಸೂರು
ಈಗಿನ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದಲ್ಲಿ ವಾಸವಾಗಿದ್ದ ಶ್ರೀಲಕ್ಷ್ಮೀಪತಿ ಜೋಯಿಸ್ ಮತ್ತು ಶ್ರೀಮತಿ ಲಕ್ಷ್ಮೀದೇವಮ್ಮನವರ ಎರಡನೇ ಪುತ್ರನಾಗಿ ದಿನಾಂಕ ಫೆಬ್ರವರಿ ೨೭, ೧೯೨೦ ರಂದು ಇವರ ಜನನ. ಐದು ಜನ ಅಣ್ಣತಮ್ಮಂದಿರು, ಇಬ್ಬರು ಸೋದರಿಯರು. ಮಿಡ್ಲ್‌ಸ್ಕೂಲ್ ಲೋಯರ್ ಸೆಕೆಂಡರಿ ವಿದ್ಯಾಭ್ಯಾಸಮಾಡುತ್ತಿದ್ದಾಗ ತಂದೆಯವರು ವಿಧಿವಶರಾದ ಕಾರಣ, ಮನೆ ಜವಾಬ್ದಾರಿ ಹೆಗಲಮೇಲೆ ಬಿದ್ದು, ಕೆಲಸ ಅರಸಿಕೊಂಡು ಮೈಸೂರಿಗೆ ಬಂದರು. ಇಲ್ಲಿ ಹಲವಾರು ಇಂಜಿನಿಯರ್‌ಗಳ ಸಹಾಯದಿಂದ ಕಟ್ಟಡಗಳನ್ನು ಕಟ್ಟುವ ಗುತ್ತಿಗೆಯ ವೃತ್ತಿ ನಡೆಸಿದರು. ಮನೆ ಕಟ್ಟುವ ಕಂಟ್ರಾಕ್ಟರ್ ಸುಬ್ಬರಾಯರೆಂದೇ ಮೈಸೂರಿನ ಗಣ್ಯಸಮುದಾಯದಲ್ಲಿ ಸುಮಾರು ಅರವತ್ತು ವರ್ಷಗಳಿಂದ ಇವರು ಪ್ರಸಿದ್ಧರು.
ಇವರ ಜೀವನದಲ್ಲಿ ಶ್ರೀಗಳಾದ ಕೆ.ವಿ. ನಾರಾಯಣ್ ಸ್ವಾಮಿ ದಂಪತಿಗಳು ಮತ್ತು ತಂದೆ ತಾಯಿಗಳು, ಬಾಪು ರಾಮಣ್ಣ, ಟಿ. ರಾಮರಾವ್, ಬಿ.ಎನ್. ವೆಂಕಟೇಶ್‌ರಾವ್, ರಾಮಚಂದ್ರರಾವ್, ರಾಘವೇಂದ್ರರಾವ್ ಇನ್ನೂ ಹಲವಾರು ಮಂದಿ ಕೈಹಿಡಿದು ನಡೆಸಿದ್ದಾರೆಂದು ಸದಾ ಅವರೆಲ್ಲರನ್ನೂ ನೆನೆಸಿಕೊಳ್ಳುತ್ತಾರೆ. ಮೈಸೂರಿನ ರಾಷ್ಟ್ರೀಯ ಇಂಜನಿಯರಿಂಗ್ ವಿದ್ಯಾಸಂಸ್ಥೆ (ಎನ್.ಐ.ಇ.), ಶಾರದಾ ವಿಲಾಸ ಕಾಲೇಜ್, ಭಾರತ ಅಹಾರ ಸಂಶೋಧನಾಲಯ (ಸಿಎಫ್‌ಟಿಆರ್‌ಐ), ಇಂಜನಿಯರ್‌ಗಳ ಒಕ್ಕೂಟ ಸಂಸ್ಥೆ (ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ‍್ಸ್)- ಮೊದಲಾದ ಕಟ್ಟಡಗಳನ್ನು ಅಚ್ಚುಕಟ್ಟಾಗಿ ಕಟ್ಟುವ ಸೌಭಾಗ್ಯ ಇವರದಾಗಿತ್ತು. ಎನ್‌ಐಇನ ಸ್ಥಾಪಕ ಮಹನೀಯರ ಪ್ರತಿಮೆಗಳನ್ನೆಲ್ಲ (ಫೌಂಡರ‍್ಸ್ ಸ್ಟ್ಯಾಚ್ಯುಗಳನ್ನೆಲ್ಲ) ಕಟ್ಟಡದಲ್ಲೇ ಉಳಿಸಿ, ಅಲ್ಲಿ ಗೋಪುರ (ಡೋಮ್) ಮಂಟಪ ಕಟ್ಟಿದ ಸಂತೋಷ ಇವರಿಗಿದೆ. ಮೈಸೂರಲ್ಲದೆ ಬೆಂಗಳೂರಿನಲ್ಲಿ, ಮಂಡ್ಯದಲ್ಲಿ ಹಲವಾರು ಪ್ರಮುಖ ಅತ್ಯಾಧುನಿಕ ಕಟ್ಟಡಗಳನ್ನ ಕಟ್ಟಿದ ಕೀರ್ತಿ ಇವರದಾಗಿದೆ.
೧೯೪೩ ರಲ್ಲಿ ಹೊಯ್ಸಳ ಕರ್ನಾಟಕ ಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೂ ಅದರೊಡನಾಟ ಇವರಿಗಿದೆ. ಅದರ ಏಳು-ಬೀಳುಗಳ ಜೊತೆ ಹೋರಾಡಿ, ಸಂಘದ ಒಳಿತಿಗಾಗಿ, ಉನ್ನತಿಗಾಗಿ, ಶ್ರೇಯಸ್ಸಿಗಾಗಿ ಉಳಿವಿಗಾಗಿ ದುಡಿದಿದ್ದಾರೆ. ಶ್ರೀಮತಿ ಸುಬ್ಬಲಕ್ಷ್ಮಮ್ಮ ಇವರ ಧರ್ಮಪತ್ನಿ; ಇಂಜನಿಯರ್ ಆಗಿದ್ದ ಇವರ ದೊಡ್ಡ ಮಗ ತಂದೆ-ತಾಯಿಗಳ ಜೊತೆಗೇ ಇದ್ದಾನೆ. ಎರಡನೇ ಇಂಜನಿಯರ್ ಮಗ ತನ್ನ ಡಾಕ್ಟ್ರರ್ ಹೆಂಡತಿಯೊಂದಿಗೆ ಅಮೆರಿಕೆಯಲ್ಲಿದ್ದಾನೆ. ಸಂಗೀತಜ್ಞೆ ಮಗಳು-ಇಂಜನಿಯರ್ ಅಳಿಯ ಕುವೆಂಪುನಗರದಲ್ಲಿದ್ದಾರೆ. ಶ್ರೀ ಸುಬ್ಬರಾಯರ ಹೃದಯವಂತಿಕೆ, ಸಾಮಾಜಿಕ ಕಳಕಳಿ, ಹೊಯ್ಸಳ ಕರ್ನಾಟಕ ಸಂಘದೊಡನಾಟ-ಇವೆಲ್ಲ ಎಲ್ಲರೂ ಮೆಚ್ಚುವಂಥವು. ಮೈಸೂರಿನ ಎನ್‌ಐಇ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ, ಹೊಯ್ಸಳ ಮಹಿಳಾ ವೇದಿಕೆ, ಹೊಯ್ಸಳ ಕರ್ನಾಟಕ ಸಂಘ, ಬನ್ನೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆ- ಮೊದಲಾದವು ಇವರ ಕೆಲಸವನ್ನು ಮೆಚ್ಚಿ ಸನ್ಮಾನಿಸಿವೆ.
ಬನ್ನೂರಿನ ವಿವೇಕಾನಂದ ಶಿಕ್ಷಣ ಸಂಸ್ಥೆ, ಸಪ್ತಮಾತೃಕಾ ದೇವಸ್ಥಾನ, ಗಾಯತ್ರೀ ದೇವಸ್ಥಾನ, ರಾಜರಾಜೇಶ್ವರೀ ದೇವಸ್ಥಾನ, ಕಿಕ್ಕೇರಿ ದೇವಸ್ಥಾನ, ಹೊಯ್ಸಳ ಕರ್ನಾಟಕ ಸಂಘ -ಇತ್ಯಾದಿ ಹಲವಾರು ಶೈಕ್ಷಣಿಕ ಧಾರ್ಮಿಕ, ಸಾಮಾಜಿಕ ಸಂಘಸಂಸ್ಥೆಗಳಿಗೆ ಉದಾರ ಧನಸಹಾಯ ಮಾಡುತ್ತಿರುವ ಶ್ರೀ ಸುಬ್ಬರಾಯರು, ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗದ ರೀತಿಯಲ್ಲಿ ಯಾವ ಡಂಗೂರವೂ ಸಾರದ ರೀತಿಯಲ್ಲಿ ಕೊಡಬೇಕೆನ್ನುವದರಲ್ಲಿ ನಂಬಿಕೆಯುಳ್ಳವರು. ಜಾತಿಮತಗಳನ್ನು ಪರಿಗಣಿಸದೆ, ಆರ್ಥಿಕವಾಗಿ ಹಿಂದುಳಿದ ಹಲವಾರು ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ಇವರು ನೆರವು ನೀಡುತ್ತಾ ಬಂದಿದ್ದಾರೆ. ಜೊತೆಗೆ, ತಮ್ಮ ಮನೆಯಲ್ಲೇ ಹಲವು ಸರಳ ಸಮಾರಂಭಗಳನ್ನು ಏರ್ಪಡಿಸಿ, ನಿಸ್ವಾರ್ಥ ಸಮಾಜ ಸೇವೆ ಮಾಡುವವರನ್ನ ಗುರುತಿಸಿ, ಕರೆದು, ಗೌರವಿಸಿ, ಸನ್ಮಾನಿಸುತ್ತಿದ್ದಾರೆ.
ನಿಷ್ಕಲ್ಮಶ ಹೃದಯದ ಕೊಡುಗೈದಾನಿಗಳಾದ ಇಂತಹ ಲೋಕೋಪಕಾರೀ ಸಜ್ಜನರ ಸಂತತಿ ಇತ್ಯೋಪ್ಯತಿಶಯವಾಗಿ ಬೆಳಗಿ, ಬೆಳೆದು, ಹಬ್ಬಿ ನಮ್ಮ ಜನಾಂಗದ, ನಮ್ಮ ಮೈಸೂರಿನ, ನಮ್ಮ ಕನ್ನಡನಾಡಿನ ಕೀರ್ತಿಪತಾಕೆ ಮೇಲೇರಲಿ -ಎಂದು ಆಶಿಸುತ್ತೇವೆ.