ಅಮೆರಿಕನ್ನಡ
Amerikannada
ವಿಧಿವಿಲಾಸ
-ಪ್ರೊ. ಎಚ್.ಜಿ. ಸುಬ್ಬರಾವ್, ಮೈಸೂರು
ನಾಳೆ ಪುಟ ಮುಚ್ಚಿಹುದು, ತೆರೆದಿಹುದಿಂದಿನ ಪುಟವು;
ಮೃಗಕೆ ತಿಳಿಯದ ಸತ್ಯ ಮನುಜನಿಗೆ ತಿಳಿದಿಹುದು;
ನಮಗಿಲ್ಲದಾ ಅರಿವು ಅಡಗಿಹುದು ವಿಧಿಬರಹದಲಿ-
ರಚಿಸಿಹನು ಪರದೈವ ಹೊತ್ತಿಗೆಯ ಕರುಣೆಯಲಿ.

ಕುರಿಮರಿಯ ಕತೆಯಲ್ಲಿ ನಮಗೊಂದು ಪಾಠವಿದೆ;
ನೋಡಲ್ಲಿ ಕುರಿಮರಿಯು ಸಂತಸದಿ ಮೇಯುತಿದೆ;
ಸನಿಹದಲಿ ನಿಂತಿಹನು ಬಲಿಗೊಡಲು ಹಂತಕನು
ರಕ್ತದೋಕಳಿಯಾಡಲ್ ಪಿಡಿದಿಹನು ಕತ್ತಿಯನು.

ತನ್ನಸಾವಿನ ಸುಳುವು ಇನಿತಿಲ್ಲ ಕುರಿಮರಿಗೆ
ನಿಶ್ಚಿಂತೆಯಿಂ ಮೇಯುತಿದೆ ಪ್ರೀತಿಯಿಂ ನೆಕ್ಕುತಿದೆ
ತನ್ನ ಕೊರಳನು ಕಡಿವ ಕಟುಕನಾ ಹಸ್ತವನು
ಇದುವೆ ವಿಧಿ ವೈಚಿತ್ರ್ಯ ಬದುಕಿರುವವರೆಗೆ

ನಾಳೆಯಾ ಕಷ್ಟಗಳು ನಮಗಿಂದು ತಿಳಿದಲ್ಲಿ
ಸುಖಶಾಂತಿ ನೆಮ್ಮದಿ ನಿಶ್ಚಿಂತೆ ನಮಗೆಲ್ಲಿ?
ಭವಿಷ್ಯದಲೇನುಂಟು ಇಲ್ಲವೆಂಬುದರರಿವು
ನಮಗಿಲ್ಲದಿರುವುದೇ ವಿಧಿಯಿತ್ತ ವರವು.