ಅಮೆರಿಕನ್ನಡ
Amerikannada
ಕನ್ನಡದಲ್ಲಿ ಸತ್ಯನಾರಾಯಣ ಪೂಜೆ
ಡಾ.ಉಷಾಫಾಟಕ್ ಮೈಸೂರು
“ಕಣ್ಣಿಗೆ ಗೋಚರಿಸುವ ನಿಜವೇ ಸತ್ಯ; ಕಣ್ಣಿಗೆ ಕಾಣದ ಒಳಹುದುಗಿರುವ ನಿಯಮವೇ ಋತ”! ಆಹಾ, ಎಷ್ಟು ಸರಳವಾಗಿ ವಿಷಯವನ್ನು ವಿವರಿಸಬಹುದಲ್ಲ ಎಂದು ಅನ್ನಿಸಿದರೆ ಆಶ್ಚರ್ಯವೇನಿಲ್ಲ. ಹರಿಹರೇಶ್ವರ ಅವರ ಶೈಲಿ ಅದು!
“ಕನ್ನಡದಲ್ಲಿ ಸತ್ಯನಾರಾಯಣ ಪೂಜೆ” ಪಂಡಿತ ಪಾಮರರಿಬ್ಬರನ್ನೂ ಏಕಕಾಲದಲ್ಲಿ ಮೆಚ್ಚಿಸಬಲ್ಲಂತಹ, ನಾಸ್ತಿಕನನ್ನು ಚಿಂತೆಗೆ ಹಚ್ಚಬಲ್ಲಂತಹ ಒಂದು ಅಪರೂಪದ ಕೃತಿ. ಕಾರಣ ಸತ್ಯವೇ ಈ ಕೃತಿಯ ವಸ್ತು. ಅದರ ಆರಾಧನೆಯೇ ಪರಮೋದ್ದೇಶ. ಕನ್ನಡವನ್ನಾಡುವ ಆಸ್ತಿಕರಿಗೆ ಸರಳವಾಗಿ ಸತ್ಯಪರಿಪಾಲನೆಯನ್ನು ತಿಳಿಸುವ ತವಕ ಈ ಹೊತ್ತಿಗೆಯಲ್ಲಿ ಗುರುತರವಾಗಿದೆ. ಸತ್ಯನಾರಾಯಣ ಪೂಜಾ ಕೈಂಕರ್ಯವು ಇಷ್ಟೊಂದು ಗಹನವಾದುದೇ ಎಂಬ ವಿಸ್ಮಯವೂ, ಸಂಸ್ಕೃತ ಮಂತ್ರಗಳಲ್ಲಿ ಇದ್ದುದು ಇಷ್ಟೇ ಅರ್ಥವೇ ಎಂಬ ಸಮಾಧಾನವೂ, ತೃಪ್ತಿಯೂ ಪುಸ್ತಕ ಓದಿದ ಸಂದರ್ಭದಲ್ಲಿ ಉಂಟಾಗುವುದು ಸತ್ಯ.
ಇಲ್ಲಿ ಭಾವಗೀತಾತ್ಮಕವಾದ ಅಚ್ಚಗನ್ನಡದ ಪದ್ಯಗಳಿವೆ. ಈ ಪದ್ಯಗಳ ಸಂಸ್ಕೃತ ಮೂಲವನ್ನು ನೋಡಬೇಕಲ್ಲ ಎಂದುಕೊಳ್ಳುವಷ್ಟರಲ್ಲಿಯೇ ಎರಡನೆಯ ಅಧ್ಯಾಯದಲ್ಲಿ ಅದು ರಾರಾಜಿಸಿಬಿಡುತ್ತದೆ. ಹಾಗೆ ಕಂಡದ್ದನ್ನು ತೌಲನಿಕವಾಗಿ ನೋಡಿದಾಗ ಕನ್ನಡಕ್ಕೆ ವಿಶಿಷ್ಟವಾದ ಭಾವಗೀತೆಗಳ ಸಂಗಮವೇ ವೇದ್ಯವಾಗಿ ಸತ್ಯನಾರಾಯಣನಿಗೆ ನೈವೇದ್ಯವಾಗಿರುವುದು ಗೋಚರಿಸುತ್ತದೆ. ಸಾಂಪ್ರದಾಯಿಕವಾದ ಕತೆಗಳೂ ಇಲ್ಲಿವೆ. ಆ ಅವೇ ಕತೆಗಳು. ಸತ್ಯನಾರಾಯಣ ವ್ರತವನ್ನು ಮಾಡಿದವರಿಗೊದಗುವ ದೈವ ಕೃಪೆ; ಸತ್ಯವನ್ನು ಕಡೆಗಣಿಸಿ ಕೊಟ್ಟ ಮಾತಿಗೆ ತಪ್ಪುವವರಿಗೊದಗುವ ಕಷ್ಟನಷ್ಟಗಳು, ಸತ್ಯನಾರಾಯಣ ಪೂಜೆಯ ಮಹಿಮೆ ಇತ್ಯಾದಿ. ಆದರೂ ಇಲ್ಲಿನ ಕಥಾನಿರೂಪಣೆಯಲ್ಲಿ ಹೊಸತನವಿದೆ. ಎಲ್ಲರನ್ನೂ ಸಮಾನವಾಗಿ ತಲುಪಬೇಕೆನ್ನುವ ತವಕದೊಂದಿಗೆ ಸದ್-ನಿರೀಕ್ಷೆಯಿದೆ. ಆದಷ್ಟೂ ಪರಿಣಾಮಕಾರಿಯಾಗಿಸುವ ಸಶಕ್ತವಾದ ಸಂಭಾಷಣೆಗಳು ಕತೆಗೆ ನಾಟಕೀಯತೆಯನ್ನು ಒದಗಿಸುತ್ತವೆ. ಕತೆಯನ್ನು ಉತ್ತಮವಾಗಿ ವಾಚಿಸುವವರಿದ್ದರೆ ಲೇಖಕರ ಈ ಶ್ರಮ ಸಾರ್ಥಕ.
ಇಷ್ಟದೇವತಾ ಸ್ತುತಿ, ಸೂಕ್ತಗಳು, ಸತ್ಯದ ಬಗೆಗೆ ಸುಭಾಷಿತ ಸೂಕ್ತ ಮೊದಲಾದವುಗಳನ್ನು ವಿವಿಧ ಮೂಲಗಳಿಂದ ಆಯ್ದು ಅನುಬಂಧಗಳಲ್ಲಿ ಒದಗಿಸಲಾಗಿದೆ. ಇನ್ನು ಹರಿಹರ ಕವಿಯ ಪುಷ್ಪರಗಳೆಯ ಸೊಬಗನ್ನು ಅರಿಯದವರು ಇಲ್ಲಿ ಅದನ್ನೂ ಆಸ್ವಾದಿಸಬಹುದು. ಸಾಂಪ್ರದಾಯಿಕ ಮಂಗಳಾರತಿಗೆಂದು ಭಗವದ್ಗೀತೆಯ ಶ್ಲೋಕಗಳಿವೆ. ಜತೆಜತೆಯಲ್ಲಿಯೇ ಹೊಸಗನ್ನಡದ ಕೆಲವು ಜನಪ್ರಿಯ ಸ್ತೋತ್ರಗಳೂ ಹೊಂದಿಕೆಯಾಗಿವೆ.
ಮೇಲೆ ಹೇಳಿದ ಎಲ್ಲವನ್ನೂ ಗರ್ಭೀಕರಿಸಿಕೊಂಡಿರುವ ಈ ಪುಸ್ತಕವು ಬರಿಯ ಪೂಜಾವಿಧಾನಗಳನ್ನು ತಿಳಿಸುವ ಹೊತ್ತಿಗೆ ಮಾತ್ರವಾಗಿರದೆ, ತತ್ಸಂಬಂಧದ ಸರ್ವವನ್ನೂ ಒಳಗೊಂಡಿರುವ ಅಪರೂಪದ ಸಂಶೋಧನಾ ಕೃತಿಯೆಂಬುದು ನಿರ್ವಿವಾದ. ಪ್ರಾಯೋಗಿಕವಾಗಿ ಈ ಕೃತಿಯ ಸಾಫಲ್ಯವನ್ನು ಈ ಕ್ಷಣದಲ್ಲಿ ನಿರ್ಧರಿಸುವುದು ಕಷ್ಟ. ಆದರೆ ಪ್ರಯತ್ನದ ದೃಷ್ಟಿಯಿಂದ ಇದೊಂದು ಯಶಸ್ವೀ ಕೃತಿ. ಏನೇ ಇರಲಿ, ದೈವಭಕ್ತರೂ, ಸಾಹಿತಿಗಳೂ, ವ್ರತಾನುಷ್ಠಾನವನ್ನು ನೆರವೇರಿಸುವ ಪೂಜಾವೃತ್ತಿನಿರತರೂ, ಕುತೂಹಲಿಗಳೂ ಸಮಾನಾಸಕ್ತಿಯಿಂದ ಓದಬಹುದಾದ ಕೃತಿ ಇದು ಎಂಬುದಂತೂ ನಿರ್ವಿವಾದ.