ಅಮೆರಿಕನ್ನಡ
Amerikannada
ಬಾಗಿಲಿಗೆ ಬಂದೀತೆ ಬಾಗಿನ. . . .
ಭವಾನಿ ಲೋಕೇಶ್, ಮಂಡ್ಯ
ಬೆಳಗಿನ ಜಾವ ನಾಲ್ಕರ ಹೊತ್ತಿಗೆ ಮನೆಯ ಮುಂದಿನ ಕಸ ಗುಡಿಸಿ ರಂಗೋಲಿ ಇಟ್ಟು ಬಣ್ಣಗಳಿಂದ ಸಿಂಗರಿಸಿದಾಗಲೇ ಅವತ್ತಿನ ಸಂಭ್ರಮದ ಆರಂಭ. ಬಾಗಿಲಿಗೆ ಹಸಿ ಹಸಿ ಎಳೆ ಮಾವಿನೆಲೆಯ ತೋರಣ ಕಟ್ಟಿ ಹೊಸ್ತಿಲನ್ನು ಹೂವಿಂದ ಸಿಂಗರಿಸಿ ಮನೆಯೊಳಗೆ ಬಂದರೆ ಹಬ್ಬದ ಸಡಗರ ಬಿಚ್ಚಿಕೊಳ್ಳುತ್ತಾ ಹೋಗುತ್ತ್ತದೆ. ಪೆಟ್ಟಿಗೆಯೊಳಗಿಟ್ಟ ಮದುವೆಯಲ್ಲಿ ಉಟ್ಟಿದ್ದ ಧಾರೆಯ ರೇಶಿಮೆ ಸೀರೆ, ಹಬ್ಬಕ್ಕೆಂದೆ ತೆಗೆದಿಟ್ಟುಕೊಂಡ ಜರಿ ಅಂಚಿನ ಕಾಟನ್ ಸೀರೆ ಎಲ್ಲವೂ ಆ ದಿನ ಬಿಸಿಲು ಕಾಣುತ್ತ್ತವೆ. ರೇಶಿಮೆ ಉಟುಕೊಂಡೇ ಬಾಗಿನ ನೀಡುವ ಸಂಪ್ರದಾಯವದು ಹ್ಞಾ...! ಅದು ಗೌರಿ ಹಬ್ಬ . .ತನ್ನ ಪುತ್ರ ಗಣೇಶನೊಂದಿಗೆ ಗುರುತಿಸಿಕೊಳ್ಳುವ ಗೌರಿ ತಾಯಿಗೆ ಹೆಣ್ಣು ಮಕ್ಕಳೆಲ್ಲ ಬಾಗಿನ ನೀಡಿ ಪೂಜಿಸುವ ಹಬ್ಬ. ಸಾಮಾನ್ಯವಾಗಿ ಗೌರಿ ಹಬ್ಬಕ್ಕೆ ಕೊಂಚ ಹೆಚ್ಚಿನ ಮಹತ್ವ ಯಾವ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ತೆಗೆಯದಿದ್ದರೂ ಗೌರಿ ಗಣೇಶ ಹಬ್ಬಕ್ಕೆ, ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆಗಳಿರಲೇಬೇಕು. ಅದರಲ್ಲೂ ಹೆಣ್ಣು ಮಕ್ಕಳಿಗೆ ತವರಿನಿಂದ ಅರಿಶಿನ ಕುಂಕುಮ, ಬಳೆ ಬಿಚ್ಚೋಲೆ ಬಾಗಿನ ನೀಡುವ ಸಾಮಾಗ್ರಿಗಳು ಜೊತೆಗೆ ಅಪ್ಪನೋ, ಅಣ್ಣನೋ ಪ್ರೀತಿಯಿಂದ ತೆಗದುಕೊಟ್ಟ ಇನ್ನೂರೇ ರೂಪಾಯಿಯ ಕಾಟನ್ ಸೀರೆ ಓಹ್.! ಹಣ್ಣುಮಕ್ಕಳಿಗೆ ಅದಕ್ಕಿಂತ ಸಂಭ್ರಮ ಬೇಕೆ ? ಗಂಡನ ಮನೆಯಲ್ಲಿ ಕೋಟಿಯೇ ಇರಲಿ. ತವರಿನಿಂದ ಬರುವ ಉಡುಗೊರೆಯೆಂದರೆ ಹೆಣ್ಣುಮಕ್ಕಳಿಗೆ ಅದೇನು ಆನಂದವೋ. ಅದನ್ನು ಉಟ್ಟು ಪಕ್ಕದ ಮನೆಯ ರೂಪಕ್ಕನಿಗೋ, ಎದುರು ಮನೆಯ ನೀಲಮ್ಮನಿಗೋ ತೋರಿಸಿದ ಮೇಲೆಯೇ ಸಮಾಧಾ. ಅದು ಸಾಲದೆಂಬಂತೆ ಬಾಗಿನ ನೀಡುವ ನೆಪದಲ್ಲಿ ಅದೂ ಇದೂ ಮತ್ತೊಂದು ಮಗದೊಂದು ಚರ್ಚೆಯಲ್ಲಿಯೂ ಸೀರೆಯ ವಿಷಯ ಬರಲೇಬೇಕು. ಇರಲಿ ಬಿಡಿ ಪಾಪ ಅದು ಅವರವರ ಸಂಭ್ರಮ ನಾವ್ಯಾಕೆ ಅಡ್ಡಿ ಬರಬೇಕು. ಹಿಂದೆಲ್ಲಾ ಈ ಬಾಗಿನ ನೀಡುವ ಸಂಪ್ರದಾಯ ಕಟ್ಟುನಿಟ್ಟಾಗಿ ಜಾರಿಯಲ್ಲಿತ್ತು. ಹಬ್ಬದ ಆಚರಣೆ ಇರುವ ಮನೆಗಳಲ್ಲಿ ಇದು ನಡೆಯಲೇಬೇಕಿತ್ತು. ನನ್ನತ್ತೆಯ ತವರಿನಿಂದ ಈಗಲೂ ವೀಳ್ಯದೆಲೆ ಕಟ್ಟು, ಗೋಟಡಕೆ, ಬಳೆ, ಬಿಚ್ಚೋಲೆ, ಬಾಳೆಗೊನೆ, ಹುಣಸೆಕಾಯಿ, ತೊಗರಿಬೇಳೆ, ಅಕ್ಕಿಯ ಪೊಟ್ಟಣ, ಒಬ್ಬಟ್ಟು (ಹೋಳಿಗೆ) ಮಾಡಲಿಕ್ಕೆ ಅಚ್ಚುಬೆಲ್ಲ, ದಕ್ಷಿಣೆ ಕಾಸು, ರವಿಕೆ ಕಣ ಎಲ್ಲದರ ಜೊತೆಗೆ ಬಾಗಿನವನ್ನು ಜೋಡಿಸಲಿಕ್ಕೆ ಒಂದು ಜೊತೆ ಮೊರ ಎಲ್ಲವೂ ಬರುತ್ತವೆ. ತವರಿನಿಂದ ಬಂದ ಎಲ್ಲಾ ಸಾಮಗ್ರಿಗಳನ್ನು ಮೊರದಲ್ಲಿ ಜೋಡಿಸಿಯೇ ಗೌರಿಗೆ ಬಾಗಿನ ನೀಡುವುದು ಅವರ ಸಂಪ್ರದಾಯ. ಕೆಲವರು ಮನೆಯಲ್ಲೇ ಗೌರಿಯನ್ನು ಪ್ರತಿಷ್ಟಾಪಿಸಿದರೆ ಹೆಚ್ಚಾಗಿ ಊರೊಟ್ಟಿನ ಗೌರಿಯನ್ನು ತಂದು ದೇವಸ್ಥಾನದಲ್ಲಿಟ್ಟು ಎಲ್ಲರೂ ಅಲ್ಲಿಗೆ ಬಂದು ಬಾಗಿನ ನೀಡುವುದು ಚಾಲ್ತಿಯಲ್ಲಿದೆ. ನಗರ ಪ್ರದೇಶಗಳಲ್ಲೂ ದೇವಸ್ಥಾನಗಳಲ್ಲಿಯೇ ಬಾಗಿನ ನೀಡುವುದುನ್ನು ಕಾಣಬಹುದು. ಅಲ್ಲಿಗೆ ಬಂದ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ಕೈಗೆ ಕಂಕಣ ಕಟ್ಟಿ, ಹೊದ್ದ ಸೆರಗಿನಿಂದ ಮೊರ ನೀವಳಿಸಿ ಗೌರಿಯನ್ನು ಪೂಜಿಸಿ ಎಲೆ ಅಡಿಕೆ, ದಕ್ಷಿಣೆ, ಹಣ್ಣು ಕಾಯಿ ಎಲ್ಲವನ್ನೂ ಕುಂಕುಮದ ಜೊತೆ ನೀಡುತ್ತಾರೆ ಮನೆಯಲ್ಲಂತೂ ಬಗೆ ಬಗೆಯ ಭೋಜನದ ತಯಾರಿ ಜೊತೆಜೊತೆಯಲ್ಲೇ ಸಾಗಬೇಕು ಇರಲಿ...
ಇವತ್ತಿಗೆ ಆ ಸಂಪ್ರದಾಯಗಳೆಲ್ಲಾ ಮರೆಯಾಗುತ್ತಿವೆಯೇನೋ ಅಂತ ಅನ್ನಿಸಲಿಕ್ಕೆ ಶುರುವಾಗಿದೆ. ಮೊನ್ನೆ ಮೊನ್ನೆ ಪತ್ರಿಕೆಯೊಂದರಲ್ಲಿ ಬಂದ ಸುದ್ಧಿಯೂ ಹಾಗೆಯೇ ಇತ್ತು. “ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೂ ಹಕ್ಕು, ಬಾಗಿನಕ್ಕೂ ಬಂತು ಕುತ್ತು” ಅಂತ. ಆಸ್ತಿಯಲ್ಲಿ ಪಾಲು ಕೇಳುವುದಕ್ಕೆ ಆರಂಭಿಸಿದಾಗಿನಿಂದ ತವರೆನ್ನುವುದು ಹೆಣ್ಣುಮಕ್ಕಳಿಗೆ ರಣರಂಗವಾಗಿದೆಯೆಂದರೆ ತಪ್ಪಾಗಲಾರದು. ಅದೆಷ್ಟೋ ಸಂಬಂಧಗಳು ಈ ವಿಚಾರಕ್ಕೆ ಕಿತ್ತು ಹೋಗಿದ್ದಿದೆ. ಅದೆಷ್ಟೋ ಮನೆಗಳ, ಮನಸುಗಳ ನೆಮ್ಮದಿ ಹಾಳಾಗಿದ್ದಿದೆ ಬಿಡಿ.. ಸಂಪ್ರದಾಯಕ್ಕೂ ಆಸ್ತಿ ಹಣ ರಾಜಕೀಯ, ತಲೆ ಹಾಕಿ ಬಾಂದವ್ಯದ ಬೇಲಿಯನ್ನೇ ಬಡಿದು ಉರುಳಿಸುತ್ತಿದೆ. ಬದುಕೆನ್ನುವುದು ಎಷ್ಟು ದಿನ ಬಲ್ಲವರಾರು? ನೆನ್ನೆಯಷ್ಡೇ ಗಂಟೆಗಟ್ಟಲ್ಲೇ ಮಾತನಾಡುತ್ತಾ ಕುಳಿತು ಎದ್ದು ಹೋದವರು ಇವತ್ತು ದಾರಿ ಮಧ್ಯದಲ್ಲೆಲ್ಲೋ ಕಾಡು ಹೆಣವಾಗುತ್ತಾರೆ. ಹೊಸ ಹೊಸ ಖಾಯಿಲೆ ಕಸಾಲೆಗಳು ಮನುಷ್ಯನ ಜೀವವನ್ನು ಹಿಂಡಿ ಹಿಪ್ಪೆ ಹಾಕುತ್ತಿವೆ. ಬದುಕಿರುವಷ್ಟು ದಿನ ಎಲ್ಲರೂ ಚೆನ್ನಾಗಿರಲಿ ಅನ್ನುವುದೊಂದೇ ಆಶಯವನ್ನಿಟ್ಟುಕೊಂಡರೇ ಅಷ್ಟೇ ಸಾಕು. ಯಾವ ಕ್ಷಣದಲ್ಲಿ ಬೇಕಾದರೂ ಬಂದೆರಗುವ ಸಾವನ್ನೂ ಎದುರಿಸಬಹುದು. ಛೇ! ಹಬ್ಬ ಹತ್ತಿರವಿಟ್ಟುಕೊಂಡು ಸಾವಿನ ಮಾತಾಡುವುದು ಸಲ್ಲದು. ಬೇಡ ಬೇಡವೆಂದರೂ ಬಾಗಿನ ಅಂದಕೂಡಲೇ ಇವೆಲ್ಲಾ ನೆನಪಾದವು. ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದರೆ ಯಾವುದೋ ಮುನಿಸು, ಯಾವುದೋ ಸಿಟ್ಟು, ಸೆಡವು, ಕೋಪ, ದ್ವೇಷ ಮನಸ್ಸಿನಲ್ಲಿದ್ದರೂ ಪರವಾಗಿಲ್ಲ. ಮನಿಯಾರ್ಡ್‌ರ್ ಮಾಡಿಯೋ, ಯಾರದೋ ಒತ್ತಾಯಕ್ಕೆ ಮಣಿದು ಬೇರೆಯವರು ಏನೆಂದುಕೊಂಡಾರೋ ಅಂತೆಲ್ಲಾ ಯೋಚಿಸಿ ಅವರಿವರ ಕೈಯಲ್ಲಿ ಬಾಗಿನ ಕೊಟ್ಟು ಕಳುಹಿಸಬೇಡಿ. ನಿಮ್ಮ ಮನೆಯ ಹಣಕ್ಕಿಂತ ಆ ಹೆಣ್ಣು ಮಕ್ಕಳಿಗೆ ನಿಮ್ಮ ಕೊಂಚ ಪ್ರೀತಿ ಮಾತ್ರ ಬೇಕಾಗಿರುತ್ತದೆ. ಪ್ರತಿಷ್ಠ್ಟೆ ಬಿಟ್ಟು ಬಾಗಿನ ತೆಗೆದುಕೊಂಡು ಮನೆ ಬಾಗಿಲಿಗೆ ಹೋಗಿ ಕೊಟ್ಟರೆ ಆಕೆ ಯಾವುದನ್ನೂ ಮನ್ನಿಸಿಯಾಳು. ಮನದಾಳದಿಂದ ಒದ್ದುಕೊಂಡು ಬಂದ ದುಃಖವೆಲ್ಲಾ ಕಣ್ಣೀರಾಗಿ ಹರಿದು ಹೋಗಿ ಆನಂದದ ಬಾಷ್ಪ ಕಣ್ಣಂಚಿನಲಿ ಜಿನುಗಲಿ. ಮನಸ್ಸುಗಳು ಮಾತಾಡಿಕೊಳ್ಳಲಿ. ಬಿಟ್ಟು ಬಿಡಿ ಅವರವರ ಪಾಡಿಗೆ. . .