ಅಮೆರಿಕನ್ನಡ
Amerikannada
ಗಣಪತಿಯ ಪ್ರಲಾಪ
-ಡಾ. ಬಿ.ಎನ್. ಸತ್ಯನಾರಾಯಣರಾವ್
ಒಂದು ಸಂಜೆ ಕೈಲಾಸದಲ್ಲಿ ಶಿವ ಪಾರ್ವತಿಯೊಂದಿಗೆ ಸರಸ ಸಲ್ಲಾಪದಲ್ಲಿದ್ದಾಗ ದ್ವಾರ ಪಾಲಕ ಬಂದು ನಮಸ್ಕರಿಸಿ ನಿಲ್ಲುತ್ತಾನೆ.
ಶಿ: “ಯಾರದು? ನಿನಗೆ ಸಮಯದ ಪರಿಜ್ಞಾನವಿಲ್ಲವೇ?”
ದ್ವಾ.“ಕ್ಷಮಿಸ ಬೇಕು ಮಹಾ ಪ್ರಭು. ನಿಮ್ಮ ದ್ವಿತೀಯ ಪುತ್ರ ಶ್ರೀ ಗಣಪತಿಯವರು ಆಗಮಿಸಿದ್ದಾರೆ. ಬಹಳ ವ್ಯಾಕುಲಗೊಂಡಂತೆ ಕಾಣುತ್ತಿದೆ. ಸಕಾಲವಲ್ಲದಿದ್ದರೂ ತುರ್ತು ಪರಿಸ್ಥಿತಿಯಿರುವುದರಿಂದ ಕ್ಷಮೆ ಯಾಚಿಸಿ ಒಳಗೆ ಬರಲು ಅನುಮತಿ ಕೇಳುತ್ತಿದ್ದಾರೆ.”
ಪಾ: “ಅಯ್ಯೋ ನನ್ನ ಪ್ರೀತಿಯ ಪುತ್ರ ಒಳಗೆ ಬರಲು ಅಪ್ಪಣೆ ಕೇಳಬೇಕೇ. ಏನು ತೊಂದರೆಯೋ ಏನೋ. ನನಗೆ ಆತಂಕವಾಗುತ್ತಿದೆ. ಶೀಘ್ರವೇ ಒಳಗೆ ಕಳಿಸು.” ಎಂದು ಶಿವನಿಂದ ದೂರ ಸರಿದು ಕೂರುತ್ತಾಳೆ.
ಗಣಪತಿ ಒಳಗೆ ಬಂದು ತಾಯಿ ತಂದೆಗಳಿಗೆ ನಮಸ್ಕರಿಸುತ್ತಾನೆ. ಪಾರ್ವತಿ ಅವನನ್ನು ಪಕ್ಕಕ್ಕೆ ಕರೆದು ಕೂರಿಸಿಕೊಂಡು
ಪಾ: “ಏಕೆ ಪುತ್ರ, ಹೀಗೆ ಕಳಾಹೀನನಾಗಿರುವೆ. ಸರ್ವಲೋಕಗಳಿಗೂ ವಿಘ್ನವಿನಾಶಕನಾದ ನಿನಗೇನು ತೊಂದರೆ?. ದಯವಿಟ್ಟು ಬಿನ್ನವಿಸು.”
ಗ: “ಅಮ್ಮ, ನಾನೇನೆಂದು ಹೇಳಲಿ. ನನಗೆ ವಿಘ್ನನಾಶಕನ ಪಟ್ಟ ಬಂದಾಗಲಿಂದ, ಭೂಲೋಕದಲ್ಲಿ ನಮ್ಮ ಭಕ್ತರು ಆಹ್ವಾನಿಸಿದಾಗಲೆಲ್ಲ ನಾನು ಹೋಗಿ ನನ್ನ ಕರ್ತವ್ಯಪಾಲನೆ ಮಾಡುತ್ತ ಬಂದಿದ್ದೇನೆ. ಆದರೆ ಭೂಲೋಕದಲ್ಲಿ ಈ ಇಪ್ಪತ್ತೊಂದನೇ ಶತಮಾನದಲ್ಲಿ ನನಗೇ ಅನೇಕಾನೇಕ ವಿಘ್ನಗಳು ಇತ್ತೀಚೆಗೆ ಯಾಕೋ ಕಾಡುತ್ತಿವೆ. ನನಗೆ ಈ ಪಟ್ಟ ಬೇಡವೆನಿಸಿದೆ.”
ಶಿ:“ಅದೇನೆಂದು ವಿವರಿಸಿ ಹೇಳಬಾರದೆ ವಿನಾಯಕ?”
ಗ: “ಭೂಲೋಕದಲ್ಲಿ ಇತ್ತೀಚೆಗೆ ನನ್ನ ಭಕ್ತರ ಸಂಖ್ಯೆ ಮಿತಿಮೀರಿ ಬೆಳೆಯುತ್ತಿದೆ. ಅವರ ಕೋರಿಕೆಗಳೂ ಚಿತ್ರ ವಿಚಿತ್ರವಾಗಿರುತ್ತವೆ.”
ಶಿ: “ಭಕ್ತರ ಸಂಖ್ಯೆ ಹೆಚ್ಚಾದರೆ ನಮಗೆ ಸಂತೋಷದ ಸುದ್ದಿಯಲ್ಲವೆ ಮಗು. ನಿನ್ನ ಭಕ್ತರ ಸಂಖ್ಯೆ ಹೆಚ್ಚುತ್ತಿರುವುದನ್ನು ಕೇಳಿದರೆ ನಮಗೆ ಒಂದು ಕಡೆ ಸಂತೋಷವಾದರೂ ಇನ್ನೊಂದು ಕಡೆ ಅಸೂಯೆ ಹುಟ್ಟುತ್ತಿದೆ. ಇದರಿಂದ ನಿನಗಾಗಿರುವ ತೊಂದರೆಯಾದರೂ ಏನು?”
ಗ: “ಕಳೆದ ಶತಮಾನಗಳಲ್ಲಿ ಪ್ರಶಸ್ತವಾದ ಸ್ಥಳಗಳಲ್ಲಿ, ಒಳ್ಳೆಯ ಪರಿಸರದಲ್ಲಿ ಅಂದರೆ ನದೀ ಅಥವ ಸಮುದ್ರದ ತೀರಗಳಲ್ಲೋ, ಸುಂದರವಾದ ಬೆಟ್ಟಗಳ ತುದಿಗಳಲ್ಲೋ, ಅಥವಾ ವನಗಳಲ್ಲೋ, ನನಗೆ ಗುಡಿಗಳನ್ನು, ದೇವಸ್ಥಾನಗಳನ್ನು, ಮಂದಿರಗಳನ್ನು ಕಟ್ಟುತ್ತಿದ್ದರು. ಒಳ್ಳೆಯ ಸತ್ಸಂಗಿಗಳು ಬಂದು ಪೂಜಾದಿ ಸೇವೆಗಳನ್ನು ಸಲ್ಲಿಸುತ್ತಿದ್ದರು. ಅವರ ಕೋರಿಕೆಗಳೂ ಸಾಮಾನ್ಯವಾದ ಮಾನವನ ದಿನ ನಿತ್ಯದ ಸಮಸ್ಯೆಗಳ ಬಗ್ಗೆ ಆಗಿರುತ್ತಿದ್ದವು. ಆದರೆ ಈಗ ಅದೆಲ್ಲ ಬದಲಾಗಿದೆ.”
ಪಾ: “ಹಾಗೆಂದರೆ ನಮಗೆ ಹೇಗೆ ಅರ್ಥವಾಗಬೇಕು. ಮಗು. ಬಿಡಿಸಿ ಹೇಳಬಾರದೆ?” ಎಂದು ಗಣಪನ ಸೊಂಡಿಲನ್ನು ತಡವರಿಸುವಳು.
ಗ: “ಕಳೆದ ಶತಮಾನಗಳಲ್ಲಿ ಪ್ರಶಸ್ತವಾದ ಸ್ಥಳಗಳಲ್ಲಿ, ಒಳ್ಳೆಯ ಪರಿಸರದಲ್ಲಿ ಅಂದರೆ ನದೀ ಅಥವ ಸಮುದ್ರದ ತೀರಗಳಲ್ಲೋ, ಸುಂದರವಾದ ಬೆಟ್ಟಗಳ ತುದಿಗಳಲ್ಲೋ, ಅಥವಾ ವನಗಳಲ್ಲೋ, ನನಗೆ ಗುಡಿಗಳನ್ನು, ದೇವಸ್ಥಾನಗಳನ್ನು, ಮಂದಿರಗಳನ್ನು ಕಟ್ಟುತ್ತಿದ್ದರು. ಒಳ್ಳೆಯ ಸತ್ಸಂಗಿಗಳು ಬಂದು ಪೂಜಾದಿ ಸೇವೆಗಳನ್ನು ಸಲ್ಲಿಸುತ್ತಿದ್ದರು. ಅವರ ಕೋರಿಕೆಗಳೂ ಸಾಮಾನ್ಯವಾದ ಮಾನವನ ದಿನ ನಿತ್ಯದ ಸಮಸ್ಯೆಗಳ ಬಗ್ಗೆ ಆಗಿರುತ್ತಿದ್ದವು. ಆದರೆ ಈಗ ಅದೆಲ್ಲ ಬದಲಾಗಿದೆ.”
ಗ: “ಅಮ್ಮ. ಸ್ವಲ್ಪ ಗಟ್ಟಿಯಾಗಿ ಮಾತನಾಡು. ನನಗೆ ಕಿವಿ ಸ್ವಲ್ಪ ಮಂದವಾಗಿದೆ.”
ಪಾ: “ಇಷ್ಟು ದೊಡ್ಡ ಕಿವಿಗಳು ಮಂದವಾಗಲು ಹೇಗೆ ಸಾಧ್ಯ. ಏನು ಹೇಳುತ್ತಿರುವೆ ಮಗು” ಎಂದು ಕಿವಿಗಳನ್ನು ಸವರುವಳು.
ಗ: “ಜನ ಸಂಖ್ಯೆ ಹೆಚ್ಚಾಗಿ, ಅದರಲ್ಲೂ ಮಹಾನಗರಗಳಲ್ಲಿ ನನ್ನ ದೇವಸ್ಥಾನಗಳು ಎಲ್ಲೆಲ್ಲೂ ನಿರ್ಮಾಣವಾಗುತ್ತಿವೆ. ಸಂದಿ ಗೊಂದಿಗಳಲ್ಲಿ, ಮೋರಿಗಳ ಪಕ್ಕದಲ್ಲಿ, ರಸ್ತೆಯ ಮಧ್ಯದಲ್ಲಿ, ಎಲ್ಲೆಂದರಲ್ಲಿ ಗುಡಿಗಳು ಏಳುತ್ತಿವೆ. ಗಣೇಶ ಚತುರ್ಥಿಯ ಸಮಯದಲ್ಲಂತೂ ಸಹಸ್ರಾರು ತಾತ್ಕಾಲಿಕ ಮಂದಿರಗಳು ಚಮಯಾನಗಳಲ್ಲಿ ಅಥವಾ ಶೆಡ್ ಗಳಲ್ಲಿ ನಿರ್ಮಾಣವಾಗುತ್ತವೆ.”
ಶಿ: “ಅದರಿಂದ ನಿನಗೇನು ತೊಂದರೆ. ಭಕ್ತರಲ್ಲಿ ಭಕ್ತಿಯಿದ್ದರೆ ಸರಿ. ಎಲ್ಲಾದರೇನು? ಶೀರಾಮ ಲಂಕೆಗೆ ಹೋಗುವ ಮುನ್ನ ಸಮುದ್ರ ತೀರದಲ್ಲೇ ನನ್ನನ್ನು ಮರಳಿನಲ್ಲೇ ಪ್ರತಿಸ್ಠಾಪಿಸಿ ಪೂಜಿಸಲಿಲ್ಲವೇ?”
ಗ: “ಆಗಿನ ಸಂದರ್ಭ ಬೇರೆಯೇ ಆಗಿತ್ತು. ಈಗಿನ ಸಂದರ್ಭಗಳೇ ಬೇರೆ.”
ಶಿ: “ಅದು ಹೇಗೆ?”
ಗ: “ಹಿಂದೆ ಪ್ರಶಾಂತವಾದ ಸ್ಥಳಗಳಲ್ಲಿ ಹಿತವಾಗಿ, ಮಂದವಾದ ನಂದಾದೀಪಗಳ ಮಿಣುಕು ಬೆಳಕಿನಲ್ಲಿ ನನ್ನ ಪೂಜೆ ನಡೆಯುತ್ತಿತ್ತು. ಈಗ ಕಣ್ಣು ಕುಕ್ಕುವ ಸಾವಿರ ಹಣತೆಗಳಷ್ಟು ಪ್ರಕಾಶಮಾನವಾದ, ವಿವಿಧ ಬಣ್ಣಗಳ ನೂರಾರು ವಿದ್ಯುತ್ ದೀಪಗಳ ಬೆಳಕಿನಲ್ಲಿ ಪೂಜೆ ನಡೆಯುತ್ತದೆ. ಇಡೀ ಮಂದಿರವಷ್ಟೇ ಅಲ್ಲದೆ, ಸುತ್ತನುತ್ತಲು ಒಂದು ಯೋಜನದವರೆಗೆ ಸಾಲುದೀಪಗಳು ರಸ್ತೆಗಳುದ್ದಕ್ಕೂ, ಮನೆಗಳ ಮೇಲೂ, ಮರಗಳಮೇಲೂ ಸಹ ಈ ಕಣ್ಣು ಕೋರೈಸುವಂತೆ ಜ್ವಲಿಸುತ್ತಿರುತ್ತವೆ. ಮಂಗಳಾರತಿಗೆಂದು ಬೆಳಗುವ ಕರ್ಪೂರ ಅಥವ ಎಣ್ಣೆಬತ್ತಿಯ ಜ್ವಾಲೆಗಳು, ಈ ವಿದ್ಯುತ್ ಪ್ರಕಾಶದಲ್ಲಿ ಕಾಣಿಸುವುದೇ ಕಷ್ಟ ಎನ್ನುವಂತಿರುತ್ತದೆ. ಧೂಪಾದಾರತಿಯನ್ನಂತು ಕೇಳಲೇ ಬೇಡಿ. ಸುವಾಸನೆಯುಳ್ಳ ಹೂವಿನ ಹಾರ, ವಸ್ತ್ರಾದಿಗಳಿಂದ ಅಲಂಕೃತನಾಗುತ್ತಿದ್ದ ನನಗೆ ಈಗ ಹೂವಿನ ಅಭಾವದಿಂದಾಗಿ, ಸುವಾಸನೆರಹಿತವಾದ ಕಾಗದ ಅಥವಾ ಬೆಂಡಿನ ಹಾರಗಳು, ಪ್ಲಾಸ್ಟಿಕ್ ಚೀಲಗಳು ಅಥವ ಡಬ್ಬಗಳಲ್ಲಿ ಬರುವ ಪಂಚಾಮೃತದ ಸಾಮಗ್ರಿಗಳ ಅಭಿಷೇಕ. ಸುಶ್ರಾವ್ಯವಾದ ಭಕ್ತಿಗೀತೆಗಳ ಸೇವೆ ಪಡೆಯುತ್ತಿದ್ದ ನನಗೆ ಈಗ ಉಚಿತವಲ್ಲದ, ಮನೋವಿಕಲ್ಪ ಮಾಡುವಂಥ ಸಿನೆಮಾದ ಪ್ರೇಮ ಗೀತೆಗಳ ಸೇವೆ. ಕೆಲವು ಕಡೆ ಭರತನಾಟ್ಯ, ಕುಚುಪುಡಿ, ಮುಂತಾದ ಭಾರತೀಯ ಸಂಸ್ಕೃತಿಯ ನರ್ತನಗಳ ಬದಲು, ಪಾಶ್ಚ್ಯಾತೀಕರಣಗೊಂಡ ಸಿನೆಮಾ ಕುಣಿತಗಳು. ಹೋಗಲಿ, ಆ ಹಾಡುಗಳನ್ನೆ, ಹಾಡುಗಾರರು ತಮ್ಮ ಸಿರಿಕಂಠಗಳಿಂದ ನೇರವಾಗಿ ಹಾಡಿದರೆ, ಹತ್ತಿರದಲ್ಲೇ ಗರ್ಭಗುಡಿಯಲ್ಲಿ ಕುಳಿತಿರುವ ನನಗೆ ಮುದವಾಗಬಹುದು. ಆದರೆ ಅವರು ದ್ವನಿವರ್ಧಕಗಳನ್ನು ಉಪಯೋಗಿಸಿ, ಅವರ ಗಾಯನ ಹತ್ತು ಯೋಜನ ದೂರಕ್ಕೂ ಕೇಳಿಸುವಂತೆ ಮಾಡಿರುತ್ತಾರೆ. ನನ್ನ ಕಿವಿ ಗಡಚಿಕ್ಕಿಕೊಂಡು ಮಂದವಾಗಿರುವುದೂ ಆ ಕಾರಣದಿಂದಲೇ. ಆ ಶಬ್ದದಲ್ಲಿ ದೇವಸ್ಥಾನದ ಕಂಚಿನ ಘಂಟಾನಾದವೂ ಕೇಳಿಸುವುದಿಲ್ಲ. ಪೂಜಾರಿಯ ಕೈಯಲ್ಲಿರುವ ಮಂಗಳಾರತಿ ಘಂಟೆಯ ವಿಷಯ ಬಿಡಿ. ಅದು ಭಕ್ತರಿಗೆ ಹಾಗಿರಲಿ, ಪೂಜಾರಿಗೇ ಕೇಳಿಸುವುದಿಲ್ಲ. ಆ ದ್ವನಿವರ್ಧಕಗಳಿಂದ ಬರುವ ಕಂಪನದಿಂದ ನನ್ನ ಮಣ್ಣಿನ ಮೂರ್ತಿ ಎಲ್ಲಿ ಸೀಳಿಕೊಂಡು ಭಗ್ನವಾಗುತ್ತೋ ಎಂದು ಆತಂಕವೂ ಆಗುತ್ತೆ. ಅದಲ್ಲದೆ ಮುಖ್ಯ ರಸ್ತೆಯ ಪಕ್ಕ ಅಥವ ರಸ್ತೆಯ ಮಧ್ಯದಲ್ಲಿರುವ ಮಂದಿರಗಳಲ್ಲಿ, ವಾಹನಗಳ ನಿರಂತರ ಭೋರ್ಗರೆತ ಬೇರೆ. ಮಂದಿರಕ್ಕೆ ಬಂದಿರುವ ನೂರಾರು ಭಕ್ತರು ನನ್ನ ಸೇವೆಯಲ್ಲಿ ಆನಂದಿಸುತ್ತಿದ್ದರೆ, ಸಾವಿರಾರು ಜನ ಸುತ್ತ ಮುತ್ತಲ ಮನೆಗಳಲ್ಲಿರುವವರು, ರಸ್ತೆಯಲ್ಲಿ ಅಡಚಣೆಗೊಳಪಟ್ಟಿರುವ ವಾಹನ ಚಾಲಕರು, ಪರೀಕ್ಷೆಗಾಗಿ ತಯಾರಾಗುತ್ತಿರುವ ವಿಧ್ಯಾರ್ಥಿಗಳು, ಶಾಂತಿಗಾಗಿ ಹಂಬಲಿಸುತ್ತಿರುವ ವೃದ್ಧರು, ಹತ್ತಿರದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು, ಆ ಶಬ್ದದಿಂದ ಭಯಪಟ್ಟು ತತ್ತರಿಸುತ್ತಿರುವ ನಾಯಿಗಳು, ಬೆಕ್ಕುಗಳು, ಹಸು ಕರುಗಳು, ಮತ್ತು ಇತರ ಪ್ರಾಣಿಗಳು, ಈ ಸಂಭ್ರಮಕ್ಕೆ ಕಾರಣರಾದವರಿಗೂ, ಬಹುಶಃ ನನಗೂ ಹಿಡಿ ಶಾಪ ಹಾಕುತ್ತಿರಬಹುದು.”
ಶಿ: “ಈ ಶಬ್ದ ಮತ್ತು ವಿದ್ಯುತ್ ದೀಪಗಳ ಅತಿ ಬಳಕೆಯನ್ನು , ತೊಂದರೆಗೊಳಗಾದವರು ಪ್ರತಿಭಟಿಸುವುದಿಲ್ಲವೇ ಕುಮಾರ.”
ಗ: “ಆ ಧೈರ್ಯ ಅವರಿಗೆಲ್ಲಿ ಬರಬೇಕು ಅಪ್ಪಾಜಿ?. ಏಕೆಂದರೆ ಈ ಸಂಭ್ರಮಗಳನ್ನು ಬೆಂಬಲಿಸುವ ಬಲಿಷ್ಟ ರಾಜಕಾರಣಿಗಳು, ಮತ್ತು ಈ ಸಂಭ್ರಮಗಳನ್ನು ಬೆಂಬಲಿಸಿ, ಅದನ್ನು ತಮಗೊಂದು ಜಾಹೀರಾತೆಂದು ಭಾವಿಸುವ ಸ್ಥಳೀಯ ವ್ಯಾಪಾರಿಗಳು ಉದ್ಯಮಿಗಳು ಇರುತ್ತಾರೆ. ಈ ತಾತ್ಕಾಲಿಕ ರಸ್ತೆ ಗಣಪತಿಗಳನ್ನು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮ ಅನುಯಾಯಿಗಳ ಸಂತೋಷಕ್ಕೆಂದು ಆ ರಾಜಕಾರಣಿಗಳೇ ಪ್ರೊತ್ಸಾಹಿಸಿ ಸಹಾಯ ಮಾಡಿರುತ್ತಾರೆ. ಜನಗಳ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಮಾಡಬಾರದು, ಅಧಿಕ ಶಕ್ತಿಯ ದ್ವನಿವರ್ಧಕದ ಬಳಕೆ ಮಾಡಬಾರದು, ರಾತ್ರೆ ಹನ್ನೊಂದು ಗಂಟೆ ಮೇಲೆ ಜನಗಳಿಗೆ ತಮ್ಮ ಚಟುವಟಿಕೆಗಳಿಂದ ನಿದ್ರಾಭಂಗ ಮಾಡಬಾರದು ಎಂಬ ಕಾಯಿದೆಗಳೇನೋ ಇವೆ. ಆದರೆ ಪೋಲೀಸ್ ಅಧಿಕಾರಿಗಳು ಈ ಹಬ್ಬ ಹರಿದಿನಗಳ ಸಮಯದಲ್ಲಿ ಕಾಯಿದೆಯನ್ನು ಎತ್ತಿ ಹಿಡಿದು ಸಂಭ್ರಮಕಾರಿಗಳಿಗೆ ರಸಭಂಗ ಮಾಡಲು ಇಚ್ಚಿಸುವುದಿಲ್ಲ. ಯಾರಾದರು ಅಧಿಕೃತವಾಗಿ ಬಂದು ಅಡ್ಡಿ ಮಾಡಿದರೆ ಅಥವಾ ಪೋಲೀಸಿಗೆ ದೂರು ದಾಖಲಿಸಿದರೆ, ದೂರುಕೊಟ್ಟವರಿಗೆ ತೊಂದರೆಯಾಗುವ ಭಯವೂ ಇರುತ್ತೆ. ಸ್ವಯಂಪ್ರೇರಿತರಾಗಿ ಪೋಲೀಸರು ಈ ಕ್ರಮ ಕೈಗೊಳ್ಳಲು ಹೆದರುತ್ತಾರೆ. ಮೇಲಾಗಿ ಅವರೂ ನನ್ನ ಅಭಿಮಾನಿಗಳಲ್ಲವೆ. ಅವರಿಗೂ ದೈವ ಭಯವಿರುತ್ತೆ. ಭಕ್ತಿಯ ( ಅಥವ ಮದ್ಯಪಾನದ ) ಆವೇಶದಲ್ಲಿರುವವರಿಗೆ ಭಂಗ ತಂದರೆ ಗೊಂದಲ ಸೃಷ್ಟಿಯಾಗಬಹುದೆಂದು ಹೆದರಿ ಸುಮ್ಮನಿರುತ್ತಾರೆ.”
ಶಿ: “ಮಾನವರಿಗೇನೋ ಸರಿ ಆದರೆ ದೈವೀ ಶಕ್ತಿಯುಳ್ಳ ನಿನಗೆ ಇದರಿಂದ ಏನು ತೊಂದರೆ ಮಗನೆ?”
ಗ: “ಹಾಗಲ್ಲ. ಪಿತ್ರುವರ್ಯ. ನಿನಗೆ ತಿಳಿಯದ್ದೇನಿದೆ. ನನ್ನನ್ನು ಪುರೋಹಿತರು ಆ ಮಂದಿರದ ವಿಗ್ರಹದಲ್ಲಿ ಆವಾಹನೆ ಮಾಡಿದಾಗ ಕರ್ತವ್ಯದ ಕಾರಣದಿಂದ ನಾನು ಅಲ್ಲಿರಲೇಬೇಕಾಗುತ್ತೆ. ಅಲ್ಲಿರುವಾಗ ನಾನು ಮಾನವರಂತೆಯೇ ಇಂದ್ರಿಯಗಳ ಅನುಭವಿಕನಾಗಿರುತ್ತೇನೆ. ಹಾಗಾಗಿ ನಾನು ಆ ಶಬ್ದ, ದೀಪಗಳ, ಗಲಭೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನನ್ನನ್ನು ವಿಸರ್ಜನೆ ಮಾಡಿ ’ಪುನರಾಗಮನಾಯಚ’ ಅಂತ ಹೇಳೋವರೆಗೂ ನನಗೆ ಬಿಡುಗಡೆಯಿಲ್ಲ. ನನಗೆ ಈ ಉದ್ದನೆ ಸೊಂಡಿಲ ಮೂಗಿನ ಅವಾಂತರ ಬೇರೆ?”
ಪಾ: “ನಿನ್ನ ಸೊಂಡಲಿಗೇನಾಯಿತಪ್ಪ. ಈ ನಿನ್ನ ಪಿತ ಮಾಡಿದ ಅಚಾತುರ್ಯದಿಂದ ನಿನಗೆ ಆನೆಯ ತಲೆ ಬಂತು. ನಿನ್ನನ್ನು ನೋಡಿದಾಗಲೆಲ್ಲ ನನಗೆ ಆ ಘಟನೆಯ ನೆನಪು ಬರುತ್ತೆ.” ಪಾರ್ವತಿಯ ಕಣ್ಣುಗಳಲ್ಲಿ ಅಶ್ರು ತುಂಬಿತು.
ಶಿ: “ಪ್ರಿಯೆ. ಈ ಕುಮಾರ ತನ್ನ ಸಂಕಟವನ್ನು ಹೇಳಿಕೊಳ್ಳುತ್ತಿರುವಾಗ, ನೀನು ಹಳೆಯದನ್ನೆಲ್ಲಾ ಕೆದಕಿ ಅವನನ್ನು ಇನ್ನಷ್ಟು ವ್ಯಾಕುಲಗೊಳಿಸಬೇಡ. ಕುಮಾರ ನೀನು ಮುಂದುವರಿಸು.”
ಗ: “ನನಗೇನೂ ಬೇಸರವಿಲ್ಲಮ್ಮ. ಈ ರೂಪದಿಂದಲೇ ನನಗೆ ಜನಪ್ರಿಯತೆ ಬಂದಿರುವುದು. ಏನು ಹೇಳುತ್ತಿದ್ದೆನೆಂದರೆ, ಹಾ! ನನ್ನ ಸೊಂಡಿಲು. ರಸ್ತೆ ಗಣಪತಿಗಳಲ್ಲಿ ನನ್ನನ್ನು ಆವಾಹನೆ ಮಾಡಿದಾಗ, ಅಕ್ಕ ಪಕ್ಕದ ರಸ್ತೆಗಳಲ್ಲಿ ವಾಹನ ಸಂಚಾರ ಇತ್ತೀಚೆಗೆ ವಿಪರೀತವಾಗಿದ್ದು, ಇಂಧನಗಳ ಮತ್ತು ರಸ್ತೆಯ ಧೂಳಿನ ಸೇವನೆಯಿಂದ ನನ್ನ ಉದ್ದವಾದ ಈ ಮೂಗು ಕಟ್ಟಿಕೊಂಡು ಉಸಿರಾಟಕ್ಕೆ ಆಸ್ಪದವಿಲ್ಲದೆ ಸಂಕಟವಾಗುತ್ತದೆ. ಅಲ್ಲಿ ಕೂರಲೂ ಆಗದೆ, ಏಳಲೂ ಆಗದೆ ಉಭಯಸಂಕಟವಾಗುತ್ತೆ.”
ಶಿ: “ನಿನ್ನ ಸಮಸ್ಯೆಗಳು ವಿಷಾದಕರವಾಗಿದ್ದರೂ, ಸ್ವಾರಸ್ಯವಾಗಿದೆ. ಭೂಲೋಕದಲ್ಲಿ ಇನ್ನೇನು ವಿಶೇಷಗಳನ್ನು ನೀನು ಅನುಭವಿಸಿದೆ ಹೇಳು.”
ಗ: “ಹೇಳಲು ನೂರಾರು ವಿಷಯಗಳಿವೆ. ಆದರೆ ಕೆಲವನ್ನು ಮಾತ್ರ ಹೇಳುತ್ತೇನೆ. ನಿಮಗೆ ಆಯಾಸವಾಗಿ ನಿದ್ರೆ ಬರುತ್ತಿರುವಂತಿದೆ.”
ಶಿ: “ಪರವಾಗಿಲ್ಲ. ಹೇಳು.”
ಗ: “ಈಗ ಐದಾರು ವರ್ಷಗಳ ಹಿಂದೆ ಒಂದು ಪವಾಡ ನಡೆಯಿತೆಂದು ಭಾವಿಸಿ ಜನರು ಅದನ್ನು ನನ್ನ ಪವಾಡವೆಂದು ಕರೆದರು.”
ಶಿ: “ಪವಾಡವೇ? ಅದೇನನ್ನು ಮಾಡಿದೆ ನೀನು?”
ಗ: “ಅದು ಪವಾಡವಲ್ಲ. ಜನರ ನಂಬಿಕೆಯ ಅತಿರೇಕ. ಅಕಸ್ಮಾತ್ ಒಬ್ಬ ಭಕ್ತ ಹಾಲಿನ ಪಾತ್ರೆಯನ್ನು, ಜೇಡಿ ಮಣ್ಣಿನಲ್ಲಿ ಮಾಡಿ ಚೆನ್ನಾಗಿ ಬಿಸಿಲಲ್ಲಿ ಒಣಗಿದ್ದ ನನ್ನ ವಿಗ್ರಹದ ಸೊಂಡಿಲಿನ ತುದಿಗೆ ತಾಕಿಸಿದ. ಪ್ರಕೃತಿಯ ಸ್ವಭಾವದಂತೆ ಸೊಂಡಿಲಿನ ಜೇಡಿಮಣ್ಣು ಹಾಲನ್ನು ಹೀರಿಕೊಳ್ಳಲು ಶುರುಮಾಡಿತು. ಇದರಿಂದ ಅಚ್ಚರಿಗೊಂಡ ಆ ಭಕ್ತ ನೆರೆಹೊರೆಯವರನ್ನೆಲ್ಲಾ ಕರೆದು, ‘ಗಣಪತಿ ನನ್ನ ಭಕ್ತಿಯನ್ನು ಮೆಚ್ಚಿ ಹಾಲನ್ನು ಸ್ವೀಕರಿಸುತ್ತಿದ್ದಾನೆ’ ಎಂದು ಸುದ್ದಿ ಹರಡಿದ. ಜನಗಳೆಲ್ಲ ಈ ಅಚ್ಚರಿಯನ್ನು ನೋಡಿ ತಮ್ಮ ತಮ್ಮ ಗಣಪತಿಗಳಿಗೆ ಹಾಲನ್ನು ಕುಡಿಸಲು ಹೊರಟರು. ನಂಬಿಕೆಯಿಂದ ಲಕ್ಷಾಂತರ ಜನಗಳು ಮರುಳಾಗಿ ದೇಶದಲ್ಲಿ ದೊಡ್ಡ ಕೋಲಾಹಲವೇ ಆಯಿತು. ದೊಡ್ಡ ದೊಡ್ಡ ದೇವಸ್ಥಾನಗಳಲ್ಲೂ ಸಹ ನನ್ನ ಸೊಂಡಿಲಿಗೆ ಹಾಲಿನ ಕಡಾಯಿಗಳನ್ನು ಹಿಡಿದರು. ಈ ರೀತಿ ನಂಬಿದವರಲ್ಲಿ ಅನೇಕ ವಿದ್ಯಾವಂತರು, ವೈದ್ಯರು, ವಿಜ್ಞಾನಿಗಳು, ನ್ಯಾಯವಾದಿಗಳು, ರಾಜಕಾರಣಿಗಳು, ಮಂತ್ರಿಗಳೂ ಸಹ ಇದ್ದರು. ಇದನ್ನು ನಂಬದಿದ್ದ ಕೆಲವು ವಿಜ್ಞಾನಿಗಳು, ‘ಇದು ಪ್ರಕೃತಿಯಲ್ಲಿರುವ ಭೌತಿಕ ವಸ್ತುಗಳ ಸ್ವಭಾವ. ಒಣಗಿದ ಜೇಡಿ ಮಣ್ಣಿನ ಕ್ಯಾಪಿಲ್ಲರಿ ಆಕ್ಶನ್’ ಅಂತ ವಿವರಿಸಿದರೂ ಜನ ನಂಬಲಿಲ್ಲ.”
ಶಿ: “ನಿಜ. ಜನರನ್ನು ‘ನಂಬುವವರು’/‘ನಂಬದವರು’ ಎಂದು ಸ್ಥೂಲವಾಗಿ ವಿಂಗಡಿಸಬಹುದು. ನಂಬಿದವರಿಗೆ ದೇವರು ಇದ್ದಾನೆ, ಪವಾಡಗಳೂ ಇವೆ. ಅದಿಲ್ಲದೆ ಅವರಿಗೆ ಆಸ್ತಿತ್ವವೇ ಇಲ್ಲ. ನಂಬದವರಿಗೆ ದೇವರಿಲ್ಲ. ಅವರು ಸದಾಕಾಲವು ಭೌತಿಕ ಪ್ರಪಂಚದಲ್ಲೇ ಇದ್ದು ಎಲ್ಲವನ್ನು ಸಾಧಿಸಿ, ಪ್ರಮಾಣಿಸಿ ನೋಡಲು ಪ್ರಯತ್ನಿಸುತ್ತಾರೆ. ಅವರಿಗೆ ತಮ್ಮ ಸುತ್ತಲಿನ ಪ್ರಕೃತಿಯೇ ಸತ್ಯ. ಈ ಪ್ರಕೃತಿಯೆಂಬ ಮಾಯೆಯನ್ನು ಮೀರಿ ಮಹಾಸತ್ಯವೊಂದಿದೆ ಎಂದು ಅವರು ಒಪ್ಪುವುದಿಲ್ಲ.”
ಗ: “ಹೌದು ಪಿತ್ರುವರ್ಯ. ಆದರೆ ನನಗೂ ಹಾಲುಕುಡಿದೂ ಕುಡಿದೂ ಸಾಕಾಗಿತ್ತು. ಇದು ಯಾವ ಮಟ್ಟಕ್ಕೇರಿತ್ತೆಂದರೆ, ಹಾಲಿನ ಸರಬರಾಜೆಲ್ಲ ಗಣಪತಿಗೇ ವಿನಿಯೋಗವಾಗುತ್ತಿದ್ದು ರಾಜ್ಯದಲ್ಲಿ ಹಸುಗೂಸುಗಳಿಗೆ ಕುಡಿಯಲು ಹಾಲಿಲ್ಲ, ಕಾಫಿಗೆ ಹಾಲಿಲ್ಲ, ಎನ್ನುವಂತಾಗಿತ್ತು. ಆಮೇಲೆ ಒಂದು ವಾರದಲ್ಲಿ ಜನ ಇದನ್ನೆಲ್ಲಾ ಮರೆತೇ ಬಿಟ್ಟರು. ಇತ್ತೀಚೆಗೆ ಇನ್ನೊಂದು ಸಮಾಚಾರವನ್ನು ಕೇಳಿದೆ. ಮಧ್ಯ ಯೂರೋಪಿನಲ್ಲಿ ಅಣು ವಿಜ್ಞಾನಿಗಳು ಬ್ರಹ್ಮ ರಹಸ್ಯವನ್ನೇ ಭೇದಿಸಲು ಹೊರಟಿದ್ದಾರಂತೆ.”
ಪ: “ಹಾಗೆಂದರೇನು ಮಗು. ಬ್ರಹ್ಮ ರಹಸ್ಯ ನಮಗೂ ಅರಿಯದಲ್ಲ.”
ಗ: “ಬ್ರಹ್ಮಾಂಡ ಮೊಟ್ಟ ಮೊದಲಿಗೆ, ಅಂದರೆ ಆದಿಯಲ್ಲಿ, ಹೇಗೆ ಹುಟ್ಟಿತು ಎಂದು ಅವರಿಗೆ ಬಹು ಮಟ್ಟಿಗೆ ತಿಳಿದಿದೆಯಂತೆ. ಅದೊಂದು ಮಹಾಸ್ಪೋಟದಿಂದ (ಬಿಗ್ ಬ್ಯಾಂಗ್) ವಿಶ್ವ ಶುರುವಾಯಿತಂತೆ. ಭೂಗರ್ಭದಲ್ಲಿ ಎರಡು ಬಿಲಿಯನ್ ಡಾಲರ್ ವೆಚ್ಚದಲ್ಲಿ ಕಟ್ಟಿರುವ ಒಂದು ಪ್ರಯೋಗಾಲಯದಲ್ಲಿ ಈ ಬ್ರಹ್ಮಾಂಡ ಹುಟ್ಟಿದ್ದನ್ನು ಸೂಕ್ಷ್ಮ ಪ್ರಮಾಣದ ಅಣು ಸ್ಪೋಟವನ್ನುಂಟು ಮಾಡಿ ಆವರ ಅನುಮಾನವನ್ನು ಪ್ರಮಾಣಿಸಿ ನೋಡುತ್ತಾರಂತೆ. ಅಂದರೆ ಬ್ರಹ್ಮನನ್ನು ಅನುಕರಣೆ ಮಾಡಿ ತೋರಿಸುತ್ತಾರಂತೆ. ಇದರಿಂದ ಏನಾದರು ಹೆಚ್ಚು ಕಮ್ಮಿ ಆಗಿ, ಮಹಾ ಪ್ರಳಯವೇ ಉಂಟಾಗಿ ವಿಶ್ವವೇ ಕುಸಿದುಬೀಳಬಹುದು (ಕೊಲ್ಯಾಪ್ಸ್ ಆಫ್ ದಿ ಯೂನಿವರ್ಸ್) ಎಂದು ಕೆಲವರು ಭಯಪಟ್ಟಿದ್ದಾರಂತೆ.”
ಪಾ: “ಅಯ್ಯಯ್ಯೋ! ಹಾಗಾದರೆ ನಮ್ಮ ೧೪ ಲೋಕಗಳೂ ಕುಸಿದು ಬೀಳುವುವೆ. ನಂಬಲಸಾಧ್ಯ. ಬ್ರಹ್ಮ, ವಿಷ್ಣುಗಳಿಗೆ ಇದು ತಿಳಿದಿರುವುದೇ?”
ಗ: “ಹಾಗಾಗುವುದಿಲ್ಲ ಎಂದು ಆ ವಿಜ್ಞಾನಿಗಳು ಆಶ್ವಾಸನೆ ನೀಡಿದ್ದಾರೆ. ಅದು ಹೋಗಲಿ , ಇನ್ನು ಕೆಲವು ವಿಶೇಷ ಸಂಗತಿಗಳನ್ನು ಹೇಳುವೆ. ಕೇಳಿ. ಇತ್ತೀಚೆಗೆ ಭಕ್ತರ ಪ್ರಭಾವ ಬಹಳ ಬೆಳೆಯುತ್ತಿದೆ. ಅವರ ಕೋರಿಕೆಗಳೂ ವಿಚಿತ್ರವಾಗಿರುತ್ತದೆ. ಭರತಖಂಡದ ಅನೇಕ ರಾಜ್ಯಗಳಲ್ಲಿ ಇದು ನಡೆದಿದೆ. ಉದಾಹರಣೆಗೆ ಮೊನ್ನೆ ಉತ್ತರ ದೇಶದ ಒಂದು ರಾಜ್ಯದಲ್ಲಿ ಪ್ರಜಾಪ್ರಭುತ್ವದ ನಿಯಮಗಳ ಪ್ರಕಾರ ಚುನಾವಣೆ ನಡೆಯಿತು. ಚುನಾವಣೆಗೆ ಕೆಲವು ವಾರಗಳ ಮುಂಚೆ ರಾಜ್ಯದ ಒಂದು ಪಕ್ಷದ ಚುನಾವಣಾ ಅಭ್ಯರ್ಥಿ ಬಂದು ನನಗೆ ವಿಶೇಷ ಪೂಜೆ ಸಲ್ಲಿಸಿ, ನಮ್ರತೆಯಿಂದ ಬೇಡಿದ. ‘ನಾನು ಈ ಚುನಾವಣೆಯಲ್ಲಿ ಗೆಲ್ಲಲು ಮಾಡುತ್ತಿರುವ ಸಕಲ ಪ್ರಯತ್ನಗಳೂ ಯಶಸ್ವಿಯಾಗಲಿ’ ಎಂದು ಹರಕೆ ಸಲ್ಲಿಸಿದ. ‘ತಥಾಸ್ತು. ನಿನ್ನ ಪ್ರಯತ್ನಗಳು ನಡೆಯಲಿ’ ಎಂದೆ. ಕೆಲವು ದಿನಗಳ ನಂತರ ಅದೇ ಸ್ಥಳದ ಇನ್ನೊಬ್ಬ ಚುನಾವಣಾ ಅಭ್ಯರ್ಥಿ ಬಂದು ಅದೇ ರೀತಿ ಇನ್ನೂ ದೊಡ್ಡ ಪ್ರಮಾಣದ ಪೂಜೆ ಸಲ್ಲಿಸಿ ಈ ರೀತಿ ಬೇಡಿದ. ‘ಈ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ಸ್ಪರ್ಧಿಸುತ್ತಿರುವ ನನಗೆ ಶತ್ರುಗಳಿದ್ದಾರೆ. ಅವರಿಂದ ನನಗೆ ಜೀವ ಭಯವಿದೆ. ನನಗೆ ಪ್ರಾಣ ರಕ್ಷಣೆ ನೀಡು’ ಅಂತ. ‘ತಥಾಸ್ತು’ ಎಂದೆ.”
ಶಿ: “ಸ್ವಾರಸ್ಯವಾಗಿದೆ. ಈ ರೀತಿ ಅನುಭವಗಳು ನನಗೂ ಆಗಿದೆ. ಏನೇನೋ ವರಗಳನ್ನು ಮಾನವ, ದಾನವ, ರಾಕ್ಷಸರಿಗೆ ಕೊಟ್ಟು, ಒಂದಾನೊಂದು ಕಾಲದಲ್ಲಿ ನಾನೂ ತೊಂದರೆಗೊಳಗಾಗಿದ್ದೆ. ಮುಂದಕ್ಕೆ ಹೇಳು.”
ಗ: “ಚುನಾವಣೆಗೆ ಕೆಲವು ದಿನ ಮುಂಚೆ, ಪ್ರಚಾರಮಾಡುತ್ತಿದ್ದ ಎರಡನೆ ವ್ಯಕ್ತಿಯ ಮೇಲೆ, ಮೊದಲನೆ ವ್ಯಕ್ತಿ ಕಳಿಸಿದ್ದ ಕೆಲವು ದುಷ್ಕರ್ಮಿಗಳು, ಹಲ್ಲೆ ಮಾಡಿದರು. ಅವನಿಗೆ ಹಲವಾರು ಗಾಯಗಳಾಗಿ, ಎರಡು ಮೂಳೆ ಮುರಿದು ಆಸ್ಪತ್ರೆ ಸೇರಿದ.”
ಶಿ:“ಕೊನೆಯಲ್ಲಿ ಚುನಾವಣೆ ಫಲಿತಾಂಶ ಏನಾಯಿತು?”
ಗ: “ಇಬ್ಬರೂ ಸೋತು ಮೂರನೆ ಅಭ್ಯರ್ಥಿ ಗೆದ್ದ.”
ಶಿ: “ಹಾಗಾದರೆ ಇಬ್ಬರ ವಿಷಯದಲ್ಲೂ ನಿನ್ನ ವರ ಹುಸಿಯಾಯಿತಲ್ಲ.”
ಗ: “ಹಾಗೇನಿಲ್ಲ. ನಾನು ಒಬ್ಬನಿಗೆ ಹೇಳಿದ್ದು ನಿನಗೆ ಪ್ರಾಣ ರಕ್ಷಣೆ ಕೊಡುತ್ತೇನೆಂದು. ಅವನು ಸಾಯಲಿಲ್ಲ ಗಾಯಗೊಂಡ. ನನ್ನ ಆಶೀರ್ವಾದದಿಂದ ಪ್ರಾಣ ಹರಣವಾಗಲಿಲ್ಲ. ಇನ್ನೊಬ್ಬನಿಗೆ, ಅವನ ಪ್ರಯತ್ನಗಳು ನಡೆಯಲಿ ಎಂದು ಮಾತ್ರ ಹೇಳಿದ್ದೆ. ಉದ್ದೇಶ ಸರಿಯಾಗಿಲ್ಲದಿದ್ದರಿಂದ ಯಶಸ್ಸು ಸಿಗಲಿಲ್ಲ. ನಿಮ್ಮ ಅನುಭವಗಳನ್ನು ಕೇಳಿ ತಿಳಿದಿದ್ದ ನಾನು ಬಹಳ ಎಚ್ಚರಿಕೆಯಿಂದ ವರಗಳನ್ನು ಕೊಡುತ್ತೇನೆ. ಇನ್ನೊಂದು ವಿಷಯ ಹೇಳುತ್ತೇನೆ ಕೇಳಿ ಅಪ್ಪಾಜಿ. ಅದಕ್ಕೆ ಮೊದಲು ನನ್ನ ಪ್ರಶ್ನೆಗೆ ಉತ್ತರ ಹೇಳಿ. ನನ್ನ ಪೂಜಾ ವಿಧಿಯಲ್ಲಿ ಬಹು ಮುಖ್ಯವಾದ ಹಂತ ಅಂದರೆ ಯಾವುದು?”
ಶಿ: “ಮಹಾಮಂಗಳಾರತಿ ತಾನೆ?”
ಗ: “ಅದು ಬಹಳ ಹಳೆಯ ಕಾಲಕ್ಕಾಯಿತು. ಯಾವುದೋ ಋಷಿ ಗಣಪತಿ ಪೂಜಾವಿಧಿಯಲ್ಲಿ, ಮಣ್ಣಿನ ಗಣಪತಿಯನ್ನು ಗಣೇಶ ಚೌತಿಯ ದಿನ ಪೂಜಿಸಿ, ನಂತರ ವಿಸರ್ಜಿಸಿ, ಆ ಮೂರ್ತಿಯನ್ನು ನದಿಯಲ್ಲೋ, ಕೆರೆಯಲ್ಲೋ ಮುಳುಗಿಸುವುದು ಎಂದು ಹೇಳಿಬಿಟ್ಟಿದ್ದಾರೆ. ಈಗ ಪೂಜೆಗಿಂತ ಈ ಮೂರ್ತಿಯ ವಿಸರ್ಜನಾ ಕ್ರಿಯೆಗೇ ಬಹಳ ಮಹತ್ವ ಬಂದಿದೆ. ಸಂಜೆ ಪೂಜೆಯ ಸಮಯದಲ್ಲಿ, ಅತಿ ವಿಜೃಂಭಣೆಯಿಂದ ನನಗೆ ಅಲಂಕಾರ ಮಾಡಿ, ಮುಂಚೆ ಹೇಳಿದಂತೆ ಗಾಯನ, ನೃತ್ಯ, ಮತ್ತು ಇತರ ಸಾಂಸ್ಕೃತಿಕ ಮತ್ತು ಸಾಮಾಜಿಕ (ಅನೇಕಸಲ ಇದಕ್ಕೆ ರಾಜಕಾರಣದ ಬಣ್ಣ ಕೂಡ ಬಂದಿರುತ್ತೆ) ಕಲಾಪಗಳು ನಡೆದಮೇಲೆ ಮಹಾ ಮೆರೆವಣಿಯೊಂದಿಗೆ ಕೆರೆಯಲ್ಲೋ ನದಿಯಲ್ಲೋ , ಅಥವಾ ಸಮುದ್ರದಲ್ಲೋ, ಮುಳುಗಿಸುವ ಕೊನೆಯ ಕಲಾಪ ನಡೆಯುತ್ತೆ. ಆದರೆ ಇತ್ತೀಚೆಗೆ ಈ ರೀತಿಯ ಸಹಸ್ರಾರು ಮೂರ್ತಿಗಳ ಮುಳುಗಡೆಯಿಂದ ನೀರಿನಲ್ಲಿ ಗಣಪತಿಗೆ ಬಳಿದ ಬಣ್ಣಗಳ ರಸಾಯನಿಕ ವಸ್ತುಗಳಿಂದ ಆರೋಗ್ಯ ಹಾನಿಯಾಗುತ್ತೆಂದು ಸಂಬಂಧಪಟ್ಟ ಅಧಿಕಾರಿಗಳು ದೂರಿರುವುದರಿಂದ ಈ ಕಲಾಪಕ್ಕೆ ಪ್ರತ್ಯೇಕ ಏರ್ಪಾಡುಗಳನ್ನು ಮಾಡಲು ಶುರುಮಾಡಿದ್ದಾರೆ. ಮನೆ ಮನೆಯಲ್ಲೂ ಮಹಾನಗರಗಳಲ್ಲಿ ಇರುವ ಸಣ್ಣ ಸಣ್ಣ ಗಣಪತಿಗಳನ್ನ ಪ್ಲಾಸ್ಟಿಕ್ ಬಕೆಟ್’ನಲ್ಲಿರುವ ನೀರಿನಲ್ಲಿ ಮುಳುಗಿಸುತ್ತಾರೆ. ಅಥವಾ ನಗರ ಪಾಲಿಕೆಯವರೇ ವ್ಯಾನ್’ಗಳಲ್ಲಿ ಬೀದಿ ಬೀದಿಗೂ ಬಂದು ಗಣಪತಿಯ ಮೂರ್ತಿಗಳನ್ನು ಶೇಕರಿಸಿ ಒಟ್ಟಿಗೆ ಒಂದು ನಿರ್ದಿಷ್ಟ ಸ್ಥಳದಲ್ಲಿ ಮುಳುಗಿಸುತ್ತಾರೆ. ದೊಡ್ಡ ಬೀದಿ ಗಣಪತಿಗಳನ್ನು ದೊಡ್ಡ ಟ್ರಕ್ ಗಳಲ್ಲಿ, ಟೆಂಪೋಗಳಲ್ಲಿ, ಕೂರಿಸಿ, ದೀಪಾಲಂಕಾರ ಮತ್ತು ಬಾಜಾ ಭಜಂತ್ರಿಗಳೊಂದಿಗೆ ಮುಖ್ಯ ರಸ್ತೆಗಳಲ್ಲಿ ಹೋಗಿ ಕೆರೆಯಲ್ಲೋ, ನದಿಯಲ್ಲೋ ಮುಳುಗಿಸುತ್ತಾರೆ.”
ಶಿ: “ಕಾಲಕ್ಕೆ ತಕ್ಕಂತೆ ಜನ ರೂಢಿಗಳನ್ನು ಬದಲಾಯಿಸುವುದು ಸಹಜ. ಅದರಲ್ಲಿ ತಪ್ಪೇನಿಲ್ಲ ಬಿಡು. ಅದಲ್ಲದೆ ಭಕ್ತರ ಇಚ್ಚೆಯೇ ನಮ್ಮ ಇಚ್ಚೆಯಲ್ಲವೆ?”
ಗ: “ಅದೇನೋ ಸರಿ. ಆದರೆ ಈ ವಿಷಯ ಕೇಳಿ. ಈ ಗಣಪತಿ ಮಂಗಳಾರತಿಯ ನೆವದಲ್ಲಿ ನನ್ನ ಭಕ್ತರ ನಂಬಿಕೆಯ ದುರುಪಯೋಗವೂ ನಡೆಯುತ್ತಿದೆ.”
ಶಿ: “ಅದು ಹೇಗೆ?”
ಗ: “ಗಣೇಶ ಚೌತಿಯ ಸಂಭ್ರಮದ ಸಮಯದಲ್ಲಿ ನಾನಾ ತರಹೆ ಗಲಭೆಗಳು ನಡೆಯುತ್ತವೆ. ಅದೇ ನನ್ನನ್ನು ವ್ಯಾಕುಲಗೊಳಿಸಿರುವುದು. ಎರಡು ಜಾತಿಗಳ ಅಥವ ಮತಗಳ ಅಥವ ಎರಡು ಗುಂಪುಗಳ ಘರ್ಷಣೆ ಈ ಸಮಯದಲ್ಲಿ ಸರ್ವೇ ಸಾಮಾನ್ಯ. ಹೊಡೆದಾಟ , ಬಡಿದಾಟ ಕೊನೆಗೆ ಕೊಲೆ ಸಹ ನಡೆದಿರುವುದುಂಟು.”
ಶಿ: “ಛೆ! ಛೆ! ಎಂಥ ಹೇಸಿಗೆ ವಿಚಾರ!”
ಗ: “ನನ್ನ ಮೆರೆವಣಿಗೆ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಸಣ್ಣ ಗಲಭೆ ಎಬ್ಬಿಸುತ್ತಾರೆ. ಭಕ್ತರ ಸಮೂಹದ ಮಧ್ಯೆ ಚಪ್ಪಲಿ ಅಥವಾ ಇತರೆ ಅಪವಿತ್ರ ವಸ್ತುಗಳನ್ನು ಎಸೆಯುತ್ತಾರೆ. ಭಕ್ತರಿಗೆ ರೇಗಿ, ಕಲಹ ಶುರುವಾಗಿ ಅದೇ ದೊಡ್ಡದಾಗಿ ಬೆಳೆದು ದುಷ್ಕರ್ಮಿಗಳಿಗೆ ಆಹ್ವಾನ ಕೊಡುತ್ತದೆ. ವಾಹನಗಳು ಮತ್ತು ಅಂಗಡಿಗಳಿಗೆ ಬೆಂಕಿ ಇಡುತ್ತಾರೆ. ಪೋಲೀಸ್ ಬಂದು ನಿಯಂತ್ರಿಸಬೇಕಾಗುತ್ತೆ. ಈ ವಿಷಯಗಳಿಂದಲೇ ನಾನು ವ್ಯಥೆ ಪಡುತ್ತಿರುವುದು. ಈ ವರ್ಷ ಒಂದು ಘಟನೆ ನಡೆಯಿತು. ಒಂದು ಐದಡಿ ಎತ್ತರದ ಗಣಪತಿಯ ಮಣ್ಣಿನ ಮೂರ್ತಿಯನ್ನು ಕೆರೆಗೆ ಟೆಂಪೋನಲ್ಲಿ ಮೆರವಣಿಗೆ ಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಭಕ್ತರಲ್ಲಿದ್ದ ಎರಡು ಗುಂಪುಗಳ ಮಧ್ಯೆ ಘರ್ಷಣೆ ಶುರುವಾಗಿ, ಪೋಲೀಸರು ಬಂದರು. ಆ ಎರಡು ಗುಂಪಿನವರೂ ನನ್ನ ಮೂರ್ತಿಯನ್ನು ರಸ್ತೆ ಪಕ್ಕದಲ್ಲೇ ಮೋರಿಯ ಹತ್ತಿರವೇ ಬಿಟ್ಟು ಓಡಿ ಹೋದರು. ಅವರಲ್ಲಿ ಯಾರಾದರೂ ಬಂದು ಕಾರ್ಯವನ್ನು ಸಮಾಪ್ತಿ ಮಾಡುತ್ತಾರೆಂದು ಪೋಲೀಸಿನವರು ಎರಡು ದಿನ ಕಾದರು. ಹೆದರಿಕೆಯಿಂದ ಯಾರೂ ಬರಲಿಲ್ಲ. ಆ ರಾತ್ರಿಯೆಲ್ಲ ಮಳೆ ಬೇರೆ ಬಂದು ನನ್ನ ಮೂರ್ತಿ ವಿರೂಪಗೊಂಡಿತು. ಎರಡು ದಿನ ನಾನು ಮೋರಿ ಪಕ್ಕದಲ್ಲಿರಬೇಕಾಯಿತು. ಕೊನೆಗೆ ಪೋಲೀಸರು ಒಂದು ಕಾರ್ಪೊರೇಶನ್ ವ್ಯಾನ್ ತರಿಸಿ ನನ್ನ ಮೂರ್ತಿಯನ್ನು ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಿದರು. ಆಂಥಹ ವ್ಯಾನ್’ಗಳನ್ನು ಅನಾಥ ಶವ ಗಳನ್ನು ಒಯ್ಯಲು ಉಪಯೋಗಿಸುತ್ತಾರೆಂದು ತಿಳಿದು ನನಗೆ ಬಹಳ ವ್ಯಾಕುಲವಾಯಿತು. ಈ ಪರಿಸ್ಥಿತಿ ನನಗೆ ಯಾವಾಗಲೂ ಬಂದಿರಲಿಲ್ಲ.” ಗಣಪತಿಯ ಕಣ್ಣಲ್ಲಿ ನೀರು ತುಂಬಿತು.
ಪಾ: “ಸಮಾಧಾನ ಮಾಡಿಕೋ ಕಂದ” ಎಂದು ತಲೆ ನೇವರಿಸುವಳು.
ಗ: “ಎಲ್ಲಾ ಸಾಂಸ್ಕೃತಿಕ ಸಾಮಾಜಿಕ, ರಾಜಕೀಯ, ವೈಜ್ಞಾನಿಕ ಇತ್ಯಾದಿ ಕಾರ್ಯಕ್ರಮಗಳಿಗೆ ಮೊದಲು ಯಾವ ವಿಘ್ನಗಳೂ ಬಾರದಂತೆ ನನ್ನ ಸ್ತುತಿ ಮಾಡುವುದು ಸಂಪ್ರದಾಯವಷ್ಟೆ. ಹೋದ ವರ್ಷ ಒಂದು ಹೃದ್ರೋಗ ತಜ್ಞರ ಸಮ್ಮೇಳನ ನಡೆಯಿತು. ನನ್ನ ಕಂಚಿನ ಮೂರ್ತಿಯೊಂದನ್ನು ವೇದಿಕೆಯ ಒಂದು ಪಕ್ಕದಲ್ಲಿ ಕೂರಿಸಿ, ಪೂಜಿಸಿ, ‘ಲಂಬೋದರ ಲಕುಮಿಕರ’ ಹಾಡನ್ನು ಹಾಡಿ, ಸಮ್ಮೇಳನವನ್ನು ಉದ್ಘಾಟಿಸಿದರು. ಆ ಸಮ್ಮೇಳನದಲ್ಲಿ ‘ಕೊಬ್ಬು ಮತ್ತು ಹೃದ್ರೋಗ’ (ಒಬೇಸಿಟಿ ಆಂಡ್ ಹಾರ್ಟ್ ಡಿಸೀಸಸ್) ಎಂಬ ವಿಷಯವಾಗಿ ಅನೇಕ ತಜ್ಞರು ತಮ್ಮ ಅಭಿಪ್ರಾಯಗಳನ್ನು ಅಂಕಿ ಅಂಶಗಳ ಸಮೇತ ಮಂಡಿಸಿ ಬಿರುಸಾಗಿ ಚರ್ಚೆ ನಡೆಸಿದರು. ಹೊಟ್ಟೆಯಮೇಲಿನ ಬೊಜ್ಜನ್ನು ಎಲ್ಲರೂ ಒಮ್ಮತದಿಂದ ಖಡಾಖಂಡಿಸಿ ಮಾತನಾಡಿದರು. ಅವರ ಚರ್ಚೆಯನ್ನು ಕೇಳಿದ ಮೇಲೆ ನನ್ನ ’ ಲಂಬೋದರದ’ ಮೇಲೆ ನನಗೆ ಅಸಹ್ಯ ಬಂದಿದೆ. ಅವರ ಪ್ರಕಾರ ನನಗೆ ಹೃದಯಾಘಾತವಾಗುವುದಂತೂ ಖಂಡಿತ. ಅಲ್ಲಿರಲು ನನಗೆ ಬಹಳ ಮುಜುಗರವಾಯಿತು. ಅಂದಿನಿಂದ ನನಗೆ ಸೀಕಡುಬು, ಮೋದಕ ಮತ್ತು ಚಕ್ಕುಲಿಗಳ ಮೇಲಿನ ಆಸೆ ಕಡಿಮೆಯಾಗಿಬಿಟ್ಟಿದೆ.”
ಪಾ: “ಅಯ್ಯೋ. ಅದೆಲ್ಲ ಮಾನವರಿಗೆ ಮಾತ್ರ ಅನ್ವಯಿಸುತ್ತೆ. ನೀನು ದೈವೀಸ್ವರೂಪನು, ಚಿರಂಜೀವಿ. ನಿನ್ನ ಹೊಟ್ಟೆ ಕ್ಷೀಣಿಸಿರುವುದನ್ನು ನಾನಾಗಲೇ ಗಮನಿಸಿದ್ದೆ. ಆ ಮನುಷ್ಯರ ಮಾತನ್ನು ಕೇಳಿ ನೀನು ಹೀಗೆ ಆಹಾರ ತ್ಯಾಗ ಮಾಡಿದರೆ ಹೇಗೆ ಎಂದು ಖೇದಪಟ್ಟು, ಗಣಪತಿಯ ಹೊಟ್ಟೆಯನ್ನು ಸವರುವಳು.”
ಗ: “ಇತ್ತೀಚೆಗೆ ಇನ್ನೊಂದು ದುರ್ಭರ ಘಟನೆ ನಡೆಯಿತು. ಒಂದು ದೊಡ್ಡ ದೇವಸ್ಥಾನದಲ್ಲಿ ಗಣೇಶ ಚೌತಿಯ ದಿನ ಮಹಾ ಮಂಗಳಾರತಿ ನಡೆಯುತ್ತಿದ್ದಾಗ, ಪೂಜಾರಿಯು ಸೊಂಟಕ್ಕೆ ಸಿಕ್ಕಿಸಿಕೊಂಡಿದ್ದ ಸೆಲ್ ಫೋನ್ ಎಂಬ ಸಲಕರಣೆ ಕಿಣಿ ಕಿಣಿ ಎಂದು ಏನೋ ವಿಚಿತ್ರ ಶಬ್ದ ಮಾಡಿತು. ಪೂಜಾರಿ ಬಲಗೈಯಲ್ಲಿ ಮಂಗಳಾರತಿ ಮಾಡುತ್ತ ಎಡಗೈಯಲ್ಲಿ ಆ ಸೆಲ್ ಫೋನ್ ಎತ್ತಿ ತಮ್ಮ ಕಿವಿಗೆ ಹಿಡಿದರು. ಪೂಜಾರಿಗೆ ಯಾರೋ ಫೋನ್’ನಲ್ಲಿ ಹೇಳಿದರು “ಗರ್ಭ ಗುಡಿಯಲ್ಲಿ ಒಂದು ಬಾಂಬ್ ಇದೆ. ಇನ್ನು ಎರಡೇ ನಿಮಿಷಗಳಲ್ಲಿ ಸ್ಪೋಟವಾಗುತ್ತದೆ” ಎಂದರು. ಪೂಜಾರಿ ಮಂಗಳಾರತಿ ತಟ್ಟೆಯನ್ನು ಅಲ್ಲಿಯೇ ಬಿಸುಟು, “ಬಾಂಬ್ ಇದೆ ! ಬಾಂಬ್ ಇದೆ! ಎಲ್ಲ ಓಡಿ! ಎಲ್ಲ ಓಡಿ!” ಎಂದು ಕೂಗುತ್ತ ಗರ್ಭ ಗುಡಿಯಿಂದ ಓಡಿ ಹೋದರು. ನಾನು ಅಪೂರ್ಣ ಪೂಜೆಯಾದರೂ ಪರವಾಗಿಲ್ಲ ಎಂದು ಸ್ವಯಂ ವಿಸರ್ಜನೆ ಮಾಡಿಕೊಂಡು ಅಲ್ಲಿಂದ ಅದೃಶ್ಯನಾದೆ. ದೇವಸ್ಥಾನದಲ್ಲಿ ದೊಡ್ಡ ಕೋಲಾಹಲವಾಯಿತು. ತುಳಿತಕ್ಕೆ ಸಿಕ್ಕಿ ಅನೇಕರು ಗಾಯಗೊಂಡರು. ಕೆಲವರು ಮರಣಿಸಿದರು. ಕೆಲವೇ ನಿಮಿಷಗಳಲ್ಲಿ ಪೋಲೀಸರು ಸ್ಪೋಟಕವನ್ನು ಮೂಸಿ ಪತ್ತೆ ಮಾಡುವ ನಾಯಿಗಳೊಂದಿಗೆ ದೇವಸ್ಥಾನದ ಒಳಗೆ ಬಂದರು. ದೇವಸ್ಥಾನದಲ್ಲೆಲ್ಲ, ಗರ್ಭಗುಡಿಯಲ್ಲೂ ಸಹ ನಾಯಿಗಳ ಓಡಾಟವೆಂದರೇನು? ನನಗಂತೂ ತಡೆಯಲಾಗಲಿಲ್ಲ. ಕೊನೆಗೆ ಯಾವ ಬಾಂಬೂ ಇರಲಿಲ್ಲ. ಪೂಜಾರಿಗಳು ಬಂದು ಮತ್ತೆ ಶುದ್ದೀಕರಣ ಕಲಾಪಗಳನ್ನು ಮಾಡಿ ಪೂಜೆಯನ್ನು ಮುಗಿಸಿದರು.”
ಶಿ: “ಪರಿಸ್ಥಿತಿ ಇಷ್ಟು ಗಂಭೀರ ಮಟ್ಟಕ್ಕೆ ಹೋಗಿದೆಯೆಂದು ತಿಳಿದು ಕಳವಳವಾಗುತ್ತಿದೆ ಪುತ್ರ. ಇದಕ್ಕೆಲ್ಲ ಕಾರಣವೇನು ಎಂದು ತಿಳಿಯದಲ್ಲ?”
ಗ: “ಭಾರತದಲ್ಲಿ ಹಿಂದಿನಕಾಲದಂತೆ ಈಗ ರಾಜ ಮಹಾರಾಜರುಗಳ ಆಶ್ರಯದಲ್ಲಿ ದೇವಸ್ಥಾನಗಳು ಇಲ್ಲ. ಈಗ ಪ್ರಜಾ ಪ್ರಭುತ್ವವಿದೆ. ಜನಗಳ ಆದೇಶವೇ ಕೊನೆ. ಆದ್ದರಿಂದ ಈ ರೀತಿ ಸಮಸ್ಯೆಗಳು ಬಂದಿರಬಹುದೋ ಏನೋ?”
ಶಿ: “ಹಾಗೇನಿರಲಾರದು. ದುಷ್ಟರು ಹೆಚ್ಚಾಗುತ್ತಿರುವುದರಿಂದ ಹೀಗಾಗಿದೆ. ವಿಷ್ಣುವಿನ ಇನ್ನೊಂದು ಅವತಾರಕ್ಕೆ ಕಾಲ ಬಂದಿದೆಯೋ ಏನೋ. ಹಾಗೆಯೇ ನಮ್ಮದು ಭಕ್ತಾಕ್ರಸಿ ಅಥವಾ ಭಕ್ತಪ್ರಭುತ್ವ ಅನ್ನೋದನ್ನು ಮರೆಯ ಬೇಡ. ಭಕ್ತರ ಇಛ್ಛೆಯೇ ನಮ್ಮ ಆದೇಶ. ಆಯಿತು. ಈಗ ನೀನು ಸುಧಾರಿಸಿಕೋ ಹೋಗು. ನಾಳೆ ನಾವು ವಿಷ್ಣು ಮತ್ತು ಬ್ರಹ್ಮ ದೇವರೊಡನೆ ಸಮಾಲೋಚಿಸೋಣ.”
“ಆಗಲೇ ಬಹಳ ತಡವಾಗಿದೆ. ನೀವು ಇನ್ನು ವಿಶ್ರಮಿಸಿ.” ಎಂದು ಮಾತಾ ಪಿತೃಗಳಿಗೆ ನಮಸ್ಕರಿಸಿ, ಗಣಪತಿ ಸಮಾಧಾನ ಚಿತ್ತದಿಂದ ನಿರ್ಗಮಿಸಿದ.