ಅಮೆರಿಕನ್ನಡ
Amerikannada
ಎಲ್ಲರಂತಲ್ಲ ನಮ್ಮ ಪೂಜ್ಯ ಜಿ.ಟಿ.ಎನ್.
-ಜಯಂತಿ ಅಮೃತೇಶ್, ಮೈಸೂರು*
ಕ್ರಿಯಾಶೀಲತೆ, ಸಮಯ ಪ್ರಜ್ಞೆ, ಸರಳತೆ ಮತ್ತು ನಿಖರತೆಗೆ ಮತ್ತೊಂದು ಹೆಸರು ಜಿ.ಟಿ.ನಾರಾಯಣರಾವ್ ಅವರು, ಎಂದರೆ ತಪ್ಪಾಗಲಾರದು. ಸಾಂಸ್ಕೃತಿಕ, ಸಾಹಿತ್ಯ, ಮತ್ತು ವಿಜ್ಞಾನ ಲೋಕದಲ್ಲಿ ಅವರು ಎಲ್ಲರಿಗೂ ಚಿರಪರಿಚಿತರು. ಜ್ಞಾನದಲ್ಲಿ ದಿಗ್ಗಜರಾದ ಇವರ ಸರಳತೆಗೆ ಸಾಟಿ ಇಲ್ಲ. ಅವರನ್ನು ಕಳೆದುಕೊಂಡ ಸಾರಸ್ವತ ಲೋಕ ಇಂದು ಬಡವಾಗಿದೆ. ಇವರು ಆತ್ಮೀಯ ಮಾತುಕತೆ, ಹಿತವಾದ ಪ್ರೀತಿ ಮತ್ತು ವಿಶಾಲ ದೃಷ್ಟಿ ಕೋನದ ಸಂಕೇತವಾಗಿದ್ದರು. ಇವರು ಎಲ್ಲವನ್ನೂ ವೈಜ್ಞಾನಿಕವಾಗಿಯೇ ಅವಲೋಕಿಸುತ್ತಿದ್ದರು. ಅಪರಿಮಿತ ಪುಸ್ತಕ ಮತ್ತು ಪ್ರಕೃತಿ ಪ್ರೇಮಿ.
GTN ಇವರನ್ನು ವಿಶ್ವ ಮಾನವ ಎನ್ನಿ, ವಿಜ್ಞಾನದ ಬರಹಗಾರರೆನ್ನಿ, ಸಂಗೀತ ವಿಮರ್ಶಕರು, ಸಾಧಕರು ಹೀಗೆ ಏನೆಲ್ಲ ಹೆಸರುಗಳಿಂದ ಕರೆಯಿರಿ ; ಅದರೆ ಇವರು ಒಬ್ಬ ಸಾಮಾನ್ಯ ಮಾನವರಂತೆ ಬದುಕಿದರು. ಅತಿ ಉತ್ತಮ ಮನುಷ್ಯರಾಗಿ ಬಾಳಿ ಬದುಕಿ ತೋರಿಸಿದರು. ಮುಗ್ಧ ಮನಸ್ಸಿನ ಇವರು ಎಳೆಯ ಚಿಗುರುಗಳನ್ನು ಪೋಷಿಸಿ ಪ್ರೋತ್ಸಾಹಿಸುತ್ತಿದ್ದರು. ಹಳೆಯ ಬೇರುಗಳನ್ನು ಗೌರವಿಸಿದರು. ತಾನು ಎಂತಹ ಮೇಧಾವಿ ಎಂಬುದನ್ನು ತೋರಿಸಿಕೊಂಡು ಅವರೆಂದೂ ಬೀಗಲಿಲ್ಲ, ಮೆರೆಯಲಿಲ್ಲ. ಎಲ್ಲರೊಳಗೆ ತಾನು ಎಂದು ಜೀವಿಸಿದರು.
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು ಮಂಕು ತಿಮ್ಮ.. .. ..

ಈ ಸಾಲುಗಳನ್ನು ಡಿವಿಜಿಯವರು ಜಿ.ಟಿಎನ್. ರವರಿಗಾಗಿಯೇ ರಚಿಸಿದರೇನೋ ಎಂದು ಅನ್ನಿಸುವುದರಲ್ಲಿ ಸಂದೇಹವಿಲ್ಲ.
ಇವರು ನಮ್ಮ ನಾಡಿನ ಬಹು ಶ್ರುತರಲ್ಲಿ ಒಬ್ಬರು. ಅಧ್ಯಯನವನ್ನೂ, ತಪಸ್ಸನ್ನೂ ಒಂದು ತಪಸ್ಸು ಎಂದು ಗ್ರಹಿಸಿದವರು. ಅನೇಕ ಪತ್ರಿಕೆಗಳಲ್ಲಿ ಅವರು ನಾನಾ ವಿಷಯಗಳ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಅವರು ಬರವಣಿಗೆಯನ್ನು ಧರ್ಮವನ್ನಾಗಿಯೂ, ಕರ್ಮವನ್ನಾಗಿಯೂ ತೆಗೆದುಕೊಂಡವರು. ಅವರಿಗೆ ಬರವಣಿಗೆಯು ಉಸಿರಾಟದಂತೆ ಅಗತ್ಯವೂ, ಅನಿವಾರ್ಯವೂ ಮತ್ತು ಸಹಜವೂ ಆಗಿತ್ತು. ಅವರು ತಮ್ಮ ಬರಹ ಮತ್ತು ಭಾಷಣಗಳಿಗೆ ಒಂದು ಚೌಕಟ್ಟನ್ನು ನಿರ್ಮಿಸಿಕೊಳ್ಳುತ್ತಿದ್ದರು. ವಸ್ತುಶೈಲಿ, ನಿರೂಪಣೆ, ಮತ್ತು ವಿಶ್ಲೇಷಣೆ ಈ ಚೌಕಟ್ಟನ್ನು ನಿರ್ಮಿಸುತ್ತಿದ್ದುವು. ಬರೆಯುವಹಾಗೆಯೇ ಅವರು ಮಾತನಾಡಬಲ್ಲವರಾಗಿದ್ದರು. ಬದುಕಿನಂತೆ ಅವರು ಬರಹದಲ್ಲಿಯೂ ತರುವ ಆತ್ಮೀಯತೆ ಅಪರೂಪದ್ದು. ಪಕ್ವ ಚಿಂತನೆಗಳಿಂದ, ಹರಿತವಾದ ಮಾತುಗಳ ಮೂಲಕ, ಸರಳವಾದ ವಾಕ್ಯಗಳಿಂದ ಗಂಬೀರ ವಿಚಾರಧಾರೆಯನ್ನು ಜನಮನಕ್ಕೆ ಮುಟ್ಟಿಸುವ ಸಾಮರ್ಥ್ಯವನ್ನು ಪಡೆದವರು ಜಿ.ಟಿ.ನಾರಾಯಣರಾಯರು. ತಮ್ಮ ಜೀವನದುದ್ದಕ್ಕೂ ಸಮಾಜಕ್ಕೆ ನಮ್ರಸೇವೆ, ಸೌಜನ್ಯ ಮತ್ತು ಸೌಶೀಲ್ಯಗಳಿಂದ ಎಲ್ಲರಿಗೂ ಪ್ರಿಯರಾಗಿದ್ದರು. ಸಾಣೆಹಿಡಿದ ವಜ್ರವನ್ನು ಯಾವ ಕಡೆಗೆ ತಿರುಗಿಸಿದರೂ ಆಯಾ ಕಡೆಗಳಿಂದ ತನ್ನ ಮೋಹಕ ವರ್ಣ ಕಿರಣಗಳನ್ನು ಹೊಮ್ಮಿಸುತ್ತದೆ. ಇಂತಹ ವಜ್ರ ಜಿಟಿಎನ್‌ರವರು.
ಜಿ.ಟಿ.ನಾರಾಯಣರಾಯರ ಭಾಷೆಯಲ್ಲಿ ಆಡಂಬರವಿಲ್ಲ; ಗಾಂಭೀರ್ಯವಿದೆ. ಕುಚೋದ್ಯವಿಲ್ಲ ; ವಿನೋದವಿದೆ. ಕಾಠಿಣ್ಯವಿಲ್ಲ ; ಹೃದಯಾಂತರ್ಗಾಮಿ ಸಾಮರ್ಥ್ಯವಿದೆ. ಅವರ ವ್ಯಕ್ತಿತ್ವವೇ ಅದರಲ್ಲಿ ಪಡಿಮೂಡುತ್ತದೆ. ಹಿತಮಿತ ಮೃದು ಪದಬಂಧ, ಸುಧೀರ್ಘವಲ್ಲದ, ಸುತ್ತುಬಳಸಿಲ್ಲದ, ತಗ್ಗು ದಿಣ್ಣೆಗಳಿಲ್ಲದ, ನೇರಗುರಿಯ, ಕೆನೆ ಪರಿಮಳವುಳ್ಳ ಪದಸರಣಿಯ, ಪರಸ್ಪರ ಸಂಬಂಧವುಳ್ಳ ಶೈಲಿ ಇವರಿಗೆ ವಶವಾಗಿತ್ತು. ಕರ್ನಾಟಕ ಸಂಸೃತಿಯ ನೇತಾರರಲ್ಲೊಬ್ಬರಾದ ಇಂತಹ ಪ್ರಾಜ್ಙರನ್ನು ಕಳೆದುಕೊಂಡ ಸಾರಸ್ವತಲೋಕ ಇಂದು ಬಡವಾಗಿದೆ.
ಅತಿ ಹತ್ತಿರದಿಂದ ಇವರನ್ನು ಕಂಡ ನಾವು ಜೀವನದ ಅನೇಕ ಅಮೂಲ್ಯ ತತ್ವಗಳನ್ನು ಅವರಿಂದ ಕಲಿಯುವ ಭಾಗ್ಯವನ್ನು ದೊರಕಿಸಿಕೊಂಡೆವು. ಮನುಷ್ಯರು ಮನುಷ್ಯರಾಗಿ ಉಳಿಯುವುದೇ ಅಪರೂಪವಾಗಿರುವ ಈಗಿನ ಕಾಲದಲ್ಲಿ ಜಿಟಿಎನ್‌ರಂತ ಸಜ್ಜನರು ಬಹಳ ಅಪರೂಪ. ಅವರನ್ನು ಒಮ್ಮೆ ಭೇಟಿ ಮಾಡಿದರೆ ಸಾಕು, ಅವರ ಸ್ನೇಹ-ಸೌಜನ್ಯಗಳ ರೂಪ ತಿಳಿಯುತ್ತಿತ್ತು. ಅವರ ಪ್ರೀತ್ಯಾದರಗಳು, ವಿನಯ-ವಿಶ್ವಾಸಗಳು ಎಲ್ಲರನ್ನೂ ಆಕರ್ಷಿಸುತ್ತಿದ್ದವು.
ಅವರು ಭಾಷಣ ಮಾಡಲು ಸಭೆ-ಸಮಾರಂಭಗಳಿಗೆ ಹೋಗುವಾಗಲೆಲ್ಲ ಪೂರ್ವಭಾವಿಯಾಗಿ ತಮ್ಮ ಭಾಷಣವನ್ನು ಚಿಕ್ಕದಾಗಿ ಚೊಕ್ಕದಾಗಿ ತಯಾರು ಮಾಡಿಕೊಂಡೇ ಹೊರಡುತ್ತಿದ್ದರು. ಅದನ್ನು ಸಹ ಕಂಪ್ಯೂಟರೀಕರಣಗೊಳಿಸಿ, ಮುದ್ರಿತ ಪ್ರತಿಯನ್ನು ಕೈಯಲ್ಲಿ ಹಿಡಿದೇ ಬರುತ್ತಿದ್ದರು. ಅವರು ಹಾಜರಾಗುತ್ತಿದ್ದ ಯಾವುದೇ ಕಾರ್ಯಕ್ರಮವೂ ತಡವಾಗಿ ಪ್ರಾರಂಭ ಮಾಡಲು ಜಿಟಿಎನ್‌ರವರು ಅವಕಾಶವೀಯುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಎದ್ದು ನಿಂತು “ಸಮಯವಾಗಿದೆ, ಇನ್ನು ಪ್ರಾರಂಭಿಸಿ” ಎಂದು ತಾಕೀತು ಮಾಡುತ್ತಿದ್ದರು. ಆ ಸಮಯದಲ್ಲಿ ಅವರಿಗೆ ವಿರುದ್ಧವಾಗಿ ಮಾತನಾಡುವ ಧೈರ್ಯ ಯಾರಿಗೆ ತಾನೇ ಇರುತ್ತಿತ್ತು?
‘ಮಂಕುತಿಮ್ಮನ ಕಗ್ಗ’ ಎಂದರೆ ಜಿಟಿಎನ್‌ರವರಿಗೆ ಅಪರಿಮಿತ ಗೌರವ. ಪೂಜ್ಯ ಡಿವಿಜಿಯವರಿಂದ ಪ್ರಭಾವಿತರಾಗಿದ್ದ ಇವರು ‘ಆತ್ರಿಸೂನು ಉವಾಚ’ ಎಂಬ ಮುಕ್ತಕಗಳನ್ನು ರಚಿಸಿದ್ದಾರೆ. ಈ ಮುಕ್ತಕಗಳು ಒಂದೊಂದೂ ಒಂದು ಅಣಿಮುತ್ತು. ಜೀವನದ ಆದರ್ಶವನ್ನು, ತತ್ವವನ್ನು ಎತ್ತಿ ಹಿಡಿಯುವ ರಾಜಮಾರ್ಗ.
ಜಿಟಿಎನ್‌ರವರು ಕಟ್ಟಾ ವಿಜ್ಞಾನಿ, ವಿಚಾರವಾದಿ. ಮೌಢ್ಯ್ಯ ಸಂಪ್ರದಾಯಗಳನ್ನು ಆಮೂಲಾಗ್ರವಾಗಿ ತಿರಸ್ಕರಿಸುತ್ತಿದ್ದ ಅವರು, ನುಡಿದಂತೆ ನಡೆಯುವವರು. ಇಂಥವರು ಸತ್ಯಕ್ಕೆ ಶರಣಾಗುತ್ತಾರಲ್ಲದೆ ಮಿಥ್ಯೆಗಲ್ಲ. ನಾರಾಯಣರಾಯರ ಸಮೃದ್ಧ ಲೋಕಾನುಭವಕ್ಕೆ, ಸೂತ್ರಪ್ರಾಯದ ಭಾಷಾ ಪ್ರೌಢಿಮೆಗೆ ಸಾಟಿ ಇಲ್ಲವಾಗಿದೆ. ಇವರು ಕನ್ನಡ ಪ್ರೇಮಿ, ಶಿಸ್ತಿನ ಸಿಪಾಯಿ, ಉದಾರ ಹೃದಯಿ ಮತ್ತು ಸ್ನೇಹಮಯಿ. ಇವರು ತಾವು ವ್ಯವಹರಿಸುತ್ತಿದ್ದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಠೋರ ಶಿಸ್ತನ್ನು ಪಾಲಿಸುತ್ತಿದ್ದರು. ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅದನ್ನು ಕೊನೆಯ ತನಕ ಸಾಧಿಸುವ ಛಲ ಅವರದ್ದು. ಸದಾ ಆಶಾವಾದಿ. ಅವರ ಅಸಾಧಾರಣ ವಿದ್ವತ್ತಿಗೆ ವಿಶ್ವಕೋಶ ಹಾಗೂ ಅವರ ಇತರ ಗ್ರಂಥಗಳೇ ಚಿರಂತನ ಸಾಕ್ಷಿಗಳು.
ಇತ್ತೀಚಿನ ಪೀಳಿಗೆಯವರಿಗೆ ಜಿಟಿಎನ್‌ರವರು ಉತ್ತಮ ಮಾರ್ಗದರ್ಶನ, ಪ್ರೋತ್ಸಾಹಗಳನ್ನು ನೀಡುವುದರಲ್ಲಿ ವಿಶೇಷ ಔದಾರ್ಯವನ್ನು ತೋರುತ್ತಿದ್ದರು. ಅವರು ಚಿಕ್ಕ ಪುಟ್ಟ ಲೇಖನ ಬರೆಯುವ ಕಿರಿಯ ಸಾಹಿತಿಯಾಗಿ ರಬಹುದು, ಕಲಿಯುತ್ತಿರುವ ತರಗತಿಯ ಮಕ್ಕಳೇ ಆಗಿರಬಹುದು ಅಥವಾ ಮಧ್ಯದಲ್ಲಿ ಸಂಗೀತವನ್ನು ಪೂರ್ಣ ತ್ಯಜಿಸಿ ಜೀವನದ ಜಂಜಾಟಗಳೆಲ್ಲ ಮುಗಿದನಂತರ, ಪುನಃ ಸಂಗೀತವನ್ನೆತ್ತಿಕೊಂಡ ನನ್ನಂತಹ ಹಿರಿಯ ಮಹಿಳೆಯೇ ಆಗಿರಬಹುದು, ಎಲ್ಲರಿಗೂ ಮನಃಪೂರ್ತಿಯಾಗಿ ಮಾರ್ಗದರ್ಶನ, ಪ್ರೋತ್ಸಾಹ ನೀಡುತ್ತಿದ್ದರು.
ಗೋಕುಲಂ ಬಡಾವಣೆಯಿಂದ ಸಂಗೀತ ಸರಸ್ವತಿಯಾದ ಶ್ರೀಮತಿ ಸುಕನ್ಯಾಪ್ರಭಾಕರ್ ಅವರು ಸರಸ್ವತಿಪುರಕ್ಕೆ ಬಂದು ನಮಗೆ ಸಂಗೀತವನ್ನು ಕಲಿಸಲು ಪ್ರಾರಂಭಮಾಡಿದಾಗ, ಎಲ್ಲರಿಗಿಂತಲೂ ಹೆಚ್ಚು ಸಂತಸಗೊಂಡವರು ಜಿ.ಟಿಎನ್ ಅವರು. ನಮ್ಮ ಬಿಡುವಿನ ವೇಳೆಯನ್ನು ವ್ಯರ್ಥಗೊಳಿಸದೆ. ನಾವು ಸಂಗೀತಪಾಠ, ಶ್ಲೋಕ, ದೇವರನಾಮ ಗಳನ್ನು ಕಲಿಯುವುದಕ್ಕೆ ಮೀಸಲಿಟ್ಟಾಗ ಹೊಗಳಿದವರು ಜಿ.ಟಿ.ಎನ್. ಇಷ್ಟೇ ಅಲ್ಲದೆ ಪದೇ ಪದೇ “ಈಗೇನು ಕಲಿಯುತ್ತಿದ್ದೀರಿ” ಎಂದು ವಿಚಾರಿಸುತ್ತಿದ್ದರು. ನಮ್ಮ ಗುರುಗಳು ನಮಗೆ ಮಧ್ಯೆ ಮಧ್ಯೆ ಲೇಖನಗಳನ್ನು ಬರೆಯುವಂತಹ ಮನೆಪಾಠ ಕೊಟ್ಟಾಗ ಮೆಚ್ಚಿದವರು ಜಿ.ಟಿ,ಎನ್. “ಭೇಷ್, ನೀವು ಬೇರೆ ಬೇರೆ ಪುಸ್ತಕಗಳನ್ನು ಓದಿ, ಅವುಗಳಲ್ಲಿ ವಿಷಯಗಳನ್ನು ಹುಡುಕಿ ಪ್ರಬಂಧ ಬರೆಯಿರಿ” ಎನ್ನುತ್ತಾ ಅದಕ್ಕೆ ಬೇಕಾದ ಹೊತ್ತಗೆಗಳನ್ನು ತಾವೇ ಹುಡುಕಿ ತಂದು ಕೊಡುತ್ತಿದ್ದರು. ನಾವು ಹಾಡುತ್ತಿದ್ದ ನಮ್ಮ ಚಿಕ್ಕ ಪುಟ್ಟ ಕಾರ್ಯಕ್ರಮಗಳಿಗೆ ಹಾಜರಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ನಮ್ಮ ಗುರುಗಳು ಈ ಮಧ್ಯೆ ಐದಾರು ತಿಂಗಳುಗಳ ಕಾಲ ಬೆಂಗಳೂರಿನಲ್ಲಿಯೇ ಇರಬೇಕಾದ ಸಂದರ್ಭ ಒದಗಿ ಬಂದಾಗ ನಮಗಿಂತ ಹೆಚ್ಚು ನಿರಾಶರಾದವರು ಜಿ.ಟಿ.ಎನ್. ನಮ್ಮ ಸಂಗೀತ ತರಗತಿಗಳು ಮತ್ತೆ ಅಷ್ಟೇ ಉತ್ಸಾಹದಿಂದ ಮುಂದುವರೆದಾಗ ಸಂತುಷ್ಟಗೊಂಡರು.
“ಅಕಾಲದಲ್ಲಿ ಅಮೃತವೂ ವಿಷ” ಎನ್ನುತ್ತಿದ್ದ ಅವರು ನಿಯಮಿತಕಾಲದಲ್ಲಿ, ಮಿತವಾಗಿ ಆಹಾರವನ್ನು ಸೇವಿಸುತ್ತಿದ್ದರು. ಈ ನಿಯಮವನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ನಮ್ಮ ಮನೆಗಳಿಗೆ ಬಂದಾಗ ಹೊರಡುವ ಸಮಯದಲ್ಲಿ “ಸುಖ ಪ್ರಯಾಣವಾಗಲಿ” ಎಂದು ತಮಗೆ ತಾವೇ ಹೇಳಿಕೊಳ್ಳುತ್ತಿದ್ದರು. ಹಾಗೆಯೇ ನಮಗೂ ಅವರ ಶುಭ ಹಾರೈಕೆಗಳು ಸದಾ ಇರುತ್ತಿತ್ತು. ಅವರು ಇದನ್ನು ಒಂದು ನಿಯಮದಂತೆ ಪಾಲಿಸುತ್ತಿದ್ದರು.
ರಾಜಮಾರ್ಗದಲ್ಲೇ ತಮ್ಮ ಪಯಣವನ್ನು ಮುಗಿಸಿ, ನಿತ್ಯನೂತನ ದಿಗಂತದತ್ತ ನಕ್ಷತ್ರಗಳ ಆನ್ವೇಷಣೆಗಾಗಿ ತೆರಳಿದ ಆ ಮಹಾನ್ ಚೇತನಕ್ಕೆ ಇದೊಂದು ಅಶ್ರು ತರ್ಪಣ, ಭಾವ ನಮನ . . .
*-ಜಯಂತಿ ಅಮೃತೇಶ್
‘ಕೃತ್ತಿಕ’, ನಂ. 40, 6ನೇ ಮುಖ್ಯ ರಸ್ತೆ, 7 ನೇ ಅಡ್ಡರಸ್ತೆ
ಸರಸ್ವತಿಪುರಂ, ಮೈಸೂರು 570 009
(0821) 2543472
08453 12952
email: jayanthiamrutesh@gmail.com