ಅಮೆರಿಕನ್ನಡ
Amerikannada
ಬೆಳಕಿಂದ ಬೆಳಕು
-ಸಂಧ್ಯಾ ರವೀಂದ್ರನಾಥ್, ಅಮೆರಿಕಾ
ಬೆಳಕಿಂದ ಬೆಳಕನು ಬೆಳಗುತ ಬಾ;
ಪ್ರೇಮದ ಗಂಗೆಯ ಹರಿಸುತ ಬಾ!

ನಾನು, ನನ್ನದು, ನನ್ನಿಂದ ಎನ್ನುವ
ಮಮಕಾರವ ನೀ ಮೀರಿ;
ಮದ, ಮಾತ್ಸರ್ಯ, ಲೋಭ, ಮೋಹವ
ಗಾಳಿಯಲಿ ನೀ ತೂರಿ;
ಹೃದಯದ ದ್ವಾರವ ತೆರೆಯುತ ಬಾ..
ಪ್ರೇಮದ ಗಂಗೆಯ ಹರಿಸುತ ಬಾ...

ಹಿಂದಿನ ಚಿಂತೆ ಇಂದು ಏತಕೆ?
ಕಾಲವು ಹಿಂತಿರುಗುವುದೆ?
ಮುಂದಿನ ಯೋಚನೆ ಮಾಡುವುದೇತಕೆ?
ನಾಳೆಯು ಬರುವುದೆ ಇಂದೇ?
ಈಗಿನ ಕ್ಷಣವನು ಸವಿಯುತ ಬಾ..
ಪ್ರೇಮದ ಗಂಗೆಯ ಹರಿಸುತ ಬಾ...

ಮಾತು, ಮನಸು, ಕಾರ್ಯಗಳಾಗಲಿ
ಭಗವಂತಗೆ ನೈವೇದ್ಯ!
ಭೇದ ಭಾವನೆಯು ದೂರ ಸರಿಯಲಿ
ಬೆಸೆಯಲಿ ವಿಶ್ವಬಾಂಧವ್ಯ!
ಪರಮಾನಂದವ ಹರಡುತ ಬಾ..
ಪ್ರೇಮದ ಗಂಗೆಯ ಹರಿಸುತ ಬಾ...

(ರಚನೆ: ದಿನಾಂಕ: ಜನವರಿ ೨೦೦೩)
ಈ ಹಾಡನ್ನು "ಜ್ಯೋತ್‌ಸೆ ಜ್ಯೋತ್ ಜಗಾತೆ ಚಲೋ" ರಾಗಕ್ಕೆ ಬರೆದಿದ್ದೇನೆ. ಅದರಂತೆ ಹಾಡಬಹುದು.